Article

ಓದುವ ತುಡಿತ ಹೆಚ್ಚಿಸಿದ ‘ವರ್ಜಿನ್‌ ಮೊಹಿತೊ

ಮೇ 6ಕ್ಕೆ ಆರ್ಡರ್‌ ಮಾಡಿದ್ದ ಪುಸ್ತಕ ನನ್ನ ಕೈ ತಲುಪಿದ್ದು ಜೂನ್ 5ಕ್ಕೆ! ಮೇ 22 ಕ್ಕೆ ಕಳುಹಿಸಲಾಗಿದೆ ಎಂಬ ಸುದ್ದಿ ಬುಕ್ ಪ್ಯಾಚ್ ಕಳುಹಿಸಿದ ಎರಡು ಮೂರೂ ದಿನಗಳ ನಂತರ ವಾರಕ್ಕೊಮ್ಮೆ ಪೋಸ್ಟ್ ನೋಡುವ ನಾನು, ದಿನಕ್ಕೊಮ್ಮೆ ನೋಡ ತೊಡಗಿದೆ! ನಡುನಡುವೆ ಓದಿದ ಸ್ನೇಹಿತರು ತಮ್ಮ ಅಭಿಪ್ರಾಯ ಬೇರೆ ಹಂಚಿಕೊಳ್ಳುತ್ತಿದ್ದರಲ್ಲ ಫೇಸ್ಬುಕ್ ಅಲ್ಲಿ,.... ವಿಮರ್ಶೆ ಓದಲೇ? ಬೇಡವೇ ಎಂಬ ದ್ವಂದ್ವ ಬೇರೆ. ತಾಳಲಾರದೆ ಓದಿಯೂ ಬಿಟ್ಟನೆನ್ನಿ. ಆದರೆ ಪುಸ್ತಕ ಓದಿದಾಗ ಓದಿದ ವಿಮರ್ಶೆ ಮರೆತೂ ಬಿಟ್ಟಿದ್ದೆ.

ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಕೈ ತಲುಪಿದ ಪುಸ್ತಕ ಪ್ಯಾಕೇಟು ಬಿಚ್ಚಿ ಮುಖಪುಟ ಸವರಿ, ಸಂಜೆ ಆರಂಭಿಸಿ, ವಾರಾಂತ್ಯದಲ್ಲಿ ಓದಿ ಮುಗಿಸಿಬಿಡಬೇಕಂದು ಕೊಂಡವನಿಗೆ ಅದ್ಯಾಕೋ ತಾಳ್ಮೆ ಸಾಲಲಿಲ್ಲ. ನಾಲ್ಕುವೊರೆ ಸುಮಾರಿಗೆ ಆಫೀಸಿನ ಪ್ರಮುಖ ಮೀಟಿಂಗ್ ಒಂದು ಸಮಾಪ್ತಿಯ ಹಂತ ತಲುಪುವ ಹೊತ್ತಿಗೆ, ಸೈಡ್ ಅಲ್ಲಿ ನಾ ವರ್ಜಿನ್ ಮೊಹಿತೋ (ಮೀಟಿಂಗ್ ಮಧ್ಯ ಮಧ್ಯದಲ್ಲೇ) ಚುರ್ಚುರು ಓದಿ ಬೊಂಬಾಯಿ ಪೆಟ್ಟಿಗೆ ಮುಗಿಸಿ ಬಿಟ್ಟಿದ್ದೆ. ಹೋಂ ಆಫೀಸ್, ರಿಮೋಟ್ ವರ್ಕಿಂಗ್ ಗೆ ಧನ್ಯೋಸ್ಮಿ. ರುಚಿ ಹತ್ತದೆ ಬಿಡುತ್ತದೆಯೇ? ರಾತ್ರಿ ಹತ್ತೊವರೆಗೆ ಎಲ್ಲ ಮಲಗಿದ ಮೇಲೆ ಓದಲಾರಂಭಿಸಿ ನಡುರಾತ್ರಿ ಒಂದು ಗಂಟೆ ಸುಮಾರಿಗೆ ಒಂದಕ್ಷರ ಬಿಡದೇ ಓದಿ ಮುಗಿಸಿಬಿಟ್ಟೆ. ಶುಕ್ರವಾರ ಕೆಲಸದ ಒತ್ತಡವಿದೆ, ನನ್ನ ಅಭಿಪ್ರಾಯ ತಿಳಿಸಲು ವಾರಾಂತ್ಯದ ತನಕ ಟೈಮ್ ಕೊಡಿ ಎಂದು, ನನ್ನ ಪ್ರಥಮ ಅಭಿಪ್ರಾಯ ಸಣ್ಣಗೆ ಸತೀಶ್ ಜತೆ ಹಂಚಿಕೊಂಡು ನಾ ಮಲಗುವಾಗ ಬೆಳಿಗಿನ ಎರಡು ಗಂಟೆ. 

