Article

ಮಕರಂಧವನ್ನು ಬೀರಿದ ‘ಮರುಭೂಮಿಯ ಹೂ’

ವಾರಿಸ್ ಡಿರಿಅವರ 'ಡೆಸರ್ಟ್ ಫ್ಲವರ್' ಎಂಬ ಇಂಗ್ಲೀಷ್ ಆತ್ಮಕತೆಯನ್ನು ಡಾ. ಎನ್.ಜಗದೀಶ ಕೊಪ್ಪ ಅವರು 'ಮರಭೂಮಿಯ ಹೂ' ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಆತ್ಮಕತೆಗಳಲ್ಲಿಯೇ ಹೋರಾಟದ ಬದುಕು ಸಾಗಿಸಿದಂತ ವ್ಯಕ್ತಿಗಳ ಆತ್ಮಕತೆಗಳ ಸಾಲಿಗೆ ಇದು ಸೇರುತ್ತದೆ.

ಆಫ್ರಿಕಾದ ಸೋಮಾಲಿಯಾ ದೇಶದ ಹೆಣ್ಣುಮಕ್ಕಳ ಯೋನಿಛೇಧವೆಂಬ ಕ್ರೂರ ಪದ್ದತಿಗೆ ಬಲಿಯಾದ ಸಹಸ್ರಹೆಣ್ಣುಮಕ್ಕಳ ಕರುಣಾಜನಕದ ಹಾಗೂ ಕ್ರೂರತೆಗೆ ಬಲಿಯಾದವರಲ್ಲಿ ವಾರಿಸ್ ಡಿರಿ ಕೂಡ ಒಬ್ಬರು. ಬಾಲ್ಯದಲ್ಲಿಯೇ ನಿಗಿನಿಗಿ ಸುಡುವ ಕೆಂಡದಂತಹ ಮರಳಮೇಲೆ ಕಾಲಿಟ್ಟು ಕುರಿ, ಒಂಟೆ ಕಾಯುತ್ತಾ ಬದುಕು ಆರಂಭಿಸಿದ ಹುಡುಗಿಗೆ ಹೊರಪ್ರಪಂಚದ ಪರಿವೆಯೇ ಇರಲಿಲ್ಲ. ಅಕ್ಕಂದಿರೊಡನೆ, ತಮ್ಮಂದಿರೊನಡೆ ಆಟವಾಡುತ್ತಾ, ಕುರಿಕಾಯುತ್ತಾ, ಒಂಟೆ ಹಾಲು ಕರಿಯುತ್ತಾ ಹೆತ್ತವರಿಗೆ ಮುದ್ದಿನಮಗಳಾಗಿದ್ದಳು ವಾರಿಸ್. ದಿನಗಳುರುಳಿದಂತೆ ಅಕ್ಕನನ್ನು ಕರೆದೊಯ್ದು ಯೋನಿಛೇಧ ಮಾಡಿ ಹೊಲಿಗೆ ಹಾಕುವಾಗ ಮರೆಯಲ್ಲಿ ನಿಂತು ನೋಡಿದಾಗಲೂ ಆ ನರಕದರ್ಶನದ ಅರಿವು ಆಗಿರಲಿಲ್ಲ ವಾರಿಸ್ ಗೆ. ಮುಂದೊಂದು ದಿನ ತನಗೂ ಅದು ಬರಬಹುದು ಎಂಬ ಕಲ್ಪನೆಯೂ ಇರಲಿಲ್ಲ ಅದು ಅಷ್ಟು ಭಯಾನಕ ನರಕಸದೃಷ್ಟವಾಗಿರುತ್ತದೆಂದು ಭಾವಿಸದೇ ತನ್ನ ಅಮ್ಮನಿಗೆ ನಾನೂ ಮಾಡಿಸಿಕೊಳ್ಳುತ್ತೆನೆ ಎನ್ನುತ್ತಿದ್ದಳು ವಾರಿಸ್. ಆ ಕ್ರೂರ ಘಳಿಗೆಯೂ ಬಹಳ‌ದೂರವಿರಲಿಲ್ಲ.

