Article

ಪಟೇಲರ ಹುಚ್ಚು ಮತ್ತು ಪತ್ರಕರ್ತ ಕೆ.ಎನ್.ರೆಡ್ಡಿ

ಮನುಷ್ಯ ತುಂಬ ಭಾವುಕ ಜೀವಿ. ಅವನ ತಿಕ್ಕಲುಗಳೂ ಅಷ್ಟೇ ವಿಚಿತ್ರ. ಸಾತ್ವಿಕ ಮನಸು ಒಳ್ಳೆಯದನ್ನು ಕಂಡಾಗ ತೀವ್ರವಾಗಿ ಸ್ಪಂದಿಸಿ ಹೊಸ ಸಾಹಸಕ್ಕೆ ಕೈ ಹಾಕುತ್ತದೆ.‌ ಕರ್ನಾಟಕ ಕಾಲೇಜಿನ ಗೆಳೆಯ ರಾಯಚೂರು ಜಿಲ್ಲೆಯ ಕಲ್ಲೂರಿನ ಕ್ಯಾದಿಗೇರಿ ನಾಗಿರೆಡ್ಡಿ ಉರ್ಫ್ ‘ಕೆ.ಎನ್.ರೆಡ್ಡಿ’ ಹೆಸರಾಂತ ಇಂಗ್ಲಿಷ್ ಪತ್ರಕರ್ತ.

ಸರಿಸುಮಾರು ಎರಡುವರೆ ದಶಕ ಬೆಂಗಳೂರಿನಲ್ಲಿದ್ದು ರಾಜಕೀಯ ವರದಿಗಾರನಾಗಿ ಹೆಸರು ವಾಸಿ ಪತ್ರಿಕೆಗಳಲ್ಲಿ ಕೆಲಸ ಮಾಡಿ ಸದ್ಯ ಕಲಬುರ್ಗಿಯಲ್ಲಿ Deccan Chronicle ಪತ್ರಿಕೆಯಲ್ಲಿ ಉಳಿದಿದ್ದಾರೆ. ವಿಧಾನ ಸಭಾ ಕಲಾಪ ಆಗು ಹೋಗುಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಅನೇಕ ಘಟಾನುಘಟಿಗಳ ಮಾತಿಗೆ ಸಾಕ್ಷಿಯಾಗಿದ್ದಾರೆ. ಅವರಿಗೆ ವಿಪರೀತ ಹುಚ್ಚು ಹಿಡಿಸಿದ ಜೆ.ಎಚ್. ಪಟೇಲ್ ಅವರ ಬದುಕಿನ ಘಟನೆಗಳ ಪುಸ್ತಕ ಮತ್ತು ವಿಡಿಯೋ ಸಾಕ್ಷ್ಯಚಿತ್ರಗಳ ಮೂಲಕ ಪಟೇಲರ ಬದುಕನ್ನು ದಾಖಲಿಸುವ ಉನ್ಮಾದ ಹುಚ್ಚಾಗಿದ್ದು ಅಷ್ಟೇ ಸಹಜ.

