Article

ದಿ ಮಾಸ್ಟರ್ ಪೀಸ್ ‘ತೇಜೋ ತುಂಗಭದ್ರಾ’

ಚರಿತ್ರೆಯನ್ನು ವಾಸ್ತವದಲ್ಲಿ ದಾಖಲೆಯಂತೆ ನೀಡದೆ ಪಾತ್ರಗಳ ಮೂಲಕ ಕಟ್ಟಿಕೊಡುವ ಕುಸುರಿ ಕೆಲಸ ಸವಾಲಿನದ್ದೂ ಹೌದು ಹಾಗೇ ಅತ್ಯಂತ ಸಂವೇದನಾತ್ಮಕ ಕ್ರಿಯಾಶೀಲ ಕೆಲಸವೆನ್ನುವುದು ಅಷ್ಟೇ ನಿಜ. ಪಾತ್ರಗಳ ಮುಖಾಂತರ ಚರಿತ್ರೆಯ ಆಯಾಮಗಳಿಗೆ, ಅದು ತೆರೆದುಕೊಳ್ಳುವ ಕಾಲಘಟ್ಟಗಳಿಗೆ, ತೆಗೆದುಕೊಳ್ಳುವ ತಿರುವುಗಳಿಗೆ, ಹೊರಳಿಸುವ ಮಗ್ಗುಲುಗಳಿಗೆ ಚ್ಯುತಿಯಾಗದಂತೆ ಪ್ರಸ್ತುತ ಪಡಿಸುವುದಿದೆಯಲ್ಲ, ಬರಹಗಾರನೊಬ್ಬನ ಮಟ್ಟಿಗೆ ಅದು ನಿಜವಾದ ದೀರ್ಘ ತಪಸ್ಸು. ಇಂತದ್ದೊಂದು ತಪಸ್ಸಾಚರಿಸಿ ‘ತೇಜೋ ತುಂಗಭದ್ರಾ’ ಎನ್ನುವ ಮಹತ್ತರ ಕಾದಂಬರಿಯನ್ನು ಕನ್ನಡಿಗರಿಗೆ ಕೊಟ್ಟ ಹೆಗ್ಗಳಿಗೆ ನನ್ನ ಪ್ರೀತಿಯ ಬರಹಗಾರ ವಸುದೇಂದ್ರರದ್ದು. ನನ್ನ ಇನ್ನೊಬ್ಬ ಮೆಚ್ಚಿನ ಕಾದಂಬರಿಕಾರ ಡಾ. ಕೆ.ಎನ್ ಗಣೇಶಯ್ಯ ಹೇಳಿರುವಂತೆ ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ಮೈಲಿಗಲ್ಲು ಎನ್ನುವುದು ಶತಪ್ರತಿಶತ ನಿಜ.

