ಸಂವಿಧಾನ ಪೀಠಿಕೆ : ಒಂದು ಪುಟ್ಟ ಮುನ್ನುಡಿ

Author : ಸತ್ಯಾ ಎಸ್.

Pages 83

₹ 80.00




Year of Publication: 2021
Published by: ಜನ ಪ್ರಕಾಶನ
Address: ಬೆಂಗಳೂರು
Phone: 9448324727

Synopsys

‘ಸಂವಿಧಾನ ಪೀಠಿಕೆ ಒಂದು ಪುಟ್ಟ ಮುನ್ನುಡಿ’ ಕೃತಿಯ ಮೂಲ ಲೇಖಕರು ಅರವಿಂದ್ ನಾರಾಯಣ್ ಮತ್ತು ಪೂರ್ಣಾ ರವಿಶಂಕರ್. ಅನುವಾದಕಿ ಸತ್ಯಾ ಎಸ್. ಅವರು ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಕೆಲವೊಂದು ವಿಚಾರಗಳನ್ನು ಹೀಗೆ ಪ್ರಸ್ತುತಪಡಿಸುತ್ತದೆ : ಮರಣದಂಡನೆಗೆ ಗುರಿಯಾದ ಕೈದಿಗಳನ್ನು ಪ್ರತ್ಯೇಕಿಸಿ ಇಡುವುದನ್ನು ಪ್ರಶ್ನಿಸಿದ ಪ್ರಕರಣದಲ್ಲಿ ನ್ಯಾಯಾಲಯವು ‘ಸಂವಿಧಾನದ ವ್ಯಕ್ತಿಗಳಿಗೆ ನೀಡುವ ಹಕ್ಕು ಮತ್ತು ರಕ್ಷಣೆಗಳು ಜೈಲಿನ ಗೇಟಿಗೆ ಕೊನೆಯಾಗದೆ ಜೈಲಿನೊಳಗೂ ಕೈದಿಗಳ ಜೊತೆಗಿರುತ್ತವೆ. ಅವರ ಹಕ್ಕುಗಳನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದರೆ ನ್ಯಾಯಾಂಗದ ಕಣ್ಗಾವಲು ರಕ್ಷಿಸುತ್ತದೆ. ಮರಣ ದಂಡನೆಗೆ ಗುರಿಯಾದ ಕೈದಿಗಳು ಇನ್ನೂ ಹೆಚ್ಚಿನ ನೋವನ್ನು ಅನುಭವಿಸಬೇಕೆ? ಹಾಗಾದಲ್ಲಿ ನ್ಯಾಯಶಾಸ್ತ್ರವು ರೂಪಿಸಿರುವ ರೀತಿ ನೀತಿ ಹಾಗೂ ಸ್ವಾತಂತ್ರ್ಯಗಳು ಕೇವಲ ಸಾಂವಿಧಾನಿಕ ಮುಖಸ್ತುತಿಗಳಾಗಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಪದಗಳಾಗಿ ಬಿಡುತ್ತವೆ’ ಎಂದಿದೆ.

ಖಾಸಗಿತನದ ಹಕ್ಕನ್ನು ಕುರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘...ಕುಟುಂಬ, ಮದುವೆ, ಪ್ರಜನನ ಮತ್ತು ಲೈಂಗಿಕ ಒಲವು ಎಲ್ಲವೂ ವ್ಯಕ್ತಿ ಘನತೆಯ ಅವಿಭಾಜ್ಯ ಅಂಗವಾಗಿವೆ ಎಂದು ವಿವರಿಸಿದ್ದಾರೆ ಲೇಖಕ. ಘನತೆಯಿಂದ ಬದುಕಲು ಸಾಧ್ಯವಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುವುದು. ಖಾಸಗಿತನದ ಹಕ್ಕು, ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯದ ಹಕ್ಕುಗಳು ಘನತೆಯನ್ನು ಖಚಿತ ಪಡಿಸುತ್ತವೆ’ ಎಂದು ಸ್ಪಷ್ಟಪಡಿಸುತ್ತದೆ ಈ ಕೃತಿ.

About the Author

ಸತ್ಯಾ ಎಸ್.

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಇರುವ ಸತ್ಯಾ ಎಸ್ ಆವರು ಮೂಲತಃ ಪತ್ರಕರ್ತೆ. ಮುಖ್ಯವಾಹಿನಿ ಪತ್ರಿಕೋದ್ಯಮ ತೊರೆದು ಸ್ವಲ್ಪ ಕಾಲ ಸಂಶೋಧನೆ, ಬರವಣಿಗೆಗಳಲ್ಲಿ ತೊಡಗಿಸಿಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಸ್ವತಂತ್ರ ಸಂವಹನ ಸಮಾಲೋಚಕರಾಗಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್, ಶಿಕ್ಷಣ, ಆರೋಗ್ಯ, ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳಾಪರ ಹಾಗೂ ಕೋಮುವಾದ ವಿರೋಧಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆಯನ್ನು ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ’ನೆಲದ ಸಿರಿ’ ಇವರ ಸಂಪಾದಿತ ಕೃತಿ. ...

