ಬಾನಬಂಡಿಯ ರೆಕ್ಕೆ ಕಟ್ಟುವ ಊರು

Date: 11-03-2021

Location: .


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗಿಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರು. ವಿಮಾನಯಾನದ ಉಗಮ, ಸ್ವರೂಪ, ಪರಿಶೀಲನೆ-ತಪಾಸಣೆ ಹೀಗೆ ವಿವಿಧ ಪ್ರಕ್ರಿಯೆಯಲ್ಲಿ ಪಡೆದ ಅನುಭವಗಳನ್ನು ತಮ್ಮ ‘ಏರೋ ಪುರಾಣ’ ಅಂಕಣದಲ್ಲಿ ವಿವರಿಸಿದ ಪಠ್ಯವಿದು.

ಇದೀಗ ಜಗತ್ತಿನ ಯಾವ ಭಾಗದಲ್ಲೇ ನಾವಿದ್ದರೂ ನಮ್ಮ ನಮ್ಮ ತಲೆಯ ಮೇಲಿನ ಎತ್ತರದ ಆಕಾಶದಲ್ಲಿ ವಿಮಾನಗಳು ಕಾಣಿಸದ ಕೇಳಿಸದ ಸ್ಥಳವಂತೂ ಅದಾಗಿರಲಿಕ್ಕಿಲ್ಲ; ಪ್ರತಿದಿನ ಸುಮಾರು ಒಂದು ಲಕ್ಷ ವಿಮಾನಗಳು ಹತ್ತಿ ಹಾರಿ ಇಳಿಯುವ ಈ ಪುಟ್ಟ ಪ್ರಪಂಚದಲ್ಲಿ ವಿಮಾನಗಳ ದೃಶ್ಯವೇ ಇಲ್ಲದ, ಸದ್ದೇ ಕೇಳದ ಊರು, ಅವುಗಳು ಬಿಟ್ಟುಹೋದ ಬಿಳಿಹೊಗೆಯ ಅಚ್ಚು ಕಾಣಿಸದ ಆಕಾಶ, ಇರಲಿಕ್ಕಿಲ್ಲ. ಒಂದೊಂದು ವಿಮಾನದ ಬಣ್ಣ ಆಕಾರ ಸದ್ದು ಬೇರೆ ಬೇರೆಯದಾದರೂ ಆ ವಿಮಾನಗಳನ್ನು ಕೊಂಡು ಸಾಕಿ ಸಲಹುವ ಕಂಪೆನಿಗಳು ಅನೇಕ ಇದ್ದರೂ, ಅವುಗಳಲ್ಲಿ ಟಿಕೇಟು ಪಡೆದು ತಿರುಗಾಡುವವರು ಅಸಂಖ್ಯ ಜನರಿದ್ದರೂ, ಆ ಎಲ್ಲ ವಿಮಾನಗಳು ಹುಟ್ಟುವ ಊರು, ವಿನ್ಯಾಸಗೊಂಡು ಜೋಡಣೆ ಹೊಂದಿ ಜೀವ ಪಡೆಯುವ ಜಾಗಗಳು ಜಗತ್ತಿನಲ್ಲಿ ಕೆಲವೇ ಕೆಲವು. ಒಂದು ವೇಳೆ ಅದು ಇನ್ನೂರರಿಂದ ಐದು ನೂರು ಜನರನ್ನು ದೂರದೂರಕ್ಕೆ ಸಾಗಿಸುವ ದೊಡ್ಡ ಗಾತ್ರದ ನಾಗರಿಕ ವಿಮಾನವಾಗಿದ್ದರೆ, ಅಮೆರಿಕದ ಸಿಯಾಟಲ್, ವಿಚಿತಾ ನಗರಗಳ ಬೋಯಿಂಗ್ ತಯಾರಿಯಲ್ಲಿ ಹುಟ್ಟಿರಬೇಕು ಅಥವಾ ಯೂರೋಪಿನ ಏರ್ಬಸ್ ಕಂಪೆನಿಯ ಶಾಖೆಗಳಾದ ಫ್ರಾನ್ಸ್ ನ ಟುಲುಸ್, ಜೆರ್ಮನಿಯ ಹ್ಯಾಮ್ಬರ್ಗ್, ಸ್ಪೇನ್ ನ ಗೆಟಾಫಿ ಮತ್ತು ಬ್ರಿಟನ್ನಿನ ಬ್ರಿಸ್ಟಲ್, ಬ್ರಾಟನ್ ಗಳಲ್ಲಿ ಉತ್ಪಾದನೆಯಾಗಿ ಜೋಡಣೆಯಾಗಿರಬೇಕು. ಇನ್ನು ಐವತ್ತೋ ನೂರೋ ಜನರನ್ನು ಕೂರಿಸಿಕೊಂಡು ಪ್ರಾದೇಶಿಕ ಪ್ರವಾಸ ಮಾಡಬಲ್ಲ ಸಣ್ಣ ವಿಮಾನಗಳನ್ನು ತಯಾರಿಸುವ ಬಂಬಾರ್ಡಿಯರ್, ಕೆನಡಾದ ಮಾಂಟ್ರಿಯಲ್ ಟೊರೊಂಟೊಗಳಲ್ಲಿ, ಎಂಬ್ರೇರ್ ಆದರೆ ಬ್ರೆಝಿಲ್ ನ ಸಾವ್ ಹೋಸೆ ಡವ್ ಕ್ಯಾಂಪಸ್ ಅಲ್ಲಿ ಸಿದ್ಧಗೊಂಡಿರಬೇಕು ಮತ್ತೆ ಕಳೆದ ಹಲವು ವರ್ಷಗಳಿಂದ ಇಂತಹ ಸಣ್ಣ ನಾಗರಿಕ ವಿಮಾನಗಳನ್ನು ತಯಾರಿಸುವ ತೀವ್ರ ಪ್ರಯತ್ನದಲ್ಲಿರುವ ರಷ್ಯಾ, ಜಪಾನ್, ಚೈನಾಗಳ ಕೆಲವು ನಗರಗಳೂ ಈ ಪಟ್ಟಿಗೆ ಮುಂದೊಂದು ದಿನ ಸೇರಬಹುದು.

