ಕತ್ತಲೆಯ ಅಳತೆಗಾರ

Date: 26-03-2021

Location: .


ಮನುಷ್ಯರ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯನ್ನು ಕಲಾಕೃತಿಯಲ್ಲಿ ಶೋಧಿಸಿ ಕ್ಯಾನ್ವಾಸ್‌ ಮೇಲೆ ಪ್ರತಿಬಿಂಬಿಸಿದ ಕಲಾವಿದ ‘ವಿಲಿಯಂ ಬ್ಲೇಕ್‌’ ಕವಿಯೂ ಹೌದು. ಅವರ ಹೆಸರಾಂತ ಚಿತ್ರ ‘The Ancient of Days' ಕುರಿತು ಲೇಖಕ ಲಕ್ಷ್ಮಣ ಬಾದಾಮಿ ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ವಿಶ್ಲೇಷಿಸಿದ ಬರಹ ಇಲ್ಲಿದೆ.

ಕಲಾಕೃತಿ: The Ancient of Days
ಕಲಾವಿದ: ವಿಲಿಯಂ ಬ್ಲೇಕ್
ಕಾಲ: 1757 - 1827
ದೇಶ: ಇಂಗ್ಲೆಂಡ್
ಕಲಾಪಂಥ: ರೋಮ್ಯಾಂಟಿಸಿಸಮ್

ನಿಗಿನಿಗಿ ಕೆಂಡದಂಥ ವೃತ್ತ. ವೃತ್ತದ ಸುತ್ತಲೂ ಪ್ರಜ್ವಲಿಸುತ್ತಿರುವ ಬೆಂಕಿಯ ಕೆನ್ನಾಲಿಗೆಗಳು. ವೃತ್ತದೊಳಗೆ ದಿಗಂಬರನಾದ ಮುದುಕ. ಮುದುಕನು ತನ್ನ ‘ಬೆತ್ತಲ ಮೈಯನ್ನು ಸಂಪೂರ್ಣ ತೋರಗೊಡಬಾರದೆಂಬಂತೆ ಬಲ ಮೊಣಕಾಲನ್ನು ಊರಿ, ಮೈಯನ್ನು ಬಾಗಿಸಿ, ಎಡಗೈಯಲ್ಲಿ ಬಂಗಾರದ ಕೈವಾರ(Compass)ವನ್ನು ಹಿಡಿದು ಕೆಳಗಿನ ಅನಂತ ಕತ್ತಲೆಯನ್ನು ಅಳೆಯುತ್ತಿದ್ದಾನೆ!! ಇದೆಲ್ಲವೂ ಅಂತರಿಕ್ಷದ ವಿದ್ಯಮಾನವಾಗಿರುವುದರಿಂದ ಜ್ವಾಲೆಯ ಆಕೃತಿಯನ್ನುಳಿದು ಹಿನ್ನೆಲೆಯಲ್ಲಿ ಸಂಪೂರ್ಣ ಗಾಢಾಂಧಕಾರ ವ್ಯಾಪಿಸಿದೆ. ಮುದುಕನ ಬೆಳ್ಳಗಿನ ತಲೆಗೂದಲು, ಗಡ್ಡ ಮೀಸೆಯನ್ನು ನೋಡಿದರೆ ಡ ವಿಂಚಿಯ ‘ಆಡಮ್‌ನನ್ನು ಸೃಷ್ಟಿಸುತ್ತಿರುವ ದೇವರು(ಮುದುಕ) ನೆನಪಾಗುತ್ತಾನೆ. ಮುದುಕನ ತಲೆಗೂದಲು, ದಾಡಿ ಮೀಸೆಗಳು ಗಾಳಿ ಬೀಸುವ ದಿಕ್ಕಿಗೆ ಹಾರಾಡುತ್ತಿವೆ.

