Article

ವಿಚಾರಸರಣಿಯ ‘ಅಂಗದ ಧರೆ’

"…ಗುರುವಾದವನಿಗೆ ಅರಿವಾಗದ ಬಹಳಷ್ಟು ವಿಚಾರಗಳಿವೆ ಎಂದು ಒಪ್ಪಿಕೊಳ್ಳುವ ಗುರು ನಾನಾಗಬೇಕು.
……ಅರಿವಿಲ್ಲದಿರುವುದನ್ನು ಅಸಮಂಜಸ ವ್ಯಾಖ್ಯಾನದ ಮೂಲಕ ಪ್ರತಿಷ್ಠಾಪಿಸುವ ಭಂಡ ಗುರುವಿನ ದಾರಿ ನನಗೆ ಬೇಡ‌‌‌‌…
- ಸಿದ್ದರಾಮ ('ಅಂಗದ ಧರೆ' ಕಾದಂಬರಿಯ ಪಾತ್ರಧಾರಿ) ಪು.12

ಗುರುಬಸವನಿಂದ ಆರಂಭವಾದ ಕಾದಂಬರಿ ಗುರುಬಸವನ ವಿಚಾರಸರಣಿಯೊಂದಿಗೆ ಮುಕ್ತಾಯವಾಗುತ್ತದೆ.

ಪುರಾತನ ಕಾಲದಿಂದಲೂ ನಮ್ಮ ಸಮಾಜದ ಭದ್ರಬುನಾದಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಕೇಂದ್ರಸ್ಥಾನ, ಸಮಾಜದ ಓರೆಕೋರೆಗಳನ್ನು ತಿದ್ದುವ ಪವಿತ್ರಸ್ಥಾನ, ಅಧ್ಯಾತ್ಮಿಕ, ಭೌತಿಕ ಜ್ಞಾನ ಪಸರಿಸುವ ಪುಣ್ಯಸ್ಥಾನ, ಸಮಾಜ ಸುವ್ಯವಸ್ಥಿತವಾಗಿ ನಡೆಯಲು ಮಾರ್ಗಗಳನ್ನು ತೋರಿಸುವ ಕೇಂದ್ರ, ಸರಿತಪ್ಪುಗಳನ್ನು ತಿದ್ದುವ ಧಾರ್ಮಿಕ ಕೆಂದ್ರಗಳ ಆಂತರಿಕ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಮನಸ್ಸುಗಳ ಅಂತರಂಗವನ್ನು ಶುದ್ಧಿಗೊಳಿಸುವ ಕಾರ್ಯವನ್ನು ಕಾದಂಬರಿ ಮಾಡಿದೆ.

ಸಿದ್ಧರಾಮ, ರೇವಕ್ಕ, ಷಡಕ್ಷರಿ, ಗುರುಬಸವ, ಅಕ್ಕಮಹಾದೇವಿ, ಮಲ್ಲಿಕಾರ್ಜುನಯ್ಯ ಪ್ರಮುಖ ಆರು ಪಾತ್ರಗಳ ಮೂಲಕ ಕಾದಂಬರಿ ಬಹಳಷ್ಟು ವಿಚಾರಧಾರೆಗಳನ್ನು ಅನುಭವಕ್ಕೆ ತಂದು ಕೊಡುತ್ತದೆ. 

ಬದಲಾವಣೆ ಬಯಸುವ ಮನಸ್ಸು ಒಂದು ಕಡೆಯಾದರೆ, ಸ್ಥಿರವಾಗಿ ನಿಲ್ಲುವ ಮನಸ್ಸು ಇನ್ನೊಂದು ಕಡೆ. ಅವೆರಡರ ನಡುವಿನ ಸಂಘರ್ಷದ ಹಾದಿಯ ಮೇಲೆ ಕಾದಂಬರಿ ಬೆಳಕನ್ನು ಚೆಲ್ಲಿದೆ‌.

