Article

‘ನನ್ನ ಎದೆಗೊಳಕ್ಕೆ ನೀವು ವಿಷ ಸೇರಿಸಲಾರಿರಿ’ ಎನ್ನುವುದನ್ನು ಸಾಧಿಸಿ ನಡೆಯುವುದು ಸುಲಭವಲ್ಲ

ಎಂ.ಆರ್‌. ಕಮಲಾ ಅವರು ಪ್ರೀತಿಯಿಂದ ಕಳುಹಿಸಿಕೊಟ್ಟ "ಕಸೂತಿಯಾದ ನೆನಪು" ಓದಿ ಮುಗಿಸಿ ಕೆಲ ದಿನಗಳಾದವು.  'ಕಾಳನಾಮ ಚರಿತೆ'ಯ ಕಾಳನನ್ನು ನಾನಿನ್ನೂ ಮರೆತಿಲ್ಲ. ಇಲ್ಲಿಯೂ ಕೆಲವು ಪ್ರಬಂಧಗಳಲ್ಲಿ ಅವನು ಮೂತಿ ತೂರಿಸದೆ ಬಿಟ್ಟಿಲ್ಲ. ಸುತ್ತಣ ಜಗತ್ತಿನ ಕುರಿತು ನಿಮ್ಮ ಪ್ರೀತಿ,ಕುತೂಹಲ, ಬಾಲ್ಯದ ಬಂಗಾರದಂಥ ನೆನಪುಗಳು ಎಲ್ಲವೂ ಈ ಪ್ರಬಂಧಗಳನ್ನು ರಸಪೂರ್ಣವಾಗಿಸಿವೆ. ನಿಮ್ಮ ಅಮ್ಮ, ಅಪ್ಪ, ಬಂಧುಗಳು ಎಲ್ಲರೂ ನಮ್ಮ ಭಾವಕೋಶದಲ್ಲೂ ಈಗ ಸೇರಿಬಿಟ್ಟಿದ್ದಾರೆ. 

ಪುಟ್ಟ ಆಕೃತಿಯ ಈ ಬಂಧಗಳು ಒಟ್ಟು ಸ್ವರೂಪದಲ್ಲಿ ನಿಮ್ಮ ಜೀವನಚಿತ್ರವೂ ಹೌದೆನ್ನಬಹುದು. ನಿಮ್ಮ ವಿನೋದಪೂರ್ಣ ಗ್ರಹಿಕೆಗಳಿಗೆ ಗದ್ಯ ಬರಹ ನೆಮ್ಮದಿಯ space ಒದಗಿಸಿದೆ ಅನಿಸಿತು. ಸಹಜವಾಗಿ ಇರುವುದೇ ಈ ಸಮಾಜಕ್ಕೆ ಅಸಹಜವಾಗಿದ್ದು ಹೇಗೆ , ಇಡೀ ಜಗತ್ತು ಒಂದು ಸಣ್ಣ ಮೀರುವಿಕೆಯಿಂದ ವಿಶಾಲ ನೆಲೆಗೆ ಚಲಿಸಲು ಸಾಧ್ಯ ಮುಂತಾಗಿ ನಿಮ್ಮಲ್ಲಿ ಹುಟ್ಟುವ ಭಾವನೆಗಳು ವಾಸ್ತವಿಕವಾಗಿ ಇಂದಿನ ಜಗತ್ತಿನ ಕುರಿತು ನಿಮ್ಮೊಳಗಿನ ಕವಿಯ ಚಿಂತನೆ, ಕಾಳಜಿಗಳೂ ಹೌದು. ಮುದ್ದು ಮಕ್ಕಳಿಗೆಲ್ಲ ಒಂದು ಬೊಂಬೆ ಸಿಗಲಿ ಎಂದೋ,ಎಲ್ಲ ಮಕ್ಕಳು ಎಣ್ಣೆ ಸೀಗೆಕಾಯಿ ಕಾಣುವಂತಾಗಲಿ ಎಂದೋ ನೀವು ಹಾರೈಸುವಾಗ ನನಗೆ ಕಾಣುವುದು ಒಂದು ಸಾಮಾಜಿಕ ನಿಲುವಲ್ಲ,ಆದರೆ ಅದನ್ನೊಳಗೊಂಡ ತಾಯಿ ಹೃದಯ.

ಮಾತು ಮೌನಗಳ ನಡುವೆ ಮನಸು ವೇಗವಾಗಿ ಚಲಿಸದ ಸ್ಥಿತಿ, ದೇಹ ಮನಸುಗಳ ತಾಳೆಯಾಗದ ಗೊಂದಲದ ಕ್ಷಣಗಳು, ಸಮಾಜದ ಅಸಹಜ ಒತ್ತಡಗಳು,ಬದುಕು ವೃಂದಗಾನವಲ್ಲ ಎಂಬ ಕಂಡುಕೊಳುವಿಕೆ, ಒಗ್ಗದ -ತಾಳದ "ಕೃಷ್ಣಾ ನೀ ಬೇಗನೆ ಬಾರೋ"ದ ಪೇಚು.. ಎಷ್ಟೊಂದು ಸಂಗತಿಗಳಿಂದ ತುಂಬಿಹೋಗಿದೆ ನಿಮ್ಮ ನೆನಪುಗಳ ಜಗತ್ತು. ನಿಮ್ಮ facebook ಪ್ರೀತಿ,ಯಾತ್ರೆಯಲ್ಲೂ 'ಕೇಳದ ದನಿ'ಗಳನ್ನು ಕೇಳಿಸಿಕೊಳ್ಳುವ ಜೀವನ ಪ್ರೀತಿ,ಹೆಣ್ಣುಮಕ್ಕಳು ಹಠಾತ್ತಾಗಿ ಮೊಗಹೊತ್ತಿಗೆಯಿಂದ deactivate ಆಗುವ ಹಿಂದಿನ ನೋವಿನ ಸಂದರ್ಭಗಳು... ಯಾವ ಕಾಲಕ್ಕೂ ನಿಮ್ಮಂಥ ಹೆಣ್ಣುಮಕ್ಕಳು ಮಾತ್ರ ನಮಗೆ ಕಾಣಿಸಿಕೊಡಲು ಸಾಧ್ಯ ಅನಿಸಿಬಿಟ್ಟಿತು. "ನನ್ನ ಎದೆಗೊಳಕ್ಕೆ ನೀವು ವಿಷ ಸೇರಿಸಲಾರಿರಿ' ಎನ್ನುವುದನ್ನು ಸಾಧಿಸಿ ನಡೆಯುವುದು ಸುಲಭವಲ್ಲ,. ಮನಸು ಮಾಡಿದರೆ ಕಷ್ಟವೂ ಅಲ್ಲ" ಎಂಬಂಥ ತರ್ಕದಾಚೆಗಿನ ತೀರ್ಮಾನಗಳು ನಿಮ್ಮ ಇಲ್ಲಿಯ ಬರಹಗಳನ್ನು ವಿಶಿಷ್ಟವಾಗಿಸಿವೆ. 
 

ಚಿಂತಾಮಣಿ ಕೊಡ್ಲೆಕೆರೆ