Article

ಗ್ರಾಮೀಣ ಜನಜೀವನದ ಚಿತ್ರಣ ‘ಏಕತಾರಿ’

ಏಕತಾರಿ ಕಥಾಸಂಕಲನದ ಎಲ್ಲ ಕಥೆಗಳು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯ ಬಗೆ ಬಗೆಯ ರಸಪೂರ್ಣವಾದ ಸೊಗಡನ್ನು ಓದುಗರಿಗೆ ಉಣಬಡಿಸುತ್ತವೆ. ಪ್ರತಿ ಕಥೆಗಳಲ್ಲೂ ಎದ್ದು ಕಾಣುವ ಗ್ರಾಮ ಬದುಕಿನ ಚಿತ್ರಣ, ಗ್ರಾಮ ಜೀವನದ ರೀತಿನೀತಿ, ಗ್ರಾಮ ರಾಜಕಾರಣ, ಸಂಸಾರದ ಬಿರುಕು, ನಗರೀಕರಣದ ಪ್ರಭಾವ ಗ್ರಾಮಜೀವನದ ಮೇಲಾದ ಪರಿಣಾಮ, ಹಳ್ಳಿಗಳ ಸಾಮಾಜಿಕ ಸಾಮರಸ್ಯ ಹೀಗೆ ಹಳ್ಳಿ ಸೊಗಡಿನಲ್ಲಿ ರೂಪುಗೊಂಡ ಪ್ರತಿ ಕಥೆಗಳು ನಮ್ಮೊಳಗಿನ ಅಂತಃಕರಣವನ್ನು ಕಲಕುತ್ತವೆ.

ಕಥಾ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿದ್ದು ಪ್ರತಿ ಕಥೆಗಳು ವಿಭಿನ್ನ ಬಗೆಯ ವಿಷಯಗಳನ್ನು ಒಳಗೊಂಡು ಪ್ರತಿ ಕಥೆಗಳ ಅಂತ್ಯ ಮನುಷ್ಯನಲ್ಲಾಗು ಬದಲಾವಣೆಯನ್ನು ಚಿತ್ರಿಸುತ್ತವೆ. ನಮ್ಮೆದೆಯಾಳದ ವಿವಿಧ ತಳಮಳಗಳೆಲ್ಲವೂ ಕಥೆಯ ಆಂತರ್ಯದಲ್ಲಿದ್ದು ಪ್ರತಿ ಕಥೆಗಳು ಮುಗಿದಾಗ ನಮಗರಿವಿಲ್ಲದಂತೆ ಒಂದು ರೀತಿಯ ಸಮಾಧಾನವನ್ನೂ ಆ ಕಥೆಗಳು ಹೇಳುತ್ತವೆ. ನಮ್ಮೊಳಗಿದ್ದ ತಳಮಳ‌ ಮಾಯವಾಗಿ ಒಂದು ರೀತಿಯ ಹೊಸ ಚೈತನ್ಯವೂ ಮೂಡುತ್ತದೆ.

ಉತ್ತರಕರ್ನಾಟಕದ ಭಾಷೆಯ ಸೊಗಡಿನ ಕಂಪು ಪ್ರತಿ ಕಥೆಗಳಲ್ಲೂ ಎದ್ದು ಕಾಣುತ್ತದೆ. ಓದುವಾಗ ಒಂದು ರೀತಿಯ ರೋಮಾಂಚನಕ್ಕೂ ಒಳಗಾಗಿರುವೆ‌. ಹಳ್ಳಿ ಭಾಷೆಯ ಸೊಗಡಿನಲ್ಲೇ ರೂಪುಗೊಂಡ ಹೊಲಿಕೆಯ ಸಾಲುಗಳು ನಿಜಕ್ಕೂ ಇಷ್ಟವಾಗುತ್ತೆ. 'ಕಾಂಡ ಕೊರೆಯುವ ಹುಳು ಒಳಗೆ ಹೊಕ್ಕವರಂತೆ ದಿನದಿನಕ್ಕೆ ಕೃಶನಾಗುತ್ತ ಹೊರಟಿದ್ದ', 'ಊರ ಹೊರವಲಯದಲ್ಲಿ ದೊಡ್ಡ ಪಕ್ಷಯೊಂದು ತನ್ನ ಮರಿಗಳಿಗೆ ಕಾವು ಕೊಡಲು ರೆಕ್ಕೆ ಹರಿವಿಕೊಂಡಂಥ ಗುಡಿಸಲು', 'ಮನೆಗಳೆಲ್ಲ ಗುಡ್ಡದ ಮುಖದಲ್ಲಿ ಎದ್ದ ಬೊಕ್ಕೆಗಳ ಹಾಗೆ ಕಾಣುತ್ತಿದ್ದವು‌'. ಇಂತಹ ಇನ್ನು ನೂರಾರು ಸಾಲುಗಳು ಕಥಾಸಂಕಲನದುದ್ದಕ್ಕೂ ಕಾಣಬಹುದು.

