ಕೃಷಿಯಿಂದ ಮೂಡಿದ ಸಾಹಿತ್ಯ ಕೃಷಿ ‘ಆನೆ ಸಾಕಲು ಹೊರಟವಳು’


ಲೇಖಕಿ ಸಹನಾ ಕಾಂತಬೈಲು ಅವರ ಆನೆ ಸಾಕಲು ಹೊರಟವಳು ಎಂಬ ಪ್ರಬಂಧ ಸಂಕಲನದ ಬಗ್ಗೆ ಕೆ.ರಘುನಾಥ್ ಅವರು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ..

ನಮ್ಮ ಜನಪದ ಸಾಹಿತ್ಯದ ತಾಯಿ ಬೇರು ಕೃಷಿ. ಈಗ ಅದು ಅಪೂರ್ವವಾದರು ಅದಕ್ಕೆ ಅಪವಾದ ಎನ್ನುವಂತೆ ಸಹನಾ ಅವರ ಈ ಕೃತಿ ಮೂಡಿ ಬಂದಿದೆ. " ಬೇರು ನೀರುಂಡಾಗ ತಣಿಯವೆ ಭೂರುಹದ ಶಾಖೋಪಶಾಖೆಗಳು" ಎಂಬ ಕುಮಾರವ್ಯಾಸನ ವಾಣಿಗೆ ವ್ಯಾಖ್ಯಾನವನ್ನು ಬರೆದಂತೆ ಇವೆ ಇಲ್ಲಿನ ಅಂಕಣ ಬರಹಗಳು.

ಇಲ್ಲಿ ಇರುವುದೆಲ್ಲ ಬೇರು, ನೀರು, ಬೀಜಗಳ ಲೋಕ. ಇವುಗಳ ನಡುವೆ ಇರುವ ಸಾವಯವ ಸಂಬಂಧವನ್ನು ಈ ಪ್ರಬಂಧಗಳು ಅನಾವರಣಗೊಳಿಸುತ್ತವೆ. ಸಹನಾ ಅವರ ಈ ಸಹಯಾನದಲ್ಲಿ ಮೂರು ಯಾನಗಳು ಇವೆ:

ಒಂದು : ಮೇಲೆ ಸೂಚಿಸಿದ ಪ್ರಕೃತಿಯ ಜತೆಗೆ ಸಹಯಾನವಾದರೆ,

ಎರಡು : ಆಧುನಿಕತೆಯೊಂದಿಗಿನ ಸಹಯಾನ: ವಿದ್ಯುತ್, ಕಂಪ್ಯೂಟರ್.

ಮೂರು : ಇದಕ್ಕೆ ಕಾರಣ ಕರ್ತರಾದವರ ನೆನಪುಗಳ ಸಹಯಾನ.

ಒಂದು: ಬೀಜಗಳ ಕಾಪಿಡುವ ಮಹತ್ವದ ಪಾತ್ರವನ್ನು ಮೊದಲಿನಿಂದಲೂ ಮಾಡುತ್ತ ಬಂದವರೆ ಹೆಣ್ಣು ಮಕ್ಕಳು. ಆದ್ದರಿಂದ ಅದಕ್ಕೆ ಮತ್ತು ಅವರಿಗೆ ಅಂಟಿದ ನಂಟು. ಇದನ್ನು ವಂದನಾಶಿವ ಎಂಬ ಪರಿಸರ ವಿಜ್ಞಾನಿ ಒತ್ತು ಕೊಟ್ಟು ಹೇಳುತ್ತಾರೆ. ಬೀಜ ವಿನಿಮಯ ಹೇಗೆ ಸಂಬಂಧ ಬೆಸೆಯುವ ಸಾಧನ ಎಂಬುದನ್ನು ಇವರು ಸ್ಥಾಪಿಸಿದ್ದಾರೆ. ಅದರಂತೆ ನೀರಿಗೂ ನೀರೆಗೂ ಕೂಡ ಅಂಟಿದ ನಂಟೆ. ಅದನ್ನು ಜೋಪಾಸನೆ ಗೈಯುವ ಕಾರ್ಯವು ಅವಳಿಗೆ ಸೇರಿದ್ದು. ನೀರನ್ನು ಹೊರುವವರಿಗೆ ಮಾತ್ರ ನೀರಿನ ಮಹತ್ವದ ಅರಿವು ಆಗುವುದು.- ಅವರ ಭಾರತೀಯ ರೈತರ ಬದುಕು ಮಳೆ ಯೊಡನೆ ಜೂಜಾಟ ಎಂಬುದನ್ನು ಮನಗಾಣಲು ಅವರ 'ಮಳೆ' ಅಂಕಣ ಓದಬೇಕು. ‌

