ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''Ethics”

Date: 12-10-2022

Location: ಬೆಂಗಳೂರು


ನೈತಿಕತೆಯ ಮಾನದಂಡಗಳು ಎಲ್ಲ ಕಾಲದಲ್ಲೂ, ಎಲ್ಲ ವಸ್ತುಗಳನ್ನು, ಎಲ್ಲ ವ್ಯಕ್ತಿಗಳನ್ನು ಒಂದೇ ವಿಧದಲ್ಲಿ ಅಳೆಯಲಾರವು. ಇದನ್ನು ಜಿಜ್ಞಾಸೆಗೆ ಒಡ್ಡುವ ಕ್ರಮಕ್ಕೆ ಪರಿಪೂರ್ಣ ಫಲಿತಾಂಶ ಬರದು ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ಮೇರಿಲ್ಯಾಂಡ್‌ನ ಕವಯಿತ್ರಿ ಲಿಂಡಾ ಪ್ಯಾಸ್ಟನ್ ಕವಿತೆ ಬಗ್ಗೆ ಬರೆದಿದ್ದಾರೆ.

“It is dangerous to be too good” ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕರ ಗುಂಡಿಗೆ ಬಲಿಯಾದ ಸುದ್ದಿ ಕೇಳಿದ ಬರ್ನಾಡ್ ಶಾ ಈ ರೀತಿ ಉದ್ಗರಿಸಿದ್ದರಂತೆ. ಇಡೀ ಜಗತ್ತಿಗೆ ನೈತಿಕ ಬಲದ ವಿಜಯವನ್ನು ಮನಗಾಣಿಸಿದ್ದ ಜೀವವೊಂದು ತನ್ನದೇ ನೆಲದಲ್ಲಿ ತನ್ನ ಜನರಿಂದಲೇ ಹತ್ಯೆಗೀಡಾಗುವ ದುರಂತಕ್ಕೆ ಈ ಒಳ್ಳೆಯತನ ಕಾರಣವಾದ್ದದ್ದನ್ನು ವಿದೇಶಿ ನೆಲದ ಲೇಖಕನೊಬ್ಬನ ಈ ಉದ್ಗಾರದಲ್ಲಿ ಕಂಡು ವಿಚಲಿತಗೊಳ್ಳುತ್ತದೆ ಮನಸ್ಸು. ಗಾಂಧೀಜಿಯವರ ನೈತಿಕ ನಿಲುವುಗಳು ಗೋಡ್ಸೆಗೆ ಅಪ್ರಿಯವಾಗಲು ಕಾರಣವೇನು? ಅಂದರೆ ನೈತಿಕತೆ, ಜೀವನ ಮೌಲ್ಯಗಳು, ಆದರ್ಶಗಳು ಒಂದೇ ಬಣ್ಣದಲ್ಲಿ ವ್ಯಕ್ತಗೊಳ್ಳುವುದು ಅಸಾಧ್ಯ. ಒಬ್ಬನಿಗೆ ನೈತಿಕ ಎನಿಸಿದ್ದು, ಮತ್ತೊಬ್ಬನಿಗೆ ಅನೈತಿಕ ಎನ್ನಿಸಬಹುದು, ಒಬ್ಬನಿಗೆ ಹಿತವಾಗಿರುವುದು ಇನ್ನೊಬ್ಬನಿಗೆ ಅಹಿತಕರವೆನಿಸಬಹುದು. ಕಾಣುವ ರೀತಿಯಲ್ಲಿ ಇರುವ ಎರಡು ಭಿನ್ನ ರೂಪಗಳನ್ನು ನಾವು ಅಲ್ಲಗಳೆಯಲಾಗುವುದಿಲ್ಲ.

