About the Author

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ.

ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ಹಿಂದಿ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣ. ರಸಪ್ರಶ್ನೆ, ಫುಟ್ಬಾಲ್, ಕಬಡ್ಡಿ, ಡಿಸ್ಕಸ್ ಥ್ರೋ, ಕರಾಟೆ, ಚೆಸ್ಗಳಲ್ಲಿ ಭಾಗಿ ಮತ್ತು ಜಿಲ್ಲಾಮಟ್ಟದ ಹಲವು ಬಹುಮಾನಗಳ ವಿಜೇತ. ರಾಜ್ಯಮಟ್ಟದ 3ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ. 2016ರಲ್ಲಿ ವಿಜಯ ನೆಕ್ಸ್ಟ್ ಪತ್ರಿಕೆ ಆಯ್ಕೆ ಮಾಡಿದ ಕರ್ನಾಟಕದ 14 ಪ್ರತಿಭಾವಂತ ಮಕ್ಕಳಲ್ಲೊಬ್ಬ. 'ಚೂಟಿ ಚೇತನ-2017' ಎಂದು ಕನ್ನಡಪ್ರಭ ಪತ್ರಿಕೆ ಆಯ್ಕೆ ಮಾಡಿದ ಕರ್ನಾಟಕದ 9 ಪ್ರತಿಭಾವಂತ ಮಕ್ಕಳಲ್ಲೊಬ್ಬ. 'ಸಾಧನೆಯ ಶಿಖರ ಏರಿರುವ ಕರ್ನಾಟಕದ 6 ಪ್ರಖರ ಪ್ರತಿಭಾವಂತ ಮಕ್ಕಳು' ಎಂದು 'ವಿಜಯ ಕರ್ನಾಟಕ” ಪತ್ರಿಕೆ ಆಯ್ಕೆ ಮಾಡಿದ ಮಕ್ಕಳಲ್ಲೊಬ್ಬ. ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗೆ ಆಹ್ವಾನಿಸಲ್ಪಟ್ಟ ಅತಿ ಕಿರಿಯ ಸಾಹಿತಿ.  'ಅಸಾಧಾರಣ ಪ್ರತಿಭೆ'ಗಾಗಿ ರಾಷ್ಟ್ರಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರದಿಂದ ಶಿಫಾರಸ್ಸು ಮಾಡಲ್ಪಟ್ಟ ಕಿಶೋರ ಸಾಹಿತಿ.   

ಮಿಂಚಿನ ಬೆಳಕು, ಕಣ್ಣಮಿಂಚು, ದಶದಿಕ್ಕು, ಮಿನುಗು ಮಿಂಚು, ನೂರ್ಮಿಂಚು ಕೋಲ್ಮಿಂಚು, ಹೊಂಬಿಸಿಲು (ಅಂಕಣಪ್ರಬಂಧಗಳು), ಗೇಮ್ಸ್ ಪಿರಿಯಡ್, ನನ್ನ ಕನಸಿನ ಕ್ರಿಕೆಟ್, ಓಪನ್ ಗ್ರೌಂಡ್, ಫೋರ್ತ್ ಅಂಪೈರ್, ರೋಮಾಂಚನ, ಥ್ರಿಲ್ಲಿಂಗ್ ಬ್ಯಾಟ್, ಆಟದ ಬಯಲು, ಮಿಂಚು ಸೆಂಚುರಿ, ಆಟದ ನೋಟ, ಕ್ರಿಕೇಟ್ ಪ್ರೀತಿ, ಮಿಂಚು ಸೆಂಚುರಿ-2 (ಕ್ರೀಡಾ ಅಂಕಣಪ್ರಬಂಧಗಳು), ಅಮ್ಮನ ಸಿಟ್ಟು, ಗೆಲ್ಲುವೆನು ನಾ ಗೆಲ್ಲುವೆನು, ಕಣ್ಣಾಮುಚ್ಚಾಲೆ (ಕವಿತೆಗಳು) ಮೆರವಣಿಗೆ, ವೀರ ಸೈನಿಕ, ಆಟವಿಲ್ಲದ ಮೈದಾನ (ಕಥೆಗಳು) ಭಾರತೀವನದ ಅರಳಿಮರ (ಕಾಡಿನ ಕಥೆಗಳು) ರಾಮಪುರದ ಗೆಳೆಯರು ಮತ್ತು ಅಜಾದ್ ನಗರದ ಆಟಗಾರರು, ಸೇರಿದಂತೆ 30 ಕೃತಿಗಳನ್ನು ಪ್ರಕಟಿಸಿದ್ದಾರೆ. 

ಬಹುಮುಖ ಪ್ರತಿಭೆಯಾದ ಅಂತಃಕರಣನಿಗೆ ಯಾದಗಿರಿ ಜಿಲ್ಲೆಯ ಸಂಧ್ಯಾ ಸಾಹಿತ್ಯ ವೇದಿಕೆಯ 'ವಿದ್ಯಾಸಾಗರ ಬಾಲ ಪುರಸ್ಕಾರ' , ಧಾರವಾಡದ ದ.ರಾ ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ನ 'ಬೇಂದ್ರೆ ಗ್ರಂಥ ಬಹುಮಾನ', ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟೆ ಆದರ್ಶ ಕನ್ನಡ ಬಳಗದ 'ಬಾಲಪತ್ರಿಭೆ ಪ್ರಶಸ್ತಿ',  ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ವಸುಧೇವ 'ಭೂಪಾಳಂ ದತ್ತಿ ಪ್ರಶಸ್ತಿ' , ರಾಜ್ಯ ಸರ್ಕಾರದ  ರಾಜ್ಯಮಟ್ಟದ 'ಅಸಾಧಾರಣ ಪ್ರತಿಭೆ ಪ್ರಶಸ್ತಿ', ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ 'ಅಕಾಡೆಮಿ ಬಾಲಗೌರವ ಪ್ರಶಸ್ತಿ',    ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ 'ಸಿಸು ಸಂಗಮೇಶ ದತ್ತಿ ಪ್ರಶಸ್ತಿ', ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ 'ಚಿಣ್ಣರ ಚಂದಿರ ಪುಸ್ತಕ ಪ್ರಶಸ್ತಿ' , ಹುಬ್ಬಳ್ಳಿಯ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ನ 'ಅರುಳುಮೊಗ್ಗು ಪ್ರಶಸ್ತಿ'. ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ.

ಅಂತಃಕರಣ