ಒಂದು ಚಿಟಿಕೆ ಮಣ್ಣು

Author : ಲಕ್ಷ್ಮಣ ಬಾದಾಮಿ

Pages 144

₹ 130.00




Year of Publication: 2019
Published by: ಛಂದ ಪುಸ್ತಕ
Address: ಐ-004, ಮಂತ್ರಿಪ್ಯಾರಡೈಸ್‌ ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076
Phone: 9844422782

Synopsys

ಅರ್ಥಪೂರ್ಣ ವ್ಯಂಗ್ಯದ, ಕಣ್ಣಿಗೆ ಕಟ್ಟುವಂಥ, ನಾಟಕೀಯ ಗುಣವುಳ್ಳ ಪ್ರತಿಮೆಗಳ, ಬದಲಾಗುವ ಪಾತ್ರಗಳ ಹಾಗೂ ಸನ್ನಿವೇಶಗಳ ಒಂದು ಮೆರವಣಿಗೆಯೇ ಒಂದು ಚಿಟಿಕೆ ಮಣ್ಣು ಪುಸ್ತಕದ ಕತೆಗಳಲ್ಲಿದೆ. ಬದುಕಿನ ವಿವಿಧ ಅನುಭವಗಳನ್ನು ಪ್ರತಿಫಲಿಸುವ ಇಲ್ಲಿನ ಹತ್ತು ಕತೆಗಳಲ್ಲಿ ಮನುಷ್ಯ ಸಂಬಂಧಗಳ ಶೋಧನೆಯೇ ಪ್ರಮುಖವಾಗಿದೆ. ಕೆಲವು ಕತೆಗಳು ಹಗೆತನದ ಅಥವಾ ಕ್ರೌರ್ಯದ ಸನ್ನಿವೇಶಗಳಲ್ಲಿ ಬದುಕುತ್ತಿರುವವರ ಬಾಳಿನಲ್ಲಿ ಭಾವೋದ್ರೇಕದ, ಅಚ್ಚರಿಯ ಅಥವಾ ಭ್ರಮನಿರಸನದ ಕ್ಷಣಗಳನ್ನು ಪಡಿಮೂಡಿಸುತ್ತವೆ; ಧಾಟಿಯಲ್ಲಿ ಆಶ್ರಯದಲ್ಲಿ ವಿಭಿನ್ನವಾಗಿದ್ದರೂ ವಿಷಾದವು ಹೇಗೋ ಹಾಗೆ ಖಿನ್ನತೆಯೂ ತುಂಬಿರುವ ಮನುಷ್ಯ ಸ್ಥಿತಿಯನ್ನು ಸೂಕ್ಷ್ಮವಾಗಿಯೂ ಗಾಢವಾಗಿಯೂ ಅರಿತುಕೊಳ್ಳಲು ಪ್ರಯತ್ನಿಸುತ್ತವೆ.  ಸಣ್ಣಪುಟ್ಟ ಹಳ್ಳಿ, ಪಟ್ಟಣಗಳಲ್ಲಿ ವಾಸಮಾಡುತ್ತಿರುವ ಬಹುಮಂದಿ ತಮ್ಮ ದಾರುಣ ಸ್ಥಿತಿಯನ್ನು ಪ್ರಶ್ನಿಸದೆ ಒಪ್ಪಿಕೊಂಡಿರುವವರು, ಬಹುಮಟ್ಟಿಗೆ ಎಲ್ಲರದೂ ಬಡತನದ ಜೀವನ, ಪ್ರತ್ಯೇಕತೆ ಮತ್ತು ಒಬ್ಬೊಂಟಿತನ, ದುರ್ವಿಧಿ ಮತ್ತು ಅಸಹಾಯಕತೆ, ಇವು ಇಲ್ಲಿನ ಸಾಕಷ್ಟು ಕತೆಗಳಲ್ಲಿ ಕಂಡು ಬರುತ್ತದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. 

About the Author

ಲಕ್ಷ್ಮಣ ಬಾದಾಮಿ

ಲಕ್ಷ್ಮಣ ಬಾದಾಮಿ ಅವರ ಮೂಲ ಹೆಸರು ಲಕ್ಷ್ಮಣ ತುಕಾರಾಮ ಬಾದಾಮಿ. ಇವರು ಮೂಲತಃ ಬಾಗಲಕೋಟ ಜಿಲ್ಲೆ ಸಿರೂರು ಗ್ರಾಮದವರು. ಕಲಾ ವಿಭಾಗದಲ್ಲಿ ಎಂ.ಎಫ್.ಎ., ಎ.ಎಂ., ಜಿ.ಡಿ.(ಆರ್ಟ್) ಪೂರ್ಣಗೊಳಿಸಿದ್ದು, 2008ರಿಂದ ಸರಕಾರಿ ಪ್ರೌಢಶಾಲೆ ಕುರುಕುಂದದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ, ಸಿರೂರದ ಮೂಲಕ ಕಳೆದ 15 ವರ್ಷಗಳಿಂದ ಸಾಹಿತ್ಯ, ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕಲೆಯೊಂದಿಗೆ ಸಾಹಿತ್ಯದತ್ತರು ಆಸಕ್ತಿಹೊಂದಿರುವ ಅವರ ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ...

