ಜಾತಿ ಪದ್ಧತಿಯ ಮೈಮನಗಳು-7

Date: 26-09-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಏಳನೇ ಕಂತಿನ ಬರಹ ಇಲ್ಲಿದೆ.

7

ಚಾತುರ್ವರ್ಣ್ಯ ಎಂಬ ಶ್ರೇಣೀಕರಣಕ್ಕೆ ಆಧಾರವೇನು ಎಂಬುದನ್ನು ಪುರುಷಸೂಕ್ತವು ಹೇಳುವುದಿಲ್ಲ. ಆದರೆ ಕ್ರಿಪೂ ಆರನೆಯ ಶತಮಾನದ ವೇಳೆಗೆ ಈ ಕುರಿತು ಸ್ಪಷ್ಟವಾದ ಹೇಳಿಕೆಗಳು ಕಂಡುಬಂದಿದ್ದವು. ಅದರಂತೆ ಯಜ್ಞಯಾಗಾದಿಗಳನ್ನು ಕೈಗೊಳ್ಳುವ ಪುರೋಹಿತರು ಹಾಗೂ ವಿದ್ಯೆ ಕಲಿಸುವ ಆಚಾರ್ಯರು ಬ್ರಾಹ್ಮಣರು, ಆಡಳಿತ ಮತ್ತು ಭದ್ರತಾಕಾರ್ಯವನ್ನು ವೃತ್ತಿಯಾಗಿಸಿಕೊಂಡವರು ಕ್ಷತ್ರಿಯರು, ಕೃಷಿ, ಪಶುಪಾಲನೆ, ವಾಣಿಜ್ಯಗಳಲ್ಲಿ ನಿರತರಾದವರು ವೈಶ್ಯರು, ಈ ಮೂರೂ ವರ್ಣಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಶೂದ್ರರು.

ಕಳೆದ ಅಧ್ಯಾಯದಲ್ಲಿ ಹೇಳಿದ ಎರಡು ವ್ಯವಸ್ಥೆಗಳ ಸಮಾಗಮದಿಂದಾಗಿ ಕ್ರಿಪೂ ಆರನೆಯ ಶತಮಾನದ ವೇಳೆಗೆ ಗಂಗಾ ಕಣಿವೆಯ ಪ್ರದೇಶ, ಮಧ್ಯಭಾರತದ ಕೆಲವು ಭಾಗಗಳು, ಹಾಗೂ ವಾಯುವ್ಯ ಭಾರತದ ವಿವಿಧೆಡೆಗಳಲ್ಲಿ ದೂರಗಾಮಿಯಾದ ಭೌತಿಕ ಪಲ್ಲಟಗಳು ನಡೆದವು. ನಗರಗಳ ನಿರ್ಮಾಣವು ಅವುಗಳಲ್ಲಿ ಒಂದು. ಹಡಪ್ಪಾ, ಮೊಹೆಂಜೊ ದಾರೋ, ಕಾಲೀಬಂಗನ್, ಢೋಲಾವೀರ, ರಾಖೀಗಢೀ, ಲೊಥಲ್ ಮುಂತಾದಲ್ಲಿ ಕ್ರಿಪೂ ಮೂರನೆಯ ಸಹಸ್ರಮಾನದಲ್ಲಿ ನಡೆದ ನಗರೀಕರಣವು ಕ್ರಿ.ಪೂ. 1900ರ ವೇಳೆಗೆ ಅಂತ್ಯಗೊಂಡಿತ್ತು. ನಂತರ ಹದಿಮೂರು ಶತಮಾನಗಳ ತರುವಾಯ ಚಾಲನೆ ಪಡೆದ ಈ ಹೊಸ ನಗರೀಕರಣ ಪ್ರಕ್ರಿಯೆಯನ್ನು ರೊಮೀಲಾ ಥಾಪರ್‌ರಂಥ ಇತಿಹಾಸಕಾರರು ಭಾರತದ ದ್ವಿತೀಯ ನಗರೀಕರಣ ಎಂದು ಬಣ್ಣಿಸಿದ್ದಾರೆ.

ದ್ವಿತೀಯ ನಗರೀಕರಣದ ಸಂದರ್ಭದಲ್ಲಿ ತಲೆಯೆತ್ತಿದ ನಗರಗಳ ಪೈಕಿ ತಕ್ಷಶಿಲೆ, ಕೌಶಾಂಬಿ, ಪಾಟಲೀಪುತ್ರ, ಶ್ರಾವಷ್ಠಿ, ಉಜ್ಜಯಿನಿ, ಪುಷ್ಕಲಾವತಿ, ರಾಜಗೃಹ, ಕಾಶಿ, ವೈಶಾಲಿ ಮುಂತಾದವುಗಳಿಗೆ ಐತಿಹಾಸಿಕವಾಗಿ ಅಪಾರ ಮಹತ್ವವಿದೆ. ಈ ನಗರಗಳು ಪ್ರಮುಖ ರಾಜಕೀಯ ಹಾಗೂ ಆರ್ಥಿಕ ಕೇಂದ್ರಗಳಾಗಿದ್ದವು. ಬಹುತೇಕ ನಗರಗಳು ನದಿಗಳ ದಂಡೆಯ ಮೇಲಿದ್ದವು. ಕ್ರಿ.ಪೂ. 800-600ರ ನಡುವೆ ವಿಕಾಸ ಹೊಂದಿದ ಪ್ರಮುಖ ವಿನಿಮಯದ ಮಾರ್ಗಗಳು ಬೆಳೆದು ಈ ವೇಳೆಗಾಗಲೇ ದೊಡ್ಡ ವ್ಯಾಪಾರ ಮಾರ್ಗಗಳಾಗಿ ಪರಿವರ್ತನೆ ಹೊಂದಿದ್ದವು. ನಗರಗಳು ಏಳಿಗೆ ಪಡೆದದ್ದು ಈ ಮಾರ್ಗಗಳ ನಡುವಲ್ಲಿ. ಆರ್ಥಿಕ ವ್ಯವಸ್ಥೆಯ ಮೇಲೆ ಸ್ವಾಮ್ಯ ಹೊಂದಿದ್ದ ಗೃಹಪತಿ, ಶ್ರೇಷ್ಟಿ, ಸಾರ್ತವಾಹ ಮೊದಲಾದ ವ್ಯಾಪಾರಿ ವರ್ಗದವರಿಗೆ ಈ ನಗರಗಳೇ ನೆಲಗಳಾಗಿದ್ದವು.