ದಿನಗಳುರುಳಿದಂತೆ ಆ ದಿನ ಮಾರಿಸ್ ಗೂ ಬಂದಾಗ ಅವಳು ಅನುಭವಿಸಿದ ನೋವು ಯಾತನೆಗಳನ್ನು ಕೇಳಿದರೆ ಎಂಥವರೆದೆಯೂ ಅದುರುತ್ತದೆ. ಅಬ್ಬಾ! ಎರಡು ದಿನ ಮೂರ್ಚೆಹೋಗಿ ಬಿದ್ದ ಮಾರಿಸ್ ಎದ್ದು ಕಣ್ಣುಬಿಟ್ಟಾಗ ತನ್ನ ಪಕ್ಕದಲ್ಲಿರುವ ಕಲ್ಲಮೇಲೆಲ್ಲಾ ಯಾವುದೋ ಪ್ರಾಣಿಯನ್ನು ಕತ್ತರಿಸಿದಂತೆ ರಕ್ತ ಚೆಲ್ಲಿತ್ತು ಹಾಗೂ ಯೋನಿಛೇದದಿಂದ ತುಂಡಾದ ಮಾಂಸದ ತುಣುಕುಗಳು ಬಿದ್ದಿದ್ದವು ಎಂದು ತಮ್ಮ ಆತ್ಮಕತೆಯಲ್ಲಿ ಚಿತ್ರಿಸಿದ ವಾರಿಸ್ ಅವರ ಮನಸ್ಥಿತಿಯ ಆಳದ ನೋವು ಎಂತಹುದು ಎಂಬುದು ತಿಳಿಯುತ್ತದೆ. ಆ ಸನ್ನಿವೇಷ ಓದುತ್ತಿರಬೇಕಾದರೆ ನನ್ನ ಕೈಯಲ್ಲಿರುವ ಪುಸ್ತಕ ಭಯದಿಂದ ಜಾರಿ ಬಿದ್ದಿದ್ದೂ ಇದೆ. ಅದರಂತೆ ವಾರಿಸ್ ಲಂಡನ್ ಗೆ ಹೋದಾಗ ತನ್ನ ಗೆಳತಿಗೆ ತನ್ನ ಯೋನಿಛೇಧದ ಕುರಿತು ಹೇಳಿದಾಗ ಅವಳು ಅದನ್ನು ನೋಡಿ ಬೆಚ್ಚಿಬಿದ್ದಳು. ಅದೂ ಕೂಡ ಭಯವಾಗಿಸುವಂತಹುದು. ಅವಳ ಗೆಳತಿಯಂತೆ ಓದುಗರೂ ಬೆಚ್ಚಿಬೀಳುವುದು ನಿಶ್ಚಿತ.