ಪೋರ್ಚೀಗೀಸರ ಲಿಸ್ಬನ್ ನಗರದ ತೇಜೋ ನದಿ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ತುಂಗಭದ್ರಾ ನದಿಯನ್ನು ಸೇರುವುದು ಈ ಕಾದಂಬರಿಯ ಒನ್ ಲೈನ್ ಸ್ಟೋರಿ. ಅದೆಲ್ಲೋ 24 ಸಾವಿರ ಮೈಲುಗಳಾಚೆಗಿನ, ಸಾಗರದಲ್ಲಿ ಗಾವುದ ಯೋಜನ ದೂರ ಹಾದು ಸೇರಬೇಕಾದ ತೇಜೋ ನದಿ ಅದು ಹೇಗೆ ತುಂಗಭದ್ರಾ ಸೇರುತ್ತದೆ ಎನ್ನುತ್ತೀರಾದರೆ ನೀವು ಕಾದಂಬರಿಯನ್ನು ಓದಬೇಕು. ಎರಡು ವಿಭಿನ್ನ ನಾಗರೀಕತೆಗಳ ಧರ್ಮ-ಕರ್ಮ ಸಂಸ್ಕೃತಿ-ಜೀವನಶೈಲಿ, ದೇಶಾಚಾರ-ಕರ್ಮಟತನಗಳೆಲ್ಲವೂ ಕಾದಂಬರಿಯಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿದೆ ನಿಜಾರ್ಥದಲ್ಲಿ ಬೆತ್ತಲಾಗಿದೆ. ತೇಜೋ ತುಂಗಭದ್ರಾ ಎನ್ನುವ 1492 ರಿಂದ 1518ರ ನಡುವಿನ 26 ವರ್ಷಗಳ ನಡುವಿನ ಕಥೆಯನ್ನು ಒಂದು 15 ಸೆಂಟೀಮೀಟರ್ ಅಳತೆಮಾಪನದಲ್ಲಿ ತೋರಿಸುವುದಾದರೆ, ಮೊದಲ 5 ಸೆಂಟೀ ಮೀಟರ್ ತನಕ ತೇಜೋ ನದಿಯಿಂದಲೇ ಆರಂಭವಾಗುತ್ತದೆ. ಲಿಸ್ಬೆನ್ ನಗರ, ಮಸಾಲೆ ದಾಸ್ತಾನು, ಮ್ಯಾನ್ಯುಯೆಲ್ ಮಹಾಪ್ರಭುಗಳ ಆಡಳಿತ, ಕ್ರೈಸ್ತರು, ಯಹೂದಿಗಳ ಮೇಲಿನ ಅಸಹಿಷ್ಟುತೆ, ಯಹೂದಿಗಳ ವ್ಯಾಪಾರಿ ನೀತಿ, ಎರಡು ಯುವ ಜೀವಿಗಳ ನವಿರಾದ ಸ್ನೇಹ-ಪ್ರೀತಿ ಇತ್ಯಾದಿ ಇತ್ಯಾದಿ. ಇಲ್ಲಿ ಗೇಬ್ರಿಯಲ್, ಬೆಲ್ಲಾ, ಬೆನ್ಯುಲ್, ಆಂಟೋನಿಯೋ ಕಥೆ ಹೇಳಲು ಶುರು ಮಾಡುತ್ತಾರೆ. ಇತ್ತ ನಂತರದ ಕಥೆಯನ್ನು ಹಿಮ್ಮುಖವಾಗಿ ಆರಂಭಿಸುತ್ತಾರೆ ವಿಜಯನಗರದ ಪ್ರಜೆಗಳಾದ ಹಂಪಮ್ಮ, ಚಂಪಕ್ಕ, ಗುಣಸುಂದರಿ, ಅಂಣಂಭಟ್ಟರು, ಅಡವಿ ಸ್ವಾಮಿ, ಮಾಪಳನಾಯಕ, ತೆಂಬಕ್ಕೆ, ಕೇಶವ, ಈಶ್ವರಿ. ನಿಮಗೆ ಈ ಹೊತ್ತಿನಲ್ಲಿ ಅಮ್ಮದಕಣ್ಣ ಯಾರು ಎಂದು ತಿಳಿಯುವುದಿಲ್ಲ. ಅಳತೆಗೋಲಿನಲ್ಲಿ 5 ಸೆಂಟೀಮೀಟರ್ ನಂತರ ತುಂಗಭದ್ರದ ಕಥೆ ಶುರುವಾದರೂ ಅದು ಕೊನೆಯಿಂದ ಪ್ರಾರಂಭವಾಗುವಂತೆ ಭಾಸವಾಗುತ್ತದೆ. ಕನ್ನಡದ ಮಟ್ಟಿಗೆ ಈ ಶೈಲಿ ಅತ್ಯಂತ ಹೊಸತು.

