Article

" ತೇಲಿ ಬಿಟ್ಟ ಹೂ" ನಿಮ್ಮೆಲ್ಲರನ್ನು ತಲುಪಲಿ

ಹೊಸ ಲೇಖಕರ ಯಾವುದೇ ಕೃತಿ ಪ್ರಕಟಗೊಂಡಾಗಲೂ ಅದನ್ನು ಕೊಂಡು ಓದುವ ನನ್ನ ಅಭ್ಯಾಸದಂತೆಯೇ, ಫೇಸ್ ಬುಕ್ ಅಲ್ಲಿ ಪರಿಚಿತರಾಗಿದ್ದ ಅನುಪಮಾ ಕೆ ಎನ್ ಅವರ ಪುಸ್ತಕ ಪ್ರಕಟಗೊಂಡ ವಿಷಯ ತಿಳಿದಾಗ ಅವರನ್ನು ಸಂಪರ್ಕಿಸಿ ಪುಸ್ತಕ ಕಳಿಸಿಕೊಡುವಂತೆ ಕೇಳಿಕೊಂಡಿದ್ದೆ.. ತಮ್ಮ ಕೆಲಸದ ಒತ್ತಡದ ನಡುವೆಯೂ ತುಸು ತಡವಾಗಿಯಾದರೂ ನೆನಪಿಟ್ಟುಕೊಂಡು ಪುಸ್ತಕವನ್ನು ಇತ್ತೀಚೆಗೆ ಕಳುಹಿಸಿಕೊಟ್ಟಿದ್ದರು.

ಕೆಲವು ಕೃತಿಗಳೇ ಹಾಗೆ ಓದಿ ಸುಮ್ಮನಿರಲಾಗುವುದಿಲ್ಲ ಅದರ ಕುರಿತು ಬರೆಯಲೇಬೇಕೆಂಬಂತೆ ಒತ್ತಾಸೆ ಸೃಷ್ಟಿಸುತ್ತವೆ. "ತೇಲಿ ಬಿಟ್ಟ ಹೂ" ಅನುಪಮಾ ಅವರ ಮೊದಲ ಕವನ ಸಂಕಲನ..ತುಂಬಾ ಸರಳ ಮುಖಪುಟ ಹೊಂದಿರುವ ಈ ಕೃತಿ ಅಷ್ಟೇ ಸರಳವಾದ ಆದರೆ ಆಪ್ತವಾದ ಕವಿತೆಗಳನ್ನು ಅದರಲ್ಲೂ ಮುಖ್ಯವಾಗಿ ಮಿಂಚಿನಂತಹ ಹನಿಗವನಗಳನ್ನು ಹೊತ್ತು ತಂದಿದೆ.. ಕವಿ ಈಡೀ ಸಂಕಲನದಲ್ಲಿ ಕಾಣುವ ಒಂದು ಮಗ್ಗಲಿನ ಹೊರತಾಗಿ ಕಾಣದ ಮತ್ತೊಂದು ಮಗ್ಗಲಿನೆಡೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ..ಸಮಾಜಿಕವಾಗಿ ಕವಿಯ ಕರ್ತವ್ಯವೂ ಅದೇ ತಾನೇ..

'ಮತ್ತೊಂದು ಮಗ್ಗಲು' ಕವಿತೆಯಲ್ಲಿ ಮಳೆ ಎಂದರೆ ಸಂಭ್ರವಷ್ಟೇ ಅಲ್ಲಾ, ಹಸಿನೆಲ ಒದ್ದೆ ಒಲವು ಮುದ್ದು ಮಾತು ಕವಿಯ ಕಾವ್ಯ ಅಷ್ಟೇ ಅಲ್ಲಾ

"ಮಳೆಯಾದ ದಿನವೆಂದರೆ

ತೂತುಬಿದ್ದ ಮುರುಕು ಗುಡಿಸಲು

ಅದನ್ನಪ್ಪಿದ ಹಸಿ ತೊಟ್ಟಿಲಲಿ

ಎಳೆಗೂಸಿನ ಆಕ್ರಂದನ" ಎನ್ನುತ್ತಾ

"ಮಳೆಯಾದ ದಿನವೆಂದರೆ

ಸೂರಿರದ ಅಲೆಮಾರಿಗಳ

ಹೊಗೆ ಕಟ್ಟಿದ ಕಲ್ಲಿನೊಲೆ

ಬೇಯದ ಸೊಪ್ಪು ಅನ್ನ..."ಎನ್ನುತ್ತಾರೆ..