ಗುರುವಿನ ಹುಡುಕಾಟದಲ್ಲಿ ನಿರತನಾದ ಸಿದ್ದರಾಮರು, ರೇವಕ್ಕಳ ಮಾತುಗಳಿಗೆ ’ಹೂಂ”ಗುಡುತ್ತಲೇ ತಮ್ಮನ್ನು ತಾವು ಅರಿತುಕೊಳ್ಳುವಲ್ಲಿ ಎಡವಿದರು. ಕೊನೆಗಾಲಕ್ಕೆ ಬಹಳಷ್ಟು ಕೊರಗಿದರು. ಬದಲಾವಣೆಗೆ ಬಯಸಿದರು, ಆದ ಬದಲಾವಣೆಗೆ ಹೊಣೆ ಮಾಡಿ ಮುನ್ನಡೆದರು.

'ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ' ಎಂಬ ಮಾತಿನಂತೆ ಗುರುವಿನ ಹುಡುಕಾಟಕ್ಕೆ ಹೊರಟ ಸಿದ್ದರಾಮರು ಆರಂಭದಲ್ಲಿ ತಮ್ಮ ದೇ ಆದ ಧ್ಯೇಯಗಳನ್ನು ಹೊಂದಿದ್ದರು. ಗುರು ಹೇಗಿರಬೇಕು ಎಂದರೆ ತನಗೆ ಅರಿಯದಿರುವ ಬಹಳಷ್ಟು ವಿಚಾರಧಾರೆಗಳನ್ನು ಅರಿವಿಲ್ಲವೆಂದು ಒಪ್ಪಿಕೊಳ್ಳಬೇಕು. ಜನರೊಡನೆ ಜನರ ಕಷ್ಟಕಾರ್ಪಣ್ಯಗಳಿಗೆ ನೆರವಾಗಿ ಗುರುವಿರಬೇಕು, ಸೋತವರ ಬಲವಾಗಿ, ಬಡವರ ಜೊತೆಯಾಗಿ ಬದುಕುವಂತಹ ವಿಶಿಷ್ಟ ವಿಚಾರಸರಣಿಗಳ ಗುರು ನಾನಾಗಬೇಕು ಎಂಬ ಆಂತರಿಕ ನಿರ್ಧಾರಗಳೊಂದಿಗೆ ಒಂದು ಸಣ್ಣ ಹಳ್ಳಿಗೆ ಬರುತ್ತಾರೆ‌. ಯತಿಗಳನ್ನು ಕಂಡು ಆರಂಭದಲ್ಲಿ ಗ್ರಾಮದವರು ಬಹಳಷ್ಟು ಹೆದರಿದರು. ತದನಂತರ ನಡೆದ ಎರಡು ಪವಾಡಗಳು ಸಿದ್ದರಾಮ ಯತಿಗಳನ್ನು ಜನರು ನೋಡುವ ಮನೋಭಾವವೇ ಬದಲಾಯಿತು. ಹಾಗೆಂದು ಸಿದ್ದರಾಮರೆಂದೂ ಬದಲಾಗಲಿಲ್ಲ. ಜನರೊಡನೆ ಸದಾ ಬೆರೆಯುತ್ತ ದೇವಾಲಯದ ಆವರಣದಲ್ಲಿ ಬೆಳಿಗ್ಗೆ ಸಾಯಂಕಾಲ ಬರುವ ಜನರಿಗೆ ಧಾರ್ಮಿಕ ಬೋಧನೆ, ಯೋಗಗಳನ್ನು ಹೇಳುತ್ತ,  ಕಾಲ ಕಳೆಯಲಾರಂಭಿಸಿದರು.