ತೇಜೋ-ತುಂಗಭದ್ರಾದಲ್ಲಿ ಅತ್ಯಂತ ಕಾಡುವುದು ಧರ್ಮವೆನ್ನುವ ಬೊಗಳೆ ಕಂದಾಚಾರದಿಂದ ಆಗುವ ಅನಾಹುತಗಳು. ಮಾನವೀಯತೆಯನ್ನೇ ಮೆಟ್ಟಿ ನಿಲ್ಲುವ ಧರ್ಮದ ಕುರುಡು ನರ್ತನ ಓದುಗರನ್ನು ನಡು ನಡುವೆ ಆರ್ದ್ರರನ್ನಾಗಿಸುತ್ತದೆ. ಎಷ್ಟೋ ನೂರು ವರ್ಷಗಳ ಹಿಂದೆ ದಯಾಮಯ ಏಸು ಕ್ರಿಸ್ತನನ್ನು ಯಹೂದಿಗಳ ಯಾರೋ ಶಿಲುಭೆಗೇರಿಸಿದ್ದ ಎಂದು ವರ್ತಮಾನದಲ್ಲಿ ಯಹೂದಿಗಳನ್ನು ಕಂಡಲ್ಲಿ ಕೊಲ್ಲುವ ಚರ್ಚ್ ಹಾಗೂ ಪೋಪ್ ಎನ್ನುವ ಧಾರ್ಮಿಕ ವ್ಯವಸ್ಥೆ. ಯಹೂದಿಗಳ ವ್ಯಾಪಾರಿ ವರ್ತನೆ, ಆರ್ಥಿಕ ಅಹಂಕಾರ, ನೆಲೆಯಿಲ್ಲದ ಪರದಾಟ, ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿಯುವ ವಾಸ್ಕೋಡಗಾಮಾ, ಭಾರತದಿಂದ ಮಸಾಲೆ ಪದಾರ್ಥ ಬಂದ ನಂತರ ಸಿರಿವಂತಿಕೆಯ ಹಮ್ಮಿನಲ್ಲಿ ರಾಕ್ಷಸನ ಮೆರೆಯುವ ಪೋರ್ಚುಗಲ್ಲರ ದಾರ್ಷ್ಟ್ಯ ಕಾದಂಬರಿಯ ಮಹತ್ವದ ಘಟ್ಟ.

ನಾವು ಇತಿಹಾಸದಲ್ಲಿ ಓದಿಕೊಂಡಿದ್ದು ವಾಸ್ಕೋಡಗಾಮ ಭಾರತಕ್ಕೆ ವಲಸೆ ಮಾರ್ಗ ಕಂಡುಹಿಡಿದ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನಿಗೆ ಪರ್ಷಿಯನ್ ಕುದುರೆಗಳನ್ನು ಆಲ್ಬುಕರ್ಕ ತಂದೊದಗಿಸಿದ ಎನ್ನುವುದಷ್ಟೆ. ಇದರ ಹಿನ್ನೆಲೆ ಮುನ್ನೆಲೆಯಲ್ಲಿ ಇದೇ ಗಾಮ ಸಾಹೇಬ, ಇದೇ ಆಲ್ಬುಕರ್ಕನ ಪೈಶಾಚಿಕ ಮುಖಗಳನ್ನು ಪರಿಚಯಿಸುತ್ತದೆ ಈ ಕಾದಂಬರಿ. ಈ ಪೋರ್ಚುಗಲ್ ದೊರೆಗಳ ಮುಸ್ಲೀಂ, ಯಹೂದಿ ದ್ವೇಷ, ಮತಾಂತರ, ಹೋದಲೆಲ್ಲಾ ತಮ್ಮ ವಸಾಹತು ಧ್ವಜ ನೆಡುವ ಸಾಮ್ರಾಜ್ಯ ಶಾಹಿ ನೀತಿಗಳು ಅತ್ಯಂತ ಸಾದ್ಯಾಂತವಾಗಿ ಕಾದಂಬರಿಯಲ್ಲಿ ನಿರೂಪಿಸಲ್ಪಟ್ಟಿವೆ.

