Article

ಓದುಗರೂ 'ಗುಣಮುಖ'ರಾಗಬಹುದು

ನಾಟಕವನ್ನು ಎರಡು ವಿಧವಾಗಿ ಓದಬಹುದು. ಒಂದು ನೈಜದಂತೆ ಕಲ್ಪಿಸಿಕೊಂಡು, ಕಾದಂಬರಿಯ ಪಾತ್ರದಾರಿಗಳನ್ನು ಸೃಷ್ಟಿಸಿಕೊಂಡು ಓದುವುದು. ಇನ್ನೊಂದು ತೆರೆಯೆಳೆಯುವ ವೇದಿಕೆಯಲ್ಲಿ ಕಲಾವಿದ ಉಸುರುವ ಡೈಲಾಗುಗಳನ್ನು ಚಿತ್ರಿಸಿಕೊಂಡು ಓದುವುದು. ನನಗೆ ಒಲಿದದ್ದು ಎರಡನೇ ವಿಧಾನ. ಅದು ನಾಟಕದ ಓದನ್ನು ಪರಿಪೂರ್ಣಗೊಳಿಸದು ಎಂದು ತಿಳಿದೂ ನಾನು ನೈಜ ಕಥೆಯೊಳಗೆ ನುಗ್ಗಲು ಪ್ರಯತ್ನಿಸಿ ಭ್ರಮನಿರಸನಗೊಳ್ಳುತ್ತೇನೆ. ನಾನು ಓದಿದ ಕಾರ್ನಾಡರ ನಾಟಕಗಳಲ್ಲಿ 'ಟಿಪ್ಪು ಸುಲ್ತಾನ್ ಕಂಡ ಕನಸು' ಮಾತ್ರ ಕಥೆಯಂತೆ ಓದಲಾಗಿದೆ. ಅದೊಂದು ಪೂರ್ವಾಗ್ರಹವೋ ಗೊತ್ತಿಲ್ಲ, ತೆರೆಯೆಳೆದು ಆಡಿ ತೋರಿಸುವ ಪಾತ್ರ ಧಾರಿಗಳಂತೆ ಮಾತ್ರ ನಾಟಕಗಳು ಆಕರ್ಷಿಸುತ್ತವೆ. ಇದಕ್ಕೂ ಒಂದು ಹಿನ್ನಲೆ ಇದೆ. ಉಶಾ ಕಟ್ಟೆಮನೆ ಯವರು ಬರೆದ "ಸಲಾಂ ತಕ್ಹೋ ಕಡಲೂರ ದೊರೆಯೇ" ಎಂಬ ನಾಟಕದ ಓದು ಮಂಗಳೂರಿನಲ್ಲಿದ್ದಾಗ ಹೋಗಿದ್ದೆ. ಆವರೆಗೂ ಕಥೆಯಾಗಿ ಆಸ್ವಾದಿಸುತ್ತಿದ್ದ ನಾಟಕ ಪಾತ್ರ ಧಾರಿಗಳ ನಟನಾ ಕೌಶಲ್ಯತೆಯ ಬಗ್ಗೆ, ಅದನ್ನು ಹೇಗೆ ದುಡಿಸಿಕೊಳ್ಳಬಹುದೆಂಬ ಪ್ರಶ್ನೆಯಲ್ಲಿ ಕಳೆದು ಹೋಗುತ್ತೇನೆ.

