Article

ಪರ್ವತದಲ್ಲಿ ಪವಾಡ

ತೇಜಸ್ವಿಯವರ 'ಮಹಾ ಪಲಾಯನ' ದ ಬಳಿಕ ನಾನು ಉಸಿರು ಬಿಗಿಹಿಡಿದು ಕುತೂಹಲಿಗನಾಗಿ ಓದಿದ ಮತ್ತೊಂದು ಪುಸ್ತಕವಿದು. ಎರಡೂ ಪುಸ್ತಕಗಳನ್ನು ಮಧ್ಯ ರಾತ್ರಿಯ ನೀರವ ಮೌನದಲ್ಲಿ ಓದಿ ಮುಗಿಸುತ್ತಾ ನನಗೆ ನಾನೇ ಕಳೆದು ಹೋಗಿದ್ದೆ. ಆಂಡೀಸ್ ಪರ್ವತ ಶ್ರೇಣಿಗಳೆಂದರೆ ನನಗೆ ಸಮಾಜ ವಿಜ್ಞಾನದ ಭೂಗೋಳ ಶಾಸ್ತ್ರದಲ್ಲಿ ಹೇಳಿದ್ದ ಪರ್ವತವೊಂದರ‌ ಹೆಸರು ಮಾತ್ರವಾಗಿತ್ತು. ಬಳಿಕ ಎಲ್ಡುರಾಡೋ, ಅಮೇಜಾನ್ ನದಿಯ ಉಗಮ ಸ್ಥಾನಗಳಂತಹ ಅಭೇದ್ಯ  ತಾಣಗಳ ತಾಯಿಯೆಂದು ತಿಳಿಯಿತು. ಆಗಲೂ, ನನ್ನ ಮಟ್ಟಿಗೆ ಅದೊಂದು ಉದ್ದವಾದ ಸಾಧರಣಗ ಪರ್ವತಗಳ ಶ್ರೇಣಿ, ಕಡಿದಾದ ಕಣಿವೆಗಳಾಗಿ ಮಾತ್ರ ಚಿತ್ರಿತವಾಗಿತ್ತು. ಹಿಮ ಗಡ್ಡೆಗಳಂತಹ ಅತಿ ಕಠಿಣ ವಾತವರಣದ ಊಹೆ ಕೂಡಾ ನನಗಿರಲಿಲ್ಲ. ಕಾದಂಬರಿ ಓದುತ್ತಿದ್ದಂತೆಯೇ ನನ್ನೊಳಗೆ ತಣ್ಣಗಿನ ಅನುಭವವಾಗುತ್ತಿತ್ತು. ಅಕ್ಕನ ಮನೆಯ ಪಡಸಾಲೆಯಲ್ಲಿ ಕುಳಿತು ಕಬ್ಬಿಣದ ಕುರ್ಚಿಗೆ ಅಂಟಿ ಓದುತ್ತಲಿದ್ದೆ. ಪಶ್ಚಿಮ ಘಟ್ಟದ ತಪ್ಪಲಿಗೆ ಹತ್ತಿರವಿದ್ದದ್ದರಿಂದಲೇ ತಣ್ಣಗಿನ ಗಾಳಿ ಬೀಸುತ್ತಿತ್ತು. ಕಾಲುಗಳ ಚಳಿಯಿಂದ ಮರಗಟ್ಟುತ್ತಿತ್ತು. ವಾತವರಣ ಅಷ್ಟು ಶೀತವೇನೂ ಇರಲಿಲ್ಲವಾದರೂ ನನ್ನೊಳಗೊಂದು ಆಂಡೀಸ್ ರೂಪುಗೊಳ್ಳುತ್ತಿತ್ತು. ಪುಸ್ತಕ ಅಷ್ಟೂ ಕುತೂಹಲ ಮೂಡಿಸಿತ್ತು. 