ನಗರಗಳು ಏಳಿಗೆ ಪಡೆಯುತ್ತಿದ್ದ ಈ ಅವಧಿಯಲ್ಲೇ ಅವಾಸವ್ಯವಸ್ಥೆಯಲ್ಲಿ ಶ್ರೇಣೀಕರಣ ಉಂಟಾಯ್ತು. ಗ್ರಾಮದಂಥ ಸಣ್ಣ ಆವಾಸಕೇಂದ್ರಗಳ ಮೇಲೆ ಜನಪದದಂತ ದೊಡ್ಡ ಘಟಕಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ರೂಪುಗೊಳ್ಳುತ್ತ ಬರತೊಡಗಿದ ಕಾಲ ಇದಾಗಿತ್ತು. ಉತ್ತರಭಾರತದ ವಿವಿಧ ಭಾಗಗಳಲ್ಲಿ ಹಲವಾರು ಜನಪದಗಳು ಪ್ರತ್ಯಕ್ಷಗೊಂಡವು. ಇವುಗಳಲ್ಲಿ ಕೆಲವು ಒಂದೋ ಅಥವಾ ಅದಕ್ಕಿಂತ ಹೆಚ್ಚೋ ಜನಾಂಗಗಳ ಒಕ್ಕೂಟಗಳಾಗಿ ಅಧಿಕಾರ ನಿರ್ವಹಣೆ ನಡೆಸಿದ್ದವು. ಅಂಥ ಜನಪದಗಳಿಗೆ ಗಣ ಎಂದು ಹೆಸರು. ವೃಜ್ಜಿ, ಮಲ್ಲ ಮತ್ತು ಕೋಸಲರಿಗೆ ಅಧೀನವಾಗಿಹೋದ ಶಾಕ್ಯ ಇಂಥ ಗಣರಾಜ್ಯಗಳಿಗೆ ಉದಾಹರಣೆಗಳು. ಕೆಲವು ಜನಪದಗಳು ನಿರ್ದಿಷ್ಟ ರಾಜಕೀಯ ಕುಲವೊಂದರ ಅಡಿಯಲ್ಲಿತ್ತು. ಕುರು, ಪಾಂಚಾಲ, ಮತ್ಸ್ಯ ಇತ್ಯಾದಿಗಳು ಈ ಸಾಲಿಗೆ ಸೇರಿವೆ. ಇನ್ನೂ ಕೆಲವು ಸಂದರ್ಭದಲ್ಲಿ ಒಂದೇ ಮನೆತನವು ಒಂದಕ್ಕಿಂತ ಹೆಚ್ಚು ಜನಪದಗಳ ಮೇಲೆ ಆಳ್ವಿಕೆ ನಡೆಸಿದ್ದನ್ನು ಕಾಣುತ್ತೇವೆ. ಕಾಶಿ, ಮಗಧ ಮತ್ತು ಅಂಗ ಜನಪದಗಳು ಬ್ರಹ್ಮದತ್ತರುಗಳ ಆಳ್ವಿಕೆಯ ಅಡಿಯಲ್ಲಿತ್ತು. ಕ್ರಮೇಣ ಕೋಸಲ ಜನಪದವು ಕಾಶಿಯನ್ನು ತಮ್ಮ ವಶಕ್ಕೆ ತಂದುಕೊಳ್ಳುವಲ್ಲಿ ಯಶಸ್ವಿಯಾದಾಗ ಬ್ರಹ್ಮದತ್ತರ ಆಳ್ವಿಕೆ ಮಗಧ ಹಾಗೂ ಅಂಗಕ್ಕೆ ಮಾತ್ರ ಸೀಮಿತಗೊಂಡಿತು. ಮಗಧದಲ್ಲಿ ಹರ್ಯಾಂಕ ವಂಶದ ಬಿಂಬಿಸಾರನು ರಾಜ್ಯಸ್ಥಾಪನೆ ನಡೆಸಲು ಮುಂದಾಗಿ ಕೊನೆಗೆ ಅಂಗವನ್ನೂ ತನ್ನ ನಿಯಂತ್ರಣಕ್ಕೆ ತಂದುಕೊಂಡು ಬ್ರಹ್ಮದತ್ತರ ಆಳ್ವಿಕೆಯನ್ನು ಕೊನೆಗೊಳಿಸಿದ.