READ MORE

Reviews

`ಸಂವಿಧಾನ ಪೀಠಿಕೆ ಒಂದು ಪುಟ್ಟ ಮುನ್ನುಡಿ' ಕೃತಿಯ ವಿಮರ್ಶೆ

ಪ್ರತಿಯೊಂದು ಜೀವವೂ ಅನನ್ಯ, ಸ್ವತಂತ್ರ ಅಸ್ತಿತ್ವದೊಂದಿಗೆ ಪರಸ್ಪರ ಬೆಸೆದುಕೊಂಡೂ ಇವೆ. ಉಣ್ಣುವ ಅನ್ನ, ಮಾಡುವ ಕೆಲಸ, ನಂಬುವ ದೈವ, ಪಂಥ, ಸಿದ್ಧಾಂತ, ಪ್ರೀತಿಸಿ ಒಟ್ಟಿಗಿರುವ/ ಮದುವೆಯಾಗುವ ವ್ಯಕ್ತಿಯ ಆಯ್ಕೆ ಎಲ್ಲವೂ ಪರಸ್ಪರ ಸಮ್ಮತಿ, ಇಚ್ಛೆ, ಒಲವಿನಂತೆ ನಡೆಯಬೇಕು. ಇವೆಲ್ಲವೂ ಹಕ್ಕಿನ ರೂಪದಲ್ಲಿ ಎಲ್ಲರಿಗೂ ದಕ್ಕಬೇಕೆಂಬ ಉದ್ದೇಶದಿಂದ ನಮ್ಮ ಸಂವಿಧಾನವು ಸರ್ವರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವವನ್ನು ಮತ, ಧರ್ಮ, ಲಿಂಗತ್ವ, ವರ್ಗ ಇತ್ಯಾದಿ ಭೇದವಿಲ್ಲದೆ ನೀಡುತ್ತದೆ. ಅಂಬೇಡ್ಕರ್ ಅವರ ಪ್ರಕಾರ ಬಂಧುತ್ವವಿಲ್ಲದೆ ಸ್ವಾತಂತ್ರ್ಯ ಮತ್ತು ಸಮಾನತೆಗೆ ಅರ್ಥವೇ ಇಲ್ಲ.

ಮನುಷ್ಯರ ಬದುಕಿನ ಅಗತ್ಯಗಳನ್ನು ಆಧರಿಸಿ ಕಟ್ಟಿರುವ ಸಂವಿಧಾನ, ಈ ನೆಲದ ಮೂಲ ಕಾನೂನು. ದಮನ, ಶೋಷಣೆಗಳಿಗೆ ಒಳಗಾಗದಂತೆ ರಕ್ಷಾಕವಚವಾಗಿ ಸಂವಿಧಾನವನ್ನು ರಚಿಸಿದವರಲ್ಲಿ ಅಪ್ಪಟ ಪ್ರಜಾಪ್ರಭುತ್ವವಾದಿ ಅಂಬೇಡ್ಕರ್ ಪ್ರಮುಖರು. ಜನರೇ ಕೇಂದ್ರವಾದ ಸಂವಿಧಾನವನ್ನು ‘ಭಾರತದ ಜನತೆಯಾದ ನಾವು’ ‘ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ’.

ಜಾತಿ, ಲಿಂಗ, ಲಿಂಗತ್ವ, ವರ್ಗ ಇತ್ಯಾದಿ ಹೆಸರಿನಲ್ಲಿ ನಡೆದ ತಾರತಮ್ಯ ಮತ್ತು ಶೋಷಣೆಯಲ್ಲಿ ನಲುಗಿರುವ ಸಮುದಾಯಗಳಿಗೆ ಆಸರೆಯಾಗಿರುವಂತೆಯೇ ಶಿಕ್ಷೆಗೊಳಗಾದ ಕೈದಿಗಳಿಗೂ ಘನತೆ ಇದೆ, ಅದನ್ನು ರಕ್ಷಿಸಬೇಕು ಎಂಬ ಆಶಯವನ್ನೂ ಸಂವಿಧಾನವು ಹೊಂದಿದೆ. ಒಟ್ಟು 395 ಪರಿಚ್ಛೇದಗಳಿರುವ ಸಂವಿಧಾನವು ವಿಶಾಲ ಮರದಂತಿದ್ದರೆ, ಅದರ ಪೀಠಿಕೆಯು ಮರವನ್ನು ಹೊತ್ತ ಬೀಜದಂತಿದೆ. ಇಂತಹ ಪೀಠಿಕೆಯ ಕುರಿತು ವಕೀಲರಾದ ಅರವಿಂದ್ ನಾರಾಯಣ್ ಮತ್ತು ಪೂರ್ಣಾ ರವಿಶಂಕರ್ ಅವರು ‘ಸಂವಿಧಾನ ಪೀಠಿಕೆ-ಒಂದು ಪುಟ್ಟ ಮುನ್ನುಡಿ’ (ಭಾಷಾಂತರ: ಸತ್ಯಾ ಎಸ್.) ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. 76 ಪುಟ್ಟಗಳ ಚಿಕ್ಕ ಪುಸ್ತಕಕ್ಕೆ ಏಳು ಪುಟಗಳ ಆಕರ ಟಿಪ್ಪಣಿಗಳಿರುವುದು ಅಧ್ಯಯನದ ಆಳಕ್ಕೆ ಸಾಕ್ಷಿಯಾಗಿವೆ.

