ಸಂಪ್ರದಾಯದ ನವೀಕರಣ ಮತ್ತು ತ್ಯಾಗರಾಜ ಎಂಬ ಸಂತ

Date: 08-04-2021

Location: ಬೆಂಗಳೂರು


ಕರ್ನಾಟಕ ಸಂಗೀತದ ಮೂಲಪುರುಷರಲ್ಲಿ ಒಬ್ಬರು ಎಂಬ ಖ್ಯಾತಿಯ ತ್ಯಾಗರಾಜರ ಕುರಿತಾಗಿ ಇತಿಹಾಸಕಾರ ವಿಲಿಯಂ ಜೆ ಜಾಕ್ಸನ್ ಎರಡು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳನ್ನು ಮೂಲವಾಗಿಟ್ಟು ತ್ಯಾಗರಾಜರ ಕುರಿತು ನಡೆದ ಸಂಶೋಧನೆ ಮತ್ತು ಸಂಗೀತ ಕ್ಷೇತ್ರದ ಇತಿಹಾಸವನ್ನು ಲೇಖಕರಾದ ಶೈಲಜ ಹಾಗೂ ವೇಣುಗೋಪಾಲ್ ಅವರು ತಮ್ಮ 'ಸ್ಪರಲಿಪಿ' ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ಸಂಗೀತಕ್ಕೆ, ಸಂತರಿಗೆ ಮತ್ತು ಚರಿತ್ರೆ, ಚಾರಿತ್ರಿಕ ಸನ್ನಿವೇಶಗಳು ಮತ್ತು ವಿದ್ಯಮಾನಗಳಿಗೆ ಸಂಬಂಧವೇ ಇಲ್ಲ ಎನ್ನುವ ಭಾವನೆ ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗಾಗಿಯೇ ನಮ್ಮ ಸಂಗೀತ ಮತ್ತು ಸಂತರಿಗೆ ಸಂಬಂಧಿಸಿದ ಜೀವನಚರಿತ್ರೆಗಳೆಲ್ಲವೂ ಕೇವಲ ಪವಾಡಗಳ ಒಂದು ಸಂಹಿತೆಯಂತೆ ಇರುತ್ತವೆ. ನಮಗೆ ದೊರಕುವ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಅಥವಾ ಪುರಂದರದಾಸರು ಇವರೆಲ್ಲರ ಜೀವನಚರಿತ್ರೆಗಳೂ ಪವಾಡಗಳು, ಅತಿಮಾನುಷ ಘಟನೆಗಳ ಸಂಗ್ರಹದಂತೆಯೇ ಇವೆ. ಇಂತಹ ಕಥನಗಳ ನಡುವೆ ಬೇರೆಯಾಗಿ ನಿಲ್ಲುತ್ತದೆ ವಿಲಿಯಂ ಜಾಕ್ಸನ್ ಅವರ ತ್ಯಾಗರಾಜರ ಜೀವನಚರಿತ್ರೆ ‘ತ್ಯಾಗರಾಜ ಅಂಡ್ ದ ರಿನ್ಯೂಅಲ್ ಆಫ್ ಟ್ರಡಿಷನ್’.

ವಿಲಿಯಂ ಜಾಕ್ಸನ್ ಧರ್ಮವನ್ನು ದಾಖಲಿಸುವ ಇತಿಹಾಸಕಾರ. ತ್ಯಾಗರಾಜರನ್ನು ಕುರಿತ ಅಧ್ಯಯನಕ್ಕೆ ತನ್ನ ಜೀವಿತವನ್ನೇ ಮುಡಿಪಾಗಿಟ್ಟ ಸಂಶೋಧಕ. ತ್ಯಾಗರಾಜರನ್ನು ಕುರಿತ ಅವರ ಎರಡು ಪುಸ್ತಕಗಳು ಗಂಭೀರ ಸಂಶೋಧನಾ ಗ್ರಂಥಗಳೆಂದು ಹೆಸರು ಮಾಡಿವೆ. ಅವರ ಮೊದಲ ಗ್ರಂಥ ತ್ಯಾಗರಾಜ: ಲೈಫ್ ಅಂಡ್ ಲಿರಿಕ್ಸ್ ಮತ್ತು ಎರಡನೆಯದು ತ್ಯಾಗರಾಜ ಅಂಡ್ ದ ರಿನ್ಯೂಅಲ್ ಆಫ್ ಟ್ರಡಿಷನ್: ಟ್ರಾನ್ಸಲೇಷನ್ ಅಂಡ್ ರಿಫ್ಲೆಕ್ಷನ್ಸ್. ಇಲ್ಲಿ ಎರಡನೆಯ ಗ್ರಂಥವನ್ನು ಪರಿಚಯಿಸಲಾಗಿದೆ. ಇದು ಒಂದರ್ಥದಲ್ಲಿ ಮೊದಲನೆಯ ಗ್ರಂಥದ ಮುಂದುವರಿಕೆಯೇ ಆಗಿದೆ. ಈ ಗ್ರಂಥದಲ್ಲಿ ತ್ಯಾಗರಾಜರ ಬದುಕು ಮತ್ತು ಸಂಗೀತವನ್ನು ಅವರ ಕಾಲ, ಸಮಾಜ ಹಾಗೂ ಒಟ್ಟಾರೆ ಸಂದರ್ಭದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಲು ಜಾಕ್ಸನ್ ಪ್ರಯತ್ನಿಸಿದ್ದಾರೆ. ಈ ಗ್ರಂಥದಲ್ಲಿ ಅವರು ಬಳಸಿರುವ ಒಟ್ಟಾರೆ ಕ್ರಮ ಅಂದರೆ, ಸಂಪ್ರದಾಯದಲ್ಲಿನ ಸಾಂಸ್ಕೃತಿಕ ವಿಕಸನವನ್ನು ಹೇಳುವಂತಹ ಪ್ರಮುಖ ಸಾಮಗ್ರಿಗಳನ್ನು ಸಂಗ್ರಹಿಸುವುದು ಮತ್ತು ಅವುಗಳ ಧಾರ್ಮಿಕ ಮಹತ್ವವನ್ನು ಹಾಗೂ ಚಾರಿತ್ರಿಕ ಸಂದರ್ಭವನ್ನು ವಿವರಿಸುವುದು.

ಈ ಪುಸ್ತಕದ ಹೆಸರೇ ಹೇಳುವಂತೆ ಇದು ಒಂದು ರೀತಿಯಲ್ಲಿ ಅನುವಾದ ಹಾಗೂ ಚಿಂತನೆಗಳ ಪುಸ್ತಕ. ಇದೊಂದು ಪ್ರಬಂಧ ಸಂಕಲನದಂತಿದೆ. ಇದರಲ್ಲಿ ತ್ಯಾಗರಾಜರ ಜೀವನಚರಿತ್ರೆ ಮತ್ತು ಸಂಬಂಧಪಟ್ಟ ಇತರ ಬರಹಗಳನ್ನು ಇಂಗ್ಲಿಷಿಗೆ ಅನುವಾದಿಸಲಾಗಿದೆ. ಈ ಪುಸ್ತಕದಲ್ಲಿ ಮೂರು ಭಾಗಗಳಿವೆ.