ಈ ಜನಪದಗಳಲ್ಲಿ ಹದಿನಾರನ್ನು ಬೌದ್ಧರ ಅಂಗುತ್ತರ ನಿಕಾಯವು ಮಹಾಜನಪದಗಳೆಂದು ಗುರುತಿಸಿವೆ. ಅವುಗಳೆಂದರೆ ಅಂಗ, ಮಗಧ, ವೃಜ್ಜಿ, ಮಲ್ಲ, ಕಾಶಿ, ಕೋಸಲ, ಚೇದಿ, ವತ್ಸ, ಅವಂತಿ, ಅಸ್ಮಕ, ಕುರು, ಪಾಂಚಾಲ, ಶೂರಸೇನ, ಮತ್ಸ್ಯ, ಗಾಂಧಾರ ಮತ್ತು ಕಾಂಬೋಜ. ಜನಪದಗಳು ಸಂಕೀರ್ಣವಾದ ವ್ಯವಸ್ಥೆಗಳಾಗಿದ್ದವು. ಅವುಗಳ ಪೈಕಿ ಗಣರಾಜ್ಯಗಳಲ್ಲಿ ಉತ್ಪಾದನೆ ಮತ್ತು ಆಡಳಿತ ವ್ಯವಸ್ಥೆ ಇನ್ನೂ ಕುಲಕೇಂದ್ರಿತ ಸ್ವರೂಪವನ್ನು ಮೀರಿರಲಿಲ್ಲ. ಆದರೆ ಆನುವಂಶಿಕ ರಾಜಮನೆತನಗಳು ನೆಲೆಗೊಂಡಿದ್ದಲ್ಲಿ ಅನೇಕ ವ್ಯವಹಾರಗಳು ಕುಲಕೇಂದ್ರಿತ ಮಿತಿಗಳನ್ನು ಮೀರಿದ್ದವು. ಕೃಷಿ ಕಾರ್ಯದಲ್ಲಿ ಗೃಹಪತಿಗಳೆಂಬ ದೊಡ್ಡ ದೊಡ್ಡ ಭೂಮಾಲೀಕರು ದಾಸ ಹಾಗೂ ಕರ್ಮಕಾರ ಎಂಬ ವರ್ಗಗಳನ್ನು ದುಡಿಸಿಕೊಳ್ಳುತ್ತಿದ್ದರು. ಸೈನಿಕ ಹಾಗೂ ಆಡಳಿತ ಪರಿಯಂತ್ರದ ವಿವಿಧ ಹುದ್ದೆಗಳಿಗೆ ದೂರದ ಪ್ರದೇಶಗಳಿಂದ ಬಂದ ಜನರು ನೇಮಕಾತಿ ಪಡೆಯುವುದು ಈ ಕಾಲದ ಆನುವಂಶಿಕ ರಾಜಮನೆತನಗಳ ಸೀಮೆಗಳಲ್ಲಿ, ವಿಶೇಷವಾಗಿ ಅವರ ನಗರಗಳಲ್ಲಿ, ಸಾಮಾನ್ಯವಾಗಿತ್ತು.

ನಗರಗಳು ಅನೇಕ ಹೊಸ ವೃತ್ತಿಗಳಿಗೆ ಜನ್ಮವಿತ್ತವು. ಇವುಗಳನ್ನೆಲ್ಲ ಚಾತುರ್ವರ್ಣ್ಯ ಎಂಬ ಸರಳವಾದ ಪರಿಕಲ್ಪನೆಯ ಅಡಿಯಲ್ಲಿ ನಿರೂಪಿಸುವುದು ಸಾಧ್ಯವಿರಲಿಲ್ಲ. ಬಹುಶಃ ಇದೇ ಕಾರಣಕ್ಕೆ ವಾಜಸನೇಯಿ ಸಂಹಿತೆಯು ನಾಲ್ಕು ವರ್ಣಗಳಲ್ಲದೆ ಇನ್ನೂ ಹಲವು ಗುಂಪುಗಳನ್ನು ಹೆಸರಿಸಿತು. ಅಲ್ಲಿನ ಪಟ್ಟಿಯಲ್ಲಿ ನಾಲ್ಕು ವರ್ಣಗಳ ತರುವಾಯ ಇನ್ನೂ ಅನೇಕರು ಉಲ್ಲೇಖ ಪಡೆದಿದ್ದಾರೆ: ರಥಕಾರರು, ಬಡಗಿಗಳು, ಕುಲಾಲರು, ಲೋಹಕಾರರು, ಆಭರಣಗಳನ್ನು ತಯಾರಿಸುವವರು, ಬಾಣಗಳನ್ನು ನಿರ್ಮಿಸುವವರು, ವೈದ್ಯರು, ದನ ಕಾಯುವವರು, ಕುರಿ ಕಾಯುವವರು, ರೈತರು, ಮದಿರೆ ಉತ್ಪಾದಿಸುವವರು, ಮೀನುಗಾರರು ಮತ್ತು ಬೇಡರು. ಇವರಲ್ಲದೆ ಅಲ್ಲಿ ಕಳ್ಳರು, ಜೂಜುಗಾರರು, ಸೂಳೆಯರು, ನಪುಂಸಕರು, ಕುಷ್ಟರೋಗಿಗಳು, ಬೊಜ್ಜು ಹೊಂದಿದವರು, ದೃಕ್ಶಕ್ತಿ ಹಾಗೂ ಶ್ರವಣಶಕ್ತಿ ಇಲ್ಲದವರು ಸೇರಿದ್ದಾರೆ. ವಾಜಸನೇಯಿ ಸಂಹಿತೆಯಲ್ಲಿ ನಿಷಾದ, ಚಂಡಾಲ ಮತ್ತು ಮಾಗಧರಂಥ ಗುಂಪುಗಳ ಉಲ್ಲೇಖವೂ ಇದೆ. ಮುಂಬರುವ ದಿನಮಾನಗಳಲ್ಲಿ ಇವರೆಲ್ಲ ವರ್ಣಸಂಕರದಿಂದ ಜನಿಸಿದವರೆಂಬ ಧೋರಣೆ ಜಾರಿಗೊಳ್ಳಲಿತ್ತು.

ವೃತ್ತಿಗಳ ಸಂಖ್ಯೆ ಹೆಚ್ಚಿ ಅವುಗಳನ್ನು ನಾಲ್ಕು ವರ್ಣಗಳ ಅಡಿಯಲ್ಲಿ ನಿಲ್ಲಿಸುವುದು ಅಸಾಧ್ಯ ಎಂಬ ಸ್ಥಿತಿ ಉಂಟಾದಾಗ ಎರಡು ದಾರಿಗಳು ತಲೆದೋರಿದವು. ಒಂದು, ವಾಜಸನೇಯಿ ಸಂಹಿತೆ ಮಾಡುವಂತೆ ಈ ಇತರ ಗುಂಪುಗಳನ್ನು ಪ್ರತ್ಯೇಕವಾಗಿ ಹೆಸರಿಸುವುದು. ಎರಡು, ಬೌದ್ಧರ ಪಾಲಿ ಗ್ರಂಥಗಳಲ್ಲಿ ಕಾಣುವಂತೆ ಇವರೆಲ್ಲರನ್ನೂ ಶೂದ್ರರೆಂದು ಬಗೆಯುವುದು.