ಯೋನಿಛೇಧದಿಂದ ಹಾಗೂ ಯೋನಿಹೊಲೆಯುವಿಕೆಯಿಂದ ಹೆಣ್ಣುಮಕ್ಕಳು ಯಾರೊಂದಿಗೂ ಬೆರೆಯದಂತೆ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶವೆಂದು ಬೀಗುವ ಅಲ್ಲಿಯ ಧಾರ್ಮಿಕ ವ್ಯವಸ್ಥೆಗೆ ಅದರ ನರಕಯಾತನೆ ಅನುಭವಾಗಬೇಕಾದರೆ ವಾರಿಸ್ ಅವರ ಆಕ್ರೋಶದ ಈ ನುಡಿಗಳು ಜಾರಿಯಾಗಬೇಕು ಎಂದೆನಿಸುತ್ತದೆ.
"ಪುರುಷ ಸಮಾಜಕ್ಕೆ ಹೆಣ್ಣನ್ನು ಮತ್ತು ಅಧಿಕಾರವನ್ನು ಸದಾ ತನ್ನ ಅಧೀನದಲ್ಲಿಟ್ಟುಕೊಳ್ಳಬೇಕೆಂಬ ಬಯಕೆ. ಹಾಗಾಗಿ ಇವರಿಗೆ ಮಾನವೀಯತೆಯಾಗಲಿ, ಅಂತಃಕರಣವೆಂಬುದಾಗಲಿ ಇಲ್ಲ. ಅವೆಲ್ಲವೂ ಇವರಿಗೆ ಅಪರಿಚಿತವಾದ ಶಬ್ದವಾಗಿದ್ದವು. ಹಾಗಾಗಿ ಆಫ್ರಿಕಾದ ಮಹಿಳೆಯೆಂದರೆ, ಇವರಿಗೆಲ್ಲಾ ತಾವು ಸಾಕುತ್ತಿರುವ ಪ್ರಾಣಿಗಳ ಸಮಾನ. ಇದು ಕಠಿಣ ಶಬ್ದವಾದರೂ ಸರಿಯೇ, ನಾನು ಎಷ್ಟೋ ಬಾರಿ ಇಲ್ಲಿನ ಪುರುಷರ ಬಗ್ಗೆ ಈ ರೀತಿ ಯೋಚಿಸುತ್ತಾ ಇರುತ್ತಿನಿ. ಆಫ್ರಿಕಾದ ಪುರುಷರ ಗುಪ್ತಾಂಗಗಳನ್ನು ಕತ್ತರಿಸಿ ಬಿಸಾಡಬೇಕು. ದ್ವಿಚಕ್ರ ವಾಹನಕ್ಕೆ ಕಾಲು ಸಿಕ್ಕಿಸಿಕೊಂಡ ನಾಯಿಮರಿ ಘೀಳಿಡುವ ಹಾಗೆ, ಸುರಿಯುವ ರಕ್ತದ ಜೊತೆ ಇವರು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುವುದನ್ನು ನಾನು ನೋಡಬೇಕು, ಆಗ ಮಾತ್ರ ಇವರಿಗೆ ಯೋನಿಛೇಧನ ಮಾಡಿಸಿಕೊಂಡ ಹೆಣ್ಣೊಬ್ಬಳ ಸಂಕಟ ಏನೆಂದು ಅರಿವಾಗುತ್ತದೆ. ತಮ್ಮ ಸ್ವಾರ್ಥಕ್ಕೆ ದೇವರನ್ನು, ಧರ್ಮವನ್ನು ಯಾವುದೇ ಎಗ್ಗಿಲ್ಲದೆ ಬಳಸಿಕೊಂಡ ನಾಚಿಕೆಗೇಡಿನ ಪುರುಷ ಸಮಾಜಕ್ಕೆ ಒಂದಿಷ್ಟು ಪ್ರಜ್ಞೆ ಮೂಡಲು ಸಾಧ್ಯವಾಗಬಲ್ಲದು."