ಹಾಗೇ ಇನ್ನೊಂದು ಹಳೆಯ ಕಥೆ. ಹಿಂದೆ ಮೊಸರು ಮಾರುವವರು ಮಣ್ಣಿನ ಗಡಿಗೆಯಲ್ಲಿ ಮೊಸರು ಹೊತ್ತು ಮಾರುತ್ತಿದ್ದರು. ಒಮ್ಮೆ ಒಬ್ಬ ಹೆಣ್ಣುಮಗಳು ಮೊಸರಿನ ಗಡಿಗೆ ಹೊತ್ತು ದಾರಿಯಲ್ಲಿ ಸಾಗುತ್ತಿರುವಾಗ ಆಕೆಯ ತಲೆಯ ಮೇಲೆ, ಕಾಲುಗಳಲ್ಲಿ ನಾಗರಹಾವನ್ನು ಹಿಡಿದ ಹದ್ದು ಹಾರಿಹೋಗುತ್ತಿತ್ತು. ರೋಷ, ಭಯಗಳಿಂದ ಕುದಿಯುತ್ತಾ ಹದ್ದಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಹಾವು ಶತಪ್ರಯತ್ನ ಮಾಡುತ್ತಿರುವಾಗ ಬಾಯಿಂದ ಜಿನುಗಿದ ಅದರ ವಿಷ ಈ ಮೊಸರ ಗಡಿಗೆಯಲ್ಲಿ ಬೀಳುತ್ತದೆ. ಆ ಮೊಸರು ಸೇವಿಸಿದ ಹುಡುಗನೊಬ್ಬ ಮರಣಹೊಂದುತ್ತಾನೆ. ಆ ಹುಡುಗನ ಸಾವಿಗೆ ಮಹಿಳೆ ಕಾರಣವೆಂದು ಮಹಿಳೆಯನ್ನು ಅಪರಾಧಿಯೆಂದು ಪರಿಗಣಿಸಿ ರಾಜನ ಆಸ್ಥಾನದಲ್ಲಿ ವಿಚಾರಣೆಗೆ ಕರೆಯಲಾಗುತ್ತದೆ. ಆಗ ಆ ಹೆಂಗಸು ಸಾವಿಗೆ ತಾನು ಕಾರಣಳಲ್ಲವೆಂದು ಆ ನಾಗರಹಾವೇ ಕಾರಣವೆಂದು ತನ್ನ ನಿರಪರಾಧಿತನವನ್ನು ಪ್ರತಿಪಾದಿಸುತ್ತಾಳೆ. ಆದರೆ ಆ ಹಾವು ಆ ಹುಡುಗನ ಸಾವು ತನ್ನಿಂದ ಅಲ್ಲವೆಂದು ತಾನು ಹದ್ದಿನ ಹಿಡಿತದಿಂದ ಪಾರಾಗಲು ಪ್ರಯತ್ನದಲ್ಲಿದ್ದಾಗ ಆಕಸ್ಮಿಕವಾಗಿ ತನ್ನ ವಿಷ ಬಾಯಿಂದ ಹೊರಗೆ ಚೆಲ್ಲಿತೆಂದು, ಜೀವ ರಕ್ಷಣೆಯ ತನ್ನ ಪ್ರಯತ್ನ ತಪ್ಪಲ್ಲವೆಂದು ವಾದಿಸಿ, ಇದಕ್ಕೆಲ್ಲಾ ಆ ಹದ್ದು ಕಾರಣವೆಂದು ಹೇಳುತ್ತದೆ. ಆದರೆ ಹದ್ದನ್ನು ವಿಚಾರಿಸಲಾಗಿ ತಾನು ನಿರಪರಾಧಿಯೆಂದು, ಹಾವು ತನ್ನ ಆಹಾರವಾದ ಕಾರಣ, ಪ್ರಾಕೃತಿಕ ನಿಯಮದಂತೆ ತನ್ನ ಹಸಿವು ನೀಗಿಸಿಕೊಳ್ಳಲು ಹಾವನ್ನು ಹಿಡಿದೆನೆಂದು ತಾನು ಅಪರಾಧಿಯಲ್ಲವೆಂದು ನಿರೂಪಿಸುತ್ತದೆ. ಹಾಗಾದರೆ ಹುಡುಗನ ಸಾವಿಗೆ ಯಾರು ಕಾರಣ? ಹುಡುಗನ ಸಾವಿನ ನೈತಿಕ ಹೊಣೆ ಯಾರು ಹೊರಬೇಕು? ಈ ಪ್ರಶ್ನೆ ಎದ್ದು ನಿಲ್ಲುತ್ತದೆ.