ಕಾದಂಬರಿಯ ದುರಂತ ನಾಯಕ ಗೇಬ್ರಿಯಲ್ ಹುಟ್ಟಿನಿಂದ ಕ್ರೈಸ್ತ, ಪ್ರೀತಿಸುವುದು ಯಹೂದಿ ಬೆಲ್ಲಾಳನ್ನು, ಅವಳಪ್ಪನ ಹಣದ ಅಹಂಕಾರಕ್ಕೆ ಪ್ರತಿಯಾಗಿ ಸಿರಿವಂತನಾಗಿ ಬೆಲ್ಲಾಳನ್ನು ವರಿಸಲು ಹೊರಡುವುದು ಭಾರತಕ್ಕೆ; ತಲುಪುವುದು ಗೋವಾ. ಈ ನಡುವಿನ ನಾವಿಕ ಜೀವನದ ಕಷ್ಟ ನಷ್ಟಗಳು, ಗೋವಾದಲ್ಲಿ ಬದುಕಿಗಾಗಿ ಸುಲ್ತಾನ್ನ ಮೊರೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅಹಮದ್ ಖಾನ್ ಆಗುವುದು. ಆದರೆ ಮತ್ತೆ ತನ್ನದೇ ಪೋರ್ಚುಗಲ್ ದೊರೆ ಆಲ್ಬುಕರ್ಕನ ಕ್ರೌರ್ಯಕ್ಕೆ ತುತ್ತಾಗಿ ಕಿವಿ ಮತ್ತು ಮೂಗು ಕುಯ್ಯಿಸಿಕೊಂಡು ಕುರೂಪಿಯಾಗುವುದು ಇವೆಲ್ಲವೂ ಚಾರಿತ್ರಿಕ ದುರಂತವೊಂದಕ್ಕೆ ಹಿಡಿದ ಕೈಗನ್ನಡಿಯಂತೆ ಭಾಸವಾಗುತ್ತದೆ. ಕೊನೆಗೆ ಈ ಗೇಬ್ರಿಯಲ್ ತನಗೆ ನೆರವಾಗುವ ವಿಜಯನಗರ ಸಂಸ್ಥಾನಕ್ಕೆ ನಿಷ್ಟನಾಗಿ ತೆಂಬಕಪುರದಲ್ಲಿ ತುಂಗಭದ್ರಾ ನದಿಯಲ್ಲಿ ಮೀನು ಹಿಡಿದು ಮತ್ತೆ ನದಿಗೆ ಬಿಡುವ ವಿಚಿತ್ರ ಮನಸ್ಥಿತಿಯ ಒಬ್ಬಂಟಿಗ ಅಮ್ಮದಕಣ್ಣನಾಗುತ್ತಾನೆ.
ವಿದೇಶಿ ಪೋರ್ಚುಗಲ್ ಮಗು ಹೇಗೆ ಪಂಪಾಪತಿಯಾಗುತ್ತದೆ? ಪಂಪಾಪತಿಯ ತಾಯಿ ಅಗ್ವೇದಳಿಗೂ ಗೇಬ್ರಿಯಲ್ ಗೂ ನಡುವಿನ ಸಂಬಂಧವೇನು? ತೇಜೋ ಮತ್ತು ತುಂಗಭದ್ರಾ ನಡುವಿನ ಕೊಂಡಿಯಾಗಿ ಅಗ್ವೇದ ಹೇಗೆ ಕಾರಣ? ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ಎಂದು ಹಾಡುವ ಪುರಂದರ ದಾಸರು! ಹಿಂದೂ ಹಂಪಮ್ಮ ಅಮ್ಮದಕಣ್ಣನ ಜೊತೆಯಾಗುವ ಪ್ರಸಂಗ! ಇವನ್ನೆಲ್ಲಾ ನೀವು ಓದಲೇಬೇಕಿದ್ದರೆ ಈ ಕೂಡಲೆ ಕಾದಂಬರಿ ಎತ್ತಿಕೊಳ್ಳಿ.

