ರಾಮಾಯಣ ಸಂಕಥನ -03

Date: 28-09-2023

Location: ಬೆಂಗಳೂರು


“ಸೀತಾರಾಮರ ವಿಚಾರದಲ್ಲಿ ರಾಮಾಯಣವು ಧರ್ಮಗ್ರಂಥ, ಇತಿಹಾಸ ಪಠ್ಯ ಎಂಬೆಲ್ಲ ಭ್ರಮೆಗೆ ಗುರಿಯಾಗಿರುವುದರಿಂದ ಅದಕ್ಕೆ ಒಂದು ಸಮುದಾಯದ ಭಾವನಾತ್ಮಕ ಗೌರವದ ಪ್ರಶ್ನೆಯೂ ತಗಲಿಕೊಂಡಿದೆ. ಅದು ಸಮುದಾಯದ ನೀತಿಸಂಹಿತೆಯ ಪ್ರಶ್ನೆಯೂ ಆಗಿದೆ. ಹಾಗಾಗಿಯೆ ಸೀತಾಪರಿತ್ಯಾಗ ದಾಂಪತ್ಯತ್ಯಾಗದ ಸಂಗತಿಯಾಗಿ, ಲೈಂಗಿಕ ನಿಷ್ಠೆಯ ಸಂಗತಿಯಾಗಿ ನೂರಾರು ರಾಮಾಯಣಗಳಲ್ಲಿ ಮತ್ತೆ ಮತ್ತೆ ಕಥನಕ್ಕೆ ಗುರಿಯಾಗಿದೆ,'' ಎನ್ನುತ್ತಾರೆ ಅಂಕಣಕಾರ ಬೇಗೂರು ರಾಮಲಿಂಗಪ್ಪ. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ರಾಮಾಯಣ ಸಂಕಥನ 3' ವಿಚಾರದ ಕುರಿತು ಬರೆದಿದ್ದಾರೆ.

ಲೈಂಗಿಕ ನಿಯಮಗಳ ಉಲ್ಲಂಘನೆ ಮತ್ತು ಶಿಕ್ಷೆಯ ಕಲ್ಪನೆ: ಸೀತಾರಾಮ ದಾಂಪತ್ಯತ್ಯಾಗ

ರಾಮಾಯಣ ಮತ್ತೆ ಮತ್ತೆ ನಮ್ಮಲ್ಲಿ ಹತ್ತು ಹಲವು ದೇಶ, ಭಾಷೆ, ಜನಾಂಗ, ಪಂಥಗಳನ್ನು ಅನುಸರಿಸಿ ಮರುನಿರೂಪಣೆ ಆಗುತ್ತಲೆ ಬಂದಿದೆ. ಹಾಗೆ ಹುಟ್ಟಿದ ನೂರಾರು ರಾಮಾಯಣಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ರಾಮಾಯಣದ ಹಲವಾರು ವ್ಯತ್ಯಾಸಗಳನ್ನು ಕಥಿಸಿವೆ. ಕೆಲವೊಂದು ಪ್ರಸಂಗಗಳು ಸೇರ್ಪಡೆ ಆಗುತ್ತಲು, ಪರಿಷ್ಕರಣೆ ಆಗುತ್ತಲು ಬಂದಿವೆ. ಆದರೆ ಸೀತೆಯ ಪರಿತ್ಯಾಗ ಪ್ರಸಂಗ ಮಾತ್ರ ಬದಲಾಗಿಲ್ಲ. ಎಲ್ಲರಲ್ಲು ಮತ್ತೆ ಮತ್ತೆ ಕಥನಕ್ಕೆ ಗುರಿಯಾಗಿದೆ. ಸೃಜನಶೀಲ ಮಧ್ಯಪ್ರವೇಶದ ಬಿಡಿ ಕಥನಗಳನ್ನು ಹೊರತುಪಡಿಸಿ ಮಿಕ್ಕಂತಹ ಎಲ್ಲ ಕಥನಗಳಿಗು ಈ ಮಾತು ಅನ್ವಯಿಸುತ್ತದೆ.

ದಾಂಪತ್ಯದಲ್ಲಿನ ಲೈಂಗಿಕತೆ ನಮ್ಮ ಸಮಾಜದಲ್ಲಿ ಕೇವಲ ಖಾಸಗಿ ಸಂಗತಿಯಾಗಿ ಉಳಿದಿಲ್ಲ. ಅದು ಸಾರ್ವಜನಿಕ ಸಂಗತಿಯಾಗಿ ಬೆಳೆದಿದೆ. ವಿವಾಹ ಎಂಬುದು ಅಥವಾ ಗಂಡು ಹೆಣ್ಣಿನ ಸಾಂಗತ್ಯ ಎಂಬುದು ಜಾತಿ, ವರ್ಣ, ಪಂಥ, ಧರ್ಮ, ಕುಟುಂಬಗೌರವ, ವಂಶಗೌರವ ಇತ್ಯಾದಿಗಳನ್ನು ಅವಲಂಬಿಸಿಕೊಂಡೆ ಬಂದಿದೆ. ಸೀತಾರಾಮರ ವಿಚಾರದಲ್ಲಿ ರಾಮಾಯಣವು ಧರ್ಮಗ್ರಂಥ, ಇತಿಹಾಸ ಪಠ್ಯ ಎಂಬೆಲ್ಲ ಭ್ರಮೆಗೆ ಗುರಿಯಾಗಿರುವುದರಿಂದ ಅದಕ್ಕೆ ಒಂದು ಸಮುದಾಯದ ಭಾವನಾತ್ಮಕ ಗೌರವದ ಪ್ರಶ್ನೆಯೂ ತಗಲಿಕೊಂಡಿದೆ. ಅದು ಸಮುದಾಯದ ನೀತಿಸಂಹಿತೆಯ ಪ್ರಶ್ನೆಯೂ ಆಗಿದೆ. ಹಾಗಾಗಿಯೆ ಸೀತಾಪರಿತ್ಯಾಗ ದಾಂಪತ್ಯತ್ಯಾಗದ ಸಂಗತಿಯಾಗಿ, ಲೈಂಗಿಕ ನಿಷ್ಠೆಯ ಸಂಗತಿಯಾಗಿ ನೂರಾರು ರಾಮಾಯಣಗಳಲ್ಲಿ ಮತ್ತೆ ಮತ್ತೆ ಕಥನಕ್ಕೆ ಗುರಿಯಾಗಿದೆ. ಇಲ್ಲೆಲ್ಲ ನಮ್ಮ ಭಿನ್ನ ಕಾಲದ ಸಮಾಜಗಳು ಕಟ್ಟಿಕೊಂಡ ಲೈಂಗಿಕ ನಿಯಮಗಳ ಉಲ್ಲಂಘನೆ ಮತ್ತು ಶಿಕ್ಷೆಯ ಕಲ್ಪನೆಗಳ ಸಂಕಥನವಿದೆ.