ನೈತಿಕತೆ, ಮೌಲ್ಯ, ಆದರ್ಶ ಇತ್ಯಾದಿಗಳು ನಾಗರಿಕ ಸಮಾಜಕ್ಕೆ ಅಗತ್ಯವಾಗಿದ್ದರೂ ಕೆಲವೊಮ್ಮೆ ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ ನೈತಿಕ ನಿಲುವುಗಳು, ತತ್ವ ಆದರ್ಶಗಳು ನಮ್ಮ ಮಿತಿಯನ್ನು ಮೀರಿ ಇಂತಹ ಸಂಘರ್ಷಗಳನ್ನು ನಿರ್ಮಿಸುತ್ತವೆ ಎಂಬ ಸಂದೇಶವನ್ನು ನೀಡುತ್ತದೆ ಈ ಕಥಾಭಾಗ. ಒಂಬತ್ತನೇ ತರಗತಿಯ ಪ್ರಥಮ ಭಾಷೆಗೆ ಪಠ್ಯವಾಗಿರುವ ಲಿಂಡಾ ಪ್ಯಾಸ್ಟನ್ ಬರೆದ “ethics” ಕವಿತೆಯ ಓದಿನ ಮೊದಲು ಬರುವ ಪೂರ್ವಸಿದ್ಧತಾ ಚಟುವಟಿಕೆಗೆ ಇದ್ದ ಕಥಾ ಭಾಗ ಇದು. ನೈತಿಕ ಜವಾಬ್ದಾರಿಯ ಪ್ರಶ್ನೆಗೆ ಉತ್ತರ ಸಿಗದಂತಹ ಸಂದಿಗ್ಧ ಸಂದರ್ಭಕ್ಕೆ ಉದಾಹರಣೆಯಾಗಿ ಈ ಭಾಗ ಉಲ್ಲೇಖಿಸಲ್ಪಟ್ಟಿದೆ.

ಯಹೂದಿ ಕುಟುಂಬದಲ್ಲಿ ಜನಿಸಿದ ಲಿಂಡಾ ಮೇರಿಲ್ಯಾಂಡ್‌ನ ಹೆಸರಾಂತ ಕವಯತ್ರಿ. ಇವರು ಬರೆದ “ethics” ಕವಿತೆಯನ್ನು ಈ ನೈತಿಕತೆಯ ವಿಚಾರದ ಕುರಿತಂತೆ ಮುಂದುವರಿಕೆಯ ಭಾಗವಾಗಿ ನೋಡೋಣ. ಮೌಲ್ಯಗಳು, ಸಿದ್ದಾಂತಗಳು, ಆದರ್ಶಗಳು, ನೈತಿಕ ತತ್ವಗಳು ನಾಗರಿಕ ಜಗತ್ತಿನಲ್ಲಿ ಬಹು ಪ್ರಾಮುಖ್ಯತೆಯನ್ನು ಪಡೆದಿವೆ. ಹಾಗಾಗಿ ನಮ್ಮ ಶೈಕ್ಷಣಿಕ ಪಠ್ಯಕ್ರಮದಲ್ಲಿ ನೈತಿಕತೆಯನ್ನು ,ಉದಾತ್ತ ಆಚಾರ ವಿಚಾರಗಳನ್ನು ಪ್ರತಿಪಾದಿಸುವ ಪಠ್ಯಗಳನ್ನು ಅಳವಡಿಸಲಾಗುತ್ತದೆ. ಆದರೆ ನಿಜಕ್ಕೂ ಆ ಪಠ್ಯಗಳು ಮಗುವಿನ ಮನಸ್ಸಿಗೆ ನಾಟಬಲ್ಲವೇ ಎಂಬ ಪ್ರಶ್ನೆ ಕೂಡಾ ಗಮನಾರ್ಹ. ಇಂತಹ ವಿಚಾರವನ್ನು ಲಿಂಡಾ ಇಲ್ಲಿ ಪ್ರಸ್ತಾಪಿಸುತ್ತಾರೆ. ಕಾರಣವೇನೆಂದರೆ ಪರಿಸ್ಥಿತಿಗಳನ್ನು ನಮ್ಮ ಬದುಕಿನ ಮುಖೇನ ಎದುರಿಸಿದಾಗಲೇ ಆ ಅನುಭವದ ಗಾಢ ಪರಿಣಾಮ ಉಳಿದು ಹೇಗೆ ಮಾಡಿದರೆ ಒಳಿತು?, ಯಾವ ದಾರಿ ಹಿತವೆಂಬುದನ್ನು ಅರಿತು ನಮ್ಮ ನಿರ್ಧಾರಗಳನ್ನು ಮಾಡಬಲ್ಲೆವು ಎನ್ನುತ್ತಾರೆ ಲಿಂಡಾ.