ಬಹುದೂರವಿದ್ದರೂ, ಬಹುಕಾಲದಿಂದ ಮುಖತಃ ಒಬ್ಬರನ್ನೊಬ್ಬರು ಕಾಣದಿದ್ದರೂ, ಸತೀಶ್ ನಮ್ಮ ಮನೆಯವರಲ್ಲೊಬ್ಬರಂತೆಯೇ. ಅವರ ಮತ್ತು ನನ್ನ ಅಪ್ಪಯ್ಯನವರ ಸ್ನೇಹ, ನಮ್ಮೆರಡು ಕುಟುಂಬಗಳ ನಡುವಿನ ಬಹು ಹಿಂದಿನ ಸಂಬಂಧಗಳು ಅಷ್ಟು ಗಾಢವಾದದ್ದು. ಕಳೆದರೆಡು ವರ್ಷಗಳಲ್ಲಿ ಒಂದೆರಡು ಭಾರಿ ಮನ ಬಿಚ್ಚಿ ಮಾತಾಡಿಕೊಂಡಿದ್ದು ಬಿಟ್ಟರೆ ನಾನು ಸತೀಶ್ ನ್ನು ಮುಖತಃ ನೋಡಿದ್ದು 90 ರ ಆಸುಪಾಸಿನಲ್ಲೇ ಅನಿಸುತ್ತೆ. ಅದ್ಯಾವುದೂ ನಾ ಮುಂದೆ ಬಿಚ್ಚಿಡಲಿರುವ ನನ್ನ ಕಥಾಭಿಪ್ರಾಯದ ಮೇಲೆ ಪ್ರಭಾವ ಬೀರಿಲ್ಲ...

ಕ್ಷಮಿಸಿ, ಪೀಠಿಕೆ ಜಾಸ್ತಿ ಆಯಿತು. ಒಂದು ತಿಂಗಳು ಕಾಯಿಸಿದ ಪುಸ್ತಕ, ಮತ್ತದರಿಂದಾದ, ನನ್ನ ಚಡಪಡಿಕೆ ಹೇಳಿಕೊಳ್ಳಲು ನನಗಾರಿದ್ದಾರೆ?

ಆಷಾಢದ ಮಳೆ ... 