'ಹೂ ಮಾರುವ ಹುಡುಗ' ಎಂಬ ಮತ್ತೊಂದು ಕವಿತೆಯಲ್ಲಿ ಹೂಮಾರುತ್ತ ಚಪ್ಪಲಿ ಕಾಯುವ ಹುಡುಗನ ಕುರಿತು ಹೀಗೆ ಬರೆಯುತ್ತಾರೆ

" ಬುಟ್ಟಿಯ ಮೇಲಷ್ಟೇ ಹಗುರ ಮಾಲೆ

ಅಡಿಯ ಚೀಲದೊಳಗೆ

ಮುಗಮ್ಮಾಗಿ ನರಳಿದೆ ಅಲ್ಲಿ

ಇವನ ದಾರಿ ಕಾಯುವವರ ಹಸಿವು,"

ಹೂಕೊಂಡು ದೇವರಿಗೆ ನಮಿಸಿ ಬಂದ ತಾಯಿಯೊಬ್ಬಳು ಕಳೆದುಹೋದ ಮಗುವಿನ ಶೂ ಹುಡುಕುವಾಗ

" ಬಟ್ಟಲು ಕಂಗಳ ಹೂ ಮಾರುವ ಹುಡುಗ

ದಿಟ್ಟಿಸುತ್ತಾನೆ

ಸಮವಸ್ತ್ರ ಜೊತೆಗೆ ಬಗಲಿಗೆ ಅಂಟಿದ ಬ್ಯಾಗು

ತಡಮಾಡದೇ ಹುಡುಕಿ ತೊಡಿಸುತ್ತಾನೆ

ಕಪ್ಪು ಬಣ್ಣದ ಪುಟ್ಟ ಶೂಗಳ

ತನ್ನ ಹೂಕಂಪಿನ ಬೆರಳಿನಿಂದ

ಮೆಲ್ಲಗೆ ಸವರಿ.." ಈ ಕವಿತೆ ಎಲ್ಲಿಯೂ ಆಕ್ರೋಶಗೊಳ್ಳದೇ, ಯಾರನ್ನೂ ದೂರದೇ, ಸಮಾಜದ ಅಸಮಾನತೆಯನ್ನು , ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡ ಮಕ್ಕಳ ನೋವನ್ನು ಸಶಕ್ತವಾಗಿ ಬಿಂಬಿಸುತ್ತದೆ..

ಹಾಗೆಯೇ 'ಸಂತೆಯೊಳು' ಎಂಬ ಕವಿತೆಯ ಈ ಎರಡು ಹನಿಗಳೂ ಕೂಡ ಮತ್ತೊಂದು ಮಗ್ಗಲಿನ ಶೋಧನೆಯಂತೆಯೇ ಕಾಣುತ್ತದೆ.

"ಸಂತೆಯ ಗದ್ದಲದಲ್ಲಿ ನೆಮ್ಮದಿ ಅರಸುತ್ತಿದ್ದ

ಸಂತನೊಬ್ಬ ಏಕಾಂತಕ್ಕಾಗಿ ಅಲೆದಾಡುತ್ತಿದ್ದ;

ಹೂ ಮಾರುವವಳ ಮಡಿಲಲ್ಲಿ

ಆಗ ತಾನೇ ಹಾಲುಂಡ ಮಗುವೊಂದು

ನಿದ್ದೆಗೆ ಜಾರಿ ತನ್ನ ಹಾಲ್ದುಟಿಯಲ್ಲಿ

ನಗುವರಳಿಸುತ್ತಿತ್ತು."