ವರ್ಣವ್ಯವಸ್ಥೆ ಎಂಬುದು ವರ್ಗಕೇಂದ್ರಿತ ವೃತ್ತಿಗಳು ಕಾಣಿಸಿಕೊಳ್ಳತೊಡಗಿದಾಗ ರೂಪುಗೊಂಡ ಒಂದು ಸೈದ್ಧಾಂತಿಕ ನಿರ್ಮಿತಿ. ಆದರೆ ಅಲ್ಲಿ ಹೇಳಲಾದ ಗುಂಪುಗಳು ಕೇವಲ ಭಾವನೆಗೆ ಸೀಮಿತವಾಗಿರಲಿಲ್ಲ. ಈ ಗುಂಪುಗಳಿಗೆ ಸೇರಿದವರನ್ನು ಗುರುತಿಸುವುದು ಸಾಧ್ಯವಿತ್ತು. ಆದರೆ ವಾಸ್ತವದಲ್ಲಿ ಸ್ಥಿತಿಯು ಈ ಸರಳವಾದ ಶ್ರೇಣೀಕರಣಕ್ಕಿಂತ ಹೆಚ್ಚು ಸಂಕೀರ್ಣವಾಗಿತ್ತು. ಶತಪಥ ಬ್ರಾಹ್ಮಣದಲ್ಲಿಯೇ ನಾವು ಕ್ಷತ್ರಿಯನಲ್ಲದ ಓರ್ವ ರಾಜನನ್ನು ಕಾಣುತ್ತೇವೆ. ಅವನ ಹೆಸರು ಮರುತ್ತ ಆವಿಕ್ಷಿತ. ಈತ ಆಯೋಗವ, ಅಂದರೆ ಶೂದ್ರ ತಂದೆ ಹಾಗೂ ವೈಶ್ಯ ತಾಯಿಗೆ ಹುಟ್ಟಿದವ. ಈ ತರಹದ ಗುರುತುಗಳು ಅಂದು ವರ್ಣಗಳು ಕಾಲ್ಪನಿಕವಾಗಿರದೆ ನಿಜವಾಗಿಯೂ ಅಸ್ತಿತ್ವದಲ್ಲಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಹೀಗಿರುವಾಗಲೂ ವರ್ಣದ ಗುರುತುಗಳು ತಮ್ಮ ಚರಿತ್ರೆಯ ಮೊದಲ ಹಂತದಲ್ಲಿ ಸದಾ ಆನುವಂಶಿಕವಾಗಿ ಬಂದುದ್ದಲ್ಲ, ಅದನ್ನು ಸ್ವಂತ ವ್ಯವಹಾರಗಳ ಮೂಲಕ ಪಡೆದುಕೊಳ್ಳಬಹುದು ಎಂಬ ನಿಲುವೊಂದು ಪ್ರಚಾರದಲ್ಲಿದ್ದದ್ದು ಗಮನಾರ್ಹ ಸಂಗತಿ.

ಶತಪಥ ಬ್ರಾಹ್ಮಣದಲ್ಲಿ ಕ್ಷತ್ರಿಯರು ವಿಶ್ ಮೂಲದವರು ಎನ್ನಲಾಗಿದೆ. ವಿಶ್ ಎಂದರೆ ಜನರು ಸಣ್ಣ ಪ್ರಮಾಣದ ಕೃಷಿ ಕೈಗೊಂಡು ಜೀವನ ಸಾಗಿಸುವ ಆವಾಸಕೇಂದ್ರ ಎಂದರ್ಥ. ವೈಶ್ಯ, ವೇಶ್ಯಾ, ವಿಶ್ವ ಮುಂತಾದ ಸಂಸ್ಕೃತಭಾಶಾ ಶಬ್ದಗಳಿಗೆ ವಿಶ್ ಪದವೇ ಮೂಲ. ಕ್ಷತ್ರಿಯರು ವಿಶ್ ಮೂಲದವರು ಎನ್ನುವುದು ಅವರ ಕಾರ್ಷಿಕ ಹಿನ್ನೆಲೆಯನ್ನು ಸೂಚಿಸುತ್ತದೆ. ಕೃಷಿಯಿಂದ ಉಂಟಾದ ಹೆಚ್ಚುವರಿಯನ್ನು ಬಲಪ್ರಯೋಗದಿಂದ ನಿಯಂತ್ರಿಸುವವರೇ ಕ್ಷತ್ರಿಯರು. ಕೃಷಿ ಕೈಗೊಳ್ಳುವವರು ವೈಶ್ಯರು. ಅವರು ಕ್ಷತ್ರಿಯರ ವಶದಲ್ಲಿದ್ದಾರೆ, ಆದ್ದರಿಂದಲೇ ಅವರನ್ನು ವೈಶ್ಯರು ಎನ್ನುತ್ತಾರೆ ಎಂದು ಶತಪಥ ಬ್ರಾಹ್ಮಣವು ಸಾರುತ್ತದೆ.