ಯೋಗಿಯೊಬ್ಬನು ಮಮತೆಯನ್ನು ತೊರೆಯುವಂತೆ ಸೀತೆಯನ್ನು ಬಿಟ್ಟುಬಿಡುತ್ತೇನೆ; ಎಂದು ಲಕ್ಷ್ಮೀಶನ ಕಾವ್ಯದಲ್ಲಿ ಸೀತಾಪರಿತ್ಯಾಗದ ಸಂದರ್ಭದಲ್ಲಿ ರಾಮನಿಂದ ಹೇಳಿಸಲಾಗಿದೆ. ಅಂದರೇನು? ಗಂಡಸರಿಗೆ ಹೆಂಗಸರು ತೊಡಕು. ಅವರನ್ನು ತೊರೆಯುವುದೆ ಸರಿ. ಇದ್ದರೂ ಯೋಗಿಗಳಂತೆ ಇರಬೇಕು ಎಂಬ ಇಂಗಿತ ಇಲ್ಲಿದೆ. ಇದೇ ಲಕ್ಷ್ಮೀಶನ ಮಾತನ್ನೆ ಅನುಕರಿಸಿ ಅಳಿಯ ಲಿಂಗರಾಜನು ತನ್ನ ಕುಶಲವರ ಕಾಳಗದಲ್ಲಿ `ಯೋಗಿ ಮಮತೆಯಂ ತೊರೆವ ತೆರದಿ ತೊರೆವೆನಿವಳಂʼ ಎಂದು ರಾಮನಿಂದ ಹೇಳಿಸಿದ್ದಾನೆ. ಜನಾಪವಾದಕ್ಕೆ ಹೆದರದೆ ರಾಜ್ಯ ಆಳುವುದುಂಟೆ ಎನ್ನುವುದು ಇಲ್ಲಿ ರಾಮನ ಮಾತು. (ನೋಡಿ: ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯ; ಸಂ.ಜಿ.ಜಿ. ಮಂಜುನಾಥನ್‌, 2011. ಸಂಪುಟ 2, ಪುಟ 310) ಸ್ವಂತ ವಿವೇಕದಿಂದ ಯೋಚಿಸುವುದಕ್ಕಿಂತ ಪರಂಪರೆಯ ಗಿಳಿಪಾಠ ಒಪ್ಪಿಸುವುದು ನಮ್ಮವರಿಗೆ ಎಂದಿನಿಂದಲೂ ಬಂದಿರುವ ರೋಗ.

ಸೀತೆಯನ್ನು ಪರಿತ್ಯಾಗ ಮಾಡುವಾಗ `ಇವಳನ್ನು ಚಿನ್ನದ ಚೂರಿ ಎಂದು ಎದೆಗೆ ಒತ್ತಿಕೊಂಡೆ. ಆದರೆ ಇದು ನನ್ನ ಕರುಳನ್ನೆ ಕೊಯ್ದಿತು. ಇವಳನ್ನು ಪಾವನೆ ಎಂದು ಭಾವಿಸಿದೆ; ಆದರೆ ಅದರಿಂದ ನಿಂದೆಗೆ ಒಳಗಾದೆ. ರಕ್ಕಸನ ಆಶ್ರಯದಲ್ಲಿ ಬಾಳಿದವಳನ್ನು ಮರಳಿ ನಾನು ಆಳಲು ಆಗುತ್ತದೆಯೆ? ರಜಕನು ನನ್ನನ್ನು ಹೀಯಾಳಿಸಲಿಲ್ಲ; ಎಚ್ಚರಿಸಿದ. ಹೊಲದಲ್ಲಿ ಬೆಳೆದ ಕುರುಂಬ ಹುಲ್ಲನ್ನು ಕಿತ್ತು ಬಿಸಾಡುವಂತೆ ಬಿಟ್ಟುಬಿಡುತ್ತೇನೆʼ ಎಂದು ರಾಮನಿಂದ ಮುದ್ದಣನ ರಾಮಶ್ವಮೇಧದಲ್ಲಿ ಹೇಳಿಸಲಾಗಿದೆ. (ನೋಡಿ: ಮುದ್ದಣ ಕವಿಯ ರಾಮಾಶ್ವಮೇಧಂ; ಕಾವ್ಯಾಲಯ, ಮೈಸೂರು, 1957. ಪುಟ 24) ಅಂದರೇನು? ಸೀತೆ ಹೊಲದಲ್ಲಿ ಬೆಳೆದ ಕಳೆಯಂತೆಯೆ? ಅವಳನ್ನು ಇಲ್ಲಿ ಹೋಲಿಸಿರುವುದು ಬಂಗಾರದ ಚೂರಿಗೆ, ಬೆಳೆನಡುವೆ ಬೆಳೆದ ಕಳೆಗೆ! ದಾಂಪತ್ಯ ಎನ್ನುವುದು ಹಾಗೆ ಸಲೀಸಾಗಿ ಯೋಗಿಯ ಹಾಗೆ ವಿಸರ್ಜನೆ ಮಾಡಬಹುದಾದ ಸಂಬಂಧವೆ? ನೂರಾರು ವರುಷ ತಪಸ್ಸು ಮಾಡಿದ ಋಷಿಯೊಬ್ಬ ಅಪ್ಸರೆಯನ್ನು ನೋಡಿದ ಕೂಡಲೆ ಚಂಚಲನಾಗುವುದೂ ನಮ್ಮಲ್ಲಿ ದೊಡ್ಡದಲ್ಲ; ಹಾಗೆಯೆ ತೃಷೆ ತೀರಿದ ಮೇಲೆ ಹೆಣ್ಣು ಮತ್ತು ಹುಟ್ಟಿದ ಮಗು ಎಲ್ಲವನ್ನೂ ತೊರೆದು ಹೋಗುವುದೂ ನಮ್ಮ ಮುನಿಗಳಿಗೆ ಸಲೀಸೆ. ಸಾಮಾನ್ಯ ಎಂಬಂತೆ ನಮ್ಮ ಪುರಾಣಗಳು ಇಂಥ ಕಥನಗಳನ್ನು ಕಥಿಸಿವೆ. ರಾಮ ಸೀತೆಯನ್ನು ಬಿಟ್ಟದ್ದು ಯೋಗಿಯ ಹಾಗೆ. ಅಂದರೆ ಇಲ್ಲಿ ಆಕೆಯನ್ನು ರಾಮ ತ್ಯಜಿಸಿದ್ದು ಮುಂದಿನ ತನ್ನ ಇನ್ನಾವುದೊ ಮಹಾಸಾಧನೆಗಲ್ಲ. ಆಕೆಯ ಲೈಂಗಿಕ ನಿಷ್ಠೆಯ ವಿಚಾರಕ್ಕೆ ಶಂಕಿಸಿ ಜನಾಪವಾದದ ನೆಪದಲ್ಲಿ.

