ವೈದೇಹಿಯವರ ನೆನಪು ಏಕತಾರಿ: ವ್ಯಕ್ತಿತ್ವ ನಿರೂಪಣೆಯ ಹಲವು ಮಾದರಿ

Date: 07-03-2024

Location: ಬೆಂಗಳೂರು


"ಸಾಹಿತ್ಯಿಕವಾಗಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಮುಖ್ಯವಾಗುವ ಹಲವು ವ್ಯಕ್ತಿತ್ವಗಳೊಂದಿಗೆ ಲೇಖಕಿ ಹೊಂದಿದ್ದ ಆಪ್ತ ಹಾಗೂ ಭಾವನಾತ್ಮಕ ಸಂಬಂಧ ತೆರೆತೆರೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಸಂಗಗಳು ಹಾಗೂ ಘಟನೆಗಳ ಮೂಲಕ ಹುಟ್ಟಿಕೊಳ್ಳುವ ಕಥನದ ಸ್ವರೂಪ ಓದಿನ ಹರಿವಿಗೆ ಇಂಬು ನೀಡುತ್ತದೆ," ಎನ್ನುತ್ತಾರೆ ಲೇಖಕ ಶ್ರಿಧರ ಹೆಗಡೆ ಭದ್ರನ್. ಅವರು ತಮ್ಮ ಸಮಕಾಲೀನ ಪುಸ್ತಕ ಲೋಕ ಅಂಕಣದಲ್ಲಿ ವೈದೇಹಿ ಅವರ ‘ನೆನಪು ಏಕತಾರಿ’ ವಿವಿಧ ವ್ಯಕ್ತಿಚಿತ್ರಗಳ ರಾಗಮಾಲೆ ಕುರಿತು ಬರೆದಿದ್ದಾರೆ.

ಅಕ್ಷರಗಳನ್ನು ಅಂತಃಕರಣದಲ್ಲಿ ಅದ್ದಿ ತೆಗೆದಂತೆ ಬರೆಯುವ ಲೇಖಕಿ ವೈದೇಹಿಯವರು ಏನೇ ಬರೆದರೂ ಅದು ಆಪ್ಯಾಯಮಾನ. ಕವಿತೆ, ಕತೆ, ಕಾದಂಬರಿ, ಆತ್ಮಕಥನಗಳ ನಿರೂಪಣೆ, ಅಂಕಣ ಬರಹಗಳು ಹೀಗೆ ವೈವಿಧ್ಯಮಯ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ವೈದೇಹಿಯವರು ಆಗಾಗ ಬರೆದ ವ್ಯಕ್ತಿಚಿತ್ರಗಳ ಮಾಲೆ ಈಗ ಪುಸ್ತಕ ರೂಪದಲ್ಲಿ ಸಂಗ್ರಹಗೊಂಡು ಹೊರಬಂದಿದೆ. ‘ನೆನಪು ಏಕತಾರಿ’ ಎಂಬ ಶೀರ್ಷಿಕೆ ಹಾಗೂ ‘ವಿವಿಧ ವ್ಯಕ್ತಿಚಿತ್ರಗಳ ರಾಗಮಾಲೆ’ ಎಂಬ ಉಪಶೀರ್ಷಿಕೆ ಒಳಗೊಂಡಿರುವ ನಾಲ್ಕು ನೂರಕ್ಕೂ ಹೆಚ್ಚು ಪುಟಗಳ ಪುಸ್ತಕ ಇದೀಗ ‘ಅಭಿನವ’ದಿಂದ ಪ್ರಕಟವಾಗಿದೆ.

