Article

ಹೊಸ ಲೋಕದ 'ಹಾಣಾದಿ’

ಗೆಳೆಯ ಕಪಿಲ ಹುಮನಬಾದೆ ಕಳುಹಿಸಿದ ತನ್ನ ಚೊಚ್ಚಲ ಕಾದಂಬರಿ ‘ಹಾಣಾದಿ’ ತಲುಪಿ ಆಗಲೇ ಒಂದು ತಿಂಗಳು ಕಳೆಯುತ್ತಾ ಬಂದಿತ್ತು. ಕೆಲಸದ ಒತ್ತಡಗಳ ನಡುವೆ ಓದಲಾಗದೇ ಹಾಗೆ ಬ್ಯಾಗಿನೊಳಗೆ ಇಟ್ಟಿದ್ದೆ. ನಿನ್ನೆ ಓದಲಿಕ್ಕೆ ಶುರು ಮಾಡಿ ನೋಡು ನೋಡುತ್ತಾ ಅದೇ ನನ್ನನ್ನು ಪಟ್ಟಾಗಿ ಕೂರಿಸಿ ಓದಿಸಿಕೊಂಡಿತು. ಓದುತ್ತಾ ಹೋದಂತೆಲ್ಲಾ ಯಾವುದೋ ಲೋಕದೊಳಕ್ಕೆ ನಾವು ನುಸುಳಿದಂತೆ ಭಾಸವಾಗದೇ ಇರದು, ಅಥವಾ ನಮ್ಮ ಸುತ್ತಲೇ ಒಂದು ಲೋಕ ಸೃಷ್ಠಿಯಾಗಿಬಿಡುತ್ತದೆ. ಮುಂದೇನಾದೀತು ಅನ್ನೋ ಕುತೂಹಲ ಇಡೀ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿಕೊಂಡು ಹೋಗುವಂತೆ ಮಾಡುತ್ತದೆ.

ಇನ್ನೂ ಇಪ್ಪತ್ತಾರು ವರ್ಷದ ಗೆಳೆಯ ಕಪಿಲನ ಕಥೆ ಕಟ್ಟುವಿಕೆ ಮತ್ತದಕ್ಕೆ ಆಯ್ದುಕೊಂಡ ಕಥಾವಸ್ತು, ಪಾತ್ರಗಳು, ಘಟನೆಯಿಂದ ಘಟನೆಗೆ ದಾಟುವಾಗ ಸುಮ್ಮನಿಡುವ ಒಂದು ಮೌನ ಅಚ್ಚರಿ ತರದೇ ಇರದು. ಹೈದರಾಬಾದ್-ಕರ್ನಾಟಕ ಸೀಮೆಯ ಉರ್ದು ಮಿಶ್ರಿತ ಕನ್ನಡವನ್ನು ಇಡೀ ಕಾದಂಬರಿಯ ಕೊನೆಯವರೆಗೂ ಬಹಳ ಅಚ್ಚುಕಟ್ಟಾಗಿ ಒಗ್ಗಿಸಿದ್ದಾರೆ. ಅಲ್ಲಲ್ಲಿ ಕಂಡುಬರಬಹುದಾದ ಸಣ್ಣ ಪುಟ್ಟ ತಪ್ಪುಗಳನ್ನು ಕಾದಂಬರಿ ನಾಜೂಕಾಗಿ ನುಂಗಿಹಾಕಿ ಓದುಗನ ಗಮನಕ್ಕೆ ಬಾರದಂತೆ ನೋಡಿಕೊಳ್ಳುತ್ತದೆ.

ಕಾದಂಬರಿಯ ಶುರು ಶಹರದ ಯಾವುದೋ ಒಂದು ಮೂಲೆಯಲ್ಲಿ ಇದ್ದಿರಬಹುದಾದ ಕೋಣೆಯಿಂದ ಆಗುತ್ತದೆ. ಅದುವರೆಗು ಜೊತೆಯಿದ್ದ ಹುಡುಗಿ ಮದುವೆ ಸೆಟ್ಟೇರುತ್ತಿದ್ದಂತೆ ಕಥೆಯ ನಿರೂಪಕನಿಗೆ ವಿದಾಯ ಹೇಳಿ ಹೊರಡುತ್ತಾಳೆ.  ಅಪ್ಪನಿಗೆ ಮಾಡಿದ ಮನಿ ಆರ್ಡರ್ ವಾಪಸ್ ಆದಾಗ ಯಾಕೆಂದು ತಿಳಿಯದೇ ವಾಪಾಸು ಹಳ್ಳಿಗೆ ಅಪ್ಪನ್ನ ನೋಡಲು ಹೊರಡುವ ನಿರೂಪಕ ತನ್ನ ಹಳ್ಳಿಯ ದಾರಿಯಲ್ಲಿ ಕಥೆಯನ್ನು ಶುರು ಮಾಡುತ್ತಾನೆ.