ಈ ಸಂಕಥನದಲ್ಲಿ ಸೀತೆ ಕೂಡ ತನ್ನಲ್ಲೆ ಏನೋ ತಪ್ಪಿದೆ, ತಾನು ಹೆಣ್ಣಾಗಿ ಹುಟ್ಟಿರುವುದೆ ತಪ್ಪು; ತನ್ನ ಕರ್ಮಫಲದಿಂದಲೆ ಹೀಗೆಲ್ಲ ಆಗುತ್ತಿದೆ ಎನ್ನುವಂತೆ ಅವಳ ಬಾಯಿಂದಲೆ ಹಲವು ಕವಿಗಳು ಹೇಳಿಸಿದ್ದಾರೆ. ಗೊಂಡರ ರಾಮಾಯಣದಲ್ಲಿ ಸೀತೆಯನ್ನು ತ್ಯಜಿಸುವಾಗ ರಾಮನು ಅಗಸನಿಗೆ ತಿಳಿದದ್ದು ತನಗೆ ತಿಳಿಯಲಿಲ್ಲವಲ್ಲ ಎಂದು ಪಶ್ಚಾತ್ತಾಪ ಪಟ್ಟುಕೊಳ್ಳುವಂತೆ ಚಿತ್ರಿಸಲಾಗಿದೆ. ಸೀತೆಯನ್ನು ಕಾಡಿಗೆ ಒಯ್ದು ಆಕೆಯ ತಲೆಯನ್ನು ಕತ್ತರಿಸಿ, ಗುರುತನ್ನು ತರುವಂತೆ ಆತ ಕಿರಾತರಿಗೆ ತಿಳಿಸುತ್ತಾನೆ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಕಿರಾತರಿಗೆ ಕಾಡಿನಲ್ಲಿ ಅವಳ ತಲೆ ಕಡಿದು ಬರುವಂತೆ ರಾಜಾಜ್ಞೆ ನೀಡುವ ರಾಮನನ್ನು ಇಲ್ಲಿ ಅತಿ ಕ್ರೂರಿಯಾಗಿ ಚಿತ್ರಿಸಲಾಗಿದೆ. ಸೀತೆಯ ತಲೆ ಕಡಿಯುವುದು ಲೈಂಗಿಕ ನಿಯಮಗಳ ಉಲ್ಲಂಘನೆಗೆ ಆಕೆಗೆ ನೀಡುತ್ತಿರುವ ಶಿಕ್ಷೆ. ಹಾಗಾದರೆ ಆಕೆಯನ್ನು ಲಂಕೆಯಿಂದ ಕರಕೊಂಡು ಬರುವ ಮುನ್ನ ಸಾರ್ವಜನಿಕವಾಗಿ ಅಗ್ನಿಪರೀಕ್ಷೆಗೆ ಗುರಿಮಾಡಿದ್ದಾದರೂ ಏತಕ್ಕೆ? ಪಟ್ಟಕಟ್ಟಿಕೊಂಡ ನಂತರ ಆಕೆಯನ್ನು ಗರ್ಭಿಣಿ ಮಾಡಿದ್ದಾದರು ಏತಕ್ಕೆ?

ಕಂಸಾಳೆ ಮಾದೇವಯ್ಯನವರು ಹಾಡಿರುವ ಲವಕುಶರ ಕಾಳಗ ಎಂಬ ಜನಪದ ರಾಮಾಯಣದಲ್ಲಿ ರಾಮನು ಸೀತೆಯ ಎದುರಿಗೇ ಲಕ್ಷ್ಮಣನಿಗೆ ಆಕೆಯನ್ನು ಕಾಡಿಗೆ ಒಯ್ದು ಹುಟ್ಟುಬೆರಸೆ ಮಾಡಿ (ಬತ್ತಲು ಮಾಡಿ) ನಿಲ್ಲಿಸಿ ಶಿರಸ್ಸು ಕಡಿದು ಬರುವಂತೆ ಆಜ್ಞೆ ಮಾಡುವ ಹಾಗೆ ಕತೆ ಹಾಡಲಾಗಿದೆ! ಸೀತೆಯು ಇಲ್ಲಿ ಒಂದೆ ತೊಟ್ಟಿನಲ್ಲಿ ಮೂರೆಲೆ ಇರುವ ಮುತ್ತುಗದೆಲೆಯಲ್ಲಿ ರಾಮಲಕ್ಷ್ಮಣ ಮತ್ತು ತನಗೆ ಮೂವರಿಗು ಕೊನೆ ಅಡುಗೆ ಮಾಡಿ ಬಡಿಸುವ ತನ್ನ ಕೊನೆ ಆಸೆ ವ್ಯಕ್ತ ಮಾಡಿದಾಗಲು ರಾಮ ಊಟಕ್ಕೆ ಬರದೆ ಸೀತೆಯನ್ನು ಕಣ್ಣೆತ್ತಿಯೂ ನೋಡದೆ ಮುಖ ಮುಚ್ಚಿಕೊಳ್ಳುತ್ತಾನೆ. (ನೋಡಿ: ಜನಪದ ರಾಮಾಯಣ, ಲವಕುಶರ ಕಾಳಗ: ಸಂ: ಪಿ. ಕೆ.ರಾಜಶೇಖರ, ಎಸ್. ಬಸವಯ್ಯ, ಮೈಸೂರು, ೧೯೭೩. ಪುಟ ೭೪)

ತಂಬೂರಿ ರಾಮಾಯಣದಲ್ಲು ರಾಮನೇ ನೇರವಾಗಿ ಈ ವಿಷಯ ಸೀತೆಗೆ ತಿಳಿಸುತ್ತಾನೆ. ಇಲ್ಲಿ ಲಕ್ಷ್ಮಣ ಬರುವುದಿಲ್ಲ. ರಾಮನೇ ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ಬಿಟ್ಟುಬಿಡುತ್ತಾನೆ. ಆಕೆ ಯಾವಾಗ ಗರ್ಭಿಣಿ ಆದಳು ಎಂಬುದೇ ಈ ರಾಮಾಯಣದಲ್ಲಿ ರಾಮನಿಗೆ ತಿಳಿದಿರುವುದಿಲ್ಲ! (ನೋಡಿ; ಸಿದ್ಧಪ್ಪನವರು ಹಾಡಿದ ತಂಬೂರಿ ರಾಮಾಯಣ: 1973. ಪುಟ 248) ಮೀನಿನ ಹೆಜ್ಜೆಯನ್ನು ತಿಳಿಯಬಹುದು ಹೆಣ್ಣಿನ ಮನಸ್ಸನ್ನು ಅರಿಯಲಾಗದು ಎಂಬ ಜನಪದರ ನಂಬಿಕೆ ಇಲ್ಲಿ ಸೀತೆಗಿಂತ ಎಲ್ಲ ಹೆಣ್ಣುಗಳಿಗು ಅನ್ವಯಿಸುವಂತಹ ಸಾಂಪ್ರದಾಯಿಕ ಕುರುಡು ನಂಬಿಕೆ ಆಗಿದೆ. ವಿಶೇಷವೆಂದರೆ ತಂಬೂರಿ ರಾಮಾಯಣದಲ್ಲಿ ಸೀತೆ ವಾಲ್ಮೀಕಿಯ ಆಶ್ರಯ ಇಲ್ಲದೆ ತಾನೊಬ್ಬಳೆ ಮಕ್ಕಳನ್ನು ಅಡವಿಯಲ್ಲಿ ಸಾಕಿ ಬೆಳೆಸುತ್ತಾಳೆ.