ಅಂತರಾ ಎಂಬ ಹೆಸರಿನ ನಾಲ್ಕು ವಿಭಾಗಗಳಲ್ಲಿ ಅರವತ್ತ ಮೂರು ಲೇಖನಗಳು ಸಂಗ್ರಹಗೊಂಡಿವೆ. ಇದರಲ್ಲಿ ‘ಸಿಂಹ’ ಶಿವರಾಮ ಕಾರಂತರ ಕುರಿತ ಎರಡು, ಪಂಡಿತೋತ್ತಮ ಸೇಡಿಯಾಪು ಅವರ ಕುರಿತ ಎರಡು ಹೇಗೆ ಕೆಲವು ಮರುಕಳಿಕೆಗಳನ್ನು ಬಿಟ್ಟರೆ ಉಳಿದೆಲ್ಲ ಬರಹಗಳು ಭಿನ್ನ ವ್ಯಕ್ತಿತ್ವಗಳ ಅನಾವರಣ ಮಾಡುತ್ತವೆ. ಇವೆಲ್ಲವೂ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ, ಬೇರೆ ಬೇರೆ ಕಡೆ ಪ್ರಕಟವಾದ ಬರಹಗಳಾಗಿವೆ. ಹಾಗೂ ಅವು ರೂಪುಗೊಂಡಿರುವ ಮಾದರಿಗಳೂ ವಿಭಿನ್ನವಾಗಿವೆ. ನೆನಪಿನ ಬರಹ, ಪದ್ಯ, ಸಂದರ್ಶನ ಹೀಗೆ ವೈವಿಧ್ಯಮಯ ಸ್ವರೂಪಗಳನ್ನು ಈ ಬರವಣಿಗೆ ಧಾರಣ ಮಾಡಿದೆ. ಆ ಮೂಲಕ ವ್ಯಕ್ತಿಚಿತ್ರ ನಿರೂಪಣೆಯ ಏಕತಾನತೆಯನ್ನೂ ಮುರಿಯುವ ಬರವಣಿಗೆ ಇಲ್ಲಿ ಸಾಧ್ಯವಾಗಿದೆ.

ಸಾಹಿತ್ಯಿಕವಾಗಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಮುಖ್ಯವಾಗುವ ಹಲವು ವ್ಯಕ್ತಿತ್ವಗಳೊಂದಿಗೆ ಲೇಖಕಿ ಹೊಂದಿದ್ದ ಆಪ್ತ ಹಾಗೂ ಭಾವನಾತ್ಮಕ ಸಂಬಂಧ ತೆರೆತೆರೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಸಂಗಗಳು ಹಾಗೂ ಘಟನೆಗಳ ಮೂಲಕ ಹುಟ್ಟಿಕೊಳ್ಳುವ ಕಥನದ ಸ್ವರೂಪ ಓದಿನ ಹರಿವಿಗೆ ಇಂಬು ನೀಡುತ್ತದೆ. ಸಾಧಕರೇ ಸಹಜವಾಗಿ ಜಾಗಪಡೆದಿರುವ ವ್ಯಕ್ತಿತ್ವ ಕುರಿತ ಬರವಣಿಗೆ ಕೇವಲ ವಿವರವಾಗುವ ಅಪಾಯದಿಂದ ಇದೇ ನಿರೂಪಣೆಯ ಲವಲವಿಕೆ ಪಾರುಮಾಡಿದೆ. ಇಲ್ಲಿಯ ಬರಹಗಳ ಅಭಿವ್ಯಕ್ತಿಯ ನೆಲೆ ವ್ಯಕ್ತಿನಿಷ್ಠವಾದರೂ ಅದು ಸಾಮಾಜೀಕರಣಗೊಳ್ಳುವ ವಿಧಾನ ಅದ್ಭುತವಾದುದು. ಇದೇ ಕಾರಣಕ್ಕೆ ಮುನ್ನುಡಿಯಲ್ಲಿ ಖ್ಯಾತ ವಿಮರ್ಶಕ ಎನ್. ಮನುಚಕ್ರವರ್ತಿಯವರು ಇದನ್ನು ‘ಆತ್ಮಕಥಾ ನಿರೂಪಣೆಯ ಒಂದು ವಿಸ್ತೃತ ರೂಪ’ ಎಂದೇ ಕರೆದಿದ್ದಾರೆ. ಮೊದಲ ಭಾಗದ ಹಲವು ಲೇಖನಗಳು ಲಂಕೇಶ್ ಪತ್ರಿಕೆಯ ಅಂಕಣ ಬರಹಗಳಲ್ಲಿ ಪ್ರಕಟವಾಗಿ ಈಗಾಗಲೇ ‘ಮಲ್ಲಿನಾಥನ ಧ್ಯಾನ’ ಸಂಕಲನದಲ್ಲಿ ಬಂದಿವೆ. ಹಾಗೂ ಜನಮಾನಸವನ್ನು ಸೆಳೆದ ವ್ಯಕ್ತಿಚಿತ್ರಗಳೇ ಆಗಿವೆ. ಅವುಗಳ ಆಪ್ತತೆ ಮತ್ತು ಸಾರ್ವಕಾಲಿಕತೆಗಳಿಂದಾಗಿಯೇ ಅವು ಕಾಲಿಕ ಬರಹಗಳಾಗಿ ಕಳೆದು ಹೋಗದೇ ಹೀಗೆ ಮತ್ತೆ ಮತ್ತೆ ಜನಮಾನಸದ ಮುಂದೆ ಕಾಣಿಸಿಕೊಂಡು ಓದಿಗೆ ಒಳಗಾಗುತ್ತಿವೆ. ಅಂತರಾ ಒಂದರ ಎಲ್ಲಾ ಲೇಖನಗಳೂ ನಾಡಿನ ಭಿನ್ನ ಭಿನ್ನ ಕ್ಷೇತ್ರದ ಸಾಧಕಿಯರ ಸಾಧನಶೀಲ ವ್ಯಕ್ತಿತ್ವಗಳನ್ನು ಅನಾವರಣ ಮಾಡಿವೆ. ಇಲ್ಲಿ ಹೆಚ್ಚು ಕಡಿಮೆ ಮೂರು ತಲೆಮಾರಿನ ಮಹಿಳಾ ದಿಗ್ಗಜರಿದ್ದಾರೆ. ಮೊದಲ ತಲೆಮಾರಿನ ಲೇಖಕಿ ನಂಜನಗೂಡು ತಿರುಮಲಾಂಬಾ ಅವರಿಂದ ಆರಂಭಿಸಿ ಸಂಕಮ್ಮ ಜಿ. ಸಂಕಣ್ಣವರ ವರೆಗೆ ಇಲ್ಲಿಯ ವ್ಯಾಪ್ತಿ. ಇವರು ಹಲವು ವಲಯಗಳಿಂದ ಬಂದವರು, ಹಲವು ಕ್ಷೇತ್ರಗಳಲ್ಲಿ ಕಾರ್ಯ ಮಾಡಿದವರು. ಸಾಹಿತ್ಯ, ರಂಗಭೂಮಿ, ಸಮಾಜಸೇವೆ ಹೀಗೆ ಈ ಸಾಧಕಿಯರ ಕಾರ್ಯಕ್ಷೇತ್ರಗಳಿವೆ. ಇವರ ಕುರಿತು ಹಲವರು ಬರೆದಿದ್ದರಾದರೂ ವೈದೇಹಿಯವರ ಬರವಣಿಗೆಗೆ ಇರುವ ವಾತ್ಸಲ್ಯದ ಗುಣಧರ್ಮವನ್ನು ಬೇರೆಡೆ ಕಾಣಲಾಗದು. ಹೀಗಾಗಿಯೇ ಇವುಗಳ ಓದು ಆಪ್ತವೆನಿಸುತ್ತದೆ.