READ MORE

Awards & Recognitions

Excerpt / E-Books

ಲಕ್ಷ್ಮಣ ಬಾದಾಮಿ ಅವರ ಒಂದು ಚಿಟಿಕೆ ಮಣ್ಣು ಕಥಾ ಸಂಕಲನದ ಮುನ್ನುಡಿ

ಕಥಾ ಸಾಹಿತ್ಯದ ಕೇಂದ್ರದಲ್ಲಿರುವವನು ಮನುಷ್ಯ. ಕತೆ ಬರೆಯುವ ಪ್ರಕ್ರಿಯೆಯಲ್ಲಿ ಕತೆಗಾರ ತನ್ನ ಕಲ್ಪನೆಯ ಫಲವಾದ ವಾಸ್ತವವನ್ನು ಪುನರ್ರೂಪಿಸುತ್ತಿರುತ್ತಾನೆ. ಆದ್ದರಿಂದ ವಸ್ತುನಿಷ್ಠತೆ ಮತ್ತು ವ್ಯಕ್ತಿನಿಷ್ಠತೆಗಳ ನಡುವೆ ಒಂದು ಬಗೆಯ ಸಂವಾದ ನಡೆಯುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಲಕ್ಷ್ಮಣ ಬಾದಾಮಿಯವರ ಈ ಸಂಕಲನದ ಕತೆಗಳು ಆ ಸಂವಾದದಲ್ಲಿ ಓದುಗನೂ ಭಾಗವಹಿಸಬೇಕೆಂದು ಆಗ್ರಹಿಸುವಂತಿವೆ. 

ಬದುಕಿನ ವಿವಿಧ ಅನುಭವಗಳನ್ನು ಪ್ರತಿಫಲಿಸುವ ಇಲ್ಲಿನ ಹತ್ತು ಕತೆಗಳಲ್ಲಿ ಮನುಷ್ಯ ಸಂಬಂಧಗಳ ಶೋಧನೆಯೇ ಪ್ರಮುಖವಾಗಿದೆಯೆನ್ನಬಹುದು. ಕೆಲವು ಕತೆಗಳು ಹಗೆತನದ ಅಥವಾ ಕ್ರೌರ್ಯದ ಸನ್ನಿವೇಶಗಳಲ್ಲಿ ಬದುಕುತ್ತಿರುವವರ ಬಾಳಿನಲ್ಲಿ ಭಾವೋದ್ರೇಕದ, ಅಚ್ಚರಿಯ ಅಥವಾ ಭ್ರಮನಿರಸನದ ಕ್ಷಣಗಳನ್ನು ಪಡಿಮೂಡಿಸುತ್ತವೆ; ಧಾಟಿಯಲ್ಲಿ, ಆಶಯದಲ್ಲಿ ವಿಭಿನ್ನವಾಗಿದ್ದರೂ ವಿಷಾದವು ಹೇಗೋ ಹಾಗೆ ಖಿನ್ನತೆಯೂ ತುಂಬಿರುವ ಮನುಷ್ಯ ಸ್ಥಿತಿಯನ್ನು ಸೂಕ್ಷ್ಮವಾಗಿಯೂ ಗಾಢವಾಗಿಯೂ ಅರಿತುಕೊಳ್ಳಲು ಪ್ರಯತ್ನಿಸುತ್ತವೆ. ಅರ್ಥಪೂರ್ಣ ವ್ಯಂಗ್ಯದ, ಕಣ್ಣಿಗೆ ಕಟ್ಟುವಂಥ, ನಾಟಕೀಯ ಗುಣವುಳ್ಳ ಪ್ರತಿಮೆಗಳ, ಬದಲಾಗುವ ಪಾತ್ರಗಳ ಹಾಗೂ ಸನ್ನಿವೇಶಗಳ ಒಂದು ಮೆರವಣಿಗೆಯೇ ಇಲ್ಲಿನ ಕತೆಗಳಲ್ಲಿದೆ. ಇಲ್ಲಿ ಸಣ್ಣಪುಟ್ಟ ಹಳ್ಳಿ, ಪಟ್ಟಣಗಳಲ್ಲಿ ವಾಸಮಾಡುತ್ತಿರುವ ಬಹುಮಂದಿ ತಮ್ಮ ದಾರುಣ ಸ್ಥಿತಿಯನ್ನು ಪ್ರಶ್ನಿಸದೆ ಒಪ್ಪಿಕೊಂಡಿರುವವರು. ಬಹುಮಟ್ಟಿಗೆ ಎಲ್ಲರದೂ ಬಡತನದ ಜೀವನ.