"ವ್ಯಾಪಾರ ಮುಗಿಸಿ ಮನೆಗೆ ಹಿಂತಿರುಗುವವನ

ಜೋಳಿಗೆಯೊಳಗೆ ಒಂಟಿ ಕಾಲಿನ ಗೊಂಬೆ;

ಗೊಂಬೆ ಮಾರುವವನ ಮಗುವಿನೊಂದಿಗೆ

ಆಡುವ ಖುಷಿಯಲ್ಲಿ ಬೆಚ್ಚಗೆ ಮಲಗಿದೆ"

ಹಾಗೇಯ ಇಲ್ಲಿನ 'ಕಾಡು ಪಾಡು' 'ಇಬ್ಭಾಗ' 'ದನಗಾಹಿ ಹುಡುಗ' 'ನೆಲಮುಗಿಲ ಸೇತು' 'ಒಂಟಿನಿಲ್ದಾಣ' ಮುಂತಾದ ಕವಿತೆಗಳೂ ಇನ್ನೊಂದು ಮಗ್ಗಲನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿವೆ.. ಹೀಗೆ ಸುಂದರವಾಗಿ ಕಾಣುವ ಅಥವಾ ಪರಿಗಣನೆಗೇ ಒಳಪಟ್ಟಿರದ ಅನೇಕ ಸಂಗತಿಗಳು ತಮ್ಮೊಳಗೆ ಕಾಣದ ಹತ್ತಾರು ಭಾವಗಳನ್ನ ನೋವುಗಳನ್ನ ತುಂಬಿಕೊಂಡಿರುತ್ತವೆ ಅವುಗಳನ್ನು ಮುಟ್ಟಲು ನಮ್ಮ ಅಂತರಂಗದ ಕಣ್ಣುಗಳ ತೆರೆಯಬೇಕು..ಅಂತಹ ಪ್ರಯತ್ನಕ್ಕಾಗಿ ಅನುಪಮಾ ಅವರನ್ನು ಅಭಿನಂದಿಸುತ್ತೇನೆ..

ಅದೇ ಮಾದರಿಯಲ್ಲಿ ಇನ್ನೊಂದು ಸಂಗತಿ ಇವರ ಕವಿತೆಗಳಲ್ಲಿ ಕಂಡುಬರುತ್ತದೆ. ಅಭಿವೃದ್ಧಿ ಎಂಬ ಕಾಲದ ಜೊತೆಗಿನ ಬದಲಾವಣೆ ಹೇಗೆ ಹಳೆಯ ಭಾವನಾತ್ಮಕ ಸಂಗತಿಗಳನ್ನು ಹೊಸಕಿ ಹಾಕುತ್ತಾ ಬೆಳೆಯುತ್ತಿದೆ ಎಂಬುದನ್ನ ಬಹಳ ವಿಷಾದದಿಂದ ಪ್ರಸ್ತಾಪಿಸುತ್ತಾರೆ..

'ತೀರದ ಅಳು' ಕವಿತೆಯಲ್ಲಿ ಊರಿನ ಜೀವಂತಿಕೆಯನ್ನೇ ತುಂಬಿಕೊಂಡಿದ್ದರೂ ಕಾಲುದಾರಿಯಾಗೇ ಉಳಿದಿದ್ದ ನದಿ ತೀರದ ದಾರಿ ಮರಳು ದಂದೆಯಿಂದಾಗಿ

"ಕವಲೊಡೆದು ಹೆದ್ದಾರಿಯಾಗಿ

ನದಿ ತೀರದಿಂದ ನಗರದ ಮಳಿಗೆಯವರೆಗೂ ತಲುಪಿದೆ"

"ಈಗ

ಮಡಿವಾಳನ ಮಕ್ಕಳ ಕೈಗಳಿಗೂ

ಬಿಡುವಿಲ್ಲ

ಗುದ್ದಲಿಯೊಡನೆ ಮರಳುದಂಧೆಯೇ

ಮೋಜಿನಾಟವಾಗಿರುವಾಗ

ಕಪ್ಪೆಗೂಡಿನ ವಿನೋದ ಬೇಕಿಲ್ಲ." ಎನ್ನುತ್ತಾ ವಸ್ತುಸ್ಥಿತಿಯನ್ನು ಕಟ್ಟಿಕೊಡುತ್ತಾರೆ..

