ರಾಮಾಯಣ ಸಂಕಥನ-1

Date: 18-07-2023

Location: ಬೆಂಗಳೂರು


''ರಾಮಾಯಣ ಎಂಬುದೆ ಒಂದು ನಿರಂತರ ಕಥಿಸಬಹುದಾದ ಕಥನ ಚೌಕಟ್ಟು ಆಗಿ, ನಿರಂತರ ಬಳಸಬಹುದಾದ ಒಂದು ಪೌರಾಣಿಕ ಭಾಷೆಯಾಗಿ ನಮ್ಮ ನಡುವೆ ಬಳಕೆ ಆಗುತ್ತ ಬಂದಿದೆ. ಹಾಗಾಗಿಯೆ ಇದನ್ನು ಲೋಕಗೀತೆ ಎಂದು ಕರೆಯಲಾಗಿದೆ,'' ಎನ್ನುತ್ತಾರೆ ಅಂಕಣಕಾರ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ರಾಮಾಯಣ ಸಂಕಥನ-1' ವಿಚಾರದ ಕುರಿತು ಬರೆದಿದ್ದಾರೆ.

ರಾಮಾಯಣ ಸಂಕಥನ-1

ಕಾಲ, ದೇಶ, ಭಾಷೆ, ಜಾತಿ, ಧರ್ಮ, ಲಿಂಗ, ಪಂಥಗಳ ಎಲ್ಲೆ ಮೀರಿ ಚಲನೆ ಕಂಡಿರುವ ಕಥನಗಳಲ್ಲಿ ರಾಮಾಯಣವೂ ಒಂದು. ಒಂದೊಂದು ಧರ್ಮ, ಒಂದೊಂದು ಪ್ರದೇಶ, ಒಂದೊಂದು ಭಾಷೆಗಳಲ್ಲು ಹಲವು ರಾಮಾಯಣ ಕಥನಗಳು ಹುಟ್ಟಿವೆ. ಹುಟ್ಟುತ್ತಲೆ ಇವೆ. ಒಂದೊಂದು ಕಥನಕ್ಕು ಇಲ್ಲಿ ಸಾಕಷ್ಟು ಸಾಮ್ಯ, ವ್ಯತ್ಯಾಸಗಳಿವೆ. ಅವುಗಳು ಕಾಲದ, ದೇಶದ, ಸಂಸ್ಕೃತಿಯ ಹಂಗನ್ನು ಹೊಂದಿಯೂ ಅವುಗಳನ್ನು ಮೀರಿಯೂ ರಚನೆ, ನಿರಚನೆ ಆಗುತ್ತ ಬಂದಿವೆ. ಇಲ್ಲಿನ ಕಥನವೇ ಭಾಷಿಕ ಕಥನ ಆದ್ದರಿಂದ ಬರವಣಿಗೆಯ ಉದ್ದೇಶಗಳಿಗಿಂತ ಪದಗಳ ಅರ್ಥಸಾಧ್ಯತೆ, ಓದಿನ ಗ್ರಹಿಕೆಯ ಸಾಧ್ಯತೆ ಪ್ರಸರಣದ ಪರಿಣಾಮ ಸಾಧ್ಯತೆಗಳು ಇಲ್ಲಿ ಸಾಕಷ್ಟು ತಮ್ಮದೇ ಸಾಂಸ್ಕೃತಿಕ ರಾಜಕಾರಣವನ್ನು ಮಾಡುತ್ತ ಬಂದಿವೆ. ಇಲ್ಲಿ ತನ್ನದೇ ಪದಗಳ, ಸಾಲುಗಳ ನಡುವಿನ ಅರ್ಥಛಾಯೆಗಳು ಕೆಲವೊಮ್ಮೆ ನಮ್ಮ ಮನಸಿಗೆ ನಿಲುಕದೆಯು ಹೋಗಿವೆ.

ರಾಮಾಯಣವೆ ಒಂದು ಭಾಷೆ

ರಾಮಾಯಣವು ಒಂದೊಂದು ಕಥನದಲ್ಲು ತನ್ನದೆ ಪ್ರಸಂಗಗಳನ್ನು ಮತ್ತು ಉಪಕಥನಗಳನ್ನು ಧಾರಣೆ ಮಾಡುತ್ತ ಅದು ಸಂಸ್ಕೃತಿಯ ಮತ್ತು ಕಾಲದ ಕನ್ನಡಿ ಆಗಿಯೂ, ಕಾಲಾತೀತ ಮೌಲ್ಯವ್ಯವಸ್ಥೆಯನ್ನು ಸ್ಥಾಪಿಸುವ; ಧರ್ಮ, ಭಾಷೆ, ಕಟ್ಟುಗಳನ್ನು ದಾಟಿದ ಸಾರ್ವರ್ತಿಕ ಮತ್ತು ಸಾರ್ವಕಾಲಿಕ ಗಂಡುಮೌಲ್ಯಗಳನ್ನು ಸ್ಥಾಪಿಸುವ, ಒಂದು ಸಂವೇದನೆಯ ಪರವಾದ, ಒಂದು ಪಾಂಥಿಕತೆಯ ಪರವಾದ ಮೌಲ್ಯಗಳನ್ನು ಅರ್ಥಾತ್‌ ಯಥಾಸ್ಥಿತಿವಾದವನ್ನು ಸ್ಥಾಪಿಸುವ ಸಾಧನ ಆಗಿಯೂ ಬಳಕೆ ಆಗುತ್ತ ಬಂದಿದೆ. ರಾಮಾಯಣ ಎಂಬುದೆ ಒಂದು ನಿರಂತರ ಕಥಿಸಬಹುದಾದ ಕಥನ ಚೌಕಟ್ಟು ಆಗಿ, ನಿರಂತರ ಬಳಸಬಹುದಾದ ಒಂದು ಪೌರಾಣಿಕ ಭಾಷೆಯಾಗಿ ನಮ್ಮ ನಡುವೆ ಬಳಕೆ ಆಗುತ್ತ ಬಂದಿದೆ. ಹಾಗಾಗಿಯೆ ಇದನ್ನು ಲೋಕಗೀತೆ ಎಂದು ಕರೆಯಲಾಗಿದೆ. ಇದನ್ನು ಕಾಲದೇಶ ಮೀರಿ ಹಲವರು ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಒಂದು ಮಾದ್ಯಮವಾಗಿ, ಸಾಧನವಾಗಿ ಸರಿಸುಮಾರು ತಮ್ಮ ಕಾಲ, ದೇಶ, ಸಮಷ್ಠಿ ಮನದ ಭಾಷೆಯನ್ನಾಗಿ ಕಂಡುಕೊಂಡಿದ್ದಾರೆ. ನಾಟಕವಾಗಿ, ಕಾವ್ಯವಾಗಿ, ಭಜನೆಗಳಾಗಿ ಹೀಗೆ ಭಿನ್ನ ಸಾಹಿತ್ಯಕಥನವಾಗಿ ಮಾತ್ರವಲ್ಲದೆ, ಇದು ಇತಿಹಾಸವಾಗಿ, ಆರಣೆಗಳ ಭಾಗವಾಗಿ ವರ್ತಮಾನವಾಗಿ ಸಮಾಜಕ್ಕೆ ಕಾಲಕಾಲಕ್ಕೆ ಕೊಡಬಹುದಾದ ಮಾದರಿ ನೀತಿಸಂಹಿತೆ ಆಗಿ ಬಳಕೆ ಆಗುತ್ತ ಬಂದಿದೆ.

ರಾಮಾಯಣದಲ್ಲಿ ಏನನ್ನಾದರೂ ಮಾತಾಡಿದರೆ ಆಗ ಜನಕ್ಕೆ ಅದು ಸುಲಭವಾಗಿ ಅರ್ಥ ಆಗುತ್ತದೆ. ಯಾಕೆಂದರೆ ಅದು ಈಗಾಗಲೆ ಜನರಿಗೆ ತಿಳಿದಿರುವ, ಜನಮಾನಸದಲ್ಲಿ ನೆಲೆಯಾಗಿರುವ ಸಂಗತಿ ಆಗಿದೆ. ಹಾಗಾಗಿ ರಾಮಾಯಣ ಒಂದು ಗ್ರಹಿಕೆಯ ಭಾಷೆ ಆಗಿಯೂ ಅಭಿವ್ಯಕ್ತಿಯ ಭಾಷೆ ಆಗಿಯೂ ಕೆಲಸ ಮಾಡುತ್ತಿದೆ.