ಕವಿತೆಯ ಮೊದಲ ಭಾಗ ಹೀಗಿದೆ

“In ethics class so many years ago
Our teacher asked this question every fall
If there were a fire in a museum
Which would you save, a Rembrandt painting
Or an old woman who hadn’t many
Years left anyhow? Restless on hard chairs
Caring little for pictures or old age
We’d apt one year for life, the next for art”

ಶಾಲೆಯ ಶಿಕ್ಷಕಿಯೊಬ್ಬರು ಪ್ರತಿವರ್ಷವೂ ಶರದೃತುವಿನಲ್ಲಿ ಮಕ್ಕಳಿಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದರು.

“ಒಂದೊಮ್ಮೆ ಮ್ಯೂಸಿಯಂನಲ್ಲಿ ಬೆಂಕಿ ಬಿದ್ದರೆ, ನೀವೇನಾದರೂ ಅಲ್ಲಿದ್ದರೆ ಯಾರನ್ನು ರಕ್ಷಿಸುವಿರಿ ? ಖ್ಯಾತ ರೆಂಬ್ರಂಟ್ ಪೇಂಟಿಂಗನ್ನೋ [ರೆಂಬ್ರಂಟ್ ಹರ್ಮನ್ಸ್ ವ್ಯಾನ್ ರಿಜ್ನ್ ಖ್ಯಾತ ಡಚ್ ಕಲಾವಿದ] ಅಥವಾ ವಯಸ್ಸಾದ ಮುದುಕಿಯನ್ನೋ? “ ಎಂಬ ಈ ಪ್ರಶ್ನೆಗೆ ಪ್ರತಿವರ್ಷವೂ ವಿದ್ಯಾರ್ಥಿಗಳು ಬೇರೆ ಬೇರೆ ಉತ್ತರಗಳನ್ನೇ ನೀಡುತ್ತಿದ್ದರು. ಒಂದು ವರ್ಷ ಪೇಂಟಿಂಗ್ ರಕ್ಷಿಸುವೆವು ಎಂದರೆ ಇನ್ನೊಂದು ವರ್ಷ ಮುದುಕಿಯನ್ನು ಎಂಬ ಉತ್ತರ ಬರುತ್ತಿತ್ತು. ಇದಕ್ಕೆ ಕಾರಣ ಆಯಾ ಸಂದರ್ಭದಲ್ಲಿ ಎಳೆಯ ಮಕ್ಕಳ ಮನಸ್ಸನ್ನು ಯಾವುದು ಕಾಡುತ್ತಿತ್ತೋ ಅದಕ್ಕನುಗುಣವಾದ ಉತ್ತರ. ಎಳೆಯರು ಇಂತಹ ನೈತಿಕ ಪ್ರಶ್ನೆಗಳಿಗೆ ಉತ್ತರಿಸಲಾಗದವರಾಗಿರುತ್ತಾರೆ ಎನ್ನುತ್ತಾರೆ ಲಿಂಡಾ. ಕಾರಣ ಇವುಗಳೆಲ್ಲ ಅನುಭವದ ಮೂಲಕ ಸಿದ್ಧಗೊಳ್ಳುವಂತದ್ದು.