‘ಗ್ರಾಂಥಿಕ ಪಠ್ಯಗಳು ಮತ್ತು ಪರಂಪರೆಯ ಬೆಳವಣಿಗೆ’ ಎಂಬುದು ಮೊದಲ ಭಾಗ. ಅದರಲ್ಲಿ ನಾಲ್ಕು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ‘ನೌಕಾ ಚರಿತಂ’ ಕೃತಿಯ ಇಂಗ್ಲೀಷ್ ಅನುವಾದ ಮತ್ತು ಅದನ್ನು ಕುರಿತ ವಿವರವಾದ ಚರ್ಚೆಯಿದೆ. ಎರಡನೆಯ ಅಧ್ಯಾಯದಲ್ಲಿ ತ್ಯಾಗರಾಜರನ್ನು ಕುರಿತು ಲಭ್ಯವಿರುವ ಹಲವು ಆರಂಭದ ಜೀವನ ಚರಿತ್ರೆಗಳನ್ನು ಮತ್ತು ಮೂರನೆಯ ಅಧ್ಯಾಯದಲ್ಲಿ ನಂತರದ ಜೀವನಚರಿತ್ರೆಗಳ ಅನುವಾದಗಳನ್ನು ಒಂದೆಡೆ ಕ್ರೋಢಿಕರಿಸಿದ್ದಾರೆ. ತ್ಯಾಗರಾಜರ ಹಿರಿಯ ಶಿಷ್ಯ ವಾಲಾಜಪೇಟೆ ವೆಂಕಟರಮಣ ಭಾಗವತರ್ ಹಾಗೂ ಅವರ ಮಗ ವಾಲಾಜಪೇಟೆ ಕೃಷ್ಣಸ್ವಾಮಿ ಭಾಗವತರ್ ಅವರಿಂದ ಮೊದಲ್ಗೊಂಡು ಬೆಂಗಳೂರು ನಾಗರತ್ನಮ್ಮ ಅವರ 108 ನಾಮಾವಳಿಗಳ ತನಕ ಎಲ್ಲಾ ಪ್ರಮುಖ ಆಕರಗಳನ್ನು ದಾಖಲಿಸಿದ್ದಾರೆ. ಸಂಶೋಧಕರಿಗೆ ಇದೊಂದು ಒಳ್ಳೆಯ ಆಕರ. ಇವುಗಳ ತೌಲನಿಕ ಅಧ್ಯಯನದ ಮೂಲಕ ತ್ಯಾಗರಾಜರ ಜೀವನ ಚರಿತ್ರೆಯನ್ನು ಒಟ್ಟಾರೆಯಾಗಿ ಗಮನಿಸಿದ್ದಾರೆ. ನಾಲ್ಕನೆಯ ಅಧ್ಯಾಯದಲ್ಲಿ ತ್ಯಾಗರಾಜರ ಸಂತಚರಿತೆಯನ್ನು ಹೆಚ್ಚು ವಿಶಾಲವಾದ ಸನ್ನಿವೇಶಗಳಲ್ಲಿ ಇಟ್ಟು ನೋಡಲು ಪ್ರಯತ್ನಿಸಿದ್ದಾರೆ. ಎರಡನೆಯ ಭಾಗದಲ್ಲಿ, ಒಂದು ಪರಂಪರೆ ಪಸರಿಸುವ ಹಿನ್ನೆಲೆಯಲ್ಲಿ ತ್ಯಾಗರಾಜರ ಪರಂಪರೆಯನ್ನು ಗಮನಿಸಿದ್ದಾರೆ. ಹಾಗೆಯೇ ಮೂರನೆಯ ಭಾಗದಲ್ಲಿ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಗಳ ಪ್ರಕ್ರಿಯೆಯನ್ನು ಕುರಿತ ಚಿಂತನೆಯನ್ನು ಕಾಣಬಹುದು.

ನೌಕಾ ಚರಿತಂ

ತ್ಯಾಗರಾಜರು ಪ್ರಹ್ಲಾದ ಭಕ್ತಿ ವಿಜಯ ಮತ್ತು ನೌಕಾ ಚರಿತಂ ಎಂಬ ಎರಡು ಗೇಯ ನಾಟಕಗಳನ್ನು ರಚಿಸಿದ್ದಾರೆ. ತ್ಯಾಗರಾಜರು ಬಳಸಿರುವ ಪ್ರಮುಖ ರೂಪಕಗಳಾದ ದೋಣಿ ಹಾಗೂ ನೀರನ್ನು ಕುರಿತು ಜಾಕ್ಸನ್ ವಿಶದವಾಗಿ ಚರ್ಚಿಸಿದ್ದಾರೆ. ನೌಕಾ ಚರಿತಂ ವಸ್ತುವೇ ವಿಶೇಷವಾಗಿದೆ. ಇಡೀ ಸನ್ನಿವೇಶ ತ್ಯಾಗರಾಜರ ಕಲ್ಪನೆಯ ಕೂಸು. ಕೃಷ್ಣ ಗೋಪಿಯರೊಂದಿಗೆ ಯಮುನಾ ನದಿಯಲ್ಲಿ ನಡೆಸುವ ದೋಣಿವಿಹಾರ ಇದರ ಕಥಾವಸ್ತು. ಬಹುಶಃ ತ್ಯಾಗರಾಜರು ಯಮುನಾ ನದಿಯನ್ನು ನೋಡಿರುವುದು ಕೂಡ ಅನುಮಾನವೇ. ಜಾಕ್ಸನ್ ಮೊದಲಿಗೆ ಇದರ ಇಂಗ್ಲಿಷ್ ಅನುವಾದವನ್ನು ನೀಡಿದ್ದಾರೆ. ನಂತರ ಅದನ್ನು ಕುರಿತು ಚರ್ಚಿಸಿದ್ದಾರೆ. ಹಲವು ಚಿಂತಕರ ಅಭಿಪ್ರಾಯವನ್ನು ಉಲ್ಲೇಖಿಸುತ್ತಾ ಕೃಷ್ಣ ಹಾಗೂ ದೋಣಿಯ ರೂಪಕ ದಕ್ಷಿಣ ಭಾರತಕ್ಕೆ ಪರಿಚಿತವಾದುದಲ್ಲ ಎನ್ನುತ್ತಾರೆ. ಉತ್ತರ ಭಾರತದ ವರ್ಣ ಚಿತ್ರಗಳಲ್ಲಿ ಹಾಗೂ ಬಂಗಾಲದ ಪದ್ಯಗಳಲ್ಲಿ ಇವು ಸಾಮಾನ್ಯವಾಗಿ ಕಾಣುತ್ತವೆ. ಅದು ಯಾವುದೋ ರೂಪದಲ್ಲಿ ತ್ಯಾಗರಾಜರ ಕಲ್ಪನೆಗೆ ಬಂದು ಸೇರಿರಬೇಕು. ಮೀರಾಬಾಯಿ ಹಾಗು ನಮ್ಮಳ್ವಾರ್ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಭಾರತದ ಭಕ್ತಕವಿಗಳ ರಚನೆಗಳಲ್ಲಿ ಅಗಣಿತ ಹುಟ್ಟು ಸಾವುಗಳ ಸಮುದ್ರದಲ್ಲಿ ತೇಲಿಹೋಗುತ್ತಿರುವ ದೋಣಿಯ ಕಲ್ಪನೆ ಬರುತ್ತದೆ. ತ್ಯಾಗರಾಜರಿಗೂ ನೀರಿನ ರೂಪಕ ತುಂಬಾ ಪ್ರಿಯವಾದದ್ದು. ಸಮುದ್ರರಾಜ, ಕರುಣಾಸಾಗರ ಇಂತಹ ಮಾತುಗಳು ಅವರ ಕೃತಿಗಳಲ್ಲಿ ಪದೇ ಪದೆ ಬರುತ್ತವೆ. ನೌಕಾಚರಿತಂನಲ್ಲಿ ಗೋಪಿಯರ ಅಹಂಕಾರವನ್ನು ಮುರಿಯಲು ಕೃಷ್ಣ ಮಾರಣಾಂತಿಕವಾದ ಬಿರುಗಾಳಿಯನ್ನು ಸೃಷ್ಟಿಸುತ್ತಾನೆ. ಅಹಂಕಾರವನ್ನು ಕಳೆದುಕೊಂಡು ಗೋಪಿಯರು ಶರಣಾಗುತ್ತಾರೆ. ಕವಿಯಾಗಿ ತ್ಯಾಗರಾಜರು ಕೂಡ ಕೃಷ್ಣನ ಸ್ನೇಹಿತನಾಗಿ ಈ ಭಕ್ತಿಯಲ್ಲಿ ನೆಮ್ಮದಿ ಕಾಣುತ್ತಾರೆ. ತ್ಯಾಗರಾಜರ ಬಹುಪಾಲು ಕೃತಿಗಳು ರಾಮನ ಸ್ತುತಿಗೆ ಮೀಸಲಾಗಿವೆ.