ಎಂಥ ಅಪರಾಧ ಮಾಡಿದ್ದರೂ ಯಾವ ಗಂಡನೂ ತನ್ನ ತಮ್ಮನಿಗೆ ನನ್ನ ಹೆಂಡತಿಯನ್ನು ವಿವಸ್ತ್ರಗೊಳಿಸು ಎಂದು ಹೇಳುವುದಿಲ್ಲ. ರಾಮನಿಂದಲೆ ವಿವಸ್ತ್ರಗೊಳಿಸಿ ಸೀತೆಯ ತಲೆ ಕಡಿ ಎಂದು ಹೇಳಿಸುವ ಮೂಲಕ ಕ್ರೂರವಾಗಿ ಜನಪದರು ಹೆಣ್ಣಿನ ವಿಚಾರದಲ್ಲಿ ನಡೆದುಕೊಳ್ಳುವುದನ್ನು ಇಲ್ಲಿ ಸಂಕೇತಿಸಲಾಗಿದೆ. ಲೈಂಗಿಕ ನಿಷ್ಠೆಯ ವಿಚಾರದಲ್ಲಿ ಗಂಡು ತಪ್ಪು ಮಾಡಿದರೆ ಕೊಲೆ, ಹೆಣ್ಣು ತಪ್ಪು ಮಾಡಿದರೆ ಅವಮಾನ ಮತ್ತು ಕೊಲೆ ಹೀಗೆ ಶಿಕ್ಷೆಯ ಪ್ರಮಾಣ ಹೆಣ್ಣಿಗೇ ಅಧಿಕ. ಹೆಣ್ಣು ಸ್ವತಃ ಇಚ್ಛಿಸಿ ಅಥವಾ ಮೋಸಕ್ಕೆ ಗುರಿಯಾಗಿ ಅಥವಾ ಆಮಿಷಕ್ಕೆ ಗುರಿಯಾಗಿ ಚೌಕಟ್ಟಿನಾಚೆ ಲೈಂಗಿಕ ಕ್ರಿಯೆಗೆ ಒಳಗಾಗಲಿ ಇಲ್ಲವೆ ಅತ್ಯಾಚಾರಕ್ಕೆ ಗುರಿಯಾಗಲಿ ಅದೇ ಅವಳಿಗೆ ಘೋರ ಅನ್ಯಾಯ ಆದರೂ ಕುಟುಂಬದ ಮತ್ತು ಸಮಾಜನೀತಿಯ ಚೌಕಟ್ಟಿನಲ್ಲಿ ಹೆಣ್ಣಿಗೆ ಶಿಕ್ಷೆ ತಪ್ಪಿದ್ದಲ್ಲ!

ಹೆಳವನಕಟ್ಟೆ ಗಿರಿಯಮ್ಮನ ಲವಕುಶರ ಹಾಡು ಕಾವ್ಯದಲ್ಲಿ ರಾಮನು ನೇರವಾಗಿ ಸೀತೆಗೆ ನೀನು ಅಪರಾಧಿ; ಅಸುರರ ಕೂಡಿದವಳು ಎಂದು ನಿಂದಿಸಿ; ʼಆಳು ಕೊಂದ ಪಾಪ ಅರಸಿ ಮಾಡಿದ ಪಾಪ ಭೂಮಿಯನ್ನು ಆಳುವ ದೊರೆಗೇ ಬರುತ್ತದೆʼ ಆದ್ದರಿಂದ ನೀನು ಅರಮನೆಯಿಂದ ಅಡವಿಗೆ ಹೊರಡು ಎಂದು ಗದರಿಸುವಂತೆ ಬರೆಯಲಾಗಿದೆ. ಊರಿನ ಹೆಂಗಸರು ಸೀತೆಯನ್ನು ಕಾಡಿಗೆ ಕಳಿಸಬೇಡ ಆಕೆಯ ತಪ್ಪನ್ನು ಮನ್ನಿಸು ಎಂದು ಕಾಲಿಗೆ ಬಿದ್ದು ಬೇಡಿಕೊಂಡ ಪ್ರಸಂಗದಲ್ಲಿ ʼನೀವೆಲ್ಲ ಕಾಣದವರು, ಅವಳ ವಿಚಾರ ನಿಮಗೇನೂ ಗೊತ್ತಿಲ್ಲ; ಈಕೆಯ ಜೊತೆ ನಾನು ಬಹಳ ನೊಂದಿದ್ದೇನೆ. ಈಕೆಯ ಗುಣವನ್ನು ನಾನು ಮಾತ್ರ ಬಲ್ಲೆ; ಬೇರೆ ಯಾರಿಗೂ ಅದು ಗೊತ್ತಿಲ್ಲ. ಇವಳು ಮಾಯಾಚೋರಿ, ಇವಳ ಮರ್ಮ ಕಂಡವರಿಲ್ಲʼ ಎಂದು ಅವಳ ಬಗ್ಗೆ ತನಗೆಲ್ಲ ಗೊತ್ತಿದೆ ಎಂಬಂತೆ ಅವನಿಂದಲೆ ಮಾತಾಡಿಸಲಾಗಿದೆ. ಆಕೆ ಇನ್ನೊಬ್ಬನ ಜೊತೆ ಮಲಗಿದ್ದಾಳೆ ಎನ್ನುವುದು ಆಕೆಯ ಗಂಡನಿಗಲ್ಲದೆ ಅಧಿಕೃತವಾಗಿ ಇನ್ನಾರಿಗೆ ತಿಳಿಯುತ್ತದೆ ಎಂಬುದು ಇಲ್ಲಿನ ಗಿರಿಯಮ್ಮನ ಅರಿವು.

ಗಂಡು ಕವಿಗಳನ್ನೆಲ್ಲ ಮೀರಿಸಿದ ಗಂಡಿನ ಸ್ವಾನುಭವವನ್ನು ಹೇಳುವಂತೆ ಗಿರಿಯಮ್ಮ ಇಲ್ಲಿ ಮಾತಾಡುತ್ತಾಳೆ. ಅಂದರೆ ಅಸುರನು ಸೀತೆಯೊಂದಿಗೆ ಲೈಂಗಿಕಕ್ರಿಯೆ ನಡೆಸಿದ್ದಾನೆ ಎಂದೇ ರಾಮನಿಂದ ಖಚಿತವಾಗಿ ಇಲ್ಲಿ ಹೇಳಿಸಲಾಗಿದೆ. ಮುಂದುವರಿದು ಚಿತ್ರಪಟ ಬರೆದ ಸೀತೆಯ ನಡವಳಿಕೆಯಿಂದ ನೊಂದ ರಾಮನಿಂದ ಇಲ್ಲಿ `ಬಂದ ಸನ್ಯಾಸಿಯ ಒಡಕೊಂಡು ನೀ ಹೋದಿ ಹಿಂದಟ್ಟಿ ನಾ ಎಳತಂದೆʼ ಎಂದು ಸೀತೆಯ ಮೇಲೆ ಆರೋಪ ಮಾಡಿಸಲಾಗಿದೆ. (ನೋಡಿ: ಸಮಗ್ರದಾಸ ಸಾಹಿತ್ಯ: ಸಂಪುಟ ೧೮; ಲವಕುಶರ ಹಾಡು, ಪದ್ಯ ೮೧, ೧೦೨, ೧೦೪) ಬಹಳ ಘೋರವಾದ ಲೈಂಗಿಕ ಶಿಸ್ತಿನ ಸಂಕಥನವಿದು. ರಾಮ ಸೀತೆಯನ್ನೆ ಆರೋಪ ಮಾಡುವಂತೆ ಬರೆದಿರುವುದು ಹೆಣ್ಣಿನದೆ ತಪ್ಪು ಎಂಬ ನಂಬಿಕೆಯಿಂದ ಹುಟ್ಟಿದ ಕಥನವಾಗಿದೆ.