ಲಕ್ಷ್ಮಣ ಬಾದಾಮಿಯವರ ಕತೆಗಳನ್ನು ಎರಡು ರೀತಿ ವಿಭಾಗಿಸಬಹುದು. ಒಂದು, ಪರಿಸ್ಥಿತಿಯ ಅನಾವರಣ; ಇನ್ನೊಂದು, ಸತ್ಯಾನ್ವೇಷಣೆ. ಮೊದಲ ರೀತಿಯ ಕತೆಗಳಲ್ಲಿ ಸನ್ನಿವೇಶವೊಂದು ಬೆಳೆದು ಬೆಳೆದು ಬದಲಾದಂತೆಲ್ಲ ಓದುಗರಿಗೆ ನಿಜಸ್ಥಿತಿಯ ಅರಿವಾಗುತ್ತದೆ. ಎರಡನೆಯ ರೀತಿಯ ಕತೆಗಳಲ್ಲಿ ಓದುಗ ವಾಸ್ತವ ಸ್ಥಿತಿಯನ್ನು ಗ್ರಹಿಸುವುದು ಒಬ್ಬ ಹೊರಗಿನವನಾಗಿ ಅಲ್ಲ; ಅದಕ್ಕೆ ಬದಲಾಗಿ ಒಂದು ಕಥಾಪಾತ್ರದ ಬದುಕಿನಲ್ಲಿ ಜೊತೆಗೂಡುತ್ತ, ಅಂತಿಮವಾಗಿ ಅದು ಕಂಡುಕೊಳ್ಳುವ ದರ್ಶನವನ್ನು ತಾನೇ ಕಂಡುಕೊಳ್ಳುವವನಾಗಿ. 

ಈ ಸಂಕಲನದ ಆಶೀರ್ವಾದ ಮತ್ತು ಮಠದ ದಾರಿ ಎಂಬೆರಡು ಕತೆಗಳನ್ನು ಒಟ್ಟಿಗೇ ಪರಿಶೀಲಿಸಬೇಕು. ಎರಡೂ ಕತೆಗಳಲ್ಲಿ ಪವಾಡಪುರುಷರೆನಿಸಿದ ಸ್ವಾಮಿಗಳ ಗದ್ದುಗೆಗಳಿವೆ. ಮೊದಲನೆಯದರಲ್ಲಿ ತಟ್ಟಿಮನಿ ಸಿದ್ದಪ್ಪ ಕೂಲಿ ಕೆಲಸದ ಜೊತೆಗೆ ವರ್ಷಗಟ್ಟಲೆ ಶ್ರೀಮಠದ ಕೆಲಸವನ್ನೂ ಮಾಡಿದವನು. ಈಗಿನ ಶ್ರೀಗಳು ದೀರ್ಘಕಾಲದಿಂದ ಸೇವೆಮಾಡುತ್ತಿರುವ ಅವನನ್ನು ಸನ್ಮಾನಿಸಿ ಅಶೀರ್ವದಿಸಬೇಕೆಂದು ತೀರ್ಮಾನಿಸಿದ್ದಾರೆ. ಸನ್ಮಾನದ ದಿನ ಅವನಿಗೆ ಸಲ್ಲಬೇಕಾಗಿದ್ದ ಸನ್ಮಾನ ಅನಿರೀಕ್ಷಿತವಾಗಿ ಆಗಮಿಸುವ ಎಮ್ಮೆಲ್ಲೆಯವರಿಗೆ ಸಂದುಹೋಗುತ್ತದೆ. ಇಲ್ಲಿ ಮಠದಂಥ ಧಾರ್ಮಿಕ ಕ್ಷೇತ್ರ ಅಧಿಕಾರವನ್ನು ಗೌರವಿಸುವುದರ ಮೂಲಕ ಹೇಗೆ ತನ್ನ ನಿಜವಾದ ಭಕ್ತನೊಬ್ಬನನ್ನು ಕಡೆಗಣಿಸುತ್ತದೆ ಎಂಬ ವ್ಯಂಗ್ಯವಿದೆ. ಮಠದ ದಾರಿಯ ನಿರೂಪಕ ತನ್ನ ವೃತ್ತಿಯಿಂದ ನಿವೃತ್ತನಾಗಿದ್ದು ಮನಃಶಾಂತಿಯನ್ನು ಅರಸುತ್ತ ಸಿರಿಪುರದ ಸಿದ್ದಪ್ಪಯ್ಯನ ಮಠಕ್ಕೆ ಹೋಗುತ್ತಾನೆ. ದಾರಿಯುದ್ದಕ್ಕೂ ಅವನು ಕಾಣುವುದು ಅಭಿವೃದ್ಧಿ ಕಾರ್ಯಗಳು ಹಾಗೂ ಆ ಕಾರ್ಯಗಳಿಂದ ಕಣ್ಮರೆಯಾಗುತ್ತಿರುವ ಒಂದು ಜೀವನ ವಿಧಾನ. ಮಠದಲ್ಲಿ ಅವನಿಗೆ ಹಿಂದಿನ ಸ್ವಾಮಿಯೊಬ್ಬನ ಅವ್ಯವಹಾರದ ಬಗ್ಗೆ, ಅವನು ಯಾರಿಗೂ ಹೇಳದೆ ಹೊರಟುಹೋದದ್ದರ ಬಗ್ಗೆ ಗೊತ್ತಾಗುತ್ತದೆ. ಕತೆಯ ವರ್ತಮಾನದಲ್ಲಿ ಮಠವೇ ಒಂದು ಶಾಲೆಯಾಗಿದೆ. ನಿರೂಪಕ ತನ್ನ ತಂದೆಯ ಕಾಲದಿಂದಲೂ ಮುಡಿಪಾಗಿ ಸಂಗ್ರಹಿಸಿದ್ದ ಹಣದ ಡಬ್ಬಿಯನ್ನು ಸಿದ್ದಪ್ಪಯ್ಯ ಸ್ವಾಮಿಯ ಪಟದ ಮುಂದೆ ಇರಿಸುವುದೂ, ಅದರಿಂದ ತೆಗೆದ ಒಂದಿಷ್ಟು ಹಣದಲ್ಲಿ ಮಕ್ಕಳಿಗೆ ಚಾಕೊಲೇಟ್ ಕೊಡಿಸುವಂತೆ ಹೇಳುವುದೂ ಕತೆಗೆ ಹೊಸದೊಂದು ಆಯಾಮ ನೀಡುತ್ತವೆ.

