Article

ವಿನೂತ ಪ್ರಯೋಗದ ‘ಎಲ್’

'L' ಕಾದಂಬರಿ ಓದು ಮುಗಿಸಿದಾಗ ಏನಿದು ಏನೂ ತಿಳಿಯಲೇ ಇಲ್ಲವಲ್ಲ ಎಂದೆನಿಸಿತು. ಅದೇ ಕಾದಂಬರಿಯ ಗುಂಗಿನಲ್ಲಿ ರಾತ್ರಯಿಡೀ ಕಳೆದಾಗ ಕನಸಲ್ಲೂ ಕೂಡ ಅಲ್ಲಲ್ಲಿ ಕವಿಯೆಯ ಕುರಿತಾದ ಕಾದಂಬರಿಯ ಬಹಳಷ್ಟು ಸಾಲುಗಳು ನನ್ನನ್ನು ತಟ್ಟಿ ಎಚ್ಚರಿಸಿದವು. 'ಅನುವಾದ ಎಂದರೆ ಮಕ್ಕಳ ಫೋಟೋ ತೆಗೆದಂತೆ. ಮಕ್ಕಳಂತಯೇ ಕಾಣಿಸುತ್ತದೆ‌ ಜೀವ ಇರುವುದಿಲ್ಲ.' ಈ ಸಾಲು ಬಹಳ ಕಾಡಿತು ನನ್ನ ಕನಸಲ್ಲಿ. ಕವಿತೆ ಎಂದರೆ ಬರೆದೊಡನೆ ಖಾಲಿತನ ಕಾಡುತ್ತದೆ. ನಮ್ಮೆಲ್ಲ ನೆನಪುಗಳನ್ನು ಭಾವತೀವ್ರತೆಗೆ ಒಳಪಡಿಸಿ ಪದ್ಯ ಬರೆದು ಮುಗಿಸುತ್ತೆವೆ. ಅಲ್ಲಿಗೆ ನಮ್ಮೊಳಗಿನ ಕವಿತೆ ಮುಗಿದಿರುತ್ತದೆ. ಅದು ಬರೆದ ಹಾಳೆಯಲ್ಲಿ ಸತ್ತುಬಿದ್ದಿರುತ್ತದೆ. ಸತ್ತಿರುವ ಕವಿತೆಯನ್ನು ಓದುವುದೆಂದರೇ ಆಗದು ಎನ್ನುವ ಕಾದಂಬರಿಯ ನಾಯಕ L ನ ಅಂತರಾಳದ‌ ತೊಳಲಾಟಗಳು ಪ್ರತಿಯೊಬ್ಬ ಓದುಗರ ತೊಳಲಾಟವೂ ಆಗಿರಬಹುದು ಆಗಿರಲಿಕ್ಕಿಲ್ಲ. ಕೊನೆಗೂ ಬೆಳಗೆದ್ದು ಕಾದಂಬರಿಯಲ್ಲಿ ಏನಿದೆ ಎಂಬ ಪ್ರಶ್ನೆ ಮರಳಿ ನನ್ನೊಳಗೆ ಮೂಡಿದಾಗ L ನಲ್ಲಿ ಹುದುಗಿರುವ ಸಾವಿರ ಸಾವಿರ ನೆನಪುಗಳ ಹಿಂದೆಯೂ ನನ್ನ ನೆನಪುಗಳಿವೆ, ಅವನ ನೋವಿನ ಮನದಲ್ಲಿ ನಮ್ಮದೂ ನೋವಿದೆ, ಅವನ ಅಳುವಿನಲ್ಲಿ ನಮ್ಮದೂ ಅಳುವಿದೆ ಎಂದೆನಿಸಿತು. ಕಾದಂಬರಿಯ ಓದುವಾಗ ನಾಯಕ L ನನ್ನು ಒಬ್ಬ ಪಾತ್ರಧಾರಿಯಾಗಿಯೇ ಕಾದಂಬರಿ ಓದು ಮುಗಿಸಿದೆ. ಹೀಗಾಗಿ ಅರ್ಥವಾಗಲಿಲ್ಲ. L ನಾನೇ ಆಗಿ ಕಾದಂಬರಿಯನ್ನು ಒಂದು ಸಾರಿ ರಿವೈಂಡ ಮಾಡಿದೆ ಕಾದಂಬರಿಯ ತಿರುಳು ತಿಳಿಯಿತು. ಈರುಳೆಯಂತೆ ಸುಮಾರು ಪದರುಗಳುಳ್ಳ L ಕಗ್ಗಂಟೆನಿಸಿದರೂ ಓದುತ್ತಾ ಓದುತ್ತಾ ಆಪ್ತವಾಗುತ್ತದೆ. ಕಾದಂಬರಿ ಒಂದೇ ಗುಕ್ಕಿಗೆ ಓದಿ ಅರ್ಥೈಸಿಕೊಂಡಿರುವೆ ಎನ್ನುವುದು ತಪ್ಪಾದಿತು. ವಿಭಿನ್ನ ಶೈಲಿಯ, ವಿನೂತನ ಪ್ರಯೋಗದ L ಕಾದಂಬರಿ ಇಷ್ಟವಾಯ್ತು.