ರಾಮ ಚರಿತ ಮಾನಸ

ಮನರಂಜನೆಯ ಘಟಕವಾಗಿ ಯಾವುದಾದರು ಕಥನವನ್ನು ಸಂಗೀತ, ನಾಟ್ಯಗಳ ಜೊತೆ ಬೆರೆಸಿ ನೀಡುವುದು ನಮ್ಮಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚಾರ. ಇದೊಂದು ಸಮಷ್ಠಿ ಮನಸ್ಸನ್ನು ತಯಾರು ಮಾಡುವ ವಿಧಾನವೆ ಆಗಿದೆ. ಇಂತಹ ವಿಧಾನದಲ್ಲಿ ಬಳಕೆ ಆಗುತ್ತ ಬಂದ ಕೆಲವೆ ಕಥನಗಳಲ್ಲಿ ರಾಮಾಯಣವೂ ಒಂದು. ನಿತ್ಯ ಯಾವ ಕಥನವನ್ನು ನಾವು ಮತ್ತೆ ಮತ್ತೆ ಕೇಳುತ್ತ, ನೋಡುತ್ತ, ಅಭಿನಯಿಸುತ್ತ ಇರುತ್ತೇವೋ ಅದು ನಮ್ಮ ಪ್ರಜ್ಞೆಯಲ್ಲಿ ನೆನಪಾಗಿ ಉಳಿದುಬಿಡುತ್ತದೆ. ಅದು ನಮ್ಮ ನಡಾವಳಿಯನ್ನು ನಮಗೆ ಗೊತ್ತಿಲ್ಲದೆಯೆ ಪ್ರಭಾವಿಸುತ್ತದೆ. ಹೀಗೆ ಜನಮಾನಸದ ಭಾಗವಾಗಿ ಜನಮಾನಸವನ್ನು ಅಪ್ರಜ್ಞೆಯಲ್ಲಿ ಪ್ರಭಾವಿಸುವ ಸಾಧನವಾಗಿಯು ಇದು ಬಳಕೆ ಆಗುತ್ತ ಬಂದಿದೆ. ಇದು ಚರಿತ್ರೆಯೂ ಹೌದು. ಹಾಗೆಯೆ ಸುಪ್ತಪ್ರಜ್ಞೆಯಲ್ಲಿ ನಮ್ಮೆಲ್ಲರ ಮನಸ್ಸನ್ನು ಆವರಿಸಿರುವ ಮತ್ತು ನಿರಂತರ ರೂಪಿಸುತ್ತ ಬಂದಿರುವ ಕಥನವೂ ಹೌದು. ಹಾಗಾಗಿಯೆ ಇದು ನಮ್ಮಲ್ಲಿ ರಾಮಚರಿತೆ ಆಗಿ, ರಾಮಚರಿತಮಾನಸ ಆಗಿ ಚಾಲ್ತಿಯಲ್ಲಿ ಇದೆ. ಅಂದರೆ ಇದು ರಾಮನ ಚರಿತೆ, ಚಾರಿತ್ರ್ಯ ಮತ್ತು ನಮ್ಮೆಲ್ಲರ ಮನಸ್ಸಿನ ಭಾಗ. ನಮ್ಮೆಲ್ಲರ ನಡವಳಿಕೆಯ ಭಾಗ. ನಮ್ಮೆಲ್ಲರ ಅಲಿಖಿತ ಸಂವಿಧಾನ.

ಅಧಿಕಾರ ಸಂಘಟನೆಯ ಸಾಧನ

ಧರ್ಮ, ಜಾತಿ, ಭಾಷೆ, ಪ್ರದೇಶ, ಲಿಂಗಗಳನ್ನು ದಾಟಿ ನಮ್ಮೆಲ್ಲರ ಸುಪ್ತ ಪ್ರಜ್ಞೆಯ, ನೆನಪಿನ ಭಾಗ ಆಗಿರುವ ಇದನ್ನೆ ನಿಜವಾಗಿ ನಡೆದ ಚರಿತ್ರೆ ಎಂದು ಬಿಂಬಿಸುವ ಮತ್ತು ನಾವೆಲ್ಲರೂ ನಡೆದುಕೊಳ್ಳಬೇಕಾಗಿರುವ ದಾರಿ ಎಂದು ನಂಬಿಸುವ ಕೆಲಸ ನಮ್ಮ ನೆಲದಲ್ಲಿ ನಿರಂತರ ಆಗುತ್ತ ಬಂದಿದೆ. ಹಾಗೆಯೆ ಅಧಿಕಾರ ಸಂಘಟನೆಯ ಸಾಧನವಾಗಿಯು ಇದು ಬಳಕೆ ಆಗುತ್ತ ಬಂದಿದೆ. ಪಕ್ಷಾತೀತವಾಗಿ ನಮ್ಮೆಲ್ಲರನ್ನು ಹಿಂದು ಎಂಬ ಒಂದು ಧಾರ್ಮಿಕ ಗುರುತಿನ ಅಡಿಯಲ್ಲಿ ಸಂಘಟಿಸುವ, ಹಿಂದೂಸ್ಥಾನ ಎಂಬ ರಾಷ್ಟ್ರೀಯತೆಯ ಗುರುತಿನ ಅಡಿಯಲ್ಲಿ (ʼನಾವೆಲ್ಲ ಹಿಂದು ನಾವೆಲ್ಲ ಒಂದುʼ ಎಂಬಂತೆ) ಒಂದು ಆಗಿ ಸಂಘಟಿಸುವ ಹುನ್ನಾರವು ನಿರಂತರ ಇಲ್ಲಿ ಚಾಲ್ತಿಯಲ್ಲಿ ಇದೆ. ಭಾವನಾತ್ಮಕವಾಗಿ ನಮ್ಮನ್ನೆಲ್ಲ ಒಂದು ಎಂದು ಬಿಂಬಿಸುವಾಗಲೆ ಇತರರನ್ನು ನಮಗೆ ಅನ್ಯರನ್ನಾಗಿಯೂ, ವೈರಿಗಳನ್ನಾಗಿಯೂ ಸಂಘಟಿಸುವ ಕೆಲಸ ಸಾಂಗವಾಗಿ ನೆರವೇರುತ್ತಿದೆ. ಇದೆಲ್ಲವೂ ಅಧಿಕಾರವನ್ನು ನಿರಂತರ ಯಥಾಸ್ಥಿತಿಯಲ್ಲಿ ನಿರ್ದಿಷ್ಠ ಸಮುದಾಯ ತನ್ನಲ್ಲಿ ಉಳಿಸಿಕೊಳ್ಳುವ ಹುನ್ನಾರದ ಭಾಗ. ಇಂತಹ ಕಾರಣಕ್ಕೆ ರಾಮ ಇಲ್ಲಿ ಹಿಂದೂಸ್ಥಾನದ ಏಕೈಕ ದೈವ ಆಗಿಯೂ, ಏಕೈಕ ಧಾರ್ಮಿಕ ನಾಯಕ ಆಗಿಯು, ಕಳಂಕವಿಲ್ಲದ ರಾಜನೀತಿ ನಿಪುಣ ಆಗಿಯೂ ಕಟ್ಟಲ್ಪಡುತ್ತ ಇದ್ದಾನೆ.

ಇದರ ಭಾಗ ಆಗಿಯೆ ಇಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಧಾರ್ಮಿಕ ಪ್ರಭುತ್ವವನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಸೂಪರ್‌ ಡೆಮಾಕ್ರಟಿಕ್‌ ಪವರ್‌ ಆಗಿ ರಾಮನನ್ನು ನೆಲೆಗೊಳಿಸುವ ಮತ್ತು ಅದಕ್ಕಾಗಿ ಸುಪ್ರೀಮ್‌ ಕೋರ್ಟಿನ ಬಾಯಿಯಿಂದಲೆ ರಾಮಮಂದಿರದ ಪರವಾಗಿ ತೀರ್ಪು ಕೊಡಿಸುವ ಕೆಲಸ ಇಲ್ಲಿ ಈಗಾಗಲೆ ಜರುಗಿದೆ. ಸಮಷ್ಠಿ ಪ್ರಜ್ಞೆಯನ್ನೆ ಪ್ರಭಾವಿಸಿದ ಮೇಲೆ ಸುಪ್ರೀಮ್‌ ಕೋರ್ಟ್‌ ಅದರ ಭಾಗವೇ ತಾನೆ. ಹಾಗಾಗಿಯೆ ಇಲ್ಲಿ ಇಟ್ಟಿಗೆ ಪವಿತ್ರ, ಜೀವ ಪವಿತ್ರವಲ್ಲ. ಇಲ್ಲಿ ದೇಗುಲ ಆಗಲೇಬೇಕು, ದೇಶ ಅಲ್ಲ. ಅಂದರೆ ಇಲ್ಲಿ ಬಡತನ ನಿರ್ಮೂಲನೆ, ನಿರುದ್ಯೋಗ ನಿರ್ಮೂಲನೆ, ಪ್ರಾದೇಶಿಕ ಅಸಮಾನತೆಯ ನಿರ್ಮೂಲನೆ, ಸಮಸಮಾಜದ ನಿರ್ಮಾಣ ಇವೆಲ್ಲವೂ ಆಗುವುದು ಬೇಕಿಲ್ಲ. ಭಾವನಾತ್ಮಕವಾಗಿ ನಾವೆಲ್ಲರೂ ಒಂದು ಎನ್ನುವುದು ಬೇಕಾಗಿದೆ. ವಿಚಾರಪ್ರಜ್ಞೆಯನ್ನು ಕೊಲ್ಲುವುದು ಬೇಕಾಗಿದೆ! ನಮಗೆಲ್ಲರಿಗು ಪ್ರಶ್ನಾತೀತ ದೇವರಾಗಿ ಅಖಿಲಭಾರತ ದೇವರೊಬ್ಬನು ಬೇಕಾಗಿದ್ದಾನೆ. ಅವನೆ ರಾಮ ಎಂದಿಲ್ಲಿ ನಂಬಿಸಲಾಗುತ್ತಿದೆ.