ಉತ್ತಮ ಪುರುಷ ನಿರೂಪಣೆಯಲ್ಲಿರುವ ಏಕಮಾತ್ರ ಕತೆ ಬರೆಯಲಾಗದ ಕಥಿ. ಇಲ್ಲಿ ಮಾನ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು, ಅವರು ಗುದ್ದಲಿ ಪೂಜೆ ನೆರವೇರಿಸಿದರು; ಇವರು ಸ್ವಾಗತಿಸಿದರು, ಮತ್ತವರು ವಂದಿಸಿದರು ಎಂಬಂಥ ಸುದ್ದಿಗಳನ್ನೇ ಬರೆದೂ ಬರೆದೂ ಬೇಸತ್ತ ಪತ್ರಿಕಾ ವರದಿಗಾರನೊಬ್ಬ ಒಂದು ದಿನ ದೂರದ ಹಳ್ಳಿಗಳಿಗೆ ಹೋಗುತ್ತಾನೆ. ಕೂಲಿ ಜನರನ್ನು ತುಂಬಿಕೊಂಡಿರುವ ವಾಹನಗಳು, ಮಕ್ಕಳೇ ತುಂಬಿದ ಟಮ್‌ಟಮ್ ಗಾಡಿ, ಅದರ ಡ್ರೈವರು, ಹಳ್ಳಿಯ ಶಾಲೆಯ ಟೀಚರಮ್ಮ, ವಡಲಟ್ಟಿ ಕ್ರಾಸ್ ಎಂಬ ಊರು, ಅಲ್ಲಿನ ಗುಡಿಸಲುಗಳು, ಕೂಲಿ ಮಾಡುವ ಮುದುಕ - ಎಲ್ಲವೂ ಎಲ್ಲರೂ ಪ್ರತಿನಿಧಿಸುವುದು ಯಾತನೆಯ, ಅತೃಪ್ತಿಯ ಬದುಕುಗಳನ್ನೇ. ಲಕ್ಷ್ಮಣರ ಇನ್ನೂ ಕೆಲವು ಕತೆಗಳಲ್ಲಿ ಕಾಣಿಸಿಕೊಳ್ಳುವ ನಿರೂಪಕ, ಇಲ್ಲಿನ ಪತ್ರಿಕಾ ವರದಿಗಾರನಂತೆ, ತಾನು ಕಂಡದ್ದರ ವೀಕ್ಷಕ ವಿವರಣೆ ನೀಡುತ್ತಿರುತ್ತಾನೆ. ನಿದರ್ಶನಕ್ಕಾಗಿ ಈ ಪಯಣ ಮುಗಿಯುವುದಿಲ್ಲ, ಮಠದ ದಾರಿ ಕತೆಗಳನ್ನು ನೋಡಬಹುದು. ಇವುಗಳಲ್ಲಿ ಕಾಣುವ ಕಠೋರ ವಾಸ್ತವದ ಚಿತ್ರಗಳು ಓದುಗನಲ್ಲಿ ಅನುಕಂಪದ ಜೊತೆ ಇನ್ನೇನನ್ನೋ ಮೂಡಿಸುವುದಕ್ಕೆ ಕಾರಣ ಇವುಗಳ ವೀಕ್ಷಕ ವಿವರಣಾ ತಂತ್ರವೇ. 