ಪುಸ್ತಕದ ವಿಶೇಷವೆಂದರೆ, ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವವನ್ನು ಮನಗಾಣಿಸಲು ಉಲ್ಲೇಖಿಸಿರುವ ನ್ಯಾಯಾಲಯ ಪ್ರಕರಣಗಳು ಮತ್ತು ವಿಶ್ಲೇಷಣೆಗಳು. ಸಂವಿಧಾನದ ಆಶಯಗಳು ವಾಸ್ತವವಾಗುವುದಕ್ಕೆ ಉಲ್ಲೇಖಿತ ಪ್ರಕರಣಗಳು ಸಾಕ್ಷಿಯಾಗಿವೆ, ಎಚ್ಚೆತ್ತ ಜನರ ಹೋರಾಟಗಳಿಂದಾಗಿ ಸಾಂವಿಧಾನಿಕ ಮೌಲ್ಯಗಳ ಅರ್ಥವು ವಿವಿಧ ಕಾಲಘಟ್ಟದಲ್ಲಿ ಪಡೆದುಕೊಂಡ ವಿಭಿನ್ನ ಆಯಾಮಗಳಿಗೆ ಇಲ್ಲಿನ ವಿಶ್ಲೇಷಣೆಗಳು ಕನ್ನಡಿ ಹಿಡಿಯುತ್ತವೆ.

ಲೇಖಕರು ವಕೀಲರೂ ಆದ್ದರಿಂದ ಪುಸ್ತಕಕ್ಕೆ ಅಧಿಕೃತತೆ ದೊರೆತಿದೆ. ಕಾನೂನನ್ನು ಜನಸ್ನೇಹಿಯಾಗಿಸುವ ಉದ್ದೇಶದಿಂದ ಹುಟ್ಟುಹಾಕಿದ ‘ಪರ್ಯಾಯ ಕಾನೂನು ವೇದಿಕೆ’ಯ ಸಂಸ್ಥಾಪಕರಲ್ಲಿ ಈ ಕೃತಿಯ ಲೇಖಕ ಅರವಿಂದ್ ನಾರಾಯಣ್ ಅವರು ಒಬ್ಬರು. ಜೊತೆಗೇ ಸೆಕ್ಷನ್ 377 ರದ್ಧತಿ ಕುರಿತ ಕಾನೂನು ಹೋರಾಟದಲ್ಲಿಯೂ ಸಕ್ರಿಯವಾಗಿದ್ದವರು. ಪೂರ್ಣಾ ರವಿಶಂಕರ್ ಅವರು ಅದೇ ವೇದಿಕೆಯಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಳಕಳಿ ಇರುವ ಉತ್ಸಾಹಿ, ಯುವ ವಕೀಲೆ.

ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ಪ್ರಕರಣಗಳು ಗಮನಾರ್ಹವಾಗಿವೆ-

ಮರಣದಂಡನೆಗೆ ಗುರಿಯಾದ ಕೈದಿಗಳನ್ನು ಪ್ರತ್ಯೇಕಿಸಿ ಇಡುವುದನ್ನು ಪ್ರಶ್ನಿಸಿದ ಪ್ರಕರಣದಲ್ಲಿ ನ್ಯಾಯಾಲಯವು ‘ಸಂವಿಧಾನದ ವ್ಯಕ್ತಿಗಳಿಗೆ ನೀಡುವ ಹಕ್ಕು ಮತ್ತು ರಕ್ಷಣೆಗಳು ಜೈಲಿನ ಗೇಟಿಗೆ ಕೊನೆಯಾಗದೆ ಜೈಲಿನೊಳಗೂ ಕೈದಿಗಳ ಜೊತೆಗಿರುತ್ತವೆ. ಅವರ ಹಕ್ಕುಗಳನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದರೆ ನ್ಯಾಯಾಂಗದ ಕಣ್ಗಾವಲು ರಕ್ಷಿಸುತ್ತದೆ. ಮರಣ ದಂಡನೆಗೆ ಗುರಿಯಾದ ಕೈದಿಗಳು ಇನ್ನೂ ಹೆಚ್ಚಿನ ನೋವನ್ನು ಅನುಭವಿಸಬೇಕೆ? ಹಾಗಾದಲ್ಲಿ ನ್ಯಾಯಶಾಸ್ತ್ರವು ರೂಪಿಸಿರುವ ರೀತಿ ನೀತಿ ಹಾಗೂ ಸ್ವಾತಂತ್ರ್ಯಗಳು ಕೇವಲ ಸಾಂವಿಧಾನಿಕ ಮುಖಸ್ತುತಿಗಳಾಗಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಪದಗಳಾಗಿ ಬಿಡುತ್ತವೆ’ ಎಂದಿದೆ.

