Article

ಹೆಣ್ಣುಮಕ್ಕಳ ಕರಾಳ ಬದುಕಿನ ಕಥನ 'ಕೆಂಗುಲಾಬಿ’

ವೇಶ್ಯೆ ಜಗತ್ತಿನ ಹೆಣ್ಣುಮಕ್ಕಳ ಕರಾಳ ಬದುಕಿನ ಕಥನ ಇದಾಗಿದೆ. ಸಾಮಾಜಿಕ ಕ್ರೂರ ವ್ಯವಸ್ಥೆಗೆ ಬಲಿಯಾಗುವ ಹೆಣ್ಮಕ್ಕಳ ಕಣ್ಣೀರ ಕತೆಯಿದೆ. ಯಾವುದನ್ನು ರಕ್ಷಾಕವಚವೆಂದು ನಂಬುತ್ತೇವೆಯೋ ಅದೇ ಚುಚ್ಚಲಾರಂಭಿಸಿದಾಗ ಬದುಕಿಗೆ ನೆಲೆ ಎಲ್ಲಿದೆ! ಅಂತಹ  ಸಾಮಾಜಿಕ ಕ್ರೂರ ವ್ಯವಸ್ಥೆಯ, ಮನಸ್ಥಿತಿಗಳ ಅನಾವರಣವಿದೆ. ಸಮಾಜದ ಮುಖಂಡರೇ, ಸಮಾಜದ ಒಕ್ಕೂರಲಿನ ಮನಗಳು ಬೇಡವೇ ಬೇಡ ಎನ್ನುವ ವ್ಯವಸ್ಥೆಯನ್ನು ಪೋಷಿಸುವ ನೀಚತನದ ಮನಸ್ಸುಗಳ ಚಿತ್ರಣವಿದೆ. ಬದುಕು ಕಟ್ಟಿಕೊಳ್ಳಲು ಬಡಿದಾಡುವ ಹೆಣ್ಣಿನ ಬದುಕನ್ನೇ ಬರ್ಬಾದ ಮಾಡುವ ಕಾಮುಕ ಜಗತ್ತಿನ ಕತೆಯಿದೆ. 

ಕೆಂಗುಲಾಬಿ ಓದು ಮುಗಿದಾಗ ಒಂದು ಒಂದು ರೀತಿಯ ವಿಚಿತ್ರ ಮಾನಸಿಕ ತಳಮಳದಲ್ಲಿ ಬೆಂದುಹೋದೆ. ಕೊನೆಯ ಪುಟಗಳಲ್ಲಿ  ಶಾರದೆ, ಮಗಳ ಶವವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದಾಗ… ಕತಾನಾಯಕ ಮಲ್ಲೇಶಿ ಎಲ್ಲಿ ಹೋಗಿದ್ದಾಳೆ ಶಾರದಾ? ಎಂದು ಅಲ್ಲೆ ಕುಳಿತ ಮುದುಕಿಯನ್ನು ಕೇಳಿದಾಗ. ಮುದುಕಿ ದುಡ್ಡು ಹೊಂದಿಸಲಿಕ್ಕೆ ಹೋಗಿದ್ದಾಳೆ ಸರ್ ಎನ್ನುತ್ತಾಳೆ. ಯಾರ ಹತ್ತಿರ ಎಂದು ಮಲ್ಲೇಶಿ ಕೇಳಿದಾಗ, ' ಬೇಜಾರ ಮಾಡ್ಕೋಬೇಡಿ ಸರ್. ಅವಳಿಗೆ ಗೊತ್ತಿರೋದು ಒಂದೇ ದಾರಿ ಬಹುಶ ಮೈ ಮಾರ್ಕೊಂಡು….' ಎಂದಾಗ ಇದುವರೆಗೂ ಓದಿ ಸಹಿಸಿಕೊಂಡ ಅಲ್ಲಲ್ಲಿ ಒತ್ತರಸಿ ಬರುವ ಸಂಕಟ, ತಳಮಳವೆಲ್ಲ  ಕಣ್ಣೀರಾಗಿ ಕೆಂಗುಲಾಬಿ ಪುಸ್ತಕದ ಕೊನೆಯ ಪುಟಗಳನ್ನು ಒದ್ದೆ ಮಾಡಿಸಿತು. ಆ ಒದ್ದೆಗೊಂಡ ಪುಟದ ಮೇಲೆ ಕೈಯಾಡಿಸಿದಾಗ ಶಾರದೆಯ ಕಣ್ಣೀರು ನೆನಪಾಗಿ ಅವಳ ಕಣ್ಣೀರು ಸಮಾಜದ ಕ್ರೂರ ವ್ಯವಸ್ಥೆಯನ್ನು ಎಷ್ಟು ಶಪಿಸಿ ನೊಂದಿರಬಹುದು ಎಂದೆನಿಸಿತು.

