ನಿಧಿಯ ಕನವರಿಕೆ

Date: 15-03-2022

Location: ಬೆಂಗಳೂರು


'ಮಗೂ ಭಯ ಪಡಬೇಡ. ಸುಮ್ಮನೆ ಬೇಕೆಂದು ಬಯಸುವುದು ಕುರೂಪ. ಆಸೆಗೂ ಬಯಕೆಗೂ ಹತ್ತಿರದ ನಂಟಿದೆ. ಅದು ನಮ್ಮನ್ನೂ ಸೇರಿಸಿಕೊಂಡು ಜ್ವಲಿಸುತ್ತದೆ. ಇನ್ನೊಬ್ಬರ ಹತ್ತಿರ ಇದೆ, ನನಗೂ ಇರಲಿ ಎಂದು ಬಯಸಬೇಡ, ನಿನ್ನ ಹಿಡಿಯಲ್ಲಿ ಏನು ಸಿಗುತ್ತೋ ಅದು ಮಾತ್ರ ನಿನ್ನದು. ಸುಮ್ಮನೆ ಬಂದರೆ ಬಿಟ್ಟುಬಿಡು ಹೀಗೆ ಹೇಳುತ್ತಿದ್ದ ಮುತ್ಯಾಳ ನೆನಪುಗಳಲ್ಲಿ ಪಿ. ಚಂದ್ರಿಕಾ ಅವರು ಬರೆದ 'ನಿಧಿಯ ಕನವರಿಕೆ' ಅವರ 'ತೇಲುವ ಪಾದಗಳು' ಅಂಕಣದ ವಿಶೇಷ. ಮಾಗಿದ ಬದುಕೊಂದು ನೀಡಬಹುದಾದ ಬದುಕಿನ ನಿಜ ದರ್ಶನ ಇಲ್ಲಿನ ಸಾಲುಗಳಲ್ಲಿ ಕಾಣುತ್ತದೆ.

ಅಮ್ಮಮ್ಮನ ಮನೆಯ ಪಕ್ಕದಲ್ಲಿ ಒಂದು ಕಂಬದ ಮನೆ ಇತ್ತು. ಕಂಬಗಳು ಹಳ್ಳಿಗಳ ಮನೆಯಲ್ಲಿ ಸಾಮಾನ್ಯವಾಗಿರುತ್ತಿದ್ದವು. ಮಾಡಿಗೆ ಹಾಕುತ್ತಿದ್ದ ತೊಲೆಗಳಿಗೆ ಆಧಾರವಾಗಿ ಕಂಬಗಳನ್ನು ನಿಲ್ಲಿಸಲೇ ಬೇಕಿತ್ತು. ಇಲ್ಲದಿದ್ದರೆ ದೊಡ್ಡ ಹಜಾರಗಳು ಸಿಗುತ್ತಲೇ ಇರಲಿಲ್ಲ. ಸಾಮಾನ್ಯವಾಗಿ ಎರಡು ಕಂಬಗಳನ್ನು ತೊಲೆಗೆ ಆಧಾರವಾಗಿ ನಿಲ್ಲಿಸಿರುತಿದ್ದರು. ಆ ಕಂಬಗಳಿಗೆ ಹಗ್ಗವನ್ನು ಕಟ್ಟಿ ತೊಟ್ಟಿಲು ಮಾಡುತ್ತಿದ್ದರು. ಮಕ್ಕಳನ್ನು ಮಲಗಿಸಿದರೆ ಕೆಳಗೆ ಜಾರದ ಹಾಗೆ ಬಟ್ಟೆಯನ್ನು ಆ ಹಗ್ಗಕ್ಕೆ ಹಾಕುತ್ತಿದ್ದರು. ಎರಡು ಪದರವಾಗಿ ಸೀರೆಗಳನ್ನು ಮಡಚಿ ಹಗ್ಗದ ಒಂದು ಬದಿಗೆ ಸ್ವಲ್ಪ ಬಟ್ಟೆಯನ್ನು ಬಿಟ್ಟು ಮೇಲಿಂದ ಉಳಿದ ಬಟ್ಟೆಯನ್ನು ತೆಗೆದುಕೊಂಡು, ಕೆಳಗಿನಿಂದ ಸುತ್ತಿ ತಂದು ತೊಟ್ಟಿಲನ್ನು ಮಾಡುತ್ತಿದ್ದರು. ಅದರಲ್ಲಿ ಮೆತ್ತಗೆ ಬಟ್ಟೆಯನ್ನು ಹಾಕುತ್ತಿದ್ದರು. ತೊಟ್ಟಿಲು ಇಲ್ಲದಿದ್ದರೆ ಸಣ್ಣಮಕ್ಕಳು ಕಂಬಗಳನ್ನು ಸುತ್ತಿ ಆಟ ಆಡುವುದು ನಡೆಯುತ್ತಿತ್ತು. ದಿನ ಬೆಳಗಾದರೆ ಆ ಕಂಬಗಳಿಗೆ ಕಡಗೋಲನ್ನು ಕಟ್ಟಿ ಮೊಸರಿನ ಗಡಿಗೆಯಿಂದ ಬೆಣ್ಣೆ ತೆಗೆಯುವುದು ಸಾಧಾರಣವಾಗಿರುತ್ತಿತ್ತು. ಮುಖವೂ ತೊಳೆಯದೆ ಬೆಣ್ಣೆಯನ್ನು ತಿಂದ ದಿನಗಳೂ ಬೇಕಾದಷ್ಟಿವೆ. ಮೊಸರನ್ನು ಕಡೆಯುತ್ತಾ ಕಡೆಯುತ್ತ, ನೊರೆಯೇ ಬೆಣ್ಣೆಯಾಗುವ ಚಮತ್ಕಾರವನ್ನು ನೋಡುತ್ತಿದ್ದೆವು.