ಮುದುಕನೊಂದಿಗೆ ಮಗಳ‌ ಮದುವೆ ಮಾಡಿಸಿ ಸಿರಿತನದಿ ಮೆರೆಯಲು ಒಂಟೆಗಳನ್ನು ಹೊಂದಿ ಸಮಾಜದಲ್ಲಿ ಪ್ರತಿಷ್ಟೆಯ ಬದುಕನ್ನು ಕಳೆಯಬೇಕು ಎಂದು ಬಯಸುವ ತಂದೆಯರಂತೆಯೇ ವಾರಿಸ್ ಳ ತಂದೆಯೂ ಬಯಸಿದ. ಆ ಕಾರಣದಿಂದಲೇ ಅಲ್ಲವೇ ಅಂದು ಮನೆಬಿಟ್ಟ ವಾರಿಸ್ ತನ್ನ ಕಷ್ಟದ ದಿನಗಳನ್ನು ಕಳೆದು, ಒಂದೊತ್ತು ಊಟಕ್ಕೂ ಪರದಾಡಿ, ಅಕ್ಕನಿಂದಲೂ ದ್ವೇಷಕ್ಕೆ ಒಳಗಾಗಿ, ಅತ್ತೆಯಿಂದಲೂ ದೂರಾಗಿ, ಒಬ್ಬಂಟಿಯಾಗಿ ಮೊಗದಿಶು ನಗರದಲ್ಲಿ ಅಲೆದದ್ದು. ತನ್ನ ಮುಂದಿನ ಬದುಕಿನ ಹೋರಾಟಕ್ಕೆ ಅಣಿಯಾದ ವಾರಿಸ್ ಗೆ ಸೋಮಾಲಿಯಾ ಹಾಗೂ ಇಥಿಯೊಪಿಯಾ ರಾಷ್ಟ್ರಗಳ ಗಡಿ ಭಾಗದ ಮರಭೂಮಿಯ ಗಲಾಡಿ ಎಂಬ ತನ್ನ ಊರಿಗೆ ಮಾತ್ರವಲ್ಲದೇ ಸೋಮಾಲಿಯಾಕ್ಕೆ ಬರಲೂ ಕೂಡ ಹಿಂದೇಟು ಹಾಕಿದಳು. ಅಲ್ಲಿಯ ಬಡತನ ಇವರನ್ನು ನುಗ್ಗುನುಗ್ಗಾಗಿಸುವುದು ಒಂದೆಡೆಯಾದರೆ, ವಯೋವೃದ್ದನೊಡನೆ ಮದುವೆಯಾಗಬೇಕು ಎಂಬ ಅಪ್ಪನ ಅತಿಯಾಸೆಗೆ ಬೇಸತ್ತ ವಾರೀಸ್ ಚಿಕ್ಕಪ್ಪನ ಸಹಾಯದಿಂದ ಮನೆಗೆಲಸದವಳಾಗಿ ಲಂಡನ್ ಗೆ ಪಯಣ ಬೆಳೆಸಿದಳು. ಅಲ್ಲಿಯ ಮುಂದಿನ ಸಾಹಸಮಯ ಬದುಕನ್ನು ಎಲ್ಲರೂ ಪುಸ್ತಕ ಓದಿಯೇ ಅರಿತರೆ ಒಳಿತು.

ಅಮೇರಿಕಾ, ಇಟಲಿ, ಜಪಾನ್ ದೇಶಗಳಲ್ಲಿ ಪ್ರಖ್ಯಾತಿ ಗಳಿಸಿದ ಮಾಡೆಲಿಂಗ್ ಆಗಿ ಮೆರೆದ, ವಿಶ್ವಸಂಸ್ಥೆಯ ಆಫ್ರಿಕಾ ಹೆಣ್ಣುಮಕ್ಕಳ‌ ಯೋನಿಛೇಧದ ವಿರೋಧವಾಗಿ ಹಮ್ಮಿಕೊಂಡ ಕಾರ್ಯದ ರಾಯಭಾರಿಯಾಗಿ ಆಯ್ಕೆಯಾದ, ವಿಶ್ವದ ಪ್ರಮುಖ ಪತ್ರಿಗೆಳಲ್ಲಿ ರಾರಾಜಿಸಿದ, BBC ಚಾನೆಲ್‌ನ ಕಿರುಚಿತ್ರಕ್ಕೆ ನಾಯಕಿಯಾದವಳ ಬದುಕಿನ ಕಥನವನ್ನು ನೀವೊಮ್ಮೆ ಓದಲೇಬೇಕು. ವಾರಿಸ್ ಅನುಭವಿಸಿದ ಸಂಕಟ, ದುಃಖಗಳಿಗಿಂತಲೂ ಪ್ರತಿಬಾರಿ ಮೂತ್ರಮಾಡುವಾಗ, ಋತುಸ್ರಾವವಾದಾಗ ಅನುಭವಿಸಿದ ಕಣ್ಣೀರಗಾಥೆಯನ್ನು ಓದುಗರಾದ ಪ್ರತಿಯೊಬ್ಬರೂ ಹನಿಗಣ್ಣಾಗುವರು.