ಹಿಂದಿನಿಂದಲು ಅಲಿಖಿತ ಧಾರ್ಮಿಕ ಸಂವಿಧಾನದ ಜಾರಿಗೆ ರಾಮಾಯಣವನ್ನು ಬಳಸುತ್ತ ಬಂದ ನಮ್ಮವರು ಇಂದು ರಾಜಕೀಯ ಅಧಿಕಾರ ಗಳಿಸುವ ಕಾರಣಕ್ಕೆ ರಾಮನನ್ನು ನಮ್ಮ ಪ್ರಜ್ಞೆಯ ಭಾಗವಾಗಿ ಮಾಡುತ್ತಿದ್ದಾರೆ. ನಮ್ಮ ಉಭಯಕುಶಲೋಪರಿಯ ಸಾಧನವಾಗಿ ಬಳಸುತ್ತಿದ್ದಾರೆ. ಯಾರೆ ಎದುರಾದರೆ ಅವರನ್ನು ಕಂಡ ಕೂಡಲೆ, ಅವರನ್ನು ಮಾತಿಗೆ ಸೆಳೆಯುವ ಮೊದಲೆ ಕುಶಲೋಪರಿ ಸಂಕೇತವಾಗಿ ಜೈಶ್ರೀರಾಮ್‌ ಎನ್ನುವುದನ್ನು ಆಚಾರದ ಭಾಗವಾಗಿ ಬಹಳ ದಿನಗಳಿಂದಲು ಮಾಡಲಾಗುತ್ತಿದೆ. ಕೆಲವೊಮ್ಮೆ ಇಷ್ಟ ಇಲ್ಲದಿದ್ದರೂ ರಾಷ್ಟ್ರೀಯತೆ, ದೇಶಪ್ರೇಮೆಗಳ ಹೆಸರಿನಲ್ಲಿ ಎಲ್ಲರೂ ಜೈಶ್ರೀರಾಮ್‌ ಎನ್ನಬೇಕು ಎಂಬ ಒತ್ತಾಯವನ್ನೂ, ಗೂಂಡಾಗಿರಿಯನ್ನೂ ಮಾಡಲಾಗುತ್ತಿದೆ. ಕೆಲವೊಮ್ಮೆ ಇದಕ್ಕೆ ಪ್ರತಿರೋಧವಾಗಿ ಜೈಭೀಮ್‌, ಶರಣ್ರೀ, ನಮಸ್ಕಾರ್ರಿ ಇಂತಹ ಪ್ರತಿಆಚಾರಗಳೂ ಇಲ್ಲಿ ಚಾಲ್ತಿಗೆ ಬಂದಿವೆ. ಆದರೂ ಅವುಗಳಿಗೆ ಅಷ್ಟಾಗಿ ಪ್ರಾಶಸ್ತ್ಯ ಇಲ್ಲ. ಬಹುಸಂಖ್ಯಾತ ಅಪೇಕ್ಷೆ ಏನಿದೆಯೋ ಅದನ್ನೆ ಮುಂದು ಮಾಡುವುದು ಎಲ್ಲ ಸಮಾಜಗಳಲ್ಲು ನಡೆಯುವ ಬಹುಸಂಖ್ಯಾತ ರಾಜಕಾರಣವೆ ಅಲ್ಲವೆ?

ಮುನ್ನೂರು ರಾಮಾಯಣಗಳು: ಬಹುತ್ವದ ಸಂಕಥನ

ನಮ್ಮಲ್ಲಿ ಒಂದು ರಾಮನನ್ನು, ಒಂದು ರಾಮಾಯಣವನ್ನು ನೆಲೆಗೊಳಿಸುವ ಕೆಲಸ ನಡೆಯುವಾಗಲೆ ಅದು ಭಿನ್ನ ಕಾಲದಗಳಲ್ಲಿ, ಭಿನ್ನ ಪ್ರದೇಶಗಳಲ್ಲಿ, ಭಿನ್ನ ಭಾಷೆ, ಆಲೋಚನೆ, ಆಚಾರಗಳಲ್ಲಿ ಭಿನ್ನವಾಗಿ ಕಥನ ಆಗುತ್ತಲೆ ಬಂದಿದೆ. ರಾಮಾಯಣ ಎಂದರೆ ಏಕಾಕಾರದ ಸಂಕಥನವಲ್ಲ; ಬಹುತ್ವದ ಸಂಕಥನ. ಹಾಗಾಗಿಯೆ ಇಲ್ಲಿ ನೂರಾರು ರಾಮಾಯಣಗಳು ಸಂಭವಿಸಿವೆ. ಡಾ. ಎ.ಕೆ.ರಾಮಾನುಜನ್‌ ಇಂತಹ ಮುನ್ನೂರು ರಾಮಾಯಣಗಳು ಇವೆ ಎಂದು ತಮ್ಮ ಒಂದು ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಇಂತಹ ಬಹುತ್ವದ

ಕಥನವನ್ನು ಒಪ್ಪುವುದಕ್ಕೆ ನಮ್ಮಲ್ಲಿ ಸಹನೆ ಇಲ್ಲ. ಯಾಕೆಂದರೆ ಇದರಿಂದ ಅಧಿಕಾರಕ್ಕೆ ಪೆಟ್ಟು ಬೀಳುತ್ತದೆ. ಹಾಗಾಗಿಯೆ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದ್ದ ಈ ಲೇಖನವನ್ನು ಪಠ್ಯಕ್ರಮದಿಂದ ಕೈಬಿಡಲು ನಿರ್ಧರಿಸಲಾಗುತ್ತದೆ. ಪಕ್ಷಭಕ್ತಿಗೆ ಒಬ್ಬ ದೇವರು ಮಾತ್ರ ಬೇಕಿರುವಾಗ ಆ ಒಬ್ಬನೆ ಬಹುದೇವರುಗಳಾದರೆ ತೊಂದರೆಯಲ್ಲವೆ!

ದಶಾವತಾರದ ಕಲ್ಪನೆಯ ಭಾಗವಾಗಿ ಈ ಪ್ರದೇಶದಲ್ಲಿ ಕಾಲಕಾಲಕ್ಕೆ ಜನಿಸಿದ ಎಲ್ಲ ಮಹಾತ್ಮರನ್ನೂ ಒಂದು ಧಾರ್ಮಿಕ ನೆಲೆಗಟ್ಟಿಗೆ ತಂದುಕೊಳ್ಳುವ ಕೆಲಸ ನಿರಂತರವಾಗಿ ಇಲ್ಲಿ ಆಗುತ್ತ ಬಂದಿದೆ. ಹಾಗೇ ಒಂದೊಮ್ಮೆ ಇದ್ದ ಒಬ್ಬ ಸಾಮಾನ್ಯ ರಾಜನ ಕಥನವನ್ನು ರಾಮಾಯಣ ಮಾಡಿ ಆ ರಾಮನನ್ನು ವಿಷ್ಣುವಿನ ಅವತಾರ ಎಂದು ಇಲ್ಲಿ ಕಥಿಸಲಾಗಿದೆ. ಇದರ ಭಾಗವಾಗಿ ಬುದ್ಧನನ್ನೂ ದಶಾವತಾರದ ಒಳಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನು ಯಾರು ಯಾರು ಅವತಾರದ ಒಳಕ್ಕೆ ಬರುತ್ತಾರೊ ನೋಡಬೇಕಿದೆ.

ಗಂಡಾಳಿಕೆಯ ಸಂಕಥನ

ಸಮಾಜದಲ್ಲಿನ ಹಲವರ ಜೀವನಗಳ ಹಲವು ಪ್ರಸಂಗಗಳನ್ನು ಆಯ್ದು, ಕಲ್ಪಿಸಿ, ಜೋಡಿಸಿ ಅದನ್ನು ಒಂದು ಕಥನವನ್ನಾಗಿ ಕಟ್ಟಿ ಅದರ ಮೂಲಕ ಕೆಲವು ಮೌಲ್ಯಗಳನ್ನು ಸ್ಥಾಪಿಸುವುದು ನಮ್ಮ ಅನಾದಿಯಾದ ಸಾಹಿತ್ಯ ರಾಜಕಾರಣವಾಗಿದೆ. ರಾಮಾಯಣ ಕಥನ ಹೀಗೆ ಹಲವು ಬಗೆಯ ರಾಜಕಾರಣಗಳ ಸಾಧನವಾಗಿ ಬಳಕೆಯಾಗುತ್ತ ಬಂದಿದೆ. ಅವುಗಳಲ್ಲಿ ಗಂಡಾಳಿಕೆಯನ್ನು ಸಮುದಾಯದ ಪ್ರಜ್ಞೆಯಲ್ಲಿ ಅಲುಗಾಡದಂತೆ ಸ್ಥಾಪಿಸುವ ಕೆಲಸವೂ ಒಂದು. ಅಖಿಲಭಾರತ ಧಾರ್ಮಿಕ ನಾಯಕನಾಗಿ ಮತ್ತು ಅಖಿಲಭಾರತ ಏಕೋದೇವನಾಗಿ ರಾಮನನ್ನು ಸ್ಥಾಪಿಸುವ ರಾಜಕಾರಣದ ಜೊತೆಜೊತೆಗೇ ಪುರುಷಪರವಾಗಿ ಹೆಣ್ಣುಬದುಕನ್ನು ರೂಪಿಸಲು, ಪುರುಷನಿಗೆ ಅಧೀನವಾಗಿ ಹೆಣ್ಣನ್ನು ಇರಿಸಲು ಒಂದು ಮಾದರಿ ಚಾರಿತ್ರಿಕ ಕಥನವಾಗಿ ರಾಮಾಯಣವನ್ನು ಬಳಸುತ್ತ ಬರಲಾಗಿದೆ.