'ರಾಮುವಿನ ಸ್ವಗತ' ಕವಿತೆಯಲ್ಲಿ ಹಳ್ಳಿಯ ಮನೆಗಳು ಆಧುನಿಕತೆಗೆ ಹೇಗೆ ಬಲಿಯಾಗುತ್ತಿವೆ ಎಂಬುದನ್ನ ಚಿತ್ರಿಸುತ್ತದೆ

"ಕಣ್ಣಾಮುಚ್ಚೆ ಕಾಡೇಗೂಡೇ ಹಾಡುತ್ತಿದ್ದ

ಚಿತ್ತದಲ್ಲೂ ಅದ್ಯಾವುದೋ

ಪುಟ್ಟಗೌರಿಯದೇ ಚಿಂತೆ!

ಬಳಪ ಹಿಡಿದು ಅಕ್ಷರ ತಿದ್ದುವ

ಕೈಗಳಿಗೀಗ ಕಿಂಚಿತ್ತೂ ಬಿಡುವಿಲ್ಲ

ನಿರಂತರ ಚಾಟಿಂಗ್ ಮೆಸೇಜಿಂಗ್.

ಅವಲಕ್ಕಿ ಪವಲಕ್ಕಿ ಎನ್ನುತ್ತಾ

ಕೈ ಕೈ ಎಣಿಸುತ್ತಿದ್ದ ತಮ್ಮ

ಮೌಸ್ ಹಿಡಿದು ಆಡುತ್ತಿದ್ದಾನೆ

ಕಾರಿನ ರೇಸ್, ಸ್ಪೈಡರ್ ಮ್ಯಾನ್...."

ಹಾಗೆಯೇ 'ಭಾವೋತ್ಖನನ' ಕವಿತೆಯಲ್ಲಿ ಕವಿ ತನ್ನ ಗೆಳೆಯನನ್ನ ಮೊದಲ ಬಾರಿ ಮುಖಾಮುಖಿಯಾದ ಗ್ರಂಥಾಲಯ ಸ್ಟಾರ್ ಹೋಟಲ್ ಆಗಿರುವ ಬಗ್ಗೆ, ಮಲ್ಲಿಗೆ ಕೊಂಡು ನಾಚಿ ಕೆಂಪಗಾದ ಸಂತೆ ಮಾಲ್ ಗಳಾಗಿರುವ ಬಗ್ಗೆ,ಬುದ್ಧನೆದುರು ಕಿಸಾಗೋತಮಿಯ ಆಕ್ರಂದನ ನೋಡುತ್ತಾ ಭಾವಪರವಶವಾದ ರಂಗಮಂದಿರ ಚಿತ್ರಮಂದಿರವಾದ ಬಗ್ಗೆ ವಿಷಾಧದಿಂದ ಬಣ್ಣಿಸುತ್ತಾರೆ..ಆದರೆ ಈ ಎಲ್ಲಾ ಅಸಮಾಧಾನಾಗಳ ನಡುವೆಯೂ ಕವಿ ಒಂದು ಭರವಸೆಯನ್ನು ತಳೆಯುತ್ತಾರೆ ಹೀಗೆ "ಬಾ ಕುಳಿತು ಒಂದಿಷ್ಟು ವಿರಮಿಸೋಣ

ಕಾಲ ಬದಲಾಗಬಹುದು

ವೇಷ ಬದಲಾಗಬಹುದು

ಭಾವ ಬದಲಾದೀತೇ..!"