ಆದರೆ ಪಕ್ಕದ ಮನೆ ಎಲ್ಲ ಮನೆಗಳ ಹಾಗೆ ಕಂಬದ ಮನೆಯಾಗಿರಲಿಲ್ಲ. ಚಿತ್ರ ವಿಚಿತ್ರವಾಗಿ ಕಂಬಗಳನ್ನು ನಿಲ್ಲಿಸಿದ್ದರು. ವಿಶಾಲವಾಗಿದ್ದ ಹಜಾರವೂ, ಒಳಕೋಣೆಗಳು ಈ ಕಂಬಗಳ ಕಾರಣದಿಂದ ಇಕ್ಕಟ್ಟಾಗಿ ಕಾಣುತ್ತಿದ್ದವು. ಆಟ ಆಡುತ್ತಾ ನಾವುಗಳು ಆ ಕಂಬದ ಮರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದೆವು. ಆ ಕಂಬಗಳಿಗೆ ಎಷ್ಟೋ ಕಡೆ ಗೆದ್ದಲು ಬಂದು ಪುಡಿ ಪುಡಿಯಾಗಿ ಬೀಳುವ ಸ್ಥಿತಿಯಲ್ಲಿದ್ದವು. ಅಂಥಾ ಕಂಬಗಳ ಕಡೆಗೆ ಹೋಗದಿರುವಂತೆ ಖಚಿತವಾದ ಆದೇಶವನ್ನು ನಮ್ಮ ಹಿರಿಯರು ನೀಡುತ್ತಿದ್ದರು.

ಆ ಮನೆಯಲ್ಲಿ ವೈದ್ಯ ಸ್ವಾಮಿ ಅಂತ ಒಬ್ಬರಿದ್ದರು. ವಯಸ್ಸು ಎಪ್ಪತ್ತಾಗಿತ್ತು. ಊರವರಿಗೆ ಸಣ್ಣ ಪುಟ್ಟ ವೈದ್ಯ ಮಾಡುತ್ತಾ ಜೀವನ ನಡೆಸುತ್ತಿದ್ದರು. ಕೇರಳದವರಾಗಿದ್ದ ಅವರು ನಮ್ಮ ಮಾತನ್ನೂ ಮಲೆಯಾಳಿಗಳ ಹಾಗೆ ಮಾತಾಡಿ ನಗು ತರಿಸುತ್ತಿದ್ದರು. ನಮ್ಮ ನಗುವನ್ನು ನೋಡಿ ಅವರಿಗೂ ನಗು ಬರುತ್ತಿತ್ತು. ಅವರ ಗಡ್ಡ ಮತ್ತು ಮೇಲೆ ಎತ್ತಿ ಕಟ್ಟಿದ್ದ ತುರುಬು, ಹಣೆಗೆ ಹಚ್ಚಿದ್ದ ಗಂಧ ವಿಚಿತ್ರ ಅನ್ನಿಸುತ್ತಿತ್ತು. ಆ ಮನೆಯಲ್ಲಿ ಅವರೊಬ್ಬರೇ ಇರುತ್ತಿದ್ದರು. ಹೆಂಡತಿ ಮಕ್ಕಳನ್ನು ಊರಲ್ಲೇ ಬಿಟ್ಟು ಬಂದಿದ್ದರು. ಸಂಜೆಯಾಯಿತೆಂದರೆ ಅವರ ಮನೆಯಿಂದ ಮಂತ್ರಗಳು, ಜಾಗಟೆ, ಗಂಟೆಯ ಶಬ್ದ ಕೇಳುತ್ತಿದ್ದವು. ಇರೋದು ಒಬ್ಬರೇ ಶಂಖ ಜಾಗಟೆಗಳ ಶಬ್ದ ಒಟ್ಟಿಗೆ ಹೇಗೆ ಕೇಳಲು ಸಾಧ್ಯ? ನನಗೆ ಅದೊಂದು ನಿಗೂಢ ಜಗತ್ತು ಎನ್ನಿಸುತ್ತಿತ್ತು. ಮುತ್ಯಾಳಿಗೆ ಕೇಳಿದರೆ ಅದೇನು ಮಹಾ ಎರಡನ್ನೂ ಒಟ್ಟಿಗೆ ನುಡಿಸಬಹುದು ಎನ್ನುತ್ತಿದ್ದಳು. ವೈದ್ಯ ಸ್ವಾಮಿ ಹಾಗೆ ಒಟ್ಟಿಗೆ ಶಂಖ ಊದಿ, ಜಾಗಟೆಯನ್ನು ಬಾರಿಸುವುದನ್ನು ಕಲ್ಪಿಸಿಕೊಳ್ಳುತ್ತಿದ್ದೆ.