ತ್ಯಾಗರಾಜರ ಜೀವನ ಚರಿತ್ರೆಗಳು

ತ್ಯಾಗರಾಜರನ್ನು ಕುರಿತಂತೆ ಹಲವು ಜೀವನ ಚರಿತ್ರೆಗಳು ಲಭ್ಯವಿವೆ. ಇವುಗಳನ್ನು ಪ್ರಾಚೀನ ಜೀವನ ಚರಿತ್ರೆಗಳು ಹಾಗೂ ನಂತರದ ಜೀವನಚರಿತ್ರೆಗಳು ಎಂದು ಪ್ರತ್ಯೇಕಿಸಿಕೊಂಡು ಜಾಕ್ಸನ್ ಅಧ್ಯಯನ ಮಾಡುತ್ತಾರೆ. ಮೊದಲ ಎರಡು ಜೀವನಚರಿತ್ರೆಗಳೆಂದರೆ ಅವರ ಶಿಷ್ಯ ವಾಲಾಜಪೇಟೆ ವೆಂಕಟರಮಣ ಭಾಗವತರು ಮತ್ತು ಅವರ ಮಗ ವಾಲಾಜಪೇಟೆ ಕೃಷ್ಣಸ್ವಾಮಿ ಭಾಗವತರು ಬರೆದ ಜೀವನಚರಿತ್ರೆಗಳು. ವೆಂಕಟರಮಣ ಭಾಗವತರು ಬಹುಕಾಲ ತ್ಯಾಗರಾಜರಲ್ಲಿ ಕಲಿತರು. ಅವರ ನಿಷ್ಠಾವಂತ ಶಿಷ್ಯರು. ಕೃಷ್ಣಸ್ವಾಮಿಯವರು ಕೊನೆಯ ಎರಡು ವರ್ಷಗಳಷ್ಟೇ ಕಲಿತರು ಎನ್ನಲಾಗುತ್ತದೆ. ಹಾಗಾಗಿ ವೆಂಕಟರಮಣ ಭಾಗವತರು ರಚಿಸಿರುವ ಜೀವನ ಚರಿತ್ರೆ ಅವರ ಬಹುದಿನಗಳ ಒಡನಾಟದ ಫಲವಾಗಿ ಮೂಡಿಬಂದಿದೆ.

ನಂತರದ ಜೀವನಚರಿತ್ರೆಗಳಲ್ಲಿ ಒಂದೊಂದೇ ಅತಿಮಾನುಷ ಘಟನೆಗಳು, ಪವಾಡಗಳು ಸೇರಿಕೊಳ್ಳುತ್ತಾ ಹೋಗುತ್ತವೆ. ಉದಾಹರಣೆಗೆ ಸುಬ್ಬರಾಮ ದೀಕ್ಷಿತರು ಬರೆದ ಜೀವನ ಚರಿತ್ರೆಯಲ್ಲಿ ತ್ಯಾಗರಾಜರು ಪೂಜಿಸುತ್ತಿದ್ದ ಸೀತೆ, ರಾಮ, ಹನುಮಂತ ಹಾಗೂ ಲಕ್ಷ್ಮಣನ ಮೂರ್ತಿಗಳನ್ನು ತ್ಯಾಗರಾಜರ ಸೋದರ ಕದ್ದು ಬಾವಿಯಲ್ಲಿ ಬಚ್ಚಿಟ್ಟ ಘಟನೆ ಬರುತ್ತದೆ. ಸಾಯುವ ಒಂದು ದಿನ ಮೊದಲು ತ್ಯಾಗರಾಜರು ಸನ್ಯಾಸ ಸ್ವೀಕರಿಸಿದ ಸಂಗತಿ ಮೊದಲ ಬಾರಿಗೆ ಬರುವುದೂ ಇಲ್ಲೇ ಅನ್ನಿಸುತ್ತದೆ. ನಂತರ ತ್ಯಾಗರಾಜರು ‘ನಾ-ಜೀವಧಾರ’ ಎನ್ನುವ ಬಿಲಹರಿ ರಾಗದ ಕೃತಿ ಹಾಡಿ, ಸತ್ತ ಬ್ರಾಹ್ಮಣನನ್ನು ಬದುಕಿಸಿದ ಘಟನೆ ವರದಿಯಾಗಿದೆ. ತ್ಯಾಗರಾಜರ ಜೀವನ ಚರಿತ್ರೆಯನ್ನು ಬೆಳೆಸಿದ್ದರಲ್ಲಿ ಹರಿಕಥಾ ವಿದ್ವಾಂಸರ ಗಮನಾರ್ಹ ಪಾತ್ರವಿದೆ.