ವಿಮಾನಗಳು ಜೀವ ಪಡೆಯುವ ಅಂತಹ ಊರುಗಳ ಸಾಲಿನಲ್ಲಿ, ಶತಮಾನಕ್ಕಿಂತ ದೀರ್ಘ ಇತಿಹಾಸ ಇರುವ ಮತ್ತೆ ಕಳೆದ ಐವತ್ತು ವರ್ಷಗಳಲ್ಲಿ ವಿಮಾನಗಳ ರೆಕ್ಕೆಗಳಿಗಾಗಿಯೇ ಗುರುತಿಸಲ್ಪಡುವ ಸ್ಥಳ ಬ್ರಿಟನ್ನಿನ ಬ್ರಿಸ್ಟಲ್. ಈಗ ಚಲಾವಣೆಯಲ್ಲಿಲ್ಲದ ಹಳೆಯ ವಿಮಾನಗಳ ಉಸಾಬರಿಬೇಡ ಎಂದು ಬಿಟ್ಟರೂ ಇಂದು ನಾವು ನೋಡುವ ಹಲವು ವಿಮಾನಗಳು ಇಂಗ್ಲೆಂಡ್ ನ ನೈರುತ್ಯಕ್ಕಿರುವ ಪಟ್ಟಣವಾದ ಬ್ರಿಸ್ಟಲ್ ನ ಜೊತೆಗೆ ಗಾಢವಾದ ನಂಟು ಇರುವವು. ಬ್ರಿಸ್ಟಲ್ ಎನ್ನುವ ಈ ಪಟ್ಟಣವನ್ನು ಕೇಳದ ತಿಳಿಯದ ಮನುಷ್ಯರು ಜಗತ್ತಿನಲ್ಲಿ ಬಹಳ ಮಂದಿ ಇರಬಹುದು ಆದರೆ ಬ್ರಿಸ್ಟಲ್ ನ ಪರಿಚಯ ಇರದ ವಿಮಾನಗಳು ಹೆಚ್ಚು ಇರಲಿಕ್ಕಿಲ್ಲ . ಒಂದೋ ವಿಮಾನಗಳ ಹುಟ್ಟೂರಾಗಿ ಅಥವಾ ಬೇರೆಲ್ಲೋ ಹುಟ್ಟಿದ ವಿಮಾನಗಳ ಪ್ರತಿಸ್ಪರ್ಧಿಯನ್ನು ತಯಾರಿಸುವ ಸ್ಥಳವಾಗಿ ಬ್ರಿಸ್ಟಲ್ ವಿಮಾನ ಲೋಕದಲ್ಲಿ ನಿತ್ಯಪರಿಚಿತ. ಈಗಷ್ಟೇ ಆಕಾಶದಲ್ಲಿ ತನ್ನ ಸೇವೆ ಆರಂಭಿಸಿದ ಯೌವ್ವನದ ಹುಡುಗಾಟದಲ್ಲಿರುವ ಅದೆಷ್ಟೋ ಎಳೆ ವಿಮಾನಗಳಿಗೆ ಅಥವಾ ವರ್ಷಾನುಗಟ್ಟಲೆ ಏರಿ ಹಾರಿ ಸೋತು ಬಸವಳಿದು ನಿವೃತ್ತಿಯ ಅಂಚಿನಲ್ಲಿರುವ ಅನೇಕ ಮುದಿ ವಿಮಾನಗಳಿಗೆ ಮೂಲನಿವಾಸ, ಅಜ್ಜನಮನೆ ಈ ಬ್ರಿಸ್ಟಲ್ ಆಗಿರಬಹುದು. ಮೊನ್ನೆ ಮೊನ್ನೆಯ ಅಂದರೆ 2021ರ ಫೆಬ್ರವರಿ ಹತ್ತೊಂಭತ್ತಕ್ಕೆ ವಿಮಾನಲೋಕದ ಜೊತೆ ಬ್ರಿಸ್ಟಲ್ ನ ಆತ್ಮೀಯ ಸಂಬಂಧ ಶುರುವಾಗಿ ನೂರಾ ಹನ್ನೊಂದು ವರ್ಷಗಳು ಕಳೆದವು. ಅಮೆರಿಕದಲ್ಲಿ ರೈಟ್ ಸಹೋದರರು ವಿಮಾನವನ್ನು ಆಕಾಶಕ್ಕೆ ಹಾರಿಸಿದ ಕೆಲವೇ ವರ್ಷಗಳಲ್ಲಿ ಬ್ರಿಸ್ಟಲ್ ಅಲ್ಲಿಯೂ ವಿಮಾನ ತಯಾರಿಕೆಯ ತಂತ್ರಜ್ಞಾನ ಕೌಶಲ ಯಶಸ್ಸು ಆಂಗ್ಲರ ಕೈಗೆ ದಕ್ಕಿತ್ತು ಮತ್ತು ಇಲ್ಲಿ ವಿಮಾನ ತಯಾರಿಸುವ ಕಂಪೆನಿಯ ಉದಯವಾಗಿತ್ತು. ಅಂದಿನಿಂದ ಇಂದಿನವರೆಗೆ ಬ್ರಿಸ್ಟಲ್ ಅಲ್ಲಿ ನಿರ್ಮಾಣಗೊಂಡು ದೇಶ ವಿದೇಶಗಳಿಗೆ ಹಾರಿದ, ಖಂಡಾಂತರಗಳನ್ನು ಮುಟ್ಟಿದ ನಾಗರಿಕ ವಿಮಾನಗಳ, ಸೇನಾ ವಿಮಾನಗಳ ದೊಡ್ಡ ಸಂತತಿಯೇ ಇದೆ.

