Article

ರೋಚಕತೆಯ ವೈಜ್ಞಾನಿಕ ಕಾದಂಬರಿ ‘ಭೂಗರ್ಭಯಾತ್ರೆ’

ವೈಜ್ಞಾನಿಕ ಕಾದಂಬರಿಯನ್ನು ರಚಿಸುವಲ್ಲಿ ಪ್ರಮುಖರಾದ ಜೂಲ್ಸ್ ವರ್ನ ಪ್ರೆಂಚ್ ಲೇಖಕರ 'ಎ ಜರ್ನಿ ಟು ದಿ ಸೆಂಟರ್ ಆಪ್ ದಿ ಅರ್ತ' ಕೃತಿಯು ಜಗತ್ತಿನ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅದರಂತೆ ಕನ್ನಡಕ್ಕೂ ಅನುವಾದ ಮಾಡಿದವರು ಗೋಪಾಲಕೃಷ್ಣ ಅಡಿಗರು.

ವೈಜ್ಞಾನಿಕ ಕತೆ-ಕಾದಂಬರಿಗಳನ್ನೇ ಓದದ ನನಗೆ ಇದು ಹೊಸತರದ ಅನುಭವವನ್ನು ನೀಡಿತು. ನಾನು ಓದಿದ ಮೊದಲ ವೈಜ್ಞಾನಿಕ ಕಾದಂಬರಿ ಇದಾಗಿದ್ದು ಬಹಳಷ್ಟು ಆಸಕ್ತಿ, ಉತ್ಸಾಹದಿಂದ ಓದು ಮುಗಿಸಿದೆ. ಭೂಗರ್ಭಯಾತೆ ಕೃತಿಯು ಭೂಮಿಯ ಅಂತರಾಳದಲ್ಲಿಯ ಲೋಕವನ್ನು ಓದುಗನಿಗೆ ತೆರೆದಿಡುತ್ತದೆ.

ಪ್ರೊಫೆಸರ್ ಹಾರ್ಡವಿಗ್, ಹಾರ್ಡವಿಗ್ ಅವರ ತಂಗಿಯ ಮಗ ಹೆನ್ರಿ, ಹ್ಯಾನ್ಸ ಈ ಮೂವರು ಸ್ನಾರೇ ಟಾರ್ಲೆಸನಗ ಎಂಬುವವರ 'ಹೀಮ್ಸ್-ಕ್ರಿಂಗ್ಲ' ಕೃತಿಯ ಆಧಾರದ ಮೇಲೆ ಅಲ್ಲಿ ಸಿಗುವ ಗೂಢಲಿಪಿಯ ಶೋಧಿಸುತ್ತ ಭೂಗರ್ಭಯಾತ್ರೆಯ ಪ್ರಯಾಣವನ್ನು ಆರಂಭಿಸುವ ಮೂರು ಜನರ ಪಯಣದ ಕಥನವನ್ನು ಇಲ್ಲಿ ಕಾಣಬಹುದು.

ಭೂಮಿಯ ಅಂತರಾಳದಲ್ಲಿ ಜಗತ್ತನ್ನು ಚಿತ್ರಿಸುತ್ತ, ಜ್ವಾಲಾಮುಖಿಯ ದ್ವಾರಗಳ ಮೂಲಕ ಪಯಣಿಸುವ ಮೂವರು ಅನೇಕ ಕಷ್ಟಗಳನ್ನು ಎದುರಿಸಿ ಭೂಗರ್ಭದ ಆಳವನ್ನು ತಲುಪುತ್ತಾರೆ. ರೋಚಕತೆಯಿಂದ ಕೂಡಿದ ಪಯಣದ ಮಾರ್ಗದಲ್ಲಿ ಅಲ್ಲಲ್ಲಿ ಅನುಭವಿಸಿದ ತಾಪತ್ರಯಗಳು, ಪ್ರಾಣವನ್ನು ಕಳೆದುಕೊಳ್ಳುವಂತ ಬಂದೊದಗಿದ ಸಂದಿಗ್ದ ಪರಿಸ್ಥಿತಿಗಳು ಮೂವರ ನಡುವೆ ನಡೆದ ಜಗಳಗಳು, ಭೂಮಿಯ ಒಳಮೇಲ್ಮೈ ಚಿತ್ರಣಗಳನ್ನು ಇಲ್ಲಿ ಕಾಣಬಹುದು.

ಓದುಗರನ್ನು ಕುತೂಹಲದಿಂದಲೇ ಓದಿಸಿಕೊಂಡು ಹೋಗುವ ಕೃತಿ ವೈಜ್ಞಾನಿಕ ತಳಹದಿಯ ಮೇಲೆ ಭೂಮಿ ಅಂತರಾಳದ ರಚನಾವಿನ್ಯಾಸಗಳನ್ನು, ಜ್ವಾಲಾಮುಖಿಯ ಉಗಮ, ಲಾವಾರಸದ ಕುರಿತು, ಭೂಮಿಯಂತರಾಳದಲ್ಲೂ ಇರುವ ಸರೋವರದ ಕುರಿತು! ಹೀಗೆ ರೋಚಕತೆಯ ಹಲವಾರು ವಿಷಯಗಳನ್ನು ಒಳಗೊಂಡ ಕಾದಂಬರಿ ಇದಾಗಿದೆ.

ಓಂದೊಳ್ಳೆ ವೈಜ್ಞಾನಿಕ ಕಾದಂಬರಿ ಓದಿದ ಖುಷಿ ನನಗೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