1972ರಲ್ಲಿ ಆಂಡಿಸ್ ಪರ್ವತ ಪ್ರದೇಶದಲ್ಲಿ ಒಂದು ವಿಮಾನ ಪತನವಾದಾಗಿನಿಂದ ಆರಂಭವಾಗುವ ಕಥೆ ; ಕಥೆಗಾರನ ಆ ಬದುಕುವ ಛಲ ಮನುಷ್ಯನ ಆತ್ಮ ವಿಶ್ವಾಸದ ಗಟ್ಟಿತನಕ್ಕೆ ಸ್ಪೂರ್ತಿದಾಯಕ. ಆತ್ಮಹತ್ಯೆಯ ಪ್ರಯತ್ನದಲ್ಲಿರುವ ಯಾವನೇ ಒಬ್ಬ ವ್ಯಕ್ತಿಯನ್ನು ಬದುಕಿಗೆ ಮರಳಿಸಲು ಇದೇ ಪುಸ್ತಕವನ್ನು ಶಿಫಾರಸ್ಸು ಮಾಡಬಲ್ಲೆ. ಶೀತ ಗಾಳಿ ಮಾತ್ರವಲ್ಲ, ರೆಫ್ರಿಜರೇಟರ್ನ ತಂಪನ್ನೂ ಸಹಿಸದ ನಮ್ಮಂತವರಿಗೆ ಮಂಜಿನ ದಪ್ಪ ಪದರಗಳ ಬಗ್ಗೆ , ಅದರ ಕಷ್ಟದ ಬಗ್ಗೆ ಏನೇನೂ ಅನುಭವಕ್ಕೆ ಬಾರದು. ಕೆಲವರು ಸಿನಿಕತನವೆಂದು ಜರೆದು ಬಿಡುವಷ್ಟು ಕ್ರೂರವಾದ ಓದುಗನಾಗಿ ಬಿಡಬಹುದು ಯಾ ಕಟ್ಟು ಕಥೆ ಸುಂದರವಾಗಿದೆ ಎಂದೂ ಹೇಳುವಷ್ಟು ನಿಷ್ಠೂರನಾಗಬಹುದು. ಅಷ್ಟಕ್ಕೆ ಮಾತ್ರ ಕಲ್ಪಿಸಿಕೊಳ್ಳಬಲ್ಲ ಕಥೆಯೊಂದು ನಿಜ ಜೀವನದಲ್ಲಿ ಅನುಭವ ಪಡೆದವನಾಗಿ ಬದುಕುವುದೆಂದರೆ ಬಹಳ ಛಲಗಾರನಾಗಿಯೇ ಇರಬೇಕು. 

ದಟ್ಟ ಮಂಜಿನಲ್ಲಿ ಪೂರ್ವ ಸಿದ್ಧತೆಯಿಲ್ಲದೆ ಏಕಾ ಏಕಿ ಅಪ್ಪಳಿಸಿದ ವಿಮಾನದಿಂದ ಬದುಕುಳಿದವರು ಸಾವನ್ನು ಗೆಲ್ಲುವ ಅದ್ಭುತ ಸತ್ಯ ಘಟನೆಯೇ ಈ ಪುಸ್ತಕ‌. " ನ್ಯಾಂಡೋ ಪೆರಾಡೋ" ಸಾವಿನೊಂದಿಗೆ ಹೋರಾಡುವ ಸಾಮಾನ್ಯ ಮನುಷ್ಯನ ಹೋರಾಟ ವರ್ಣಿಸಲಸದಳ. ಅಷ್ಟೂ ಜನರಲ್ಲಿ ಬಹುಪಾಲು ಜನರನ್ನು ಕಳೆದುಕೊಂಡೂ ಗೆಲ್ಲುವ ಛಾತಿಯನ್ನು ಬಿಟ್ಟು ಕೊಡದೆ, 72 ದಿನಗಳ ಕಾಲ ಬದುಕುಳಿದು ಇತರರನ್ನು ರಕ್ಷಿಸಲು ಯಶಸ್ವಿಯಾಗುತ್ತಾನೆಂದರೆ ಆತನಿಗಿದ್ದ ಗುರಿಯೇ ಕಂದೀಲಾಗುವುದು.  