ಇಂದು ಹಾರದ ಆದರೆ ಹಿಂದೆ ಹಾರಿ ಇಳಿಯುತ್ತಿದ್ದ ವಿಮಾನಗಳ ಹೆಸರಲ್ಲಿ ಕಟ್ಟಡಗಳು , ಸಂಗ್ರಹಾಲಯಗಳು ಇಲ್ಲಿ ಇವೆ. ಇಲ್ಲಿ ತಯಾರಾದ ವಿಮಾನಗಳ ಬಗ್ಗೆ ಬರೆದಿಟ್ಟ ದಪ್ಪದ ಭಾರದ ಪುಸ್ತಕಗಳೂ ಲೈಬ್ರರಿಗಳಲ್ಲಿ ಅಂಗಡಿಗಳಲ್ಲಿ ಸಿಗುತ್ತವೆ. ತಮ್ಮ ವಿಮಾನಗಳ ಇತಿಹಾಸವನ್ನು ಪ್ರೀತಿಸುವ ರಮಿಸುವ ಆಂಗ್ಲರಂತೂ ಇಲ್ಲಿ ಎಲ್ಲೆಲ್ಲೂ ಎದುರಾಗುತ್ತಾರೆ . ತನ್ನ ಪ್ರಾಯದ ಕಾಲದಲ್ಲಿ ತಾನು ಯಾವ ವಿಮಾನದ ರೆಕ್ಕೆಯ ತಯಾರಿಯಲ್ಲಿ ಕೆಲಸ ಮಾಡಿದ್ದೆ ಎಂದು ಕತೆ ಹೇಳುವ ವೃದ್ಧರು ಬ್ರಿಸ್ಟಲ್ ಅಲ್ಲಿ ಇದ್ದಾರೆ. ಆ ಕಾಲದಲ್ಲಿ, ಕ್ಯಾಲ್ಕುಲೇಟರ್, ಗಣಕ ಯಂತ್ರ, ಸಾಫ್ಟ್ ವೆರ್ ಇರದೇ, ಬರಿಯ ಪೆನ್ಸಿಲ್ ಕಾಗದ ಡ್ರಾಯಿಂಗ್ ಬೋರ್ಡ್ ಗಳನ್ನು ಬಳಸುತ್ತ ಎಂತೆಂತಹ ವಿಮಾನಗಳನ್ನು ಅವುಗಳ ರೆಕ್ಕೆಗಳನ್ನು ತಾವು ವಿನ್ಯಾಸ ಮಾಡಿದೆವೆಂದೂ, ಇ-ಮೈಲ್ ಅಂತರ್ಜಾಲ ಸಂಪರ್ಕ ಇಲ್ಲದೇ ನೂರುಗಟ್ಟಲೆ ಪುಟದ ತಾಂತ್ರಿಕ ಮಾಹಿತಿ ವರದಿಗಳನ್ನು ಫ್ಯಾಕ್ಸ್ ಯಂತ್ರದ ಮೂಲಕ ರವಾನಿಸಿಕೊಂಡು ಓದುತ್ತಿದ್ದೆವೆಂದೂ ಮಂದದೃಷ್ಟಿಯ ತಮ್ಮ ಕಣ್ಣುಗಳಲ್ಲಿ ಹೊಳಪು ತುಂಬಿಸಿಕೊಂಡು ಆಡುತ್ತಾರೆ.