ಕಾದಂಬರಿಯು ಮುಖ್ಯವಾಗಿ ಮೂರು ವಿಭಾಗಗಳನ್ನು ಒಳಗೊಂಡಿದ್ದು ಅಪ್ಪ, ಲೀಲಾವತಿ, ನಾನು ಹೀಗೆ ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. L ಅಂದ್ರೆ ಲಕ್ಷ್ಮಣ ನೀಲಂಗಿ. ಅವನ ಮನದಾಳದ ಕವಿತೆಯ ಹುಟ್ಟು ಸಾವು, ಕವಿತೆಯ ಅವಷ್ಯಕತೆ, ಕವಿತೆಯ ಉಗಮ, ಕವಿತೆಯೊಡನಾಟದ ಬದುಕಿನ ಕುರಿತಂತೆ ತನ್ನ ಬಾಲ್ಯದ ಬದುಕಿನೊಂದಿಗೆ ಕವಿತೆ ಆರಂಭವಾಗಿ ತಾಯಿಗೆ ಕವಿತೆಯ ಓದು ಎಂದರೆ ಇಷ್ವಾಗುತ್ತದೆ. ತಾಯಿಯು ತನ್ನ ಕಷ್ಟದ ದಿನಗಳನ್ನು ಮರೆಯಲು‌ ಮಗನಿಂದ ಕವಿತೆಗಳನ್ನು ಓದಿಸುತ್ತಿದ್ದಳು. ಅದರಲ್ಲೇ ಮುಗುಳ್ನಕ್ಕು ಸಂಭ್ರಮಿಸುತ್ತಿದ್ದಳು.

ಎರಡನೇ ಭಾಗದಲ್ಲಿ ಲೀಲಾವತಿ L ನ ಇಷ್ಟದ ಗೆಳತಿಯಾಗಿ ಅವನ ಬದುಕಿನ ಅವಿಭಾಜ್ಯ ಅಂಗವಾಗುತ್ತಾಳೆ. ಕವಿತೆಯನ್ನು ಇಷ್ಟಪಟ್ಟು L ನಿಂದ ಕವಿತೆಗಳನ್ನು ನಿರೀಕ್ಷಿಸುತ್ತಾಳೆ ಕವಿತೆಯೊಟ್ಟಿಗೆ ಭಾವಬಂಧ ಬೆಳೆಯುತ್ತದೆ. ಕೊನೆಗೆ ಲೀಲಾವತಿ ನೆನಪಾಗಿಯೇ ಉಳಿಯುತ್ತಾಳೆ. ಅವಳ ನೆನಪಲ್ಲಿ L ಕೊರಗುತ್ತಲೇ ಇರುತ್ತಾನೆ. L ಕಳಿಸಿದ ಪ್ರೇಮಕಾವ್ಯದ ಪತ್ರವೊಂದು ಲೀಲಾವತಿಗೆ ತಲುಪಿತ್ತು ನಿಜಾ. ಆದರೆ ಓದದೇ ಮರಳಿ ಅವಳಿಂದಲೇ L ಗೆ ತಲುಪಿದಾಗ L ಗಾದ ಸಂಕಟ ನೋವು ಅಷ್ಟಿಸ್ಟಲ್ಲ. ಹೇಳಲಾಗದ ಭಾವಲಹರಿಯೇ ಅಲ್ಲಿ ಬಿತ್ತರಗೊಂಡಿತ್ತು.

ಕೊನೆಯ ಭಾಗದಲ್ಲಿ L ಸದ್ಯದ ಪರಿಸ್ಥಿತಿಯ ಬದುಕಿನಲ್ಲಿ ತಾನಿರುವ ಬಗೆಯನ್ನು ಹೇಳಿದ್ದಾನೆ. ಅದರಲ್ಲಿ ಕಳೆದ ತಾಯಿಯ ನೆನಪಿನ ಕವಿತೆಗಳು, ಅಪ್ಪನ ನರಳಾಟದ ಕವಿತೆಗಳು, ಮೋಹಿನಿಯ ಮಲ್ಲಿಗೆ ಹೂವಿನ ಘಮದ ಕವಿತೆಗಳು, ಲೀಲಾವತಿಯ ಹಿಡಿಹಿಡಿ ನೆನಪುಗಳ ಕವಿತೆಗಳು, ಗುಳೇದಗುಡ್ಡದ ಶಿವಣ್ಣನ ನೆನಪಿನ ಕವಿತೆಗಳು, ಶಂಕರ ಪಲ್ಲವಿಯರ ಪ್ರೇಮದ ಪಿಸುಮಾತಿನ ಕವಿತೆಗಳು ಹಾಗೂ L ನ ಬಹಳಷ್ಟು ಕವಿತೆಗಳನ್ನು ಇಲ್ಲಿ ಕಾಣಬಹುದು.