ಮುಂದಿನ ವರ್ಷ ಸ್ವಲ್ಪ ದೊಡ್ಡವಳಾದ ಲಿಂಡಾ ಈ ಪ್ರಶ್ನೆಗೆ ಉತ್ತರವನ್ನು ಶಿಕ್ಷಕಿಯೇ ಹೇಳಬೇಕೆಂದು ಕೇಳುತ್ತಾರೆ. ಆಗ ಟೀಚರ್ ಉತ್ತರ ಕೊಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದೆಂದು ಎಚ್ಚರಿಕೆ ನೀಡುತ್ತಾರೆ. ಹಲವು ವರ್ಷಗಳ ನಂತರ ವಯಸ್ಸಾದ ಲಿಂಡಾ ಸ್ವತಃ ಈ ಮ್ಯೂಸಿಯಂನಲ್ಲಿ ಆ ಅದ್ಭುತ ರೆಂಬ್ರಾಂಟ್ ಕಲಾಕೃತಿಯ ನೋಡಲು ಹೋಗುತ್ತಾರೆ. ಆ ಚಿತ್ರದ ಫ್ರೇಮಿನೊಳಗಡೆ ಬಣ್ಣಗಳು ಋತುಗಳನ್ನೆ ಮೀರಿ ಗಾಢವಾಗಿದ್ದವು. ಇಡೀ ನೆಲವೂ ನೆಲದ ಬಣ್ಣವೂ ಹೊಳಪಿಂದ ಕಂಗೊಳಿಸುತ್ತಿತ್ತು. ನೈಜ ಜಗತ್ತಿನ ಬಣ್ಣವೂ ಮಂಕಾಗುವಂತೆ ಈ ಚಿತ್ರದಲ್ಲಿ ಬಣ್ಣಗಳು ಪ್ರತಿಫಲಿಸಿದ್ದವು.

ಅದನ್ನು ಲಿಂಡಾ ಹೀಗೆ ಉದ್ಘರಿಸುತ್ತಾರೆ.

“The colors within this frame are darker than autumn
Darker even than winter- the browns of earth”

ಹಾಗಾಗಿ ಲಿಂಡಾ ಹೇಳುವ ಈ ಮಾತುಗಳು ಗಮನಾರ್ಹ.

“I know now that woman and painting
And season are almost one
And all beyond saving by children”

ಜೀವನ ಮೌಲ್ಯಗಳು, ಆದರ್ಶಗಳು, ನೀತಿವಂತ ಆಚಾರ ವಿಚಾರಗಳು,ಸದ್ಭಾವನೆಗಳು, ಇಂತಹ ಸಕಾರಾತ್ಮಕ ಧೋರಣೆಗಳು ನೈತಿಕತೆಯ ಭಾಗವಾಗಿವೆ. ಸಣ್ಣಪ್ರಾಯದ ಮಗುವೊಂದು ಇಂತಹ ಘನ ಚಿತ್ರದ ಮೌಲ್ಯವನ್ನು, ಅದು ಹಿಡಿದಿಟ್ಟ ನೆಲದ ಚೆಲುವನ್ನು ಗ್ರಹಿಸಲಾರದು. ಅಂತೆ ಮುಪ್ಪಾದ ಹೆಂಗಸೊಬ್ಬಳ ಅರ್ಥೈಸಿಕೊಳ್ಳುವ, ಅವಳ ಸಮಸ್ಯೆಗಳನ್ನು ತಿಳಿದು ನಡೆಯುವ ಕೆಲಸವೂ, ಅವಳನ್ನು ಕಾಪಾಡುವ ಕೆಲಸವೂ ಆ ಪುಟ್ಟ ಮನಸ್ಸಿಗೆ ಅಸಾಧ್ಯವಾದ ಸಂಗತಿ. ಯಾಕೆಂದರೆ ಮುಪ್ಪಾದ ಹೆಣ್ಣು, ಮತ್ತು ಕಲಾಕೃತಿ ಎರಡೂ ಕಾಳಜಿ ಮತ್ತು ರಕ್ಷಣೆಯನ್ನು ಆಪೇಕ್ಷಿಸುತ್ತವೆ. ಅದೇ ಮಗು ಬೆಳೆಯುತ್ತಾ ಅನುಭವದಿಂದ ಶ್ರೀಮಂತಗೊಳ್ಳುತ್ತಾ ಹೋದಂತೆ ಈ ಮಹತ್ವವನ್ನು ಅರಿತುಕೊಳ್ಳುತ್ತದೆ. ಹಾಗಾಗಿ ಈ ಕಾರಣದಿಂದ ಮಗುವಿನ ನೈತಿಕ ಪ್ರಜ್ಞೆಯನ್ನು ಅಳೆಯುವುದು ಸಾಧ್ಯವಿಲ್ಲ.