 

ಸುಸಂಸ್ಕೃತ ಕುಟುಂದವರೇ, ಸಮಾಜದ ರಕ್ಷಕರೇ, ಸಮಾಜದ ಮೂಲ ಸ್ಥಾನದಲ್ಲಿರುವವರೇ ಈ ಬೃಹತ್ ವೇಶ್ಯೆ ಜಗತ್ತನ್ನು ಸೃಷ್ಠಿಸಿದರೇ? ಅಥವಾ ಹಿಂದಿನಿಂದಲೂ ನಡೆದುಕೊಂಡು ಬಂದು ಕೌಟುಂಬಿಕ ಮೂಢನಂಬಿಕೆಗಳೆ ಇದರ ಸೃಷ್ಟಿಗೆ ಕಾರಣವೇ? ಆಯಾ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ಆಯ್ದುಕೊಂಡ ಮಾರ್ಗವೇ? ಈ ಕ್ರೂರ ಸಾಮಾಜಿಕ ವ್ಯವಸ್ಥೆಗೆ ಕಾರಣೀಕರರ್ತರು ಸಮಾಜವೇ ಅಲ್ಲವೇ! ಸಮಾಜದ ಸಂಪ್ರದಾಯಗಳೇ! ಸಮಾಜದ ಬಹುಸಂಖ್ಯಾತ ಗಣ್ಯಾತಿಗಣ್ಯರ ಆಸೆಗಳೆ! ಹೌದು! ನಿಜಾ ಅನಿಸುತ್ತೆ. ನಮ್ಮ ಹಳ್ಳಿಗಳಲ್ಲಿ, ನಮ್ಮ ಸುತ್ತಲಿನ ಕುಟುಂಬಗಳಲ್ಲೂ ಶಾರದೆಯಂತಹ ಮುಗ್ದ ಹೆಣ್ಣುಗಳು ನರಳಿ ನರಳಿ ನಲುಗುತ್ತಿದ್ದಾರೆ. ಅಂತಹ ಕ್ರೂರ ವ್ಯವಸ್ಥೆಯನ್ನು ಪೋಷಿಸುವ ವರ್ಗವೂ ಇದೆ. ಎಲ್ಲವನ್ನೂ ನೋಡಿಕೊಂಡು ಊರ ಉಸಾಬರಿ ನಮಗ್ಯಾಕೆ ಎಂದು ತೆಪ್ಪಗಿರುವವರೂ ಇದ್ದೆವೆ. ಶಾರದೆಯ ಬದುಕಿನ ಹೋರಾಟ ವೇಶ್ಯೆಜಗದ ಪ್ರತಿಯೊಬ್ಬ ಹೆಣ್ಣಿನ ಬದುಕಿನ ಹೋರಾಟವೂ ಆಗಿದೆ. ಅಲ್ಲಿ ಅನುಭವಿಸು ನೋವು ಸಂಕಟಗಳನ್ನು ಕೇಳುಗರೇ ಇಲ್ಲ. ಶಾರದೆಯ ಬಾಲ್ಯದಿಂದಲೂ ಅವಳ ಬದುಕಿನ ಕತೆಯನ್ನು ಕೆಂಗುಲಾಬಿ ಕಾದಂಬರಿ ವಿಶಿಷ್ಟ ರೀತಿಯಲ್ಲಿ ಹೇಳುತ್ತದೆ.

