Article

'ಗೀಚೆಟ್ಟೆ’ಯೊಳಗಿನ ಸಂತಸ ಮತ್ತು ಸಂಕಟಗಳು

ತನ್ನ ಭಾವವನ್ನು ಇತರರಲ್ಲೂ ಹೇಳಲು ಅಥವಾ ಹೇರಿಕೊಳ್ಳಲು ಕವಿ ಪಡುವ ಪಾಡು ಪುಸ್ತಕವಾಗಿ ಮಗ್ಗುಲು ಬದಲಿಸಬಹುದು. ಈ ಕಾರಣದಿಂದ ಕವನ ಸಂಕಲ ಮಾಡಿ ಕೈಸುಟ್ಟು ಕೊಂಡವರೇ ಅಧಿಕ. ಇಷ್ಟೆಲ್ಲಾ ತಿಳಿದಿದ್ದೂ, ಕನ್ನಡ ಸಾಹಿತ್ಯ ಲೋಕಕ್ಕೆ ಹೆಚ್ಚು ಅರ್ಪಣೆಯಾಗುತ್ತಿರುವುದು ಕವನ ಸಂಕಲನಗಳೇ. ಕವಿತೆಯೆಂದರೆ ಕ್ಷಣದ ಪ್ರತಿಕ್ರಿಯೆ, ಒಂದೊಮ್ಮೆ ತಲ್ಲಣ, ದುಗುಡ- ದುಮ್ಮಾನವಷ್ಟೇ. ನನ್ನ ಪ್ರಕಾರ ಎಲ್ಲರಲ್ಲೂ ಹೇಳಿಕೊಳ್ಳುವ ಸಾಕಷ್ಟು ಕವಿತೆಗಳಿರುತ್ತವೆ, ಕೆಲವರು ದಾಖಲಿಸುತ್ತಾರೆ, ಉಳಿದವರು ಮನದಲ್ಲೇ ಉಳಿಸಿಕೊಳ್ಳುತ್ತಾರೆ.

ಆಶಿಖ್ ನನಗೊಬ್ಬ ಪತ್ರಕರ್ತನಾಗಿ ಮಾತ್ರ ಯಾರೋ ಗೆಳೆಯರು ಹೇಳಿ ಜಾಲತಾಣದಲ್ಲಿ  ಪರಿಚಯವಿದ್ದ.ಆದರೆ ಮೊನ್ನೆ ಭೇಟಿಯಾಗಿ ಕೇವಲ ನನಗಿಂತ ಎರಡು ವರ್ಷಕ್ಕೆ ಚಿಕ್ಕವನೆಂದು ಹೇಳಿಕೊಂಡು ದಿಗಿಲಿಕ್ಕಿಸಿದ. ಅವನ ವಯಸ್ಸು ಕವಿತೆಯ ಪ್ರಬುದ್ಧತೆಗೇನೂ ಹಾನಿ ಮಾಡಿಲ್ಲ. ಸಾಕ್ಷಾತ್ ಬದುಕಿನ ಡೈರಿಯೊಂದರಿಂದ ಬಿದ್ದು ಸಿಕ್ಕಿದಂತಹ ಕವಿತೆಗಳವು. ಒಂದಿಷ್ಟು ಖುಷಿ, ನೋವು, ಹತಾಷೆ, ಮಮತೆಗಳ ರಾಶಿ ಗುಚ್ಫ.ಇಲ್ಲಿ ಬದುಕನ್ನು ಪ್ರೀತಿಸುವವನೊಬ್ಬನ ವಿವಿಧ ಮುಖವಾಡಗಳ ಅನಾವರಣ.ಒಮ್ಮೊಮ್ಮೆ  ಅಧಮ್ಯ ಪ್ರೇಮಿಯಂತೆ, ಇನ್ನೊಮ್ಮೆ ವಿರಹಿಯಂತೆ ಭಾವಗಳ ಅಲ್ಲಿಂದಿಲ್ಲಿಗೆ ಹೊಯ್ದಾಡುತ್ತಲೇ ಇರುತ್ತದೆ. 

" ಈಗಲೂ ಒಂದು ಸಾಲು

ಬರೆಯಲು ಚಡಪಡಿಸುತ್ತೇನೆ

ನಿರ್ಗತಿಕನೊಬ್ಬ ಒಂದೊತ್ತಿನ

ಹಿಟ್ಟಿಗೆ ಚಡಪಡಿಸಿದಂತೆ"