ಕನ್ನಡದಲ್ಲಿ ರಾಮಾಯಣಗಳ ಜೈನಧಾರೆ ಇರಲಿ, ವೈದಿಕ ಧಾರೆ ಇರಲಿ, ಜಾನಪದ ಧಾರೆ ಇರಲಿ, ಆಧುನಿಕ ಧಾರೆ ಇರಲಿ ಎಲ್ಲವೂ ಗಂಡಾಳಿಕೆಯನ್ನು ಸ್ಥಾಪಿಸುವ ಸಾಧನವಾಗಿಯೆ ರಾಮಾಯಣವನ್ನು ಬಳಸುತ್ತ ಬಂದಿರುವುದನ್ನು ಕಾಣಬಹುದು. ರಾಮಚಂದ್ರ ಚರಿತಪುರಾಣ, ಕುಮುದೇಂದು ರಾಮಾಯಣ, ದೇವಪ್ಪಕವಿಯ ರಾಮಾಯಣ, ದೇವಚಂದ್ರ, ಚಂದ್ರಸಾಗರವರ್ಣಿಯರ ರಾಮಾಯಣಗಳೆಲ್ಲವೂ ಇಂಥದ್ದೆ ಕೆಲಸವನ್ನು ಮಾಡುತ್ತ ಬಂದಿವೆ. ಹಾಗೆಯೆ ಲಕ್ಷ್ಮೀಶನ ಸೀತಾಪರಿತ್ಯಾಗ ಪ್ರಸಂಗ, ಮುದ್ದಣದ ರಾಮಾಶ್ವಮೇಧ, ಶ್ರೀರಾಮ ಪಟ್ಟಾಭಿಷೇಕ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಎಲ್ಲವೂ ಅದೇ ಗಂಡಾಳಿಕೆಯ ಸ್ಥಾಪನೆಗೇ ದುಡಿಯುತ್ತವೆ. ಕುವೆಂಪು ರಾಮಾಯಣ ಇದ್ದದ್ದರಲ್ಲಿ ಒಂದೆರಡು ಕಡೆ ಸ್ತ್ರೀಪುರುಷ ಸಮಾನತೆಯ ಹೊಳಹುಗಳನ್ನು ಹೊಂದಿದೆ ಎನ್ನುವದನ್ನು ಬಿಟ್ಟರೆ ಮಿಕ್ಕಂತೆ ಎಲ್ಲ ರಾಮಾಯಣಗಳೂ ಗಂಡಾಳಿಕೆಗೇ ದುಡಿದಿವೆ.

ನಾಗಚಂದ್ರನ ರಾಮಾಯಣವನ್ನು ನೋಡಿದರೆ ಅಲ್ಲಿ ರಾಮ, ಲಕ್ಷ್ಮಣ ಇಬ್ಬರಿಗೂ ಹಲವು ಹೆಂಡತಿಯರು ಇದ್ದಾರೆ. ಅವರ ವನವಾಸ ಯಾತ್ರೆಯು ಒಂದು ರೀತಿಯಲ್ಲಿ ಜೈತ್ರಯಾತ್ರೆಯಾಗಿ ಪರಿವರ್ತನೆ ಆಗುತ್ತದೆ. ಹಲವು ವಿಜಯಗಳ ಸರಮಾಲೆಯಲ್ಲಿ ಕಾಣಿಕೆಯಾಗಿ ಲಕ್ಷ್ಮಣ ಹತ್ತಾರು ಹೆಣ್ಣುಗಳನ್ನು ಪಡೆಯುತ್ತಾನೆ. ಅವರೊಂದಿಗೆಲ್ಲ ಲಕ್ಷ್ಮಣ ಹೇಗೆ ನಡೆದುಕೊಂಡ, ಅವರೆಲ್ಲರನ್ನೂ ಆತ ಮದುವೆ ಆದನೇ? ತನ್ನ ಜೊತೆಯಲ್ಲೆ ಕರೆದುಕೊಂಡು ಹೋದನೆ? ಎನ್ನುವ ವಿವರಗಳು ಕಾವ್ಯಗಳಲ್ಲಿ ಇಲ್ಲವಾದರೂ ಲಕ್ಷ್ಮಣನ ವಿಜಯಕಾಣಿಕೆಗಳಲ್ಲಿ ಹೆಣ್ಣುಗಳ ಮಹಾಪೂರವೆ ಇರುವುದಂತು ನಿಜ. ಲೈಂಗಿಕತೆಯ ಸಂಕಥನದಲ್ಲಿ ಸೀತೆಗೆ ಒಂದು ನ್ಯಾಯವಾದರೆ ರಾಮಲಕ್ಷ್ಮಣರಿಗೆ ಇನ್ನೊಂದೆ ನ್ಯಾಯವಿದೆ. ಸೀತೆ ತನ್ನ ತಪ್ಪು ಇಲ್ಲದೆ ರಾವಣನಿಂದ ಅಪಹರಣಕ್ಕೆ ಒಳಗಾದರೆ ಅಶೋಕವನದ ಏಕಾಂತದಲ್ಲು ರಾಮನನ್ನೆ ನೆನೆಯುತ್ತ, ಅವನ ಬರವಿಗಾಗಿ ಕಾಯುತ್ತ ಇರಬೇಕು? ರಾಮ ಎಷ್ಟಾದರೂ ಮದುವೆ ಆಗಿರಲಿ ತಾನು ಮಾತ್ರ ಏಕಪತ್ನೀವ್ರತಧಾರಿ ಆಗಿ ಬಾಳಬೇಕು.

ಆಕೆ ದೇಹ ಮಾತ್ರ ರಾವಣನಿಗೆ ಕೊಟ್ಟರೆ ಸಾಲದು. ತನ್ನ ಮನಸ್ಸನ್ನೂ ಕೊಡಬೇಕು. ಹಾಗಲ್ಲದೆ ರಾವಣನೂ ಅವಳನ್ನು ಕೂಡುವವನಲ್ಲ. ಅದಕ್ಕೆ ಎಷ್ಟೆ ಒತ್ತಾಯ ಬಂದರೂ ಆಕೆ ಮಾನಸಿಕವಾಗಿ ಚಂಚಲ ಆಗುವಂತಿಲ್ಲ. ಅಂತಹ ʼಪರಿವ್ರತೆʼ ಹೆಣ್ಣಾಗಿ ಸೀತೆಯನ್ನು ಕಲ್ಪಿಸಲಾಗಿದೆ. ಇದು ಕೇವಲ ನಾಗಚಂದ್ರನ ಕಥನ ಮಾತ್ರವಲ್ಲ. ಎಲ್ಲರ ಲೈಂಗಿಕತೆಯ ಸಂಕಥನವೂ ಇದೇ.

ಆಧುನಿಕ ಕನ್ನಡ ರಾಮಾಯಣಗಳಲ್ಲಿ ಅದರಲ್ಲು ಕುವೆಂಪು ರಾಮಾಯಣದಲ್ಲಿ ನೇರವಾಗಿ ರಾಮಲಕ್ಷ್ಮಣರಿಗೆ ಹಲವು ಹೆಂಡತಿಯರು ಇಲ್ಲ. ಆದರೂ ಇಲ್ಲಿನ ಲೈಂಗಿಕತೆಯ ಸಂಕಥನ ರಾಮ-ಲಕ್ಷ್ಮಣ ಮಾದರಿ ಮತ್ತು ರಾವಣ ಮಾದರಿ ಎಂಬ ಎರಡು ಮಾದರಿಗಳನ್ನು ನಮ್ಮೆದುರು ಒಡ್ಡಿ ರಾಮ-ಲಕ್ಷ್ಮಣರ ಮಾದರಿ ಸ್ವೀಕಾರಾರ್ಹ ಎಂದೂ, ರಾವಣ ಮಾದರಿ ನಿರಾಕರಣೀಯ ಎಂದೂ ಹೇಳುತ್ತದೆ. ಹಾಗೆ ಹೇಳುವಾಗ ಹೆಣ್ಣಿನ ಪತಿವ್ರತಾ ಪಾತ್ರವನ್ನೂ ಸೂಕ್ಷ್ಮವಾಗಿ ಮಂಡಿಸುತ್ತದೆ. ರಾಮನ ಪಾದದ ಧೂಳನ್ನು ಸೀತೆ ತಲೆಮೇಲೆ ಧರಿಸುವುದು, ರಾವಣನನ್ನು ಶಿಶುವಾಗಿ ಭಾವಿಸಿ ತಾನು ತಾಯಾಗಿ ಅವನ ಮನಸ್ಸನ್ನು ಪರಿವರ್ತಿಸಲು ಯತ್ನಿಸುವುದು ಇವೆಲ್ಲವೂ ಸೀತೆಯ ಪಾತಿವ್ರತ್ಯದ, ಲೈಂಗಿಕತೆಯ ಸಂಕಥನಗಳೆ.

ತೌಲನಿಕವಾಗಿ ಶೂರ್ಪನಖಿ ಮತ್ತು ಸೀತೆಯರ ಪಾತ್ರಗಳನ್ನು ಎದುರು ಬದುರು ನಿಲ್ಲಿಸಿದರೆ ನಮಗೆ ಅಚ್ಚರಿ ಆಗುತ್ತದೆ. ಉದ್ದಕ್ಕು ನಮ್ಮಲ್ಲಿ ಶೂರ್ಪನಖಿ ನಿರಾಕರಣೀಯ ಮಾದರಿ ಆಗಿಯೂ, ಸೀತೆ ಅನುಕರಣೀಯ ಮಾದರಿ ಆಗಿಯು ಚಿತ್ರಿತ ಆಗಿದ್ದಾರೆ. ಹೆಣ್ಣು ತಾನಾಗೆ ಗಂಡನ್ನು ಬಯಸಿ ಬಂದರೂ ಶೂರ್ಪನಖಿಯ ವಿಚಾರದಲ್ಲಿ ರಾಮಲಕ್ಷ್ಮಣರು ಆಕೆಯನ್ನು ಹೊಂದುವಂತಿಲ್ಲ. ಪ್ರೀತಿಸುವಂತಿಲ್ಲ. ಯಾಕೆಂದರೆ ಆಕೆ ಶೂರ್ಪನಖಿ. ವೃತ್ತಿಯಲ್ಲಿ ಕ್ಷತ್ರಿಯಳಾದರೂ ಜಾತಿಯಲ್ಲಿ ಆಕೆ ರಕ್ಕಸಿ. ಹಾಗಾಗಿ ಅವಳ ಪ್ರೀತಿ ವರ್ಜ್ಯ.