ಈ ಸಂಕಲನದ ಬಹುಮುಖ್ಯವಾದ ಕವಿತೆ 'ಅಜ್ಜ ಮತ್ತು ಆರಾಮ ಕುರ್ಚಿ'. ಅಜ್ಜ ಅಂಟಿಕೊಂಡೇ ಬದುಕಿದ ಆರಾಮ ಕುರ್ಚಿಯನ್ನೇ ರೂಪಕವಾಗಿಟ್ಟುಕೊಂಡು ಅಜ್ಜನ ಬದುಕಿನ ಶ್ರಮವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.ಇದು ಎಲ್ಲರಿಗೂ ಆಪ್ತವಾಗಬಲ್ಲ ಕವಿತೆ.ನಮ್ಮ ಅಜ್ಜನನ್ನೋ ಅಜ್ಜಿಯನ್ನೋ ನೆನಪಿಸಿಬಿಡುವ ಕವಿತೆ..

"ಆಗಸದ ಅರ್ಧ ಚಂದಿರನ ಕಂಡಾಗಲೆಲ್ಲ

ಅಜ್ಜನ ಆರಾಮ ಕುರ್ಚಿ ನೆನಪಾಗುತ್ತದೆ.

ಕುರ್ಚಿಯ ಬೆನ್ನು ಅಜ್ಜನಂತೆಯೇ ತುಸು ಬಾಗಿದೆ

ಅವರಿವರ ಭಾರ ಹೊತ್ತು ಆರಾಮ ನೀಡುವುದೇನು

ಸುಲಭದ ಮಾತೇ?

ಬಾಗಬೇಕು ತ್ಯಾಗಿಯಾಗಲು.

ಹಜಾರದ ಆಗುಹೋಗುಗಳಿಗೆಲ್ಲಾ

ಕಿವಿಯಾಗುವ ಆರಾಮ ಕುರ್ಚಿ

ಅಜ್ಜನ ಆತ್ಮಚರಿತ್ರೆ ದಾಖಲಿಸಿಕೊಂಡಿದೆ..."

ಇಲ್ಲಿನ ಅನೇಕ ಕವಿತೆಗಳಲ್ಲಿ ಅಮ್ಮ ಮತ್ತೆ ಮತ್ತೆ ಬಂದು ಹೋಗುತ್ತಾಳೆ ಆದರೆ 'ಅಮ್ಮ ಮತ್ತು ಒಲೆ' ಕವಿತೆಯಲ್ಲಿ ತೀವ್ರವಾಗಿ ಕಾಡುತ್ತಾಳೆ..

"ಒಲೆ ಅಮ್ಮನ ನೋವು ನಲಿವಿಗೆ

ಕಿವಿಯಾಗುವ ನಿತ್ಯ ಸಂಗಾತಿ

ಆಗಾಗ ಕೊಳವೆ ಹಿಡಿದು

ಪಿಸುಗುಟ್ಟುತ್ತಾಳೆ..

ತನ್ನ ಬೆರಳ ಸುಟ್ಟರೂ ಕೆಂಡದ ಮೇಲೆಯೇ

ಅಮ್ಮನಿಗೆ ಮಮಕಾರ

ಆಗಾಗ ಹಳಸಿನ ಬೀಜ, ಗೆಡ್ಡೆ ಗೆಣಸು ಕೊಡುತ್ತಾಳೆ..

ಉರಿ ತುಸು ಹೆಚ್ಚೇ ದಗದಗಿಸುತ್ತದೆ

ಅಮ್ಮನ ಕೋಪ ಒಲೆಗಷ್ಟೇ ಸೀಮಿತ..."

ಹೀಗೇ ಹೆಣ್ಣಿನ ಕಾರುಣ್ಯವನ್ನು, ಅಸಹಾಯಕತೆಯನ್ನು ತಣ್ಣನೆ ದ್ವನಿಯಲ್ಲಿ ಕಟ್ಟಿಕೊಡುತ್ತಾರೆ..