ಸತೀಶ್ ನೀವಿಲ್ಲಿ ಪ್ರಚುರ ಪಡಿಸಿದ, ಕಥೆಗಾರನೊಬ್ಬನಲ್ಲಿ ಕಥೆ ಹುಟ್ಟಿಕೊಳ್ಳುವ ಪ್ರಕ್ರಿಯೆಯ ಕಥಾನಕವೇ ಅದ್ಭುತ! ಪೂರ್ತಿ ಪುಸ್ತಕ ಓದಿದ ಮೇಲೆ ನನಗನ್ನಿಸಿದ್ದು, ನಿಮ್ಮ ಪತ್ರಿಕಾ ಪ್ರಪಂಚದ ಜೀವನ ಸೃಜನಶೀಲ ಕಥೆಗಾರನನ್ನು ಸಾಯಿಸಲಿಲ್ಲ, ಬದಲಿಗೆ ಸಾಣೆ ಹಿಡಿದಂತೆ ಮೊನಚಾಗಿಸಿದೆ. ಸಾವಿನ ಮನೆ ಬಾಗಿಲು ತಟ್ಟಿ ಬಂದವರು ಜೀವನ ನೋಡುವ ದೃಷ್ಟಿ ಬದಲಾಗುತ್ತದೆ ಅಂತಾರಲ್ಲ, ಆ ರೀತಿಯಲ್ಲಿ ನೀವು ನೋಡುವ ನೋಟ ಬದಲಿಸಿ ನಿಮ್ಮಲ್ಲಿರುವ ಕಥೆಗಾರನಿಗೆ ಇನ್ನಷ್ಟು ಹೊಳಪು ಕೊಟ್ಟಿದೆ. ಅದಾದ್ದಾಯ್ತು ಬಿಡಿ ಇನ್ನು ಮುಂದಕ್ಕೆ ಒಂದೇ ಒಂದು ಆಷಾಢದ ಮಳೆ ಹನಿ ಹಾಗೆ ಹರಿದುಹೋಗಲಿಕ್ಕಿಲ್ಲ, ಅದು ಸೃಷ್ಟಿಸಿದ ಕಥೆಗಳು ಮುಂದಿನ ಆಷಾಢದೊಳಗೆ ಅಚ್ಚಾಗಿ ನಮ್ಮ ಕೈ ಸೇರಲೇ ಬೇಕು.

ಬೊಂಬಾಯಿ ಪೆಟ್ಟಿಗೆ

ನನ್ನನ್ನು ನಾನು ಕೇಳಿದ್ದ ಬಾಲ್ಯಕ್ಕೆ ಕೊಂಡೊಯ್ಯಿತು. ಸದಾನಂದನ ಮಾನಸಿಕ ತುಮಲ, ಗೊಂದಲದ ಗೂಡಂತೆ ಕಾಣುವ ಮಂದಿಯನ್ನು ವಿಚಿತ್ರ ದೃಷ್ಟಿಯಲ್ಲಿ ನೋಡುವ ಹಳ್ಳಿ ಪರಿಸರದ ಸಹವಾಸ ಇರದ ಪೇಟೆ ಮಂದಿ, ಕೋರಮಂಗಲ ಎಂಬ ಹೈ ಫೈ ಕೃತಕತೆಯ ಪರಿಸರ ಕಣ್ಣಿಗೆ ಕಟ್ಟುವಂತೆ, ನನ್ನಂತ ಸಾಫ್ಟ್ವೇರ್ ಮಂದಿಗೆ ನಾವು ಹೀಗೆ ಮಾಡಿದ್ದೇವೆಯೇ? ಎಂದು ವಿಮರ್ಶಿಸಿ ನಾಚಿಕೊಳ್ಳುವಂತೆ ಮೂಡಿಬಂದಿದೆ. ನಮ್ಮೂರಿಂದ ಬೆಂಗಳೂರಿನ ನೈಟ್ ಬಸ್ ಹತ್ತಿ ಕುಳಿತ ಬಹುತೇಕರಿಗೆ ಸದಾನಂದನ ತುಮಲಗಳ ಪರಿಚಯ ಇರಲೇಬೇಕನಿಸುತ್ತದೆ. ಅಷ್ಟರ ಮಟ್ಟಿಗೆ ನಮ್ಮೊಳಗಿನ ಸದಾನಂದನ ಚಿಂತನೆ ನೆನಪಿಸುತ್ತದೆ. ಕಥಾನಾಯಕ ಸದಾನಂದ ಕೊನೆಗೊ ಗೆದ್ದ, ನಮ್ಮಲ್ಲಿ ಹಲವರು ಇನ್ನೂ ಸ್ವಲ್ಪ ದಿನ…, ಅಂತಾ ನಿರ್ಧಾರ ಮುಂದೂಡಿ ಬದುಕುತ್ತಿದ್ದೇವೆ ಅಷ್ಟೇ!