ಬೃಹದಾರಣ್ಯಕ ಉಪನಿಷತ್ತು ಶೂದ್ರನನ್ನು ಪೂಷನ್ ಎಂದು ಕರೆಯುತ್ತದೆ. ಹಾಗೆಂದರೆ ಪೋಷಣೆಯನ್ನು ನೀಡುವವನು ಎಂದರ್ಥ. ಇದೇ ಅರ್ಥದಲ್ಲಿ ಜೈಮಿನೀಯ ಬ್ರಾಹ್ಮಣದಲ್ಲಿ ವೈಶ್ಯನನ್ನು ಪೋಷಯಿಷ್ಣು ಎನ್ನಲಾಗಿದೆ. ರಾಮ್ ಶರಣ್ ಶರ್ಮಾ ಹೇಳುವಂತೆ ಪೂಷನ್‌ಗಳು ಕೃಷಿಕಾರ್ಯದಲ್ಲಿ ತೊಡಗಿದ್ದರು. ಚಾತುರ್ವರ್ಣ್ಯದ ವ್ಯವಸ್ಥೆಯಲ್ಲಿ ಕೃಷಿ ವೈಶ್ಯರು ಕೈಗೊಳ್ಳಬೇಕಾದ ವೃತ್ತಿ, ಶೂದ್ರರಲ್ಲ. ಆದರೆ ವ್ಯವಹಾರದ ನೆಲೆಯಲ್ಲಿ ಸ್ಥಿತಿ ಬೇರೆಯೇ ಆಗಿತ್ತು. ಕೆಲವು ಸಂದರ್ಭದಲ್ಲಿ ಶೂದ್ರರು ಆಧ್ಯಾತ್ಮಿಕ ಜ್ಞಾನವನ್ನೂ ಪಡೆದುಕೊಳ್ಳುತ್ತಿದ್ದುದಾಗಿ ತಿಳಿದುಬರುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಜಾನಶೃತಿ ಪೌತ್ರಾಯಣನ ಕಥೆ ಇದಕ್ಕೆ ಒಳ್ಳೆಯ ನಿದರ್ಶನ.

ಕನಿಷ್ಟ ಆರನೆಯ ಶತಮಾನದ ಕೊನೆಯ ವರೆಗಾದರೂ ಚಾತುರ್ವರ್ಣ್ಯದ ಶ್ರೇಣಿಯಲ್ಲಿ ಏಕರೂಪತೆ ಇರಲಿಲ್ಲ. ಶತಪಥ ಬ್ರಾಹ್ಮಣದಲ್ಲಿ ಒಂದೆಡೆಯಲ್ಲಿ ಬ್ರಾಹ್ಮಣ, ವೈಶ್ಯ, ರಾಜನ್ಯ (ಅಂದರೆ ಕ್ಷತ್ರಿಯ), ಶೂದ್ರ ಎಂಬ ಶ್ರೇಣಿ ಕಂಡುಬರುತ್ತದೆ. ಇಲ್ಲಿ ಕ್ಷತ್ರಿಯರಿಗೆ ಮೂರನೆಯ ಸ್ಥಾನ. ಅದೇ ಕೃತಿಯಲ್ಲಿ ಮತ್ತೊಂದೆಡೆ ಕ್ಷತ್ರಿಯರು ಮೊದಲ ಸ್ಥಾನದಲ್ಲಿದ್ದಾರೆ. ಬ್ರಾಹ್ಮಣರಿಗೆ ಇಲ್ಲಿ ಎರಡನೆಯ ಸ್ಥಾನ. ವೈಶ್ಯರು ನಾಲ್ಕನೆಯ ಸ್ಥಾನವನ್ನೂ ಶೂದ್ರರು ಐದನೆಯ ಸ್ಥಾನವನ್ನೂ ಹೊಂದಿರುವ ಈ ಶ್ರೇಣೀಕರಣದಲ್ಲಿ ಮಹಿಳೆಯರಿಗೆ ಮೂರನೆಯ ಸ್ಥಾನವನ್ನು ನೀಡಲಾಗಿದೆ. ಪಂಚವಿಂಶ ಬ್ರಾಹ್ಮಣದಲ್ಲಿ ಒಂದೆಡೆ ಮೊದಲಿಗೆ ರಾಜನ್ಯ ಕಾಣಿಸಿಕೊಳ್ಳುತ್ತಾನೆ. ಅನಂತರ ಬ್ರಾಹ್ಮಣ ಹಾಗೂ ವೈಶ್ಯ. ಈ ಪಟ್ಟಿಯಲ್ಲಿ ಶೂದ್ರನಿಲ್ಲ.

ಇಂಥ ಭಿನ್ನತೆಗಳನ್ನು ಗಮನಿಸಿದಾಗ ವರ್ಣಗಳ ಶ್ರೇಣಿಯನ್ನು ಸ್ಪಷ್ಟವಾಗಿ ನಿಗದಿತಪಡಿಸಲಾಗಿರಲಿಲ್ಲ ಎಂಬ ಗುಮಾನಿ ಹುಟ್ಟಬಹುದು. ಆದರೆ ಇದು ಕೇವಲ ಗುಮಾನಿ ಅನ್ನಿಸುತ್ತದೆ. ಶತಪಥ ಬ್ರಾಹ್ಮಣದಲ್ಲಿ ಕ್ಷತ್ರಿಯರು ಮೊದಲ ಸ್ಥಾನವನ್ನು ಪಡೆದಿರುವಲ್ಲಿ ಶ್ರೇಣೀಕರಣವು ವೀರ್ಯವನ್ನು ಆಧರಿಸಿದೆ. ಅದೇ ಗ್ರಂಥದಲ್ಲಿ ಬ್ರಾಹ್ಮಣರು ಮೇಲಿನ ಸ್ಥರ ಹೊಂದಿರುವ ಸಂದರ್ಭವು ದರ್ಶಪೂರ್ಣಮಾಸ ಎಂಬ ಆಚರಣೆ ಕುರಿತಾಗಿದೆ. ದರ್ಶಪೂರ್ಣಮಾಸ ಎಂದರೆ ತಿಂಗಳೊಂದರ ಪ್ರತಿ ಪಕ್ಷದಲ್ಲೂ ಕೈಗೊಳ್ಳಬೇಕಾದ ಆಚರಣೆ. ಇದನ್ನು ನಡೆಸಲು ಬೇಕಾದ ಪುರುಸೊತ್ತು ಅಂದಿನ ಕ್ಷತ್ರಿಯರಿಗೆ ಇದ್ದಿರುವ ಸಾಧ್ಯತೆಯಿಲ್ಲ. ಹೀಗಾಗಿ, ಮೊದಲನೆಯ ಶ್ರೇಣೀಕರಣ ಕ್ಷತ್ರಿಯರು ನಿರೂಪಿಸಿದ್ದು, ಎರಡನೆಯದು ಬ್ರಾಹ್ಮಣರು ನಿರೂಪಿಸಿದ್ದು ಎಂಬುದು ಸ್ಪಷ್ಟವಾಗುತ್ತದೆ. ಬ್ರಾಹ್ಮಣರು ನಿರೂಪಿಸಿದ ಮೊದಮೊದಲ ಶ್ರೇಣೀಕರಣದ ಪಟ್ಟಿಗಳಲ್ಲಿ ಕ್ಷತ್ರಿಯರನ್ನು ಸದಾ ರಾಜನ್ಯರೆಂದು ಕರೆಯಲಾಗಿದೆ, ಕ್ಷತ್ರಿಯರೆಂದಲ್ಲ.