ಭಾರತೀಯರು ಕನ್ನಡಿಗರು ಸೇರಿದಂತೆ ಜಗತ್ತಿನ ಬೇರೆ ಬೇರೆ ಭಾಗದ ವಿಮಾನ ತಂತ್ರಜ್ಞರನ್ನು ಇದೀಗ ಉದ್ಯೋಗಿಗಳಾಗಿ ಹೊಂದಿರುವ ಬ್ರಿಸ್ಟಲ್ ನ ವಿಮಾನ ತಯಾರಿಸುವ ಸಂಸ್ಥೆಯ ಗತಕಾಲದ ರೂಪ ಸ್ವರೂಪ ಇಂದಿಗಿಂತ ಭಿನ್ನವಾಗಿತ್ತು. ಮತ್ತೆ ಬ್ರಿಸ್ಟಲ್ ನ ಹಿಂದಿನ ವಿಮಾನ ತಯಾರಿಕೆಯ ಧೂಳು ಹಿಡಿದ ಕತೆಗಳ ಪುಟ ತಿರುಗಿಸುವಾಗ ಆ ಕಾಲದ ವಿಮಾನಗಳ ಜೊತೆಗೆ ಜಾರ್ಜ್ ವೈ ಟ್ಎನ್ನುವ ವ್ಯಕ್ತಿಯೂ ಅನಾಯಾಸವಾಗಿ ಕಣ್ಣೆದುರು ಬಂದು ನಿಲ್ಲುತ್ತಾನೆ. ಜಾರ್ಜ್, ಬ್ರಿಸ್ಟಲ್ ನ ಒಬ್ಬ ಸಾಮಾನ್ಯ ಪೈಂಟರನ ಮಗ. ಶಾಲೆಗೆ ಹೋಗು ಎಂದರೆ ಚಕ್ಕರ್ ಹೊಡೆದು ಹಗಲುಕನಸು ಕಾಣುತ್ತ ತಿರುಗುತ್ತಿದ್ದವನು. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಇನ್ನು ಶಾಲೆಗೀಲೆ ಬೇಡ ಎನ್ನುತ್ತ ಓದನ್ನು ನಿಲ್ಲಿಸಿ 'ಆಫೀಸು ಬಾಯ್ ' ಆಗಿ ಕೆಲಸ ಶುರು ಮಾಡಿದ. ನಂತರ ಶೇರು ವ್ಯವಹಾರ ಆರಂಭಿಸಿ ಕೈಯಲ್ಲಿ ಸ್ವಲ್ಪ ಕಾಸು ಸಂಪಾದನೆಯೂ ಆಯಿತು. 1874ರಲ್ಲಿ, ಅಂದರೆ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಬ್ರಿಟನ್ನಿನ ಮೊದಲ ವಿದ್ಯುತ್ ಚಾಲಿತ ಟ್ರಾಮ್ ಫ್ಯಾಕ್ಟರಿ ಸ್ಥಾಪಿಸಿದ. ಟ್ರಾಮ್ ಎಂದರೆ ಊರೊಳಗೆ ನಿಧಾನವಾಗಿ ಓಡಾಡುವ ರೈಲಿನಂತಹ ಸಂಚಾರಿ ವ್ಯವಸ್ಥೆ. ಬ್ರಿಸ್ಟಲ್ ನ ಈ ಟ್ರಾಮ್ ಫ್ಯಾಕ್ಟರಿಯ ತಳಗಟ್ಟಿನ ಮೇಲೆಯೇ ಜಾರ್ಜನ ಕನಸುಗಳ ಸೌಧ ಆಕಾರ ಪಡೆಯುತ್ತಿದ್ದುದು. ಅಂದಿನ ಬ್ರಿಟನ್ನಿನ ಬಹುಪಾಲು ಟ್ರಾಮ್ ಮತ್ತು ಬಸ್ಸುಗಳು ಜಾರ್ಜನ ಫ್ಯಾಕ್ಟರಿಯಲ್ಲಿ ಹುಟ್ಟು ಪಡೆದವು. 1903ರಲ್ಲಿ ಅಮೆರಿಕದ ರೈಟ್ ಸಹೋದರರು ಯಂತ್ರಚಾಲಿತ ವಿಮಾನ ಹಾರಿಸಿದ ಚಾರಿತ್ರಿಕ ಘಟನೆಯಿಂದ ಸ್ಪೂರ್ತಿ ಪಡೆದು ಜಾರ್ಜ್ ವೈಟ್, 1910ರ ಫೆಬ್ರವರಿ 19ರಂದು ಬ್ರಿಸ್ಟಲ್ ಅಲ್ಲಿ ತನ್ನ ಟ್ರಾಮ್ ಫ್ಯಾಕ್ಟರಿಯ ಮಾಡಿನ ಕೆಳಗೇ 'ಬ್ರಿಸ್ಟಲ್ ಏರೋಪ್ಲೇನ್ ಕಂಪೆನಿ 'ಯನ್ನು ಆರಂಭಿಸಿದ. ಜಗತ್ತಿನ ಕೆಲವು ಅತ್ಯುತ್ತಮ ತಂತ್ರಜ್ಞರನ್ನು ವಿನ್ಯಾಸಕಾರನ್ನು ತನ್ನ ಕಂಪೆನಿಗೆ ಸೇರಿಸಿಕೊಂಡು ಐದಾರು ತಿಂಗಳುಗಳಲ್ಲಿ 'ಬಾಕ್ಸ್ ಕೈಟ್' ಎನ್ನುವ ವಿಮಾನ ಮಾದರಿಯನ್ನು ಸಿದ್ದಗೊಳಿಸಿದ. 1910ರ ಜುಲೈ 