Article

ಶಿವಕುಮಾರ ಮಾವಲಿಯವರ ’ಚಲಿಸುವ ಕಥೆಗಳು’!

ಶಿವಕುಮಾರ ಮಾವಲಿಯವರು ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಸಂಕಲನದ ಮೂಲಕ ಹೊಸ ಮಾದರಿಯ ಕಥೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಇಲ್ಲಿನ ಕಥೆಗಳು ವಾಸ್ತವಿಕ ಪಾತ್ರಗಳೊಂದಿಗೆ ಘಟಿಸುತ್ತಲೇ ಬಹುರೂಪಿ ಗುಣ ಪಡೆದುಕೊಂಡು ಗಮನ ಸೆಳೆಯುತ್ತವೆ. ಇಲ್ಲಿನ ಕಥೆಗಳಿಗೆ ಚೌಕಟ್ಟಿಲ್ಲ, ಗೋಡೆ-ಕಿಟಕಿಗಳಿಲ್ಲ. ಇಲ್ಲಿರುವ ಕಥೆಗಳೆಲ್ಲವೂ ಬಯಲಿಗೆ ತಮ್ಮನ್ನು ತಾವು ಒಡ್ಡಿಕೊಂಡು ಮಳೆಯಲ್ಲಿ ನೆನೆಯುತ್ತವೆ. ಭಾವನೆಗಳ ಜೊತೆ ಹೋರಾಡುತ್ತವೆ. ಚಂದದ ಬಿಸಿಲಿನೊಂದಿಗೆ ಲೀನಗೊಂಡು ಅರಳುತ್ತವೆ. ಹೊರಳುತ್ತವೆ. ಕೆಲವೊಮ್ಮೆ ಕೆರಳಲು ಹೋಗಿ ಮತ್ತೆ ಯಥಾ ‘ಅಂಕಣ’ಕ್ಕೆ ಮರಳುತ್ತವೆ. ಬಹುರೂಪಿ ಪ್ರಕಾಶನ ಹೊರತಂದಿರುವ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಸಂಕಲನ ಮೂಲತಃ ಅವಧಿಯಲ್ಲಿ ಪ್ರಕಟಗೊಂಡ ಅಂಕಣ ಬರಹಗಳು. ಇಲ್ಲಿ ಈ ಅಂಕಣ ಬರಹಗಳು ಕಥೆಗಳ ರೂಪ ತಾಳಿ ಸ್ವತಃ ಬರಹಗಾರನನ್ನೇ ಬೆಚ್ಚಿಬೀಳಿಸಿವೆ. 

ಕಥಾ ಸಂಕಲನ ಪ್ರಕಟವಾದ ಕೂಡಲೇ ಆ ಸಂಕಲನವನ್ನು ಸಾಹಿತ್ಯ ಲೋಕ ಭೂತ ಕನ್ನಡಿ ಹಾಕಿ ಪೊಲೀಸಿಂಗ್ ಮಾಡತೊಡಗುತ್ತದೆ. ಆದರೆ, ಸ್ವತಃ ಇಲ್ಲಿನ ಕಥೆಗಳೇ ಆ ಪೊಲೀಸಿಂಗ್ ಕೆಲಸ ಮಾಡಲು ಹೋಗುವುದಿಲ್ಲ. ಬದಲಿಗೆ ತಮ್ಮ ಪಾಡಿಗೆ ತಾವು ಜೀವಂತಿಕೆಯನ್ನು ಉಸಿರಾಡುತ್ತಾ ಚಲಿಸುವ ಕಥೆಗಳಾಗಿ ಕಾಣಬರುತ್ತವೆ. ತೃಪ್ತಭಾವದ ಇಂಧನ ಈ ಕಥೆಗಳಲ್ಲಿ ತುಂಬಲ್ಪಟ್ಟಂತಿದೆ. ನೀಲು ಪದ್ಯದಂತೆಯೇ ಸಾಗುವ ‘ಶಾಸಕರೊಬ್ಬರ ಶೌಚಾಲಯ ಉದ್ಘಾಟನಾ ಸಾಹಸ’ ಎಂಬ ಕಥೆ ಇಡೀ ಸಂಕಲನದ ಅರ್ಥಗರ್ಭಿತ ಕಥೆ. ಶೌಚ ಮಾಡಿ ಶೌಚಾಲಯವನ್ನು ಮೊದಲು ಉದ್ಘಾಟಿಸಲು ಹೊರಡುವ ಬಂಗಾರಸ್ವಾಮಿ ನಗು ತರಿಸುತ್ತಲೇ ಆ ಕಥೆಯನ್ನು ಜೀವಂತವಿಡುತ್ತಾನೆ. ಅಂತಿಮವಾಗಿ ಈತನಿಗೆ ಶೌಚಾಲಯ ಬಳಕೆಯ ನಿಷೇಧದ ಪಾರಿತೋಷಕ ಸಿಗುತ್ತದೆ. ಅದು ಆ ಕಥೆಯ ಮಾನವೀಯ ಮುಖ ಮತ್ತು ಅಮಾನವೀಯ ಸಮಾಜದ ಕನ್ನಡಿಯಂತೆ ಗೋಚರಿಸುತ್ತದೆ. 