ಈ ಮುದುಕನು ವಿಲಿಯಂ ಬ್ಲೇಕ್‌ನ ಕಲ್ಪನೆಯ ಮೂಸೆಯಲ್ಲಿ ಒಡಮೂಡಿದ ದೇವತೆ ‘ಉರಿಜೆನ್ ಆಗಿದ್ದಾನೆ. ಈ ಉರಿಜೆನ್ ಬ್ಲೇಕ್‌ನ ಅನೇಕ ಸಾಹಿತ್ಯ ಕೃತಿಗಳಲ್ಲಿಯೂ ಕೂಡಾ ಬಂದಿರುವ ಒಂದು ಪಾತ್ರ. ಇದೊಂದು ದಮನಕಾರಿ ಶಕ್ತಿಯಾಗಿದೆ. ಋಣಾತ್ಮಕ ಶಕ್ತಿಯನ್ನು ತೊಡೆದು ಧನಾತ್ಮಕ ಶಕ್ತಿಗೆ ಪ್ರೇರಣೆಯನ್ನು, ಚೈತನ್ಯವನ್ನು ನೀಡುವುದು ಇದರ ಆಶಯವೆಂಬಂತೆ ತೋರುತ್ತದೆ. ಹಾಗಾಗಿಯೇ ಸುತ್ತಲೂ ವ್ಯಾಪಿಸಿರುವ ಅನಂತ ಕತ್ತಲೆಯನ್ನು ಕಳೆಯಲು ಜ್ವಾಲೆಯಿಂದ ಹೊರಟ ಹೊನ್ನಿನ ಕಿರಣಗಳು ರಭಸವಾಗಿ ಧಾವಿಸುತ್ತಿರುವಂತಿವೆ. ಈ ಕಿರಣಗಳಿಗೆ ದಾರಿ ತೋರಿಸಲೋ.. ಅಥವಾ ಆವರಿಸಿದ ಕತ್ತಲೆಯನ್ನು ಅಳೆಯಲೋ ಎಂಬಂತೆ ಉರಿಜೆನ್ ಬಂಗಾರದ ಕೈವಾರ ಹಿಡಿದು ಅವನೂ ಅವಸರದಿಂದ ಕೈ ಚಾಚಿದ್ದಾನೆ. ಜಗತ್ತನ್ನು ಕವಿದಿರುವ ಕತ್ತಲನ್ನು ಕಳೆಯಲೇಬೇಕೆಂಬ ಧಾವಂತ ‘ಉರಿಜೆನ್’ ನಲ್ಲೂ ಕಾಣುತ್ತಿದೆ. ನಾವು ‘ತಮಸೋಮ ಜ್ಯೋತಿರ್ಗಮಯ.. ಅನ್ನುತ್ತೇವಲ್ಲ.. ಅಂಥದೇ ಒಂದು ಅನುಭವವನ್ನು ಈ ಕೃತಿ ನೀಡುತ್ತದೆ.

ವಿಲಿಯಂ ಬ್ಲೇಕ್ ಒಬ್ಬ ಶ್ರೇಷ್ಠ ಕವಿಯೂ ಆಗಿದ್ದರಿಂದ ಕವಿ ಮನಸ್ಸು ಯೋಚಿಸುವ ರೂಪಕ, ಪ್ರತಿಮೆಗಳು ಅವನ ವರ್ಣಚಿತ್ರಗಳಲ್ಲೂ ಮೂಡಿವೆ. ಅವನ ದೃಷ್ಟಿ ಬಲು ಸೂಕ್ಷ್ಮ ಮತ್ತು ವಿಶಾಲ. ಈ ಕಾರಣದಿಂದ ಅವನ ಕಲಾಕೃತಿಗಳು:
‘ಮರಳ ಕಣದಲ್ಲಿ ಬ್ರಹ್ಮಾಂಡವನ್ನೂ
ಕಾಡು ಹೂವಿನಲ್ಲಿ ಸ್ವರ್ಗವನ್ನೂ ಕಾಣಲು
ಅಂಗೈ ಅಳತೆಯಲಿ ಅನಂತತೆಯನ್ನು
ಕಾಲಘಟ್ಟದಲ್ಲಿ ಕಾಲಾತೀತತೆಯನ್ನು ಹಿಡಿಯಲು (-ವಿಲಿಯಂ ಬ್ಲೇಕ್) ಹೊರಡುತ್ತವೆ.

ಬ್ಲೇಕ್ ತನ್ನ ತಾತ್ವಿಕ ಆಲೋಚನೆಗಳಲ್ಲಿ ಕೆಲವನ್ನು ಅಕ್ಷರ ರೂಪಕ್ಕೆ ಇಳಿಸಿದರೆ, ಇನ್ನು ಕೆಲವನ್ನು ರೇಖೆ-ಬಣ್ಣಗಳ ಮೂಲಕ ಆಕಾರ ನೀಡಿದ್ದಾನೆ. ಇದರಿಂದಾಗಿ ಕೇವಲ ಓರ್ವ ವರ್ಣಚಿತ್ರಕಾರನ ಕೃತಿಗಳಿಗಿಂತ ಕವಿಯೂ-ವರ್ಣಚಿತ್ರಕಾರನೂ ಆಗಿರುವ ಬ್ಲೇಕ್‌ನ ಕೃತಿಗಳು ಭಿನ್ನವಾಗಿ ಕಾಣುತ್ತವೆ. ಅವನ ಸಂಕೇತಗಳು, ಸಮೀಕರಣಗಳು ನೋಡುಗನನ್ನು ತುಂಬಾ ಲೆಕ್ಕಾಚಾರ ಹಾಕಿ ನೋಡುವಂತೆ ಉದ್ದೀಪಿಸುತ್ತವೆ. ಅವನ ಈ ಶೈಲಿಯೇ ಮುಂದಿನ ಶತಮಾನದಲ್ಲಿ ಆಧುನಿಕ, ಅಮೂರ್ತ ಕಲಾ ಪರಿಕಲ್ಪನೆಗಳಿಗೆ ದಾರಿಯಾಯಿತು ಎನ್ನಬಹುದು.