ಕ್ರಮೇಣ 20ನೇ ಶತಮಾನದ ಆದಿಭಾಗದ ವೇಳೆಗೆ ತ್ಯಾಗರಾಜರು ತೀರಾ ದೊಡ್ಡ ಸಂತರಾದರು. ಈ ಪ್ರಕ್ರಿಯೆ ಸಾಮಾನ್ಯವಾಗಿ ಹೆಚ್ಚಿನ ಸಂತರ ವಿಷಯದಲ್ಲಿ ಕಂಡುಬರುತ್ತದೆ ಎನ್ನುತ್ತಾರೆ ಜಾಕ್ಸನ್. ನಾವು ಒಬ್ಬ ಸಂತನನ್ನು ಕಾಣಲು ಬಯಸುವುದೇ ಹಾಗೆ. ಒಂದು ಅವರ ಹುಟ್ಟಿಗೆ ಸಂಬಂಧಿಸಿದಂತೆ ಅಶರೀರವಾಣಿಯೋ, ಭವಿಷ್ಯವಾಣಿಯೋ ಭವಿಷ್ಯ ನುಡಿಯುತ್ತದೆ. ಅವರಿಗೆ ಹಾಡಿನ ಮೂಲಕ ದೀಪ ಹತ್ತಿಸುವುದಕ್ಕೆ, ಮಳೆ ಬರಿಸುವುದಕ್ಕೆ, ಖಾಯಿಲೆಯನ್ನು ಗುಣ ಪಡಿಸಿಸುವುದಕ್ಕೆ, ಸತ್ತವರನ್ನು ಬದುಕಿಸುವುದಕ್ಕೆ ಸಾಧ್ಯವಾಗುತ್ತದೆ. ಮುಚ್ಚಿದ ದೇವಾಲಯದ ಬಾಗಿಲನ್ನು ತೆಗೆಸುವುದಕ್ಕೆ ಸಾಧ್ಯವಾಗುತ್ತದೆ. ಅವರು ಸಾಮಾನ್ಯವಾಗಿ ರಾಜನಿಗಾಗಿ ಹಾಡುವುದಿಲ್ಲ, ದೇವರಿಗಾಗಿ ಮಾತ್ರ ಹಾಡುತ್ತಾರೆ. ರಾಜರ ಆಹ್ವಾನವನ್ನು ತಿರಸ್ಕರಿಸುತ್ತಾರೆ. ಅವರ ಹಾಡನ್ನು ಕೇಳಿ ದೇವರು ಪ್ರತ್ತಕ್ಷರಾಗುತ್ತಾರೆ. ಸಾಮಾನ್ಯವಾಗಿ ಅವರು ದೇವರ ಅಥವಾ ಹಿಂದಿನ ಸಂತನೊಬ್ಬನ ಅವತಾರವಾಗಿರುತ್ತಾರೆ. ಸಾಮಾನ್ಯ ಮನುಷ್ಯನೊಬ್ಬನಿಗೆ ಇಲ್ಲದಿರುವ ಯೋಗಶಕ್ತಿ ಅವರಿಗೆ ಇರುತ್ತದೆ. ಅವರಿಗೆ ತಮ್ಮ ಸಾವು ಯಾವಾಗ ಎನ್ನುವುದು ತಿಳಿದಿರುತ್ತದೆ. ಹೀಗೆ ಒಟ್ಟಾರೆ ಸಂತರ ಜೀವನ ಚರಿತ್ರೆಯ ಮೂಲಮಾದರಿಯನ್ನು ಜಾಕ್ಸನ್ ವಿವರಿಸುತ್ತಾರೆ ಮತ್ತು ಆ ಹಿನ್ನೆಲೆಯಲ್ಲಿ ತ್ಯಾಗರಾಜರ ಬದುಕನ್ನು ಜಾಕ್ಸನ್ ವಿಶ್ಲೇಷಿಸುತ್ತಾರೆ. ಆಧುನಿಕ ಮನಸ್ಸು ಇದನ್ನು ತಿರಸ್ಕರಿಸಬಹುದು, ಆದರೆ ಜನ ಸಂತರನ್ನು ನೆನಪಿಟ್ಟುಕೊಳ್ಳಲು ಬಯಸುವುದು ಹೀಗೆಯೇ. ಧಾರ್ಮಿಕ ಮನಸ್ಸು ಕೆಲಸ ಮಾಡುವುದೇ ಹೀಗೆ. ಇದನ್ನು ಜಗತ್ತಿನಾದ್ಯಂತ ಕಾಣಬಹುದು. ಕ್ರಿಸ್ತ, ಟಾವೋ ಸೇರಿದಂತೆ ಹೆಚ್ಚಿನ ಸಂತರ ಬದುಕಿನ ಕಥೆಗಳಲ್ಲಿ ಇವುಗಳನ್ನು ಕಾಣಬಹುದು. ಜನಪದ ನೆನಪುಗಳು ಕೂಡ ಇದೇ ರೀತಿಯವು. ಈ ಜೀವನಚರಿತ್ರೆಗಳಲ್ಲಿ ಕೆಲವು ತ್ಯಾಗರಾಜರನ್ನು ವಾಲ್ಮೀಕಿಯಂತೆ ಭಾವಿಸಿದರೆ, ಮತ್ತೆ ಕೆಲವು ರಾಮನಂತೆ ಭಾವಿಸಿವೆ. ಮತ್ತೆ ಕೆಲವು ಅವರನ್ನು ಆರಾಧ್ಯ ದೈವವನ್ನಾಗಿ ಕಂಡಿವೆ. ತ್ಯಾಗರಾಜರಿಗೆ ಅಂತಹ ಸ್ಥಾನ ಸಾಧ್ಯವಾಗಿತ್ತು.

ತ್ಯಾಗರಾಜರು ತೀರಿಹೋದ ಕೆಲವೇ ದಿನಗಳಲ್ಲಿ ಹರಿಕಥಾ ಕಲಾವಿದರು ತ್ಯಾಗರಾಜರ ಬದುಕನ್ನು ಕಥೆಗಳ ಮತ್ತು ಹಾಡುಗಳ ಮೂಲಕ ಹೆಚ್ಚು ನಾಟಕೀಯಗೊಳಿಸಿದರು. ಒಟ್ಟಿನಲ್ಲಿ 20ನೆಯ ಶತಮಾನದ ಆರಂಭದ ವೇಳೆಗೆ ತ್ಯಾಗರಾಜರು ಅತಿಮಾನುಷ ಸಂಗೀತಗಾರರಾಗಿದ್ದರು. ಅತ್ಯಂತ ಪ್ರಬಲ ಸಂತರಾಗಿದ್ದರು. ಕೇವಲ ತನ್ನ ತಳಮಳಕ್ಕೆ ಸ್ಪಂದಿಸುವುದಕ್ಕಷ್ಟೇ ಅಲ್ಲ, ಹೊರಗಿನ ಜಗತ್ತಿನಲ್ಲಿ ಬದಲಾವಣೆ ತರುವುದಕ್ಕೂ ಹಾಡುತ್ತಿದ್ದರು.

ಈ ಜೀವನಚರಿತ್ರೆಗಳನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಜ್ಯಾಕ್ಸನ್ನರು ಎರಡು ಅಂಶಗಳನ್ನು ಗುರುತಿಸಿದ್ದಾರೆ. ತ್ಯಾಗರಾಜರಿಗೆ ಮಹಿಳೆಯರನ್ನು ಕುರಿತಂತೆ ಸಾಂಪ್ರದಾಯಿಕವಾದ ನಿಲುವೇ ಇತ್ತು. ಅವರಿಗೆ ಯಾರೂ ಶಿಷ್ಯೆಯರು ಇರಲಿಲ್ಲ. ಅಂದಿನ ಸ್ಮಾರ್ತ ಬ್ರಾಹ್ಮಣರಲ್ಲಿ ವಿಸ್ತಾರಗೊಳ್ಳುವ, ಹೊಂದಿಕೊಳ್ಳುವ, ಸಹಿಷ್ಣುತೆಯ ಹಾಗೂ ವಿಭಿನ್ನ ಆಧ್ಯಾತ್ಮಿಕತೆಯನ್ನು ಪ್ರೋತ್ಸಾಹಿಸುವ ಗುಣವಿತ್ತು, ಅದು ತ್ಯಾಗರಾಜರ ವ್ಯಕ್ತಿತ್ವದಲ್ಲೂ ಇತ್ತು.