ಹೈಡ್ ಪಾರ್ಕ್ 

ಕಥಾರಂಭವೇ ಪಂಚಿಂಗ್, ಮಗನೇಕೆ ಅಮ್ಮನನ್ನ ಹೀಗೆ ಕೇಳುತ್ತಿರಬಹುದು?, ಎಂಬ ಹುಚ್ಚು ಕುತೂಹಲದ ಬಣ್ಣ ಕೆದರಿಸಿಬಿಡುತ್ತದೆ. ಫೌಂಟನ್ ಮುಂದಿನ, “ಅಮ್ಮನಿಗೆ ಮಗ ಕೈ ತಪ್ಪುವ ಭಯ. ಮಗನಿಗೆ ಅಮ್ಮ ಕೈ ತಪ್ಪುವ ಭಯ" ಅದ್ಬುತ ಉಲ್ಲೇಖ! ಮಗನಿಗೆ ಅಮ್ಮ ಕೈ ’ತಪ್ಪಿಸುವ’ ಭಯ ಇನ್ನೂ ಚೆನ್ನಾಗಿ ಹೊಂದಿಕೊಳ್ಳುತ್ತಿತೇನೋ? ನಿಮಗೆ ಮನದಟ್ಟಾಗಿದ್ದರೆ ಬೇರೆಯವರ ಒಪ್ಪಿಗೆಯ ಅನಿವಾರ್ಯತೆ ಅಗತ್ಯವಿಲ್ಲ ಎಂಬ ಕಥಾಂತ್ಯವೂ ಒಂದು ಅದ್ಭುತ ಮೆಸೇಜ್ ಅನ್ನಿಸಿತು.

ದಾಸ 

ಈ ಕಥಾ ಸಂಕಲನದಲ್ಲಿ ನನ್ನ ಎರಡನೇ ಮೆಚ್ಚಿನ ಕಥೆ. ನಾನು ಇದೆ ಪರಿಸರದಲ್ಲಿ ಬೆಳೆದು ಬಂದಿರುವುದರಿಂದ ನನಗೆ ಇದು ಹಿಡಿಸಿರಲೂಬಹುದು. ಆದರೆ ನನ್ನ ಒಂದೇ ಒಂದು ತಕರಾರೆಂದರೆ ಈ ಕಥೆಯಲ್ಲಿ ಮ್ಮ ದಾಸ ಸಾಹಿತ್ಯ ಈ ಕಥೆಯಲ್ಲಿ ಕಮ್ಮಿಯೆಂದರೂ ಮೂರೂ ಕತೆಗಾಗುವಷ್ಟು ಇದೆ. ಒಂದೇ ಕತೆಯಲ್ಲಿ ಸೇರಿಸಿ ದಾಸನಿಗೆ ಹ್ಯಾಟ್ರಿಕ್ ಹೀರೊ ಆಗುವ ಅವಕಾಶ ಕಸಿದುಕೊಂಡು ಬಿಟ್ಟಿರಿ ಅನಿಸಿತು.

ಗರ್ಭ 

ನನಗಿಷ್ಟವಾದ ನಂಬರ್ ಒನ್ ಕಥೆ! ನಮ್ಮ ತಂದೆ ತಾಯಿಗೆ ಕಾಯಿಲೆ ಬಂದಾಗ, ಅದು ಕ್ಯಾನ್ಸರ್ ಅಂತ ಮಾರಿಯ ಹೆಸರು ಕೇಳಿದಾಕ್ಷಣ ಎಂತವರಿಗೂ ತಲ್ಲಣವಾಗಿ ಹೋಗುತ್ತದೆ. ಓ ಟಿ ವಸ್ತ್ರದಲ್ಲಿ, ನಮ್ಮವರನ್ನು ನೋಡಿದ ಕೊಡಲೇ ನೂರಾರು ತರದ ಯೋಚನೆ ಮೂಡಿಸಿ, ಹಾಗಾಲಿಕ್ಕಿಲ್ಲ?... ,ಆಗದೆ ಇರಲಿಕ್ಕೂ ಇಲ್ಲ?.... , ಆದರೆ.... ? ಇಲ್ಲ, ಇಲ್ಲ ..., ಅಗಲಿಕ್ಕಿಲ್ಲ... ಎಂಬ ಚಿಂತನೆಯ ಸುಳಿಯಲ್ಲಿ ಕಳೆದುಹೋಗುವ ಮಗನೊಬ್ಬನ ಮನೋಜ್ಞ ಕಥಾನಕ. ಅಲ್ಲಲ್ಲಿ ನನಗಂತೂ ಕಣ್ಣಾಲಿ ತೇವ ಕೂಡಾ ತರಿಸಿತು. ಕಥಾಂತ್ಯ ಸೂಪರ್ಬ್! ತಾನೇ ನೊಂದು, ಬಸವಳಿದಿದ್ದರೂ, ನನಗೇನೂ ಆಗೇ ಇಲ್ಲ, ನಿಮ್ಮೆಲ್ಲರ ಜವಾಬ್ದಾರಿ ಇನ್ನೂ ನನ್ನದೇ, ಎಂಬ ಮಾತೃ ಹೃದಯದ ... "ನೀ ಸಮಾ ಉಂಡಿದ್ಯಾ ಮಗ?"... It is truly price less expression! It is possible only from and only ಅಮ್ಮ! ಬ್ರೇಕ್ ತೆಗೆದುಕೊಳ್ಳದೆ ಮುಂದಿನ ಕಥೆ ಓದಲಾಗದಷ್ಟು ಹತ್ತು ನಿಮಿಷ ಕಾಡಿದ ಕಥೆ. 