ಬ್ಲೇಕ್‌ನು ಕಲಾಕೃತಿಗಳ ರಚನೆಗೆ ಹಲವು ಮಾಧ್ಯಮಗಳನ್ನು ಉಪಯೋಗಿಸಿದ್ದಾನೆ. ಜಲವರ್ಣ, ಟೆಂಪರಾ, ಪೆನ್ ಅಲ್ಲದೆ Etching ಮತ್ತು Engraving ಮಾಡಿಯೂ ಕೃತಿಗಳನ್ನು ರಚಿಸಿದ್ದಾನೆ. ಜಲವರ್ಣವನ್ನು ಬಳಸುವಾಗ ಹೆಚ್ಚು ತಿಳಿಯಾಗಿ ಬಣ್ಣಗಳನ್ನು ಬಳಸಿದ್ದಾನೆ. ಅವಶ್ಯವಿರುವಲ್ಲಿ Outlineಗಳನ್ನು ಎಳೆಯಲಾಗಿದೆ. ಟೆಂಪರಾ ಮತ್ತು ಮಿಶ್ರ ಮಾಧ್ಯಮದ ಕೃತಿಗಳು ಗಾಢ ವರ್ಣದಲ್ಲಿದ್ದು ಅಪಾರದರ್ಶಕವಾಗಿವೆ.

ಬ್ಲೇಕ್‌ನ ಇನ್ನೊಂದು ವಿಶೇಷವೆಂದರೆ, ಅವನು ಸಾಹಿತ್ಯಕ ರಚನೆಗಳಿಗೂ ಚಿತ್ರಗಳ ವಿನ್ಯಾಸ ಮಾಡಿರುವುದು. ಸಾಹಿತ್ಯದ ಪಠ್ಯದ ಜೊತೆಗೆಯೇ ಚಿತ್ರತ್ಮಾಕ ಸಂಯೋಜನೆ ಮಾಡಿರುವುದು ತುಂಬಾ ಅಪರೂಪವೆನಿಸುತ್ತದೆ. ಇಂಥ ವಿನ್ಯಾಸಗಳಲ್ಲಿ ಎರಡಕ್ಕೂ ಸಮಾನ ಅವಕಾಶ ಮತ್ತು ಒತ್ತು ನೀಡಲಾಗಿದೆ. ಇಂದು ನಾವು Illustration(ಸಾಂದರ್ಭಿಕ ಚಿತ್ರ) ಎಂದು ಬಳಸುತ್ತಿರುವುದು ಎರಡು ಶತಮಾನಗಳ ಹಿಂದೆಯೇ ಬ್ಲೇಕ್‌ನ ಪರಿಕಲ್ಪನೆಯಾಗಿತ್ತೆಂದರೆ ಅಚ್ಚರಿಯೆನಿಸುತ್ತದೆ. ಬ್ಲೇಕ್ ತನ್ನ ಸಾಹಿತ್ಯ ಕೃತಿಗಳಲ್ಲದೇ ಮಿಲ್ಟನ್, ಡಾಂಟೆಯ ಕೃತಿಗಳಿಗೂ ಚಿತ್ರ ಬರೆದಿದ್ದಾನೆ. ಈ ಕುರಿತು ಶಿವರಾಮ ಕಾರಂತರು ಹೀಗೆ ಹೇಳುತ್ತಾರೆ ‘ಅವುಗಳಲ್ಲಿ ಸಾಹಿತ್ಯ ಎಷ್ಟು ಮುಖ್ಯವೋ, ಚಿತ್ರ ಅಷ್ಟೇ ಮುಖ್ಯ. ಉಪಮೆಗಳ ರೂಪದಲ್ಲಿ ಅವನ ಅನೇಕ ಚಿತ್ರಗಳು ನಮ್ಮನ್ನು ಕಾಲ್ಪನಿಕ ಮನೋವಿಲಾಸಿ ಜಗತ್ತಿಗೆ ಕೊಂಡೊಯ್ಯುತ್ತವೆ. ಅವು ಕವನಗಳಷ್ಟೆ ನಮ್ಮ ಮನಸ್ಸನ್ನು ಪ್ರಚೋದಿಸುತ್ತವೆ. ಆದರೆ ಅಲ್ಲಿನ ಚಿತ್ರ ವಸ್ತುಗಳು ವಾಸ್ತವಿಕವಲ್ಲ. ವಾಸ್ತವಿಕ ಮತ್ತು ಅನುಭಾವೀ ಸತ್ಯಗಳನ್ನು ಉಪಮೆ ಮತ್ತು ಸಂಕೇತಗಳ ಮೂಲಕ ಆತ ಬಿಂಬಿಸುತ್ತಾನೆ.