30 ರಂದು ಈ ವಿಮಾನ ಬರೇ 150 ಅಡಿಗಳ ಮೊದಲ ಹಾರಾಟ ನಡೆಸಿದರೂ, ಯಂತ್ರಚಾಲಿತ ಹಾರಾಟಕ್ಕೆ ಆರಂಭಿಕ ಯಶಸ್ಸನ್ನು ನೀಡಲು, ಆಕಾಶದ ಕನಸಿಗೆ ಟೊಂಗೆ ಟಿಸಿಲು ಹುಟ್ಟಿಸಲು ಪ್ರೇರಣೆಯಾಯಿತು. ಮೊದಲ ಹಾರಾಟ ಪರೀಕ್ಷೆಗಳು ಮುಗಿದು ವಿಮಾನ ಮಾರಾಟಕ್ಕೆ ಸಿದ್ಧವಾದಾಗ, ವಿಮಾನದ ಬಗ್ಗೆ ಜಾಹೀರಾತಿನ ಕರಪತ್ರಗಳು ಇಂಗ್ಲೆಂಡಿನ ಕಟ್ಟಡಗಳ ಖಾಲಿ ಗೋಡೆಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದವಂತೆ . ವಿಮಾನವೇ ಪ್ರಧಾನ ಪಾತ್ರದಲ್ಲಿರುವ ಸಿನೆಮಾದ ಪೋಸ್ಟರ್ ಗಳಂತೆ .‘ಇಬ್ಬರನ್ನು ಕೊಂಡೊಯ್ಯಬಲ್ಲ , ಐವತ್ತು ಅಶ್ವಶಕ್ತಿಯ ಎಂಜಿನ್ ಇರುವ ವಿಮಾನದ ಬೆಲೆ ಆ ಕಾಲಕ್ಕೆ 950 ಪೌಂಡು" (ಸುಮಾರು ಒಂದು ಲಕ್ಷ ರೂಪಾಯಿ) ಎಂದೂ ದಪ್ಪ ಅಕ್ಷರಗಳಲ್ಲಿ ಆ ಜಾಹೀರಾತಿನಲ್ಲಿ ಬರೆದಿರುತ್ತಿತ್ತಂತೆ. ವಿಮಾನ ತಯಾರಿ ಉತ್ಸಾಹದಲ್ಲಿ ಸಾಗುತ್ತಿರುವಾಗ, ಮೊದಲ ಮಹಾಯುದ್ಧ ನಡೆಯುತ್ತಿದ್ದ 1917ರ ಸಮಯದಲ್ಲಿ ಜಾರ್ಜನ ವಿಮಾನ ಫ್ಯಾಕ್ಟರಿಯ ಕೆಲಸಗಾರರು ಕೂಡ ಯುದ್ಧದಲ್ಲಿ ಭಾಗಿಯಾಗಬೇಕಾದ ಅನಿವಾರ್ಯ ಪ್ರಸಂಗ ಬಂತು . ವಿಮಾನ ಫ್ಯಾಕ್ಟರಿಯಲ್ಲಿ ಉದ್ಯೋಗಿಗಳೇ ಇಲ್ಲದಿರುವ ಸಮಸ್ಯೆ ಎದುರಾದಾಗ , ಯುದ್ಧಕ್ಕೆ ಹೋದವರ ಮನೆಯ ಮಹಿಳೆಯರು ತಮ್ಮ ತಮ್ಮ ಮನೆಯ ಪುರುಷರ ಬದಲಿಗೆ ಕೆಲಸಕ್ಕೆ ಬರಲು ಶುರು ಮಾಡಿದರು. ಲೋಹವನ್ನು ಬಡಿದು ಬಗ್ಗಿಸಿ ಬಾಗಿಸಿ ಹದಮಾಡಿ ವಿಮಾನದ ರೆಕ್ಕೆಗಳನ್ನು ಮಾಡುವುದು ಇನ್ನೂ ಆಗ ಶುರು ಆಗಿರಲಿಲ್ಲ . ಮರದ ಚೌಕಟ್ಟುಗಳ ಹಂದರಕ್ಕೆ ಬಟ್ಟೆಯ ಹಾಸಿನ ಹೊದಿಕೆ ಸುತ್ತಿ ರೆಕ್ಕೆಯನ್ನು ಅಣಿಗೊಳಿಸುತ್ತಿದ್ದ ಕಾಲ ಅದು. ಹೆಚ್ಚು ತ್ರಾಣವನ್ನು ಬಳಸದೆ ನಾಜೂಕು ಕೌಶಲದಲ್ಲಿಯೇ ರೆಕ್ಕೆಗಳ ನಿರ್ಮಾಣ ಸಾಧ್ಯ ಆಗುತ್ತಿದ್ದುದು ಮಹಿಳಾ ವಿಮಾನ ತಂತ್ರಜ್ಞೆಯರಿಗೆ ಅನುಕೂಲವೂ ಆಯಿತು. ಹೇಗೂ ಪರಿಣತಿ ದೊರಕಿದ್ದರಿಂದ ಮೊದಲ ಮಹಾಯುದ್ಧ ಮುಗಿದ ನಂತರವೂ ಸ್ತ್ರೀಯರು ವಿಮಾನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವುದು ಮುಂದುವರಿಯಿತು. ಈಗಲೂ ಇಲ್ಲಿನ ವಿಮಾನ ಫ್ಯಾಕ್ಟರಿಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ .

ವಿಮಾನ ಉದ್ಯಮ ಕಳೆದ ನೂರಕ್ಕೂ ಮಿಕ್ಕಿದ ವರ್ಷಗಳಲ್ಲಿ ಬ್ರಿಸ್ಟಲ್ ನ ಅನೇಕ ಮನೆಗಳಿಗೆ ಸಂಬಂಧ ಕಲ್ಪಿಸಿದೆ. ಒಂದೇ ಕುಟುಂಬದವರು, ಎರಡು ತಲೆಮಾರಿನವರು, ಬಂಧುಗಳು ಎಲ್ಲರೂ ಒಂದೇ ವಿಮಾನ ಕಂಪೆನಿಯಲ್ಲಿ ಕೆಲಸ ಮಾಡುವ ಉದಾಹರಣೆಗಳು ಸಿಗುತ್ತವೆ. ಜಗತ್ತಿನ ಬೇರೆಬೇರೆ ಭಾಷೆ ಸಂಸ್ಕೃತಿಗಳ ಜನರನ್ನು ಈ ಊರಿಗೆ ಎಳೆದು ತಂದಿದೆ. ಇನ್ನು ಕಚೇರಿಯ ಹೊರಗಿನ ಭೇಟಿಯಾಗುವ ಜನಸಾಮಾನ್ಯರಲ್ಲಿಯೂ , ಮನೆಯ ಪೈಪು ರಿಪೇರಿ ಮಾಡುವ , ಟಾಕ್ಸಿ ಓಡಿಸುವ , ಗ್ಯಾರೇಜು ಇಟ್ಟುಕೊಂಡವರಲ್ಲಿಯೂ ವಿಮಾನಗಳ ಬಗೆಗೆ ಟಿಪ್ಪಣಿ ಮಾಡಬಲ್ಲವರು, ಸಂದರ್ಭ ಬಂದರೆ ತಮ್ಮ ಹಳೆಯ ಅನುಭವಗಳನ್ನು ಹೆಕ್ಕಿ ಹಂಚಿಕೊಳ್ಳುವವರು ಇದ್ದಾರೆ. ವಿಮಾನವನ್ನು ನೋಡಿದರೆ ಒಂದು ಚಂದದ ಹಕ್ಕಿಯನ್ನು ನೋಡಿದಷ್ಟೇ ಉಲ್ಲಾಸಿತರಾಗುತ್ತಾರೆ . ಕಳೆದ ನೂರಾ ಹನ್ನೊಂದು ವರ್ಷಗಳಲ್ಲಿ ಬ್ರಿಸ್ಟಲ್ ಮೂಲಕವೇ ವಿಮಾನಗಳ ವಂಶದಲ್ಲಿ ಹುಟ್ಟು ಜಾಗ ಸ್ಥಾನ ಪಡೆದ ಮತ್ತೆ ದೀರ್ಘ ಕಾಲ ಸೇವೆಯಲ್ಲಿದ್ದ, ದುಡಿದು ಹಣ್ಣಾದ ವಿಮಾನಗಳ ನಮೂನೆಗಳ ಬಗ್ಗೆ ಆಳವಾದ ಮಾಹಿತಿ ಇರುವವರು ನಿರರ್ಗಳವಾಗಿ ಮಾತನಾಡಬಲ್ಲವರು ವಿಮಾನ ಕಚೇರಿಯ ಹೊರಗೂ ಸಿಗುತ್ತಾರೆ .

ಶತಮಾನದ ಹಿಂದೆ ಅಂಬೆಗಾಲಿಟ್ಟು ನಡೆದ 'ಬಾಕ್ಸ್ ಕೈಟ್', ನಂತರ ತಯಾರಾದ ದೈತ್ಯ ವಿಮಾನ ಬ್ರಬಜೋನ್ , ಮೊದಲ ಬಾರಿಗೆ ಉತ್ತರ ಅಟ್ಲಾಂಟಿಕ್ ಸಮುದ್ರವನ್ನು ಲಂಘಿಸಿದ ಬ್ರಿಟಾನಿಯ , ಶಬ್ದವನ್ನು ಹಿಂದಿಕ್ಕಿ ಸಾಗುತ್ತಿದ್ದ 'ಕಾಂಕರ್ಡ್ ' , ಮತ್ತೆ ಅನೇಕ ಸೇನಾವಿಮಾನಗಳು ಈ ಊರಲ್ಲಿ ಹುಟ್ಟುಪಡೆದ ವಿಮಾನಗಳ ಸಂತತಿಯ ಅಮರ ಸದಸ್ಯರು . ಮತ್ತೆ ಅದೇ ವಂಶಕ್ಕೆ, ಹದಿನೈದು ವರ್ಷಗಳ ಹಿಂದೆ ಆಕಾಶವನನ್ನು ಏರಿದ " ಡಬ್ಬಲ್ ಡೆಕ್ಕರ್" ಜಂಬೋ A380, ದೂರ ಸಂಚಾರಿ ಹಾಗೂ ಹಗುರಾಗಿ ಹಾರುವ ಸ್ಪರ್ಧೆಯಲ್ಲಿ ಬೋಯಿಂಗ್ ನ 787ಗೆ ಎದುರಾಳಿಯಾಗಿರುವ ಹೊಸ ತಂತ್ರಜ್ಞಾನದ ಎ350ಗಳು ತೀರಾ ಇತ್ತೀಚಿನ ಸೇರ್ಪಡೆಗಳು. ಈ ಸುದೀರ್ಘ ವಂಶವಾಹಿನಿಯ ಆರಂಭ ಆಗಿದ್ದು ಬ್ರಿಸ್ಟಲ್ ನ ಒಂದು ಮುರುಕು ಸೂರಿನ ಶೆಡ್ಡಿನಲ್ಲಿ . 1910ರ 'ಬಾಕ್ಸ್ ಕೈಟ್' ವಿಮಾನದಿಂದ ಶುರುವಾಗಿ 1969ರಲ್ಲಿ ಮೊದಲು ಹಾರಾಟ ಮಾಡಿದ ಶಬ್ದಾತೀತ ವೇಗದ ಕಾಂಕಾರ್ಡ್ ವಿಮಾನದ ಕಲ್ಪನೆಯ ತನಕವೂ ಆಂಗ್ಲರು ಬೇರೆ ದೇಶಗಳ ಜೊತೆ ಸಹಕಾರವೊ ಅವಲಂಬನೆಯೊ ಇಲ್ಲದೆ ಸ್ವತಃ ಇಡೀ ವಿಮಾನವನ್ನು ತಯಾರಿಸುತ್ತಿದ್ದರು, ನೆರೆಯ ಯೂರೋಪಿನ ವಿಮಾನ ತಯಾರಕ ನೆಲೆ ಫ್ರಾನ್ಸ್ ನಿಂದ ಶುರುವಾಗಿ ದೂರದ ಅಮೆರಿಕದ ಜೊತೆಗೆ ಸ್ಪರ್ಧೆಯಲ್ಲಿದ್ದರು. ಕಾಂಕಾರ್ಡ್ ವಿಮಾನವನ್ನು ವಿನ್ಯಾಸಗೊಳಿಸುವಾಗ ಆರಂಭವಾದ ಆಂಗ್ಲರ ಮತ್ತು ಫ್ರೆಂಚರ ಜೊತೆಗಾರಿಕೆ ಯೂರೋಪಿನ ವಿಮಾನ ಉದ್ಯಮಕ್ಕೆ ಸಹಕಾರ ಸಹಭಾಗಿತ್ವದ ವಿಭಿನ್ನ ಹಾದಿಯನ್ನು ತೋರಿಸಿಕೊಟ್ಟಿತು . 1970ರಲ್ಲಿ ' ಬ್ರಿಸ್ಟಲ್ ಏರೋಪ್ಲೇನ್ ಕಂಪೆನಿ ' ಯೂರೋಪಿನ ಇತರ ವಿಮಾನ ಕಂಪೆನಿಗಳೊಡನೆ ವಿಲೀನಗೊಂಡು ಏರ್ಬಸ್ ಎನ್ನುವ ಹೆಸರಿನ ಜಾಗತಿಕ ರೂಪವನ್ನು ಪಡೆಯಿತು ಯೂರೋಪಿನ ದೇಶಗಳ ನಡುವಿನ ಅತಿಯಾದ ಮತ್ಸರ ಮುನಿಸು ಸ್ಪರ್ಧೆ ಯುದ್ಧಗಳನ್ನು ಮರೆಯುವ ಮೀರುವ, ವ್ಯಾಪಾರದ ನೆಪದಲ್ಲಿ ಒಗ್ಗೂಡುವ ಯತ್ನ ಅದಾಯಿತು . ಮಹಾಯುದ್ಧಗಳಲ್ಲಿ ಯೂರೋಪಿನ ದೇಶಗಳು ಕಂಡ ಸೋಲು, ನಾಶ, ಪಾಠಗಳು ಮತ್ತು ಬಲಿಷ್ಠ ಅಮೆರಿಕದ ವಿಮಾನ ಉದ್ಯಮದ ಏಕಸ್ವಾಮ್ಯವನ್ನು ಎದುರಿಸಬೇಕಾದ ಅಗತ್ಯ ಇಂತಹ ಅನಿವಾರ್ಯ ಹೊಂದಾಣಿಕೆಗೆ ಯೂರೋಪಿನ ವಿಮಾನ ಕಂಪೆನಿಗಳನ್ನು ಪ್ರೇರೇಪಿಸಿದವು. ಜಾರ್ಜ್ ವೈಟ್ ನ ಟ್ರಾಮ್ ಫ್ಯಾಕ್ಟರಿ, ವಿಮಾನ ಫ್ಯಾಕ್ಟರಿ ಇದ್ದ ಸ್ಥಳದಲ್ಲೇ ಈಗ ಏರ್ಬಸ್ ಕಂಪೆನಿಯ ಬ್ರಿಸ್ಟಲ್ ಶಾಖೆ ಇದೆ. ಮತ್ತೆ ಬ್ರಿಸ್ಟಲ್ ಕಚೇರಿಯ ಗೋಡೆಯ ಮೇಲೆ ಮೂಲಪುರುಷನಾದ ಸರ್ ಜಾರ್ಜ್ ವೈಟ್, ಆತನ ಕಾಲದಲ್ಲಿ ಇಲ್ಲಿ ಸಿದ್ಧಗೊಂಡ ವಿಮಾನಗಳ ಚಿತ್ರಗಳಿವೆ. ಇಂದಿನ ಈಗಿನ ಕಂಪೆನಿಯ ರೂಪುರೇಷೆಯಲ್ಲಿ, ಬ್ರಿಸ್ಟಲ್ ಅಲ್ಲಿ ವಿನ್ಯಾಸಗೊಳ್ಳುವ ವಿಮಾನ ರೆಕ್ಕೆಗಳು ಇಂಗ್ಲೆಂಡ್ ನ ನೆರೆಯ ಪ್ರಾಂತ್ಯವಾದ ವೇಲ್ಸ್ ನ ಬ್ರಾಟನ್ ಎನ್ನುವ ಊರಿನ ಫ್ಯಾಕ್ಟರಿಯಲ್ಲಿ ಉತ್ಪಾದನೆಗೊಳ್ಳುತ್ತವೆ. ನಿರ್ಮಾಣದ ಕೊನೆಯ ಹಂತವಾಗಿ ಫ್ರಾನ್ಸ್ ನ ಟುಲೂಸ್ ಅಥವಾ ಜರ್ಮನಿಯ ಹ್ಯಾಮ್ಬರ್ಗ್ ಎನ್ನುವ ಊರಿಗೆ ಸಾಗಿಸಲ್ಪಟ್ಟು ಕೊನೆಯ ಹಂತದ ಜೋಡಣೆ ನಡೆಯುತ್ತದೆ. ಎಲ್ಲೆಲ್ಲಿಂದಲೋ ಬಂದು ಸೇರಿಕೊಳ್ಳುವ ಭಾಗಗಳು ಅವಯವಗಳು ಪರಿಕರಗಳು ಎಲ್ಲವೂ ಒಂದಾಗುತ್ತವೆ, ವಿಮಾನವಾಗಿ ರೂಪುಗೊಳ್ಳುತ್ತವೆ. ಹೀಗೆ ಆಕಾರ ಪಡೆದ ವಿಮಾನಗಳು ಕಠಿಣ ಪರೀಕ್ಷೆ, ತೀವ್ರ ತಪಾಸಣೆಗಳಿಗೆ ಒಳಪಟ್ಟು ಆಕಾಶಕ್ಕೆ ಹಾರುವ ಪರವಾನಿಗೆ ಪಡೆಯುತ್ತವೆ. ಖರೀದಿಯನ್ನು ಕಾಯ್ದಿರಿಸಿರುವ ಏರ್ಲೈನ್ ಅಥವಾ ವಿಮಾನ ನಡೆಸುವ ಕಂಪನಿಗಳಿಗೆ ಮಾರಲ್ಪಡುತ್ತವೆ. ಅಂತಹ ವಿಮಾನಗಳು ಯಾನ ಆರಂಭಿಸಿ ನಾವಿರುವ ಊರೂರುಗಳ ಮೇಲಿನ ಆಕಾಶದಲ್ಲಿ ಹಾರತೊಡಗುತ್ತವೆ.