ಮೂರು ಮುಖಗಳು 

ತುಂಬಾ ಪ್ರಸ್ತುತವಾದ ವಾಸ್ತವಿಕ ಸತ್ಯ. ದೂರದ ಬೆಟ್ಟ ಯಾವಾಗಲೂ ನುಣ್ಣಗೆ. ಅವರವರು ನುಂಗಿಕೊಂಡಿರುವ ಸತ್ಯ, ಅವರವರಿಗೆ ಗೊತ್ತು. ಕೊನೆಪಕ್ಷ ಮನ ಬಿಚ್ಚಿ ದುಗುಡ ಹಂಚಿಕೊಳ್ಳುವ ಆತ್ಮೀಯರಿಲ್ಲದೆ ಜೀವನದಲ್ಲಿ ಏಕಾಂಗಿಯಾಗಬಾರದೆಂಬ ನೀತಿ ನನಗೆ ಇದರಲ್ಲಿ ಕಾಣಿಸಿತು.

ಇನ್ನು ಟೈಟಲ್ ಕಥೆ ವರ್ಜಿನ್ ಮೊಹಿತೊ.. 

ಸ್ವಾವಲಂಬಿ, ಸಮರ್ಥ ಹುಡುಗಿ; ಮೇಲ್ಮಧ್ಯಮ ವರ್ಗದ ಹೆಣ್ಣು ಹೆತ್ತವರ ಶ್ರೀಮಂತ ಸಂಬಂಧದ ಅಕಾಂಕ್ಷೆ, ತಾನಲ್ಲದಿದ್ದನ್ನು ಇನ್ನೊಬ್ಬರಿಂದ ಅಪೇಕ್ಷಿಸುವ, ಅನುಮಾನವೇ ಜೀವನವಾಗಿಸಿ ಮನಶುದ್ಧವಿಲ್ಲದ ಪರಿಶುದ್ದರ ನೈಜ ಚಿತ್ರಣ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಕಥಾಂತ್ಯದಲ್ಲಿ ಮಾಯಾ ಕೊಟ್ಟ ಬುದ್ಧಿವಂತಿಕೆಯ ಮುಖಕ್ಕೆ ಹೊಡೆಯುವಂತ ಉತ್ತರ ಪಂಚಿಂಗ್ ಆಗಿದೆ.

ನನ್ನ ಏಳು ವರ್ಷದ ಮಗಳು ಪುಸ್ತಕದ ಮುಖಪುಟ ತುಂಬಾ ಮೆಚ್ಚಿಕೊಂಡಿದ್ದಾಳೆ. ಇನ್ನು ಓದಲಾಗದ ಭವಿಷ್ಯದ ಓದುಗರೊಬ್ಬರ ಪ್ರತಿಕ್ರಿಯೆ ಕೂಡಾ ಹಂಚಿಕೊಳ್ಳುತ್ತಿದ್ದೇನೆ!

It is truly delightful intense short stories!

ಪ್ರತಾಪ್‌ ಕೊಡಂಚ