ರೋಮ್ಯಾಂಟಿಕ್ ಯುಗ: ಈ ಪಂಥವು ಯುರೋಪಿನಲ್ಲಿ 18ನೇ ಶತಮಾನದ ಹೊತ್ತಿಗೆ ಆರಂಭವಾಯಿತು. ಕೈಗಾರಿಕಾ ಕ್ರಾಂತಿ, ಫ್ರೆಂಚ್ ಕ್ರಾಂತಿಯ ನಂತರ ಹೊಸ ಹೊಸ ಆಲೋಚನೆಗಳು ಮುನ್ನೆಲೆಗೆ ಬಂದವು. ಚೇತೋಹಾರಿಯಾದ ಮನೋಹರವಾದ ಭಾವದೀಪ್ತಿಯಿಂದುದಿಸಿದ ಕೃತಿಗಳು ಈ ಅವಧಿಯಲ್ಲಿ ರಚನೆಯಾದವು. ಕ್ರಮಬದ್ಧ ನಿಯಮಗಳಿಗೊಳಪಟ್ಟು ಈ ಮೊದಲು ಚಿತ್ರಿಸುತ್ತಿದ್ದ ಐತಿಹಾಸಿಕ ಪೌರಾಣಿಕ ಮತ್ತು ಅಲಂಕಾರಿಕ ಶಾಸ್ತ್ರೀಯ ವಿಷಯಗಳನ್ನು ಬಿಟ್ಟು ಇವುಗಳಿಗೆ ವ್ಯತಿರಿಕ್ತವಾಗಿ ವ್ಯಕ್ತಿ, ವ್ಯಕ್ತಿನಿಷ್ಠ ಕಾಲ್ಪನಿಕ, ಭಾವನಾತ್ಮಕ, ಸ್ವಾಭಾವಿಕ ಮತ್ತು ಅತಿಂದ್ರೀಯ ವಿಷಯಗಳ ಬಗ್ಗೆ ಇಲ್ಲಿ ಒತ್ತಿ ಹೇಳಲಾಗಿದೆ. ನಿಸರ್ಗದ ಭವ್ಯತೆಯನ್ನು ವರ್ಣಿಸುವಾಗ ಅದ್ಭುತ ಕೃತಿಗಳು ಈ ಕಾಲದ ಕಾಣ್ಕೆಗಳಾದವು. ಈ ಯುಗದ ನಿಸರ್ಗಚಿತ್ರಗಳು ಕೇವಲ landscapeಗಳಾಗಿರದೇ ನಿಸರ್ಗತತ್ವವನ್ನು ಎತ್ತಿ ಹಿಡಿಯುತ್ತ ಅದನ್ನು ವೈಜ್ಞಾನಿಕಗೊಳಿಸುವ ಪ್ರಕ್ರಿಯೆಯನ್ನು ಸಂಕುಚಿತವಾಗಿ ನೋಡಲಾಯಿತು. ಇದರ ಉಪಕ್ರಮವೆಂಬಂತೆ ‘The Ancident Days' ಕೃತಿಗೂ ಮೊದಲು ಬ್ಲೇಕ್ ರಚಿಸಿದ ‘Newton'ಎಂಬ ಕೃತಿಯನ್ನು ನೋಡಬಹುದು. ಇದನ್ನು ಅವನ ಮೊದಲ ಸಚಿತ್ರ ಕೃತಿಯಾದ ‘There is No Natural Religion'ದಿಂದ ಆಯ್ದುಕೊಳ್ಳಲಾಗಿದೆ. ಈ ಕೃತಿಯ ಸಾರ ರೂಪವನ್ನು ‘ಕಲೆಯು ಜೀವನದ ಮರ, ವಿಜ್ಞಾನವು ಸಾಲಿನ ಮರ ಎಂದು ಹೇಳಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಈ ಹಿಂದಿನ ಅಂಕಣ ಬರಹಗಳು

ದುಃಖದ ಉತ್ಪಾತ - ದಿ ಸ್ಕ್ರೀಮ್

ಹಸಿವು ತಣಿಸುವ ತಾಯಿ

ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು

ಗೌಳಿಗಿತ್ತಿಯ ಮೌನ ಜಾಗರಣೆ!

ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...