ಪಟೇಲರ ವ್ಯಕ್ತಿತ್ವವೇ ಅಂತಹದು. ಅವರು ಮುಖ್ಯ ಮಂತ್ರಿಯಾಗದಿದ್ದರೆ…

ಅವರ ವೈಯಕ್ತಿಕ ಮತ್ತು ರಾಜಕೀಯ ಇಚ್ಛಾಶಕ್ತಿಯ ಸಾಮರ್ಥ್ಯ ಜನ ಸಾಮಾನ್ಯರಿಗೆ ಗೊತ್ತಾಗುತ್ತಿರಲಿಲ್ಲ. ಅವರಷ್ಟು ವಿನೋದ ಪ್ರಜ್ಞೆಯ ರಾಜಕಾರಣಿ ಇಡೀ ದೇಶದಲ್ಲಿ ಇನ್ನೊಬ್ಬ ಹುಟ್ಟಿಲ್ಲ. ಹುಟ್ಟುವುದು ಕಷ್ಟ ಕೂಡ. ವಿಧಾನ ಸಭಾ ಕಲಾಪಗಳಲ್ಲಿ ಪಟೇಲರ ರಿಪ್ಲೈ ಇದೆ ಎಂದು ಗೊತ್ತಾದ ಕೂಡಲೇ ಸದನದಲ್ಲಿ ಮೈಯಲ್ಲ ಕಿವಿ. ಹಾಸ್ಯ,ವ್ಯಂಗ್ಯ, ವಿನೋದ, ಆಳವಾದ ವೈಜ್ಞಾನಿಕ ವಿವರಣೆ, ಕರಾರುವಾಕ್ಕಾದ ಅಂಕಿ ಅಂಶಗಳು, ಎದುರಾಳಿಗಳನ್ನು ಕೇವಲ ತಮ್ಮ ಹಾಸ್ಯ ಪ್ರಜ್ಞೆಯಿಂದ ಬಗ್ಗು ಬಡಿಯುವ ಛಾತಿ ಮತ್ಯಾವ‌ ರಾಜಕಾರಣಿಗಳಿಗೆ ಇರಲಿಲ್ಲ. 1994 - 1999 ರ ಸಾಲಿನ ಕಾಲವನ್ನು ರಾಜ್ಯ ರಾಜಕಾರಣದ ಸುವರ್ಣ ಯುಗ ಎಂದು ಭಾವಿಸಬಹುದು. ಅದರಲ್ಲೂ ವಿಶೇಷವಾಗಿ ತರೇ ವಾರಿ ಮಾತುಗಾರರ ದೊಡ್ಡ ತಂಡವೇ ಅಲ್ಲಿತ್ತು‌. ಆಗಿನ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಕೂಡ ಅಷ್ಟೇ ಪರಿಣಾಮಕಾರಿ ಮಾತುಗಾರ. ನಜೀರ್ ಸಾಬ್, ಎಂ.ಪಿ.ಪ್ರಕಾಶ್, ನಂಜೇಗೌಡ, ವಾಟಾಳ ನಾಗರಾಜ, ಮಲ್ಲಿಕಾರ್ಜುನ ಖರ್ಗೆ, ಡಿ‌. ಬಿ. ಚಂದ್ರೇಗೌಡ ಹೀಗೆ ಅನೇಕ ಮುತ್ಸದ್ದಿ ಸಂವಿಧಾನ ವಾಕ್ ಪಟುಗಳು ಸದನದಲ್ಲಿ ಇದ್ದರೂ ಪಟೇಲರಿಗೆ ಅಗ್ರಸ್ಥಾನ. ಸದಾ ಮದಿರೆಯ ನಶೆಯಲ್ಲಿದ್ದರೂ ಮೆದುಳು ಮಾತ್ರ ಸದಾ ಜಾಗೃತವಾಗಿರುತ್ತಿತ್ತು. ಕುಡಿಯುತ್ತಿದ್ದರೂ ಕುಡುಕನೆನಿಸಿಕೊಳ್ಳದ, ರಸಿಕರಾಗಿದ್ದರೂ ಲಂಪಟನೆನಿಸಿಕೊಳ್ಳದ ವಿಶೇಷ ರಂಗುರಂಗಿನ ಜೀವನೋತ್ಸಾಹದ ಚಿಲುಮೆ.ಇಂಗ್ಲಿಷ್ ಸಾಹಿತ್ಯದ ಸಂಪರ್ಕ, ಆಳವಾದ ರಾಜಕೀಯ ಜ್ಞಾನ, ಭಾರತೀಯ ತತ್ತ್ವಶಾಸ್ತ್ರದಲ್ಲಿ ಅಧ್ಯಯನ, ದೇಶ ಸಂಚಾರದ ವಿಹಂಗಮ ನೋಟದ ಒಳಗಣ್ಣು ಮತ್ತು ಎಲ್ಲವನ್ನೂ ಮೀರಿಸುವಂತಹ ಹಾಸ್ಯ ಪ್ರಜ್ಞೆ! ಅಬ್ಬಾ! ವ್ಯಕ್ತಿ ನೂರು ಗುಣಗಳು!!! ಪಟೇಲರ ಆರೋಗ್ಯವನ್ನು ಮದಿರೆ ಹಾಳು ಮಾಡದಿದ್ದರೆ ಇನ್ನೂ ಕೆಲಕಾಲ ನಮ್ಮೊಂದಿಗೆ ಇರುತ್ತಿದ್ದರು. ಒಂದಿಷ್ಟೂ ಜನಪರ ಆಲೋಚನೆ ಮತ್ತು ಕಾಳಜಿ ಇರದ ಕುಟುಂಬ ಪ್ರೇಮಿ ರಾಜಕೀಯ ನಾಯಕರು ಜೀವಂತವಾಗಿರುವುದ ಕಂಡಾಗ ಪಟೇಲ್ ಇರಬೇಕಿತ್ತು ಎನಿಸುವುದು ಸಹಜ.