ಅವರ ಮನೆಯ ಹಿತ್ತಲಿಗೆ ಜಾಲಿಗಿಡಗಳು ಬೆಳೆದು ಒಂದು ನಾಯಿ ಕೂಡಾ ನುಸುಳಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆ ಜಾಲಿಗಿಡಗಳನ್ನೆಲ್ಲಾ ಆ ವೈದ್ಯಸ್ವಾಮಿಯೇ ತಂದು ಹಾಕಿದ್ದು ಎನ್ನುವ ಗುಸು ಗುಸು ಕೂಡಾ ಇತ್ತು. ಒಮ್ಮೆ ಆಡುತ್ತಾ, ಆಡುತ್ತಾ, ಬಚ್ಚಿಟ್ಟುಕೊಳ್ಳಲಿಕ್ಕೆ ಅವರ ಮನೆಯ ಹಿತ್ತಲಿಗೆ ಹೋಗಿಬಿಟ್ಟಿದ್ದೆ. ಎಲ್ಲಿ ನೋಡಿದರೂ ಗುಂಡಿಗಳು ಕೆಲವು ಆಳಕ್ಕಿದ್ದರೆ, ಕೆಲವು ಸಣ್ಣವು. ಹರಿಸಿನ ಕುಂಕುಮ ಸುರಿದು, ಕೆಂಪು ಹೂಗಳಿಂದ ಏನೋ ಪೂಜೆ ಮಾಡಿದ ಹಾಗಿತ್ತು. ಪ್ರತಿಯೊಂದು ಗುಂಡಿಯ ಬಳಿಯೂ ಹಾವಿನ ಥರದ ಎಳೆಯ ರಂಗೋಲಿಗಳು. ನಾನು ಅದನ್ನೆಲ್ಲಾ ಕುತೂಹಲದಿಂದ ನೋಡುತ್ತಾ ನಿಂತೆ. 'ಏಯ್ ಮೋಳೆ, ಏನು ಮಾಡ್ತಾ ಇದ್ದೀಯ?’ ಎಂದು ಇದ್ದಕ್ಕಿದ್ದಂತೆ ಕೂಗಿದ್ದು ಕೇಳಿ ನನಗೆ ಗಾಬರಿಯಾಗಿತ್ತು. ತಿರುಗಿ ನೋಡಿದರೆ ನನ್ನಷ್ಟೇ ಗಾಬರಿಯಿಂದ ವೈದ್ಯ ಸ್ವಾಮಿ ನಿಂತಿದ್ದರು. ನನ್ನನ್ನು ಅವರು ಅಲ್ಲಿ ನಿರೀಕ್ಷಿಸಿರಲಿಲ್ಲ. ನನ್ನ ಹೊಡೆಯ ಬಹುದೇನೋ ಎನ್ನುವ ಆತಂಕ ನನ್ನ ಕಾಡಿತು. ಯಾವಾಗಲೂ ಸೌಮ್ಯವಾಗಿರುತ್ತಿದ್ದ ಅವರಧ್ವನಿಯಲ್ಲಿ ಸ್ವಲ್ಪ ಕರ್ಕಷತೆ ತುಂಬಿತ್ತು. ನನ್ನ ನಿರೀಕ್ಷೆಯನ್ನೂ ಮೀರಿ ಎದುರಿಗೆ ಮೊಣಕಾಲನ್ನು ಊರಿ, 'ಇಲ್ಲಿ ಏನು ಮಾಡಿದ್ದೀನೋ ಯಾರಿಗೂ ಹೇಳಬೇಡ’ ಎಂದು ನನ್ನಲ್ಲಿ ಕೇಳಿಕೊಂಡರು. ನನಗೆ ತಪ್ಪು ಮಾಡಿ 'ಅಮ್ಮನಿಗೆ ಹೇಳಬೇಡ’ ಎನ್ನುತ್ತಿದ್ದ ಪುಟ್ಟ ತಮ್ಮನ ಹಾಗೆ ಕಂಡರು. 'ಇಲ್ಲ ಹೇಳಲ್ಲ’ ಅಂದೆ. 'ಬಾ ನಿನಗೆ ಕಲ್ಲು ಸಕ್ಕರೆ ಕೊಡ್ತೀನಿ’ ಎಂದು ನನ್ನನ್ನು ಮನೆಯ ಒಳಗೆ ಕರಕೊಂಡು ಹೋಗಿ, ದೇವರ ಮುಂದಿದ್ದ ಕಲ್ಲು ಸಕ್ಕರೆಯನ್ನು ಕೊಟ್ಟರು. ದೇವರ ಮನೆಯ ತುಂಬೆಲ್ಲಾ ಚಿತ್ರ ವಿಚಿತ್ರವಾದ ದೇವರುಗಳು; ನಾನು ಅದುವರೆಗೂ ಅಂಥಾ ವಿಗ್ರಹಗಳನ್ನು ನೋಡೇ ಇರಲಿಲ್ಲ. ನಮ್ಮ ದೇವರ ಮನೆಗಳಲ್ಲಿ ಅಂಥಾ ವಿಗ್ರಹಗಳು ಇರಲಿಲ್ಲ. ನನಗೆ ವೈದ್ಯ ಸ್ವಾಮಿಯ ಬಗ್ಗೆ ಕುತೂಹಲ ಹೆಚ್ಚಾಯಿತು. ಅವರು ಆ ಮನೆಯನ್ನು ಕೊಂಡಿದ್ದೇ ಅಲ್ಲಿ ನಿಧಿಯಿದೆ ಎನ್ನುವ ಕಾರಣಕ್ಕೆ ಎಂದು ಊರಜನ ಮಾತಾಡಿಕೊಳ್ಳುತ್ತಿದ್ದರು. ಹೆಂಡತಿ ಮಕ್ಕಳಿದ್ದರೂ ಊರೂರು ಸುತ್ತುತ್ತಾ ನಿಧಿಯಿರುವ ಮನೆಯನ್ನೋ, ಭೂಮಿಯನ್ನೋ ಕೊಂಡು ಅಲ್ಲೇ ಇದ್ದು ಹುಡುಕಾಟಕ್ಕಿಳಿಯುತ್ತಿದ್ದಿರಬೇಕು ಎಂದು ಈಗ ಅನ್ನಿಸುತ್ತದೆ. ಆದರೆ ಅವತ್ತು ನಿಧಿ ಅಂದ್ರೆ ಏನು? ಅದು ಭೂಮಿಯ ಒಳಗೇ ಯಾಕಿರುತ್ತೆ ಎಂದೆಲ್ಲಾ ಪ್ರಶ್ನೆಗಳು ನನ್ನಲ್ಲಿ ಮೂಡಿತ್ತು.