ಬೇರು ಆಳದಲ್ಲಿ ಬೇರುಬಿಡುವುದರಿಂದ ಅದು ಮೇಲ್ನೋಟಕ್ಕೆ ಎದ್ದು ಕಾಣಿಸುವುದಿಲ್ಲ. ಹೆಣ್ಣು ಕೂಡ ಹಾಗೆ.ಅವಳ‌ ಕಾರ್ಯದ ಮಹತ್ವ ಯಾರಿಗೂ ತಿಳಿದಿಲ್ಲ. ಅದಕ್ಕೆ ಅವರು ಕೊಟ್ಟಿರುವ ಆಕಾಶವಾಣಿಯ ಸಂದರ್ಶನದ ಒಂದು ಭಾಗ ನಿದರ್ಶನವಾಗಿದೆ.ಅದರಲ್ಲಿ 'ಎಲ್ಲಾ ಮಾಡುವ ಹೆಂಡತಿಯನ್ನು, ಮನೆಯಲ್ಲಿ ಇರುತ್ತಾಳೆ ಏನೂ ಮಾಡುವುದಿಲ್ಲ' ಎಂದು ಹೇಳುವುದು ಗಂಡಸರ ಪೂರ್ವಗ್ರಹಕ್ಕೆ ನಿದರ್ಶನ.

ಎರಡು , ಆಧುನಿಕತೆಯೊಂದಿಗೆ ಸಹಯಾನ : ಇದು ಪ್ರಾರಂಭವಾಗುವುದು ಸರ್ಕಾರದ ವಿದ್ಯುತ್ ಪೂರೈಕೆ ಶಿಬಿರ ಒಂದರಲ್ಲಿ ಭಾಗವಹಿಸಿ ಅದನ್ನು ಮನೆಗೆ ವ್ಯವಸ್ಥೆ ಮಾಡುವ ಮೂಲಕ. ಅದು ಅವರ ಕಂಪ್ಯೂಟರ್ ಬಳಕೆಗೆ ದಾರಿ ಮಾಡಿಕೊಡುತ್ತದೆ. ‌ಆ ಮೂಲಕ ಲೇಖನ, ಅಂಕಣಗಳನ್ನು ಬರೆಯಲು ಸಾಧನವಾಗಿ ಪರಿಣಮಿಸುತ್ತದೆ. ಉದಯವಾಣಿ ಯ 'ಭೂಮಿಗೀತ' ಎನ್ನುವ ಹೆಸರಿನಲ್ಲಿ ಪ್ರಕಟವಾದ ಅವರ ಅಂಕಣಗಳು ನನ್ನ ಶಿಷ್ಯರಾದ ಗೋವಿಂದ ಭಟ್ ಮತ್ತು ಮು.ವಿ.ವಿ.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗಣೇಶ್ ಉಪಾಧ್ಯರ ಮೆಚ್ಚುಗೆಗೆ ಪಾತ್ರವಾಗಿ ಅವರು ಇಲ್ಲಿ ಬಂದಾಗ ಕನ್ನಡ ವಿಭಾಗದ ಭೇಟಿಗೆ ಕಾರಣವಾಗುತ್ತದೆ.

ಅಲ್ಲದೆ ಕಲ್ಕತ್ತಾ , ಅಮೆರಿಕಗಳ ( ಅಲ್ಲಿ ಅವರಿಗೆ ವಿದೇಶೀ ಸಂಸ್ಕೃತಿಯ ಕುರಿತು ಇದ್ದ‌ ಅನೇಕ ಪೂರ್ವಗ್ರಹಗಳಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಅಲ್ಲದೆ ಅಲ್ಲಿನ ಪುಸ್ತಕ ಸಂಸ್ಕೃತಿಯ ವಿಶ್ವದರ್ಶನವಾಗುತ್ತದೆ) ಅ ಭೇಟಿಗೂ ನಾಂದಿ ಹಾಡುತ್ತದೆ. ಕೃಷಿ ಜೀವನದಲ್ಲಿ ಬೇರು ಬಿಟ್ಟ ಹೆಣ್ಣು, ಜಗದಗಲ ಮುಗಿಲಗಲ ಮಿಗೆಯಗಲವಾದ ಯಶೋಗಾಥೆ ಈ ಲೇಖಕಿಯದು.