ಹಿರಿಯ ಪತ್ರಕರ್ತ ಗೆಳೆಯ ಕೆ.ಎನ್.ರೆಡ್ಡಿ ಅವರ `ಅಪ್ರತಿಮ ಪಟೇಲ್'  ಪಟೇಲರ ಬದುಕಿನ ಘಟನೆಗಳು ಮತ್ತು ಭಾಷಣಗಳ ಆಧರಿಸಿ ರಚಿತವಾದ ಅರ್ಥಪೂರ್ಣ ಕೃತಿ. ಲೋಕಸಭಾ ಸದಸ್ಯರಾಗಿ ರಾಜಕೀಯ ಬದುಕು ಆರಂಭಿಸಿದ ಪಟೇಲರು ಅಲ್ಲಿ ಕನ್ನಡ ಮಾತನಾಡುವುದರ ಮೂಲಕ ಇಡೀ ದೇಶದ ಗಮನ ಸೆಳೆದರು. ಅವರು ಕೇವಲ ರಾಜಕಾರಣಿ ಆಗಿರದೆ ಮಹಾನ್ ತತ್ವಜ್ಞಾನಿಯೂ ಆಗಿದ್ದರು ಎಂಬ ಸತ್ಯ ಕೃತಿ ಓದಿದಾಗ ಅನಿಸುತ್ತದೆ.  ಅವರ ಚರಿತ್ರೆ ಓದುವಾಗ ಅಲ್ಬರ್ಟ್ ಐನ್‍ಸ್ಟೈನ್ ಮತ್ತು ವಿನ್ಸೆಂಟ್ ಚರ್ಚಿಲ್ ಅವರ ವಿನೋದ ಪ್ರಜ್ಞೆ ನೆನಪಾಗುವುದು ಸಹಜ. ದೂರ ದೃಷ್ಟಿಯ ಆಲೋಚನೆಗಳು, ವೈಯಕ್ತಿಕ ಬದುಕಿನ ವೈರುಧ್ಯಗಳು,ಸಾರ್ವಜನಿಕ ವ್ಯಕ್ತಿತ್ವ ಇರಲು ಅಸಾಧ್ಯ ಅನಿಸುವ ಧೈರ್ಯ,ಮುಕ್ತ ವಿಲಾಸಿ ಜೀವನ ಎಲ್ಲದಕ್ಕೂ ಪಟೇಲರಿಗೆ ಪಟೇಲರೇ ಸಾಟಿ. ನಾವು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ರಾಮಕೃಷ್ಣ ಹೆಗಡೆ ಮತ್ತು ಜನತಾ ಪರಿವಾರದ ಅನೇಕರ ಮಾತುಗಳನ್ನು ಕೇಳುತ್ತಾ ರಾಜಕೀಯ ಮತ್ತು ಸಾಹಿತ್ಯದ ಒಲವು ಹುಟ್ಟಿಸಿಕೊಂಡು ಬೆಳೆದವರು. ಇಂದು ದಿನಪತ್ರಿಕೆ ಓದದ ರಾಜಕಾರಣಿಗಳನ್ನು ಕಂಡಾಗ ಅಯ್ಯೋ ಅನಿಸುತ್ತದೆ. ಹಣಬಲ,ಜಾತಿಬಲ ಮತ್ತು ತೋಳ್ಬಲಗಳ ತಾಕಲಾಟದ ಜೊತೆಗೆ ಜಾಣರೆನಿಸಿಕೊಂಡವರ ಜಾತಿ ಮತ್ತು ಕುಟುಂಬ ರಾಜಕಾರಣದ ರಾಜಕೀಯ ಹಾದರದಿಂದಾಗಿ ರಾಜ್ಯದ ಪ್ರಜ್ಞಾವಂತ ಜನ ಮೌನದಿಂದ ತಲೆ ತಗ್ಗಿಸುವಂತಾಗಿದೆ. ಹಣ ಚಲ್ಲಿ, ಹಣ ಗಳಿಸುವ ಉದ್ಯಮವಾಗಿರುವ ವಿಷಮ ಗಳಿಗೆಯಲ್ಲಿ ಪಟೇಲ್ ಮತ್ತು ಜನತಾ ಪರಿವಾರದ ನಾಯಕರು ನೆನಪಾಗಿ ಕಾಡುತ್ತಾರೆ.