ಇಡೀ ಹಳ್ಳಿಯಲ್ಲಿ ಎಲ್ಲಿ ನೋಡಿದರೂ ಪಾಳುಬಿದ್ದ ಮನೆಗಳು, ಆದರೆ ತನ್ನ ಮನೆಗೆ ಹೋದಾಗ ಅಪ್ಪನಿರದೇ ಅಲ್ಲೊಂದು ಮುದುಕಿ, ಅದು ಗುಬ್ಬಿ ಆಯಿ. ನಿರೂಪಕನಿಗೆ ತೀರಾ ಪರಿಚಿತ ಮುದುಕಿ, ತಾನ್ಯಾವತ್ತೂ ನೋಡಿರದ ಮುದುಕಿ. ಕರೆದು ಊಟಕಿಕ್ಕಿ ಮಮತೆಯಿಂದ ನೋಡುಕೊಳ್ಳುತ್ತಾಳೆ. ಇಡೀ ಹಳ್ಳಿಗೆ ಹಳ್ಳಿಯೇ ಖಾಲಿ ಮುದುಕಿ ಜೊತೆಗೆ ಒಂದು ಪುಟ್ಟ ಹುಡುಗಿ. 

ಅಪ್ಪ ತಾನು ನೆಟ್ಟು ಬೆಳಿಸಿದ ಬಾದಾಮು ಮರದ ಸುತ್ತಲು ಕಥೆ ಗಿರಕಿ ಹೋಡೆಯುತ್ತದೆ. ತನ್ನ ಬದುಕಿನ ಭಾಗವೇ ಆಗಿ ಹೋಗುವ ಬಾದಾಮು ಮರವನ್ನು ಮಗನಿಗಿಂತಲೂ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ದೆವ್ವಗಳ ಅಸ್ತಿತ್ವವನ್ನು ಮುಲಾಜಿಲ್ಲದೇ ಬಿಸಾಡುವ ಅಪ್ಪ, ಮರದಲ್ಲಿ ದೆವ್ವ ಹೊಕ್ಕೊಂಡಿದೆ ಕಡಿಯಲೇಬೇಕು ಅಂತ ಇಡೀ ಹಳ್ಳಿಯವರೆಲ್ಲಾ ಹೇಳಿದಾಗಲೂ ಸುತಾರಾಂ ಒಪ್ಪದೇ ಮರವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾನೆ ಅದಕ್ಕೆಂದೇ ಹಳ್ಳಿಯ ಎಲ್ಲರ ವಿರುದ್ಧವಾಗಿ ನಿಲ್ಲುತ್ತಾನೆ. ಸಾಲು ಸಾಲು ಬಿದ್ದ ಹೆಣಗಳು ಅಲ್ಲಿನ ಘಟನೆಗಳನ್ನು ಹೆಣೆದಿರುವ ರೀತಿಯೇ ಅಮೋಘವಾದದ್ದು.

ಕಾದಂಬರಿಯುದ್ದಕ್ಕೂ ಒಂದಷ್ಟು ವಾಕ್ಯಗಳು ಕಾವ್ಯವೇ ಅನ್ನಿಸಿಬಿಡುತ್ತದೆ. ಗತಕಾಲದ ಕಥೆಗಳನ್ನು ರೋಚಕವಾಗಿ ಹೇಳುತ್ತಾ ಹೇಳುತ್ತಾ ಗುಬ್ಬಿ ಆಯಿ ಪಕ್ಕದಲ್ಲೇ ಇದ್ದಂತೆ ಭಾಸವಾಗದೇ ಇರಲಾರದು. ಅವಳ ಬಗೆಗಿನ ಚಿಕ್ಕಪುಟ್ಟ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುವಲ್ಲಿ ಗೆಳೆಯ ಕಪಿಲ ವಹಿಸಿದ ಶ್ರದ್ಧೆ ನಿಜಕ್ಕೂ ಶ್ಲಾಘನೀಯ. ಕಾದಂಬರಿಯ ಕೊನೆಯಲ್ಲಿ ನಿಮಗೆ ಮೈ ಝುಂ ಎಂದೆನಿಸದಿದ್ದರೆ ಕೇಳಿ! ಏನೋ ಆಗಿಬಿಡುತ್ತದೆ ಅಂದುಕೊಂಡು ಓದಿ ಇನ್ನೇನೋ ತಿರುವು. ಅಬ್ಬಬ್ಬಾ ಅನ್ನಿಸದೇ ಇರದು. ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಬೇಕಾದ ಸರಕಂತೂ ಹೌದು. ನೀವು ಖಂಡಿತಾ ಓದಲೇ ಬೇಕಾದ ಕಾದಂಬರಿ.

ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರವರ ಕೊಟ್ಟೂರು