ಕಥಾ ಸಂಕಲನದ ಬಹುತೇಕ ಕಥೆಗಳು ಸಮುದ್ರಕ್ಕೆ ಅಣೆಕಟ್ಟೆಯ ಫೋಟೋ ಅಂಟಿಸಿ ಭೋರ್ಗರೆವ ಅಲೆಗಳನ್ನು ತಪ್ಪಿಸಲು ಪ್ರಯತ್ನಿಸ ಹೊರಟಂತೆ ಭಾಸವಾಗುತ್ತವೆ. ಬಯಲಿಗೆ ಬೀಗ ಹಾಕಿ ಗೋಡೆಯ ಮಿತಿ ನಿರ್ಮಿಸುವ ಪ್ರಯತ್ನವನ್ನು ಇಲ್ಲಿ ಕಥೆಗಾರ ಮಾವಲಿ ವಿಫಲಗೊಳಿಸುತ್ತಾ ಹೋಗುತ್ತಾರೆ. ಇಲ್ಲಿನ ಕಥೆಗಳು ಕೆಲವೊಮ್ಮೆ ಕಥೆಗಾರನನ್ನು ಮೀರಿ ತಮ್ಮ ತಮ್ಮ ಕಥೆಯನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಮುಂದುರೆಯುತ್ತವೆ. ‘ಆಕೆ’ ಎಂಬ ಕಥೆಯಲ್ಲಿ ಹೊಸ ರೀತಿಯಲ್ಲಿ ‘ಆಕೆಯ ಮನೋಭಾವ’ ನೋಡುವ ಪ್ರಯತ್ನವೊಂದು ಕುತೂಹಲ ಕೆರಳಿಸುತ್ತಾ, ಕಥೆಯಾಗುತ್ತಾ ತನ್ನ ದಾರಿ ಕಂಡುಕೊಳ್ಳುತ್ತದೆ. ‘ಹೂವಿನ ವ್ಯವಹಾರ’ ಮಾಡುವ ಹೂವು ಮಾರುವ ಹುಡುಗ ಬೆಳೆಬೆಳೆದಂತೆಲ್ಲ ಸಿರಿವಂತದ ಜಾಲರಿಯಲ್ಲಿ ಸಿಲುಕಿಕೊಳ್ಳುತ್ತಾ ಸಾಗುತ್ತಾನೆ. ಹೂವು ಪಡೆಯುತ್ತಿದ್ದ ಹುಡುಗಿ ‘ಹೂವು ಪಡೆಯಲಾರದ ಬಡತನ’ಕ್ಕೆ ಸಿಲುಕುವ ಪರಿ ಕಥೆಗಾರನ ಕಸೂತಿತನ ಬಿಚ್ಚಿಡುತ್ತದೆ. 

