Article

‘ರಾಷ್ಟ್ರ ಬಾವುಟ ಹಿಡಿದ ಹುಡುಗಿ, ರಾಷ್ಟ್ರವೂ ಬಾವುಟದಂತೆ ಮಾರಾಟಕ್ಕಿದೆ!’

ಬಹುಕಾಲದ ನಂತರ ಆರತಿಯವರ ಹೊಸ ಕವನ ಸಂಕಲನ ಪ್ರಕಟವಾಗಿದೆ.. ದೂರದರ್ಶನದ ಹತ್ತು ಹಲವು ಕೆಲಸಗಳಲ್ಲಿ ಸದಾ ಕಾರ್ಯನಿರತರಾಗಿ ಇವರು ಬರೆದಿದ್ದು ಕಡಿಮೆ. ಓಡಾಡಿದ್ದು ಹೆಚ್ಚು. ಕಾವ್ಯವನ್ನ ಕೆಲಸದಲ್ಲಿ ಕಂಡುಕೊಂಡುಬಿಟ್ಟರೆ ಮುಗಿಯಿತಲ್ಲ.. ಅಕ್ಷರದ ಸಾವಾಸ ಅಷ್ಟರಲ್ಲೇ. ಮತ್ತು ಅದಕ್ಕೆಲ್ಲಾ ಬಿಡುವೂ ಇರುವುದಿಲ್ಲ.

ಹೆಣ್ಣುಮಕ್ಕಳ ಕಥನ-ಕವನ- ಬರಹಗಳ ಹಳೆಯ ನರೇಟಿವ್ ಗಳಲ್ಲಿ ನಿರ್ವಚಿಸುವುದು ನಂಗಿಷ್ಟವಿಲ್ಲ, ಅದಾಗ್ಯೂ ಹೊಸದೊಂದು ಬಗೆಯು ನನಗಿನ್ನು ಒದಗದೇ ಇರುವುದರಿಂದ ಅಂತಹ ಹಳತನ್ನು ಆದಷ್ಟು avoid ಮಾಡುತ್ತಲೇ ಓದಲು ಪ್ರಯತ್ನಿಸ್ತೀನಿ.

ಈ ಸಂಕಲನ ಶುರುವಾಗುವುದೇ ಹೊರಡುವ ಬಗ್ಗೆ ಸರಹದ್ದು, ಗಡಿರೇಖೆಗಳ ದಾಟಿ ಹೊರಡುವ ಬಗ್ಗೆ.. ಭೌತಿಕವಾದ ಗಡಿಗಳಿಂದ ಶುರುವಾಗಿ ಮಾನಸಿಕವಾದ ಮೇರೆಗಳನು ಮೀರುವ ಬಗೆಗೆ ಮಾತಾಡುತ್ತಲೇ ಕವಿ ಅಲ್ಲೊಂದು ರಮ್ಯತೆಯನ್ನು ಬೆಸೆದು ಬಿಡುವುದು ಗಂಭೀರತೆಯ ನಡುವೆ ಕೆನ್ನೆಗಳನು ಕೆಂಪೇರಿಸುತ್ತದೆ.

"ಕಟ್ಟಿಕೊಂಡಷ್ಟು ಸುಲಭವಲ್ಲ
ಬಿಟ್ಟುಬಿಡುವುದು.
ನಾರಿ ಕರೆದಾಕ್ಷಣ ಬಂದು
ಒದಗುವುದಕ್ಕೆ ನರಹರಿಯು
ನಾಚಿಕೆಯ ಮೂರ್ತಿ. "
(ಹೊರಡಬೇಕಿದೆ ಎಲ್ಲ ಬಿಟ್ಟು, ಪುಟ ೧)

ಆರತಿ ಅವರ ಕವಿತೆಗಳ ಅವರಂತಯೇ ಹೆಚ್ಚು ಕ್ರಿಯಾಶೀಲವಾಗಿ ವಿವಿಧ ರೀತಿಯ ಕ್ಷೇತ್ರ, ಕಾರಣಗಳಲಿ ಸಂಚರಿಸುತ್ತವೆ. ಅವರ ಸಮಕಾಲೀನ‌ ಕವಿಗಳಗಿಂತ ಇವರ ಅಭಿವ್ಯಕ್ತಿ ಸ್ವಲ್ಪ ಭಿನ್ನವಾಗಿದೆ ಅದು ವಿಷಯಕ್ಕಿಂತಲೂ ಅದನ್ನು ಪ್ರಸ್ತುತ ಪಡಿಸುವ ರೀತಿ ಮತ್ತು ಅವುಗಳನ್ನು ಸ್ವೀಕರಿಸಿರುವ ರೀತಿ ಇಷ್ಟವಾಗುತ್ತದೆ.
ಸಿಗರೇಟು, ಸ್ಮೋಕಿಂಗ್ ಝೋನ್ . ಇವುಗಳ ಹೆಸರು ನೋಡಿ ಕಸಿವಿಸಿಯಾಗಬೇಕಿಲ್ಲ, ಅಸಲಿಗೆ ಇವು ಪ್ರೇಮ ಕವಿತೆಗಳು! ಪ್ರೇಮದ ಉನ್ಮಾದವು ಸಿಗರೇಟಿನ ನಶೆಯನ್ನು ಕುಡಿಸಬಲ್ಲದು ಹಾಗೆಯೇ ಸುಡಬಲ್ಲುದು. ಇಲ್ಲಿ ಎಲ್ಲಾ ಕವಿತೆಗಳಲ್ಲೂ 'ಪ್ರೇಮ' ಸಾಕಷ್ಟು ಅವತಾರಗಳನ್ನು ತಾಳಿದೆ. ಪ್ರೀತಿಯಿಂದ ಓದಿದರೆ ಆ ಪ್ರೇಮ ಒಲಿದೀತು..

