Article

ಓದುಗರನ್ನು ಸೆಳೆಯುವ ‘ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು’

ನಾನೊಬ್ಬ ಅಪ್ಪಟ ಸಾಮಾನ್ಯ ಓದುಗ. ಇಲ್ಲಿ ನಾ ಬರೆದುದೂ ನನ್ನ ಓದಿನ ಅನುಭವದ ಹೊಳಹುಗಳು ಮಾತ್ರ. ಹಾಗಾಗಿ ‘ವಿಮರ್ಶೆ' ಎಂಬ ಪ್ರೌಢ ಬಿಗಿಯಲ್ಲಿ ನನ್ನೀ ಬರಹವನ್ನ ಪರಿಭಾವಿಸಬಾರದಾಗಿ ನನ್ನ ವಿನಂತಿ.

ಬಹುಶಃ ಕಥೆ ಉಳಿದೆಲ್ಲ (ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ ಮುಂತಾದ) ಪ್ರಕಾರಗಳಿಗಿಂತಲೂ ಹೆಚ್ಚು ಜನಪ್ರಿಯ ಅಥವಾ ಹೆಚ್ಚು ಓದುಗ ಬಳಗವನ್ನು ಹೊಂದಿದ ಸಾಹಿತ್ಯ ಪ್ರಕಾರ. ನಾವು ಓದಿದ ಅಸಂಖ್ಯ ಕಥೆಗಳಲ್ಲಿ ಕೆಲವು ನಮ್ಮ ಮನಸ್ಸಿನ ಹಾಳೆಯಲ್ಲಿ ಎಷ್ಟು ಅಳಿಸಲು ಯತ್ನಿಸಿದರೂ ಅಳಿಯಲಾರದ ಹಚ್ಚೆಗಳಂತೆ ಉಳಿದುಬಿಟ್ಟಿರುತ್ತವೆ. ರಾಘವೇಂದ್ರ ಖಾಸನೀಸರ `ತಬ್ಬಲಿಗಳು', ಚಿತ್ತಾಲರ `ಕತೆಯಾದಳು ಹುಡುಗಿ', ಆನಂದರ `ನಾ ಕೊಂದ ಹುಡುಗಿ', ನಿರಂಜನರ `ಕೊನೆಯ ಗಿರಾಕಿ', ಹೀಗೇ ಹಚ್ಚೆಯಂತೆ ಹಸಿರಾಗಿ ಉಳಿದುಬಿಡಬಲ್ಲ ಬಹುತೇಕ ಕಥೆಗಳು ಈ `ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು' ಕಥಾಸಂಕಲನದಲ್ಲಿವೆ. ನನ್ನ ಈ ಮಾತನ್ನು ನಮ್ಮ ಪ್ರೌಢ ವಿಮರ್ಶಕ ವಲಯ ಹೇಗೆ ಸ್ವೀಕರಿಸುತ್ತದೋ ನನಗೆ ಗೊತ್ತಿಲ್ಲ. ಆದರೆ ಕಥೆಗಳನ್ನು ಓದಿಯಾದ ಮೇಲೆ ನನಗನ್ನಿಸಿದ್ದಂತೂ ಹೀಗೆಯೇ.

`ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು' ಕಥೆಯೇ ಕನ್ನಡ ಕಥಾಲೋಕದಲ್ಲಿ ವಿಭಿನ್ನ ರೀತಿಯ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂಥದೊಂದು ವಿಭಿನ್ನ ಒಳನೋಟದ ಕಥೆ ಕನ್ನಡದಲ್ಲಿ ಬಂದಿಲ್ಲ. (ಬಂದಿದ್ದರೆ ಗೊತ್ತಿದ್ದವರು ನನ್ನನ್ನು ತಿದ್ದಬಹುದು.)
ಒಬ್ಬ ಕಥೆಗಾರನನ್ನು ಎಲ್ಲ ಸಂದರ್ಭಗಳಲ್ಲೂ ಆ ಪ್ರದೇಶದ, ಈ ಪ್ರದೇಶದ, ಆ ವರ್ಗದ, ಈ ವರ್ಗದ ಲೇಖಕ, ಲೇಖಕಿ ಎಂಬ ಫ್ರೇಮಿನೊಳಗೆ ಫಿಕ್ಸ್ ಮಾಡಿಟ್ಟುಕೊಂಡೇ ಅವರ ಬರಹವನ್ನೋದುವುದ್ಯಾಕೋ ಸರಿಯಾದ ಕ್ರಮವಲ್ಲ. ಅಂಥ ಪೂರ್ವಾಗ್ರಹ ಓದಿಗೊಂದು ಮಿತಿಯಾಗಿ ಬಿಡಬಲ್ಲದು. ಕೃತಿಕಾರ ಕೃತಿಕಾರ ಅಷ್ಟೇ. ಈ ನಿಟ್ಟಿನಲ್ಲಿ ಯಾವ ಮಡಿ ಮೈಲಿಗೆಯ ಗೆರೆಯನ್ನೂ ಹಾಕಿಕೊಳ್ಳದೇ ತನಗನಿಸಿದ್ದನ್ನು, ತನಗೆ ಹೊಳೆದಿದ್ದನ್ನು ಒಲಿದಂತೆ ಹಾಡಿದ ಇಲ್ಲಿನ ಕಥನಗಳು ಅನನ್ಯ ಸಹಜ ಸೌಂದರ್ಯದಿಂದ ನಳನಳಿಸುತ್ತವೆ.
ಇಲ್ಲಿನ ಕಥೆಗಳು ಕಟ್ಟಿಕೊಂಡ ತಂತ್ರ, ತಂದು ಹೇರಿದ ಆದರ್ಶ, ಪ್ರತಿಪಾದಿಸಲೇಬೇಕೆಂಬ ಸಂಗತಿಗಳೆಲ್ಲವುಗಳಿಂದಲೂ ಮುಕ್ತವಾದ ನಿರಾಭರಣ ಸುಂದರಿಯರು. ಆದರೆ, ಪ್ರತಿ ಕಥೆಯನ್ನು ಓದಿದಾಗ ಪರಿಶುದ್ಧ ಮಾನವೀಯ ಅಂತಃಕರಣವೊಂದು ತಣ್ಣಗೆ ಮಿಡಿದು ಕಣ್ತುಂಬಿಸಿ ಬಿಡುತ್ತದೆ. ಒಂದೊಂದು ಕಥನಗಳಂತೂ ಅಪ್ಪಟ ಮಧುರ ಕಾವ್ಯಗಳೇ. ಹಾಗಂತ, ಅಲ್ಲಿ ಕಾವ್ಯವಾಗಿಸುವ ಯಾವ ಹೊರೆಯೂ ಇದ್ದ ಹಾಗೆ ಕಾಣುವುದಿಲ್ಲ. ಕಥನ ವಿಸ್ತಾರಕ್ಕೆ ಬೇಕಾದುದನ್ನು ಬೇಕಾದ ರೀತಿಯಲ್ಲಿ ಅಳೆದು ತೂಗಿ, ತೊಡಿಸಿ ಬಿಡುವ ಅಪೂರ್ವ ಪ್ರತಿಭೆ ಶಾಂತಿ ಕೆ. ಅಪ್ಪಣ್ಣ ಅವರದು. 

ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು - ಹೃದಯವೆಂಬ ಮಧುಪಾತ್ರೆ, ಇದು ನನ್ನ ಕಥೆ ಅಥವಾ … (ಬಹುತೇಕ ಎಲ್ಲ)ಕಥೆಗಳನ್ನು ಓದುತ್ತ ನಾನು ಅಕ್ಷರಶಃ ಹನಿಗಣ್ಣಾಗಿದ್ದೇನೆ. ಬಹುಶಃ ಒಂದು ಕಲಾಕೃತಿಯ ಸಾರ್ಥಕತೆ ಇದೇ ಅಲ್ಲವೇ ? ಅದು ಕರುಣ ರಸ ಪಾಕದ ರಸಾನುಭೂತಿ ಅಷ್ಟೇ.