ಕಥೆಗಾರ ತನ್ನ ಜೊತೆಗಿದ್ದ ಸಂದರ್ಭಗಳನ್ನೇ ‘ಪಾತ್ರ’ವಾಗಿಸಿಕೊಂಡ. ಜೊತೆಗಿದ್ದ ಕಾಲವನ್ನೇ ‘ಕಥಾಕಾಲ’ ಮಾಡಿಕೊಂಡ. ಕಥೆಗಾರ ಈ ಕಥೆಗಳನ್ನೆಲ್ಲ ಬರೆಯುವ ಹೊತ್ತಲ್ಲಿ ವಾಸ್ತವದಲ್ಲೇ ನಿಂತಿದ್ದ ಎಂಬುದಕ್ಕೆ ಇಲ್ಲಿನ ಕಥೆಗಳು ಪುರಾವೆ ಒದಗಿಸುತ್ತವೆ. ತನ್ನ ಮೊದಲ ಕಥಾ ಸಂಕಲನದಲ್ಲಿ ದೇವರನ್ನು ಅರೆಸ್ಟ್ ಮಾಡಿ ಕೂರಿಸಿಕೊಂಡಿದ್ದ ಶಿವಕುಮಾರ ಮಾವಲಿ, ತಮ್ಮ ಎರಡನೇ ಕಥಾ ಸಂಕಲನದಲ್ಲಿ ಯಾವುದೇ ಕಥೆಯಲ್ಲಿ ಸೋಂಬೇರಿಯಂತೆ ಕುಳಿತುಕೊಳ್ಳಲು ಬಿಟ್ಟೇ ಇಲ್ಲ. 

ಭೇಟಿ ಮತ್ತು ಬೇಟೆಯ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸದ ಪ್ರತಿಭಾ ಎಂಬ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಆತನ ಜೊತೆ ಪ್ರೀತಿಗೆ ಜಿಗಿಯುತ್ತಾಳೆ. ಅಲ್ಲಿ ಪ್ರೀತಿ ಬೆತ್ತಲಾಗುತ್ತದೆ. ಬದುಕು ಕತ್ತಲಾಗುತ್ತದೆ. ತಾನು ಮೋಸ ಹೋಗಿದ್ದೇನೆ ಎಂದು ಅಂದುಕೊಳ್ಳುವ ಪ್ರತಿಭಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮಗಳ ಇಲ್ಲದಿರುವಿಕೆಯನ್ನು ಸಹಿಸಲಾರದ ತಂದೆ-ತಾಯಿ ತಮ್ಮ ಹೃದಯಗಳನ್ನು ಸ್ಥಬ್ದಗೊಳಿಸಿಕೊಳ್ಳುತ್ತಾರೆ. ಈ ಕಥೆಯನ್ನು ಕಥೆಗಾರ ಬರೆದುಬಿಟ್ಟಿದ್ದಾನೆ. ಆನಂತರ ನಡೆದಿದ್ದೇ ಬೇರೆ. ಆ ಕಥೆಯನ್ನು ಟೈಪಿಗೆ ಕಳಿಸುತ್ತಾನೆ. ಪ್ರತಿಯೊಂದು ಕಥೆಗಳನ್ನು ಟೈಪಿಸುವ ಕೋಮಲಮ್ಮ ಈ ಕಥೆಯನ್ನು ಮಾತ್ರ ಟೈಪಿಸಲು ಹೋಗದೇ ತಿರಸ್ಕರಿಸುತ್ತಾಳೆ. ಅಚ್ಚರಿಗೊಂಡ ಕಥೆಗಾರ ಅದರ ಮೂಲ ಏನೆಂಬುದನ್ನು ಹುಡುಕುತ್ತಾನೆ. ಆಗ ಅಲ್ಲಿ ಮತ್ತೊಂದು ಕಥೆ ಬಿಚ್ಚಿಕೊಳ್ಳುತ್ತದೆ. ಖಜಿಟಲ್ ಲೋಕದ ಬುದ್ದಿವಂತಿಕೆ ಮತ್ತು ದಡ್ಡತನ ಈ ಕಥೆಯಲ್ಲಿ ಒಬ್ಬಳನ್ನು ಕೊಂದು ಹಾಕಿದೆ. ಆ ಡಿಜಿಟಲ್ ಲೋಕದಿಂದ ದೂರವೇ ಇರುವ ಆಕೆಯ ತಂದೆ-ತಾಯಿ ಕೂಡ ಸತ್ತು ಹೋಗಿದ್ದಾರೆ. ಕಥೆ ಟೈಪಿಸಲು ಆಕೆ ತಿರಸ್ಕರಿಸಿದ್ದಾದರೂ ಯಾಕೆ? ಕೋಮಲಮ್ಮನ ಮಗಳು ಕೂಡ ಪ್ರತಿಭಾ. ಈ ಪ್ರತಿಭಾಳ ಆತ್ಮಹತ್ಯೆಯ ಕಥೆಯನ್ನು ಹೇಗೆ ತಾನೇ ತಾಯಿಯಾದವಳು ಟೈಪಿಸಲು ಸಾಧ್ಯ? ಹೀಗೆ, ಮಾನಸಿಕ ಭಾರದ ಕಥೆಗಳನ್ನು ಬರೆಯುವಲ್ಲಿ ಮಾವಲಿ ಗೆಲ್ಲುತ್ತಾರೆ. ಅದೇ ಭಾವುಕತೆಯಲ್ಲಿ ಮುಳುಗಿ ಬೇಗನೇ ಕಥೆ ಮುಗಿಸಿಬಿಡುವುದು ಅವರ ಮೈನಸ್ ಪಾಯಿಂಟ್. ಕಥೆ ಮುಗಿಯುವ ಮುನ್ನವೇ ಕಥೆಗಾರ ಆ ಕಥೆಯನ್ನು ಮುಗಿಸಿಬಿಟ್ಟರೆ  ಒಪ್ಪಬಹುದೇ? 