ಕೆಲವು ಕತೆಗಳಲ್ಲಿ ನಿರೂಪಕನೋ ಒಂದು ಪಾತ್ರವೋ ಸಂದರ್ಭಕ್ಕೆ ಸರಿಹೊಂದುವ ಕನ್ನಡ ಕಾವ್ಯದ ಕೆಲವು ಪದ್ಯಗಳನ್ನೋ ವಚನಗಳನ್ನೋ ಉದ್ಧರಿಸುವುದುಂಟು. ಹೀಗೆ ಉದ್ಧರಿಸುವುದರಿಂದ ಕೆಲವೊಮ್ಮೆ ಸಂದರ್ಭವೊಂದರ ಅಂತರಾರ್ಥ ಸ್ಫುಟಗೊಳ್ಳುವುದಾದರೂ ಎಲ್ಲ ಸಂದರ್ಭಗಳಲ್ಲೂ ಅವು ಹಾಗಾಗದೆ ಕತೆಯ ಪರಿಧಿಯಿಂದ ಹೊರಗೇ ನಿಂತುಬಿಟ್ಟರೆ ಆಶ್ಚರ್ಯವಿಲ್ಲ. ಆದರೆ ಮಹಾಜಿರಂಗದೊಳ್ ಎಂಬ ಕತೆ ಇದಕ್ಕೊಂದು ಅಪವಾದವೆನ್ನಬಹುದು. ಪೀಟಿ ಮಾಸ್ಟರ್ ಸಿದ್ದಣ್ಣನ ಮೇಲೆ ಅವನು ಓದಿರುವ ಪಂಪ, ಕುಮಾರವ್ಯಾಸರ ಕೆಲವು ಪದ್ಯಗಳು ಎಂಥ ಪ್ರಭಾವ ಬೀರಿವೆಯೆಂದರೆ ಅವನು ಶಾಲೆಯ ಬಡಮಕ್ಕಳ ಸ್ಥಿತಿಯನ್ನು ಕಂಡು ಮರುಗುವುದಷ್ಟೇ ಅಲ್ಲ, ಹೆಡ್‌ಮಾಸ್ಟರಿನ ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಸಿಡಿದೇಳುತ್ತಾನೆ ಕೂಡ. ಇಲ್ಲಿನ ಆಶಯವೆಂದರೆ ಸಾಹಿತ್ಯ ಬದುಕಿನ ಮೇಲೆ ಮಾಡುವ, ಅಥವಾ ಮಾಡಬೇಕಾದ ಪರಿಣಾಮ.

ಒಂದು ಚಿಟಿಕೆ ಮಣ್ಣು ಕತೆಯಲ್ಲಿ ಹುಟ್ಟಿನಿಂದಲೇ ಮಣ್ಣು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುವ ಕಲ್ಲಪ್ಪನಿದ್ದಾನೆ. ಅವನ ತಾಯಿ ಆ ಚಾಳಿಯನ್ನು ಬಿಡಿಸಲು ಪ್ರಯತ್ನಿಸಿ ಸೋತವಳು. ಮದುವೆಯಾಗಿ ಒಬ್ಬ ಮಗ ಹುಟ್ಟಿದ ಮೇಲೂ ಅವನು ಮಣ್ಣು ತಿನ್ನುತ್ತಲೇ ಇರುವವನು. ಬೆಳೆದ ಮಗ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಹೊರಟಾಗ ಜೊತೆಗೆ ಒಂದು ಚೀಲ ಮಣ್ಣು ಕೊಂಡೊಯ್ಯುವವನು. ಆದರೆ ಕಲ್ಲು ಗಾರೆ ಸಿಮೆಂಟುಗಳ ಬೆಂಗಳೂರಲ್ಲಿ ಮಣ್ಣೇ ಇಲ್ಲ. ಅಲ್ಲಿಂದ ಹಿಂತಿರುಗಿದ ಮೇಲೆ ಅಭಿವೃದ್ಧಿಯ ಬಲೆಗೆ ಸಿಕ್ಕಿರುವ ಅವನ ಊರಿನಲ್ಲೂ ಮಣ್ಣಿಲ್ಲ. ಇಲ್ಲಿ ಮಣ್ಣು ಅವನ ಮನಃಸ್ಥಿತಿಗೊಂದು ಸಾರ್ಥಕ ರೂಪಕವಾಗಿದೆ. ಇದೊಂದು ಫ್ಯಾಂಟಸಿಯಷ್ಟೆ. ವಾಸ್ತವತೆಯ ಬಗೆಗಿನ ಅತೃಪ್ತಿಯಿಂದ ಹುಟ್ಟುವ ಫ್ಯಾಂಟಸಿ ಸಾಹಿತ್ಯ ಮನುಷ್ಯನ ಕೆಲವು ಮೂಲಭೂತವಾದ ಹಾಗೂ ಆದರ್ಶಯುತವಾದ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ.  ಜೊತೆಯಲ್ಲಿಯೇ ಅವನ ಇಂದಿನ ಶೋಚನೀಯ ಅವಸ್ಥೆಗೆ ಕಾರಣಗಳೇನು ಎಂಬುದನ್ನೂ ವಿಶ್ಲೇಷಿಸಲು ಯತ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಒಂದು ಚಿಟಿಕೆ ಮಣ್ಣು ನಮ್ಮ ರೂಢಿಗತ ವಾಸ್ತವವಾದಕ್ಕೆ ಸವಾಲೊಡ್ಡುವಂತಿದೆ. ಕಣ್ಣಿಗೆ ಕಂಡದ್ದಷ್ಟೇ ಸತ್ಯವಲ್ಲ ಎಂಬ ನಂಬಿಕೆಯಿಂದ ಹುಟ್ಟುವ ಇಂಥ ಕತೆಗಳು ನಮ್ಮ ದಿನನಿತ್ಯದ ಜಗತ್ತನ್ನು ಒಂದು ಹೊರಕವಚವಾಗಿ ಮಾಡಿಕೊಂಡು ಅದರ ಮೂಲಕ ವಿವರಿಸಲಾಗದ್ದನ್ನು ಸೃಷ್ಟಿಸುತ್ತವೆ. 