ಗಂಡನಿಗೆ ಎಲ್ಲ ಹೆಂಡತಿಯರೂ ಲೈಂಗಿಕವಾಗಿ ನಿಷ್ಠರಾಗಿ ಇರಬೇಕು ಎಂದು ನಮ್ಮ ಸಮಾಜ ಭಾವಿಸುತ್ತದೆ. ʼಪರಪುರುಷʼ ಒಬ್ಬಳನ್ನು ಅಪಹರಿಸಿಕೊಂಡು ಹೋದಾಗ, ಅವನ ವಶದಲ್ಲಿ ಆಕೆ ಹಲವು ಕಾಲ ಇದ್ದಾಗ ಅವನು ಇವಳನ್ನು ಲೈಂಗಿಕಭೋಗಕ್ಕೆ ಗುರಿಪಡಿಸಿಲ್ಲ ಎಂದು ನಮ್ಮ ಸಮಾಜ ನಂಬುವುದೆ ಇಲ್ಲ. ಅಪಹರಣಕಾರ ಆಕೆಯನ್ನು ಸಂಭೋಗಿಸಲೇಬೇಕಿಲ್ಲ, ಅವನು ಆಕೆಯ ದೇಹವನ್ನು ಸ್ಪರ್ಶಿಸಿದರೂ ಸಾಕು, ಅದೂ ಲೈಂಗಿಕ ಬಳಕೆಯೆ. ನಮ್ಮ ಸಮಾಜ ಇದರಲ್ಲಿ ಹೆಣ್ಣಿನ ತಪ್ಪು ಏನಿದೆ ಎಂದು ನೋಡುವುದಿಲ್ಲ. ಅಂಥವಳನ್ನು ಗಂಡ ತ್ಯಜಿಸಬೇಕು ಎಂದೇ ನಮ್ಮ ಸಮಾಜ ಬೋಧಿಸುತ್ತದೆ. ಮುನ್ನೂರು ರಾಮಾಯಣಗಳಲ್ಲ, ಎಷ್ಟೆ ಸಾವಿರಾರು ರಾಮಾಯಣಗಳು ಹುಟ್ಟಿರಲಿ ಎಲ್ಲೂ ರಾಮ ಸೀತೆಯನ್ನು ಪರಿತ್ಯಾಗ ಮಾಡದೆ ಬಾಳಿಸಿದ ಕಥನಗಳೇ ಹುಟ್ಟಿಲ್ಲ. ಇದೇ ನಮ್ಮ ಸಮಾಜದ ಗಂಡಾಳಿಕೆಯ ಸಂಕೇತ.

ಗಂಡಾಳಿಕೆಗೆ ಸ್ತ್ರೀ ಲೈಂಗಿಕತೆಯನ್ನು ಒಗ್ಗಿಸುವ ಪರಂಪರೆ

ಇಡೀ ರಾಮಾಯಣಗಳ ಪರಂಪರೆಯನ್ನು ನೋಡಿದರೆ ಎಲ್ಲ ರಾಮಾಯಣಗಳಲ್ಲು ಸೀತೆಯು ಒಂದಲ್ಲ ಒಂದು ಬಗೆಯಲ್ಲಿ ಮರುಜನ್ಮ ಪಡೆಯುತ್ತಾಳೆ. ಜೈನರಾಮಾಯಣಗಳಲ್ಲಿ ಸೀತೆಯ ನಾಲ್ಕೈದು ಜನ್ಮಗಳಲ್ಲಿ ತೊಳಲಿ ಬರುವುದು ಅಂದರೆ ಭವಾವಳಿಗಳಲ್ಲಿ ಹಾದು ಬರುವುದು ಚಿತ್ರಿತವಾಗಿದ್ದರೆ; ಇತರ ರಾಮಾಯಣಗಳಲ್ಲಿ ಸೀತೆ ಒಂದೊಂದರಲ್ಲು ಒಂದೊಂದು ರೀತಿಯ ಮರುಹುಟ್ಟನ್ನು ಪಡೆಯುತ್ತಾಳೆ. ಇಲಿರುವ ಎಲ್ಲ ಹೆಣ್ಣುಗಳೂ ಹಾಗೆ ಮರುಹುಟ್ಟನ್ನು ಪಡೆಯುತ್ತಾರೆ. ಉದಾಹರಣೆಗೆ ಮಂಡೋದರಿ ಗುಣ ಸ್ವಭಾವಗಳು ಒಂದು ರಾಮಾಯಣದಲ್ಲಿ ಇದ್ದ ಹಾಗೆ ಇನ್ನೊಂದು ರಾಮಾಯಣದಲ್ಲಿ ಇಲ್ಲ. ಎಲ್ಲ ಕಡೆಯೂ ಗಂಡಾಳಿಕೆಗೆ ಸ್ತ್ರೀ ಲೈಂಗಿಕತೆಯನ್ನು ಒಗ್ಗಿಸುವ ಸಾಧನವಾಗಿ ರಾಮಾಯಣ ಕಥನವನ್ನು ನಿರಂತರ ಬಳಸಲಾಗಿದೆ.

ಜೈನರಾಮಾಯಣಗಳನ್ನು ನೋಡಿದರೆ ಅಲ್ಲಿ ಸ್ತ್ರೀ ನಡವಳಿಕೆಗಳು ಆದಿಪ್ರತೀಕಗಳ ಹಾಗೆ ಕಾಣುತ್ತವೆ. ಆನಂತರ ಬರುಬರುತ್ತ ಅವು ಹೆಚ್ಚು ಹೆಚ್ಚು ಪಾಲಿಶ್‌ ಆಗಿ ಗಂಡಾಳಿಕೆಗೆ ಒಗ್ಗಿಸಲ್ಪಟ್ಟ ವ್ಯಕ್ತಿತ್ವಳಾಗಿ ಕಾಣುತ್ತವೆ. ಉದಾಹರಣೆಗೆ ರಾಮಚಂದ್ರಚರಿತಪುರಾಣ ಮತ್ತು ಕುಮುದೇಂದು ರಾಮಾಯಣಗಳ ಸೀತಾ ಭವಾವಳಿಗಳನ್ನು ನೋಡಬಹುದು:

ಅಲ್ಲಿ ಸೀತೆಯು ತನ್ನ ಮೊದಲಿನ ಜನ್ಮದಲ್ಲಿ ಸರಸೆ ಆಗಿ ಹುಟ್ಟಿ ತಾನು ಕಟ್ಟಿಕೊಂಡ ಗಂಡನನ್ನು ಬಿಟ್ಟು ಕಯ ಎಂಬ ವಿಟಪುರುಷನ ಜೊತೆ ಓಡಿಹೋಗುತ್ತಾಳೆ. ಆನಂತರದ ಜನ್ಮದಲ್ಲಿ ಚಿತ್ರೋತ್ಸವೆ ಆಗಿ ಹುಟ್ಟಿ ತನ್ನ ಹಳೆ ಜನ್ಮದ ಪ್ರೊಯಕರನನ್ನೆ ಮದುವೆ ಆಗುತ್ತಾಳೆ. ಕಪಿಲನಾಗಿ ಮರುಹುಟ್ಟು ಪಡೆದ ಕಯನೆ ಚಿತ್ರೋತ್ಸವೆಯನ್ನು ಪ್ರೀತಿಸಿ ಓಡಿಸಿಕೊಂಡು ಹೋಗುತ್ತಾನೆ. ಆದರೂ ಸರಸೆಯ ಜನ್ಮದ ಗಂಡನು ಈ ಜನ್ಮದಲ್ಲಿ ಮತ್ತೆ ಕುಂಡಲಮಂಡಿತ ಎಂಬ ಹೆಸರಿನಿಂದ ಹುಟ್ಟಿ ಚಿತ್ರೋತ್ಸವೆಯನ್ನು ಕಪಿಲನಿಂದ ಬಿಡಿಸಿ ತಾನೆ ಮದುವೆ ಆಗುತ್ತಾನೆ. ಆನಂತರ ತನ್ನ ಮುಂದಿನ ಜನ್ಮದಲ್ಲಿ ಚಿತ್ರೋತ್ಸವೆಯು ಸೀತೆಯಾಗಿ ಜನಕನಿಗೆ ಹುಟ್ಟುತ್ತಾಳೆ. ಅಂದರೆ ಸೀತೆಯು ತನ್ನ ಮೊದಲಿನ ಜನ್ಮದಲ್ಲಿ ವಿಟನ ಹಿಂದೆ ಹೋದವಳು; ಎರಡನೆ ಜನ್ಮದಲ್ಲಿ ಪ್ರೇಮಿಸಿದ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆ ಆದವಳು. ಆದರೆ ಸೀತಾಜನ್ಮದಲ್ಲಿ ರಾಮನನ್ನು ಮದುವೆಯಾಗಿ ಅವನೊಬ್ಬನಿಗೆ ಮಾತ್ರ ನಿಷ್ಠಳಾಗಿ ಇದ್ದವಳು. ಅಂದರೆ ಲೈಂಗಿಕ ಸ್ವೇಚ್ಛೆಯ ಸ್ಥಿತಿಯಿಂದ ದಾಂಪತ್ಯ ನಿಷ್ಠೆಯ ಕಡೆಗೆ ಪಯಣಿಸಿದ ಹೆಣ್ಣಾಗಿ ಸೀತೆಯನ್ನು ಜೈನ ರಾಮಾಯಣಗಳು ಚಿತ್ರಿಸಿವೆ.