ಹೊಟ್ಟೆಗೇನೂ ತಿನ್ನದೆ ಬದುಕಲಾಗದು ಎಂಬ ಸತ್ಯ ಮನವರಿಕೆಯಾದಾಗ, ತಮ್ಮೊಂದಿಗೆ ಸತ್ತು ಹೋದವರ ಹಸಿ ಮಾಂಸ ತಿನ್ನುವಷ್ಟರ ಮಟ್ಟಿಗೆ ಹಸಿವಿನ ಕಠಿಣತೆ ಕಣ್ಣು ಒದ್ದೆ ಮಾಡದೆ ಬಿಡುವುದಿಲ್ಲ. ಬಿಸಿಲ ಶಾಖಕ್ಕೆ ಹಪಹಪಿಸುವ ರಗ್ಬೀ ತಂಡ ಅಪಘಾತದಲ್ಲಿ ಬದುಕುಳಿದು ಬದುಕಿನೊಂದಿಗೆ ಆಡುವ ಆಟ ಎದೆ ಝಲ್ಲೆನಿಸುವಂತದ್ದು. ಸತತವಾಗಿ ಜೊತೆಗಾರರನ್ನು ಕೊಂದು ಮುಗಿಸುವ ಹಿಮ ಪಾತ, ರೋಗಗಳು ಧೃತಿಗೆಡದಂತೆ ಮೂರಕ್ಕೂ ಹೆಚ್ಚು ತಿಂಗಳು ಬದುಕುಳಿಯುವ ಮನುಷ್ಯ ಮನಸ್ಸಿನ ಗಾಢತೆಗೆ ಬೆಳಕು ಚೆಲ್ಲುವಂತದ್ದು. ಎಂತಹ ಕಠಿಣ ಕಠೋರ ಗಳಿಗೆಯನ್ನು ಜಯಿಸಬಲ್ಲದೆಂಬ ವಿಶ್ವಾಸ ರೋಬಾರ್ಟೋ, ಟಿನ್ ಟಿನ್ ,‌ಪೆರಾಡೋಗಿಲ್ಲದಿದ್ದರೆ, ಅಷ್ಟೂ ಜನ ಹಿಮದಲ್ಲಿ ಸಮಾಧಿಯಾಗಿ ಹೋಗುತ್ತಿದ್ದರು. ಅವರೂ ಅಷ್ಟೂ ದಿನ ಬದುಕಿದ ಬದುಕಿಗೆ ಅರ್ಥ ಹೇಳಲಾಗದೆ, ಅಕ್ಷರಕ್ಕಿಳಿಸಲಾಗದೆ ನಮೆಗೆಲ್ಲಾ ಸಾಧಾರಣ ಅಪಘಾತದಂತೆ ಭಾಸವಾಗಿ ಬಿಡುತ್ತಿತ್ತು. ನೀರಿಲ್ಲದಾಗ ಹಿಮದ ತುಂಡುಗಳನ್ನು ಹೀರಿ ಕುಡಿಯುವವರ ಬಾಯಾರಿಕೆ ನಮಗೆ ಹೇಳತೀರದು. ಮಲಗಲು, ಕುಳಿತುಕೊಳ್ಳಲು ಕಷ್ಟಪಡುವ ಅದಕ್ಕೂ ಮೀರಿ ರಕ್ತ ಪರಿಚಲನೆ , ಹೃದಯ ಬಡಿತವನ್ನೂ ಸಮತೋಲನದಲ್ಲಿಡಲು ಹೆಣಗುವ ಅವರ ಜರ್ಜರಿತ ಬದುಕಿಗೂ ಅವರು ಸವಾಲೊಡ್ಡಿದ್ದು ಪವಾಡವೇ ಸರಿ. ಮತ್ತೆ ಮತ್ತೆ ಸಾಯುವವರನ್ನು ಕಂಡು ಹಿಮ್ಮೆಟ್ಟದೆ ಹಿಮೋಚ್ಛಾದಿತ ಪರ್ವತಗಳ ಕಡಿದಾದ ಪರ್ವತದ ಕಣಿವೆಗಳಲ್ಲಿ ಸಾಗಿ ಯಶಸ್ಸಿನ ಗುರಿ ಮುಟ್ಟುವುದರ ಪಡಿಪಾಟಲು ಹೇಳತೀರದು. ರಾಬರ್ಟೋ‌ ಜೊತೆ ಹೊರಟ ಪಯಣದಲ್ಲಿ ಟಿನ್ ಟಿನ್ ನ್ನು ಹಿಂದೆ ಕಳಿಸುವ ದಾರುಣ ವಿರಹ ಎಂಥ ಗಟ್ಟಿಗನ ಹೃದಯವನ್ನೂ ಕಲಕುವಂಥದ್ದು. 