ಬೆಂದು ಬಸವಳಿದವಳ ಬದುಕಿನಲ್ಲಿ ಹಣದ ಹೊಳೆ ಹರಿದಾಗಲೂ ಯಾವುದೇ ಅಹಂಕಾರಕ್ಕೆ ಒಳಗಾಗದ ವಾರೀಸ್ ಆಫ್ರಿಕಾ ದೇಶದ ಸಮಸ್ತ ಹೆಣ್ಣುಮಕ್ಕಳ ರಕ್ಷಣೆಗೆ ನಿಂತು ಆಡಿದ ಮಾತುಗಳು ಸಮಾಜದಲ್ಲಿ ಹೆಣ್ಣಿನ ಮೇಲಾಗುವ ವಿವಿಧ ಬಗೆಯ ಅಮಾನುಷ ಕೃತ್ಯಗಳು ನಿಲ್ಲಬೇಕು ಎಂಬ ನೋವಿನ ಧ್ವನಿಯನ್ನು ಇಲ್ಲಿ ಕಾಣಬಹುದು.
"ಒಬ್ಬ ಹೆಣ್ಣಾಗಿ ಜನಿಸಿದ ನನಗೆ, ನನ್ನ ದೇಹದ ಯಾವ ಭಾಗದಲ್ಲಿ ಏನಿರಬೇಕು, ಏನಿರಬಾರದು ಮತ್ತು ಅದು ಹೇಗಿರಬೇಕು ಎಂಬುದನ್ನು ಸೃಷ್ಟಿಕರ್ತನಾದ ದೇವರು ನಿರ್ಧರಿಸುತ್ತಾನೆ. ಇವರಿಗೆ ಅಧಿಕಾರ ಕೊಟ್ಟವರಾರು?" ಎಂಬ ಮಾತುಗಳು ಆಫ್ರಿಕಾ ದೇಶದ ಧರ್ಮಗುರುಗಳ ಹಾಗೂ ಪುರುಷ ಪ್ರಧಾನ ಸಮಾಜಕ್ಕೆ ಛಾಟಿಏಟು ಬೀಸಿದೆ.

'1998ರ ವೇಳೆಗೆ ಆಫ್ರಿಕಾ ರಾಷ್ಟ್ರಗಳಲ್ಲಿ ಹದಿಮೂರು ಕೋಟ ಹೆಣ್ಣುಮಕ್ಕಳು ಈ ಕ್ರಿಯೆಗೆ ಒಳಗಾಗಿದ್ದರು. ಯೋನಿ ಛೇಧನ ಕ್ರಿಯೆಗೆ ಅವೈಜ್ಞಾನಿಕವಾಗಿ, ಚೂಪಾದ ಕಲ್ಲು, ಗಾಜಿನ ಚೂರು, ತುಕ್ಕುಹಿಡಿದ ಕತ್ತರಿ, ಚೂರಿ ಬಳಸಿದ ಪರಿಣಾಮವಾಗಿ ಪ್ರತಿ ವರ್ಷ 20 ಲಕ್ಷ ಹೆಣ್ಣುಮಕ್ಕಳು ಸೋಂಕು ರೋಗದಿಂದ ಸಾವನ್ನಪ್ಪುತ್ತಿದ್ದರು. ಇಂತಹ ಸಾವಿನ ಮೆರವಣಿಗೆಯ ನಡುವೆಯೂ, ಪ್ರತಿದಿನ ಆರು ಸಾವಿರ ಹೆಣ್ಣು ಮಕ್ಕಳು ಇಂತಹ ಅನಿಷ್ಟ ಕ್ರಿಯೆಗಾಗಿ ಹಿಂಸೆ ಮತ್ತು ಕ್ರೌರ್ಯದ ಮನೆಯ ಬಾಗಿಲು ತಟ್ಟುತ್ತಿದ್ದರು.' ಎಂಬ ಅಂಕಿಅಂಶದ ವರದಿಗೆ ಅಲ್ಲಿಯ ಸಾಮಾಜಿಕ‌ ವ್ಯಸವ್ಥೆ, ಸಾಂಸ್ಕೃತಿಕ ಕಟ್ಟುಪಾಡುಗಳು, ಧರ್ಮದ ಕಟ್ಟುನಿಟ್ಟಿನ ನಿಯಮಗಳೇ ಕಾರಣ ಎಂದಾಗ; ಯಾವ ಸಮಾಜವನ್ನು ನಂಬಿ, ಯಾವ ಪುರುಷನನ್ನು ನಂಬಿ, ಯಾವ ಧರ್ಮದ ಆಚರಣೆಗಳಕನ್ನು ನಂಬಿ ಬದುಕುವ ಹೆಣ್ಣಿಗೆ ಅದೇ ಸಮಾಜ, ಪುರುಷ, ಧರ್ಮಗಳು ಇಂತಹ ಕಠೋರ ಕ್ರೌರ್ಯದ ಮಾರ್ಗ ತುಳಿಸುತ್ತವೆ ಎಂದರೆ ಎತ್ತ ಸಾಗುತ್ತಿದೆ ಮಾನವತೆಯ ಬದುಕು ಎಂದೆನಿಸುತ್ತದೆ.