ಸಾಮಾಜಿಕ ನೈತಿಕತೆಯ ಮಾನದಂಡದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಕಳಂಕಿತರನ್ನಾಗಿಸುವ, ಅಪರಾಧಿಗಳನ್ನಾಗಿಸುವುದರ ಕುರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘ಸಂವಿಧಾನಾತ್ಮಕ ನೈತಿಕತೆಯನ್ನು ಸಾಮಾಜಿಕ ನೈತಿಕತೆಯ ಪದತಲದಲ್ಲಿ ಬಲಿಕೊಡಲು ಸಾಧ್ಯವೇ ಇಲ್ಲ, ಸಾಮಾಜಿಕ ನೈತಿಕತೆಯ ಹೆಸರಿನಲ್ಲಿ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಬಾರದು’ ಎಂದು ಹೇಳಿದೆ.

ಖಾಸಗಿತನದ ಹಕ್ಕನ್ನು ಕುರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘...ಕುಟುಂಬ, ಮದುವೆ, ಪ್ರಜನನ ಮತ್ತು ಲೈಂಗಿಕ ಒಲವು ಎಲ್ಲವೂ ವ್ಯಕ್ತಿ ಘನತೆಯ ಅವಿಭಾಜ್ಯ ಅಂಗವಾಗಿವೆ. ಘನತೆಯಿಂದ ಬದುಕಲು ಸಾಧ್ಯವಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುವುದು. ಖಾಸಗಿತನದ ಹಕ್ಕು, ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯದ ಹಕ್ಕುಗಳು ಘನತೆಯನ್ನು ಖಚಿತ ಪಡಿಸುತ್ತವೆ’ ಎಂದು ಸ್ಪಷ್ಟಪಡಿಸಿದೆ.

ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವುದರ ಕುರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘...ಸರ್ಕಾರಕ್ಕಾಗಲಿ ಅಥವಾ ಕಾನೂನಿಗಾಗಲಿ ಸಂಗಾತಿಗಳನ್ನು ಆಯ್ಕೆಮಾಡಿಕೊಳ್ಳುವ ಪ್ರತೀ ವ್ಯಕ್ತಿಯ ಮುಕ್ತ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಅಧಿಕಾರವಿಲ್ಲ’ ಎಂದು ಹೇಳಿದೆ.

ರಾಜದ್ರೋಹದ ಆರೋಪ ಕುರಿತ ವಿಚಾರಣೆಯಲ್ಲಿ ಗಾಂಧೀಜಿ ಮತ್ತು ನ್ಯಾಯಮೂರ್ತಿ ಜೆ.ಬ್ರೂಮಿಫೀಲ್ಡ್ ಅವರ ನಡುವಿನವಾದವು ನ್ಯಾಯಶಾಸ್ತ್ರ ಮತ್ತು ಪ್ರಭುತ್ವಕ್ಕೂ ಮಿಗಿಲಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಸಾರುತ್ತದೆ.

ಇನ್ನೂ ಹಲವು ತೀರ್ಪುಗಳ ಉಲ್ಲೇಖಗಳು ಇರುವ ಪುಸ್ತಕವನ್ನು ಸತ್ಯಾ ಎಸ್. ಅವರು ಸಮರ್ಥವಾಗಿ ಭಾಷಾಂತರಿಸಿದ್ದಾರೆ. ಪುಸ್ತಕ ಓದಿದ ಮೇಲೆ ಸಮಾನತೆ, ಬಂಧುತ್ವವನ್ನು ನಂಬುವವರಿಗೆಲ್ಲಾ ಭಾರತೀಯ ಸಂವಿಧಾನದ ಬಗ್ಗೆ ಹೆಮ್ಮೆ ಎನಿಸದೆ ಇರಲಾರದು.

(ಕೃಪೆ : ಪ್ರಜಾವಾಣಿ, 2022 ಫೆ. 20)

Related Books