ಈ ಮೇಲಿನ ಸಾಲುಗಳ ಒಬ್ಬ ಪತ್ರಕರ್ತನ ಬಾಳ ಬೇಗುದಿ. ರಾಶಿ ನೋವುಗಳ ತುಂಬಿಕೊಂಡು ಪತ್ರಿಕೆಯ  ಖಾಲಿ ಪುಟಗಳ ತುಂಬಿಸುವ ತೊಳಲಾಟಗಳ ಈ ಸಾಲುಗಳ ಅಭಿವ್ಯಕ್ತವಾಗುತ್ತದೆ. ಬಸ್ ಮಾಲಿಕ ಆಜ್ಞೆಯಂತೆ ಹರಿದ ಟಿಕೆಟಿಗೆ ಛಿಧ್ರಗೊಂಡ ಹೃದಯವನ್ನು ಹೋಲಿಸುವ ಕವಿಮನಸ್ಸು ಪ್ರಾಂಜಲವಾಗಿದೆ. ಆ ಪ್ರಬುದ್ಧ ಸಾಲುಗಳು ಮತ್ತೊಮ್ಮೆ , ಮಗದೊಮ್ಮೆ ಓದಬೇಕೆನಿಸುತ್ತದೆ. 

"ಗಾಳಿಯ ಮಾತಿಗೆ ಕಿವಿಯಾಗಿ" ಎನ್ನುವ ಕವಿ ಅವು ತೀಡಿ ಬಂದ ಎಲ್ಲ ಪ್ರೀತಿಯ ಸಾರವನ್ನು ಕೇಳಿಸಿಕೊಳ್ಳಬೇಕೆಂಬ ನಿವೇದನೆಯೂ ಮನೋಜ್ಞವಾಗಿದೆ. ಉಮ್ಮನ ಪ್ರೀತಿಯನ್ನು ತೆರೆದಿಡುವ, ಅಬ್ಬನ ವಿರಹವನ್ನು ಸಾರಿ ಹೇಳುವಾಗಲೆಲ್ಲಾ ಕವಿ ಭಾವತಪ್ತನಾಗುತ್ತಾನೆ. ತನ್ನಲ್ಲಿ ಕಳೆದು ಹೋದ ಅಪ್ಪನಿಲ್ಲದ ಬಾಲ್ಯದ ನೋವನ್ನು ಹೊರಗೆಡಹಲು ಅಕ್ಷರಗಳ ದೋಣಿಯೇರುತ್ತಾನೆ.

ಒಂದರ್ಥದಲ್ಲಿ, ಅಬ್ಬ ಇಲ್ಲದೆ ಬದುಕು ಕಲಿಸಿ ಕೊಟ್ಟ ಉಮ್ಮನ ಛಲವೇ ತನಗೆ ಊರುಗೋಲೆಂದು ಓದುಗರು ಒಪ್ಪಿಕೊಳ್ಳಬೇಕು. "ಇಲ್ಲಿರುವುದು ಸಣ್ಣ ಜಗತ್ತು ಮತ್ತು ದೊಡ್ಡ ಮನುಷ್ಯರು" ಎನ್ನುವ ಸಾಲುಗಳು ಕಾಡುವಂಥದ್ದು.ಮತ್ತೆ ಸಂಧಿಸಬಾರದೆಂದು ಹೊರಡುವ ಕವಿಗೆ ಭೂಮಿ ದುಂಡಗಿದೆಯೆಂಬ ಭಯ ರುದ್ರ ಮನೋಹರ.ಇಂತಹ ಸಾಲುಗಳೆಲ್ಲಾ ಗೀಚೆಟ್ಟೆಯ ಸಂತಸಗಳು, ಮತ್ತು ಸಂಕಟಗಳ ಪ್ರತೀಕ.ಬುರ್ಖಾದೊಳಗಿನ ಕಿಸೆಯ ಚುಕ್ಕಿಯನ್ನು ಆಶಿಸುವಾಗ ಓದುಗರನ್ನು ಮಗುವಾಗಿಸುವ ಶೈಲಿ, ಮರದಿಂದ ಬಿದ್ದ ಎಲೆ, ತಿರುಗಿ ಮರಕ್ಕೂ ಸೇರದೆ ನೆಲಕ್ಕೂ ಬೀಳದೆ ನಿರ್ವಾತದಲ್ಲಿ ನಿಲ್ಲುವ ಭಾವ ಒಂದು ಸುಂದರ ಕವಿ ಪ್ರಪಂಚಕ್ಕೆ ಕೈ ಹಿಡಿದು ನಡೆಸಬಲ್ಲದು.ಕೊನೆಗೆ ತನ್ನ  ಉಮ್ಮನಿಗೆ ಕವಿತೆಗಳನ್ನು ಅರ್ಪಿಸಿಕೊಳ್ಳುವ ಕವಿ ನಿಜಕ್ಕೂ ಯಾರನ್ನೂ ಮೆಚ್ಚಿಸಲಿಕ್ಕಾಗಿ ಗೀಚುವುದಿಲ್ಲವೆಂದು  ಅಭಿವ್ಯಕ್ತಿಸದಂತಿದೆ.

