Article

ಮಿಗಿಲಾದ ಭೂತಾಯಮ್ಮನ ಕಥೆ ’ಒಂದು ಚಿಟಕಿ ಮಣ್ಣು’

ಕಥಾಸಂಕಲನದಲ್ಲಿನ 'ಕಾಣುವ ಕಣ್ಣು' ಕಥೆ, ಸಾಂಪ್ರದಾಯಿಕವಾದ, ಶೂನ್ಯ ಬಂಡವಾಳದ ಸಹಜ ಮತ್ತು ಸಾವಯವ ಕೃಷಿ ಪದ್ಧತಿಯ ಮಹತ್ವದ ಕುರಿತು ಮಾತನಾಡುತ್ತದೆ. ಜೊತೆಗೆ, ಅವಸರದಲ್ಲಿ ಬೆಳೆ ತೆಗೆದು, ಹಣ ಮಾಡಬೇಕೆಂಬ ದುರಾಲೋಚನೆಯಲ್ಲಿ ಈ ದೇಶದ ರೈತನು ಸುಧಾರಿತ ಬೀಜ, ರಸಗೊಬ್ಬರ, ಕ್ರಿಮಿನಾಶಕ ಅಂತೆಲ್ಲ ಅವುಗಳ ಬೆನ್ನು ಬಿದ್ದು ಕಮ್ಮೀ ಅವಧಿಯಲ್ಲಿ ಬೆಳೆ ತೆಗೆಯುವ ಧಾವಂತಕ್ಕೆ ಸಿಲುಕಿ ಒಂದರ್ಥದಲ್ಲಿ ಭೂತಾಯಮ್ಮನ ಮೇಲೆ ಅತ್ಯಾಚಾರವನ್ನು ಎಸಗುತ್ತಿದ್ದಾನೆ ಎಂದು ಕಳಕಳಿಯನ್ನು ವ್ಯಕ್ತಪಡಿಸುತ್ತದೆ!. ಹಾಗೆ ನೋಡಿದರೆ ಭೂತಾಯಮ್ಮನ ಮಡಿಲೊಳಗೆ ಬೀಜ ಮೊಳಕೆಯೊಡೆಯುವುದು, ಚಿಗುರೊಡೆಯುವುದು ಮತ್ತು ಬೆಳೆಯಾಗುವುದು - ಈ ಇಂಥ ಕ್ರಿಯೆಗಳೆಲ್ಲ ಪ್ರಕೃತಿಯೊಳಗೆ ಸಂಭವಿಸುವ ಸಹಜ ಕ್ರಿಯೆಗಳು! ಬೀಜ ಅಂಕುರಿಸುವ ಕಾರ್ಯ ತಾಳ್ಮೆಯಿಂದ, ತಾದಾತ್ಮ್ಯದಿಂದ ನಡೆಯಬೇಕು. ಆಗಲೇ ರೈತನ ಬಾಳು ಬಂಗಾರವಾಗುವುದು ಎಂಬದು ಈ ಕಥೆಯ ತಾತ್ವಿಕತೆಯೂ ಕೂಡ ಎನ್ನಬೇಕು.

ಇಲ್ಲಿ, ಕಥೆಯ ಮುಖ್ಯ ಪಾತ್ರ ಸಿದ್ದಪ್ಪ, ಈ ದೇಶದ ಮಧ್ಯಮ ವರ್ಗದ ರೈತರ ಬದಕನ್ನು ಪ್ರತಿನಿಧಿಸುತ್ತಾನೆ. ತಲೆಮಾರಿನಿಂದ ಬಂದ ನಾಲ್ಕು ಎಕರೆ ಭೂಮಿಯನ್ನು ಸರಿಯಾಗಿ ಹದ ಮಾಡುವ ಪದ್ಧತಿ ಅರಿಯದೇ, ಪದೇ ಪದೇ ನಷ್ಟವನ್ನು ಅನುಭವಿಸಿ, ವ್ಯವಸಾಯವೆಂದರೆ ಹಿಂಜರಿಯಲಾರಂಭಿಸುತ್ತಾನೆ. ಇವರೊಂದಿಗೆ ಆತ, ತನ್ನ ಮಗ ಕಲ್ಲಪ್ಪ ಒಕ್ಕಲುತನವನ್ನು ಮುಂದುವರೆಸುವುದು ಬೇಡವಾಗಿರುವುದಕ್ಕೆ ಆತನಿಗೆ ಸಹಜವಾದ ಕೃಷಿ ವಿಧಾನ ಅರಿವು ಇಲ್ಲದಿರುವುದೂ ಸಹ ಒಂದು ಕಾರಣವಾಗುತ್ತದೆ! ಹೀಗಾಗಿ, ಆತ ಸಹಜವಾಗಿಯೇ ತನ್ನ ಮಗ ನೌಕರಿ ಮಾಡಲಿ ಎಂದು ಬಯಸುತ್ತಾನೆ. ಆದರೆ, ವಾಸ್ತವದಲ್ಲಿ ಅದು ಆತನ (ಸಿದ್ದಪ್ಪ) ಅನಿವಾರ್ಯ ಕಾರಣ ಪ್ರೇರಿತ ಬಯಕೆಯಾಗಿರುವುದು, ಅದಕ್ಕೆಲ್ಲ ಆತ ಅನುಸರಿಸಿದ ಅವೈಜ್ಞಾನಿಕ ಕೃಷಿಪದ್ಧತಿಯೇ ಪರೋಕ್ಷವಾಗಿ ಕಾರಣವಾಗುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ. ಆದರೆ, ಕಡೆಗೂ, ತನ್ನಪ್ಪ ಸಿದ್ಧಪ್ಪನ ಆಶೆಗೆ ವಿರುದ್ಧವಾಗಿ ಕಲ್ಲಪ್ಪನು ಸರಕಾರಿ ನೌಕರಿಯಿಂದ ವಿಮುಖನಾಗಿ ವ್ಯವಸಾಯದತ್ತ ಮುಖ ಮಾಡುವುದು ಒಂದರ್ಥದಲ್ಲಿ ಈ ಲೋಕಕೆ ಅನ್ನವನ್ನು ನೀಡುವ ರೈತನೇ ಎಲ್ಲಕ್ಕೂ ಮಿಗಿಲು ಎಂಬ ಮಾತನ್ನು ಪುಷ್ಟೀಕರಿಸುತ್ತದೆ. ಮತ್ತು, ಕಥೆಯುದ್ದಕ್ಕೂ ರೈತ ಕುಟುಂಬವೊಂದರ ಭೂಮಿಯೊಂದಿಗಿನ ಸಂಬಂಧ ಹಾಗು ರೈತಕಿ ಬದುಕನ್ನು ಕಥೆಗಾರ ಆರ್ದ್ರವಾಗಿ ಕಟ್ಟಿಕೊಟ್ಟಿದ್ದಾರೆ. 

ಪುಸ್ತಕದ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಲ್ಲೇಶ್ ಕುಂಬಾರ್