'ನಿನ್ನ ಮುತ್ಯಾಗೆ ಎಲ್ಲಾ ಗೊತ್ತಿರುತ್ತೆ. ಬೆಳಗಾದರೆ ದೆವ್ವದಹಾಗೆ ತನ್ನ ಕಾಲುಗಳನ್ನೇ ಒಲೆಯೊಳಗೆ ಚಾಚಿ ಅಡುಗೆ ಮಾಡುವ ಅವಳಿಗೆ ಗೊತ್ತಿಲ್ಲದ್ದು ಏನಿರುತ್ತೆ?’ ಎಂದ ಚಿಕ್ಕಮ್ಮನ ಮಾತು ನನಗೆ ಗಾಬರಿ ಹುಟ್ಟಿಸಿತ್ತು. ಇದನ್ನ ಕೇಳಿಸಿಕೊಂಡ ಅಮ್ಮಮ್ಮ ಚಿಕ್ಕಮ್ಮನಿಗೆ, 'ನಿನ್ನದ್ಯಾಕೋ ಅತಿಯಾಯ್ತು. ಅಜ್ಜಿಯ ಬಗ್ಗೆ ಹೀಗೆಲ್ಲಾ ಆ ಹುಡುಗಿಗೆ ಹೇಳ್ತೀಯಾ?’ ಅಂದ ಗದರಿದಳು. ಚಿಕ್ಕಮ್ಮನಿಗೆ ದೆವ್ವಗಳೆಂದರೆ ವಿಪರೀತ ಹೆದರಿಕೆ, ಅದನ್ನು ತೋರಿಸಿಕೊಳ್ಳಲಿಕ್ಕಾಗದ ಉಡಾಫೆ ಜೊತೆಗೆ. ದೊಡ್ಡವರ ಜೊತೆಗೆ ಅವಳಿಗೆ ಹೇಳಿಕೊಳ್ಳಲಾಗದ್ದನ್ನು ನನ್ನೊಂದಿಗೆ ಹೇಳಿಕೊಳ್ಳುತ್ತಿದ್ದಳು. ಅವಳು ಕಟ್ಟೆಗೆ ಕೂತರೆ ದೆವ್ವದ ಕಥೆಗಳನ್ನೇ ಹೇಳುತ್ತಿದ್ದುದು. ಇಲ್ಲೇ ಸ್ವಲ್ಪ ದೂರದಲ್ಲಿ ಯಾರೋ ಬಂದ ಹಾಗಾಯಿತು... ಯಾರೋ ಕುತ್ತಿಗೆ ಹಿಸುಕಿದ ಹಾಗಾಯಿತು. ಯಾರೋ ಬಂದು ಎದುರು ಕೂತು ಅಳುವಂಥನಿಸಿತು...’ ಹೀಗೆಲ್ಲಾ ಹೇಳುತ್ತಿದ್ದಳು. ನನಗೋ ಕುತೂಹಲ, ಹೀಗೆ ಬಂದು ಹೆದರಿಸುವವರು ಯಾರು? ಯಾಕೆ ಬರುತ್ತಾರೆ? ಅಲ್ಲಿ ಮುತ್ಯಾ ನೋಡಿದರೆ ದೆವ್ವನೂ ಇಲ್ಲ ಏನೂ ಇಲ್ಲ ಅನ್ನುತ್ತಾಳೆ. ಎರಡರ ನಡುವೆ ಯಾವುದು ನಿಜ? ಯಾವುದು ಭ್ರಮೆ? ಎನ್ನುವ ತರ್ಕಕ್ಕೆ ಬೀಳುತ್ತಿದ್ದೆ. ಆದರೆ ಚಿಕ್ಕಮ್ಮನ ಮಾತುಗಳು ನನ್ನ ತಲೆಯಲ್ಲಿ ಉಳಿದುಬಿಟ್ಟು, ಯಾರೋ ಎಲ್ಲೋ ಸತ್ತರೆ ನನಗೆ ಅವರು ದೆವ್ವಗಾಗಿ ಬರುತ್ತಾರೆ ಅನ್ನಿಸಿಬಿಡುತ್ತಿತ್ತು. ಆ ಭೀತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸುಮಾರು ವರ್ಷಗಳು ಬೇಕಾಯಿತು. ಕತ್ತಲೆಂದರೆ ಭಯ, ಒಂಟಿಯಾಗಿರುವುದೆಂದರೆ ಭಯ, ಊರಲ್ಲಿ ಯಾರೋ ಸತ್ತರೆ ಭಯ, ಎಲ್ಲೋ ಯಾರೋ ಸತ್ತರೆ ಭಯ, ಯಾರದೋ ಮನೆಯಲ್ಲಿ ಮಲಗಿದರೂ ಯಾವ ಹೆಣವನ್ನು ಇಲ್ಲಿ ಮಲಗಿಸಿದ್ದರೋ, ಇವತ್ತು ನಾನು ಮಲಗಿದ್ದೇನೆ ಎನ್ನುವ ಭಯ ಹೀಗೆ ಭಯದಲ್ಲೆ ಸತ್ತು ಬಿಟ್ಟಿದ್ದೆ. ನನ್ನ ಪುಣ್ಯವೋ ಎನ್ನುವಂತೆ ನಾನು ಕಷ್ಟಪಟ್ಟು, ಹಠದಿಂದ, ಅದ್ಯಾವುದು ಬರುತ್ತೋ ನೋಡೇ ಬಿಡೋಣ ಎಂದು ಅದರಿಂದ ಹೊರಗೆ ಬಂದೆ. ಆದರೆ ಚಿಕ್ಕಮ್ಮ ಅದೇ ಭಯದಲ್ಲೇ ಹುಚ್ಚಿಯ ಹಾಗಾಗಿಬಿಟ್ಟಿದ್ದಳು. ಬಾಣಂತಿಯ ಸನ್ನಿಯಾಗಿತ್ತು. ನನಗಿಂತ ಎಂಟು ವರ್ಷಕ್ಕೆ ಮಾತ್ರ ದೊಡ್ಡವಳಾಗಿದ್ದ ಅವಳಿಗೆ ಯಾವ ಆಸರೆಯ ಬೆರಳು ಸಿಗಲಿಲ್ಲ. ನನಗೆ ಈಗಲೂ ಅನ್ನಿಸುತ್ತೆ ಮುತ್ಯಾ ಅವಳಿಗೆ ದೊಡ್ಡ ಆಸರೆಯಾಗಬಲ್ಲವಳಾಗಿದ್ದಳು. ಆದರೆ ಚಿಕ್ಕಮ್ಮನಿಗೆ ಅವಳ ಶಕ್ತಿಯೇ ಅರ್ಥವಾಗಲಿಲ್ಲ ಎಂದು.