ಶತಪಥ ಬ್ರಾಹ್ಮಣದಲ್ಲಿಯೇ ಮತ್ತೊಂದೆಡೆಯಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನವಿದ್ದು ಕ್ಷತ್ರಿಯರಿಗೆ ಎರಡನೆಯ ಸ್ಥಾನವನ್ನು ನೀಡಲಾಗಿದೆ. ಅದಕ್ಕೆ ಅಲ್ಲಿ ಕಾರಣವನ್ನೂ ಹೇಳಲಾಗಿದೆ. ಕ್ಷತ್ರಿಯರ ಬಲವು ಅಶ್ವಮೇಧದ ಮೇಲೆ ನಿಂತಿದೆ. ಅಶ್ವಮೇಧವನ್ನು ನಡೆಸುವುದು ಹೇಗೆಂಬುದು ಬ್ರಾಹ್ಮಣರಿಗೆ ಮಾತ್ರ ಗೊತ್ತು. ಅಶ್ವಮೇಧ ನಡೆಸಲರಿಯದ ಬ್ರಾಹ್ಮಣ ಬ್ರಾಹ್ಮಣನೇ ಅಲ್ಲ ಎಂದು ಈ ಸಂದರ್ಭದಲ್ಲಿ ಶತಪಥ ಬ್ರಾಹ್ಮಣವು ಘೋಷಿಸುತ್ತದೆ. ಇಲ್ಲಿಯೂ ರಾಜನನ್ನು ರಾಜನ್ಯ ಎನ್ನಲಾಗಿದೆಯೇ ಹೊರತು ಕ್ಷತ್ರಿಯ ಎಂದಲ್ಲ.

ಆಳುವ ವರ್ಗದವರನ್ನು ಬ್ರಾಹ್ಮಣರು ರಾಜನ್ಯರೆಂದು ಕರೆಯುವ ಪದ್ಧತಿ ಹಳೆಯದೇ ಇರಬಹುದು. ಆದರೆ ಕ್ಷತ್ರಿಯರೆಂದು ಕರೆಯುವ ಕೆಲವಾದರೂ ಸಂದರ್ಭಗಳು ನಮಗೆ ಆರಂಭದ ಮೂಲಗಳಲ್ಲಿ ಸಿಗುತ್ತವೆ. ಶತಪಥ ಬ್ರಾಹ್ಮಣದಲ್ಲಿಯೇ ಬ್ರಾಹ್ಮಣರು ನಿರೂಪಿಸಿದ ಪಟ್ಟಿಯೊಂದರಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಶ್ರೇಣಿಯನ್ನು ಕಾಣುತ್ತೇವೆ. ಇಲ್ಲಿನ ನಿರೂಪಣೆ ಮತ್ತೊಂದು ಕಾರಣಕ್ಕೆ ಮಹತ್ವ ಹೊಂದಿದೆ. ಇಲ್ಲಿ ಕ್ಷತ್ರಿಯರು, ವೈಶ್ಯರು ಹಾಗೂ ಶೂದ್ರರು ಕ್ರಮವಾಗಿ ಕ್ಷತ್ರಿಯ, ವೈಶ್ಯ ಹಾಗೂ ಶೂದ್ರರಿಗೆ ಜನಿಸಿದವರು, ಆದರೆ ಬ್ರಾಹ್ಮಣರು ಬ್ರಹ್ಮದೇವನ ಸಂತತಿಗಳಾದ ಕಾರಣ ದಿವ್ಯರು ಎನ್ನಲಾಗಿದೆ. ಬ್ರಾಹ್ಮಣರು ದಿವ್ಯರೆಂಬ ಪ್ರಪ್ರಥಮ ಹೇಳಿಕೆ ಇದಾಗಿರಬಹುದು. ಈ ನಿಲುವನ್ನೇ ದೀಘನಿಕಾಯದ ಅಗ್ಗಞ್ಞಸುತ್ತದಲ್ಲಿ ಬುದ್ಧ ಖಂಡಿಸಿರುವುದು.