ರಾವಣನನ್ನು ಜನಪದ ಚಿತ್ರಪಟ ರಾಮಾಯಣದಲ್ಲಿ ಸೀತೆಯನ್ನು ಇಟ್ಟುಕೊಂಡ ಪಾತಕಿ ಎನ್ನಲಾಗಿದೆ. ʼಬಹುಮಂದಿ ಕಪಿಗಳನ್ನು ದಣಿಸಿ ರಾವಣನನ್ನು ವಧಿಸಿ ನಿನ್ನನ್ನು ತಂದದ್ದು ಹೇಗಾಯಿತೆಂದರೆ ಬಾಯಿತೆರೆದು ಬ್ರಹ್ಮಲೋಕಕ್ಕೆ ಹೋಗಿ ಹುಚ್ಚು ನಾಯಿಯನ್ನು ತಂದಂತಾಯಿತುʼ ʼನನಗೆ ವಿಷವನ್ನು ಕೊಟ್ಟು ಕೊಲ್ಲುವುದಕ್ಕು ಹೇಸುವವಳಲ್ಲ ನೀನುʼ ʼಅವನು ನಿನ್ನ ಪತಿ, ನಿನ್ನ ಮನೋವಲ್ಲಭʼ ಎಂದು ರಾಮನಿಂದ ಸೀತೆಯನ್ನು ಆರೋಪಿಸಿಸಲಾಗಿದೆ ಮತ್ತು ಬಯ್ಯಿಸಲಾಗಿದೆ. (ನೋಡಿ: ಚಿತ್ರಪಟ ರಾಮಾಯಣ: ಸಂ. ಮುದೇನೂರು ಸಂಗಣ್ಣ, ಪ್ರಾದೇಶಿಕ ಜನಪದ ರಂಗಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೮೫. ಪುಟ ೧೩-೧೫) ಗಿರಿಯಮ್ಮನೂ ಜನಪದರೂ ಸೀತೆಯನ್ನು ರಾವಣನ ಜೊತೆ ಲೈಂಗಿಕ ಸಂಬಂಧ ಹೊಂದಿದವಳೆಂದೆ ಖಚಿತವಾಗಿ ನಂಬುತ್ತಾರೆ. ಹಾಗಾಗಿಯೆ ಇಲ್ಲಿನ ಮಾತುಗಳು ಇತರರಿಗಿಂತ ಕಠಿಣವಾಗಿವೆ. ದಾಂಪತ್ಯದ ಆಚೆಗಿನ ಲೈಂಗಿಕ ಸಂಬಂಧಗಳನ್ನು ನಿಷೇಧಿಸುವುದೆ ಈ ಎಲ್ಲ ಕಥನಗಳ ಉದ್ದೇಶ. ಅಂದರೆ ಮತ್ತೆ ಮತ್ತೆ ಈ ಸಂಕಥನವು ನಾಟಕ, ಯಕ್ಷಗಾನ, ಕಾವ್ಯ, ಕಥೆ, ಹರಿಕಥೆ ಇತ್ಯಾದಿ ರೂಪಗಳಲ್ಲಿ ನಮ್ಮ ಸಮುದಾಯದ ಮನಸ್ಸನ್ನು ಕಾಡಲು ಕಾರಣವೇನು? ಹೆಣ್ಣನ್ನು ದಾಂಪತ್ಯದ ಚೌಕಟ್ಟಿನಲ್ಲಿ ಲೈಂಗಿಕ ನಿಷ್ಠತೆಗೆ ಬಂಧಿಸಲು ಸೋಲುತ್ತ ಸೋಲುತ್ತ ಸುಣ್ಣವಾದ ಜನರ ಆರ್ತನಾದ, ಅರಣ್ಯರೋದನದ ಫಲವಿದು. ವಾಚ್ಯವೊ, ಅವಾಚ್ಯವೊ, ರೂಪಕವೊ, ಉಪಮೆಯೊ ಎಲ್ಲ ಕಾವ್ಯಪರಿಕರಗಳನ್ನು, ಕಥನತಂತ್ರಗಳನ್ನು ಬಳಸಿಯೂ ಬಸವಳಿದ ಸಂಕಥನವಿದು.

ತೊರವೆ ನರಹರಿ, ಕುವೆಂಪು, ಮಾಸ್ತಿ, ಮೊಯ್ಲಿ, ಎಚ್.ಎಸ್.ವಿ., ಈ ಯಾರೂ ಸೀತಾಪರಿತ್ಯಾಗವೆಂಬ ದಾಂಪತ್ಯತ್ಯಾಗ ಪ್ರಸಂಗ ಬರೆದಿಲ್ಲವಾದ್ದರಿಂದ ಆ ವಿವರಗಳು ಇವರ ಕಥನಗಳಲ್ಲಿಲ್ಲ. ಮುಂದುವರೆದು ಡಿವಿಜಿ ಅವರ ಶ್ರೀರಾಮ ಪರೀಕ್ಷಣಂನಲ್ಲಿ ಸೀತೆ, ಮಂಡೋದರಿ, ತಾರೆ, ಅಹಲ್ಯೆಯರು ಶ್ರೀರಾಮನನ್ನು ಪ್ರಶ್ನಿಸುವ (ಆ ಮೂಲಕ ಪರೀಕ್ಷಿಸುವ) ಪ್ರಸಂಗಗಳನ್ನು ಸೃಷ್ಟಿಸಲಾಗಿದೆ.

ಶ್ರೀರಾಮ ಪರೀಕ್ಷಣವೊ ಶ್ರೀರಾಮ ಸಮರ್ಥನೆಯೊ?

ಶ್ರೀರಾಮ ಪರೀಕ್ಷಣಂನಲ್ಲಿ ಸೀತೆಯು ಶ್ರೀರಾಮನನ್ನು ʼಇನ್ನೂ ಎಷ್ಟು ಪರೀಕ್ಷೆಗಳಿಗೆ ನಾನು ಗುರಿಯಾಗಬೇಕಿದೆ? ಜನರನ್ನು ಮೆಚ್ಚಿಸುವ ನಿನ್ನ ಚಟ ತೀರಿಲ್ಲವೆ? ನಿನಗೆ ಸ್ವಂತ ವಿವೇಕ ಎನ್ನುವುದು ಇಲ್ಲವೆ?ʼ ಎಂದೆಲ್ಲ ಪ್ರಶ್ನಿಸುವಂತೆ ಚಿತ್ರಿಸಲಾಗಿದೆ. ಸೀತೆ, ಮಂಡೋದರಿ, ತಾರೆ, ಅಹಲ್ಯೆ ಹೀಗೆ ಹಲವು ಹೆಣ್ಣುಗಳು ಇಲ್ಲಿ ಶ್ರೀರಾಮನನ್ನು ಪ್ರಶ್ನಿಸುವ ಮೂಲಕ ಸತ್ವಪರೀಕ್ಷೆಗೆ ಗುರಿಮಾಡುವಂತೆ ಪ್ರಸಂಗಗಳನ್ನು ಹೆಣೆಯಲಾಗಿದೆ. ಆದಾಗ್ಯೂ ಇಲ್ಲಿ ಯಾವ ಹೆಣ್ಣುಮಕ್ಕಳಯ ಕೇಳಿದ ಪ್ರಶ್ನೆಗಳಿಗು ರಾಮ ಸರಿಯಾಗಿ ಉತ್ತರಿಸದೆ; ಅವನೂ ವಿಧಿಯ ಕೈಗೊಂಬೆ ಎಂದೆ ಬಣ್ಣಿಸಲಾಗಿದೆ. ಸೀತೆಯು ತನ್ನ ಪೂರ್ವಜನ್ಮದ ಕರ್ಮಫಲಗಳಿಂದಾಗಿ ಈ ಜನ್ಮದಲ್ಲಿ ಪರಿತಾಪ ಪಡುವಂತೆ ಆಗಿದೆ; ರಾಮನು ಅವತಾರಪುರುಷನಾದರೂ, ಯೋಗಿಯಾದರೂ ಆತನ ಜನ್ಮವೂ ವಿಧಿಯ ಆಟವೆ. ಹಾಗಾಗಿ ಅವನ ಪಾತ್ರ ಕೇವಲ ವಿಧಾತ ಆಡಿಸಿದಂತೆ ಆಡುವುದು ಅಷ್ಟೆ ಎಂದು ಹೇಳಲಾಗಿದೆ. ಆ ಮೂಲಕ ಇಂಥ ಸಂಕಥನದಿಂದ ರಾಮನನ್ನು ದೋಷಮುಕ್ತನನ್ನಾಗಿ ಮಾಡಲು ಯತ್ನಿಸಲಾಗಿದೆ.