ಸೀತೆಯ ಸಂಕಥನ ಮಾತ್ರವಲ್ಲ; ರಾಮಾಯಣದ ಬಹುಪಾಲು ಎಲ್ಲ ಸ್ತ್ರೀಪಾತ್ರ ಸಂಕಥನಗಳೂ ಪುರುಷಪರವಾದ ಹೆಣ್ತನದ ಕಲ್ಪನೆಯನ್ನು ಪ್ರತಿಪಾದಿಸುವ ಸಾಧನಗಳಾಗಿ ಬಳಕೆ ಆಗಿವೆ. ದಾಂಪತ್ಯ, ತಾಯ್ತನ, ಕೌಟುಂಬಿಕತೆ, ಲೈಂಗಿಕತೆ ಎಲ್ಲವೂ ಪುರುಷಪರ ಆಗಿಯೆ ಕಥಿಸಲ್ಪಟ್ಟಿವೆ. ಪತಿನಿಷ್ಠೆಯ ಪರಾಕಾಷ್ಠದ ಮಾದರಿಯಾಗಿ ಸೀತೆ ಒಂದು ಕಡೆ ಚಿತ್ರಿತವಾಗಿದ್ದರೆ; ಗಂಡನ ಸಂತೋಷಕ್ಕಾಗಿ ಏನನ್ನು ಬೇಕಾದರೂ ಮಾಡಬಲ್ಲವಳೆ ಪತಿವ್ರತೆ ಎಂಬಂತೆ ಮಂಡೋದರಿ ಚಿತ್ರಿತ ಆಗಿದ್ದಾಳೆ.

ಮಹಿಳೆಯರ ಅಪರಾಧೀಕರಣ

ಸೀತೆಯು ರಾವಣನಿಂದ ಅಪಹರಣಕ್ಕೆ ಗುರಿಯಾಗಲು ಐದು ಮುಖ್ಯ ಕಾರಣಗಳನ್ನು ಬಹುಪಾಲು ಎಲ್ಲ ರಾಮಾಯಣಗಳೂ ಗುರ್ತಿಸುತ್ತವೆ. ೧. ಆಕೆ ಸುಂದರವಾಗಿರುವುದು. ೨. ಆಕೆ ಮಾಯಾಜಿಂಕೆಯನ್ನು ಅಪೇಕ್ಷಿಸಿದುದು. ೩. ತನ್ನ ಕಾವಲಿಗೆ ಇದ್ದ ಲಕ್ಷ್ಮಣನನ್ನು ಶಂಕಿಸಿದುದು. ೪. ಲಕ್ಷ್ಮಣ ಹಾಕಿದ ರೇಖೆಯನ್ನು ದಾಟಿದುದು. ೫. ರಾಮಲಕ್ಷ್ಮಣರು ಶೂರ್ಪನಖಿಯನ್ನು ಅವಮಾನಿಸಿದುದು. ಮೊದಲ ನಾಲ್ಕೂ ಕಾರಣಗಳು ನೇರವಾಗಿ ಸೀತೆಯನ್ನುಅಪರಾಧಿ ಎಂದು ಘೋಷಿಸುತ್ತವೆ.

ಆಕೆ ಸುಂದರಿ ಆಗಿರುವುದೆ ಆಕೆಯ ಅಪಹರಣಕ್ಕೆ ಕಾರಣವಂತೆ! ಶೂರ್ಪನಖಿ ರಾವಣನಿಗೆ ಸೀತೆ ಬಹಳ ಸುಂದರಿ ಆಕೆಯನ್ನು ಅಪಹರಿಸು ಎಂದು ಹೇಳುತ್ತಾಳೆ. ಹೆಣ್ಣೊಬ್ಬಳು ಗಂಡಿನ ಕಣ್ಣಿಗೆ ಸುಂದರವಾಗಿ ಕಾಣುವುದೆ ಅವಳನ್ನು ಆತ ಲೈಂಗಿಕವಾಗಿ ಬಯಸಲು ಕಾರಣವಾಗುತ್ತದೆ. ಇದೆಂಥ ನಡೆ. ಇದೆಂಥ ಭಾವನೆ. ಇಂದಿಗು ನಮ್ಮ ಗಂಡುಮನಸ್ಸನ್ನು ನಾವು ಕಟ್ಟುತ್ತ ಬಂದಿರುವುದೆ ಲೈಂಗಿಕ ಅಪಸವ್ಯಗಳ ಮೂಲಕ. ಯಾರಾದರು ಒಬ್ಬಳು ʼಸುಂದರʼ ಹೆಣ್ಣನ್ನು ನೋಡಿದ ನಮ್ಮ ಬಹುಪಾಲು ಗಂಡಸರು ಇಂದಿಗು ʼಏ ಸಕತ್ತಾಗೌಳಮ್ಮʼ ಎನ್ನುತ್ತಾರೆ. ಆಕೆಯನ್ನು ಕಣ್ಣಲ್ಲೆ ನಗ್ನಗೊಳಿಸಿ ತಮ್ಮ ಹಾಸಿಗೆಯಲ್ಲಿ ಕಲ್ಪಿಸಿಕೊಳ್ಳುತ್ತಾರೆ. ದುರಂತವೆಂದರೆ ನಮ್ಮ ಸಮಾಜದ ಲೈಂಗಿಕ ಕಟ್ಟುಪಾಡುಗಳೆ ಹೆಣ್ಣನ್ನು ಲೈಂಗಿಕ ಹಿಂಸೆಗೆ ನೂಕುವಂತೆ ಇವೆ.

ಆಕೆ ಮಾಯಾಜಿಂಕೆಯನ್ನು ಬಯಸದೆ ಇದ್ದರೆ ಆಕೆ ಆ ಅಪಾಯಕ್ಕೆ ಗುರಿಯಾಗುತ್ತ ಇರಲಿಲ್ಲ; ಅವಳು ಅದು ರಕ್ಕಸಮಾಯೆ ಎಂದು ಗ್ರಹಿಸದೆ ಹೋದಳಲ್ಲ! ಅದನ್ನವಳು ಬಯಸಲೆ ಬಾರದಿತ್ತು. ಹಾಗೆ ಬಯಸಿದ್ದೆ ತಪ್ಪು. ಅವಳ ಅಪಹರಣಕ್ಕೆ ಅವಳೇ ಕಾರಣ ಎಂದೂ ಕಾವ್ಯಗಳು ಅವಳನ್ನು ದೂರುತ್ತವೆ. ಅಲ್ಲದೆ ಹಾಗೊಂದು ವೇಳೆ ಬಯಸಿದ್ದರೂ ಆಕೆ ಲಕ್ಷ್ಮಣನನ್ನು ಅನುಮಾನಿಸಬಾರದಿತ್ತು; ರಾಮನನ್ನು ಕೊಲೆಗೆ ತಳ್ಳಿ ನನ್ನನ್ನು ನಿನ್ನ ಪತ್ರಿಯಾಗಿ ಹೊಂದಲು ಯೋಜಿಸಿದ್ದೀಯಾ ಎಂದು ಸ್ವತಃ ತನ್ನ ಮೈದುನನನ್ನೆ ಶಂಕಿಸಬಾರದಿತ್ತು. ಆ ಮೂಲಕ ತನ್ನ ರಕ್ಷಣೆಗೆಂದೆ ಇದ್ದ ಲಕ್ಷ್ಮಣನನ್ನು ದೂರ ಕಳಿಸಬಾರದಿತ್ತು. ಆಕೆ ಮೂಲತಃ ದಡ್ಡಿ. ಶಂಕಾಕುಲೆ. ಹೆಣ್ಣುಗಳೇ ಹೀಗೆ ಬುದ್ಧಗೇಡಿಗಳು, ಸಂಕಾಕುಲಿಗಳು, ಅಪಾಯವನ್ನು

ತಾವಾಗಿಯೆ ಆಹ್ವಾನಿಸಿಕೊಳ್ಳುತ್ತಾರೆ ಇತ್ಯಾದಿಯಾಗಿ ಕಾವ್ಯಗಳು ಸೀತೆಯನ್ನಷ್ಟೆ ಅಲ್ಲ ಇಡೀ ಹೆಣ್ಣುಕುಲವನ್ನೆ ಈ ನೆಪದಲ್ಲಿ ಅಪರಾಧೀಕರಣ ಮಾಡುತ್ತವೆ. ಹಳಿದು ನಿಂದಿಸುತ್ತವೆ.