"ಇದು ಕಾದಂಬರಿಯಲ್ಲ, ಕಾವ್ಯ. ಇದರ ಲಯ ಕವಿತೆಯದ್ದು, ಇದು ಕಾಡುವ ತೀವ್ರತೆ ಕವನದ್ದು." ಎಂಬ ನರೇಂದ್ರ ಪೈ ಅವರ ಮಾತಿನಂತೆ ಇದು ಕಾದಂಬರಿಯಾದರೂ ಕಾದಂಬರಿ ಅಲ್ಲವೇ ಅಲ್ಲ. ಇಲ್ಲಿ ಕಾವ್ಯದ ಲಯ, ಭಾವತೀವ್ರತೆ ಇದ್ದೆ ಇದೆ. ಇದೊಂದು ವಿಭಿನ್ನ ಪ್ರಯೋಗವೇ ಸರಿ.

ಒಂದೇ ಗುಕ್ಕಿನಲ್ಲಿ ಓದಿದೆ ಎಂದರೆ ಇದರ ಅಂತರಾಳ ಅರಿಯಲಾಗದು. ಕಾದಂಬರಿ ಕುರಿತಂತೆ ವಿಕಾಸ್ ನೇಗಿಲೋಣಿ ಅವರ ಈ ಸಾಲುಗಳು ಸರಿ ಎನಿಸುತ್ತವೆ
"ಈ ಕಾದಂಬರಿಯೂ ಒಂದು ಥರ ಅಷ್ಟು ಸುಲಭಕ್ಕರ ಅರ್ಥಕ್ಕೆ ಸಿಗದ ಒಂದು ಮೊಂಡ ಕವಿತೆಯೇ. ನಾವು ಆಗಾಗ ಮೊಂಡು ಹಿಡಿದು, ಒಲಿಸಿಕೊಂಡು, ಹಿಂದೆ ಹೋಗಿ, ಕಾಡಿ, ಕಂಗೆಟ್ಟು, ವಿರಹ ಪಟ್ಟು, ಅರ್ಥದೆಡೆಗೆ ಬರಸೆಳೆದುಕೊಳ್ಳಬೇಕು ಅಥವಾ ಅದರ ಗುಂಗಲ್ಲೇ ಇದ್ದುಬಿಡಬೇಕು…" ಹೌದು ಒಂದೇ ಬಾರಿ ಓದು ಮುಗಿಸಿದರೂ ಪದೇ ಪದೇ ಓದಿ ಖುಷಿಪಡಬೇಕು ಅಷ್ಟು ಹಿತವಾಗಿದೆ.

"ತನ್ನದೇ ಒಂಟಿ ಕ್ಷಣಗಳ ಮೌನದಲ್ಲಿ ಅದ್ದಿ ತೆಗೆದ, ಸ್ವಗಕ್ಕರ ಮಾತ್ರ ಸಲ್ಲುವ ಕವಿಮನದ ನುಡಿಗಟ್ಟುಗಳಲ್ಲಿ ಸಾಗುವ ಈ ನಿರೂಪಣೆಯ ಲಯ ಆತ್ಮಸಂವಾದ ಬಲ್ಲವರಿಗಷ್ಟೇ ರುಚಿ ಹತ್ತುವ ಒಂದು ಹಿಂದೂಸ್ತಾನೀ ರಾಗ.
-ನರೇಂದ್ರ ಪೈ.

ಜೋಗಿಯವರ ಹಲವಾರು ಕೃತಿಗಳಲ್ಲಿ ಕೆಲವನ್ನು ನನ್ನ ಗ್ರಂಥಾಲಯದಲ್ಲಿ ತಂದಿಟ್ಟರೂ ಮೊದಲು ಓದಿದ್ದು ಮಾತ್ರ L ಕಾದಂಬರಿ. ವಿನೂತ ಪ್ರಯೋಗ, ಹೊಸತನದ ಬರಹ ಓದುಗರಿಗೆ ಇಷ್ಟವಾಗುತ್ತದೆ‌. ಬರವಣಿಗೆಯ ನೂತನ ತಂತ್ರಗಾರಿಕೆ, ಕಾದಂಬರಿಯನ್ನು ಕಾವ್ಯದಂತೆ ಲಯಬದ್ದವಾಗಿ ರೂಪುಗೊಂಡಿರುವುದೂ ಇದು ಕಾವ್ಯವೋ ಕಾದಂಬರಿಯೋ ಎನ್ನುವಂತಿದೆ. ಒಂದು ಬಾರಿ ಓದಿರುವೆ. ಇನ್ನು ಮರುಓದಿ L ಇನ್ನಷ್ಟು ಆಪ್ತವಾಗಿಸಿಕೊಳ್ಳುವಾಸೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