​​​​​​​ಚೀನೀ ಸಂಪ್ರದಾಯದಲ್ಲಿ ಸಿಂಹನೃತ್ಯ 

Date: 02-06-2022

Location: ಬೆಂಗಳೂರು


'ಚೀನಾದಲ್ಲಿ ಪ್ರಾಣಿಗಳು ಅಥವಾ ಪೌರಾಣಿಕ ಮೃಗಗಳನ್ನು ಹೋಲುವ ಮುಖವಾಡಗಳನ್ನು ಧರಿಸಿ ನರ್ತಿಸುವ ಹಳೆಯ ಸಂಪ್ರದಾಯವಿದೆ. ಶುಜಿಂಗ್‌ ಎಂಬ ಪ್ರಾಚೀನ ಗ್ರಂಥದಲ್ಲಿ ಕಾಡು ಮೃಗಗಳು ಮತ್ತು ಫೀನಿಕ್ಸ್ ನೃತ್ಯಗಳೆಂಬ ಮುಖವಾಡದ ನೃತ್ಯಗಳ ಬಗ್ಗೆ ವಿವರಿಸಲಾಗಿದೆ' ಎನ್ನುತ್ತಾರೆ ಶ್ರೀವಿದ್ಯಾ ಅವರು ತಮ್ಮ ಸಿಂಗಾಪುರ್ ಡೈರೀಸ್ ಅಂಕಣದಲ್ಲಿ ಚೀನೀ ಸಂಪ್ರದಾಯವಾಗಿ ಆಚರಣೆಯಲ್ಲಿರುವ ಸಿಂಹನೃತ್ಯದ ಕುರಿತು ಬರೆದಿದ್ದಾರೆ.

ಬಾಲ್ಯದಿಂದಲೂ ಯಕ್ಷಗಾನ ನೋಡುವುದೆಂದರೆ ಅಚ್ಚುಮೆಚ್ಚು. ಇಲ್ಲಿ ಬರುವ ಪೌರಾಣಿಕ ಕಥೆಗಳು ಎಷ್ಟರ ಮಟ್ಟಿಗೆ ಅರ್ಥವಾಗುತ್ತಿದ್ದವೋ ಗೊತ್ತಿಲ್ಲ. ಆದರೆ ರಾತ್ರಿಯಿಡೀ ಯಕ್ಷಗಾನವನ್ನು ನೋಡಬೇಕೆನ್ನುವ ಹಟ ನಮ್ಮಲ್ಲಿತ್ತು. ಮರುದಿನ ಬೆಳಿಗ್ಗೆ ಆಟ ಪೂರ್ತಿ ನೋಡಿದಿರೋ ಎಂದು ಅಪ್ಪ ಕೇಳುವ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಬೇಕೆನ್ನುವ ಹುಮ್ಮಸ್ಸು ಬೇರೆ. ಉಳಿದೆಲ್ಲಾ ಪ್ರಸಂಗಗಳಿಗಿಂತಲೂ ದೇವಿ ಮಹಾತ್ಮೆ ಕಥೆಯ ಬಗ್ಗೆ ವಿಶೇಷ ಒಲವು. ಅಲ್ಲಿ ಬರುವ ದೊಡ್ಡ ದೊಡ್ಡ ಕಿರೀಟದ ವೇಷಗಳು, ಮಹಿಷಾಸುರ ಪ್ರವೇಶದ ಅಬ್ಬರ, ದೇವಿಯ ಪ್ರತ್ಯಕ್ಷ, ಅನೇಕ ಯುದ್ಧಗಳ ಸನ್ನಿವೇಶವನ್ನು ನೋಡೋದೇ ನಮಗೆ ಆಸಕ್ತಿದಾಯಿಕ ಸಂಗತಿಯಾಗಿತ್ತು. ಇವುಗಳನ್ನೆಲ್ಲಾ ಹತ್ತಿರದಿಂದಲೇ ಆಸ್ವಾದಿಸಬೇಕು ಎನ್ನುತ್ತಾ ರಂಗಸ್ಥಳದ ಸಮೀಪದಲ್ಲೇ ಕೂತು ವೀಕ್ಷಿಸಲು ರೆಡಿಯಾಗುತ್ತಿದ್ದೆವು. ಈ ಕಥೆಯಲ್ಲಿನ ಕಿರೀಟದ ವೇಷಗಳು ಭಯವನ್ನು ಹುಟ್ಟಿಸಿದರೆ, ಹಾಸ್ಯದ ಸನ್ನಿವೇಶಗಳು, ಸಿಂಹ ನೃತ್ಯ ಹಾಗೂ ಅದರ ತುಂಟಾಟಿಕೆ ನಮ್ಮನ್ನು ನಗೆಕಡಲಲ್ಲಿ ತೇಲಿಸುತ್ತಿದ್ದವು.

ಯಕ್ಷಗಾನದ ಜೊತೆಗೆ ಇಷ್ಟಪಡುತ್ತಿದ್ದ ಮತ್ತೊಂದು ಸಂದರ್ಭ ದಸರಾ ಉತ್ಸವ. ಈ ವೇಳೆ ದಕ್ಷಿಣ ಕನ್ನಡದಲ್ಲಿ ಹುಲಿವೇಷ ಕುಣಿತ, ಸಿಂಹ ನೃತ್ಯಗಳು ಸಾಮಾನ್ಯ. ಪಕ್ಕವಾದ್ಯಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮನೆಯಂಗಳದ ಸುತ್ತಾ ಹೆಜ್ಜೆ ಹಾಕುತ್ತಾ ಮನೆಮಂದಿಯನ್ನೆಲ್ಲಾ ರಂಜಿಸುವುದು ಈ ತಂಡದ ಹೈಲೈಟ್. ಮನೆಮನೆಗೆ ತೆರಳಿ ನೃತ್ಯ ಪ್ರದರ್ಶನ ನೀಡುವ ಇವರ ಹಿಂದೆ ಒಂದು ರಾಶಿ ಮಕ್ಕಳ ದಂಡು ಇರುವುದಂತೂ ಸುಳ್ಳಲ್ಲ. ದಾರಿಯುದ್ದಕ್ಕೂ ವೇಷಧಾರಿಗಳಿಂದ ಚೇಷ್ಟೆ, ಮನೋರಂಜನೆ ಪಡೆಯುವ ಮಕ್ಕಳ ಖುಷಿ ಕೇಳೋದೇ ಬೇಡ.C:\Users\kshri\Desktop\lion.jpg