ಈ ಸಂಕಲನದಲ್ಲಿ ಸಾಕಷ್ಟು ಯಶಸ್ವಿಯಾಗಿರುವ ಕತೆಯೆಂದರೆ ಅವಳು. ಇಲ್ಲಿ ಕೈಮಗ್ಗದಲ್ಲಿ ಸೀರೆ ನೆಯ್ದು ಬದುಕುತ್ತಿರುವ ಒಂದು ಬಡ ಕುಟುಂಬವಿದೆ. ಆ ಕುಟುಂಬದ ಹೆಣ್ಣುಮಗಳಾದ ಸರಸೋತಿ ವಯಸ್ಸಿಗೆ ತಕ್ಕಂತೆ ಮೈನೆರೆಯದೆ ಉಳಿದುಬಿಡುವುದರಿಂದ ಪ್ರಾರಂಭವಾಗುವ ಕತೆ ಕೌಟುಂಬಿಕ ಸಂಕಷ್ಟಗಳನ್ನೂ, ಬಾಂಧವ್ಯಗಳ ಪೊಳ್ಳುತನವನ್ನೂ ಶೋಧಿಸುತ್ತ, ಕಡೆಗೆ ಅವಳು ತನ್ನ ಸ್ವಾಭಿಮಾನದ ಪ್ರತೀಕವೆಂಬಂತೆ ರೂಪಾಂತರಗೊಂಡು ತನ್ನದೇ ಓಣಿಯಲ್ಲಿ ಹೊಸದಾಗಿ ಪ್ರಾರಂಭವಾದ ಬಾಲವಾಡಿಯಲ್ಲಿ ಆಯಾ ಆಗುವವರೆಗೆ ಸಾಗುತ್ತದೆ. ಕತೆಯ ಅಂತ್ಯದಲ್ಲಿ ಅವಳು ಬಿಡಿಸುವ ರಂಗೋಲಿ ಮನುಷ್ಯರ ನಡುವಿನ ಸಹಜ ಸಂಬಂಧಗಳಿಗೊಂದು ಸಂಕೇತವಾಗುತ್ತದೆ. ಕತೆಗಾರ ಇಲ್ಲಿ ಉಪಯೋಗಿಸಿರುವ ಭಾಷೆಯಿಂದ ಹಾಗೂ ಆ ಭಾಷೆಗೇ ವಿಶಿಷ್ಟವಾದ ಶಬ್ದಗಳಿಂದ ಇಲ್ಲಿನ ಕ್ರಿಯಾಕ್ಷೇತ್ರಗಳಾಗಿರುವ ಊರು, ಓಣಿ ನಿಜಕ್ಕೂ ಅಥೆಂಟಿಕ್ ಆಗಿವೆಯೆನ್ನಬೇಕು. ಮತ್ತೆ ಕತೆಗಾರರು ಇಲ್ಲಿ ಉಪಯೋಗಿಸಿರುವ ಪದಗಳನ್ನು ನೋಡಿ: ಕುಣಿ, ಘೋಡಾ, ಟೋಕಳಾ, ಕಾಲ್ಪಡಿ, ಟಾಣುಕೋಲು, ಬದ್ನೀಶೆಳ್ಳು, ಗಾಡ, ಅಣಿ.... ಇವೆಲ್ಲವೂ ಸೀರೆ ನೇಯುವ ಕೈಮಗ್ಗಗಳ ಕಾರ್ಯವಿಧಾನಕ್ಕೆ ಸಂಬಂಧಿಸಿದ ಪದಸಂಪತ್ತು.   