ಶಿಷ್ಯರಿಂದ ತ್ಯಾಗರಾಜರ ಕೃತಿಗಳ ಹಾಗೂ ಕೀರ್ತಿಯ ಪ್ರಚಾರ

ಜಾಕ್ಸನ್ ಗುರುತಿಸುವಂತೆ ತ್ಯಾಗರಾಜರು ಸಂಗೀತಗಾರರನ್ನು ರೂಪಿಸುವಲ್ಲಿ ಅಪಾರ ಕಾಳಜಿ ತೋರಿದರು. ದೀಕ್ಷಿತರು ಅಥವಾ ಶ್ಯಾಮಾಶಾಸ್ತ್ರಿಗಳಿಗಿಂತ ಹೆಚ್ಚಿನ ಶಿಷ್ಯರು ತ್ಯಾಗರಾಜರಿಗಿದ್ದರು. ಶಿಷ್ಯರಿಗೆ ಅನೇಕ ರಚನೆಗಳನ್ನು ಕಲಿಸಿದ್ದರು. ಶಿಷ್ಯರು ತ್ಯಾಗರಾಜರ ಕೃತಿಗಳನ್ನು ಸ್ವರಸಮೇತ ಬರೆದುಕೊಂಡಿದ್ದರು. ಅವುಗಳನ್ನು ಅವರು ತಮ್ಮ ಶಿಷ್ಯರಿಗೆ ಕಲಿಸಿದರು. ಹೀಗೆ ಅವರ ಕೃತಿಗಳು ನಿರಂತರವಾಗಿ ಪಸರಿಸುತ್ತಿದ್ದವು. ದೇವಸ್ಥಾನಗಳಲ್ಲಿ, ಉತ್ಸವಗಳಲ್ಲಿ, ಸಮಾರಂಭಗಳಲ್ಲಿ, ಕಛೇರಿಗಳಲ್ಲಿ, ಮದುವೆಗಳಲ್ಲಿ ಹೀಗೆ ಎಲ್ಲ ಕಡೆಯೂ ಅವರ ಕೃತಿಗಳನ್ನು ಹಾಡುತ್ತಿದ್ದರು. ಹರಿಕಥಾ ವಿದ್ವಾಂಸರಂತೂ ತ್ಯಾಗರಾಜರಿಗೆ ತುಂಬಾ ಪ್ರಚಾರ ನೀಡಿದರು. ಕ್ರಮೇಣ ಅವರು ಸದ್ಗರು ತ್ಯಾಗರಾಜ ಸ್ವಾಮಿಗಳಾದರು.

ಸಾಯುವ ಮೊದಲು ಸನ್ಯಾಸ ಸ್ವೀಕರಿಸಿದ್ದರಿಂದ ತ್ಯಾಗರಾಜರ ದೇಹವನ್ನು ತಿರುವಯ್ಯಾರಿನಲ್ಲಿ ಸಮಾಧಿ ಮಾಡಲಾಯಿತು. ಹಲವರ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಾಗರತ್ನಮ್ಮನವರ ತ್ಯಾಗ ಹಾಗೂ ಶ್ರಮದಿಂದ ಅವರ ಸಮಾಧಿ ವಿಶೇಷ ರೂಪ ಪಡೆಯಿತು. ಅಲ್ಲಿನ ವಾರ್ಷಿಕ ಆರಾಧನೆ ವಿಶೇಷ ಸ್ಥಾನವನ್ನು ಪಡೆಯಿತು. ನಾಗರತ್ನಮ್ಮನವರಿಗಾಗಿ ಜಾಕ್ಸನ್ ಒಂದು ಅಧ್ಯಾಯವನ್ನೇ ಮುಡಿಪಾಗಿಟ್ಟಿದ್ದಾರೆ.

ತ್ಯಾಗರಾಜರನ್ನು ಕುರಿತ 20ನೇ ಶತಮಾನದ ಗ್ರಹಿಕೆ

ತ್ಯಾಗರಾಜರನ್ನು ಕುರಿತ 20ನೇ ಶತಮಾನದ ಗ್ರಹಿಕೆಯನ್ನು ದಾಖಲಿಸಲು ಜಾಕ್ಸನ್ ಹಲವು ಸಂಗೀತಜ್ಞರನ್ನು, ಸಂಘಟಕರನ್ನು, ಸಂಗೀತಗಾರರನ್ನು ಸಂದರ್ಶಿಸಿ, ಅವರ ಅಭಿಪ್ರಾಯಗಳನ್ನು ಕಲೆಹಾಕಿದ್ದಾರೆ. ಹಲವು ಪ್ರಮುಖರ ಅಭಿಪ್ರಾಯಗಳನ್ನು ಹೆಕ್ಕಿ ತೆಗೆದು ಒಟ್ಟು ಮಾಡಿದ್ದಾರೆ. ಉದಾಹರಣೆಗೆ “ದಕ್ಷಿಣ ಭಾರತದಲ್ಲಿ ನಾನೆಲ್ಲೇ ಹೋದರೂ ಸಂತ ತ್ಯಾಗರಾಜರ ಕೃತಿಗಳ ಗಾಯನ ಕಿವಿಗೆ ಬೀಳುತ್ತದೆ. ಈ ರಾಮಭಕ್ತ, ಮದ್ರಾಸಿಗಳ ಧಾರ್ಮಿಕ ಕಲ್ಪನೆಯನ್ನು ತನ್ನ ಸುಂದರ ಹಾಡುಗಳಿಂದ ಗೆದ್ದುಕೊಂಡಿದ್ದಾನೆ ಅನ್ನುವುದರಲ್ಲಿ ಅನುಮಾನವಿಲ್ಲ.” ಎಂಬ ಮಹಾತ್ಮಗಾಂಧಿಯವರ ಹೇಳಿಕೆಯನ್ನು, ಹಾಗೆಯೇ “ಸೌಂದರ್ಯ, ಸಾಮರಸ್ಯ, ಸ್ವಾತಂತ್ರ್ಯ ಹಾಗೂ ಇವುಗಳ ಆದರ್ಶವನ್ನು ಕುರಿತಂತೆ ತಮಗಿದ್ದ ಗಂಭೀರವಾದ ಹುಚ್ಚಿನಿಂದ ತ್ಯಾಗರಾಜರು ಸಮಾಜದ ಮೇಲೆ ಬಲವಾದ ಪ್ರಭಾವನ್ನು ಬೀರಿದ್ದಾರೆ,” ಎಂಬ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತನ್ನು ಉಲ್ಲೇಖಿಸುತ್ತಾರೆ.