ಶತಪಥ ಬ್ರಾಹ್ಮಣದ ಈ ನಿರೂಪಣೆಗೆ ಮತ್ತೊಂದು ಅರ್ಥವಿದೆ. ಶೂದ್ರರೆಂದರೆ ಶೂದ್ರರಿಗೆ ಜನಿಸಿದವರು, ವೈಶ್ಯರು ವೈಶ್ಯರ ಸಂತತಿಗಳು, ಕ್ಷತ್ರಿಯರು ಕ್ಷತ್ರಿಯರಿಗೆ ಹುಟ್ಟಿದವರು ಎಂಬ ಮಾತು ಈ ಮೂರು ವರ್ಣಗಳಲ್ಲಿ ನೆಲೆಗೊಂಡಿದ್ದ ಒಳವಿವಾಹದ ಪದ್ಧತಿಯನ್ನು ಸೂಚಿಸುತ್ತಿದೆ. ಬ್ರಾಹ್ಮಣನಾಗಲು ಒಳವಿವಾಹವಾದ ಬ್ರಾಹ್ಮಣ ದಂಪತಿಗಳಿಗೆ ಜನಿಸುವುದು ಅನಿವಾರ್ಯವಾಗಿರಲಿಲ್ಲ ಎಂಬುದು ಇಲ್ಲಿನ ಧ್ವನ್ಯಾರ್ಥ. ಹಾಗೆಂದು ಶತಪಥ ಬ್ರಾಹ್ಮಣವು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ಆ ಕಾಲದ ಇತರ ಆಕರಗಳಲ್ಲಿ ಇದಕ್ಕೆ ಸಮರ್ಥನೆಯಿದೆ.

ಚಾತ್ರುವರ್ಣ್ಯದ ಮೊದಲ ನಿರೂಪಣೆಗಳಲ್ಲಿ ಇದೊಂದು ಆನುವಂಶಿಕ ಪದ್ಧತಿಯಾಗಿತ್ತು ಎಂಬ ಕುರುಹುಗಳಿಲ್ಲ. ವರ್ಣವೊಂದನ್ನು ಪಡೆದುಕೊಳ್ಳುವುದು ಸಾಧ್ಯವಿತ್ತೆಂದು ಹೇಳಲು ವೈದಿಕ ಸೂತ್ರಗಳಲ್ಲಿ ಅನೇಕ ಉದಾಹರಣೆಗಳಿವೆ. ಶತಪಥ ಬ್ರಾಹ್ಮಣದ ಪ್ರಕಾರ ಅಶ್ವಮೇಧವನ್ನು ಯಶಸ್ವಿಯಾಗಿ ಯಾರೊಬ್ಬ ಕೈಗೊಳ್ಳುವನೋ ಅವನು ಅಭಿಷೇಕ ಪಡೆದು ರಾಜನಾಗಲು ಯೋಗ್ಯ, ಈ ಕಾರ್ಯದಲ್ಲಿ ಯಶಸ್ವಿಯಾಗದೆ ಇರುವವನು ರಾಜನಲ್ಲದಾಗಿ (ಅಂದರೆ ಅ-ರಾಜನಾಗಿ) ವೈಶ್ಯನೆಂದು ಗುರುತಿಸಿಕೊಳ್ಳುತ್ತಾನೆ.

ಐತರೇಯ ಬ್ರಾಹ್ಮಣದಲ್ಲಿ ಓರ್ವ ಬ್ರಾಹ್ಮಣ ಪುರೋಹಿತನು ಹೀಗೆನ್ನುತ್ತಾನೆ: ತಾನು ಕೈಗೊಂಡ ಯಜ್ಞದ ಅಂಗವಾಗಿ ರಾಜನೋರ್ವನು ಸೋಮ ಸೇವಿಸಿದರೆ ಅವನಿಗೆ ಜನಿಸುವ ಸಂತತಿಗಳು ಬ್ರಾಹ್ಮಣರಾಗುತ್ತಾರೆ, ಮೊಸರು ಸೇವಿಸಿದರೆ ಅವನಿಗಾಗುವುದು ವೈಶ್ಯ ಸಂತತಿಗಳು, ನೀರು ಸೇವಿಸಿದರೆ ಶೂದ್ರ ಸಂತತಿಗಳು. ಕ್ಷತ್ರಿಯ ಸಂತತಿಗಳು ಉಂಟಾಗಬೇಕಾದರೆ ಏನು ಸೇವಿಸಬೇಕು? ಒಂದು ವೇಳೆ ರಾಜನು ಸೋಮ, ಮೊಸರು, ನೀರು, ಈ ಮೂರನ್ನೂ ಬೆರೆಸಿ ಕುಡಿದುಬಿಟ್ಟರೆ ಏನಾದೀತು? ಇಂಥ ಅನೇಕ ತಲಹರಟೆಯ ಪ್ರಶ್ನೆಗಳನ್ನು ಇಲ್ಲಿ ಕೇಳಬಹುದು. ಆದರೆ ವೈದಿಕ ಗ್ರಂಥಗಳಲ್ಲಿ ಬ್ರಾಹ್ಮಣರು ಕಟ್ಟಿಕೊಡುವ ಚಿತ್ರವು ಆನುವಂಶಿಕತೆಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂಬುದು ಮುಖ್ಯ. ವರ್ಣದ ಗುರುತುಗಳನ್ನು ವೈಯಕ್ತಿಕ ವ್ಯವಹಾರಗಳ ಮೂಲಕ ಪಡೆದುಕೊಳ್ಳಬಹುದು ಎಂಬ ವಿಚಾರವನ್ನು ಈ ಚಿತ್ರವು ಎತ್ತಿಹಿಡಿಯುತ್ತದೆ. ಇದು ಚಾತುರ್ವರ್ಣ್ಯದ ಪರಿಕಲ್ಪನೆಯು ಅಂದು ಉಂಟು ಮಾಡಿದ ಸಂಘರ್ಷಗಳ ಮೇಲೆ ಬೆಳಕು ಚೆಲ್ಲುತ್ತದೆ.