'ಬಾಲಕನ ಕಣ್ಣಲ್ಲಿ ಕಂಡ ಸಾವು' ಕಥೆಯಲ್ಲಿ ಬಾಲಕನ ಕಣ್ಣಲ್ಲಿ ಕಂಡ ಸಾವಿನ ಚಿತ್ರಣ ನಮ್ಮೊಳಗಿನ ಹಿಂಸಾತ್ಮಕ ಚಿತ್ರಣವನ್ನು ಚಿತ್ರಿಸುತ್ತದೆ. 'ಅಟ್ಟ' ಕಥೆಯಲ್ಲಿ ಬಾಲಕ ತನ್ನ ಅತ್ತೆಯ ಕುಬುಸದ ಕಾರಣಕ್ಕೆ ಹೋಗಬೇಕಿತ್ತು ಎಂಬ ಕೊರಗಿನಲ್ಲಿ ಅವನಲ್ಲಿ ರೂಪುಗೊಳ್ಳುವ ಭಾವಲೋಕವನ್ನು ಚಿತ್ರಿಸುತ್ತದೆ. ಕೊನೆಗೆ ಮನೆಯ ಅಜ್ಜಿಯ ಸಾವಿನೊಂದಿಗೆ ಮುಕ್ತಾಯವಾಗುತ್ತದೆ. 'ರತ್ನಾಗಿರಿ ಎಂಬ ಮಾಯೆ' ಎಂಬ ಕತೆಯು ನಗರದ ವ್ಯಾಮೋಹಕ್ಕೆ ದುಡಿಮೆಗೆ ಹೊರಡುವವರ ಚಿತ್ರಣವನ್ನು ಹೊಂದಿದೆ. 'ಏಕತಾರಿ' ಕೌಟುಂಬಿಕ ಸಂಬಂಧದಲ್ಲಿಯ ಏರುಪೇರುಗಳನ್ನು, ಹೆಂಡತಿಯನ್ನು ತೊರೆದು ಬದುಕುವವನು ಸಮಾಜದಲ್ಲಿ ಅವಮಾನಕ್ಕೊಳಗಾಗುವ ರೀತಿ, ಕೊನೆಗೆ ಬದಲಾವಣೆಯ ತಂಗಾಳಿ ಸಂಸಾರ ಸಾಗರವನ್ನು ಪ್ರಶಾಂತಮಯವಾಗಿಸುವ ಪರಿ ಎಲ್ಲವೂ ಈ ಕಥೆಯಲ್ಲಿ ಕಾಣಬಹುದು. 'ರಾಯಪ್ಪನ ಬಾಡಿಗೆ ಸಾಯಿಕಲ್ಲು' ಪ್ರಸಕ್ತ ರಾಜಕೀಯ ಚಿತ್ರಣದ ತಿರುಳನ್ನು ಹೊಂದಿದ ಕಥೆಯಾಗಿದೆ. 'ಜುಮ್ಮಣ್ಣನ ಕಂಚಿನ ಮೂರ್ತಿ' ಕತೆಯು ನಮ್ಮೊಳಗಿನ ಹಗೆ, ದ್ವೇಷದ ಹೊಗೆಯನ್ನು ಆರಿಸಿದ ಬಗೆಯನ್ನು ಹಾಗೂ ವ್ಯಕ್ತಿಯಿಂದ ವ್ಯಕ್ತಿ ಬದಲಾಗುವ ರೀತಿಯನ್ನು ಇಲ್ಲಿ ಕಾಣಬಹುದು.

ಹೀಗೆ ಎಲ್ಲ ಕಥೆಗಳೂ ಓದುಗನನ್ನು ಆವರಿಸುತ್ತವೆ. ಕಥೆಗಳಲ್ಲಿ ಬಳಕೆಯಾದ ಭಾಷೆ, ಕತೆಯ ನಿರೂಪಣೆ, ಗ್ರಾಮೀಣ ಭಾಷೆಯ ಸೊಗಸಾದ ಸಂಭಾಷಣೆ ಶೈಲಿ ತುಂಬಾ ಇಷ್ಟವಾಗುತ್ತದೆ. ಇದುವರೆಗೂ ನಾನು ಓದಿದ ಕಥೆಗಳಲ್ಲಿಯೇ ನಮ್ಮ ಉತ್ತರ ಕರ್ನಾಟಕದ ಗ್ರಾಮೀಣ ಶೈಲಿಯಲ್ಲಿ ರಚನೆಯಾದ ಉತ್ಕೃಷ್ಟ ಗಟ್ಟಿಕಥೆಗಳು ಎಂದು ಹೇಳುವೆ. ಏಕತಾರಿ ಕಥಾಸಂಕಲನ ಮುನ್ನುಡಿ ಬರೆದ ಎಸ್. ಎಫ್. ಯೋಗಪ್ಪನವರ್ ಸರ್ ಅವರ ಬರಹವಂತೂ ಇಡೀ ಕಥಾಸಂಕಲನದ ಸೊಗಸಾದ ಪರಿಚಯವನ್ನು ಒದಗಿಸಿಕೊಡುತ್ತದೆ. ಮುನ್ನುಡಿಯೂ ಬಹಳ ಇಷ್ಟವಾಯ್ತು.

ಒಂದು ಸಾರಿ ಓದಿ ಗ್ರಾಮೀಣ ಜನಜೀವನದ ಚಿತ್ರಣ ತಿಳಿಯಲು ಏಕತಾರಿ ಕಥಾಸಂಕಲನ ಓದಿ. ಅಲ್ಲಿ ಬಳಕೆಯಾದ ಭಾಷಾಶೈಲಿ ನಿಮಗೂ ಇಷ್ಟವಾಗುತ್ತದೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜು ಹಗ್ಗದ