ತಮ್ಮ ಮನದೊಳಗಿರುವ ಬಹಳಷ್ಟು ಚಿಂತನೆಗಳನ್ನು ಪದೇ ಪದೆ ತಮ್ಮಷ್ಟಕ್ಕೆ ತಾವೇ ಮಥಿಸಿಕೊಳ್ಳುತ್ತ ಶುದ್ಧ ಮನಸ್ಸಿನವರಾಗಿದ್ದರು. ಆ ದೇವಾಲಯದ ಸ್ವಚ್ಚತೆ ಮಾಡುತ್ತ, ಸಿದ್ಧರಾಮರ ಮಡಿಬಟ್ಟೆಗಳನ್ನು ಒಗೆದು ಶುಚಿಗೊಳಿಸುತ್ತ ಬದುಕು ಆರಂಭಿಸಿದವಳು ಹದಿನೈದರ ಹುಡುಗಿ ರೇವಕ್ಕ. ಬಹಳಷ್ಟು ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಯತಿಗಳಿಂದ ಸದಾ ಪ್ರಶಂಸೆಗೆ ಪಾತ್ರಳಾಗುತ್ತಿದ್ದಳು. ದೇವಾಲಯದ ಆವರಣ ಸಣ್ಣ ಮಠವಾಗಿ ಮಾರ್ಪಾಡಾಯಿತು. ಬದಲಾವಣೆ ಕೇವಲ ಬಾಹ್ಯವಾಗಿಯಷ್ಟೇ ಅಲ್ಲದೇ, ಆಂತರಿಕವಾಗಿ ಸಿದ್ದರಾಮ ಯತಿಗಳಿಗೆ ಬಹಳಷ್ಟು ಉಪಯುಕ್ತ ಸಲಹೆಗಳನ್ನು ನೀಡುತ್ತ ರೇವಕ್ಕ ಮಠವನ್ನು ಬಹಳಷ್ಟು ಬದಲಾವಣೆಗೆ ಅಣಿಯಾಗಿಸಿದ್ದಳು.

ತಂದೆತಾಯಿಗಳಿಲ್ಲದ ಮಗು ಒಂದು ದಿನ ಮಠದ ಆವರಣದಲ್ಲಿ ಚೀರುವುದನ್ನು ಕಂಡು, ತಂದು ಗುರುಬಸವ ಎಂದು ನಾಮಕರಣ ಮಾಡಿ, ಸಾಕಿ ಸಲುಹಿದಳು. ರೇವಕ್ಕಳಿಗೆ ಒಂದು ಮಠದ ಕಾರ್ಯ, ಇನ್ನೊಂದು ಗುರುಬಸವನ ನೋಡಿಕೊಳ್ಳುವ ಕಾರ್ಯ ಇವೆರಡೂ ಬಹಳಷ್ಟು ಖುಷಿಕೊಡುವ ಸಂಗತಿಗಳಾಗಿದ್ದವು.

ದಿನಗಳುರುಳಿದಂತೆ ಷಡಕ್ಷರಿ ಎನ್ನುವ ಅನಾಥನೂ ಮಠಕ್ಕೆ ಸೇರಿದನು. ಮಠದ ಕಾರ್ಯವೈಖರಿಗಳಲ್ಲಿ ಸ್ಥಾನಗಿಟ್ಟಿಸಿಕೊಂಡನು. ಸಂಯಮದ ಬದುಕು ಸಾಗಿಸುತ್ತಿದ್ದ ಷಡಕ್ಷರಿ, ರೇವಕ್ಕಳ ಏಳಿಗೆಯನ್ನು ಸಹಿಸದೇ ಗುರುಬಸವನನ್ನು ತನ್ನ ಆಯುಧವನ್ನಾಗಿ ಬಳಸಿಕೊಳ್ಳಲಾರಂಭಿಸಿದನು. ರೇವಕ್ಕಳ ವಿರುದ್ಧ ಇಲ್ಲಸಲ್ಲದ ಹುರುಳಿಲ್ಲದ ಆರೋಪಗಳ ಸುಳ್ಳುಸುದ್ದಿಯನ್ನು ಹರಿಬಿಟ್ಟನು. ಗುರುಬಸವನಿಗೆ ತಲೆತುಂಬಿ ರೇವಕ್ಕ ’ನಿನ್ನ ತಾಯಿಯಲ್ಲ’ ಎಂದು ಹೇಳಿ ರೇವಕ್ಕಳಿಗೆ ಗುರುಬಸವ ಕೆಟ್ಟದಾಗಿ ಮಾತನಾಡುವಂತೆ ಮಾಡಿದನು. ಈ ಎಲ್ಲ ಮಾನಸಿಕ ಸಂಕಟಗಳ ಜೊತೆಗೆ ರೇವಕ್ಕ ಮಠದಲ್ಲಿ ಸಿದ್ದರಾಮರ ಅಭಯ ಆಶ್ರಯದಲ್ಲಿ ದಾಸೋಹ ಆರಂಭಿಸಿದ್ದಳು, ಮಠದ ಶಾಲೆ ಪ್ರಾರಂಭವಾಗಿತ್ತು. ಧ್ಯಾನಮಂಟಪ, ಲೈಬ್ರರಿ ಹೀಗೆ ಹತ್ತಾರು ಬದಲಾವಣೆಗಳು ಜರುಗಿದ್ದವು. ಇವುಗಳ ಉಸ್ತುವಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಲೇ ಹದಿನೈದರ ರೇವಕ್ಕ, ಹಿರಿಯಳಾಗಿ ಮಠದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಳು.