ಶಾಖಕ್ಕಾಗಿ ಬೆಂಕಿ ಉರಿಸಲು ಹಣವನ್ನು ಉರುವಲಾಗಿ ಬಳಸಿಕೊಳ್ಳುವಾಗ ಹಣದ ಅಪಮೌಲ್ಯತೆಯ ಅರಿವಾಗುತ್ತದೆ. ಮೃತ್ಯು ಬಾಗಿಲಲ್ಲಿ ನಿಂತು ಸಾವಿನ ವಿರುದ್ಧ ಹೊರಾಡುವವರ ಅಚಲ ನಿರ್ಧಾರ ಆತ್ಮವಿಶ್ವಾಸವನ್ನು ಇಂಚಿಂಚಾಗಿ ಹೆಚ್ಚಿಸುತ್ತಲೇ ಹೋಗುತ್ತದೆ. ಪ್ರೀತಿಯಿಂದ ಜಗತ್ತು ಗೆಲ್ಲಬಹುದೆಂಬ ಪಾಠ‌ ಮತ್ತೆ ಮತ್ತೆ ಹೇಳಿಕೊಳ್ಳುತ್ತಾ ಸಾಗುವ ಪೆರಾಡೋ ತಾತ್ವಿಕ‌‌ ಉಪದೇಶದ ಮೂಲಕ ಸಂತನಂತೆ ಕಾಣುತ್ತಾನೆ. "ಪೆರಾಡೋ ಬದುಕುತ್ತಾನೋ, ಅರ್ಧ ದಾರಿಯಲ್ಲೇ ಸಾಯುತ್ತಾನೋ?" ಎಂಬ ಕುತೂಹಲ ಕ್ಷಣ ಕ್ಷಣಕ್ಕು ವಕ್ಕರಿಸುತ್ತಿರುತ್ತದೆ. ಹಾಗೆನಿಸಿಕೊಂಡಾಗಲೆಲ್ಲಾ ನಾನು ಮತ್ತೂ ಪುಸ್ತಕ ಬರೆದವನೂ ಅವನೇ ಅಲ್ಲವೇ, ಎಂದು ಧೃಡ ಪಡಿಸುತ್ತಾ ಓದಿಕೊಳ್ಳುವಂತೆ ಮಾಡುತ್ತಲೇ ಇತ್ತು. ಮನದೊಳಗೆ ಲೈವ್ ಕಾಣುತ್ತಿದ್ದಂತೆ " ದೇವರೇ ಅವರನ್ನು ಮೃತ್ಯು ಕೂಪದಿಂದ ಕಾಪಾಡು" ಅನ್ನುವಂತೆ ಪ್ರಾರ್ಥಿಸುತ್ತಲೇ ಇರುತ್ತದೆ.ಇಂತಹ ಸತ್ಯ ಘಟನೆ ಆಂಗ್ಲ ಬಾಷೆಯಿಂದ ಬಾಷಾಂತರಿಸುವುದಷ್ಟು ಸುಲಭವಲ್ಲ. ತದ್ವತ್ತಾಗಿ ಸತ್ಯ ಘಟನೆಯಂತೆ ಹಣೆಯುವುದು ಕಲೆ. ಅವೆಲ್ಲಾ ಕಷ್ಟಗಳನ್ನು ಮೀರಿ ಸಂಯುಕ್ತಾ ಪುಲಿಗಲ್ ಯಶಸ್ವಿಯಾಗುತ್ತಾರೆ. ಯಾವುದೋ ಒಂದು ಕಡೆ ಇಬ್ಬರು ಹೆಂಗಸರು