ವಿಶೇಷವೆಂದರೆ ಚೀನಿಯರ ಸಂಸ್ಕೃತಿಯಲ್ಲೂ ಸಿಂಹನೃತ್ಯ ಎಂಬ ಪ್ರಾಕಾರವಿದೆ. ಆದರೆ ಇವು ನಮ್ಮಲ್ಲಿಗಿಂತ ಸಂಪೂರ್ಣ ಭಿನ್ನ. ಚೀನಿಯರ ಡ್ರ್ಯಾಗನ್ ನೃತ್ಯದ ರೀತಿಯಲ್ಲೇ ಸಿಂಹನೃತ್ಯ ನೆರವೇರುವುದು ಸಂಪ್ರದಾಯ. ಇದನ್ನು ಧೈವೀ ಸ್ವರೂಪವಾಗಿ ಬಿಂಬಿಸಲಾಗುತ್ತದೆ. ಈ ನೃತ್ಯ ಸೇವೆ ಮೂಲಕ ದುಷ್ಟಶಕ್ತಿಗಳ ನಾಶ ಹಾಗೂ ಅದೃಷ್ಟ, ಸಮೃದ್ಧಿಯನ್ನು ಬರಮಾಡಿಕೊಳ್ಳುವಿಕೆ ಎಂಬುದು ಚೀನಿ ನಂಬಿಕೆ. ಸಿಂಹದ ನೃತ್ಯವನ್ನು ಸಾಮಾನ್ಯವಾಗಿ ಚೀನೀ ಹೊಸ ವರ್ಷ ಮತ್ತು ಇತರೇ ಚೀನೀ ಸಾಂಪ್ರದಾಯಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳಲ್ಲಿ ನಡೆಸಲಾಗುತ್ತದೆ. ಹೊಸ ವ್ಯಾಪಾರ, ವಹಿವಾಟುಗಳ ಆರಂಭ, ವಿವಾಹ ಸಮಾರಂಭ, ವಿಶೇಷ ಅತಿಥಿಗಳನ್ನು ಗೌರವಿಸುವ ನಿಟ್ಟಿನ್ನಲ್ಲೂ ಈ ನೃತ್ಯವನ್ನು ಕೈಗೊಳ್ಳಲಾಗುತ್ತದೆ.

ಚೀನಾದಲ್ಲಿ ಪ್ರಾಣಿಗಳು ಅಥವಾ ಪೌರಾಣಿಕ ಮೃಗಗಳನ್ನು ಹೋಲುವ ಮುಖವಾಡಗಳನ್ನು ಧರಿಸಿ ನರ್ತಿಸುವ ಹಳೆಯ ಸಂಪ್ರದಾಯವಿದೆ. ಶುಜಿಂಗ್‌ ಎಂಬ ಪ್ರಾಚೀನ ಗ್ರಂಥದಲ್ಲಿ ಕಾಡು ಮೃಗಗಳು ಮತ್ತು ಫೀನಿಕ್ಸ್ ನೃತ್ಯಗಳೆಂಬ ಮುಖವಾಡದ ನೃತ್ಯಗಳ ಬಗ್ಗೆ ವಿವರಿಸಲಾಗಿದೆ. ಕ್ವಿನ್ ರಾಜವಂಶದ ಮೂಲಗಳಲ್ಲಿ ಭೂತೋಚ್ಚಾಟನೆಯ ಆಚರಣೆಗಳನ್ನು ಪ್ರದರ್ಶಿಸುವ ನರ್ತಕರು ಕರಡಿ ಚರ್ಮದ ಮುಖವಾಡವನ್ನು ಧರಿಸುತ್ತಿದ್ದರೆಂದು ತಿಳಿಸಲಾಗಿದೆ.

ಅಂದ ಹಾಗೆ ಪ್ರಾಚೀನ ಚೀನಾದಲ್ಲಿ ಸಿಂಹಗಳೇ ಇರಲಿಲ್ಲ. ಸಿಂಹ, ಡ್ರ್ಯಾಗನ್, ಫೀನಿಕ್ಸ್ ಮತ್ತು ಯುನಿಕಾರ್ನ್ ಗಳು ಕೇವಲ ಪೌರಾಣಿಕ ಪ್ರಾಣಿಗಳಾಗಿ ಹೆಸರಿಸಲ್ಪಟ್ಟವುಗಳಾಗಿವೆ. ಹಾನ್ ರಾಜವಂಶದ ಅವಧಿಯಲ್ಲಿ ರೇಷ್ಮೆ ರಸ್ತೆಯ ಪ್ರವರ್ತಕ ಜಾಂಗ್ ಕಿಯಾನ್, ಗೌರವಾರ್ಥಕವಾಗಿ ಪಾಶ್ಶಿಮಾತ್ಯ ದೇಶದಿಂದ ನಿಜವಾದ ಸಿಂಹವೊಂದನ್ನು ಖರೀದಿಸಿದರು. ಅದುವರೆಗೆ ಸಿಂಹದ ಬಗ್ಗೆ ಅರಿವೇ ಇಲ್ಲದ ಚೀನೀಯರು, ಆ ಪ್ರಾಣಿಯ ಹಾವಭಾವ ಮತ್ತು ಚಲನೆಯನ್ನು ಅನುಕರಿಸುತ್ತಾ ಮನರಂಜನೆಯಾಗಿ ಬಳಸಲು ಆರಂಭಿಸಿದರು. ಬೌದ್ಧ ಸಂಸ್ಕೃತಿಯಲ್ಲಿ ಮಂಜುಶ್ರೀ ಬೋಧಿಸತ್ವ, ಸಿಂಹವನ್ನು ವೈಯಕ್ತಿಕ ಸವಾರಿಗೆ ಬಳಸುತ್ತಿದ್ದರು ಎನ್ನಲಾಗಿದೆ. ಬೌದ್ಧಧರ್ಮದ ಬೆಳವಣಿಗೆಯೊಂದಿಗೆ ಕ್ರಮೇಣ ಉತ್ತರ ಮತ್ತು ದಕ್ಷಿಣ ರಾಜವಂಶಗಳಲ್ಲಿ { 386 – 589AD} ಸಿಂಹ ನೃತ್ಯವು ಜನಪ್ರಿಯವಾಯಿತು. ಟ್ಯಾಂಗ್ ಹಾಗೂ ಸಾಂಗ್ ರಾಜವಂಶದ ಅವಧಿಯಲ್ಲಿ {960 – 1279AD} ಸಾಂಪ್ರದಾಯಿಕ ಉತ್ಸವಗಳಲ್ಲಿ ಸಿಂಹ ನೃತ್ಯವನ್ನು ಪ್ರದರ್ಶಿಸಲಾಯಿತು.

C:\Users\kshri\Desktop\lion 4.jpg

ನಮ್ಮ ಊರಿನ ಸಿಂಹ ನೃತ್ಯ ಗಳೆಂದರೆ ಉದ್ದನೆಯ ಪೋಷಾಕು ಧರಿಸಿ ಏಕವ್ಯಕ್ತಿಯಿಂದಲೇ ಅಭಿನಯ. ಆದರೆ ಚೀನಿಯರ ಸಿಂಹದ ನೃತ್ಯವನ್ನು ಸಾಮಾನ್ಯವಾಗಿ ಇಬ್ಬರು ನರ್ತಕರು ನಿರ್ವಹಿಸುತ್ತಾರೆ. ಅವರಲ್ಲಿ ಒಬ್ಬರು ಸಿಂಹದ ತಲೆಯ ಭಾಗವನ್ನು ಹಾಗೂ ಇನ್ನೊಬ್ಬರು ಹಿಂಭಾಗವನ್ನು ನಿಯಂತ್ರಿಸುತ್ತಾರೆ. ಸಿಂಹ ನೃತ್ಯದ ಮೂಲಭೂತ ಚಲನೆಗಳನ್ನು ನಾವು ಚೀನೀ ಸಮರ ಕಲೆಗಳಲ್ಲಿ ಕಾಣಬಹುದು. ನೃತ್ಯಗಾರರು ಸಾಮಾನ್ಯವಾಗಿ ಸ್ಥಳೀಯ ಕುಂಗ್ ಫೂ ಕ್ಲಬ್‌ಗಳ ಸದಸ್ಯರಾಗಿರುತ್ತಾರೆ. ನೃತ್ಯದ ಚಮತ್ಕಾರಿಕ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಕಠಿಣ ತರಬೇತಿಯಲ್ಲಿ ತೊಡಗುತ್ತಾರೆ. ಚೀನಿಯರ ಸಿಂಹ ನೃತ್ಯವೆಂದರೆ ಅದು ಮನಬಂದಂತೆ ಕುಣಿಯುವ ಆಟ ಅಲ್ಲ. ಅದಕ್ಕೂ ಒಂದಷ್ಟು ಕಟ್ಟುನಿಟ್ಟಿನ ಪದ್ಧತಿಗಳಿವೆ.

ಮೊದಲಿಗೆ ಯಜಮಾನನ ಉದ್ದೇಶ ಈಡೇರಲಿ ಎಂದು ಪ್ರಾರ್ಥಿಸುವ ಮೂಲಕ ಸಿಂಹ ನೃತ್ಯವನ್ನು ಆರಂಭಿಸಲಾಗುತ್ತದೆ. ಹರ್ಷಚಿತ್ತದಿಂದ ಮುಂದಕ್ಕೆ ಧಾವಿಸುತ್ತಾ ಸಿಂಹವು ತನ್ನ ತಲೆಯನ್ನು ಪ್ರದಕ್ಷಿಣಾಕಾರವಾಗಿ ಮೂರು ಬಾರಿ ಉರುಳಿಸುತ್ತದೆ. ಬಳಿಕ ಅಚ್ಚರಿಯನ್ನು ವ್ಯಕ್ತಪಡಿಸುತ್ತಾ, ವಾಸನೆಯನ್ನು ಅರಸುತ್ತಾ, ಕಾಲಿನಿಂದ ನೆಲವನ್ನು ಕೆರೆದುಕೊಳ್ಳುತ್ತ ದೊಡ್ಡ ವೃತ್ತಾಕಾರದಲ್ಲಿ ಸಂಚರಿಸಲು ಆರಂಭಿಸುತ್ತದೆ. ಈ ಸಮಯದಲ್ಲಿ ಸಿಂಹದ ಮನಸ್ಥಿತಿಯನ್ನು ಜನರಿಗೆ ಮನದಟ್ಟು ಮಾಡುವ ಸಲುವಾಗಿ ನರ್ತಕರ ಹೆಜ್ಜೆಗಳು ಬದಲಾಗುತ್ತಾ ಸಾಗುತ್ತವೆ. ಚೌಕ, ಅಡ್ಡ, ನೇರ ನಡಿಗೆಗಳು ಸಿಂಹದ ವರ್ತನೆಯನ್ನು ವಿವರಿಸುವಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತವೆ. ಸಿಂಹವು ಆಶ್ಚರ್ಯಗೊಂಡಾಗ ಮುಂಭಾಗದ ನರ್ತಕ ಸಿಂಹದ ತಲೆಯನ್ನು ತನ್ನ ತಲೆಯ ಮೇಲಿಟ್ಟು ಅಭಿನಯಿಸುತ್ತಾನೆ.

ಮುಂದಿನ ಹಂತದಲ್ಲಿ ಸಿಂಹ ನಿದ್ರಿಸುವ ದಿನಚರಿಯನ್ನು ಪ್ರದರ್ಶಿಸಲಾಗುತ್ತದೆ. ತಲೆಯ ಭಾಗ, ಕಣ್ಣು, ಕಿವಿ, ಕಾಲುಗಳ ಚಲನವಲನಗಳು, ಸಿಂಹಗಳು ಕನಸು ಕಾಣುವ ಶೈಲಿಯನ್ನು ಕೂಡ ನೃತ್ಯಗಾರರು ಬಹಳ ಸೂಕ್ಷ್ಮವಾಗಿ ಬಣ್ಣಿಸುತ್ತಾರೆ. ನಿದ್ರಿಸುವಾಗ ಎದುರಾಗುವ ನೊಣ, ಜಿಗಟೆಗಳ ಕಾಟವನ್ನು ತಪ್ಪಿಸಲು ನಡೆಸುವ ಕಾದಾಟ, ಆಗಾಗ ನಡೆಯುವ ಆಕಳಿಕೆ, ತನ್ನ ಪಾದಗಳಿಂದ ಕಿವಿಯ ತುರಿಸುವಿಕೆ ಹೀಗೆ ಸಿಂಹದ ವಿಭಿನ್ನ ಹಾವಭಾವಗಳನ್ನು ಅಭಿನಯದ ಮೂಲಕ ಮನೋಜ್ಞವಾಗಿ ವಿವರಿಸಲಾಗುತ್ತದೆ. C:\Users\kshri\Desktop\lion 5.jpg

ಇದಾದ ಬಳಿಕ ಗುಹೆಯಿಂದ ಹೊರಬರುವ ಸಿಂಹ, ಸೂರ್ಯನ ಕಿರಣಗಳ ಪ್ರಕಾಶಕ್ಕೆ ತನ್ನ ಕಣ್ಣು ರೆಪ್ಪೆಗಳನ್ನು ಮಿಟುಕಿಸುವ ಪರಿ ನಿಜಕ್ಕೂ ವಿಭಿನ್ನವಾಗಿರುತ್ತದೆ. ಬಳಿಕ ತನ್ನ ದೇಹವನ್ನು ಎಡಕ್ಕೆ - ಬಲಕ್ಕೆ ಉರುಳಿಸುತ್ತಾ ಹಸಿವನ್ನು ವ್ಯಕ್ತಪಡಿಸುತ್ತದೆ. ಈ ಸಂದರ್ಭದಲ್ಲಿ ನಡೆಯುವುದೇ ನೃತ್ಯದ ಕೊನೆಯ ಘಟ್ಟ. ಇದನ್ನು "ಚೊಯ್ ಚಿಯಾಂಗ್" ಅಂದರೆ ಹಸಿರನ್ನು ಪಡೆಯುವಿಕೆ ಎಂದು ಕರೆಯಲಾಗುತ್ತದೆ.

ಚೋಯ್ ಚಿಯಾಂಗ್‌ನಲ್ಲಿ ಹಲವು ವಿಧಗಳಿವೆ. ಟೈನ್ ಚಿಯಾಂಗ್ ಎಂಬ ಹೆಸರಿನ ಪದ್ಧತಿ ಅತ್ಯಂತ ಜನಪ್ರಿಯವಾದುದು. ನೃತ್ಯ ನಡೆಯುವ ಮುಂಭಾಗದಲ್ಲಿ ಉದ್ದನೆಯ ಬಿದಿರಿನ ಕೋಲಿಗೆ ಕೊಂಚ ಹಸಿರು ಎಲೆಗಳ ತರಕಾರಿ ಹಾಗೂ ಕೆಂಪು ಲಕೋಟೆಯಲ್ಲಿ ಹಣವನ್ನಿಟ್ಟು ಕಟ್ಟಲಾಗಿರುತ್ತದೆ. ಕೆಲವೊಮ್ಮೆ ಈ ಕೋಲಿನ ಎತ್ತರ ಮೂರನೇ ಮಹಡಿಯಷ್ಟು ತಲುಪಿರುತ್ತದೆ. ಬಹುಮಾನವನ್ನು ತಲುಪಲು ಸಿಂಹ ನರ್ತಕರು ಇಲ್ಲಿ ಅಸಾಧಾರಣ ಕೌಶಲ್ಯ ಮತ್ತು ಸಮತೋಲನವನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಅತಿ ಎತ್ತರದ ಟೈನ್ ಚಿಯಾಂಗ್‌ಗಾಗಿ 15 ಅಥವಾ 20 ಮಂದಿಯನ್ನೊಳಗೊಂಡ ಪಗೋಡಾ ರಚನೆಯನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಸಿಂಹವು ಇವರ ಬೆನ್ನಲ್ಲೇರಿ ಬಹುಮಾನವನ್ನು ವಶಕ್ಕೆ ಪಡೆದುಕೊಳ್ಳುತ್ತದೆ.

ಮತ್ತೊಂದು ಸಾಮಾನ್ಯವಾದ ವಿಧ ಡೀ ಚಿಯಾಂಗ್. ಇವುಗಳಲ್ಲಿ ಮತ್ತೆ ಎರಡು ಪದ್ಧತಿಗಳು. ಸೋಮ್ ಸಿಂಗ್ ಬಾನೆ ಯುಯೆಟ್ ಅಂದರೆ ಚಂದ್ರನನ್ನು ಸುತ್ತುವರೆದಿರುವ ಮೂರು ನಕ್ಷತ್ರಗಳು ಮತ್ತು ಚಾಟ್ ಸಿಂಗ್ ಬುನೆ ಯುಯೆಟ್ ಅಂದರೆ ಏಳು ಚಂದ್ರನ ಸುತ್ತಲಿನ ನಕ್ಷತ್ರಗಳು. ಇವುಗಳಲ್ಲಿ ಬಿದಿರು ಕೋಲಿನ ಬದಲಾಗಿ ನೆಲದಲ್ಲೇ ತ್ರಿಕೋನ ಆಕೃತಿಯಲ್ಲಿ ಬಹುಮಾನದ ಚೀಲವು, ಹಣ ತುಂಬಿದ ಲಕೋಟೆ, ಹಸಿರು ಎಲೆ ತರಕಾರಿ ಹಾಗೂ ಕಿತ್ತಳೆ ಹಣ್ಣನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಕಡಿಮೆ-ಅನುಭವಿ ಸಿಂಹ ನೃತ್ಯಗಾರರು ನಿರ್ವಹಿಸುತ್ತಾರೆ. ಚಂದ್ರನನ್ನು ಸುತ್ತುವರೆದಿರುವ ಏಳು ನಕ್ಷತ್ರಗಳು" ಕಾರ್ಯಗತಗೊಳಿಸಲು ಹೆಚ್ಚು ಸಮತೋಲನ ಮತ್ತು ಸ್ಥಿರವಾದ ನಿಲುವು ಅಗತ್ಯವಿರುತ್ತದೆ. ಸಣ್ಣ ಪ್ರಮಾಣದಲ್ಲಿ ನೀರು, ಕೆಲವು ನಾಣ್ಯಗಳು, ಏಳು ಕಿತ್ತಳೆಗಳನ್ನು ಬಹುಮಾನದಲ್ಲಿ ಅಳವಡಿಸಲಾಗಿರುತ್ತದೆ. ಇದಲ್ಲದೆ ವಿಷ ಹಾವು ಜೊತೆಗಿನ ಕಡಿತದ ಸಿಂಹ ನೃತ್ಯ, ಸೇತುವೆ ದಾಟುವ ಸಿಂಹ ನೃತ್ಯಗಳು ಕೂಡ ಚೀನಿ ಸಂಪ್ರದಾಯದಲ್ಲಿ ಕಾಣಬಹುದು.

ಕೊನೆಯದಾಗಿ ಈ ಚೀಲವನ್ನು ತನ್ನ ವಶಕ್ಕೆ ಪಡೆಯುವ ಸಿಂಹವು, ತರಕಾರಿ ಹಾಗೂ ಕಿತ್ತಳೆಯನ್ನು ತಿನ್ನುವ ಶಾಸ್ತ್ರವನ್ನು ಪೂರೈಸಿ ಉಳಿದವುಗಳನ್ನು ಹೊರಚೆಲ್ಲುತ್ತದೆ. ನಂತರ ಬಹುಮಾನ ಕಟ್ಟಲ್ಪಟ್ಟಿದ್ದ ಸ್ಥಳದಲ್ಲಿ ಮೆರವಣಿಗೆ ನಡೆಸಿ ಸಂತೃಪ್ತಿ ಹೊಂದಿರುವುದಾಗಿ ಸೂಚಿಸುತ್ತದೆ

ಚೀನಿಯರ ಈ ಸಿಂಹ ನೃತ್ಯದಲ್ಲಿ ಪ್ರಮುಖವಾಗಿ ಎರಡು ವಿಧ. ಉತ್ತರದ ಶೈಲಿ ಹಾಗೂ ದಕ್ಷಿಣದ ಶೈಲಿ.
ಚೀನಾದ ಉತ್ತರದಲ್ಲಿ ಸಿಂಹನೃತ್ಯವನ್ನು ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣು ಸಿಂಹಗಳ ಜೋಡಿಯಾಗಿ ನಡೆಸಲಾಗುತ್ತದೆ. ಉತ್ತರದ ಸಿಂಹಗಳು ಚಿನ್ನದ-ಬಣ್ಣದ ಮರದ ತಲೆಯನ್ನು ಹೊಂದಿರುತ್ತದೆ. ಗಂಡು ಸಿಂಹವನ್ನು ಸೂಚಿಸC:\Users\kshri\Desktop\lion 2.jpgಲು ಅದರ ತಲೆಯ ಮೇಲೆ ಕೆಂಪು ಬಿಲ್ಲು ಹಾಗೂ ಹೆಣ್ಣನ್ನು ಪ್ರತಿನಿಧಿಸಲು ಹಸಿರು ಬಿಲ್ಲು ಕೂದಲುಗಳನ್ನು ಅಳವಡಿಸಲಾಗಿರುತ್ತದೆ. ಇಲ್ಲಿನ ಸಿಂಹಗಳ ಚಲನೆಗಳು ಜೀವಂತ, ಚಮತ್ಕಾರಿಕವಾಗಿದ್ದು , ಉತ್ತರದ ಜನರು ಹಿಂದಿನ ಕಾಲದಲ್ಲಿ ಕುದುರೆಗಳ ಮೇಲೆ ಹೆಚ್ಚಾಗಿ ಸವಾರಿ ಮಾಡುತ್ತಿದ್ದ ಹಿನ್ನಲೆಯಲ್ಲಿ ಹೆಚ್ಚು ಸಾಹಸಮಯ ಹೆಜ್ಜೆಗಳನ್ನು ಕಾಣಬಹುದು. ಉತ್ತರದ ಸಿಂಹಗಳು ಕೆಲವೊಮ್ಮೆ ಎರಡು ದೊಡ್ಡ ವಯಸ್ಕ ಸಿಂಹಗಳು ಮತ್ತು ಒಂದು ಜೋಡಿ ಸಣ್ಣ ಯುವ ಸಿಂಹಗಳೊಂದಿಗೆ ಕುಟುಂಬವಾಗಿ ಕಾಣಿಸಿಕೊಳ್ಳುತ್ತವೆ. ಗೋಲಾಕಾರದ ವಸ್ತುವನ್ನು ಹಿಡಿದುಕೊಂಡು ಸಿಂಹಗಳನ್ನು ಮುನ್ನಡೆಸುವ ಯೋಧನ ಪಾತ್ರವನ್ನು ಇಲ್ಲಿ ಗಮನಿಸಬಹುದು. ಈ ಭಾಗದ ಸಿಂಹನೃತ್ಯವು ಸಾಮಾನ್ಯವಾಗಿ ದಕ್ಷಿಣ ಸಿಂಹಕ್ಕಿಂತ ಹೆಚ್ಚು ತಮಾಷೆಯಾಗಿರುತ್ತದೆ. ಯುವ ಸಿಂಹಗಳು ವಯಸ್ಕ ಸಿಂಹಗಳನ್ನು ಕೀಟಲೆ , ವಯಸ್ಕ ಸಿಂಹವು ಯುವಕರನ್ನು ಗೇಲಿ ಮಾಡುವ ಮೂಲಕ ಕುಟುಂಬದ ಸಂತೋಷವನ್ನು ಪಸರಿಸುವ ವಿಭಿನ್ನ ಪ್ರಯತ್ನ ನೃತ್ಯದ ಮೂಲಕ ವ್ಯಕ್ತಪಡಿಸುತ್ತದೆ. ಇವು ಹೆಚ್ಚಾಗಿ ಚೀನಾದ ಬೀಜಿಂಗ್, ಹೆಬೈ ಮತ್ತು ಶಾಂಕ್ಸಿಯಲ್ಲಿ ಜನಪ್ರಿಯವಾಗಿದೆ.

ದಕ್ಷಿಣ ಭಾಗದ ಸಿಂಹ ನೃತ್ಯವು ಗುವಾಂಗ್‌ಡಾಂಗ್ ಪ್ರಾಂತ್ಯದಿಂದ ಹುಟ್ಟಿಕೊಂಡಿದೆ. ಈ ಸಿಂಹವು ಒಂದೇ ಕೊಂಬನ್ನು ಹೊಂದಿದ್ದು, ನಿಯಾನ್ ಎಂಬ ದುಷ್ಟಶಕ್ತಿಯ ದಂತಕಥೆಯೊಂದಿಗೆ ಹೆಸರಿಲ್ಪಡುತ್ತದೆ. ಈ ನೃತ್ಯ ಶೈಲಿಯು ದಕ್ಷಿಣ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಜನಪ್ರಿಯವಾಗಿದೆ. ನೃತ್ಯದ ಪ್ರದರ್ಶನ ಶೈಲಿಯು ಶಕ್ತಿಯುತ ಚಲನೆಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ದೊಡ್ಡ ಗಾತ್ರದ ವೇಷಭೂಷಣಗಳು ಮತ್ತು ಪ್ರಕಾಶಮಾನವಾದ ದಪ್ಪ ಬಣ್ಣಗಳನ್ನು ಒಳಗೊಂಡಿದೆ. ಸಿಂಹ ನರ್ತಕರು ಬಹುಮಾನದ ಚೀಲವನ್ನು ಆರಿಸಲು ಎತ್ತರಕ್ಕೆ ಏರುವ ಸಲುವಾಗಿ ದಪ್ಪ ಮರದ ಕೋಲುಗಳ ಜೊತೆ ತುಲನೆ ಮತ್ತು ಕಾಲಿನ ಬಲಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ದಕ್ಷಿಣ ಸಿಂಹಗಳಲ್ಲಿ ಫಟ್ ಸ್ಯಾನ್ ಮತ್ತು ಹಾಕ್ ಸಾನ್ ಎಂಬ ಎರಡು ಪ್ರಮುಖ ಶೈಲಿಗಳಿವೆ.

ಸಿಂಹ ನೃತ್ಯದ ವೇಷಭೂಷಣವು ಸಿಂಹದ ತಲೆ ಮತ್ತು ಸಿಂಹದ ದೇಹ ಎಂಬ ಎರಡು ಭಾಗಗಳನ್ನು ಒಳಗೊಂಡಿದೆ. ಬಿದಿರಿನಿಂದ ರಚನೆಗೊಂಡ ತಲೆಯು, ಹಿಮಧೂಮ, ಕಾಗದ ಹಾಗೂ ತುಪ್ಪಳದೊಂದಿಗೆ ಬಾಳಿಕೆ ಬರುವ ಲೇಯರ್ಡ್ ಬಟ್ಟೆಯಿಂದ ರಚಿತಗೊಂಡಿರುತ್ತವೆ. ತಲೆಯ ಭಾಗವು ಸಾಮಾನ್ಯವಾಗಿ 5 ಕೆ.ಜಿ ವರೆಗೆ ತೂಕವಿರುತ್ತದೆ. ನರ್ತಕರು ತುಪ್ಪಳ ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸುತ್ತಾರೆ, ಅದು ಅವರ ಮೇಲ್ಭಾಗದ ಉಡುಪಿನ ಶೈಲಿಗೆ ಹೊಂದಿಕೆಯಾಗಿರುತ್ತದೆ. ಆದಾಗ್ಯೂ ಹೊಸ ಸಿಂಹಗಳನ್ನು ಬಿದಿರಿನ ಬದಲಿಗೆ ಅಲ್ಯೂಮಿನಿಯಂನಂತಹ ಆಧುನಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ತಲೆಯ ವಿನ್ಯಾಸದಿಂದ ಸಿಂಹಗಳನ್ನು ಗುರುತಿಸುವ ಕ್ರಮವಿದೆ.

ಸಿಂಹಗಳನ್ನು 5 ಬಣ್ಣಗಳಿಂದ ಸಂಕೇತಿಸಲಾಗುತ್ತದೆ, ಹಳದಿ, ಕಪ್ಪು, ಹಸಿರು, ಕೆಂಪು ಮತ್ತು ಬಿಳಿ ಬಣ್ಣಗಳು. ಇವುಗಳು ಭೂಮಿ, ನೀರು, ಮರ, ಬೆಂಕಿ ಮತ್ತು ಲೋಹದ ಅಂಶಗಳನ್ನು ಪ್ರತಿನಿಧಿಸುತ್ತವೆ. ಸಾಂಪ್ರದಾಯಿಕವಾಗಿ ಮೂರು ಬಣ್ಣಗಳಲ್ಲಿ ಸಿಂಹಗಳನ್ನು ಬಣ್ಣಿಸಲಾಗುತ್ತದೆ. ಕಪ್ಪು ಸಿಂಹವು ಧೈರ್ಯಶಾಲಿ, ಆಕ್ರಮಣಕಾರಿ ಗುಣವನ್ನು ಪ್ರತಿನಿಧಿಸುತ್ತದೆ. ಕೆಂಪು ಸಿಂಹಗಳು ಹೆಚ್ಚು ತರ್ಕಬದ್ಧ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುವುದಾಗಿ ಬಣ್ಣಿಸಲಾಗುತ್ತದೆ. ಮಳೆಬಿಲ್ಲಿನ ದೇಹವನ್ನು ಹೊಂದಿರುವ ಚಿನ್ನದ ಬಣ್ಣದ ಸಿಂಹವು ಬುದ್ಧಿವಂತ ಹಾಗೂ ಕರುಣಾಮಯಿ ಎನ್ನಲಾಗಿದೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದು, ಅವುಗಳನ್ನು ಯಾವ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಬೇಕೆಂಬುದನ್ನು ನರ್ತಕ ತಿಳಿದಿರಬೇಕಾಗುತ್ತದೆ. ಪೂರ್ವ ಆಫ್ರಿಕಾ, ಇಂಡೊನೇಷಿಯಾ, ಟಿಬೆಟ್, ವಿಯೆಟ್ನಾಮ್, ಕೊರಿಯಾ, ಜಪಾನ್ ಹೀಗೆ ಆಯಾ ದೇಶಗಳಿಗೆ ಅನುಗುಣವಾಗಿ ಈ ಸಿಂಹ ನೃತ್ಯಗಳ ಹೆಸರು ಹಾಗೂ ಬಣ್ಣಗಳು ಚಾಲ್ತಿಯಲ್ಲಿವೆ.

ಚೈನೀಸ್ ಲಯನ್ ಡ್ಯಾನ್ಸ್ ಗಳು ಮುಖ್ಯವಾಗಿ ಸಿಂಗಾಪುರದಲ್ಲಿ ಡಾಟಾಂಗು ಎಂದು ಕರೆಯಲ್ಪಡುವ ಟಾಂಗು ಅಥವಾ ಡ್ರಮ್, ಸಿಂಬಲ್ಸ್ ಮತ್ತು ಗಾಂಗ್ ಗಳ ಸಂಗೀತದೊಂದಿಗೆ ನಡೆಯುತ್ತವೆ. ಫುಟ್ ಸಾನ್, ಹಾಕ್ ಸಾನ್, ಫಟ್ ಹಾಕ್, ಚೌ ಗಾರ್ ಎಂಬ ವಿವಿಧ ರೀತಿಯ ಸಿಂಹ ನೃತ್ಯ ಚಲನೆಗಳು ಮತ್ತು ಕ್ರಿಯೆಗಳಿಗೆ ಅನುಗುಣವಾಗಿ ವಾದ್ಯಗಳನ್ನು ನುಡಿಸಲಾಗುತ್ತದೆ. ಅತ್ಯಂತ ಸಾಮಾನ್ಯ ಶೈಲಿಯೆಂದರೆ ಸಾರ್ ಪಿಂಗ್ ಲಯನ್ ಡ್ಯಾನ್ಸ್ ಬೀಟ್ಸ್. ಇದು ಸಿಂಹದ ಚಲನೆಯನ್ನು ತೋರಿಸಲು 22 ಕ್ಕಿಂತ ಅಧಿಕ ತಾಳಗಳನ್ನು ಹೊಂದಿದೆ.

ನೆಲದಲ್ಲಿ ನಡೆಯುವ ಸಿಂಹನೃತ್ಯ ಒಂದೆC:\Users\kshri\Desktop\lion 6.jpgಡೆಯಾದರೆ ಕಬ್ಬಿಣದ ಕಂಬಗಳ ಮೇಲೆ ನಡೆಯುವ ಪ್ರದರ್ಶನ ಮತ್ತಷ್ಟು ರೋಮಾಂಚನಕಾರಿಯಾಗಿರುತ್ತದೆ. ಒಂದು ಎತ್ತರದ ಕಂಬದಿಂದ ಇನ್ನೊಂದು ಕಂಬಕ್ಕೆ ಸಿಂಹ ವೇಷಧಾರಿಗಳು ಒಂದೇ ಸಮಯಕ್ಕೆ ಜಿಗಿಯುವ ಸನ್ನಿವೇಶ ನಿಜಕ್ಕೂ ಅದ್ಭುತ. ಜೊತೆ ಜೊತೆಗೆ ಸಂಗೀತದ ತಾಳಕ್ಕೂ ಸಾಥ್ ನೀಡುತ್ತಾ ಅಭಿನಯವನ್ನು ಮರೆಯದೆ ಜನರನ್ನು ರಂಜಿಸುವ ಇವರ ಸಾಮರ್ಥ್ಯ ಅಂತಾರಾಷ್ಟ್ರೀಯ ಮಟ್ಟದಲ್ಲೇ ಹೆಸರುವಾಸಿ. ಈ ಪ್ರದರ್ಶನಗಳು ಕೆಲವೆಡೆ 15, 21, 31 ಕಂಬಗಳು ಹೀಗೆ ಸಂಖ್ಯೆಗಳನ್ನು ಹೊಂದಿದ್ದು ನರ್ತಕರು ಇವುಗಳ ಅಂತರವನ್ನು ಗಮನಿಸುತ್ತಾ ಏಕಾಗ್ರತೆಯಿಂದ ತಮ್ಮ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಈ ರೀತಿಯ ಸಿಂಹ ನೃತ್ಯ ಪ್ರದರ್ಶನಕ್ಕೆ ಮೂಲ ಮಲೇಷಿಯಾ. ಕುಂಗ್ ಫೂ ಶೈಲಿಯಿಂದ ಪ್ರೇರಿತವಾಗಿ ಆರಂಭದಲ್ಲಿ ಇದನ್ನು ಮೆಯಿ ಹುವಾ ಕ್ವಾನ್ ಎಂದು ಕರೆಯಲ್ಪಡುವ ಕಂಬಗಳ ಮೇಲೆ ಪ್ರದರ್ಶಿಸಲಾಗಿತ್ತು. ಸಣ್ಣ ಪುಟ್ಟ ಕಂಬಗಳಲ್ಲಿ ನಡೆಯುತ್ತಿದ್ದ ಈ ನೃತ್ಯವು, ಈಗಂತೂ 6 ಮೀಟರ್‌ಗಳಷ್ಟು ಎತ್ತರದಲ್ಲಿ ನಡೆಯುವ ಮೂಲಕ ಸುದ್ದಿ ಮಾಡಿದೆ. ಅಂತರಾಷ್ಟ್ರೀಯ ಸಿಂಹ ನೃತ್ಯ ಚಾಂಪಿಯನ್‌ಶಿಪ್‌ಗಳಲ್ಲಿ ಈ ಅಳತೆ ಮಾನದಂಡವಾಗಿಯೂ ಬಳಸಲಾಗುತ್ತಿದೆ.

ಮೊದಲ ವಿಶ್ವ ಲಯನ್ ಡ್ಯಾನ್ಸ್ ಚಾಂಪಿಯನ್‌ಶಿಪ್ ಅನ್ನು 1994 ರಲ್ಲಿ ಮಲೇಷ್ಯಾದಲ್ಲಿ ನಡೆಸಲಾಯಿತು. 2011 ರ ಜನವರಿ 1ರಂದು ಹಾಂಗ್ ಕಾಂಗ್ ಡ್ರ್ಯಾಗನ್ ಮತ್ತು ಲಯನ್ ಡ್ಯಾನ್ಸ್ ಉತ್ಸವದಲ್ಲಿ ಏಕಕಾಲದಲ್ಲಿ ಎರಡು ವ್ಯಕ್ತಿಗಳ ಸಿಂಹ ನೃತ್ಯವು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮನ್ನಣೆ ಗಳಿಸಿತು. ಈ ಸಂದರ್ಭದಲ್ಲಿ ಒಟ್ಟು 1,111 ಜೋಡಿ ಸಿಂಹಗಳ ಪ್ರದರ್ಶನ ನಡೆದಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ 3,971 ಮಕ್ಕಳ ಸಿಂಹ ನೃತ್ಯ, ತೈವಾನ್‌ನ ಚಾಂಗ್ವಾದಲ್ಲಿ ಅತಿದೊಡ್ಡ ಏಕ-ನರ್ತಕರ ಪ್ರದರ್ಶನವೆಂದು ದಾಖಲೆ ಬರೆಯಿತು.

ಚೈನೀಸ್ ಗಾರ್ಡಿಯನ್ ಸಿಂಹಗಳು ಅಥವಾ ಸಾಮ್ರಾಜ್ಯಶಾಹಿ ರಕ್ಷಕ ಸಿಂಹಗಳು ಸಾಂಪ್ರದಾಯಿಕ ಚೀನೀ ವಾಸ್ತುಶಿಲ್ಪದ ಆಭರಣಗಳಾಗಿವೆ. ಅವುಗಳನ್ನು ಕಲ್ಲಿನ ಸಿಂಹಗಳು ಅಥವಾ ಶಿಶಿ ಎಂದೂ ಕರೆಯಲಾಗುತ್ತದೆ. ಚೀನೀ ಬೌದ್ಧಧರ್ಮದಲ್ಲಿ ಹುಟ್ಟಿಕೊಂಡ ಜನಪ್ರಿಯ ಪರಿಕಲ್ಪನೆ ಇದಾಗಿದೆ. ಸಾಮಾನ್ಯವಾಗಿ ಒಂದು ಚೆಂಡಿನೊಂದಿಗೆ ಇರುವ ಸಿಂಹ ಗಂಡು ಮತ್ತು ಮರಿಯೊಂದಿಗೆ ಕೆತ್ತಲ್ಪಟ್ಟ ಸಿಂಹ ಹೆಣ್ಣು ಎಂದು ಬಿಂಬಿಸಲಾಗುತ್ತದೆ. ಈ ಸಿಂಹಗಳ ಪ್ರತಿಮೆಗಳು ಚೀನೀ ಅರಮನೆಗಳು, ಸಮಾಧಿಗಳು, ಸರ್ಕಾರಿ ಕಚೇರಿಗಳು, ದೇವಾಲಯಗಳು ಮತ್ತು ಅಧಿಕಾರಿಗಳು ಮತ್ತು ಶ್ರೀಮಂತರ ಮನೆಗಳ ಮುಂದೆ ಕಾಣಬಹುದು. ಈ ಹೆಣ್ಣು - ಗಂಡು ಸಿಂಹಗಳನ್ನು ಸಾಮಾನ್ಯವಾಗಿ ಜೋಡಿಯಾಗಿ ಸ್ಥಾಪಿಸಲಾಗುತ್ತದೆ. ದುಷ್ಟ ಶಕ್ತಿಗಳ ವಿರುದ್ಧ ತಮ್ಮನ್ನು ಕಾಪಾಡುತ್ತದೆ ಎಂಬುದು ಚೀನಿಯರ ನಂಬಿಕೆ.

ಈ ಅಂಕಣದ ಹಿಂದಿನ ಬರಹಗಳು:
ಸಿಂಗಾಪುರ ಮತ್ತು ಸೂಪರ್ ಟ್ರೀಗಳು
ಸೆಲಮತ್ ದತಾಂಗ್ ದಲಾಮ ಪೆಸವಾತ್ ಗರುಡಾ ಇಂಡೋನೇಷ್ಯಾ
ಅದೃಷ್ಟ-ಸಮೃದ್ಧಿಯನ್ನು ಸ್ವಾಗತಿಸುವ ಡ್ರ್ಯಾಗನ್ ನೃತ್ಯ ಮತ್ತು ಸಾಂಸ್ಕೃತಿಕ ಚರಿತ್ರೆ
ದಕ್ಷ ವ್ಯವಸ್ಥೆಯೊಂದಿಗೆ ಅಚ್ಚರಿಯ ಸಾಧನೆಯತ್ತ ಸದಾ ತುಡಿವ ‘ಗ್ರೀನೆಷ್ಟ್ ಸಿಟಿ’ ಸಿಂಗಾಪುರ್
ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ಭೂವಿಸ್ತರಣಾ ಕಾರ್ಯ

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...