 

ಕಥಾನಾಯಕ ಮಲ್ಲೇಶಿ ತನ್ನ ಬದುಕಿನ ನರಕಸದೃಶ್ಯ ವೇಶ್ಯೆ ಲೋಕದ ಹಳ್ಳಿ ಬದುಕಿನ ಕಥನವನ್ನು ಹೇಳುತ್ತಲೇ ಹುಬ್ಬಳ್ಳಿಗೆ ಬರುವುದು ಅಲ್ಲಿ ಶಾರದೆಯನ್ನು ಕಾಣುವುದು ಶಾರದೆಯ ಪರಿಚಯವನ್ನು ತಿಳಿಸುವುದು, ಮುಂದುವರೆದು ಶಾರದೆಯಿಂದಲೇ ಅವಳ ಬದುಕಿನ ಕತೆಯನ್ನು ಹೇಳಿಸುವುದು ಅವಳ ಕತೆಯ ಜೊತೆಗೆ ವೇಶ್ಯೆ ಲೋಕದ ಉಪಕತೆಗಳನ್ನು ಹೇಳಿಸುವುದು ತುಂಬಾ ವಿಶಿಷ್ಟ ರೀತಿಯಲ್ಲಿ ಕಾದಂಬರಿ ಸಾಗುತ್ತದೆ.

 

ಒಂದೊಂದು ಅಧ್ಯಾಯಗಳೂ ಒಂದೊಂದು ನೋವಿನ ಕಥನವನ್ನು ಸಮಾಜದ ಕೆಟ್ಟ ವ್ಯವಸ್ಥೆಯ ಚಿತ್ರಣವನ್ನು, ವೇಶ್ಯೆ ಲೋಕದಲ್ಲಿ ಹೆಣ್ಣನ್ನು ದುಡಿಸುವ ರೀತಿ, ಅಲ್ಲಿಯ ದಲ್ಲಾಳಿಗಳ ಚಿತ್ರಣ, ಅಲ್ಲಿ ಬದುಕು ಕಟ್ಟುಕೊಳ್ಳಲು ಹೆಣ್ಣು ಅನುಭವಿಸಬೇಕಾದ ನೋವು ಸಂಕಟಗಳು, ಅಲ್ಲಿಯ ಮುಖ್ಯಸ್ಥೆಯ ಚುಚ್ಚುಮಾತುಗಳು, ಅವಳ ಅಧೀನಳಾಗಿ ದುಡಿಯಬೇಕಾದ ಹೆಣ್ಣುಮಕ್ಕಳ‌ ಚಿತ್ರಣ, ಅಲ್ಲಿಗೆ ಬರುವ ಅಧಿಕಾರಿಗಳಿಗ ಜೇಬಿಗೆ ಸುರಿಯುವ ಹಣ, ಕೋರ್ಟು ಕಛೇರಿಗಳಲ್ಲೂ ಇಂತಹ ಹೆಣ್ಣುಮಕ್ಕಳಿಂದ ಹಣಕೀಳುವ ಜನರ ಕುರಿತು ಹೀಗೆ ವೇಶ್ಯೆ ಲೋಕದ ಅನಾವರಣವೇ ಕೆಂಗುಲಾಬಿ ಕಾದಂಬರಿಯಾಗಿದೆ.

ಕಾದಂಬರಿಯು ಕೇವಲ ನೂರ ಇಪ್ಪತ್ತು ಪುಟಗಳನ್ನು ಹೊಂದಿದ್ದರೂ ಹಳ್ಳಿ ಜೀವನದ ದೇವದಾಸಿ ಪದ್ದತಿಯಿಂದ ಹಿಡಿದು ನಗರದ ವೇಶ್ಯೆ, ಪಬ್ಬುಗಳಲ್ಲಿ ಕುಣಿಯುವ ಜಗತ್ತಿನ ತನಕದ ಎಲ್ಲ ಸಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುತ್ತದೆ. ಕಾದಂಬರಿಯ ಕುರಿತು ಬಹಳಷ್ಟು ಹೇಳಲಾರೆ ಎಲ್ಲವನ್ನೂ ಕೆಂಗುಲಾಬಿಯೇ ಹೇಳುತ್ತದೆ. ಒಮ್ಮೆ ಕೈಗೆತ್ತಿಕೊಂಡ ಪುಸ್ತಕ ಕೊನೆಗೆ ಒಂದುಹನಿ ಕಣ್ಣೀರು ಹಾಕಿಯೇ ಕೆಳಗಿಡಬೇಕು.  

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