ಲಕ್ಷ್ಮಣ ಬಾದಾಮಿಯವರು ಚಿತ್ರಗಳನ್ನು ರಚಿಸುವ ಒಬ್ಬ ಸಮರ್ಥ ಕಲಾವಿದರಾಗಿರುವುದರಿಂದಲೇ ಏನೊ, ಅವರು ನಿರೂಪಿಸುವುದೆಲ್ಲವೂ ಕಣ್ಣಿಗೆ ಕಟ್ಟುವಷ್ಟು ಚಿತ್ರವತ್ತಾಗಿ ಮೂಡಿಬರುತ್ತವೆ. ಉದಾಹರಣೆಗೆ ಈ ವಾಕ್ಯಗಳನ್ನು ನೋಡಿ: (ಅಂಗಿಯಲ್ಲಿ) ಅಡ್ಡಾದಿಡ್ಡಿ ಮಡಿಕೆಗಳು ಮೂಡಿ, ಸಮನಾದ ನೆಲದಲ್ಲಿ ಎತ್ತೆತ್ತಲೋ ನೇಗಿಲು ಉಳುಮೆ ಮಾಡಿದಂತೆ ಕಾಣುತ್ತಿತ್ತು; ಸಿದ್ದಪ್ಪನು ಉದ್ದ ಕಸಬರಿಗೆಯನ್ನು ಹಿಡಿದು ಸರ್ರಸರ್ರ ಅಂತ ಅಂಗಳದ ಒಂದು ತುದಿಯಿಂದ ಇನ್ನೊಂದು ತುದಿಗೆ ಕಸಬರಿಗೆಯಲ್ಲಿ ಎಷ್ಟು ಕಡ್ಡಿಗಳಿವೆಯೋ ಅಷ್ಟು ಗೆರೆಗಳನ್ನು ಅರ್ಧವೃತ್ತಾಕಾರದಲ್ಲಿ ಮಣ್ಣ ನೆಲದಲ್ಲಿ ಮೂಡಿಸುತ್ತ ಸಾಗಿರುತ್ತಾನೆ; ಅಂಗಿಯ ಕಿತ್ತುಹೋದ ಗುಂಡಿಗಳ ಸ್ಥಾನದಲ್ಲಿ ಕೈಗೆ ಸಿಕ್ಕ ಬಣ್ಣಬಣ್ಣದ ಗುಂಡಿಗಳನ್ನು ಹಚ್ಚಿಕೊಂಡಿದ್ದ  ಹುಡುಗನಿಗೆ ಗುಂಡಿ ಯಾವುದಾದರೇನು? ಮುಖ್ಯ, ಬಾಯಿ ಕಿಸಿಯುವ ಶರ್ಟಿನ ಬಾಯನ್ನು ಮುಚ್ಚಿಸಬೇಕಿತ್ತಷ್ಟೆ. ಢಾಳಾಗಿ ಕಾಣುತ್ತಿದ್ದ ಆ ಬಣ್ಣದ ಗುಂಡಿಗಳಲ್ಲಿ ಮಾಸ್ಟರ್‌ಗೆ ಏನೋ ಕಂಡಂತಾಗಿ ಮತ್ತೆ ನೋಡಿದರೆ ಕೇಸರಿ, ಬಿಳಿ, ಹಸಿರು ಅರೆ! ಹುಡುಗನೆದೆಯ ಮೇಲೆ ರಾಷ್ಟ್ರಧ್ವಜವೇ ನಿರ್ಮಾಣವಾಗಿದೆ; ಟೊಂಗೆಯ ತುದಿಯಲ್ಲಿದ್ದ ಕೆಲವು ಕೆಂಬಣ್ಣದ, ಕೆಲವು ತಿಳಿಹಸಿರು ಬಣ್ಣದ, ಇನ್ನೂ ಕೆಲವು ಇವೆರಡು ವರ್ಣದ ಮಿಶ್ರಣವಿದ್ದಂತೆ ತೋರುವ ಚೆಂದದ ಎಲೆಗಳು ಆ ಬಸರಿಗಿಡಕ್ಕೆ ಹೂವರಳಿಸುವ ಭಾಗ್ಯವಿಲ್ಲವೆನ್ನುವ ಕೊರಗನ್ನು ನಿವಾರಿಸಲಿಕ್ಕೆ ನಿಂತಂತೆ ಕಾಣುತ್ತಿದ್ದವು; ತಲಬಾಗಿಲಿಂದ ಪಡಸಾಲಿಯ ಪಾವಟಿಗೆಯ ತನಕ ಬಿದ್ದಿದ್ದ ಬಿಸಿಲಪಟ್ಟಿ ಈಗ ಸಣ್ಣದಾಗುತ್ತ ತಲಬಾಗಿಲ ಹೊಸ್ತಿಲ ಸಮೀಪ ಬಂದಿತ್ತು, ಇತ್ಯಾದಿ. ಇವುಗಳಲ್ಲಿರುವ ವ್ಯಂಜಕ ಶಕ್ತಿ ಹೇಳಿದ್ದಕ್ಕಿಂತ ಹೆಚ್ಚು ತೋರಿಸುತ್ತವೆ, ಉತ್ಸಾಹದಲ್ಲಿ, ವ್ಯಂಗ್ಯದಲ್ಲಿ.