ಇದಕ್ಕೆ ಉದಾಹರಣೆಯಾಗಿ ಪುಸ್ತಕದ ಮೊದಲ ಲೇಖನವನ್ನೇ ನೋಡಬಹುದು. ಸತಿ ಹಿತೈಷಿಣೀ ಗ್ರಂಥಮಾಲೆಯ ನಂಜನಗೂಡು ತಿರುಮಲಾಂಬಾ ಅವರ ಕುರಿತಾದ ಈ ಬರಹದಲ್ಲಿ; ಚಿ.ನ.ಮಂಗಳ ಅವರು ತಿರುಮಲಾಂಬಾ ಅವರನ್ನು ಮರುಶೋಧಿಸಿದ ಘಟನೆಯಿಂದ ಆರಂಭಿಸಿ ಅವರ ಸಾಹಿತ್ಯಿಕ ಕಾಣ್ಕೆಯನ್ನು ಸಮೀಕ್ಷೆ ಮಾಡಿದ್ದಾರೆ. ತಿರುಮಲಾಂಬಾ ಅವರ ಬರಹದ ಬದುಕಿನ ನಾಶಕ್ಕೆ ಕಾರಣ ಎಂದೇ ಕರೆಯಲಾಗುವ ‘ಮಾಸ್ತಿಯವರ ವಿಮರ್ಶೆ’ಯನ್ನು ವೈದೇಹಿಯವರು ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದಿಲ್ಲ. ಕನ್ನಡ ಸಾಹಿತ್ಯ ವಾಗ್ವಾದಗಳಲ್ಲಿ ಒಂದು ಎಂದೇ ಗುರುತಿಸಿಕೊಂಡಿರುವ ಈ ಸಂಗತಿ ಮಾಸ್ತಿಯವರನ್ನು ‘ವಿಲನ್’ ಸ್ಥಾನದಲ್ಲಿ ನಿಲ್ಲಿಸಿದೆ ಎಂದರೆ ತಪ್ಪಲ್ಲ. ಆದರೆ ಲೇಖಕಿಗೆ ಅದು ಮುಖ್ಯ ಎನಿಸುವುದೇ ಇಲ್ಲ. ಇಲ್ಲೆಲ್ಲ ಋಣಾತ್ಮಕತೆಯ ಹುಡುಕಾಟಕ್ಕಿಂತ ಧನಾತ್ಮಕ ಕಟ್ಟುವಿಕೆಯೆಡೆಗಿನ ವೈದೇಹಿಯವರ ಸಾಹಿತ್ಯ ಪಯಣದ ಮುಂದುವರಿಕೆಯಾಗಿ ಈ ಮಾದರಿ ಧ್ವನಿಸುತ್ತದೆ.

“ತಿರುಮಲಾಂಬಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಂತೆ ಅವರದೇ ಮುಂದುವರಿಕೆಯಂತಿರುವ, ಸರಿಸುಮಾರು ಅವರ ಹತ್ತಿರದ ಪೀಳಿಗೆಯವರಾದ, ಜೀವನಕತೆಯಲ್ಲಿಯೂ ಕೆಲವು ಸಾಮ್ಯಗಳಿರುವ, ಇನ್ನೊಬ್ಬ ಕನಸುಗಾತಿ ಲೇಖಕಿ ಸರಸ್ವತೀಬಾಯಿ ರಾಜವಾಡೆಯವರ ನೆನಪೂ ಧುಮ್ಮಿಕ್ಕುತ್ತಿದೆ...” ಎಂಬ ಒಂದು ಲೇಖನದ ಕೊನೆಯ ಸಾಲುಗಳು ‘ಲೋಕಾನುರಾಗಿ ವಿರಾಗಿ-ಸರಸ್ವತೀಬಾಯಿ ರಾಜವಾಡೆ’ ಎಂಬ ಹೊಸದೊಂದು ಲೇಖನಕ್ಕೆ ದಾರಿ ಮಾಡಿಕೊಡುತ್ತವೆ. ಮುಂದೆ; ಕೊಡಗಿನ ಗೌರಮ್ಮ, ವಾಣಿ, ಎಂ.ಕೆ.ಇಂದಿರಾ, ಡಾ. ಅನುಪಮಾ ನಿರಂಜನ, ಮೂಕಜ್ಜಿ, ಸಾರಾ ಅಬೂಬಕರ್ ...ಹೀಗೆ ಲೇಖಕಿಯರ ದಂಡೇ ನಮ್ಮ ಮುಂದೆ ನಡೆದುಹೋಗುತ್ತದೆ. ಅವರು ತಮ್ಮ ಜೀವನ-ಸಾಧನೆಗಳ ಮೂಲಕ ಆಪ್ತವಾಗುತ್ತಾರೆ. ಸಾಂಸ್ಕೃತಿಕ ಭಾರತದ ಅಪೂರ್ವ ತಾರೆಯಾದ ‘ಕಮಲಾದೇವಿ ಚಟ್ಟೋಪಾಧ್ಯಾಯ’ ಅವರನ್ನು ತಮ್ಮ ಹಾಗೂ ಕೋ.ಲ. ಕಾರಂತರ ಕಣ್ಣುಗಳ ಮೂಲಕ ವೈದೇಹಿ ಚಿತ್ರಿಸಿದ್ದಾರೆ.