"ಕಣ್ಣಲ್ಲ ಅದು, ನೋಟವೂ ಅಲ್ಲ,
ಸುಡುವ ಅಗ್ಗಿಷ್ಟಿಕೆ ಕೆಂಡ
ಸೇದಬೇಕಿದೆ
ಧೂಮ, ಧೂಳಿಪಟ
ದಾಹವೋ, ದೇಹವೋ
ತಿಳಿಯದ ಲೋಕ!
ಹೊಗೆಯಡರಿದೆ
ಸುರುಳಿ ಸುತ್ತಿದೆ
ಹಬೆ ಮಂಪರೂ.. '' (ಸ್ಮೋಕಿಂಗ್ ಝೋನ್, ಪುಟ 16)

ಈ ಪ್ರೇಮವು ಮುಂದುವರಿದು ಮಾಧವನಲ್ಲಿಗೆ, ಪಂಪನಲ್ಲಿಗೆ ಬಂದು ವಾರಾಣಾಸಿಯಲಿ ನಿಂದು ಟ್ರಾಫಿಕ್ ಜಾಮ್ ನಲ್ಲಿ ವಿರಮಿಸುತ್ತದೆ.

ಎಲ್ಲದರ ಬಗ್ಗೆ ಬರೆವ ಕವಿ ತನ್ನ ನೆಲದ ಪ್ರಭುತ್ವ ಮತ್ತು ಪ್ರಜೆ ಬಗೆಗೂ ಬರೆವ ಹಂಬಲ ಇದ್ದೇ ಇರುತ್ತದೆ. ಅದು ನಾನಾ ರೀತಿಯಲಿ ಹೊರಕ್ಕೆ ಬರುತ್ತದೆ. ಪ್ರಭುತ್ವಗಳ ಕಾಣಿಸದ ನಿರ್ಬಂಧಗಳು ಸಾವಿರ ಇರ್ತಾವೆ

"ಆ ರಾತ್ರಿಯ ರಸ್ತೆ ಪಕ್ಕ, ಮಾರಾಟವಾಗದೇ ಉಳಿದ
ರಾಷ್ಟ್ರ ಬಾವುಟ ಹಿಡಿದ ಹುಡುಗಿ,
ರಾಷ್ಟ್ರವೂ ಬಾವುಟದಂತೆ ಮಾರಾಟಕ್ಕಿದೆ!
ಇವಳ ಈ ರಾತ್ರಿ ಕ್ಷೇಮವಾಗಿರಲಿ ..
ನಾಳೆಯ ಬಗ್ಗೆ ನಾ ಬರೆಯಲಾರೆ .. "
(ಗಣತಂತ್ರದ ಭೋಜನ ಕೂಟ, ಪುಟ ೫೬)

ಈ ಸಂಕಲನದ ಸೆಲ್ಫಿ, ನಾನು ಚೆನ್ನಾಗಿದ್ದೇನೆ ( ಇದನ್ನು ಬಹಳಷ್ಟು ಕವಿಗೋಷ್ಠಿಗಳಲಿ ಕವಿ ವಾಚಿಸಿದ್ದಾರೆ. ನಾನು ಕೇಳಿದ್ದೇನೆ) , ಫೇಶಿಯಲ್, ನಾತಿಚರಾಮಿ, ಹುಡುಗಿಯರು ಕವಿತೆಗಳು ತುಂಬಾ ಚೆನ್ನಾಗಿವೆ. ಇವನ್ನು 'ಫೆಮಿನಿಸ್ಟ್' ಕವಿತೆಗಳು ಎನ್ನುವುದು ಕೂಡ ಕ್ಲೀಶೆ ಆದೀತೆಂಬ ಭಯ. 
ಧಿಕ್ಕರಿಸಿ ಹೊರಡುವುರಿಂದ ಶುರುವಾದ ಕವನ‌ಸಂಕಲನ ' 'ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರೆ' ಎಂಬಲ್ಲಿಗೆ ನಿಂತಿದೆ, ಮುಗಿದಿಲ್ಲ.

" ಕ್ಯಾಂಡಿ ಕ್ರಶ್ ಆಟದಂತೆ ಹೊಸ ಆ್ಯಪ್!
ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರೆ. " 
---
ಅವರ್ ಬಿಟ್ , ಇವರ್ ಬಿಟ್
ಅವರ್ಯಾರು!?
ಇವರ್ಯಾರಯ!?
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ತನುವ ಸಂತೈಸಿಕೊಳ್ಳುವ ಬಗೆ ತಿಳಿಸಿ" 
(ಪುಟ ೬೦)

ಆರತಿ ನನ್ನ ಕಾಲದ ಭಾಷೆ, ಭಾವ, ಅಭಿವ್ಯಕ್ತಿ ಗಳಿಗೆ ತುಂಬಾ ಸಹಜವಾಗಿ Update ಆಗಿರುವ, ಆಗುತ್ತಲೇ ಇರುವ ಕವಿ.

ರಾಜೇಂದ್ರ ಪ್ರಸಾದ್