 ಕೆಲವು ಕವಿತೆಗಳು ದುರ್ಬಲವೆನಿಸಬಹುದು, ನೀರಸವೆನಿಸಬಹುದು. ಪ್ರೇಮವನ್ನು ಕೊಳಚೆ ನೀರಿನ ಜೊತೆ ಹರಿಯಬಿಡಬೇಕು, ಅದು ಅಶುದ್ಧಿಯೆಂದು ಹೇಳಿಕೊಳ್ಳುವ ಕವಿಯ ದ್ವಿಮುಖ ನೀತಿ ಸ್ವಲ್ಪ ಗೊಂದಲಕ್ಕೆ ತಳ್ಳುತ್ತದೆ.ಮುಂದುವರಿದಂತೆ ಬಂದೂಕಿಗೆ ಪ್ರೀತಿಯನ್ನು ತುಂಬುವಾಗ ಅದೇ ಪ್ರೇಮ ಅತ್ಯಂತ ಶುದ್ಧ ಪ್ರೇಮವೆಂದು ಹೇಳಿಕೊಂಡಾಗ ಇವೆರಡಕ್ಕೂ ತಾಳೆಯಾಗುವುದಿಲ್ಲವೇನೋ ಎಂದನಿಸಿಬಿಡುವುದುಂಟು. ಆದರೆ ಕವಿಗೆ ಒಂದೇ ಭಾವದಲ್ಲಿ ಎಲ್ಲ ಕವಿತೆಗಳನ್ನು ಬರೆಯಲೇ ಬೇಕೆಂದರೂ ತಪ್ಪಾಗಿಬಿಡಬಹುದು.ಸಂತನ ಕುರ್ ಆನಿನ ಹಾಳೆಯಲ್ಲಿ ಪ್ರೇಮ ನಿರ್ಲಕ್ಷ್ಯದ ಬಗ್ಗೆ ಮಾತನಾಡುವಾಗ ಕವಿ ಪ್ರಕ್ಷುಬ್ಧಗೊಳ್ಳುತ್ತಾನೆ. ಯಾವುದೋ ಸಂತ ಮಾಡಿದ ನಿರ್ಲಕ್ಷ್ಯವೇ ಪ್ರೀತಿ- ಪ್ರೇಮಗಳ ಆಲಸ್ಯಕ್ಕೆ ಕಾರಣವೆಂದು ದಾಖಲಿಸಲಾಗದು. ಪ್ರೀತಿಸುವ ಧರ್ಮದ ಲೋಪಗಳನ್ನು ಮಾತ್ರ ನೋಡಿ ಪ್ರಶ್ನಿಸುವಾಗ ಅದಮ್ಯ ಪ್ರೇಮಿಗಳ ಮಹಾ ಅಧ್ಯಾಯದ ನಿರ್ಲಕ್ಷ್ಯ ಜಗತ್ತನ್ನೇ ಪ್ರೀತಿಸುವವನಿಗೆ ಕಾಣದಾಗುವುದು ವಿರೋಧಾಭಾಸ. 

 ' ನಾ ಬರೆದ ಕವಿತೆಗಳು

 ನನ್ನ ಶತ್ರುವಿನಂತೆ‌ ನೋಡುತ್ತಿದೆ

 ನನ್ನ ಮೊತ್ತವಾಗಿ ಹಿಂಡಿ ಹಾಕುತ್ತಿದೆ'

ಇಲ್ಲಿ ಕೊನೆಯ ಸಾಲಿನ 'ಮೊತ್ತ' ಎನ್ನುವ ಪ್ರಯೋಗ ಮಳೆಯಾಲಂ ಭಾಷೆಯ ಪ್ರಭಾವವಿರಬಹುದು. ಕನ್ನಡದ ಬಳಕೆಯಲ್ಲಿ ಅರ್ಥ ಬದಲಾಗುವುದರಿಂದ ಅಲ್ಲಿ ಪೂರ್ಣವೆಂಬ ಪದಬಳಕೆ ಸಮಂಜಸವಾಗಿರುತ್ತಿತ್ತೇನೋ‌. ಉಳಿದಂತೆ ಸಂಕಟಕ್ಕಾಗಿ ಗೀಚಿಟ್ಟದ್ದು  ಓದಿಸುತ್ತದೆ. ನಿಮ್ಮನ್ನು ತೇಲಿಸುತ್ತದೆ. ಸಣ್ಣ ಹುಡುಗನ ಕವಿತಾ ಪ್ರಚ್ಛನ್ನ ಶಕ್ತಿ ಆಗಾಧ ಭಾವಗಳನ್ನು ನಿಮ್ಮೊಳಗೆ ತುಂಬುತ್ತದೆ. ಯಾವ ಸಂತಸಕ್ಕಾದರೂ, ಸಂಕಟಕ್ಕಾದರೂ ನೀವೂ ಇದನ್ನು ಓದಬಹುದು.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ - https://www.bookbrahma.com/book/geechitte

ಮುನವ್ವರ್ ಜೋಗಿಬೆಟ್ಟು