ನಾಟಕ ಕೂಡಾ ಒಂದು ಸಂವಹನ ಮಾಧ್ಯಮ. ಅದರಲ್ಲಿ ಬರುವ ಪಾತ್ರಧಾರಿಗಳ ಮಾತಿನ ಮೂಲಕ ಲೇಖಕರು ಪ್ರಸ್ತುತ ವಿದ್ಯಾಮಾನದ ಅಣಕಗಳನ್ನು ಪ್ರದರ್ಶಿಸಲು ಯಶಸ್ವಿಯಾಗುತ್ತಾರೆ. ಇಲ್ಲೊಬ್ಬ "ನಾದಿರ್ ಶಾ" ಆಡಳಿತದ ಸರ್ವಾಧಿಕಾರ, ಸಂಶಯಗಳು ಮನುಷ್ಯ ಮನಸ್ಸನ್ನು ಪ್ರಕ್ಷುಬ್ಧಗೊಳಿಸುವುದಕ್ಕೆ ಇರಿಸಿದಂತಹ ರೂಪಕ. ಅದೊಂದು ಮನೋರೋಗವೆಂದು ತಿಳಿ ಹೇಳುವ ಅಲಾವಿಕಾ ಖಾನ್. ಒಬ್ಬ ಸಂತನಂತೆ, ಸಮಕಾಲೀನ ಮನುಷ್ಯರ ತುಮುಲಗಳನ್ನು ಎಳೆಎಳೆಯಾಗಿ ಚಿತ್ರಿಸಿಟ್ಟು ಮನಶ್ಶಾಂತಿಯನ್ನು ಕಟ್ಟಿಕೊಡಬಲ್ಲ ಮಾಯಾವಿ ಪಾತ್ರ. ನಾನು ಕಂಡಂತೆ ಲಂಕೇಶ್ ಒಬ್ಬರು "ಸೈಕಾಲಾಜಿಕಲ್ ರೈಟರ್". ಅವರ ಕಥೆಗಳು ಮನುಷ್ಯ ಮನಸ್ಸಿನಲ್ಲುಂಟಾಗುವ ತಲ್ಲಣಗಳ ಬಗೆಗಿನ ಕನ್ನಡಿ. ತೇಜಸ್ವಿಯವರ 'ಕಾಡು ಮತ್ತು ಕೌರ್ಯ' ಕಥೆಗಳಲ್ಲೂ ಇಂತಹದ್ದೇ ಛಾಪು ಇದೆ. ತನ್ನೊಳಗೆ ಬರುವ ವಿಚಿತ್ರ ಚಿಂತನೆಗಳು, ಆಲೋಚನೆಗಳು ಕಥೆಯಾಗಬಲ್ಲದೆಂದು ಲಂಕೇಶ್ ತೋರಿಸಿಕೊಡುತ್ತಾರೆ. ಅವರ "ಕೆರೆಯ ನೀರನ್ನು ಕೆರೆಗೆಚೆಲ್ಲಿ" ಕಥಾಗುಚ್ಛದಲ್ಲಿ ಎಲ್ಲಾ ಕಥೆಗಳು ಮನುಷ್ಯ ಮನಸ್ಸಿನ ಆಸೆ, ಈರ್ಷ್ಯೆ,ಪ್ರೇಮಗಳ ಚಾದರ.  ನಾಟಕದಲ್ಲಿ ಬರುವ ಅದೆಷ್ಟೋ ಮಾತುಗಳು ಸಾರ್ವಕಾಲಿಕ ಸಂದೇಶಗಳು. "ಹಿಂದೂಸ್ಥಾನದಲ್ಲಿ ಸುಳ್ಳರು, ಕಳ್ಳರು, ಕಟುಕರು ತುಂಬಿ ಹೋಗಿದ್ದಾರೆ" ಎನ್ನುವಂಥಹ ಮಾತುಗಳು, "ಹಿಂದೂಸ್ಥಾನಕ್ಕೆ ಬಂದ ಬಂದ ಚಿಕ್ಕ ಪ್ರಶ್ನೆಗಳೂ ಇಲ್ಲಿಯ ಪರ್ವತದಂತೆ, ನದಿಗಳಂತೆ ಕಡೆಗೆ ಮಂಜಿನಂತೆ ಆಗಿ ಪ್ರಶ್ನೇಯೇ ಇಲ್ಲ ಅನ್ನಿಸಿಬಿಡುತ್ತದೆ. ಸುಳ್ಳು ನಿಜದಂತೆ, ನಿಜ ಸುಳ್ಳಿನಂತಾಗುತ್ತದೆ" ಎಂಬ ಮಾತ್ರಿಕ ಸಾಲುಗಳು ವಾಸ್ತವಕ್ಕೆ ತಳ್ಳುತ್ತದೆ. ನಾದಿರ್ ನಿಜಕ್ಕೂ ಹುಚ್ಚನಾಗಿದ್ದಾನಾ? ಹುಚ್ಚನಾದವನು ಪ್ರಬುದ್ಧನಾಗಿ ಮಾತನಾಡಬಲ್ಲನೇ? ಎಂಬಷ್ಟು ಆಳಕ್ಕೆ ಕೊಂಡೊಯ್ಯುತ್ತದೆ. ನೇಪಥ್ಯದಲ್ಲಿದ್ದ ಈ ಬಿಡಿ ಚರಿತ್ರೆಯೊಂದು ನಾಟಕವಾದುದೇ ಲಂಕೇಶರ ಸೋಪಜ್ಞತೆ. ವಯೋವೃದ್ಧನಾದ ಹಕೀಮನೆಂಬ ಸೂಫಿಗೆ ಸಾಧ್ಯವೆಂದು ತಿಳಿಹೇಳುವ ಈ ಕಥೆ ನಮ್ಮೊಳಗೂ ಬದಲಾವಣೆ ತರುವಷ್ಟು ಬಲಶಾಲಿ. ನಾದಿರ್ ಶಾ "ಗುಣಮುಖ"ನಾಗುವ ಈ ಸಣ್ಣ ಕಥೆಯಲ್ಲಿ ಓದುಗರೂ ಗುಣಮುಖರಾಬಹುದು.

ಮುನವ್ವರ್ ಜೋಗಿಬೆಟ್ಟು