ಅನುಪಮ ಅವರ ಕವಿತೆಗಳ ವಿಶೇಷತೆಯೆಂದರೆ ಅವರು ಎಲ್ಲಿಯೂ ತಮ್ಮ ನಿಲುವನ್ನು ಹೇರುವ ಮೂಲಕ ಕವಿತೆಯನ್ನು ಅಂತ್ಯಗೊಳಿಸಿಲ್ಲಾ, ವಸ್ತುಸ್ಥಿತಿಯನ್ನ ತೆರೆದಿಟ್ಟು ಓದುಗನ ಮೇಲೆ ನಿರ್ಧಾರವನ್ನು ಬಿಟ್ಟಿದ್ದಾರೆ..

ಅನೇಕ ಕಡೆ ಹೇಳಿಕೆಯಾಗಿಬಿಡುವಂತಹ ಸಂಗತಿಗಳನ್ನು ಜಾಗೃತೆಯಿಂದ ಕಾವ್ಯದ ಲಹರಿಯಲ್ಲೇ ಕಟ್ಟುವ ಪ್ರಯತ್ನಮಾಡಿದ್ದಾರೆ.. ಭಾಷೆಯನ್ನು ಮೃದುವಾಗಿಯೂ, ಹಿತವಾಗಿಯೂ ಬಳಸಿಕೊಂಡಿದ್ದಾರೆ..

ಇನ್ನೂ ಕೆಲವು ಕವಿತೆಗಳ ಕುರಿತು ಬರೆಯಬಹುದಾದರೂ ಇವುಗಳ ನಡುವೆ ಬಂದು ಹೋಗುವ ಹನಿಗವಿತೆಗಳು ನಿಜಕ್ಕೂ ಅನುಪಮಾ ಅವರ ಬರವಣಿಗೆಯ ಕೌಶಲ್ಯವನ್ನು ಸೂಚಿಸುತ್ತಿವೆ.. ಅಂತಹ ಕೆಲವು ಮಿಂಚಿನಂತಹ ಹನಿಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ..

"ನಕ್ಷತ್ರಗಳು ನಗುವ ಸದ್ದು

ಕೇಳಬಹುದು ನೀವೂ

ಲೋಕದ ನಿಂದನೆಗಳಿಗೆ

ಕಿವಿಗೊಡದಿದ್ದರೆ ಮಾತ್ರ."

"ಲೋಕದ ಕಣ್ಣಿಗೆ

ಚಿಟ್ಟೆಯ ಹಸಿವು

ಮೋಹದಂತೆಯೋ,

ಚಂಚಲತೆಯಂತೆಯೋ,

ಲಂಪಟತನದಂತೆಯೋ ಕಂಡರೆ

ಸೋಜಿಗವೇನಿಲ್ಲ ಬಿಡಿ!

ಲೋಕಕ್ಕೆ ಕಾಣುವುದು

ಬಣ್ಣದ ಬದುಕೇ ಹೊರತು

ಬದುಕ ಹಿಂದಿನ ಹಸಿವಲ್ಲ"

"ನಿದಿರೆ ತೊರೆದ ನಿಶಾಚರಿ ಚಂದಿರ

ಬಾನೆಲ್ಲ ಅಲೆಯುತ್ತಿದ್ದ

ನಮ್ಮೂರ ಕೊಳದ ಮಡಿಲು

ತಂಪೆನಿಸಿ

ಅಲ್ಲೇ ಒಂದಿಷ್ಟು ವಿರಮಿಸಿದ"

"ಬಿದ್ದ ಬಿರುಮಳೆಯ ರಭಸಕ್ಕೆ

ಎಂದೋ ಮಣ್ಣಿನಡಿ ಮರೆಯಾಗಿದ್ದ

ಬೀಜವೊಂದರ ಮಿಸುಕಾಟ ಕವಿತೆ"