ಕಾವ್ಯದ ಕೊನೆಯಲ್ಲಿ ರಾಮಾಂಜನೇಯ ಪ್ರಶ್ನೋತ್ತರ ಪ್ರಸಂಗದಲ್ಲಿ ಈ ವಿಶ್ವವೇ ಒಂದು ಅಶ್ವತ್ಥವೃಕ್ಷ ಎನ್ನಲಾಗಿದೆ. ಇದು ಸದಾ ಎಲೆ, ರೆಕ್ಕೆಗಳನ್ನು ಉದುರಿಸುತ್ತಾ; ಹೊಸ ಚಿಗುರು ಧರಿಸಿ ಬೆಳೆಯುತ್ತಾ ಇರುತ್ತದೆ. ಹೀಗೆಯೆ ಇಲ್ಲಿ ಬರುವ ಜೀವಿಗಳೆಲ್ಲರೂ ಶಾಶ್ವತ ಅಶ್ವತ್ಥದ ಬೆಳವಿಗೆಯಲ್ಲಿ ತಮ್ಮ ಪಾತ್ರ ನೀಡಿ ಇಲ್ಲವಾಗುವವರು ಎಂದು ವಿಶ್ವರೂಪ ವ್ಯಾಖ್ಯಾನ ಮಾಡಲಾಗಿದೆ. ಅಲ್ಲದೆ ಈ ವಿಶ್ವವೆ ಒಂದು ನಾಟಕರಂಗ, ಇದರಲ್ಲಿ ಜೀವಿಗಳು ತಮ್ಮ ಪಾತ್ರ ಮುಗಿದ ಮೇಲೆ ತೆರಳಬೇಕು ಎಂದೂ ವಿಶ್ವವನ್ನು ಒಂದು ವಿರಾಟ್‌ ನಾಟಕರಂಗ ಎನ್ನಲಾಗಿದೆ. ಧರ್ಮದ ಮೂಲಗಳು ನಿಗೂಢ, ಹೀಗಿರುವಾಗ ಆರ್ಷೇಯಧರ್ಮದ ರಕ್ಷಣೆಗೆ ಋಷಿಪ್ರಣೀತ ಆತ್ಮಶಿಕ್ಷಣ ಪಡೆದು ಬಾಳಬೇಕು ಎಂಬ ಉಪದೇಶ ನೀಡಲಾಗಿದೆ. (ನೋಡಿ: ಶ್ರೀರಾಮಪರೀಕ್ಷಣಂ: ಡಿವಿಜಿ, ಕರ್ನಾಟಕ ಪ್ರಕಟಣಾಲಯ, ಬೆಂಗಳೂರು, ೧೯೪೫. ಪದ್ಯ ೯, ೧೦, ೧೩, ೨೨: ಪುಟ ೫೪ ರಿಂದ ೫೯) ಇಲ್ಲಿ ಡಿವಿಜಿ ರಾಮಪರೀಕ್ಷಣದ ಹೆಸರಿನಲ್ಲಿ ಸನಾತನ (ಆರ್ಷೇಯ) ಧರ್ಮದ, ಕರ್ಮಫಲ, ವಿಧಿಲೇಲೆಗಳ ಸಮರ್ಥನೆಗೆ ಕಥನವನ್ನು ಬಳಸಿದ್ದಾರೆ.

ವಾಲಿಯನ್ನು ಮರೆಯಿಂದ ಕೊಂದು ತಾರೆಯನ್ನು ವಿಧವೆ ಆಗಿಸಿದ್ದಾಗಲಿ, ರಾವಣನನ್ನು ಕೊಂದು ಮಂಡೋದರಿಯನ್ನು ವಿಧವೆ ಆಗಿಸಿದ್ದಾಗಲಿ, ಯುದ್ಧ ನಡೆಸಿ ಸಹಸ್ರಾರು ಲಂಕಾವಾಸಿಗಳನ್ನು ಕೊಂದು ಅನೇಕ ಹೆಂಗಸರು ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದಾಗಲಿ, ರುಮೆಗೆ ಕಳಂಕ ತೊಡಿಸಿದ್ದಾಗಲಿ, ಸುಗ್ರೀವನಿಗೆ ಪಟ್ಟ ಕಟ್ಟಿದ್ದಾಗಲಿ, ಶೂರ್ಪನಖಿಯನ್ನು ವಿರೂಪಗೊಳಿಸಿದ್ದಾಗಲಿ, ವಿಭೀಷಣನಿಗೆ ಪಟ್ಟ ಕಟ್ಟಿದ್ದಾಗಲಿ ಯಾವುದೂ ಶ್ರೀರಾಮಪರೀಕ್ಷಣಂ ಕಾವ್ಯದ ಪ್ರಕಾರ ಸ್ವಾರ್ಥವಲ್ಲ; ಧರ್ಮಕಾರ್ಯ. ವಿಧಿಲೇಲೆಯ ಪರಿಣಾಮ.