ಕವಿತೆ ವರ್ಗಕೋಣೆಯ ಸನ್ನಿವೇಶದೊಂದಿಗೆ ಪ್ರಾರಂಭವಾಗಿ ಮ್ಯೂಸಿಯಂನ ಚಿತ್ರಣದೊಂದಿಗೆ ಮುಕ್ತಾಯವಾಗುತ್ತದೆ. ಆ ಮೂಲಕ ಶಾಲೆಗಳು ನೈತಿಕ ಪ್ರಜ್ಞೆಯನ್ನು ಮಗುವಿನಲ್ಲಿ ಬಲಪಡಿಸುವ ಕೇಂದ್ರವಾಗಿದ್ದರೂ, ಅದನ್ನು ನಿರ್ಧರಿಸುವ ವಿಧಾನ ಮಾತ್ರ ಜಟಿಲವಾದದ್ದು ಮತ್ತು ಕಾಲಕ್ರಮೇಣ ಅನುಭವದ ಮೂಲಕ ಪ್ರಾಪ್ತವಾಗುವಂತದ್ದು. ಹಾಗಾಗಿ ನೈತಿಕತೆಯ ಮಾನದಂಡಗಳು ಎಲ್ಲ ಕಾಲದಲ್ಲೂ, ಎಲ್ಲ ವಸ್ತುಗಳನ್ನು, ಎಲ್ಲ ವ್ಯಕ್ತಿಗಳನ್ನು ಒಂದೇ ವಿಧದಲ್ಲಿ ಅಳೆಯಲಾರವು. ಇದನ್ನು ಜಿಜ್ಞಾಸೆಗೆ ಒಡ್ಡುವ ಕ್ರಮಕ್ಕೆ ಪರಿಪೂರ್ಣ ಫಲಿತಾಂಶ ಬರದು. ಯಾಕೆಂದರೆ ಅದು ಪ್ರಾಯದಿಂದ ಪ್ರಾಯಕೆ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿಯೇ ಅಭಿವ್ಯಕ್ತಗೊಳ್ಳುತ್ತದೆ. ಅದೂ ಅಲ್ಲದೇ ಸಂದರ್ಭಕ್ಕೆ ತಕ್ಕಂತೆ ರೂಪುಗೊಳ್ಳುತ್ತದೆ ವೈಚಾರಿಕ ನೆಲೆಯಲ್ಲಿ ಏಳುವ ಹಲವು ಪ್ರಶ್ನೆಗಳಿಗೆ ಲಿಂಡಾ ಪ್ಯಾಸ್ಟನ್ ಕವಿತೆಯ ಮೂಲಕ ಉತ್ತರಿಸಿದ್ದಾರೆ. ಅದೆಷ್ಟೋ ಘನ ಕಾದಂಬರಿಗಳು, ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದ ಸಿನೇಮಾಗಳು ಹೇಳಲಾಗದ ಸಂಗತಿಯನ್ನು ಈ ಕವಿತೆಗಳು ಇಷ್ಟಿಷ್ಟೇ ಪದಗಳಲ್ಲಿ ಕಟ್ಟಿಕೊಡುವುದು ಎಷ್ಟು ವಿಸ್ಮಯ ಎನಿಸಿಬಿಡುತ್ತದೆ.

-ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...