ಎರಡನೆಯ ಅಂತರಾದಲ್ಲಿ ನಾಡಿನ ಹಲವು ಪುರುಷ ಸಾಧಕರ ವ್ಯಕ್ತಿಚಿತ್ರಗಳಿವೆ. ‘ನಮ್ಮ ಮನೆಗೆ ಬಂದಿದ್ದ ಸಿಂಹ’ ಶಿವರಾಮ ಕಾರಂತರ ವ್ಯಕ್ತಿತ್ವದೊಂದಿಗೆ ಈ ಭಾಗ ಆರಂಭವಾಗುತ್ತದೆ. ಕುವೆಂಪು, ಕೆ.ಎಸ್.ನ, ನಿರಂಜನ, ಸೇಡಿಯಾಪು, ಎಕ್ಕುಂಡಿ, ಕಯ್ಯಾರ, ರಾಮಚಂದ್ರಶರ್ಮ, ಲಂಕೇಶ್ ಹೀಗೆ ಬಹುತೇಕ ಬರಹಗಾರರು ಅದೂ ಭಿನ್ನ ಕ್ಷೇತ್ರದವರು-ಕವಿಗಳು, ಕಾದಂಬರಿಕಾರರು, ನಾಟಕಕಾರರು, ವೈಜ್ಞಾನಿಕ ಬರಹಗಾರರು ಹೀಗೆ ಇಲ್ಲಿಯ ಬರಹಗಳಲ್ಲಿ ಜೀವಂತವಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಪ್ರಪಂಚದ ಆಧುನಿಕ ಚರಿತ್ರೆಯನ್ನು ಕಟ್ಟಲು ಹಲವು ಮೂಲ ಸಾಮಗ್ರಿಗಳನ್ನು ನಾವು ಪಡೆಯಬಹುದು. ಮೂಲತಃ ಸೃಜನಶೀಲ ಲೇಖಕಿ ವೈದೇಹಿಯವರಿಗೆ ಈ ಬರಹಗಳನ್ನು ಬರೆಯುವಾಗ ಹುಟ್ಟಿರುವ ತಾದಾತ್ಮ್ಯವನ್ನು ಉದ್ದಕ್ಕೂ ಕಾಣಬಹುದು. ಎಕ್ಕುಂಡಿಯವರ ಮುಗ್ದ, ನಿಷ್ಕಲ್ಮಶ ನಗೆಯನ್ನು ವರ್ಣಿಸುವಾಗ ಅವರಿಗೆ ಥಟ್ಟನೆ ಬಿಸ್ಮಿಲ್ಲಾಖಾನರ ನಗು ನೆನಪಾಗುತ್ತದೆ, ಕುವೆಂಪು ಎಂದರೆ ಶುಭ್ರವಸ್ತ್ರಾನ್ವಿತೆ ತುಷಾರ ಧವಳ ಕಾಂತಿಯ ನಮ್ಮಮ್ಮ ಶಾರದೆ ನೆನಪಾಗುತ್ತಾಳೆ, ಲಂಕೇಶ್ ಅಂತಃಕರಣದ ಬಗ್ಗೆ ಬರೆಯುವಾಗ ಕನ್ನಡ ಸಾಹಿತ್ಯವಲಯದಲ್ಲಿ ಪುರುಷ ಕೇಂದ್ರಿತ ಮನಸ್ಸುಗಳು ಲೇಖಕಿಯರನ್ನು ನಡೆಸಿಕೊಂಡಿದ್ದ ರೂಕ್ಷತೆ ನೆನಪಾಗುತ್ತದೆ-ಹೀಗೆ ಒಂದರೊಳಗೊಂದು ನೆನಪುಗಳು ಬಿಚ್ಚಿಕೊಳ್ಳುತ್ತಾ ಈ ಎಲ್ಲಾ ಬರಹಗಳು ‘ಕನ್ನಡ ಸಂಸ್ಕೃತಿ ಕಥನ’ದ ಬೇರೆ ಬೇರೆ ಅಧ್ಯಾಯಗಳಾಗಿ ಕಾಣಿಸುತ್ತವೆ.

ದೈಹಿಕವಾಗಿ ಭೌತಿಕ ಲೋಕದಿಂದ ಕಣ್ಮರೆಯಾದ ಆದರೆ ಮನೋವಲಯದಲ್ಲಿ ಸದಾಕಾಲ ಇರುವ ಹಲವು ವ್ಯಕ್ತಿತ್ವಗಳ ಸ್ಮರಣೆ ಅಂತರಾ ಮೂರರಲ್ಲಿದೆ. ಇಲ್ಲಿ ಕೇವಲ ಸಾಹಿತ್ಯ ಮಾತ್ರವಲ್ಲದೇ ಹಲವು ಕ್ಷೇತ್ರಗಳ ಗಣ್ಯರಿದ್ದಾರೆ. ಉಳ್ಳಾಲದ ಧೀರ ರಾಣಿಯೆಂದೇ ಹೆಸರಾಂತ ಅಬ್ಬಕ್ಕದೇವಿಯ