ಬ್ರಾಹ್ಮಣರಲ್ಲಿ ಕೆಲವರಾದರೂ ಆನುವಂಶಿಕವಾದ ವರ್ಣದ ಗುರುತನ್ನು ಎತ್ತಿಹಿಡಿಯುವ ಯತ್ನ ನಡೆಸಿರಬಹುದು. ಪಂಚವಿಂಶ ಬ್ರಾಹ್ಮಣದಲ್ಲಿ ಅಂಥದ್ದೊಂದು ಉದಾಹರಣೆಯಿದೆ. ಕಣ್ವನಿಗೆ ಒಬ್ಬರು ಮಕ್ಕಳು, ವತ್ಸ ಮತ್ತು ಮೇಧಾತಿಥಿ. ವತ್ಸನು ಕಣ್ವನಿಗೆ ಶೂದ್ರ ಪತ್ನಿಯಲ್ಲಿ ಜನಿಸಿದವ, ಮೇಧಾತಿಥಿ ಹುಟ್ಟಿದ್ದು ಬ್ರಾಹ್ಮಣ ಪತ್ನಿಯಲ್ಲಿ. ಒಮ್ಮೆ ಮೇಧಾತಿಥಿಯು ವತ್ಸನನ್ನು ಅಬ್ರಾಹ್ಮಣ ಎಂದಾಗ ಕಣ್ವ ಹೇಳುತ್ತಾನೆ, ವತ್ಸ ಮೇಧಾತಿಥಿಗಿಂತ ಶ್ರೇಷ್ಟ ಬ್ರಾಹ್ಮಣ ಎಂದು.

ಕ್ಷತ್ರಿಯರು ಪ್ರತಿನಿಧಿಸಿದ ರಾಜತ್ವವನ್ನಲ್ಲದೆ ಇನ್ನೂ ಹಲವು ಬಗೆಯ ಆಡಳಿತ ಕ್ರಮಗಳನ್ನು ಶತಪಥ ಬ್ರಾಹ್ಮಣವು ಗುರುತಿಸಿದಂತೆ ತೋರುತ್ತದೆ. ಅರ್ಬುದ ಕಾದ್ರವೇಯನನ್ನು ಅಲ್ಲಿ ಸರ್ಪಗಳ ಹಾಗೂ ಹಾವಾಡಿಗರ ಅರಸ ಎನ್ನಲಾಗಿದೆ. ಕುಬೇರ ವೈಶ್ರವಣನು ರಾಕ್ಷಸರ ಹಾಗೂ ಅಸಿತ ಧಾನ್ವನು ಅಸುರರ ಅರಸ. ಮತ್ಸ್ಯ ಸಾಮ್ಮದ ಹಾಗೂ ತ್ರಕ್ಷ್ಯ ವೈಪಸ್ಯತರು ಕ್ರಮವಾಗಿ ಮೀನುಗಾರರ ಹಾಗೂ ಪಕ್ಷಿಗಳನ್ನು ಬೇಟೆಯಾಡುವವರ ಅರಸರು. ಮನು ವೈವಸ್ವತನು ಮಾನವರ ಅರಸ, ಯಮ ವೈವಸ್ವತನು ಮೃತರಾದ ಪೂರ್ವಿಕರ ಅರಸ, ವರುಣ ಆದಿತ್ಯನು ಗಂಧರ್ವರ ಅರಸ, ಸೋಮ ವೈಷ್ಣವನು ಅಪ್ಸರೆಯರ ಅರಸ, ಧರ್ಮ ಇಂದ್ರನು ದೇವತೆಗಳ ಅರಸ. ಅರಸನ ಆಡಳಿತ ನೆಲೆಗೊಂಡಿದ್ದ ಪ್ರದೇಶಕ್ಕೆ ವಿಶ್ ಎಂಬ ಸಂಜ್ಞೆ ಬಳಸುವ ಕ್ರಮ ಚಾಲ್ತಿಯಲ್ಲಿದ್ದಿರಬೇಕು. ಮೇಲೆ ಹೇಳಿದ ಎಲ್ಲ ಅರಸರನ್ನೂ ಉಲ್ಲೇಖಿಸುವಾಗ ವಿಶಸ್ತಾ ಎಂಬ ಪ್ರಯೋಗ ಬಳಕೆಯಾಗಿದೆ.

ರಾಜಕೀಯ ಪ್ರಕ್ರಿಯೆಗಳಲ್ಲಿ ಕ್ಷತ್ರಿಯರಿಗಿದ್ದ ಮಹತ್ವವನ್ನು ಪರೋಕ್ಷವಾಗಿ ಅಲ್ಲಗಳೆಯುವ ಚಿತ್ರ ಇದಾಗಿದೆ. ಆನುವಂಶಿಕತೆಗೆ ಒತ್ತು ನೀಡದ, ವರ್ಣವೊಂದರ ಸದಸ್ಯತ್ವವನ್ನು ಯಾರುಬೇಕಾದರೂ ಪಡೆದುಕೊಳ್ಳಬಹುದು ಎಂಬ ಬ್ರಾಹ್ಮಣರ ನಿಲುವೇ ಈ ಚಿತ್ರಕ್ಕೂ ವೈಚಾರಿಕ ನ್ಯಾಯಸಮ್ಮತಿ ಒದಗಿಸುತ್ತದೆ. ಬ್ರಾಹ್ಮಣರ ಈ ನಿಲುವು ಕ್ಷತ್ರಿಯರಿಗೆ ಸಮ್ಮತವಾಗಿರಲಿಲ್ಲ. ಇದು ಕ್ರಿ.ಪೂ. ಆರನೆಯ ಶತಮಾನದ ವೇಳೆಗೆ ಬ್ರಾಹ್ಮಣರ ಹಾಗೂ ಕ್ಷತ್ರಿಯರ ನಡುವೆ ಗಂಭೀರವಾದ ವರ್ಗಸಂಘರ್ಷವೊಂದು ತಲೆದೋರಲು ಕಾರಣವಾಯ್ತು. ಮುಂದಿನ ಅಧ್ಯಾಯದಲ್ಲಿ ಇದನ್ನು ಚರ್ಚೆಗೆತ್ತಿಕೊಳ್ಳುತ್ತೇನೆ.

*

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-1

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...