ಮಾವಲಿಯವರ ಎರಡನೇ ಸಂಕಲನದಲ್ಲಿರುವ ಕಥೆಗಳು ಚಲಿಸುತ್ತವೆ, ಓಡುತ್ತವೆ. ಮಾತಿನಂಗಡಿಯಲ್ಲಿ ಮೌನ ತಂದವಳು, ಮಿಸ್ಟರಿ ಮ್ಯಾನ್, ಲಾಸ್ಟ್ ಸೀನ್, ವಸೂಲಾಗದ ಒಂದು ರೂಪಾಯಿ, ಡಸ್ಟ್‌ಬಿನ್‌ಗಳ ಉಭಯ ಕುಶಲೋಪರಿ, ಸಾಕ್ಷಿ ನಾಶಮಾಡುವ ಸಮುದ್ರ...ದಂತಹ ಕಥೆಗಳಲ್ಲಿ ಆ ಓಟತನ ಕಾಣಬಹುದು. ಮಾವಲಿಯವರ ಇಲ್ಲಿನ ಬಹುತೇಕ ಕಥೆಗಳು ತೆರೆದ ಜಗತ್ತಿನಿಂದ ನಡೆದುಕೊಂಡು ತನ್ನೊಳಗಿನ ವ್ಯಕ್ತಿಗತ ಜಗತ್ತಿನೊಳಗೆ ಲೀನವಾಗುವ ಪ್ರಯತ್ನ ಮಾಡುತ್ತವೆ. ಅಂಕಣಕಾರನೊಬ್ಬ ಅಂಕಣದ ಹೆಸರಿನಲ್ಲಿ ಪ್ರತಿವಾರ ಕಥೆಗಳನ್ನು ಬರೆಯುತ್ತಾ ಹೋಗುವುದು ಕೂಡ ಆಶ್ಚರ್‍ಯದ ವಿಚಾರ. ಟೈಪಿಸ್ಟ್ ತಿರಸ್ಕರಿಸಿದ ಕಥೆಯಿಂದ ಆರಂಭವಾಗಿ ಮಾಳವಿಕ ಹಾಕಿದ ಕೇಸ್‌ವರೆಗೂ ಸಾಗುವ ಕಥಾ ಪಯಣದಲ್ಲಿ ಬೇರೆ ಬೇರೆಯದೇ ಅನುಭವಗಳನ್ನು ದಕ್ಕಿಸಿಕೊಳ್ಳಬಹುದು. ಶಿವಕುಮಾರ ಮಾವಲಿ ತಮ್ಮ ಎರಡನೇ ಕಥಾ ಸಂಕಲನದ ಮೂಲಕ ‘ಕಥಾ ಕೆರಳುವಿಕೆ’ ಮತ್ತು ‘ಮನೋ ಅರಳುವಿಕೆ’ಯ ದಾರಿಗಳನ್ನು ಸಾಹಿತ್ಯದ ಈ ಸಂದರ್ಭದಲ್ಲಿ ಸೃಷ್ಟಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿ.ಜು ಪಾಶ