ಅಮೃತ ಸ್ಮೃತಿಯಿಂದ ಹಿಡಿದು ಇತ್ತೀಚೆಗೆ ನಿಧನರಾದ ಧಾರವಾಡದಲ್ಲಿದ್ದ ಹಿರಿಯ ಜೀವ, ನಮ್ಮೆಲ್ಲರ ಪ್ರೀತಿಯ ಎನ್. ಪಿ. ಭಟ್ಟರವರೆಗೆ ಹನ್ನೆರಡು ವ್ಯಕ್ತಿತ್ವಗಳ ಅಂತರಂಗಲೋಕದ ಅನಾವಣದ ಬರಹಗಳು ಇಲ್ಲಿವೆ. ಒಂದು ಕಾಲದಲ್ಲಿದ್ದ ವ್ಯಕ್ತಿ ಮುಂದಿನ ಕಾಲದವರಿಗೂ ಯಾಕೆ ಪ್ರಸ್ತುತರಾಗುತ್ತಾರೆ ಎಂಬ ಚಿಂತನೆ ಉದ್ದಕ್ಕೂ ಈ ಭಾಗದಲ್ಲಿ ನಡೆದಿದೆ. ನಾನೂ ಸಮೀಪದಿಂದ ಬಲ್ಲ ‘ರಂಜನ (ಎನ್. ಪಿ.) ಭಟ್ಟ’ರ ಕುರಿತಾದ ಬರಹದ ಒಂದು ಅಕ್ಷರವನ್ನೂ ಯಾರಿಂದಲೂ ಬದಲಾಯಿಸಲು ಸಾಧ್ಯವಾಗುವುದಿಲ್ಲ ಎನಿಸಿತು. ಅಷ್ಟು ತೆರೆದ ಮನಸ್ಸಿನಿಂದ ಆ ವ್ಯಕ್ತಿತ್ವಗಳನ್ನು ಕಂಡ, ಕಾಣಿಸುವ ಶಕ್ತಿ ವೈದೇಹಿಯವರಿಗಿದೆ.

ಕೊನೆಯ ಭಾಗ ಎಂಟು ಸಾಧಕರ ಅಪೂರ್ವ ಸಂದರ್ಶನಗಳ ಗುಚ್ಛವಾಗಿದೆ. ಸಾಧನಶೀಲರ ಬಾಯಿಂದಲೇ ಕಥನವನ್ನು ಹೊರಹೊಮ್ಮಿಸುವ ತಾಳ್ಮೆ ಲೇಖಕಿಗೆ ಸಿದ್ಧಿಸಿದೆ. ಕೇಳುವ ಪ್ರಶ್ನೆಗಳು ವೈಯಕ್ತಿಕಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಜವಾಬ್ದಾರಿಯವುಗಳಾಗಿರುವುದರಿಂದ ಇದು ಸಾರ್ವಕಾಲೀನ ಮಹತ್ವವನ್ನು ಪಡೆದುಕೊಳ್ಳುವ ಭಾಗವಾಗಿದೆ. ಶಿವರಾಮ ಕಾರಂತರ ಘನ ವ್ಯಕ್ತಿತ್ವದ ಭಾಗವಾಗಿದ್ದ ಲೀಲಾ ಕಾರಂತ, ಸಿನಿಮಾ ಜಗತ್ತನ್ನು ಸಂಸ್ಕೃತಿಯ ನೆಲೆಯಲ್ಲಿ ನಿರೂಪಿಸಿದ ಸತೀಶ್ ಬಹಾದ್ದೂರ್, ಹಲವು ಸಂಸ್ಥೆಗಳನ್ನು ಕಟ್ಟಿದ ಕು.ಶಿ.ಹರಿದಾಸಭಟ್ಟ, ಪಂಡಿತೋತ್ತಮರೂ ಸೃಜನಶೀಲರೂ ಆದ ಪರಮೇಶ್ವರ ಭಟ್ಟ ಹಾಗೂ ಸೇಡಿಯಾಪು, ಜಾನಪದ ದಿಗ್ಗಜ ಮುದೇನೂರು ಸಂಗಣ್ಣ ಹೀಗೆ ಹಲವು ಕ್ಷೇತ್ರಗಳ ಜೊತೆಗಿನ ಮಾತುಕತೆ ಚೇತೋಹಾರಿಯಾಗಿದೆ.