ತ್ಯಾಗರಾಜರು ಹಾಗೂ ಸಂಪ್ರದಾಯ

ಜನರಿಗೆ ತ್ಯಾಗರಾಜರ ಜೀವನವನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿತ್ತು. ಬಹುಶಃ ಅದಕ್ಕೆ ಒಂದು ಕಾರಣವೆಂದರೆ, ಅವರು ಇತ್ತೀಚಿನವರು. ಅವರ ರಚನೆಗಳು ಹಿಂದಿನವರಿಗಿಂತ ಹೆಚ್ಚು ಆಕರ್ಷಕವಾಗಿದ್ದವು. ಎಲ್ಲಾ ಸಂತರ ವಿಷಯದಲ್ಲೂ ಆಗುವ ಹಾಗೆ ತ್ಯಾಗರಾಜರ ಬದುಕನ್ನು ಪುರಾಣೀಕರಿಸುವ ಪ್ರಕ್ರಿಯೆ ಅನಿವಾರ್ಯವಾಗಿತ್ತೋ ಏನೋ? ಸಂಗೀತ ಹಾಗೂ ಪುರಾಣ ಎರಡೂ ಕಾಲವನ್ನು ಮೀರಿಕೊಳ್ಳುವ ಸಾಧನಗಳು. ಅವು ಪದಗಳನ್ನು ಮೀರಿ ಬೆಳೆಯುತ್ತವೆ. ಒಬ್ಬ ಕಲಾವಿದನನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನ ಕೆಲಸದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು. ಕಲಾವಿದರು ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕಾಗಿಯೋ ತಮ್ಮ ಅನುಭವಗಳಿಗೆ ರೂಪ ಕೊಡುತ್ತಿರುತ್ತಾರೆ. ನಮ್ಮನ್ನು ಯಾವುದೋ ಅದ್ಭುತ ತರ್ಕ ಆ ಕಡೆಗೆ ತಳ್ಳುತ್ತಿರುತ್ತದೆ. ಅದನ್ನು ದೇವರು ಅಂತ ಕರೆಯೋಣ. ಎಂದು ಪಾಶ್ಚಾತ್ಯ ಸಂಯೋಜಕ ಸಿಬಿಲಿಯಸ್ ಹೇಳುತ್ತಾನೆ. ಬೇರೆಯವರಿಗೆ ಆ ಅನುಭವವನ್ನು ವರ್ಗಾಯಿಸುವುದು ಭಕ್ತಿಯ ಅವಶ್ಯಕ ಅಂಶ. ನಮ್ಮ ಭಾವನೆಗಳನ್ನು ಆಧ್ಯಾತ್ಮದ ಕಡೆಗೆ ನಡೆಸುವ ಕ್ರಿಯೆ. ಸಂಪ್ರದಾಯಗಳು ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಿದ್ದ ಸಮಾಜದಲ್ಲಿ ಆಗಿನ ಪರಿಸ್ಥಿತಿಯನ್ನು ಉಳಿಸಿ, ಕಾಪಾಡಿಕೊಳ್ಳುವ ಉದ್ದೇಶದಿಂದ ಕಥೆಗಳು ಸೃಷ್ಟಿಯಾಗುತ್ತವೆ. ಕೆಲವೊಮ್ಮೆ ಬೇರೆ ಸಂತರ ಬದುಕಿನ ಕಥೆಗಳು ಸೇರಿಕೊಳ್ಳುತ್ತವೆ. ಈ ಪ್ರಕ್ರಿಯೆ ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿಯೂ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೂ ನಡೆಯುತ್ತಿರುತ್ತದೆ.

ಜನಪದ ಮನಸ್ಸು ಚಾರಿತ್ರಿಕ ಸತ್ಯತೆಯ ಬಗ್ಗೆ ಯೋಚಿಸುವುದಿಲ್ಲ. ಅದಕ್ಕೆ ಬೇಕಿರುವುದು ಆದರ್ಶ ನ್ಯಾಯ, ಕಾವ್ಯನ್ಯಾಯ. ವಾಗ್ಗೇಯ ಕೃತಿಗಳಲ್ಲಿ ಸಂಗತಿಗಳನ್ನು ಪರಿಪೂರ್ಣವಾಗಿ ಸೃಷ್ಟಿಸಿದವರು ತ್ಯಾಗರಾಜರೇ ಎನ್ನುವುದಕ್ಕೆ ಅವರಿಗೆ ಕಷ್ಟವಾಗುವುದಿಲ್ಲ. ಅವರಿಗಿಂತ ಹಿಂದಿನವರು ಇದಕ್ಕೆ ಬೇಕಾದ ತಳಹದಿಯೊಂದನ್ನು ರೂಪಿಸಿದ್ದರು ಎಂದು ಹಿಂದಿನವರ ಕೊಡುಗೆಗಳನ್ನು ಕಾಲಾನುಕ್ರಮಾಣಿಕೆಯಲ್ಲಿ ದಾಖಲಿಸುವ ಕೆಲಸ ಅವರು ಮಾಡುವುದಿಲ್ಲ. ಅದು ಅವರಿಗೆ ಬೇಕಿಲ್ಲ.

ಕರ್ನಾಟಕ ಸಂಗೀತ ಸಾಂಪ್ರದಾಯಿಕವಾದದ್ದು. ಅದು ಬದಲಾವಣೆಯನ್ನು ಸಲೀಸಾಗಿ ಒಪ್ಪುವುದಿಲ್ಲ. ತ್ಯಾಗರಾಜರ ಪೂರ್ವದಲ್ಲಿದ್ದ ಸಂಪ್ರದಾಯ ಎಂಥದ್ದು ಎನ್ನುವುದು ನಮಗೆ ನಿಖರವಾಗಿ ತಿಳಿದಿಲ್ಲ. ನಮ್ಮ ಸಂಗೀತ ಪರಂಪರೆಯನ್ನು ಸಾಮವೇದದಿಂದ ಗುರುತಿಸುವುದು ವಾಡಿಕೆ. ಆದರೆ ತ್ಯಾಗರಾಜರಿಗಿಂತ ಹಿಂದಿನ ಕೀರ್ತನೆಗಳು ನಮಗೆ ಯಾಕೆ ಲಭ್ಯವಿಲ್ಲ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳಿದ್ದಾರೆ. ಅದಕ್ಕೆ ಕೆಲವು ವಿದ್ಯಾಂಸರು ನೀಡುವ ಒಂದು ವಿವರಣೆಯೆಂದರೆ, ತ್ಯಾಗರಾಜರ ಕೃತಿಗಳು ಎಷ್ಟು ಪ್ರಭಾವಶಾಲಿಯಾಗಿದ್ದವು ಅಂದರೆ ಅವರಿಗಿಂತ ಹಿಂದಿದ್ದ ಕೃತಿಗಳು ಹಿನ್ನೆಲೆಗೆ ಸರಿದು, ಜನರ ನೆನಪಿನಿಂದ ಮಾಯವಾಗಿವೆ. ಇದನ್ನು ಹಲವರು ಒಪ್ಪುತ್ತಾರೆ.