'ಮುತ್ಯಾ ನಿಧಿ ಅಂದ್ರೆ ಏನು?’ ಎಂದು ಕೇಳಿದ್ದೆ. ಮುತ್ಯಾಗೆ ನಾನು ಏನು ಕೇಳುತ್ತಿದ್ದೇನೆ ಎಂದು ಅರ್ಥ ಆಗಿತ್ತು. ನನ್ನ ತಲೆ ಮೇಲೆ ಮೊಟಕಿ 'ನೀನೂ ಆ ವೈದ್ಯ ಸ್ವಾಮಿಯ ಹಾಗೆ ಹುಡುಕ್ತೀಯಾ?’ ಎಂದು ಕೇಳಿದ್ದಳು. 'ಹೌದು ಮುತ್ಯಾ, ನಿಧಿ ಸಿಕ್ರೆ ತುಂಬಾ ಬಂಗಾರ ಸಿಗುತ್ತಂತಲ್ಲ. ಅಮ್ಮನೂ ಎಷ್ಟೋಂದು ಸರ, ಬಳೆ ಎಲ್ಲಾ ಹಾಕಿಕೊಳ್ಳಬಹುದು. ಮದುವೆ ಮನೆಗೆ ಹೋಗುವಾಗ ಅಮ್ಮ ಅಪ್ಪನ ಜೊತೆ ಜಗಳಾನೇ ಆಡಲ್ಲ’ ಎಂದಿದ್ದೆ. ಮುತ್ಯಾ ಸುಮ್ಮನೆ ಇದ್ದಳು. ಬಹುಶಃ ನನ್ನ ಪುಟ್ಟ ತಲೆಯಲ್ಲಿ ಅಪ್ಪ ಅಮ್ಮನ ಜಗಳ ಯಾವ ಪರಿಣಾಮ ಬೀರಿದ್ದಿರಬಹುದು ಎನ್ನುವ ಕಲ್ಪನೆ ಮಾತ್ರ ಇತ್ತು ಅನ್ನಿಸುತ್ತೆ. ನಾನು ಬಿಡಲಿಲ್ಲ, 'ಮುತ್ಯಾ ನಿನಗೆ ಎಲ್ಲಾ ಕಾಣುತ್ತಂತಲ್ಲಾ ನಿಧಿ ಎಲ್ಲಿದೆ ಹುಡುಕಿಕೊಡು’ ಎಂದು ದುಂಬಾಲು ಬಿದ್ದೆ. ಮುತ್ಯಾ ನಗುತ್ತಾ 'ಕಾಣುತ್ತೆ ಅಂತ ಏನೇನೋ ನೋಡಬಾರದು. ಭಗವಂತ ನಮಗೆ ಎಷ್ಟು ಅಂತ ಬರೆದಿಟ್ಟಿದ್ದಾನೋ ಅದು ನಮಗೆ ಬೇಡ ಅಂದ್ರೂ ಸಿಗುತ್ತೆ. ಹುಡುಕಿದರೆ ಸಿಗುತ್ತೆ ಅನ್ನುವುದು ಭ್ರಮೆ’ ಎಂದಿದ್ದಳು.

ತಾತನಿಗೆ ವೈದ್ಯ ಸ್ವಾಮಿಯ ಬಗ್ಗೆ ಅಪಾರವಾದ ನಂಬಿಕೆ. ತಾನು ಆಡುತ್ತಿದ್ದ ಓಸಿ ಆಟಕ್ಕೆ ಅವರನ್ನೇ ಸಂಖ್ಯೆ ಕೇಳುತ್ತಿದ್ದ. ಇಂಥಾ ಸಂಖ್ಯೆಯ ಮೇಲೆ ಹಣ ಕಟ್ಟಿ ಅಲ್ಲಿ ಹೋಗಿ ಯಾರಾದರೂ ಚೀಟಿ ಹರಿದರೆ ಅದರಲ್ಲಿ ಬರುವ ಸಂಖ್ಯೆ ನಾವು ಬಾಜಿ ಕಟ್ಟಿದ ಸಂಖ್ಯೆ ಒಂದೇ ಆದರೆ ಹಣ ಸಿಗುತ್ತಿತ್ತು. ಅದಕ್ಕಾಗಿ ವೈದ್ಯ ಸ್ವಾಮಿಯನ್ನು ಸಂಖ್ಯೆ ಕೇಳಿಕೊಂಡು ಬರಲು ನನ್ನನ್ನೇ ಕಳಿಸುತ್ತಿದ್ದ. ನಾನು 'ತಾತನಿಗೆ ನಂಬರ್ ಹೇಳಬೇಕಂತೆ’ ಎಂದರೆ, 'ಈ ಸಲ ಸಿಗುತ್ತೆ ಈ ನಂಬರ್ ಕಟ್ಟಲು ಹೇಳು’ ಎಂದು ಒಂದು ಚೀಟಿಯಲ್ಲಿ ಬರೆದು ಕೊಡುತ್ತಿದ್ದರು. ಒಂದೆರಡು ಬಾರಿ ಹಣ ಬಂದದ್ದೂ ಉಂಟು. ಬರದೇ ಇದ್ದಾಗ 'ನಾರಾಯಣ ನಿನ್ನ ಸಮಯ ಚೆನ್ನಾಗಿಲ್ಲ ಅಂದ್ರೆ ನಾನಾದ್ರೂ ಏನು ಮಾಡಲಿ’ ಎಂದು ಕೈತೊಳೆದುಕೊಳ್ಳುತ್ತಿದ್ದರು. ತಾತನಿಗೆ ಮಾತ್ರ ಅವರ ಮೇಲೆ ನಂಬಿಕೆ ಕಡಿಮೆಯಾಗಲೇ ಇಲ್ಲ. ಮುತ್ಯಾ, 'ಬೆವರು ಮಾತ್ರ ನಮ್ಮ ಅನ್ನವನ್ನು ಕೊಡಬೇಕು ನಾರಾಯಣ, ಅನ್ಯಾಯದ ಹಣ ತಿನ್ನಬೇಡವೋ. ಮನುಷ್ಯನಿಗೆ ಅಧಿಕಾರವಿಲ್ಲ. ಅದಕ್ಕೆನಪ್ಪಾ ಕೈಗಳನ್ನು ಕೊಟ್ಟಿರುವುದು. ಮಗು ಹುಟ್ಟಿದಾಗ ಕೈಗಳನ್ನು ಮುಷ್ಟಿಗಟ್ಟಿರುತ್ತೆ. ದೇವರು ನೀನು ಈ ಕೆಲಸ ಮಾಡು ಅಂತ ಅದರಲ್ಲಿ ತುಂಬಿ ಕಳಿಸಿರುತ್ತಾನೆ. ಸತ್ತ ಮೇಲೆ ಅವನಿಗೆ ಒಪ್ಪಿಸುವ ಹಾಗೆ, 'ನಾನು ಮಾಡಿದ ಕೆಲಸ ಮುಗಿಯಿತು’ ಅಂತ ಕೈಚೆಲ್ಲುವುದು. ನಿನ್ನ ಕೆಲಸ ನೀನು ಮಾಡು ನಿಷ್ಠೆಯಿಂದ. ಅದನ್ನ ಬಿಟ್ಟು ಆ ವೈದ್ಯಸ್ವಾಮಿ ನಿಧಿಯ ಹಿಂದೆ ಹೋಗುವುದೂ, ನೀನು ಓಸಿಯ ಹಿಂದೆ ಹೋಗುವುದೂ ಎರಡು ಒಂದೇ’ ಎಂದಿದ್ದಳು. 'ಹೀಗೆ ಅಂತಾ ಇರು, ಒಂದಲ್ಲಾ ಒಂದು ದಿನ ಆ ಸ್ವಾಮಿಗೆ ನಿಧೀನೂ ಸಿಗುತ್ತೆ ನನಗೆ ಲಾಟರಿಯಲ್ಲಿ ದುಡ್ಡು ಸಿಗುತ್ತೆ’ ಎಂದಿದ್ದನ್ನು ಕೇಳಿದ್ದೇನೆ. ಕಷ್ಟವಿಲ್ಲದೆ ಹಣ ಬಂದರೆ ಯಾಕೆ ಬೇಡ ಅನ್ನಬೇಕು?! ಎನ್ನುವುದು ನನ್ನ ಅಂದಿನ ಜಿಜ್ಞಾಸೆ.