ನೆನಪುಗಳು ಬದುಕಿನ ಭಾಗ. ಕೆಲವು ಸ್ಮರಣೆಯಲ್ಲಿ ಉಳಿಯುತ್ತವೆ ಕೆಲವು ಕಾಲದ ಒತ್ತಡದಲ್ಲಿ ಮರೆಯಾಗಿ ಹೋಗುತ್ತವೆ. ಒಂದು ಭಾಷಾ ಸಮುದಾಯ ಯಾವ ಕಾರಣಕ್ಕೂ ಮರೆಯಬಾರದ ಹಲವು ನೆನಪುಗಳು ಹಲವರ ಬದುಕಿನ ಭಾಗವಾಗಿ ಮೂಡಿನಿಂತಿರುತ್ತವೆ. ಅವುಗಳು ಅಕ್ಷರದ ಮೂಲಕ ದಾಖಲಾದಾಗ ಅದೊಂದು ಸ್ಮೃತಿಚಿತ್ರ ಸಂಪುಟವಾಗಿ ಆ ನಾಡಿನ ವಿವೇಕಕ್ಕೆ ಸಲ್ಲುವಂತಾಗುತ್ತದೆ. ‘ನೆನಪು ಏಕತಾರಿ’ ಅಂತಹ ಬರಹಗಳ ಸಂಪುಟ. ಇಲ್ಲಿ ಮೂಡಿನಿಂತಿರುವ ಎಲ್ಲರೂ ಎಲ್ಲರಿಗೂ ಮುಖ್ಯ ಎನಿಸಲಿಕ್ಕಿಲ್ಲ. ಯಾಕೆಂದರೆ ಬರಹಗಾರರ ಆಯ್ಕೆ ಇಲ್ಲಿ ಕೆಲಸ ಮಾಡಿರುತ್ತದೆ. ಆದರೆ ಸಮುದಾಯದ ಸಮಷ್ಟಿಯ ದೃಷ್ಟಿಕೋನದಿಂದ ನೋಡಿದಾಗ ಇಲ್ಲಿರುವ ಎಲ್ಲರೂ ಮುಖ್ಯವಾಗುತ್ತಾರೆ. ಇಂತಹ ಕೃತಿಗಳ ಓದು ನಾಡಿನ ಕುರಿತು ಹೆಮ್ಮೆ, ಧನ್ಯತಾ ಭಾವವನ್ನು ಮೂಡಿಸಿದರೆ; ಹೊಸ ತಲೆಮಾರಿನವರಲ್ಲಿ ಸಾಧನೆಯ ಹಾದಿಗಳ ಹಲವು ಅಂಕಣಗಳನ್ನು ತೆರೆದು ತೋರಿಸುತ್ತವೆ. ಕನ್ನಡ ಸಾಹಿತ್ಯದ ಒಂದು ಗಣ್ಯ ಭಾಗವೇ ಆಗಿರುವ ನೆನಪುಗಳ ಬರಹ ಪ್ರಪಂಚದ ಒಂದು ಪ್ರಮುಖ ಕೃತಿಯಾಗಿ ವೈದೇಹಿಯವರ ಈ ಪುಸ್ತಕ ನೆಲೆ ನಿಲ್ಲುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಪ್ರೊ. ದುಷ್ಯಂತ ನಾಡಗೌಡರ ಕಥಾ ಸಂಕಲನ - ನಿರ್ಮಲೆ
ಎರಡು ಉದಾತ್ತ ಜೀವಗಳೊಡನಾಟ

ಅಪ್ಪ ಮತ್ತು ಮುಪ್ಪು: ಸಮಕಾಲೀನ ಹಾಗೂ ಸಾರ್ವಕಾಲಿಕ ಎರಡು ಸಂಗತಿಗಳು
ಸಮಕಾಲೀನ ಪುಸ್ತಕಲೋಕದ ಅಘಟಿತ ಘಟನೆ
ಮರಾಠಿಯನ್ನು ಮೀರಿ ಕನ್ನಡ ಪತ್ರಿಕೋದ್ಯಮದ ’ಚಂದ್ರೋದಯ’

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...