ಆದರೆ ತ್ಯಾಗರಾಜರ ಬದುಕಿನ ಅಧ್ಯಯನ ಇದಕ್ಕಿಂತ ಭಿನ್ನವಾದ ಚಿತ್ರವನ್ನು ನೀಡುತ್ತದೆ. ಒಂದು ಸಂಸ್ಕೃತಿ ಜೀವಂತವಾಗಿ ಉಳಿಯಬೇಕಾದರೆ ನಿರಂತರತೆ ಹಾಗೂ ಬದಲಾವಣೆಗಳ ಕ್ರಿಯಾತ್ಮಕ ಸಂಬಂಧ ಮುಖ್ಯ. ತ್ಯಾಗರಾಜರಿಗೆ ತಮ್ಮ ಹಿಂದಿನ ಪರಂಪರೆಯ ಅರಿವಿತ್ತು. ಸಂಗೀತ ರತ್ನಾಕರದಂತಹ ಗ್ರಂಥಗಳ ಪರಿಚಯವಿತ್ತು. ಪುರಂದರದಾಸ, ಭದ್ರಾಚಲ ರಾಮದಾಸ ಮೊದಲಾದವರ ಸಂಗೀತವನ್ನು ಕೇಳಿಕೊಂಡೇ ಅವರು ಬೆಳೆದರು. ಹಿಂದುಸ್ತಾನಿ ಸಂಗೀತದ ಅರಿವೂ ಅವರಿಗಿತ್ತು. ಅಸ್ಥಾನ ವಿದ್ವಾಂಸರಾದ ಸೊಂಟಿ ವೆಂಕಟರಮಣಯ್ಯನವರಲ್ಲಿ ಸಂಗೀತ ಕಲಿತಿದ್ದರು. ಸಂಗೀತ ಪರಂಪರೆಯ ಅರಿವಿನೊಂದಿಗೆ ಅವರಲ್ಲಿ ಹೇರಳವಾದ ಸೃಜನಶೀಲತೆಯೂ ಇತ್ತು. ತ್ಯಾಗರಾಜರ ಸಂಗೀತವು ಸಂಪ್ರದಾಯ ಹಾಗೂ ಹೊಸದರ ಮಿಶ್ರಣವಾಗಿತ್ತು.

ವಿ.ರಾಘವನ್ ಹೇಳುವಂತೆ “ಭಾರತದ ಗ್ರಹಿಕೆಯಲ್ಲಿ ಸಂಪ್ರದಾಯ ಹಾಗೂ ಸೃಜನಶೀಲತೆ ಎಂದೂ ಪರಸ್ಪರ ವಿರುದ್ಧವಾದ ಕಲ್ಪನೆಗಳಲ್ಲ. ಸಂಪ್ರದಾಯ ಹಾಗೂ ಮನೋಧರ್ಮ ನಮ್ಮ ಕಲೆಯ ಅವಿಭಾಜ್ಯ ಅಂಗ. ಅವಶ್ಯಕವಾದದ್ದನ್ನು ಉಳಿಸಿಕೊಳ್ಳುವುದು ಕ್ಷೇಮ, ಹೊಸದನ್ನು ಕಂಡುಕೊಳ್ಳುವುದು ಯೋಗ; ಬದುಕಿನಲ್ಲಿ ಇದ್ದಂತೆ ಕಲೆಯಲ್ಲೂ ಯೋಗಕ್ಷೇಮ ನಮ್ಮ ಪ್ರಗತಿಯ ಮಾರ್ಗಸೂಚಿ.”

ಸಂಗೀತ ಕಲಿಯುವ ಪ್ರಕ್ರಿಯೆ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಶಿಷ್ಯ ಗುರುಗಳಿಂದ ಈಗಿರುವುದನ್ನು ಅಂದರೆ ಸಂಪ್ರದಾಯವನ್ನು ಅರಿಯುತ್ತಾನೆ. ಅದನ್ನು ಜತನದಿಂದ ಮುಂದುವರಿಸಿಕೊಂಡು ಹೋಗುತ್ತಾನೆ. ಅವನಿಗೆ ಆ ಸಾಮರ್ಥ್ಯ ಇಲ್ಲದೇ ಹೋದರೆ ನಿರಂತರತೆಗೆ ಭಂಗ ಬರುತ್ತದೆ. ಮತ್ತೆ ಹಳೆಯದನ್ನು ಹುಡುಕಿ ತೆಗೆಯುವುದಕ್ಕೆ ಹೋರಾಡಬೇಕಾಗುತ್ತದೆ.

ತ್ಯಾಗರಾಜರ ಕಾಲದಲ್ಲಿ ರಾಜರ ಆಸ್ಥಾನದಲ್ಲಿ ಸಂಗೀತಕಲೆಯ ಉತ್ಕೃಷ್ಟತೆಯನ್ನು ಚೆನ್ನಾಗಿ ಬಲ್ಲ ವಿದ್ವಾಂಸರಿದ್ದರು. ಹಾಗೆಯೇ ಇನ್ನೊಂದೆಡೆ ಭಕ್ತಿ ಸಂಗೀತದ ಪರಂಪರೆಯೂ ಇತ್ತು. ಭಕ್ತಿಸಂಗೀತದ ರಚನೆಗಳನ್ನು ಭಾಗವತರು ಹಾಗೂ ಹರಿದಾಸರು ಹಾಡುತ್ತಿದ್ದರು. ಸಂಗೀತಾತ್ಮಕವಾಗಿ ಅವು ತುಂಬಾ ಉತ್ಕೃಷ್ಟ ಮಟ್ಟದವಾಗಿರಲಿಲ್ಲ. ಭಕ್ತಿ ಅದರ ಮುಖ್ಯ ನೆಲೆಯಾಗಿತ್ತು. ಇನ್ನು ಆಸ್ಥಾನದಲ್ಲಿ ನೆಲೆಗೊಂಡಿದ್ದ ಪ್ರೌಢ ಸಂಗೀತಕಲೆ ಮುಂದುವರಿಯಲು ಒಂದು ಬದಲಾವಣೆ ಬೇಕಿತ್ತು. ಆ ಸಂಗೀತದ ಘನ ಮತ್ತು ತೂಕವನ್ನು ಧಾರಣಮಾಡುವ ಶಕ್ತಿ ಭಕ್ತಿಸಂಗೀತದ ರಚನೆಗಳಿಗೆ ಇರಲಿಲ್ಲ. ಭಕ್ತಿಸಂಗೀತದ ರಚನೆಗಳಿಗಿಂತಲೂ ಹೆಚ್ಚು ಸಂಕೀರ್ಣವಾದ, ಸಂಗೀತಾತ್ಮಕ ರಚನೆಗಳ ಅವಶ್ಯಕತೆ ಅದಕ್ಕಿತ್ತು. ಅಭಿಜಾತ ಸಂಗೀತದ ಕಲಾತ್ಮಕತೆ ಮತ್ತು ಭಕ್ತಿ ಮೇಳೈಸಲು ಕಾಲ ಪಕ್ವವಾಗಿತ್ತು. ತ್ಯಾಗರಾಜರಿಗೆ ಆ ಕಂದಕವನ್ನು ಮುಚ್ಚುವುದಕ್ಕೆ ಸಾಧ್ಯವಾಯಿತು. ಉನ್ನತ ಮಟ್ಟದ ಸಂಗೀತದ ಕಲೆಯನ್ನು ಸಾಮಾನ್ಯರ ಭಕ್ತಿ ಸಂಗೀತದೊಂದಿಗೆ ಮೇಳೈಸುವುದಕ್ಕೆ ಅವರಿಗೆ ಸಾಧ್ಯವಾಯಿತು. ಅವರು ಅತ್ಯಂತ ಯಶಸ್ವಿ ಸಂಗೀತಗಾರರಾದರು.