ಅಹಲ್ಯೆಯನ್ನು ಆಕೆ ಇಂದ್ರನ ಜೊತೆಗೆ ಸಂಭೋಗಿಸಿದ್ದರೂ ಕ್ಷಮಿಸಿದೆ; ಇಂದ್ರನನ್ನೂ ಕ್ಷಮಿಸಿದೆ. ಅವರಿಬ್ಬರನ್ನೂ ಯಾಕೆ ವಧಿಸಲಿಲ್ಲ? ಗೌತಮನ ಜೊತೆ ಆಕೆಯನ್ನು ಮರಳಿ ಸಂಸಾರ ಮಾಡಲು ಯಾಕೆ ಅವಕಾಶ ಕೊಟ್ಟೆ? ಆಕೆಯ

ವಿಚಾರದಲ್ಲಿ ಹಾಗೆ ಮಾಡಿದ ನೀನು ನನ್ನ ವಿಚಾರದಲ್ಲಿ ಮಾತ್ರ ಯಾಕೆ ಕ್ರೂರಿಯಾಗಿ ನಡೆದುಕೊಂಡೆ? ಗರ್ಭಿಣಿಯಾದ ನನ್ನನ್ನು ನನಗೆ ತಿಳಿಸದೆಯೆ ಲಕ್ಷ್ಮಣನ ಮೂಲಕ ಕಾಡಿಗೆ ಅಟ್ಟಿದೆಯಲ್ಲ! ಇದು ತರವೆ? ಎಂದು ಸೀತೆ ಕೇಳಿದ್ದಕ್ಕೆ ಅದೇ ವಿಧಿಲೇಲೆ ಎಂಬ ಸಿದ್ಧ ಉತ್ತರವನ್ನು ರಾಮ ಶ್ರೀರಾಮಪರೀಕ್ಷಣಂನಲ್ಲಿ ಕೊಡುತ್ತಾನೆ. ತಾರೆ ಮಂಡೋದರಿಯರೂ ಇದೇ ಪ್ರಶ್ನೆ ಕೇಳಿದಾಗ ಅವರಿಗು ಇದೆ ಸಿದ್ಧ ಉತ್ತರ ಸಿಗುತ್ತದೆ. ಹಾಗಾದರೆ ಕೊಲೆ, ಹಿಂಸೆ, ಕಾಡಿಗಟ್ಟುವುದು ಎಲ್ಲವೂ ವಿಧಿಲೇಲೆ ಎನ್ನುವುದಾದರೆ ನ್ಯಾಯ- ಶಿಕ್ಷೆಗಳ ಕಲ್ಪನೆಯಾದರೂ ಯಾತಕ್ಕೆ? ರಾವಣ ಒಂದು ವೇಳೆ ಸೀತೆಯ ಮೇಲೆ ಅತ್ಯಾಚಾರ ಮಾಡಿದ್ದರೆ ಅದೂ ವಿಧಿಲೇಲೆಯೆ ಅಲ್ಲವೆ? ಅದೇ ಸೀತೆಗೆ ಒಂದು ಘೋರ ಅನ್ಯಾಯ; ಅದಕ್ಕೆ ಸೀತೆಗೆ ಏತಕ್ಕೆ ಶಿಕ್ಷೆ ಆಗಬೇಕು? ನಮ್ಮ ಕವಿಗಳಿಗೆ ಹೀಗೆ ಅನ್ನಿಸಿಲ್ಲ.m

ಸೀತೆಯನ್ನು ವನವಾಸಕ್ಕೆ ಕರೆದೊಯ್ಯುವಾಗ ರಾಮ ಆಕೆಯ ಮನದಿಂಗಿತವನ್ನು ಪರೀಕ್ಷಿಸಲೆಂದೆ ನೀನು ಕಾಡಿಗೆ ಬರಬೇಡ, ಹಿರಿಯರ ಸೇವೆ ಮಾಡಿಕೊಂಡಿರು ಎಂದು ಹೇಳಿ, ಆಕೆಯ ಬಾಯಿಂದಲೆ ನಾನೂ ನಿನ್ನ ಜೊತೆ ಬರುತ್ತೇನೆ ಎಂದು ಹೇಳಿಸುವ ಹಾಗೆ ಬಹುಪಾಲು ಎಲ್ಲ ಕವಿಗಳೂ ಕತೆ ಕಟ್ಟಿದ್ದಾರೆ. ಮಾಸ್ತಿಯವರ ಶ್ರೀರಾಮಪಟ್ಟಾಭಿಷೇಕ, ಮುದ್ದಣನ ಶ್ರೀರಾಮಪಟ್ಟಾಭಿಷೇಕ, ಜನಪದ ರಾಮಾಯಣ ಈ ಎಲ್ಲ ಕಡೆ ಸೀತೆ ನೀನು ನನ್ನನ್ನು ಜೊತೆ ಕರೆದುಕೊಂಡು ಹೋಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುವಂತೆ ಆಕೆಯ ಬಾಯಿಂದಲೆ ಹೇಳಿಸಲಾಗಿದೆ. ಅಂದರೇನು? ರಾಮನಿಗೆ ಬಂದ ವನವಾಸವನ್ನು ಸೀತೆ ಯಾಕೆ ಅನುಭವಿಸಬೇಕು ಎಂಬ ಪ್ರಶ್ನೆ ಬರಬಾರದು ಎಂಬ ದೃಷ್ಟಿಯಿಂದ ರಾಮಕುಟುಂಬವನ್ನು ದೋಷಮುಕ್ತಗೊಳಿಸಲು ಸೀತೆಯನ್ನೆ ಇಲ್ಲಿ ಹೊಣೆಗಾರಳನ್ನಾಗಿ ಮಾಡಲಾಗಿದೆ. ಅಲ್ಲದೆ ಗಂಡ ಇರುವ ಕಡೆ ಹೆಂಡತಿ ಇರಬೇಕು ಎಂಬ ತತ್ವವನ್ನು ಪ್ರತಿಪಾದಿಸಲಿಕ್ಕೆ ಈ ಕಥನ ಹೆಣೆಯಲಾಗಿದೆ ಎಂಬುದಕ್ಕಿಂತ ಒದಗಬಹುದಾದ ಸೌಕರ್ಯಗಳನ್ನು ರಾಮನಿಗೆ ಒದಗಿಸುವ ಕೌಟುಂಬಿಕ ಹುನ್ನಾರ ಆಗಿಯೆ ಲಕ್ಷ್ಮಣ ಸೀತೆಯರನ್ನು ರಾಮನೊಟ್ಟಿಗೆ ಕಾಡಿಗೆ ಅಟ್ಟುವ ಕೆಲಸ ಮಾಡಲಾಗಿದೆ ಎಂದೂ ಇದನ್ನು ವ್ಯಾಖ್ಯಾನಿಸಬಹುದಾಗಿದೆ.

ಯುದ್ಧತಂತ್ರದ ಭಾಗವಾಗಿ ನಡೆಸಿದ ಕೃತ್ಯಗಳನ್ನು ಕೊಲೆ, ಒಳಸಂಚು, ಅಧಿಕಾರಪಲ್ಲಟದ ಕೃತ್ಯಗಳನ್ನು ಕರ್ಮಫಲ, ವಿಧಿಲೇಲೆಗಳೆಂದು ಬಣ್ಣಿಸುವುದು ಧರ್ಮಗುರುಡೂ ಪಾಂಥಿಕ ಕುರುಡೂ ಆದ ಗಂಡುಕುರುಡೆ ಹೌದು. ಕಾಲ್ಪನಿಕ ಕಲಾಕೃತಿಯಾದ ಕಾವ್ಯಕಥನವನ್ನು ಧರ್ಮಗ್ರಂಥವೆಂದು ಭಾವಿಸಿದಾಗ; ಕಾವ್ಯನಾಯಕನನ್ನು ಅವತಾರಪುರುಷ, ಆರಾಧ್ಯದೇವರು ಎಂದು ಬಿಂಬಿಸುವಾಗ, ಕಾವ್ಯನಾಯಕನನ್ನು ಧಾರ್ಮಿಕ ನಾಯಕನೆಂದು ಕಟ್ಟಿಕೊಡುವಾಗ ಆತನ ಚರಿತೆಯನ್ನು ದೋಷಮುಕ್ತಗೊಳಿಸುವ ಅಗತ್ಯ ಬೀಳುತ್ತದೆ. ಅದಕ್ಕೆ ವಿಧಿಲೇಲೆ, ಕರ್ಮಫಲ, ಜಗನ್ನಾಟಕ ಇತ್ಯಾದಿ ಕಲ್ಪನೆಗಳು ಸಹಾಯಕ್ಕೆ ಒದಗುತ್ತವೆ. ಯಾವುದೆ ಗ್ರಂಥವನ್ನು ಧರ್ಮಗ್ರಂಥವೆಂದು ಸ್ಥಾಪಿಸುವಾಗ ಅದರ ನಾಯಕನನ್ನು ಕಾಲ್ಪನಿಕ ಆವರಣಗಳಿಂದ ಬಿಡುಗಡೆ ಮಾಡಿ ಚಾರಿತ್ರಿಕ ವ್ಯಕ್ತಿಯಾಗಿ ಸಾಬೀತು ಮಾಡಬೇಕಾಗುತ್ತದೆ.