ಚಿಕ್ಕ ವಯಸ್ಸು ಬುದ್ಧಿಯಿಲ್ಲದೆ ಹಟ ಹಿಡಿದು, 'ನಾನು ನಿಧಿ ಹುಡುಕಿಯೇ ಹುಡುಕುತ್ತೇನೆ’ ಎಂದು ಹಿತ್ತಲಲ್ಲಿ ಸಿಕ್ಕ ಸಿಕ್ಕ ಕಡೆಗೆಲ್ಲಾ ಗುಂಡಿ ತೋಡುತ್ತಿದ್ದೆ. ಇಷ್ಟುದ್ದ ತೋಡಿದೆನೆಂದರೆ ಸುಸ್ತಾಗುತ್ತಿತ್ತು. ಬೇಸಿಗೆಯಾದ್ದರಿಂದ ನೆಲ ಕಟುವಾಗಿ ನನ್ನ ಪುಟ್ಟ ಕೈಗಳನ್ನು ಬಾಧಿಸುತ್ತಿತ್ತು. ಪುಟ್ಟ ಹಾರೆಯಂಥಾ ಸಾಧನ ನನ್ನ ಕೈಗಳಲ್ಲಿ ಹಸಿರು ಬರೆಯನ್ನು ಮೂಡಿಸಿ ಬೊಬ್ಬೆ ತರಿಸುತ್ತಿತ್ತು. ಉರಿವ ಬಿಸಿಲನ್ನೂ ಲೆಕ್ಕಿಸದೆ ಗುಂಡಿಗಳನ್ನು ತೋಡುತ್ತಿದ್ದೆ. ಆಗದೇ ಇದ್ದಾಗ ಬೀರನ್ನು ಹಾಕಿ ನೆನೆಸಿ ನಂತರ ಗುಂಡಿ ತೆಗೆಯುತ್ತಿದ್ದೆ. ಒಮ್ಮೆ ಮಾರುದ್ದದ ಗುಂಡಿ ತೋಡಿದ್ದರಿಂದ ಕಪಿಲೆ ಹಸುವಿನ ಕಾಲು ಸಿಕ್ಕಿಕೊಂಡುಬಿಟ್ಟಿತ್ತು. ನೋಡಿಕೊಳ್ಳದೆ ಹೋಗಿದ್ದಿದ್ದರೆ ಕಪಿಲೆಯು ಕಾಲನ್ನೆ ಮುರಿದುಕೊಂಡು ಬಿಡುತ್ತಿತ್ತು.

ರಾಮುಡು ನಾನೇನು ಮಾಡುತ್ತೇನೆ ಎಂದು ನೋಡಲು ಬರುತ್ತಿದ್ದ. ಅವನ ಬೊಚ್ಚು ಬಾಯ ನಗು ನನಗೆ ಕೋಪ ತರಿಸುತ್ತಿತ್ತು. 'ಏನು ಹುಡುಕ್ತಾ ಇದೀಯಾ ಪಾಪಾ’ ಎಂದು ಅವನು ಕೇಳುತ್ತಾ ಪಕ್ಕದಲ್ಲಿ ಕೂತು ಕೇಳಿದರೆ, ಹೀಗೆ ಕೂತು ಕೇಳುವ ಬದಲು ಸ್ವಲ್ಪ ಸಹಾಯ ಮಾಡಬಹುದಲ್ಲವಾ? ಅಕಸ್ಮಾತ್ ನಿಧಿ ಸಿಕ್ಕರೆ ಇವನಿಗೂ ಸ್ವಲ್ಪ ಕೊಡದೆ ಇರುತ್ತೇನೆಯೇ ಎಂದೆನ್ನಿಸುತ್ತಿತ್ತು. ಅವನ ಸುಕ್ಕುಗಟ್ಟಿ ಕಪ್ಪಗಾದ ಚರ್ಮ, ನಡುಗುವ ಕೈಗಳನ್ನು ನೋಡಿ ಅದನ್ನು ಹೇಳದೇ ಹೋಗಿದ್ದೆ. ರಾಮುಡುಗೆ ನಾನು ಮಾಡುತ್ತಿದ್ದ ಕೆಲಸ ಬಾಲಿಷವಾಗಿ ಕಂಡಿತ್ತು ಅನ್ನಿಸುತ್ತೆ. ನನ್ನನ್ನು ಅಣಕಿಸುವ ಹಾಗೆ ನಾಳೆ ಇಷ್ಟು ಹೊತ್ತಿಗೆ ಏಳು ಕೊಪ್ಪರಿಗೆ ಹಣ ಸಿಗುತ್ತೆ ಎನ್ನುತ್ತಿದ್ದ. ಕಾಕತಾಳಿಯ ಎನ್ನುವ ಹಾಗೆ ಹಾವೊಂದು ಅಲ್ಲೇ ಹರಿದು ಹೋಯಿತು. 'ನೋಡಿದ್ಯಾ ಇಲ್ಲಿ ಅಲ್ಲ, ನಿಧಿ ಅಲ್ಲಿದೆ’ ಎಂದು ಹಾವು ಹರಿದ ದಿಕ್ಕನ್ನು ತೋರಿಸಿದ. ಅಲ್ಲು ಎರಡು ಕಡೆ ಗುಂಡಿ ತೋಡಿದ ನೆನಪಿದೆ. ಸಿಗದೇ ಇದ್ದಾಗ ರಾಮುಡು ಮೇಲೆ ರೇಗಿದ್ದೆ.