ಪ್ರತ್ಯೇಕತೆ ಮತ್ತು ಒಬ್ಬಂಟಿತನ, ದುರ್ವಿಧಿ ಮತ್ತು ಅಸಹಾಯಕತೆ, ಇವು ಲಕ್ಷ್ಮಣರನ್ನು ಸಾಕಷ್ಟು ಕಾಡಿರುವ ವಸ್ತುಗಳು. ಇವುಗಳನ್ನು ಅನುಭವಿಸುವವರು ಪರಸ್ಪರರಿಂದ, ಕುಟುಂಬದಿಂದ, ಸಮುದಾಯದಿಂದ ಬೇರ್ಪಟ್ಟ ಜನರು. ಹೀಗೆ ಬೇರ್ಪಡುವುದರಿಂದ ಉಂಟಾಗುವ ನೋವು, ಯಾತನೆಗಳು ನಮ್ಮ ಮನಸ್ಸನ್ನು ತಟ್ಟುವುದು ಸಹಜ. ಮನುಷ್ಯ ಸಂಬಂಧಗಳನ್ನು ಪರಿಶೀಲಿಸಿ ನೋಡುವ ಸೂಕ್ಷ್ಮಜ್ಞತೆ, ಕೆಲವೇ ಶಬ್ದಗಳಲ್ಲಿ ಸನ್ನಿವೇಶವೊಂದನ್ನು ಕಡೆದು ನಿಲ್ಲಿಸುವ ಚಿತ್ರಕ ಶಕ್ತಿ, ಬದುಕಿನ ಹಲವು ಮಗ್ಗುಲುಗಳನ್ನು ಕಾಣಿಸುವ ಧ್ವನಿಪೂರ್ಣತೆ, ಭ್ರಾಮಕ ಅಂಶಗಳನ್ನೂ ನೈಜ ಅನುಭವವನ್ನಾಗಿ ಪರಿವರ್ತಿಸುವ ಪರಿಣತಿ, ಇವು ಲಕ್ಷ್ಮಣರ ಕತೆಗಳಲ್ಲಿ ಎದ್ದುಕಾಣುವ ಗುಣಗಳು. 

ಈ ಸಂಕಲನದ ಎಲ್ಲ ಕತೆಗಳನ್ನೂ ಒಟ್ಟಿಗೆ ಓದಿದಾಗ ನಮ್ಮನ್ನು ವಿಷಾದಭಾವವೊಂದು ಆವರಿಸಿಕೊಂಡಂತಾಗುತ್ತದೆ. ಅದು ಘನಘೋರ ವಾಸ್ತವದಿಂದಲೋ ಅಸಹಾಯಕತೆಯಿಂದಲೋ ಹುಟ್ಟಿದ ವಿಷಾದವಲ್ಲ. ಕನಸು ವಾಸ್ತವಗಳನ್ನು, ಪ್ರಯತ್ನ ವೈಫಲ್ಯಗಳನ್ನು ಪರಿಶೋಧಿಸಿದ ಫಲವಾಗಿ ಹುಟ್ಟಿದ ವಿಷಾದ. ಇದು ನಮ್ಮ ಶಾಸ್ತ್ರೀಯ ಸಂಗೀತದ ರಾಗವೊಂದು ಹೊಮ್ಮಿಸುವ ನೋವಿನಂತೆ ಸುಮಧುರವೂ ಆಗಿರುವುದಕ್ಕೆ ಕಾರಣ ಲಕ್ಷ್ಮಣರಲ್ಲಿರುವ ಕಲಾತ್ಮಕತೆ. ಅದಕ್ಕಾಗಿ ಅವರನ್ನು ಮನಃಪೂರ್ವಕ ಅಭಿನಂದಿಸುತ್ತೇನೆ. 

ಎಸ್. ದಿವಾಕರ್

Related Books