"ನಿಲ್ಲು ಗೆಳೆಯ

ನಾವಂದು ಕೈಮುಗಿದು

ಒಲವನ್ನ ಜನುಮದಾಚೆಗೂ

ಉಳಿಸಿಕೊಡೆಂದು ಬೇಡಿಕೊಂಡ

ಗುಡಿ ಗೋಪುರದ ಹಾದಿ ಇದಲ್ಲ,

ಧರ್ಮದ ಅಫೀಮು ಕುಡಿದು

ತಮ್ಮವರ ಶ್ರೇಷ್ಟತೆಯನ್ನು ಎತ್ತಿಹಿಡಿಯಲು

ಕಟ್ಟಿಕೊಂಡ ಮಹಲುಗಳ ದಾರಿಗಳಿವು"

"ದಡದಿಂದ ಬೀಸಿದ ಕಲ್ಲು

ಘಾಸಿಗೊಳಿಸಿದ್ದು ನದಿಯನ್ನಷ್ಟೇ ಅಲ್ಲ

ಮಡಿಲಲ್ಲಿ ನಿದ್ರಿಸುವ ಚಂದ್ರನನ್ನೂ"

"ಜಗವ ಸುತ್ತುವ ಅಲೆಮಾರಿ ಸೂರ್ಯ

ಬಚ್ಚಿಟ್ಟುಕೊಳ್ಳಲು ಜಾಗ ಬೇಡುತ್ತಾನೆ

ಕಡಲು ಅವನ ವಿರಾಮ ಧಾಮ..

*

ತೀರ ಸವರಿ ನಿಲ್ಲದೇ ಓಡುವ ಅಲೆ

ಒಂದಾದರೂ ಸ್ವಂತವೇ

ಅಪ್ಪುಗೆಗೆ ಮೈಯ್ಯೊಡ್ಡಿ ನಿಂತ ಬಂಡೆಗಲ್ಲಿಗೆ..."

"ತಾರಸಿಯ ಮೇಲೆ ಹಸಿ ಹಪ್ಪಳ ಸಂಡಿಗೆ

ಒಣಗಬೇಕು ಕುಗ್ಗಿ

ಮಳೆಗಾಲದಲ್ಲಿ ಹೂವಾಗಿ ಅರಳಲು.."

"ಕಂಕುಳಲ್ಲಿ ಅಳುವ ಕೂಸು

ಕೈಯಲ್ಲಿ ಅನ್ನದ ಬಟ್ಟಲು

ಕಂದನ ಪುಟ್ಟ ಕಂಗಳಿಗೆ

ನಗುವ ಮಾವನನ್ನು ತೋರಿಸುತ್ತಾಳೆ

ಕೈ ಬೀಸಿ ಕರೆಯುತ್ತಾಳೆ

ಆಕಾಶ ಅವಳ ತವರುಮನೆ.."

ಹೀಗೇ ಆಪ್ತವಾದ ಸಾಲುಗಳ ಮೂಲಕ ಅನುಪಮ ಅವರು " ತೇಲಿ ಬಿಟ್ಟ ಹೂ" ನಿಮ್ಮೆಲ್ಲರನ್ನು ತಲುಪಲಿ...ಅವರ ಚೊಚ್ಚಲ ಸಂಕಲನಕ್ಕೆ ಅಭಿನಂಧಿಸುತ್ತಾ.. ಕವಿತೆಯೊಂದು ಕುಸುರಿ ಕೆಲಸವಿದ್ದಂತೆ ತಿಕ್ಕಿ ತೀಡಿ ತಿದ್ದಿದಷ್ಟೂ ಹೊಳೆಯುತ್ತದೆ.. ಮುಂದಿನದಿನಗಳಲ್ಲಿ ಈ ಕವಿ ಹೆಚ್ಚೆಚ್ಚು ಬರೆಯಲಿ ಪ್ರಕಟಿಸಲಿ ಎಂದು ಹಾರೈಸುತ್ತಾ..

ಸಚಿನ್ ಅಂಕೋಲ