ಇದು ವಸುದೇಂದ್ರರ ಈವರೆಗಿನ ಎಲ್ಲಾ ಕೃತಿಗಳ ಪೈಕಿ ದಿ ಮಾಸ್ಟರ್ ಪೀಸ್. ಈ ಶೈಲಿಯ ಕಾದಂಬರಿಯನ್ನು ಕನ್ನಡ ಕಂಡಿದ್ದು ಎಸ್.ಎಲ್ ಭೈರಪ್ಪನವರಿಂದ. ಕಾದಂಬರಿ ಬರೆಯುವ ಮೊದಲಿನ ತಯಾರಿ ಹಾಗೂ ಹೋಂ ವರ್ಕ್ ಸಹ ಭೈರಪ್ಪನವರಂತೆಯೇ ಇದೆ. ಹಿಂದೊಮ್ಮೆ ಗಣೇಶಯ್ಯ ಮಾತಾಡುವ ಮಧ್ಯೆ ಹೇಳಿದ್ದರು, ಪೋರ್ಚುಗಲ್ ಗೆ ಭಾರತದಿಂದ ಹೊರಡುವ ಹಡಗಿನಲ್ಲಿ ಪ್ರಾಯಣಿಸುವ ಪ್ರಯಾಣಿಕರ ಮೇಲಂಗಿಗೆ ಜೇಬು ಇರುತ್ತಿರಲಿಲ್ಲ; ಕತ್ತರಿಸಲಾಗುತ್ತಿತ್ತು. ಯಾಕೆಂದರೆ ಇಲ್ಲಿಂದ ಒಂದೇ ಒಂದು ಮುಷ್ಟಿ ಕಾಳು ಮೆಣಸು ಕದ್ದೊಯ್ದರು ಪೋರ್ಚುಗಲ್ ನಲ್ಲಿ ಅವನು ಒಂದೆಕೆರೆ ಜಮೀನು ಖರೀದಿಸಬಹುದಿತ್ತು ಎಂದು. ಅವರ ಮಾತನ್ನು ಇನ್ನಷ್ಟು ಅರ್ಥ ಮಾಡಿಸಿದ್ದು ತೇಜೋ ತುಂಗಭದ್ರಾ ಕಾದಂಬರಿ.

ನಾನು ಸಾಮಾನ್ಯವಾಗಿ ಪುಸ್ತಕವೊಂದರ ಬಗ್ಗೆ ಬರೆಯುವುದು ಕಡಿಮೆ. ಅದು ತೀರಾ ಕಾಡದ ಹೊರತು ಏನನ್ನೂ ಗೀಚಲಾರೆ. ಮೊದಲ ಮುದ್ರಣಕ್ಕೆ ಮೊದಲೇ ಪ್ರತಿಗಳು ಖಾಲಿಯಾದ ದಾಖಲೆ ಹೊಂದಿದ ತೇಜೋ ತುಂಗಭದ್ರಾವನ್ನು ಹಿಡಿದಿದ್ದೂ ತಡವಾಗಿ, ಮುಗಿಸಿದ್ದು ತಡವಾಗಿ ಕೊನೆಗೆ ಹೀಗೊಂದು ಮನಸಿಗೆ ತೋಚಿದ ಅಭಿಪ್ರಾಯ ಗೀಚುತ್ತಿರುವುದೂ ತಡವಾಗಿಯೇ. ಓದು ಮುಗಿಸಿ ವಾರವೆ ಆಗಿದ್ದರು ಕೊಂಚ ಕಾದಂಬರಿಯ ಹ್ಯಾಂಗ್ ಒವರ್ ಕೊಂಚ ಸೋಮಾರಿತನದ ಕಾರಣ ಇದಿಷ್ಟು ಬರೆಯಲು ತಡವಾಯಿತು. ಹೀಗಾಗಿ ವಸುದೇಂದ್ರರಲ್ಲಿ ಕ್ಷಮೆಯಾಚಿಸುತ್ತಾ,,

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ವಿಶ್ವಾಸ್ ಭಾರಾದ್ವಾಜ್