ಕಪಿಲೆ ಹಸುವಿನ ಪ್ರಸಂಗವಾದ ಮೇಲೆ, ಮುತ್ಯಾ ನನ್ನನ್ನು ಕೂರಿಸಿಕೊಂಡು, 'ಭೂಮಿಯನ್ನು ಯಾಕೆ ಅಗೆಯುತ್ತಿದ್ದೀಯಾ’ ಎಂದಳು. ನನ್ನ ಅಮ್ಮನಿಗೆ ಬಂಗಾರ ಬೇಕು ಅದಕ್ಕೆ’ ಎಂದೆ ಮೊಂಡುತನದಿಂದ. ನೀನು ದುಡಿದು ನಿನ್ನ ಅಮ್ಮನಿಗೆ ಬಂಗಾರ ತಂದುಕೊಡಲು ಸಾಧ್ಯವಿಲ್ಲವಾ ಎಂದಳು ಕೋಪಾವಿಷ್ಟಳಾಗಿ. ನನಗೆ ಮುತ್ಯಾನನ್ನ ಹಾಗೆ ನೋಡೇ ಗೊತ್ತಿಲ್ಲ. ನನಗೆ ಉತ್ತರ ಹೊಳೆಯಲಿಲ್ಲ. 'ಆ ಮೂರ್ಖ ವೈದ್ಯ ಸ್ವಾಮಿಗೆ ಸಾವಿರ ಸಲ ಹೇಳಿದೆ. ಹೋಗು ನಿನ್ನ ಮಕ್ಕಳೇ ನಿನಗೆ ನಿಧಿ. ಅವರನ್ನು ಚೆನ್ನಾಗಿ ಬೆಳೆಸು ಅಂತ. ಅವನು ಹೀಗೆ ಹುಡುಕಿ ಹುಡುಕಿ ಮುದುಕನಾದ. ಹುಡುಕಿ ಹುಡುಕಿ ನೀನೂ ನನ್ನಷ್ಟೇ ಮುದುಕಿಯಾಗುತ್ತೀಯ. ನಿನಗೆ ಏನೂ ಸಿಗುವುದಿಲ್ಲ. ಚೆನ್ನಾಗಿ ಓದು, ಒಳ್ಳೆಯ ಕೆಲಸಕ್ಕೆ ಸೇರು ಬೇಕಾದ ಬಂಗಾರವನ್ನು ನೀನೇ ದುಡಿದುಕೋ ಅದನ್ನ ಬಿಟ್ಟು ಸುಮ್ಮನೆ ಭೂಮಿಯನ್ನು ಅಗೆದು ಅಗೆದು ಗಾಯ ಮಾಡಬೇಡ. ನೀನು ಹಾಗೆ ಮಾಡುವುದು ನನಗೆ ಇಷ್ಟವಿಲ್ಲ’ ಎಂದಳು. ಮುತ್ಯಾ ಆ ಮಾತನ್ನು ಹೇಳದೇ ಇದ್ದಿದ್ದರೆ ನಾನು ಇನ್ನಷ್ಟು ಗುಂಡಿಗಳನ್ನು ತೋಡುತ್ತಿದ್ದೆ. ಅಂದೇ ಮುತ್ಯಾ ಒಂದಿಷ್ಟು ದಾಸವಾಳದ ಅಂಟುಗಳನ್ನು ತಂದು ನಾನು ತೋಡಿದ್ದ ಗುಂಡಿಗಳಲ್ಲಿ ನೆಟ್ಟು, 'ಈಗ ನಿನ್ನ ಶ್ರಮ ಸಾರ್ಥಕ’ ಎಂದಳು.

ಅವತ್ತು ನನಗೊಂದು ಕನಸು ಬಿದ್ದಿತ್ತು. ಮುತ್ಯಾ ಒಂದು ಹುಣಸೇ ಬರಲನ್ನು ಹಿಡಿದು ನನ್ನನ್ನು ಹೊಡೆಯುತ್ತಿದ್ದಳು. ನನ್ನ ಮೈಯಿಂದ ನನ್ನತರಹದ್ದೇ ಮೂರು ಜನ ಹೊರಕ್ಕೆ ಬಿದ್ದರು. ಮೂವರು ಮೂರು ಬಣ್ಣ. ಮುತ್ಯಾ ಕೊಟ್ಟ ಏಟಿನಿಂದ ಎದ್ದೆನೋ, ಬಿದ್ದೆನೋ ಎಂದು ಮೂವರು ಓಡಿ ಹೋದರು. ಅವರು ಹಾಗೆ ಹೋಗುವುದನ್ನು ನೋಡುತ್ತಾ ಮುತ್ಯಾ ಜೋರಾಗಿ ಅಬ್ಬರಿಸಿ ನಗುತ್ತಾ ನಿಂತಿದ್ದಳು. ಅವಳ ನಗು ಆಕಾಶ ಮುಟ್ಟುವಂತಿತ್ತು. ನಾನು ಭಯದಿಂದ ಬೆಚ್ಚಿ ಬಿದ್ದಿದ್ದೆ.