• “ ಬದುಕು ಕ್ರೂರಿ ಅಷ್ಟೇ ಅಲ್ಲಾ ಅದು ಕರುಣಾಮಯಿ ಕೂಡ. ನಿಜ ಹೇಳಬೇಕೆಂದರೆ ಅದೊಂದು ಹುಚ್ಚು ಕುದುರೆ”

• “ಕಳೆದುಕೊಂಡ ಪ್ರೀತಿಗಿಂತಲೂ ತಿರಸ್ಕಾರದಿಂದಾದ ಅವಮಾನವೇ ಹೆಚ್ಚು ಘಾಸಿಗೊಳಿಸುತ್ತದೆ”

• “ನಾನು ಸುಖವಾಗಿದ್ದೇನೆಂದು ಸುಳ್ಳೇ ತೋರಿಸಿಕೊಂಡಾದರೂ ತಮ್ಮ ಅಹಂನ್ನು ಸಂತೃಪ್ತಿಗೊಳಿಸಿಕೊಳ್ಳುವ ಸಣ್ಣತನವೇಕೋ ಮನುಷ್ಯನಿಗೆ”

• “ ಈ ಬದುಕೆಂಬ ಮೋಹಕ್ಕೆ ಎಷ್ಟೊಂದು ಮುಖಗಳು"

• “ನನ್ನ ನವ ನಾಗರೀಕತೆಯೆಲ್ಲ ಅವಳ ಅನ್ಪಾಲಿಷ್ಡ್ ನಡಾವಳಿಯಲ್ಲಿ ಕರಗಿ ಕೊಚ್ಚಿ ಹೋಗುತ್ತಿದ್ದವು.”

ಓದುಗರನ್ನೊಂದು ಸಲ ಹಿಡಿದು ನಿಲ್ಲಿಸಿಬಿಡುವ, ಲೇಖಕರನ್ನು ಹುಚ್ಚೆಬ್ಬಿಸಿಬಿಡುವ ಇಂಥ ಅಸಂಖ್ಯ ಮಾತುಗಳಿಂದ ಇಲ್ಲಿನ ಕಥೆಗಳು ಪ್ರಬುದ್ಧವಾಗಿವೆ.

'ಸಂಗಾತ', ಕನ್ನಡ ಸಾಹಿತ್ಯ ವಲಯದಲ್ಲಿಂದು ವಿಶಿಷ್ಟ ಬಗೆಯಲ್ಲಿ ಗುರುತಿಸಿಕೊಂಡು ದಾಪುಗಾಲಿಡುತ್ತಿರುವ ಅನನ್ಯ ಸಾಹಿತ್ಯ ಪತ್ರಿಕೆ. ಆ ಪ್ರಕಾಶನದಲ್ಲಿ ಪ್ರಕಟಗೊಂಡ ಪುಸ್ತಕವಿದು ಎಂಬ ಹೆಗ್ಗಳಿಕೆಗೆ ಒಂದೇ ಒಂಚೂರು ಕಿರಿ ಕಿರಿ ಎನಿಸುವಂತೆ ಅಲ್ಲಲ್ಲಿ ಮುದ್ರಣ ದೋಷಗಳು ಉಳಿದುಕೊಂಡಿವೆ. ಮುಂದಣ ಪ್ರಕಟಣೆಗಳಲ್ಲಿ ಆ ಕುರಿತು ಎಚ್ಚರವಹಿಸುವುದೊಳಿತು ಎಂಬುದು ನನ್ನ ವಿನಮ್ರ ತಿಳಿವಳಿಕೆ. ಸ್ವಯಂ ಒಬ್ಬ ಸಂವೇದನಾಶೀಲ ಬರಹಗಾರ ಮಿತ್ರ ಟಿ. ಎಸ್. ಗೊರವರ್ ಅವರು ಅನ್ಯಥಾ ಭಾವಿಸದೇ ನನ್ನ ಮಾತೊಳಗಿನ ಪ್ರಾಮಾಣಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತಾರೆಂಬ ಭರವಸೆ ನನಗಿದೆ.
ಇನ್ನುಳಿದಂತೆ ‘ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು’ ಪುಸ್ತಕ ಒಂದು ಅದ್ಭುತ ಕೃತಿ. ಇಂಥದೊಂದು ವಿಶಿಷ್ಟ ಕೃತಿಯನ್ನು ಕನ್ನಡ ಕಥಾಲೋಕಕ್ಕೆ ಕೊಟ್ಟ ಲೇಖಕಿ ಶಾಂತಿ ಅವರನ್ನೂ ಪ್ರಕಾಶಕರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕೊಂಡು ಓದಿ ಆ ನಿಮ್ಮ ಓದಿನ ಸುಖವ ಹಿಗ್ಗಿಸಿಕೊಳ್ಳಿರೆಂದು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಗ್ರಹಿಸುತ್ತೇನೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರುತಿ ದಾಸಣ್ಣವರ