ಏನೇ ಆಗಲಿ ಕೊನೆಗೆ ಲಕ್ಷ್ಮಣ ಹಾಕಿ ಹೋದ ಗೆರೆಯನ್ನಾದರೂ ಸೀತೆ ದಾಟಬಾರದಾಗಿತ್ತು ಎಂದೂ ಕಾವ್ಯಗಳು ವಾದಿಸುತ್ತವೆ. ಗಂಡಸು ಮನೆಯಲ್ಲಿ ಇಲ್ಲದಿರುವಾಗ ಹೆಣ್ಣಾದವಳು ಹೊಸಿಲು ದಾಟಬಾರದು ಎಂಬ ಮೌಲ್ಯವನ್ನು ಪ್ರತಿಪಾದಿಸುವ ಕಥನ ಗಂಡಸರಿಗೆ ಬಹಳ ಪ್ರಯೋಜನಕಾರಿ. ಹಾಗಾಗಿಯೆ ಈ ಕಥನ ಮತ್ತೆ ಮತ್ತೆ ಕಥಿಸಲ್ಪಟ್ಟಿದೆ. ಒಮ್ಮೆ ಪರಪುರುಷರ ಎದುರಿಗೆ ಹೊಸಿಲು ದಾಟಿದರೆ ಹೆಣ್ಣಿಗೆ ಯಾವ ಗತಿ ಬರುತ್ತದೆ ಎಂಬ ಭಯವನ್ನು ಹುಟ್ಟಿಸಲು ಈ ಕಥನ ಬಳಕೆ ಆಗುತ್ತ ಬಂದಿದೆ. (ಈಗ ಕರ್ನಾಟಕದ ಸರ್ಕಾರಿ ಕೆಂಪು ಬಸ್ಸುಗಳಲ್ಲಿ ಹೆಂಗಸರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಅದಕ್ಕೆ ಗಂಡಸರಿಗೆಲ್ಲ ಉರಿ ಹತ್ತಿದೆ.) ಗಂಡು ಗೆರೆ ಹಾಕುವುದು ಮತ್ತು ಹೆಣ್ಣು ಅದನ್ನು ದಾಟದೆ ಇರುವುದು ಒಂದು ಸಂಕೇತವೆ ಆಗಿಬಿಟ್ಟಿದೆ. ಮನೆ ಮತ್ತು ಮನೆಯ ಆವರಣವೆ ಹೆಣ್ಣಿಗೆ ಒಂದು ಗೆರೆ. ಅದನ್ನ ಆಕೆ ಸುಲಭವಾಗಿ ದಾಟುವಂತಿಲ್ಲ. ಈ ಕ್ಷೇತ್ರ, ಆವರಣ ಗಂಡಿನ ಹಾಜರಿಯಲ್ಲಿ ವಿಸ್ತರಣೆ ಆಗುತ್ತ ಹೋಗುತ್ತದೆ.

ಗೆರೆಗಳು ಹೆಣ್ಣಿಗೆ ಭೌತಿಕವಾಗಿ ಇರಬೇಕಾಗಿಯೆ ಇಲ್ಲ. ಅವು ಮಾನಸಿಕವಾಗಿ ಸ್ಥಾಪಿತ ಆಗಿರುತ್ತವೆ. ಎಲ್ಲಿ ಹೇಗೆ ಇರಬೇಕು, ಹೇಗೆ ಮಾತಾಡಬೇಕು, ಹೊರಗೆ ಹೋದರೂ ಹೆಣ್ಣು ಎಷ್ಟು ಹೊತ್ತಿಗೆ ಮನೆಗೆ ಬರಬೇಕು? ಯಾರೊಂದಿಗೆ ಎಷ್ಟು ಮಾತಾಡಬೇಕು, ಎಷ್ಟು ನಗಬೇಕು, ಎಷ್ಟು ದುಃಖಿಸಬೇಕು ಎಂಬಿತ್ಯಾದಿ ನೂರಾರು ಗೆರೆಗಳು ಮನಸ್ಸಿನ ಒಳಗೇ ಇರುತ್ತವೆ. ಇಂತಹ ಗೆರೆಗಳನ್ನು ಮನದಲ್ಲಿ ಕೊರೆಯುವ ಹಲವು ಕಥನಗಳು ನಮ್ಮಲ್ಲಿ ಸೃಷ್ಟಿಯಾಗಿವೆ. ಇಂತಹ ಸಾಧನಕಥನ ಆಗಿಯೆ ರಾಮಾಯಣ ಮತ್ತೆ ಮತ್ತೆ ನಮ್ಮಲ್ಲಿ ಬಳಕೆ ಆಗುತ್ತ ಬಂದಿದೆ. ಅದರಿಂದಾಗಿಯೆ ನಮ್ಮಲ್ಲಿ ಹೆಂಗಸರು ರಾಮಾಯಣ ಬರೆದರೂ ಅವು ಗಂಡಸರ ರಾಮಾಯಣಗಳಂತೆಯೆ ಇವೆ!

ಇನ್ನು ರಾಮಲಕ್ಷ್ಮಣರು ಶೂರ್ಪನಖಿಯನ್ನು ಅವಮಾನಿಸಿದ ಪ್ರಸಂಗವಂತೂ ಹಲವು ಪಾಠಾಂತರಗಳಲ್ಲಿ ಹಲವು ಕಾವ್ಯಗಳಲ್ಲಿ ಕಥನಗೊಂಡಿದೆ. ಕಾವ್ಯಗಳ ಪ್ರಕಾರ ಶೂರ್ಪನಖಿಯ ವರ್ತನೆ ಒಂದು ಉದ್ದೇಶಿತ ವರ್ತನೆ. ಆದರೆ ಲಕ್ಷ್ಮಣನ ವರ್ತನೆ ಉದ್ದೇಶಿತ ಅಲ್ಲ. ಅದು ಆಕಸ್ಮಿಕ. ಶೂರ್ಪನಖಿ ರಾಮನನ್ನು ಬಯಸುವುದು ಆತ ಸುಂದರ ಮತ್ತು ಪರಾಕ್ರಮಿ ಎಂಬ ಕಾರಣಕ್ಕೆ. ಅಲ್ಲದೆ ಆಕೆಯ ಬಯಕೆಗೆ ತಾನು ವಿಧವೆ ಎಂಬ ಕಾರಣವೂ ಇದೆ. ಆದರೆ ಆಕೆ ಅವರನ್ನು ಬಯಸಿದುದೆ ತಪ್ಪು ಎಂಬಂತೆ ಕಾವ್ಯಗಳು ಕಥಿಸಿವೆ. ಯಾಕೆಂದರೆ ಅವರು ಆಕೆಗೆ ಪರಪುರುಷರು. ಆದ್ದರಿಂದ ಆಕೆ ಅವರನ್ನು ಬಯಸಬಾರದಾಗಿತ್ತು. ಆದರೂ ಆಕೆ ಬಯಸಿದ್ದರಿಂದ ಅಪಾಯಗಳ ಸರಮಾಲೆಯೆ ಸೃಷ್ಟಿಯಾಗುತ್ತದೆ.

ನಾಗಚಂದ್ರ ಮತ್ತು ಕುಮುದೇಂದು ರಾಮಾಯಣಗಳಲ್ಲಿ ಶಂಭೂಕ ಶೂರ್ಪನಖಿಯ ಮಗ. ಆತ ಕಾಡಿನಲ್ಲಿ ಒಂದು ಬಿದಿರುಮೆಳೆ ನಡುವೆ ತಪಸ್ಸು ಮಾಡುವಾಗ ಲಕ್ಷ್ಮಣ ಆಕಸ್ಮಿಕ ಎಂಬಂತೆ ಆಟಕ್ಕೆ ತನ್ನ ಕತ್ತಿ ಬೀಸಿ ಆತ ಸಾವನ್ನು ಅಪ್ಪುತ್ತಾನೆ. ಅದರ ಪ್ರತೀಕಾರಾರ್ಥವಾಗಿ ಶೂರ್ಪನಖಿ ತನ್ನ ಅಣ್ಣಂದಿರಾದ ಖರ ದೂಷಣರಿಗೆ ದೂರು ಹೇಳಿ ಇವನ ವಿರುದ್ಧ ಯುದ್ಧಕ್ಕೆ ಕಳಿಸಿರುತ್ತಾಳೆ. ಆದರೆ ಯುದ್ಧದಲ್ಲಿ ಅವರು ಹತರಾಗುತ್ತಾರೆ. ಅಲ್ಲದೆ ರಾವಣ ಇವಳ ಗಂಡನನ್ನು ಈಗಾಗಲೆ ಕೊಂದು ಹಾಕಿರುತ್ತಾನೆ. ಹೀಗಾಗಿ ನಿಜವಾದ ಅರ್ಥದಲ್ಲಿ ಶೂರ್ಪನಖಿ ಗಂಡ ಮಗ ಇಬ್ಬರನ್ನೂ ಕಳೆದುಕೊಂಡ ಅನಾಥೆ ಆಗಿರುತ್ತಾಳೆ. ಅವಳ ದುಸ್ಥಿತಿಗೆ ಲಕ್ಷ್ಮಣ, ರಾವಣ ಇಬ್ಬರೂ ಕಾರಣ. ಆದರೆ ಕಾವ್ಯಗಳು ಈ ಇಬ್ಬರಿಗು ಶಿಕ್ಷೆ ನೀಡುವುದಿಲ್ಲ. ಅದರ ಬದಲಿಗೆ ಸೀತೆ ಮತ್ತು ಶೂರ್ಪನಖಿ ಇಬ್ಬರೂ ಅಪರಾಧಿಗಳಂತೆ ಬಿಂಬಿತ ಆಗಿದ್ದಾರೆ!

