Article

ಮತ್ತೆ ಮತ್ತೆ ಕಾಡುತ್ತಾನೆ ರೂಮಿ

 

ರೂಮಿ, ರವೀಂದ್ರ, ಸಾವಿತ್ರಿ.....ನೆನೆಯುತ್ತಾ...

ಕೆಲವೊಮ್ಮೆ ಎಷ್ಟೋ ದೂರ ಸಂಚರಿಸಿಯೂ ಮತ್ತೆ ನಾವು ಮೊದಲ ಜಾಗದಲ್ಲಿಯೇ ಬಂದು ನಿಂತ ಅನುಭವವಾಗುತ್ತದೆ. ಹಾಗಾದರೆ ಪ್ರಯಾಣದ ಪ್ರಯಾಸಕ್ಕೇನು ಅರ್ಥ? ಖಂಡಿತ ಅರ್ಥವಿದೆ. ಅದು ನಾವು ನಿಂತ ನೆಲದಲ್ಲಿಯೇ ಸತ್ಯದ ಕುರುಹುಗಳಿರುವ ಗುಟ್ಟನ್ನು ನಮಗೆ ತಿಳಿಸುತ್ತದೆ. ತಿಂಗಳ ಕಾಲದ ಓದು ಅಂಥದೊಂದು ಅರಿವನ್ನು ಅಂತಿಮವಾಗಿ ನೀಡಿತು. 

ನಾವೇನು ಬಯಸುತ್ತೇವೆಯೋ ಅದೇ ನಾವಾಗಿಬಿಡಬೇಕು ಎನ್ನುತ್ತಾಳೆ ರೇಗೇಯವರ ಕಾದಂಬರಿಯ ಸಶಕ್ತ ನಾಯಕಿ ಸಾವಿತ್ರಿ. ಅವಳೊಂದಿಗಿನ ಒಂದು ವಾರದ ಪಯಣದಲ್ಲಿ ಬಯಸಿದ್ದು ನಾವಾಗುವ ಚೇತೋಹಾರಿಯಾದ ಪಯಣವನ್ನು ನನ್ನೆದುರು ತೆರೆದಿಟ್ಟಳು. ಬದುಕಿನ ಹರವಿಗೆ ಎಷ್ಟೊಂದು ಬಿಡುಗಡೆಯ ಸಾಧ್ಯತೆಗಳು! ಎಲ್ಲವನ್ನೂ ತಣ್ಣಗೆ ತನ್ನದಾಗಿಸಿಕೊಳ್ಳುತ್ತ ಹೋಗುವ ಸಾವಿತ್ರಿ ಕೊನೆಗೊಮ್ಮೆ ತಾನು ನಿಂತ ನೆಲದಲ್ಲಿಯೇ ತನಗೆ ಬೇಕಾದುದೆಲ್ಲವೂ ಆಗುತ್ತಾಳೆ. ಒಂದು ತಾನು ಬಯಸುವ ಇನ್ನೊಂದಾಗಿ ರೂಪಾಂತರವಾಗುವುದೇ ಬದುಕಿನ ಆದ್ಯಂತಿಕ ಸುಖ ಎಂಬುದನ್ನು ಸಾರುತ್ತಾಳೆ.

ರವೀಂದ್ರರು ತಮ್ಮ ಎಲ್ಲಾ ಕೃತಿಗಳಲ್ಲಿ ಒಂದು ಅಂತಿಮ ಸತ್ಯವನ್ನು ಪ್ರತಿಪಾದಿಸುತ್ತಾರೆ. ಅದೆಂದರೆ ಬಯಸಿದ್ದು ನಾವೇ ಆಗಿಬಿಡುವ ಸತ್ಯಲೋಕ. ನಮ್ಮ ಜೊತೆಗೆ ಎಲ್ಲಿಯವರೆಗೆ ಸಂಗೀತ, ನೃತ್ಯ, ಸಾಹಿತ್ಯ, ಚಿತ್ರ.... ಮೊದಲಾಗಿರುವುದು ಇರುತ್ತವೆಯೋ ಅಲ್ಲಿಯವರೆಗೂ ಸತ್ಯಲೋಕದ ದಾರಿ ತೆರೆದೇ ಇರುತ್ತದೆ ಎನ್ನುತ್ತಾರೆ. 

"ಪ್ರೇಮ, ಭಕ್ತಿ, ಬದುಕು... ಈ ಎಲ್ಲದರ ಉತ್ಕಟ ಹಂಬಲಿಕೆಯೇ ರೂಮಿ. ರೂಮಿಗೆ ದೇವರನ್ನು ತಲುಪಲು ಕಾವ್ಯ, ಸಂಗೀತ,ನರ್ತನದಿಂದ ಸಾಧ್ಯವೆಂಬ ದೃಢವಾದ ನಂಬಿಕೆ. ಹಾಡುತ್ತಾ ನರ್ತಿಸುವುದರಿಂದ ಇಡೀ ಇರವು ದೇವನತ್ತ ಕೇಂದ್ರೀಕೃತಗೊಳಿಸಲು ಸಾಧ್ಯವಾಗುತ್ತದೆ ಹಾಗೂ ಅಹಂ ನಾಶಗೊಂಡು ಆತ್ಮ ಪುನರುಜ್ಜೀವನಗೊಳ್ಳುತ್ತದೆ ಎಂದು ಅವನ ಅಭಿಮತ"

ರೂಮಿ ಕವಿತೆಗಳ ಸಂಕಲನದ ಮುನ್ನುಡಿಯಲ್ಲಿ ಬರೆದ ಈ ಸಾಲುಗಳನ್ನು ಓದುವಾಗ ಮತ್ತೆ ಅಲ್ಲಿಗೇ ಮುಟ್ಟಿದ ಸಡಗರ, ಸತ್ಯ ನಿಚ್ಚಳವಾದಂತಹ ಬೆರಗು! 

ಮೂರ್ಖನಂತೆ ಬಾಣದ ಕರುಣೆಗಾಗಿ ಕಾತರಿಸದಿರು
ಬಾಣ ಹಿಡಿದವನ ದಯೆಗಾಗಿ ಪ್ರಾರ್ಥಿಸು....

ಲಿಪಿಕಾರನ ಲೇಖನಿ ನಾನು
ನನ್ನಿಷ್ಟದಂತೆ ಇರಲು, ಇಲ್ಲದಿರಲು ಸಾಧ್ಯವೇನು?

ಇಂದಿಗೆ ಎಂದೇ ಬರೆದನೆ ರೂಮಿ ಈ ಸಾಲುಗಳನ್ನು? ಅಥವಾ ಮತ್ತೆ, ಮತ್ತೆ ವೃತ್ತದಲ್ಲಿ ಸುತ್ತಿ ಅಲ್ಲಿಗೇ ಬಂದು ನಿಲ್ಲುತ್ತೇವೆಯೆ ನಾವು? ರೂಮಿ ಕಾಡುತ್ತಾನೆ ಮತ್ತೆ, ಮತ್ತೆ ತಿರುತಿರುಗಿ ಅಲ್ಲಿಗೇ ಬಂದು ನಿಲ್ಲುತ್ತಾನೆ.

ಸುಧಾ ಅಡುಕಳ