ಇದರಿಂದಾಗಿಯೆ ಶ್ರೀರಾಮನನ್ನು ದೋಷಮುಕ್ತನನ್ನಾಗಿ ಮಾಡುವ ಅನಿವಾರ್ಯತೆ ಲಕ್ಷ್ಮೀಶ, ಮುದ್ದಣ, ಡಿವಿಜಿ ಎಲ್ಲರಿಗೂ ಕಾಡಿದೆ.

ಇದೇ ಅನಿವಾರ್ಯತೆ ಮುಂದುವರಿದು ಮಾಸ್ತಿ, ಎಚ್‌.ಎಸ್.ವಿ. ಅವರಿಗು ಅಂಟಿಕೊಂಡಿದೆ. ಮಾಸ್ತಿ ಮತ್ತು ಎಚ್. ಎಸ್. ವೆಂಕಟೇಶಮೂರ್ತಿ ಕೂಡ ಕೆಲವು ಮೌಲ್ಯ ಪ್ರತಿಪಾದನೆಗಳನ್ನು ಹೊರತುಪಡಿಸಿದರೆ ಮುದ್ದಣ, ಡಿವಿಜಿಯಂತೆ ಪರಂಪರೆಯ ಗಿಳಿಪಾಠವನ್ನೆ ಒಪ್ಪಿಸುತ್ತಾರೆ. ದಾಂಪತ್ಯ ನಿಷ್ಠೆ, ಕೌಟುಂಬಿಕತೆ, ವಂಶ-ಜಾತಿ ಮತ್ತು ಈ ಮೂರೂ ಸಂಗತಿಗಳಿಗೆ ಅವಿಭಾಜ್ಯವಾಗಿ ಅಂಟಿಕೊಂಡ ಸ್ತ್ರೀಲೈಂಗಿಕತೆಯನ್ನು ನಿಷ್ಠವಾಗಿ ಕಾಪಾಡುವ ಕಾಲಾಳುಗಳಾಗಿ (ಕುವೆಂಪುವನ್ನು ಹೊರತುಪಡಿಸಿ ಮಿಕ್ಕ) ಎಲ್ಲ ಕವಿಗಳು ದುಡಿದಿದ್ದಾರೆ.

ಆಧುನಿಕ ಸಂದರ್ಭದಲ್ಲಿ ಹಲವು ಸಾಂಪ್ರದಾಯಿಕ ಮೌಲ್ಯಗಳಿಗೆ ತಿಲಾಂಜಲಿ ಕೊಟ್ಟಿರುವ ವ್ಯಕ್ತಿಯಾಗಿ ಕುವೆಂಪು ಕಾಣುತ್ತಾರೆ. ವೀರಪ್ಪ ಮೊಯ್ಲಿ ಕೂಡ ಹಲವು ಆಧುನಿಕ ಮೌಲ್ಯಗಳನ್ನು ಎಚ್ಚರದಿಂದ ತುರುಕುವ ಕೆಲಸವನ್ನು ತಮ್ಮ ರಾಮಾಯಣ ಮಹಾನ್ವೇಷಣಂ ಕಾವ್ಯದಲ್ಲಿ ಮಾಡಿದ್ದಾರೆ. ಆದಾಗ್ಯೂ ಇವರಿಬ್ಬರೂ ಜನ್ಮಜಾತಿಯಿಂದ ಶೂದ್ರರಾಗಿದ್ದರೂ ವಿಧಿಲೀಲೆ, ಪುನರ್ಜನ್ಮ, ಕರ್ಮಫಲ, ಅವತಾರ, ಜಗನ್ನಾಟಕ ಇತ್ಯಾದಿ ವೈದಿಕ ಜ್ಞಾನಕೋಳಗಳಿಂದ ಕಥನಕ್ಕೆ ಬಿಡುಗಡೆ ನೀಡಿಲ್ಲ. ರಾಮಾಯಣ ಕಥನ ಚೌಕಟ್ಟನ್ನು ಮುರಿಯದೆ ಅಥವಾ ಹೊಸದೇ ಕಥನ ಚೌಕಟ್ಟನ್ನು ನಿರ್ಮಿಸದೆ ಇವುಗಳಿಂದ ಬಿಡುಗಡೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಇಡೀ ಕನ್ನಡ ರಾಮಾಯಣ ಸಂಕಥನ ಪರಂಪರೆಯಲ್ಲಿ ಕುವೆಂಪು ಒಬ್ಬರೇ ಕೆಲ ವಿಚಾರಗಳಲ್ಲಿ ಅದ್ವಿತೀಯ ಕವಿ. ಕಾನೀನ, ಶೂದ್ರತಪಸ್ವಿಯೆಂಬ ಸೃಜನಶೀಲ ಮಧ್ಯಪ್ರವೇಶದ ವಿಚಾರದಲ್ಲಿ ಇರಬಹುದು, ʼಪಾಪಿಗೂ ಉದ್ಧಾರಮಿಹುದೌʼ ಎಂಬ ಪ್ರತಿಪಾದನೆಯಲ್ಲಿ ಇರಬಹುದು, ರಾವಣನ ಕನಸಿನ ಪ್ರತಿಮೆಯ ನಿರ್ಮಾಣದಲ್ಲಿ ಇರಬಹುದು ಇಂಥ ಎಲ್ಲ ಕಡೆ ಕುವೆಂಪು ಒಬ್ಬರೇ ಸಾಂಪ್ರದಾಯಿಕ ಜ್ಞಾನಸಂಕೋಲೆಗಳಿಂದ ಕಥನಕ್ಕೆ ಅಲ್ಪಸ್ವಲ್ಪ ಬಿಡುಗಡೆ ನೀಡಿದ ಕವಿಯಾಗಿ ಕಾಣುತ್ತಾರೆ. ರಾಮಧಾನ್ಯದ ಚರಿತೆ ಬರೆದ ಕನಕದಾಸ ಕೂಡ ರಾಮಾಯಣ ಸಂಕಥನಕ್ಕೆ ಸೃಜನಶೀಲ ಮಧ್ಯಪ್ರವೇಶ ನೀಡಿದ ಒಬ್ಬ ಗಮನಾರ್ಹ ಕವಿ.

ಡಾ. ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ರಾಮಾಯಣ ಸಂಕಥನ 2
ರಾಮಾಯಣ ಸಂಕಥನ-1
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...