ರೇವಕ್ಕ, ಷಡಕ್ಷರಿಯ ವಂಚನೆಯಿಂದ ಪಾರಾಗಲು ಮಲ್ಲಿಕಾರ್ಜುನಯ್ಯನವರನ್ನು ಲೆಕ್ಕಪತ್ರಕ್ಕೆ ನೇಮಿಸಿದಳು. ಮಲ್ಲಿಕಾರ್ಜುನಯ್ಯನವರೂ ಆರಂಭದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿ ಮುಂದಾಲೋಚನೆ ಮಾಡಿ, ದುರಾಸೆಯಿಂದ ತನ್ನ ಮಗಳನ್ನು ಗುರುಬಸವನಿಗೆ ಕೊಟ್ಟು ಮದುವೆ ಮಾಡಿದರು. ಸಿದ್ದರಾಮರು ಮಠದಿಂದ ಬಹಳಷ್ಟು ದೂರವೇ ಉಳಿದರು. ಮಠದ ಪಕ್ಕದಲ್ಲೇ ಇರಲು ವ್ಯವಸ್ಥೆ ಮಾಡಿಕೊಂಡಿದ್ದರು. ಆಧ್ಯಾತ್ಮಿಕ ಹಿನ್ನಲೆಯಲ್ಲಿ ಸಾಧನೆಗೈಯುತ್ತಿದ್ದರು. ಬದಲಾವಣೆಗೆ ಬಯಸಿದ ಮನವೇ ಸ್ಥಿರವಾಗಿ ಉಳಿಯಿತು!

ಕೊನೆಗೆ ರೇವಕ್ಕ ಮಾಡಿದ ಎಲ್ಲ ಕಾರ್ಯಗಳನ್ನು ಗುರುಬಸವನ ಹೆಗಲಿಗೆ ಹಾಕಿ ಸಿದ್ದರಾಮರು ಹೊರಟರು. ನಿಸ್ವಾರ್ಥದಿ ಸೇವೆಗೈದ ರೇವಕ್ಕ ಕಣ್ಣೀರು ಹಾಕುತ್ತಲೇ ನಿಂತಳು. ಗ್ರಾಮೀಣ ಸೊಗಡಿನ ಭಾಷೆಯ 'ಅಂಗದ ಧರೆ' ಗಾತ್ರದಲ್ಲಿ ಚಿಕ್ಕದಾದರೂ ಓದುಗರನ್ನು ಬಹಳಷ್ಟು ಚಿಂತನೆಗೆ ಹಚ್ಚುವ ಕೃತಿಯಾಗಿದೆ. ಒಂದೇ ಗುಟುಕಿಗೆ ಓದಿ ಮುಗಿಸಿದೆ. ಇಡೀ ದಿನ ಪಾತ್ರಗಳು ನನ್ನೊಡನೆ ಮಾತಿಗಿಳಿದಂತೆ ಮನಸ್ಸಲ್ಲಿ ಶಾಶ್ಅವತವಾಗಿ ಅಚ್ಚು ಹಾಕಿವೆ. ರೇವಕ್ಕಳ ಬದುಕು ಇಷ್ಟವಾಯ್ತು. ಉತ್ತರ ಕಾರ್ನಾಟಕದ ಹಳ್ಳಿ ಸೊಗಡಿನ ಭಾಷೆ ಓದುಗರಿಗೆ ಇಷ್ಟವಾಗುತ್ತದೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