ಮೂರು: ನೆನಪುಗಳ ಜತೆಗೆ ಸಹಪಯಣ: ಅದು ಪ್ರಾರಂಭವಾಗುವುದು ಅವರ ಓದುಪ್ರಿಯ ತಂದೆಯವರ ನೆನಪಿನೊಂದಿಗೆ.ಅವರ ಜತೆಗೆ ಕುಳಿತು ಇವರು ಓದುವ ಹವ್ಯಾಸವನ್ನು ರೂಢಿಸಿಕೊಂಡರು.ಅದು ಕ್ರಮೇಣ ಬರಹಯಾನಕ್ಕೆ ಎಡೆಮಾಡಿಕೊಟ್ಟಿತು. ಅವರೊಮ್ಮೆ ತಾನು ಓದಿದ ಶಾಲೆಯ ಮುಂದೆ ಹಾದು ಹೋಗುವಾಗ, ಅಲ್ಲಿ ತಾನು ಕಲಿತ ಪಾಠ ಮತ್ತು ಮಾಡಿದ ಕೈತೋಟಗಳು ನೆನಪಿಗೆ ಬಂದು, ಈಗ ನೋಡಿದರೆ ಅದು ಒಂದು ಗಿಡ ಇಲ್ಲದೆ ಬರಡಾಗಿರುವ ಸ್ಥಿತಿ ಅವರಿಗೆ ವಿಷಾದವನ್ನು ಉಂಟು ಮಾಡುತ್ತದೆ. ಅದಕ್ಕೆ ಅವರು ಕಂಡುಕೊಳ್ಳುವ ಕಾರಣವೆಂದರೆ ಕೃಷಿಗೆ ಈಗಿನ ವಿದ್ಯಾಭ್ಯಾಸದಲ್ಲಿ ಸ್ಥಾನವಿಲ್ಲದೆ ಇರುವುದು. ಇದರಿಂದಾಗಿ ಈಗಿನ ಜನಾಂಗದ ಕೃಷಿ ಕುರಿತ ಅನಾಸಕ್ತಿಗೆ ಕಾರಣವಾಗಿರುವುದು.ಆದ್ದರಿಂದ ಅವರು ನೀಡುವ ಸಲಹೆಯೆಂದರೆ ವಿದ್ಯಾಭ್ಯಾಸದ ಎಲ್ಲಾ ಹಂತದಲ್ಲಿ ಕೃಷಿಗೆ, ಕೃಷಿ ಪ್ರವಾಸಕ್ಕೆ ಆದ್ಯತೆಯನ್ನು ನೀಡುವುದು. ಇದರಿಂದ ಮತ್ತೆ ನಮ್ಮ ಯುವಜನಾಂಗವನ್ನು ಕೃಷಿಯೆಡೆಗೆ ಆಕರ್ಷಿಸಲು ಸಾಧ್ಯವಾಗುತ್ತದೆ. ಎಲ್ಲರೂ ಡಾಕ್ಟರ್, ಇಂಜಿನಿಯರ್ ಗಳಾದರೆ ಕೃಷಿಕರು ಆಗುವವರು ಯಾರು? ಕಂಪ್ಯೂಟರ್ ಅನ್ನ ಉದುರಿಸುತ್ತದೆಯೆ? ಎನ್ನುವ ಅತ್ಯಂತ ಸಮಕಾಲೀನ ಮಹತ್ವದ ಪ್ರಶ್ನೆಯನ್ನು ಎತ್ತಿದ್ದಾರೆ. ಈ ಕಡೆಗೆ ತುರ್ತಾಗಿ ನಮ್ಮ ಶಿಕ್ಷಣ ಸಂಸ್ಥೆಗಳು, ಸರ್ಕಾರ ಗಮನ ಕೊಡಬೇಕಾದ ಅಗತ್ಯ ವಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಇಂತಹ ಅಪರೂಪದ ಪುಸ್ತಕವನ್ನು ಕಳಿಸಿ ಕೊಡುವ ಮೂಲಕ ಓದಲು ಅನುವು ಮಾಡಿಕೊಟ್ಟ ನನ್ನ ಪ್ರಿಯ ಶಿ಼ಷ್ಯೆ ಲೇಖಕಿ ಕಲಾಭಾಗ್ವತ್ ಅವರಿಗೆ ಕೃತಜ್ಞತೆ. ಲೇಖಕಿಗೆ ಅಭಿನಂದನೆ.

ಕೆ. ರಘುನಾಥ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ ಮನಸ್ಸನ್ನು ಆರ್ದ್ರ ಗೊಳಿಸುತ್ತದೆ

06-05-2024 ಬೆಂಗಳೂರು

'ಅನುಪಮಾ ಅವರ ಶೈಲಿ ಹೆಚ್ಚು ಅಬ್ಬರವಿಲ್ಲದೆ, ಆಡಂಬರವಿಲ್ಲದೆ, ಶಾಸ್ತ್ರೀಯ ಚೌಕಟ್ಟುಗಳಲ್ಲಿ, ಹೊರೆ ಎನಿಸದ ಭಾವ ತೀವ್...

ಪುಸ್ತಕ ಬರೆಯುವುದಕ್ಕಿಂತ ಅದಕ್ಕೆ ಹೆಸರಿಡುವುದೇ ಕಷ್ಟದ ಕೆಲಸ

06-05-2024 ಬೆಂಗಳೂರು

'ಈ ಸಂಕಲನವನ್ನು 'ಬಿದಿರ ತಡಿಕೆ' ಎಂಬ ಹೆಸರಿನಿಂದ ಕರೆದಿರುವೆ. 'ಬಿದಿರು' ನಮ್ಮ ಕವಿಗಳಿಗೆ ಒಂದು...

ಅಂಬೇಡ್ಕರ್ ಕುರಿತು ಹೊಸ ಒಳನೋಟಗಳನ್ನು ನೀಡುವ ಕೃತಿ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಿನಚರಿ’

06-05-2024 ಬೆಂಗಳೂರು

‘ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವವನ್ನು ಒಬ್ಬರಿಂದ ಸಂಪೂರ್ಣವಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗುವುದಿಲ...