ಹಕ್ಕಿಯ ಹಾಡಿಗೆ ತಲೆದೂಗುವ ಸಡಗರ

Date: 01-07-2022

Location: ಬೆಂಗಳೂರು


“ಸಿಂಗಾಪುರದಲ್ಲಿ ಪಕ್ಷಿ ಸಾಕಣೆಯ ಮೂಲಗಳ ಕುರಿತ ಮಾಹಿತಿ ಅಸ್ಪಷ್ಟ. ಆದರೂ 1950ರ ದಶಕದಲ್ಲಿ ಬ್ರಿಟಿಷ್ ಸಶಸ್ತ್ರ ಪಡೆಗಳ ಕುಟುಂಬಗಳು ಸಿಂಗಾಪುರ್ ಕೇಜ್ ಬರ್ಡ್ ಸೊಸೈಟಿಯನ್ನು ಸ್ಥಾಪಿಸಿದ ವೇಳೆ ಆರಂಭವಾಗಿರುವ ಸಾಧ್ಯತೆಗಳಿವೆ” ಎನ್ನುತ್ತಾರೆ ಶ್ರೀವಿದ್ಯಾ. ಅವರು ತಮ್ಮ ಸಿಂಗಾಪುರ್ ಡೈರೀಸ್ ಅಂಕಣದಲ್ಲಿ, ಅಲ್ಲಿನ ಪ್ರಖ್ಯಾತ ಬರ್ಡ್‌ ಸಿಂಗಿಂಗ್ ಕ್ಲಬ್ ಮತ್ತು ಪಕ್ಷಿ ಸಾಕಣೆ ಹವ್ಯಾಸದ ಬಗ್ಗೆ ಬರೆದಿದ್ದಾರೆ.

ಜುರಾಂಗ್ ಬರ್ಡ್ ಪಾರ್ಕ್ ತುಂಬಾ ಪರಿಚಿತ ಹೆಸರು. ಈ ಉದ್ಯಾನವನ ಸಿಂಗಾಪುರದ ಜುರಾಂಗ್ ಪ್ರದೇಶದಲ್ಲಿದೆ. ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದು. ಏಷ್ಯಾದಲ್ಲೇ ಅತಿ ದೊಡ್ಡ ಪಕ್ಷಿಧಾಮ ಎಂದು ಹೆಸರುಗಳಿಸಿರುವ ಈ ಪಾರ್ಕ್‌ನಲ್ಲಿ 400 ವಿಭಿನ್ನ ಜಾತಿಯ ಸುಮಾರು 5000ಕ್ಕೂ ಅಧಿಕ ಪಕ್ಷಿಗಳು ನೆಲೆಸಿವೆ. ಪಕ್ಷಿಗಳಿಗೆಂದೇ ನೈಸರ್ಗಿಕವಾದ ವಾತಾವರಣ ಕಲ್ಪಿಸಿರುವುದು ಇಲ್ಲಿನ ವೈಶಿಷ್ಟ್ಯ. 1971 ಜನವರಿ 3ರಂದು ಆರಂಭವಾದ ಈ ಪಾರ್ಕ್‌ಗೆ ಪ್ರತಿವರ್ಷ ಅದೆಷ್ಟೋ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಕೆಲದಿನದ ಮಟ್ಟಿಗೆ ಭೇಟಿ ನೀಡುವವರಿಗೆ ಪ್ರಮುಖ ಪ್ರವಾಸಿ ತಾಣಗಳಷ್ಟೇ ಸೀಮಿತ. ತಮಗಿರುವ ಸಮಯದಲ್ಲಿ ಹೊಸ ದೇಶ, ಹೊಸ ಜಾಗ ಹೀಗೆ ಎಲ್ಲವನ್ನೂ ನೋಡಿ ಬರುವ ತವಕ. ಆದರೆ ವಿದೇಶದಲ್ಲೇ ನೆಲೆನಿಂತವರಿಗೆ ಹಾಗಲ್ಲ. ಈ ವಿಚಾರದಲ್ಲಿ ಒಂದು ಪಟ್ಟು ಹೆಚ್ಚೇ ಅವಕಾಶಗಳು. ಇಲ್ಲಿನ ನಿವಾಸಿಗಳ ಜೊತೆ ತೊಡಗಿಸಿಕೊಂಡರಂತೂ ದೈನಂದಿನ ಜೀವನದ ಎಲ್ಲಾ ಆಗುಹೋಗುಗಳು ನಮ್ಮ ಕಣ್ಣ ಮುಂದೆ ತೆರೆದಿರುತ್ತವೆ. ಸಂಸ್ಕೃತಿ, ಆಚಾರ - ವಿಚಾರ, ಹಬ್ಬ - ಹರಿದಿನಗಳ ವಿಭಿನ್ನ ಲೋಕವೇ ಅನಾವರಣಗೊಳ್ಳುತ್ತದೆ. ಇದೇ ಆಸಕ್ತಿಯಿಂದ ಸಿಂಗಾಪುರದ ಬೀದಿ ಬೀದಿ ಸುತ್ತಿದಾಗ ಇಲ್ಲಿನ ವಿಶೇಷ ಹವ್ಯಾಸವೊಂದು ಗಮನ ಸೆಳೆಯಿತು.

ಅತ್ಯದ್ಭುತ ಸ್ಥಳಗಳಿಂದ ಜಗತ್ತಿನ ಗಮನಸೆಳೆದಿರುವ ಸಿಂಗಾಪುರ ಕೆಲವೊಂದು ಅಚ್ಚರಿಯ ವಿಶೇಷತೆಗಳನ್ನು ಇನ್ನೂ ಉಳಿಸಿಕೊಂಡಿದೆ. ಮೇಲ್ನೋಟಕ್ಕೆ ಅಭಿವೃದ್ಧಿ ಹೊಂದಿದ ನಗರವಾಗಿ ಕಂಡರೂ ಹಳೆಯ ಆಚಾರ - ವಿಚಾರಗಳು ಇನ್ನೂ ಜೀವಂತವಾಗಿವೆ. ಹಿರಿಯ ನಾಗರಿಕರ ಹವ್ಯಾಸಗಳು, ಸಮುದಾಯದೊಳಗೆ ನಡೆಸುತ್ತಿದ್ದ ಚಟುವಟಿಕೆಗಳು, ಜಾತಿ - ಧರ್ಮ ಪರಿಗಣಿಸದೇ ಒಟ್ಟಾಗಿ ಆಚರಿಸುತ್ತಿದ್ದ ಆಚರಣೆಗಳನ್ನು ಮುಂದುವರಿಸಲು ಸಿಂಗಾಪುರ ಸರ್ಕಾರ ಈಗಲೂ ಅನುಮತಿ ನೀಡಿದೆ. ಅವುಗಳಲ್ಲಿ ಆಸಕ್ತಿದಾಯಕ ಎನಿಸಿಕೊಳ್ಳುವ ಒಂದು ಕ್ಲಬ್ ಈಗಲೂ ಚಾಲ್ತಿಯಲ್ಲಿದೆ.

ಇದರ ಹೆಸರು ಬರ್ಡ್ ಸಿಂಗಿಂಗ್ ಕ್ಲಬ್ (Bird Singing Club). ಹೆಸರೇ ಸೂಚಿಸುವಂತೆ ಈ ಕ್ಲಬ್ ಇರೋದೆ ಪಕ್ಷಿಗಳಿಗಾಗಿ. ಯಾರೆಲ್ಲಾ ಪಕ್ಷಿಗಳನ್ನು ಸಾಕು ಪ್ರಾಣಿಗಳನ್ನಾಗಿ ಹೊಂದಿರುತ್ತಾರೋ ಅಂಥವರಿಗಾಗಿ ಇರುವ ಒಂದು ಸಂಘ. ಗಾಳಿ ಬೆಳಕು ಯಥೇಚ್ಛವಾಗಿರುವ, ಸಮೃದ್ಧವಾಗಿ ಹಸಿರು ರಾಶಿ ಹೊದ್ದಿರುವ ನೆಲದಲ್ಲಿ ಸಂಘದ ಚಟುವಟಿಕೆಗಳನ್ನು ಕಾಣಬಹುದು. ಇಲ್ಲಿ ಭಾಗವಹಿಸುವ ವಿಭಿನ್ನ ಜಾತಿಯ ಪಕ್ಷಿಗಳನ್ನು ವೀಕ್ಷಿಸಲು, ಅವುಗಳ ಚಿಲಿಪಿಯನ್ನು ಆನಂದಿಸಲು ಒಮ್ಮೆಯಾದರೂ ಭೇಟಿ ನೀಡಲೇಬೇಕು. ವಸತಿ ಪ್ರದೇಶಗಳ ವಿಶಾಲ ಮೈದಾನದಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ.

ಅದರಲ್ಲೂ ಸಿಂಗಾಪುರದ ಉತ್ತರ ಭಾಗಕ್ಕೆ ಭೇಟಿ ನೀಡಿದರೆ ಈ ಕ್ಲಬ್ ಆರಂಭವಾದ ಮೊಟ್ಟಮೊದಲ ಜಾಗವನ್ನು ವೀಕ್ಷಿಸಬಹುದು. ಎತ್ತರದ ಕಬ್ಬಿಣದ ಕೋಲುಗಳಲ್ಲಿ ಸಾಲುಸಾಲಾಗಿ ಅಲಂಕೃತ ಪಂಜರಗಳು ಗಾಳಿ ಬಂದ ಹಾಗೆ ತೂಗಾಡುವುದನ್ನು ನೋಡುವುದೇ ಒಂದು ಆನಂದ.

ಪಂಜರಗಳಲ್ಲಿರುವ ಹಕ್ಕಿಗಳಂತೂ ನಾ ಮುಂದು ತಾ ಮುಂದು ಎನ್ನುತ್ತಾ ಸ್ವರಗಳ ಆಲಾಪನೆಯಲ್ಲಿ ತೊಡಗಿರುತ್ತವೆ. ಇತ್ತ ನೆರಳನ್ನು ಅರಸಿ ಕುರ್ಚಿಗಳಲ್ಲಿ ಕೂತ ಪಕ್ಷಿಗಳ ಮಾಲೀಕರು ತಮ್ಮ ಸ್ನೇಹಿತರ ಜೊತೆ ಚಹಾ ಸೇವಿಸುತ್ತಾ ಹರಟೆ ಹೊಡೆಯುತ್ತಾ ತಮ್ಮದೇ ಲೋಕದಲ್ಲಿ ಮಗ್ನರಾಗಿರುತ್ತಾರೆ.

ಕೆಬುನ್ ಬರು ಬರ್ಡ್ ಸಿಂಗಿಂಗ್ ಕ್ಲಬ್ .. ಸಿಂಗಾಪುರದಲ್ಲಿರುವ ಅತಿ ದೊಡ್ಡ ಕ್ಲಬ್ ಎಂದೇ ಹೆಸರುವಾಸಿ. ಇದು ಆಂಗ್ ಮೊಕಿಯೊ ಟೌನ್ ಗಾರ್ಡನ್‌ನಲ್ಲಿದೆ. ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಪಕ್ಷಿ-ಗಾಯನ ಮತ್ತು ಪ್ರದರ್ಶನದ ಅಖಾಡವಾಗಿದೆ. 1995ರಲ್ಲಿ ತನ್ನ ವೃತ್ತಿಯಿಂದ ನಿವೃತ್ತಿಯಾದ ಬಳಿಕ ವಿಲಿಯಮ್ ಚು ಎಂಬವರು ಇದನ್ನು ಆರಂಬಿಸಿದರು. ಡಜನ್‌ಗೂ ಹೆಚ್ಚಿನ ಪಕ್ಷಿಗಳನ್ನು ಪ್ರತಿನಿತ್ಯ ಉದ್ಯಾನವನಕ್ಕೆ ತರುತ್ತಾರೆ ವಿಲಿಯಮ್. ಪಕ್ಷಿಗಳ ಪಂಜರಗಳನ್ನು ರಾಟೆ ವ್ಯವಸ್ಥೆಯ ಮೂಲಕ ಕಂಬಗಳ ತುತ್ತತುದಿಗೆ ತಲುಪಿಸಿ ಪ್ರತಿನಿತ್ಯ ಹಕ್ಕಿಗಳ ಜೊತೆ ಆನಂದಿಸುತ್ತಾ ಸಮಯ ಕಳೆಯುತ್ತಾರೆ. ಪಕ್ಷಿಗಳಿಗೂ ಜೊತೆಗಾರ ಅಗತ್ಯವಿರುವುದರಿಂದ ಬಹುತೇಕ ಮಾಲೀಕರು ಒಂದಕ್ಕಿಂತ ಹೆಚ್ಚೇ ಪಕ್ಷಿಗಳನ್ನು ಹೊಂದಿರುತ್ತಾರೆ. “ ಒಂದೊಂದು ಹಕ್ಕಿಯೂ ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದು, ಅದರ ಜೊತೆ ನಿತ್ಯ ಬೆರತರಷ್ಟೇ ಅರ್ಥಮಾಡಿಕೊಳ್ಳಲು ಸಾಧ್ಯ. ನಮ್ಮಂತಹ ಹಳೆಯ ಜನರು ಮಾತ್ರ ಈ ಹವ್ಯಾಸವನ್ನು ಆನಂದಿಸುತ್ತಾರೆ. ಈಗಿನ ಯುವಕರು ಇದನ್ನೆಲ್ಲಾ ಇಷ್ಟಪಡುವುದಿಲ್ಲ” ಎಂದು ವಿಲಿಯಂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಿಂಗಾಪುರದ ಪಕ್ಷಿ-ಪಾಲಕರಲ್ಲಿ ಅತ್ಯಂತ ಜನಪ್ರಿಯ ಪ್ರಭೇದ - ಮೆರ್ಬೊಕ್ ಅಥವಾ ಜೀಬ್ರಾ ಪಾರಿವಾಳಗಳಾಗಿವೆ. ಇದಲ್ಲದೆ ಚೈನೀಸ್ ಥ್ರಷ್, ಕೆಂಪು-ವಿಸ್ಕರ್ಡ್ ಬುಲ್ಬುಲ್ ಮತ್ತು ವೈಟ್-ರಂಪ್ಡ್ ಶಮಾ ಎಂಬ ಪಕ್ಷಿಗಳನ್ನು ಕಾಣಬಹುದು. ಅದರಲ್ಲೂ ಮೆರ್ಬೊಕ್ ಪಕ್ಷಿ ಅತ್ಯಂತ ದುಬಾರಿಯಾಗಿದ್ದು ಸಾವಿರಾರು ಡಾಲರ್‌ಗಳಷ್ಟು ಮೌಲ್ಯದ್ದಾಗಿವೆ. ಸಾಮಾನ್ಯವಾಗಿ ಪಕ್ಷಿಗಳ ಸರಾಸರಿ ಬೆಲೆಯು $50 ರಿಂದ $150 ವರೆಗೆ ಇರುತ್ತದೆ. ಅದರಲ್ಲೂ ಆಫ್ರಿಕಾದ ಬೂದು ಗಿಳಿಗಳ ಬೆಲೆ $500-2000 ರಷ್ಟು ತಲುಪುತ್ತವೆ.

ಕೆಬುನ್ ಬರು ಬರ್ಡ್ ಸಿಂಗಿಂಗ್ ಕ್ಲಬ್‌ನಲ್ಲಿ ಪಕ್ಷಿ ಪಂಜರಗಳನ್ನು ಸುಮಾರು 20 ಅಡಿ (ಆರು ಮೀಟರ್) ಎತ್ತರಕ್ಕೆ ಏರಿಸಲಾಗುತ್ತದೆ. ಹೀಗೆ ಮೇಲೆತ್ತುವಾಗ ಜೀಬ್ರಾ ಪಾರಿವಾಳಗಳು ಬೆಚ್ಚಿಬೀಳುವುದನ್ನು ತಡೆಯಲು ಪಂಜರಗಳನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಇವು ನೆಲದಲ್ಲಿ ಹೆಚ್ಚು ಓಡಾಡುವ ಪಕ್ಷಿಗಳಾಗಿದ್ದರೂ ಎತ್ತರದಲ್ಲಿ ಹೆಚ್ಚು ಆನಂದಿಸುತ್ತವೆ ಎನ್ನಲಾಗಿದೆ. ಈ ಸ್ಥಳವು ಸುಮಾರು 400 ಪಂಜರಗಳನ್ನು ಜೋಡಿಸುವಷ್ಟು ಸ್ಥಳಾವಕಾಶವನ್ನು ಹೊಂದಿದೆ. ಜಂಬೂಲ್, ಕೆಂಪು-ವಿಸ್ಕರ್ಡ್ ಬುಲ್ಬುಲ್, ಮಾತಾ ಪುತೆ, ಬಿಳಿ-ರಂಪ್ಡ್ ಶಾಮಾ, ಹ್ವಾ ಮೇ, ಮ್ಯಾಗ್ಪಿ ರಾಬಿನ್ ಮತ್ತು ಕೆಂಪು ಸಿಸ್ಕಿನ್ ಸ್ಕೈಲಾರ್ಕ್ನಂತಹ ಪಕ್ಷಿ ಪ್ರಭೇದಗಳನ್ನು ಇಲ್ಲಿ ಕಾಣಬಹುದು. ಈ ಹಕ್ಕಿ ಹಾಡುವ ಕ್ಲಬ್‌ನಲ್ಲಿರುವ ಮೀಸಲಾದ ಸ್ಥಳದಲ್ಲಿ ಪಕ್ಷಿಗಳನ್ನು ಪ್ರದರ್ಶನ ಮತ್ತು ಮೆಚ್ಚುಗೆಗಾಗಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ. ಸಾಮಾನ್ಯವಾಗಿ ಈ ಸಂಘವು ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ವಾರಾಂತ್ಯದಲ್ಲಂತೂ ಜನಜಂಗುಳಿ ಏರ್ಪಟ್ಟಿರುತ್ತದೆ.

ಇಷ್ಟೇ ಆಗಿರುತ್ತಿದ್ದರೆ ಅಷ್ಟೊಂದು ವಿಶೇಷವಾಗುತ್ತಿರಲಿಲ್ಲವೇನೋ ..! ಆದರೆ ಈ ಹಕ್ಕಿಗಳ ಹಾಡಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ತಿಂಗಳಿಗೊಂದರಂತೆ ನಡೆಯುವ ಸ್ಪರ್ಧೆಯ ವೇಳೆ ಮೈದಾನ ತುಂಬಾ ಬಿರುಸಿನ ಚಟುವಟಿಕೆಗಳು ನಡೆಯುತ್ತಿರುತ್ತವೆ. ಪೂರ್ವಭಾವಿಯಾಗಿ ತರಬೇತಿ ನೀಡಲೆಂದೇ ಮಾಲೀಕರು ಪಕ್ಷಿಗಳನ್ನು ಈ ಕ್ಲಬ್‌ಗೆ ಕರೆತರುವುದೂ ಇದೆ. ಹಕ್ಕಿಗಳು ಜೊತೆಯಾದಾಗ ಮಾತ್ರ ಹಾಡುವ ಹಿನ್ನೆಲೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಹುಮ್ಮಸ್ಸು ಹಾಗೂ ತನ್ನ ಹಕ್ಕಿ ಜಯಿಸಬೇಕೆನ್ನುವ ಮಹದಾಸೆ ಪಕ್ಷಿ ಮಾಲೀಕರನ್ನು ಮತ್ತಷ್ಟು ಕ್ರಿಯಾಶೀಲರನ್ನಾಗಿ ಮಾಡುವಲ್ಲಿ ಸಹಕಾರಿಯಾಗಿದೆ. ಸ್ಪರ್ಧೆಯ ದಿನ ಪಂಜರಗಳ ಸಾಲುಗಳುದ್ದಕ್ಕೂ ಓಡಾಡುವ ತೀರ್ಪುಗಾರರು ಪ್ರತಿ ಹಕ್ಕಿಯನ್ನು ಪರಿಮಾಣ, ಆವರ್ತನ ಮತ್ತು ಹಾಡಿನ ಅವಧಿ, ಅದರ ಮಧುರ ಸೌಂದರ್ಯ, ಪುಕ್ಕಗಳು ಮತ್ತು ಪಂಜರದಲ್ಲಿ ಎಷ್ಟು ಸಕ್ರಿಯವಾಗಿ ಚಲಿಸುತ್ತದೆ ಎಂಬುದರ ಮೇಲೆ ಮೌಲ್ಯಮಾಪನ ನಡೆಸುತ್ತಾರೆ. ಈ ಮೂಲಕ ಸ್ಪರ್ಧೆಯಲ್ಲಿ ಜಯಗಳಿಸಿದ ಹಕ್ಕಿಗಳ ಮಾಲೀಕರಿಗೆ ಟ್ರೋಫಿಗಳನ್ನು ನೀಡುತ್ತಾರೆ.

ಸಿಂಗಾಪುರದಲ್ಲಿ ಪಕ್ಷಿ ಸಾಕಣೆಯ ಮೂಲಗಳ ಕುರಿತ ಮಾಹಿತಿ ಅಸ್ಪಷ್ಟ. ಆದರೂ 1950 ರ ದಶಕದಲ್ಲಿ ಬ್ರಿಟಿಷ್ ಸಶಸ್ತ್ರ ಪಡೆಗಳ ಕುಟುಂಬಗಳು ಸಿಂಗಾಪುರ್ ಕೇಜ್ ಬರ್ಡ್ ಸೊಸೈಟಿಯನ್ನು ಸ್ಥಾಪಿಸಿದ ವೇಳೆ ಆರಂಭವಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆ ಕಾಲದಲ್ಲಿ ನಗರದ ಟಿಒಂಗ್ ಬಹ್ರು ಬರ್ಡ್ ಅರೆನಾ - ಬ್ಲಾಕ್ 53 ರಲ್ಲಿ ರಚನೆಗೊಂಡಿದ್ದ ಈ ಕ್ಲಬ್, ಸಿಂಗಾಪುರ ಪ್ರವಾಸೋದ್ಯಮ ಮಂಡಳಿಯಿಂದ ಪ್ರಚಾರ ಮಾಡಲ್ಪಟ್ಟ ಪ್ರವಾಸಿ ಆಕರ್ಷಣೆಯಾಗಿತ್ತು. 1980ರ ದಶಕದಲ್ಲಿ ಬರ್ಡ್ ಸಿಂಗಿಂಗ್ ಕ್ಲಬ್‌ನಲ್ಲಿ ಭಾಗವಹಿಸುವ ಹವ್ಯಾಸವು ಉತ್ತುಂಗದಲ್ಲಿತ್ತು ಎನ್ನಲಾಗಿದೆ.

ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಸಿಂಗಾಪುರದಲ್ಲಿ ಪಕ್ಷಿಗಳನ್ನು ಸಾಕುವುದು ಕಷ್ಟಕರ. ಗ್ರಾಮ್ಯ ವ್ಯವಸ್ಥೆಯಲ್ಲಿ ಬೆಳೆದ ಹಿರಿಯರು ಹಳೆಯ ಸಿಂಗಾಪುರವನ್ನು ನೆನಪಿಸಿಕೊಳ್ಳುತ್ತಾರೆ. ಕೆಲ ಪಕ್ಷಿ-ಪಾಲಕರು ತಮ್ಮ 70ರ ದಶಕದಲ್ಲಿದ್ದರೆ, ಮತ್ತೆ ಕೆಲವರು 80ರ ದಶಕದಲ್ಲಿದ್ದಾರೆ. ಹವ್ಯಾಸಿಗಳು ಮುಖ್ಯವಾಗಿ ನಿವೃತ್ತರು, ಸ್ವಯಂ ಉದ್ಯೋಗಿಗಳು, ಅರೆಕಾಲಿಕ ಅಥವಾ ವ್ಯಾಪಾರಿಗಳೇ ಹೆಚ್ಚಾಗಿ ಕಂಡುಬರುತ್ತಾರೆ.

ಸಿಂಗಾಪುರವು ಪಕ್ಷಿಗಳ ವ್ಯಾಪಾರ ಕುರಿತಂತೆ ಸುದೀರ್ಘ ಇತಿಹಾಸವನ್ನು ಹೊಂದಿದೆ. ಪಕ್ಷಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದು ಕೂಡ ಇಲ್ಲಿ ಜನಪ್ರಿಯ ಹವ್ಯಾಸ. ಇಂತಹ ಉತ್ಸಾಹಿಗಳಿಗೆ ಖರೀದಿಸುವ ಮುನ್ನ ಅನೇಕ ಸಲಹೆಗಳನ್ನು ನೀಡಲಾಗುತ್ತದೆ. ತಮ್ಮ ಜೀವನಶೈಲಿ ಮತ್ತು ವ್ಯಕ್ತಿತ್ವಕ್ಕೆ ಸರಿಹೊಂದುವ ಹಕ್ಕಿಯನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹಕ್ಕಿಗಳ ಆಕಾರ, ಬಣ್ಣ, ಅವುಗಳಿಗೆ ನೀಡಬೇಕಾದ ಸಮಯ, ನಿರ್ವಹಣೆ ಹಾಗೂ ತಗುಲುವ ವೆಚ್ಚ, ವಿವಿಧ ಜಾತಿಗಳು / ತಳಿಗಳ ಸಾಮಾನ್ಯ ಜ್ಞಾನದ ಬಗ್ಗೆ ವಿವರಿಸಲಾಗುತ್ತದೆ.

ಯಾವುದಾದರೊಂದು ಪಕ್ಷಿ ಆದೀತು ಅನ್ನುವವರಿಗೆ ಹೆಚ್ಚಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ ನಿರ್ದಿಷ್ಟವಾಗಿ ಇಂಥದ್ದೇ ಪಕ್ಷಿಗಳನ್ನು ಆಯ್ಕೆ ಮಾಡುವ ಮಂದಿ ಒಂದಷ್ಟು ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಸಿಂಗಾಪುರ್ ಲೀಗಲ್ ಅಡ್ವೈಸ್ ಡಾಟ್ ಕಾಮ್ ಪ್ರಕಾರ ಕೆಲ ಪಕ್ಷಿಗಳನ್ನು ಸಂರಕ್ಷಿತ ವನ್ಯಜೀವಿ ಪ್ರಭೇದವೆಂದು ಪರಿಗಣಿಸಲಾಗಿರುತ್ತದೆ. ಆ ಪಟ್ಟಿಯಲ್ಲಿ ಬರುವ ಪಕ್ಷಿಗಳು ಹಾಗೂ ಬೀದಿ ಹಕ್ಕಿಗಳನ್ನು ಹೊರತುಪಡಿಸಿ ಉಳಿದ ಪಕ್ಷಿಗಳನ್ನು ಸಾಕುಪ್ರಾಣಿಗಳಾಗಿ ಹೊಂದಲು ಅನುಮತಿ ನೀಡಲಾಗುತ್ತಿದೆ.

ಸಿಂಗಾಪುರದಲ್ಲಿ ಪಕ್ಷಿಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ರಕ್ಷಿಸುವ ಮೂರು ಶಾಸನಗಳಿವೆ. ಮೊದಲನೆಯದು ಅಂತರರಾಷ್ಟ್ರೀಯ ವನ್ಯಜೀವಿ ವ್ಯಾಪಾರವನ್ನು ಒಳಗೊಂಡ ಅಳಿವಿನಂಚಿನಲ್ಲಿರುವ ಪ್ರಭೇದಗಳ (ಆಮದು ಮತ್ತು ರಫ್ತು) ಕಾಯಿದೆ 2006. ಇದು ಕೆಲ ಪ್ರಾಣಿಗಳು ಮತ್ತು ಸಸ್ಯಗಳ ಆಮದು, ರಫ್ತು ಮತ್ತು ಮರು-ರಫ್ತು ಮಾಡುವುದನ್ನು ನಿಷೇಧಿಸುತ್ತದೆ. ಇದರನ್ವಯ ಕೃಷಿ-ಆಹಾರ ಮತ್ತು ಪಶುವೈದ್ಯಕೀಯ ಪ್ರಾಧಿಕಾರದಿಂದ ಮಾನ್ಯವಾದ ಪರವಾನಗಿಯಿಲ್ಲದ ಸ್ವಾಧೀನ ಅಥವಾ ಮಾರಾಟಗಳು ಕಾನೂನುಬಾಹಿರವಾಗಿದೆ. ಕಾನೂನು ಉಲ್ಲಂಘನೆಯಾದಲ್ಲಿ ಅಪರಾಧಿಗಳಿಗೆ ಸಿಂಗಾಪುರ ಡಾಲರ್ 50,000 ರಿಂದ 5,00 000 ವರೆಗೆ ದಂಡ ವಿಧಿಸಬಹುದಾಗಿದೆ. ಅಥವಾ ಎರಡು ವರ್ಷಗಳ ಸೆರೆವಾಸ ಕಡ್ಡಾಯ. ಎರಡನೆಯದು ಪ್ರಾಣಿಗಳು ಮತ್ತು ಪಕ್ಷಿಗಳ (ತಿದ್ದುಪಡಿ) ಕಾಯಿದೆ 2014 ಇದು ಪಾಲನೆ, ಸಂತಾನೋತ್ಪತ್ತಿ ಹಾಗೂ ಆಹಾರವನ್ನು ನಿಯಂತ್ರಿಸುತ್ತದೆ. ಯಾವುದೇ ಉಲ್ಲಂಘನೆಯ ಅಪರಾಧ ಸಾಬೀತಾದರೆ, ಅಪರಾಧಿಗಳಿಗೆ ಸಿಂಗಾಪುರ ಡಾಲರ್ 40 000 ವರೆಗೆ ದಂಡ ಅಥವಾ ಎರಡು ವರ್ಷಗಳವರೆಗೆ ಸೆರೆವಾಸ. ಮೂರನೆಯದು, ವೈಲ್ಡ್ ಅನಿಮಲ್ಸ್ ಅಂಡ್ ಬರ್ಡ್ಸ್ ಆಕ್ಟ್ 2000, ಸಿಂಗಾಪುರದಲ್ಲಿ ಯಾವುದೇ ಕಾಡು ಪ್ರಾಣಿ ಅಥವಾ ಪಕ್ಷಿಯನ್ನು ಕೊಲ್ಲುವುದು, ಪಡೆಯುವುದು ಅಥವಾ ಇಟ್ಟುಕೊಳ್ಳುವುದನ್ನು ನಿಷೇಧಿಸುತ್ತದೆ. ಕಾನೂನು ಪಾಲಿಸದೇ ಹೋದರೆ ಅಪರಾಧಿಗಳಿಗೆ ಸಿಂಗಾಪುರ ಡಾಲರ್ 1000 ದಂಡ ಜೊತೆಗೆ ಹಕ್ಕಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಸಿಂಗಾಪುರವು ಪಕ್ಷಿಗಳ ವ್ಯಾಪಾರದ ಕುರಿತಂತೆ TRAFFIC (Trade Records Analysis of Flora and Fauna in Commerce) ಅಧ್ಯಯನದ ಪ್ರಕಾರ 1988ರಲ್ಲಿ ಅಂದಾಜು 7,00 000 ಪಕ್ಷಿಗಳನ್ನು ರಫ್ತು ಮಾಡಿರುವ ಬಗ್ಗೆ ವರದಿ ಮಾಡಿದೆ. 2000 ಮತ್ತು 2010 ರ ನಡುವೆ ಸಿಂಗಾಪುರವು ಸೊಲೊಮನ್ ದ್ವೀಪಗಳಿಂದ ಸುಮಾರು 50 000 ಪಕ್ಷಿಗಳನ್ನು ಆಮದು ಮಾಡಿಕೊಂಡಿದೆ ಎಂದು ಟ್ರಾಫಿಕ್ ತಿಳಿಸಿದೆ. ಸಿಂಗಾಪುರದಲ್ಲಿ CITES (Convention on International Trade in Endangered Species of Wild Fauna and Flora) ಪಟ್ಟಿಮಾಡಿದ ಪಕ್ಷಿಗಳ ವ್ಯಾಪಾರವು ಹತ್ತು ವರ್ಷಗಳ ಅವಧಿಯಲ್ಲಿ ಕನಿಷ್ಠ 35 ಮತ್ತು 37 ದೇಶಗಳಿಂದ ಪಕ್ಷಿಗಳನ್ನು ಆಮದು ಮತ್ತು ರಫ್ತು ಮಾಡಿದೆ ಎಂದು ತಿಳಿಸಿದೆ.

ಶತಮಾನದಷ್ಟು ಹಳೆಯದಾದ ಸಿಂಗಾಪುರದ ಪಕ್ಷಿ-ಪಾಲನೆಯ ಸಂಪ್ರದಾಯವು ಅಳಿವಿನಂಚಿನಲ್ಲಿರುವ ಪ್ರಭೇದವಾಗಿದೆ. ಅದರ ನಿರಂತರ ಬದುಕುಳಿಯುವಿಕೆಯು ಸದ್ಯಕ್ಕೆ ಉತ್ಸಾಹಿಗಳ ಸಣ್ಣ ಸಮುದಾಯವನ್ನು ಅವಲಂಬಿಸಿದೆ. ಒಂದೊಮ್ಮೆ ಪಕ್ಷಿಗಳ ಸಾಕಣೆ ನಾಶವಾದರೆ ಸಿಂಗಾಪುರವು ಕೇವಲ ಹವ್ಯಾಸಕ್ಕಿಂತ ಹೆಚ್ಚಿನದನ್ನೇ ಕಳೆದುಕೊಳ್ಳಬಹುದು ಎಂಬುದು ಇಲ್ಲಿನ ಹಿರಿಯ ನಾಗರಿಕರ ಕಳವಳ.

ಈ ಅಂಕಣದ ಹಿಂದಿನ ಬರಹಗಳು:
ಚೀನೀ ಸಂಪ್ರದಾಯದಲ್ಲಿ ಸಿಂಹನೃತ್ಯ
ಸಿಂಗಾಪುರ ಮತ್ತು ಸೂಪರ್ ಟ್ರೀಗಳು
ಸೆಲಮತ್ ದತಾಂಗ್ ದಲಾಮ ಪೆಸವಾತ್ ಗರುಡಾ ಇಂಡೋನೇಷ್ಯಾ
ಅದೃಷ್ಟ-ಸಮೃದ್ಧಿಯನ್ನು ಸ್ವಾಗತಿಸುವ ಡ್ರ್ಯಾಗನ್ ನೃತ್ಯ ಮತ್ತು ಸಾಂಸ್ಕೃತಿಕ ಚರಿತ್ರೆ
ದಕ್ಷ ವ್ಯವಸ್ಥೆಯೊಂದಿಗೆ ಅಚ್ಚರಿಯ ಸಾಧನೆಯತ್ತ ಸದಾ ತುಡಿವ ‘ಗ್ರೀನೆಷ್ಟ್ ಸಿಟಿ’ ಸಿಂಗಾಪುರ್
ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ಭೂವಿಸ್ತರಣಾ ಕಾರ್ಯ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...