ತ್ಯಾಗರಾಜರು ಒಂದು ಹಂತದ ತನಕ ಸೊಂಟಿ ವೆಂಕಟರಮಣಯ್ಯನವರನ್ನು ಅನುಸರಿಸಿದರು. ಗುರುಗಳು ಹೇಳಿಕೊಟ್ಟಿದ್ದನ್ನೆಲ್ಲಾ ಕಲಿತರು. ತಮ್ಮ ತಂದೆಗಾಗಿ ಅವರು ಪಂಡಿತರ ಸಭೆಗಳಲ್ಲಿ ಹಾಡಿದರು. ಆದರೆ ಆಸ್ಥಾನಕ್ಕೆ ಸೊಂಟಿಯವರನ್ನು ಹಿಂಬಾಲಿಸಿ ಹೋಗಲಿಲ್ಲ. ಅವರ ದೃಷ್ಟಿಯಲ್ಲಿ ಅಸ್ಥಾನ ಅನ್ನುವುದು ಐಹಿಕ ಸುಖದ, ಕೀರ್ತಿಗಾಗಿ ಕಾದಾಡುವ, ಸಿರಿಗಾಗಿ ಪಾಂಡಿತ್ಯ ಪ್ರದರ್ಶನ ಮಾಡುವ ಜಾಗ. ಸಂಗೀತಗಾರರು ರಾಜರನ್ನು ಆಶ್ರಯಿಸಿ, ಅವರ ಬೆಂಬಲಕ್ಕಾಗಿ ತಲೆಬಾಗುವ ಸ್ಥಳ.

ತ್ಯಾಗರಾಜರ ನಂತರ ಆಸ್ಥಾನ ವಿದ್ವಾಂಸರು ಸಾಂಸ್ಕೃತಿಕ ನಾಯಕರಾಗಲಿಲ್ಲ. ಸಂತ ತ್ಯಾಗರಾಜರು ಸಾಂಸ್ಕೃತಿಕ ನಾಯಕರಾದರು. ತ್ಯಾಗರಾಜರು ಕೇವಲ ಹಿಂದಿನ ಸಂಗೀತದ ಸಂಗ್ರಹ ಮಾತ್ರವಲ್ಲ, ಮುಂದಿನ ಸಂಗೀತದ ನಿಶಾನೆಯೂ ಆದರು. ಕಲೆಗೆ ಗತದ ಮಾನ್ಯತೆ ಸಿಗದೇ ಹೋದರೆ ಅದು ಉಳಿಯುವುದು ಕಷ್ಟ ಎನ್ನುವ ಸತ್ಯ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಅವರಿಗೆ “ಸಂಪ್ರದಾಯದ ನಿಷ್ಠಾವಂತ ಅನುಯಾಯಿಯಾಗಿ ಇದ್ದುಕೊಂಡೇ ಕ್ರಾಂತಿಕಾರಕ ಪ್ರಗತಿಯ ಹರಿಕಾರನಾಗುವ ರೀತಿಯಲ್ಲಿ ಕೀರ್ತನೆಗಳನ್ನು ರಚಿಸಲು ಸಾಧ್ಯವಾಯಿತು.” ಅಭಿಜಾತ ಸಂಗೀತದ ಕಟ್ಟುನಿಟ್ಟಾದ ನಿಯಮಗಳು, ವ್ಯಾಕರಣ ಮತ್ತು ಕಲ್ಪನೆಯ ನಡುವೆ ಸೊಗಸಾದ ಸಮತೋಲನವನ್ನು ಸಾಧಿಸುವುದರಲ್ಲಿ ಯಶಸ್ವಿಯಾದರು. ಒಂದು ಸಾಂಸ್ಕೃತಿಕ ವಿಕಸನದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ತ್ಯಾಗರಾಜರು ಒಳ್ಳೆಯ ಉದಾಹರಣೆ ಆಗಬಲ್ಲರು.

ಜಾಕ್ಸನ್ ಅವರ ಅಧ್ಯಯನ ಕೇವಲ ಮಾನವಕೇಂದ್ರಿತ ಸಂಸ್ಕೃತಿಯ ಸುತ್ತ ನಡೆದಿಲ್ಲ. ಅದನ್ನು ಮೀರಿಕೊಂಡು, ಅವರ ಬದುಕಿನ ವಿಧಾನವನ್ನು, ಅದರ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಹಾಗಾಗಿಯೇ ಅದು ಹೆಚ್ಚು ಅರ್ಥಪೂರ್ಣವಾಗಿದೆ. ಹೀಗೆ ಒಟ್ಟಂದದಲ್ಲಿ ನೋಡಿದಾಗ ತ್ಯಾಗರಾಜರು ಹೆಚ್ಚು ಅರ್ಥವಾಗುತ್ತಾರೆ. ಅಂತಹ ಒಂದು ಗಂಭೀರ ಪ್ರಯತ್ನ ಜಾಕ್ಸನ್ ರ ಈ ಅಧ್ಯಯನದಲ್ಲಿದೆ. ಕೇವಲ ಕೆಲವು ಘಟನೆಗಳನ್ನು ಇಟ್ಟುಕೊಂಡು ಅವರ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡದೆ, ಸಾಧ್ಯವಾದ ಆಕರಗಳನ್ನು ಬಳಸಿಕೊಂಡು, ಸಾಂಸ್ಕೃತಿಕ ಅಧ್ಯಯನಗಳನ್ನು ಕುರಿತಂತೆ ವಿಶ್ವದಾದ್ಯಂತ ನಡೆದಿರುವ ಸಂಶೋಧನೆಗಳ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆದಿದೆ. ತ್ಯಾಗರಾಜರನ್ನು ಅರ್ಥಮಾಡಿಕೊಳ್ಳಲು ಬಯಸುವವರು ಒಮ್ಮೆ ಓದಲೇಬೇಕಾದ ಜೀವನಚರಿತ್ರೆ ಇದು. ಜಾಕ್ಸನ್ ಹಲವು ಅಭಿಪ್ರಾಯಗಳು ಒಪ್ಪಿಗೆಯಾಗದೇ ಇರಬಹುದು, ಆದರೆ ಇದು ಅತ್ಯಂತ ಶ್ರದ್ಧೆಯಿಂದ ಮಾಡಿರುವ ಅಧ್ಯಯನ ಎನ್ನುವುದರಲ್ಲಿ ಅನುಮಾನವಿಲ್ಲ.

ಈ ಅಂಕಣದ ಹಿಂದಿನ ಬರೆಹಗಳು:

ಇಂದು ನಮಗೆ ಬೇಕಾದ ಹಿಂದುಸ್ತಾನ

ಈಜಿಪ್ಟಿನ ನಾಲ್ಕನೆಯ ಪಿರಮಿಡ್ ‘ಉಮ್ ಕುಲ್ಸುಂ’

ಒಂದು ಸಂಜೆಗಣ್ಣಿನ ಹಿನ್ನೋಟ...!

ಮೃದಂಗದ ಜಾಡು ಹಿಡಿದು ಹೊರಟ 'ವರ್ಗೀಕರಣ' ಮೀರಿದ ಕೃತಿ

ಬದುಕೇ ಹಾಡಾದ ಮಮ್ಮಾ ಆಫ್ರಿಕಾ ಮೀರಿಯಂ ಮಕೇಬಾ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...