ಹೊಸ ತಲೆಮಾರಿನ ಯುವ ರಾಜಕೀಯ ಪತ್ರಕರ್ತರು `ಅಪ್ರತಿಮ ಪಟೇಲ್' ಓದಲೇಬೇಕೆಂಬ ಹಕ್ಕೊತ್ತಾಯ ನನ್ನದು.  ಪಟೇಲರನ್ನು ಹತ್ತಿರದಿಂದ ಬಲ್ಲ ಒಡನಾಡಿಗಳ ಸಂದರ್ಶನ ಆಧರಿಸಿದ ಒಂಬತ್ತು ತಾಸಿನ ಸಾಕ್ಷ್ಯಚಿತ್ರವನ್ನೂ ರೆಡ್ಡಿ ನಿರ್ಮಾಣ ಮಾಡಿ ಪಟೇಲರ ಹುಚ್ಚಿನಿಂದ ವಿರಮಿಸಿ ಹಗುರಾಗಿದ್ದಾರೆ. ಇಂದಿನ ಶಾಸಕರು, ಸಂಸದರು, ಉತ್ಸಾಹಿ ರಾಜಕೀಯ ಯುವ ನಾಯಕರು ಸದರಿ ವಿಡಿಯೋ ವೀಕ್ಷಿಸಿ ಪುಸ್ತಕ ಓದಿ ರೆಡ್ಡಿ ಅವರ ಶ್ರಮ ಸಾರ್ಥಕಗೊಳಿಸಲು ನಿವೇದಿಸಿಕೊಳ್ಳುತ್ತೇನೆ. ಇಪ್ಪತ್ತು ವರ್ಷಗಳ ನಂತರ ಮಾತಿಗೆ ಸಿಕ್ಕ ನಾಗಿರೆಡ್ಡಿ ಈ ಕೃತಿ ರಚಿಸುವಾಗ ನೆರವಾಗದವರ ಅಸಹಕಾರವನ್ನು ವಿಷಾದದಿಂದ ಸ್ಮರಿಸಿಕೊಂಡರು. ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ಸ್ವಂತ ಖರ್ಚಿನಲ್ಲಿ ಒಂದು ಐತಿಹಾಸಿಕ ದಾಖಲೆ ನಮ್ಮ ಕೈಗೆ ಕೊಟ್ಟಿದ್ದಾರೆ. ಪಟೇಲರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ನೆರವು ಪಡೆದ ಅನೇಕರು ಸಾಕ್ಷ್ಯಚಿತ್ರ ಮತ್ತು ಪುಸ್ತಕ ಖರೀದಿಸದೇ ಇರುವುದು ಪಟೇಲರ ವ್ಯಕ್ತಿತ್ವಕ್ಕೆ ತೋರುವ ಅಗೌರವ ಅನಿಸಿ ಮನಸು ಖಿನ್ನವಾಯಿತು. ಪತ್ರಕರ್ತನಾಗಿ,ಸಮಾಜಮುಖಿ ಬರಹಗಾರನಾಗಿ,ಪರಿಸರ ಪ್ರೇಮಿಯಾಗಿ ವೈಯಕ್ತಿಕ ಬದ್ಧತೆ ಕಾಪಾಡಿಕೊಂಡಿರುವ ಸ್ನೇಹಿತ ನಾಗಿರೆಡ್ಡಿ ಜೊತೆಗೆ ಒಂದು ದಿನ ಸಾರ್ಥಕ ಕ್ಷಣಗಳನ್ನು ಕಲಬುರ್ಗಿಯಲ್ಲಿ ಕಳೆದು ಮನಸು ಪ್ರಫುಲ್ಲವಾಯಿತು. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿದ್ದು ಯಾಪಲಪರವಿ