ಆಫ್ರಿಕಾ ರಾಷ್ಟ್ರದ ಹೆಣ್ಣುಮಕ್ಕಳನ್ನು ಆ ಭಯಾನಕ ಕ್ರೂರ ವ್ಯವಸ್ಥೆಯಿಂದ ಹೊರಬರುವಂತೆ ಮಾಡಲು ಅಲ್ಲಿಯ ಸ್ಥಳಿಯ ಧಾರ್ಮಿಕ ಸಂಘಟನೆಗಳಿಂದ ಕೊಲೆಬೆದರಿಕೆಗಳನ್ನು ಅನುಭವಿಸಿ, ಹೆಣ್ಣುಮಕ್ಕಳ ಬದುಕಿಗಾಗಿ ಹಾಗೂ ಆ ಕ್ರೂರ ವ್ಯವಸ್ಥೆಯನ್ನು ಸರಕಾರ ಕಾನೂನು ಬಾಹಿರ ಮಾಡಬೇಕು ಎಂದು ಹೋರಾಡುತ್ತಿರುವ ವಾರಿಸ್ ಅವರ ಧೈರ್ಯ ಹಾಗೂ ಹೋರಾಟದ ಮನೋಭಾವಕ್ಕೆ ಜಯ ಸಿಗಲಿ ಎಂಬುದೇ ಪ್ರತಿಯೊಬ್ಬ ಓದುಗನ ಮನದ ಹರಕೆಯಾಗುತ್ತದೆ.

ಇಂಗ್ಲೆಂಡಿನಲ್ಲಿ ಮನೆಗೆಲಸ, ಕಸಮುಸುರೆ ಮಾಡುವ ವಾರೀಸ್ ಮುಂದೊಂದು ದಿನ ವಿಶ್ವದ ಅಗ್ರಗಣ್ಯ ಜಾಹಿರಾತುಗಳಲ್ಲಿ‌ ಮಿಂಚುವ ಹೆಣ್ಣಾಗಿ ಬೆಳೆದುದು ಹೇಗೆ? ನರಕಕೂಪದಿಂದ ಹೊಸ ಬದುಕನ್ನು ಕಟ್ಟಿಕೊಂಡ ಬಗೆ ಹೇಗೆ? ಮಾಡೆಲಿಂಗನಲ್ಲಿ ಪ್ರಖ್ಯಾತಿಯಾದದ್ದು ಹೇಗೆ? ಎಲ್ಲವನ್ನು ತಿಳಿಯಲು ಅವರ ಆತ್ಮಕಥೆ 'ಮರುಭೂಮಿಯ ಹೂ' ಓದಿ.

ಮರುಭೂಮಿಯ ಹೂ ಜಗತ್ತಿನಾದ್ಯಂತ ತನ್ನ ಮಕರಂಧವನ್ನು ಬೀರಿದ ಕಥಾಹಂದರ ಎಲ್ಲರೂ ಓದಲೇಬೇಕು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