ತುಂಬಾ ಅತ್ತೆ, ನನ್ನ ಅಳುವಿಗೆ ಈಗಲೂ ನನಗೆ ಕಾರಣ ಗೊತ್ತಿಲ್ಲ. ಮುತ್ಯಾ ನನ್ನನ್ನು ತನ್ನೆದೆಗೆ ಒರಗಿಸಿಕೊಂಡಳು. ಅವಳ ಹತ್ತಿರ ಇದ್ದನ್ನು ನಾಲ್ಕೇ ಸೀರೆ. ಎಂದೂ ಕಮಟುವಾಸನೆ ಬರುತ್ತಿರಲಿಲ್ಲ. ತನ್ನ ಬಟ್ಟೆಗಳನ್ನು ತಾನೇ ಒಗೆದುಕೊಳ್ಳುತ್ತಿದ್ದಳು. ಅವಳ ಬಟ್ಟೆಗಳಿಗೆ ಗಾಢವಾದ ಪರಿಮಳವಿತ್ತು, ಅದು ಅಡುಗೆ ಮನೆಯಲ್ಲಿ ಒಣ ಹಸಿ ಸೌದೆಗಳು ಸೂಸಿದ್ದ ಹೊಗೆಯನ್ನು ಹೀರಿತ್ತು. ನಾನು ಆ ವಾಸನೆಯನ್ನು ಆಘ್ರಾಣಿಸುತ್ತಿದ್ದೆ. ಎಷ್ಟೋ ಹೊತ್ತಿನ ವರೆಗೆ ನನ್ನ ಎದೆಗೆ ಒರಗಿಸಿಕೊಂಡವಳು ನಿಟ್ಟುಸಿರಿಟ್ಟು, 'ಮಗೂ ಭಯ ಪಡಬೇಡ. ಸುಮ್ಮನೆ ಬೇಕೆಂದು ಬಯಸುವುದು ಕುರೂಪ. ಆಸೆಗೂ ಬಯಕೆಗೂ ಹತ್ತಿರದ ನಂಟಿದೆ. ಅದು ನಮ್ಮನ್ನೂ ಸೇರಿಸಿಕೊಂಡು ಜ್ವಲಿಸುತ್ತದೆ. ಇನ್ನೊಬ್ಬರ ಹತ್ತಿರ ಇದೆ, ನನಗೂ ಇರಲಿ ಎಂದು ಬಯಸಬೇಡ, ನಿನ್ನ ಹಿಡಿಯಲ್ಲಿ ಏನು ಸಿಗುತ್ತೋ ಅದು ಮಾತ್ರ ನಿನ್ನದು. ಸುಮ್ಮನೆ ಬಂದರೆ ಬಿಟ್ಟುಬಿಡು. ಗೊಂದಲವಾದಾಗ ಶಿವಾ ಎನ್ನು. ನೀನು ನಂಬಿದ್ದು ನಿನಗೆ ಬೆಳಕನ್ನು ತೋರುತ್ತದೆ. ಸದ್ಯದಲ್ಲೇ ನಿನಗೊಬ್ಬ ನಿಜವಾದ ಗುರು ನಿಧಿಯಾಗಿ ಸಿಗಲಿದ್ದಾನೆ’ ಎಂದಳು. ಈಗಲೂ ಈ ಮಾತುಗಳು ನನ್ನಲ್ಲಿ ಅನುರಣಿಸುತ್ತಿದೆ. ದೊಡ್ಡ ಜಿಜ್ಞಾಸೆಯನ್ನು ಹುಟ್ಟಿಸುತ್ತಲೆ, ನನ್ನ ಬಯಕೆಗೂ ನನಗೂ ಮುಗಿಯಲಾಗದ ದೊಡ್ಡ ಯುದ್ಧವನ್ನು ತಂದೊಡ್ಡುತ್ತಲೇ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಅಂದಿನ ನನ್ನ ನಿರೀಕ್ಷೆ ಗುರುವಿನ ಕಡೆಗೆ ತಿರುಗಿತು. ಹಾಗಾದರೆ ಮುತ್ಯಾ ಏನು ಗುರುವಲ್ಲವಾ? ಉತ್ತರ ಮಾತ್ರ ಗೊತ್ತಿಲ್ಲ.

ಇಷ್ಟೋ ವರ್ಷಗಳ ಮೇಲೆ ವೈದ್ಯ ಸ್ವಾಮಿ ಹಾಸಿಗೆ ಹಿಡಿದಾಗ ವಿಷಯ ತಿಳಿದ ಅವರ ಮನೆಯವರು ಬಂದು ಕರೆದುಕೊಂಡು ಹೋದರಂತೆ. ಆ ಮನೆಯನ್ನು ಯಾರು ಎಷ್ಟಕ್ಕಾದರೂ ಕೊಂಡುಕೊಳ್ಳಿ, ಸುಮ್ಮನೆ ಮತ್ತೆ ಮಾರಲಿಕ್ಕೆ ಅಲೆಯಲಿಕ್ಕಾಗುವುದಿಲ್ಲ ಅಂತ ಅಡ್ಡಾ ದುಡ್ಡಿಗೆ ಮಾರಿಬಿಟ್ಟರಂತೆ. ತಾತ ಕೊನೆಯವರೆಗೂ ತಾನದನ್ನು ತೆಗೆದುಕೊಳ್ಳಬೇಕಿತ್ತು ಎನ್ನುವ ಪಶ್ಚಾತ್ತಾಪದಲ್ಲೇ ಬದುಕಿದ್ದ. ಅಮ್ಮನಿಗೂ, ಮಗನಿಗೆ ಇಂಥಾ ವ್ಯತ್ಯಾಸ ಇರುವುದು ಸಾಧ್ಯವಾ?

ಈ ಅಂಕಣದ ಹಿಂದಿನ ಬರೆಹಗಳು:
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ

ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...