ಮತ್ತೆ, ಇಲ್ಲಿಯೇ ರೆಕ್ಕೆಗಳನ್ನು ಕಟ್ಟಿಸಿಕೊಂಡ ವಿಮಾನಗಳು ಮುಂದೊಂದು ದಿನ ಬ್ರಿಸ್ಟಲ್ ನ ಮೇಲೆಯೇ ಹಾರುವಾಗ ಶತಮಾನದ ಹಿಂದಿನ ಅಜ್ಜನ ಮನೆಯ ನೆನಪಾಗಿ ರೆಕ್ಕೆ ಬಡಿಯಬಹುದು. ಮತ್ತೆ ಈ ಕಾಲದಲ್ಲಿ ಇವೆಲ್ಲವನ್ನೂ ಗೋಡೆಯ ಮೇಲಿನ ಚಿತ್ರಪಟದೊಳಗಿನಿಂದಲೇ ನೋಡುವ ಜಾರ್ಜ್ ವೈಟ್, ವಿಮಾನದ ರೆಕ್ಕೆಗಳಂತಹ ತೀಡಿದ ತುಂಬಿದ ಮೀಸೆಯ ಮಗ್ಗುಲಿನಿಂದ ನಸುನಗಬಹುದು.

ಈ ಅಂಕಣದ ಹಿಂದಿನ ಬರಹಗಳು

ಗಗನಯಾನದ ದೈತ್ಯ ಹೆಜ್ಜೆಗಳು

ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ

ಆಗಸದ ಬಂಡಿಗಳ ಅಂಗರಚನಾಶಾಸ್ತ್ರ

ಒಂದು ಆಕಾಶ ಹಲವು ಏಣಿಗಳು

ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...