ಮೇಲ್ನೋಟಕ್ಕೆ ಮೊದಲ ನಾಲ್ಕು ಕಾರಣಗಳು ಸೀತಾ ಸಂಬಂಧಿ ಅನ್ನಿಸುತ್ತವೆ. ಆದರೂ ಐದನೆಯದೂ ಸೀತಾಸಂಬಂಧಿಯೆ. ಹೇಗೆಂದರೆ ರಾಮ ಲಕ್ಷ್ಮಣ ಇಬ್ಬರೂ ಶೂರ್ಪನಖಿಗೆ ಪರಪುರುಷರು ಆದ್ದರಿಂದ ಆಕೆ ಅವರನ್ನು ಲೈಂಗಿಕವಾಗಿ ಬಯಸುವಂತಿಲ್ಲ. ಅಲ್ಲದೆ, ಅವರೂ ಈಕೆಯನ್ನು ಲೈಂಗಿಕವಾಗಿ ಕೂಡುವಂತಿಲ್ಲ. ಗಂಡಸರಿಗು ಲೈಂಗಿಕ ನಿಷ್ಠೆ ಇರಬೇಕಲ್ಲವೆ. ಸೀತೆಯ ಅಪಹರಣದ ಮುಂದಣ ಕಥನದಲ್ಲಿ ಆಕೆ ನಿಷ್ಠಳಾಗಿ ಇರಬೇಕಾದರೆ ಈಗ ಇವರೂ ನಿಷ್ಠರಾಗಿ ಇರಬೇಕಲ್ಲವೆ? ಹಾಗಾಗಿ ಇದು ಸೀತೆಯಿಂದ

ಸ್ವತಂತ್ರ ಕಾರಣವಲ್ಲ. ಒಂದು ವೇಳೆ ಸೀತೆ ಇಲ್ಲದಿದ್ದರೆ? ಆಗ ರಾಮಲಕ್ಷ್ಮಣರಿಗೆ ಲೈಂಗಿಕ ಸ್ವಾತಂತ್ರ್ಯ ಇರುತ್ತಿತ್ತಲ್ಲವೆ? ಇಂಥವೆಲ್ಲ ಚಿಂತನೆಗಳು ಈ ಪ್ರಸಂಗದಿಂದ ಹುಟ್ಟುತ್ತವೆ. ಈ ಪ್ರಸಂಗವು ರಾಮಲಕ್ಷ್ಮಣರನ್ನು ʼಶುದ್ಧʼರೆಂದೂ, ʼಶೌಚʼರೆಂದೂ (ಲೈಂಗಿಕ ನಿಷ್ಠೆ ಉಳ್ಳವರೆಂದೂ) ಪ್ರಮಾಣಪತ್ರ ನೀಡಿದರೆ; ಶೂರ್ಪನಖಿ ಸ್ವೇಚ್ಛಾಚಾರಿ ಎಂದೂ, ಚಂಚಲೆ ಎಂದೂ, ರಕ್ಕಸಿ, ಮಾಯಾವಿ, ತಪ್ಪಿತಸ್ಥೆ ಎಂದೂ ಅಪರಾಧೀಕರಣಕ್ಕೆ ಗುರಿಯಾಗಿದ್ದಾಳೆ.

ಇನ್ನು ಧಾನ್ಯಮಾಲಿನಿ, ಮಂಡೋದರಿ ಇವರ ವಿಚಾರದಲ್ಲಿಯು ಹೀಗೇ ನಡೆದಿದೆ. ಕುಮುದೇಂದು ರಾಮಾಯಣದಲ್ಲಿ ತನ್ನ ಗಂಡನೊಂದಿಗೆ ಸಂಭೋಗಕ್ಕೆ ಒಪ್ಪಿಕೊ ಎಂದು ಪರಿಪರಿಯಾಗಿ ಸೀತೆಯನ್ನು ಬೇಡಿಕೊಳ್ಳುವಂತೆ, ಆಕೆಯ ಮನಃಪರಿವರ್ತನೆ ಮಾಡಲು ಹರಸಾಹಸ ಪಡುವಂತೆ ಮಂಡೋದರಿಯನ್ನು ಚಿತ್ರಿಸಲಾಗಿದೆ. ಸ್ವತಃ ಇನೊಬ್ಬರ ಹೆಂಡತಿಯನ್ನು ತನ್ನ ಗಂಡ ಅಪಹರಿಸಿ ತಂದಾಗ ಯಾವುದೆ ಹೆಂಡತಿಯೊಬ್ಬಳು ಹೀಗೆ ತನ್ನ ಗಂಡನಿಗೆ ಒಲಿಯೆಂದು ಅವಳನ್ನು ತಾನಾಗಿ ಹರಸಾಹಸ ಪಡುವುದಿಲ್ಲ. ಹೆಣ್ಣನ್ನು ಹೀಗೆ ಚಿತ್ರಿಸಿರುವುದು ಗಂಡಸರ ಅಪೇಕ್ಷೆಯೆ ವಿನಃ ಅದು ಹೆಣ್ಣಿನ ಸ್ವಯಂಪ್ರೇರಿತ ವರ್ತನೆಯಲ್ಲ. ಇನ್ನೊಂದು ನೆಲೆಯಲ್ಲಿ ಕುಮುದೇಂದು ರಾಮಾಯಣದ ಈ ಪ್ರಸಂಗವನ್ನು ನೋಡುವುದಾದರೆ ಇದು ಮಂಡೋದರಿಯ ಅಪರಾಧೀಕರಣದಂತೆ ಕಾಣುತ್ತದೆ.

ವೇದವತಿ ಎಂಬ ಹೆಣ್ಣೊಬ್ಬಳನ್ನು ರಾವಣನು ಆಕೆಯ ಗಂಡನನ್ನು ಸೋಲಿಸಿ ಕೊಲ್ಲುವ ಮೂಲಕ ಬಲವಂತವಾಗಿ ತಂದಿರುವ ವಿಚಾರ ಕುವೆಂಪು ರಾಮಾಯಣದಲ್ಲಿ ಬರುತ್ತದೆ. ಜೈನ ರಾಮಾಯಣಗಳಲ್ಲಿಯು ಈ ವಿಚಾರದ ಪ್ರಸ್ತಾಪ ಇದೆ. ಆಕೆಯನ್ನು ಈತ ತನ್ನೊಂದಿಗೆ ಕೂಡು ಎಂದು ಬಲವಂತ ಮಾಡಿದಾಗ ಆಕೆ ಚಿತೆಯೇರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಯಾರೊ ಒಬ್ಬನಿಗೆ ತನ್ನ ಗಂಡ ಸೋತರೆ ಅವನ ಹೆಂಡತಿಯೂ ಗೆದ್ದವನ ಪಾಲಾಗುವುದು ನಮ್ಮ ಚರಿತ್ರೆಯ ಕೆಟ್ಟ ಸಂಪ್ರದಾಯವಾಗಿದೆ. ಹೆಣ್ಣನ್ನು ವಸ್ತುಸಾಮಗ್ರಿಯಂತೆ, ಪರಭಾರೆ ಮಾಡಬಹುದಾದ, ವಶ ಮಾಡಿಕೊಳ್ಳಬಹುದಾದ ಆಸ್ತಿ ಎಂಬಂತೆ ನಮ್ಮಲ್ಲಿ ಹೆಣ್ಣುಗಳನ್ನು ರಾಜಮನೆತನಗಳಲ್ಲಿ ನಡೆಸಿಕೊಂಡು ಬರಲಾಗಿದೆ! ಅದರ ಪುರಾವೆ ಎಂಬಂತೆ ಹಲವು ಕಥನಗಳು ಚರಿತ್ರೆಯಲ್ಲಿ ನಮಗೆ ದೊರಕುತ್ತವೆ.

ಯುದ್ಧದಲ್ಲಿ ಗೆದ್ದಾಗ ಹೆಣ್ಣುಗಳನ್ನು (ತಮ್ಮ ಹೆಣ್ಣುಮಕ್ಕಳನ್ನು) ಕಾಣಿಕೆಯಾಗಿ ಕೊಡುವುದು ನಮ್ಮಲ್ಲಿ ಸಾಮಾನ್ಯವಾಗಿತ್ತು ಎಂದೆ ರಾಮಾಯಣ ಕಾವ್ಯಗಳು ಹೇಳುತ್ತವೆ. ಬಹುಪಾಲು ಎಲ್ಲ ಜೈನ ರಾಮಾಯಣಗಳಲ್ಲು ಇಂತಹ ಹಲವು ಪ್ರಸಂಗಗಳು ಇವೆ. ರಾವಣನಿಗು, ರಾಮನಿಗು, ಲಕ್ಷ್ಮಣನಿಗು ಅವರು ಯುದ್ಧದಲ್ಲಿ ಗೆದ್ದಾಗ ಹಲವು ಹೆಣ್ಣುಗಳನ್ನು ಕಾಣಿಕೆಯಾಗಿ ನೀಡುವ ಇಂತಹ ಹಲವು ಉದಾಹರಣೆಗಳಿವೆ. ಬೇಡರ ದೊರೆಯೊಬ್ಬನ ವಿರುದ್ಧ ಯುದ್ಧದಲ್ಲಿ ಜನಕನಿಗೆ ಸಹಾಯ ಮಾಡಿ ಅವನ ಗೆಲುವಿಗೆ ಕಾರಣರಾದ ಕಾರಣಕ್ಕೆ ರಾಮನಿಗೆ ಸೀತೆಯನ್ನು ಕೊಡುವ ನಿರ್ಧಾರವನ್ನು ಪಂಪರಾಮಾಯಣದಲ್ಲಿ ಜನಕ ಮಾಡುತ್ತಾನೆ. ಆಮೇಲೆ ನಾಮಕೇವಾಸ್ತೆ ಎನ್ನುವ ಹಾಗೆ ಬಿಲ್ಲನ್ನು ಮುರಿಯುವ ಸ್ಪರ್ಧೆ ನಡೆಯುತ್ತದೆ. ಆದಾಗ್ಯೂ ಸೀತೆ ಇಲ್ಲಿ ಪರಾಕ್ರಮಕ್ಕೆ ಕೊಡಮಾಡುವ ಬಹುಮಾನವೆ.

(ಮುಂದುವರೆಯುವುದು...)

ಈ ಅಂಕಣದ ಹಿಂದಿನ ಬರೆಹಗಳು:
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...