ಬದುಕಿರುವಂತೆ, ಒಬ್ಬರೇ ಮಹಿಳೆ ಬದುಕಿರುವಳು ಎಂದು "ಲಿಲಿಯಾನಳ" ಹೆಸರನ್ನು ಸೂಚಿಸುವಾಗ ಸ್ವಲ್ಪ ಇರಿಸು ಮುರಿಸಾಗುತ್ತದೆ. ಮೂಲ ಬಾಷೆಯ ಕಾದಂಬರಿಯೇ ಅಲ್ಲದಷ್ಟು ಆಳವಾಗಿ ಸ್ವಂತ ಅನುಭವವೆನ್ನುವಷ್ಟು ಸುಂದರವಾಗಿ ಕೃತಿ ರೂಪುಗೊಂಡಿದೆ. ಕನ್ನಡದ ಮೊದಲ ಓದುಗರಿಗೆ ಅತ್ಯುತ್ತಮ ಪುಸ್ತಕ. ಕುತೂಹಲದ ಜಾಡು, ಓದಿನಲ್ಲಿ ಆಳವಾದ ಜ್ಞಾನವನ್ನು ವಿಸ್ತರಿಸುವಂತಾದೀತು. ಲೇಖಕಿಯ ಪರಿಚಯದಲ್ಲಿ ಇನ್ನೂ ಸ್ವಾರಸ್ಯಕರವಾದ ವಿಚಾರವೇನೆಂದರೆ, ಏಳನೇ ತರಗತಿ ವರೆಗೂ ಅವರು ಕಲಿತಿದ್ದು ಕನ್ನಡ ಮಾಧ್ಯಮ!.

ಬಹುಶಃ ಇಂಗ್ಲೀಷ್ ಎಂಬ ಆಂಡೀಸನ್ನು ಹತ್ತಿ ಅವರು ದಿಗ್ವಿಜಯದ ಪತಾಕೆ ನೆಟ್ಟವರು. ಆಂಗ್ಲ ಬಾಷೆ ಕಬ್ಬಿಣವೆಂದೂ, ಅದಿಲ್ಲದೆ ಜಗತ್ತನೇ ಗೆಲ್ಲಲಾಗದೆಂದು ಪರಿಭಾವಿಸಿ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಕಲಿಯಲು ಬಿಡುವವರಿಗೆ ಸ್ಪಷ್ಟ ಉತ್ತರವಾಗುತ್ತದೆ. ಕಾದಂಬರಿಯ ಮೊದಲಲ್ಲಿ ನ್ಯಾಂಡೋರೇ ಹರಸಿ ಬರೆದ ಬರಹ ಲೇಖಕಿ ಯಶಸ್ವಿ ಅನುವಾದಕ್ಕಿರಿಸಿದ ಕಿರೀಟವೆಂಬುವುದು ಸುಳ್ಳಲ್ಲ.‌ ನ್ಯಾಂಡೋರಿಗೆ ಕನ್ನಡ ಬರುತ್ತಿದ್ದರೆ, 'ತನ್ನನ್ನೇ ಮರೆತು ತನ್ನದೇ ಕಾದಂಬರಿಯನ್ನು ಅದೆಷ್ಟು ಬಾರಿ ಓದುತ್ತಿದ್ದರೋ...'

ಮುನವ್ವರ್ ಜೋಗಿಬೆಟ್ಟು