ಹಾಣಾದಿ

Author : ಕಪಿಲ ಪಿ ಹುಮನಾಬಾದೆ

Pages 112

₹ 110.00
Year of Publication: 2019
Published by: ಕಾವ್ಯ ಮನೆ ಪ್ರಕಾಶನ
Address: #220, ವೀರೇಂದ್ರ ಪಾಟೀಲ್ ಬಡಾವಣೆ , 1ನೇ ಬ್ಲಾಕ್, ಸೇಡಂ ರೋಡ್, ಕಲಬುರಗಿ- 585105
Phone: 7829464653

Synopsys

ಹಾಣಾದಿ- ಕಪಿಲ ಪಿ ಹುಮನಾಬಾದೆ ಅವರ ಮೊದಲ ಕಾದಂಬರಿ. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿರುವ ಈ ಕೃತಿ ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ. ವರ್ತಮಾನ ಮತ್ತು ಭೂತಕಾಲದ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ ವಾಸ್ತವತೆಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಗಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ ಜನಪದ ರಮ್ಯಾದ್ಬುತ ಕಥೆಗಳಲ್ಲಿರುವಂತೆ ಗುಬ್ಬಿ ಆಯಿ ಎಂಬ ಆಡಗೊಳಜ್ಜಿ ಒಬ್ಬಳಿದ್ದಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳ ಪಾಥೆಯವನ್ನು ಹೊತ್ತ ಕಥಾನಿರೂಪಕನಿದ್ದಾನೆ. ಅವರ ಮಾತುಕತೆ, ನೆನಪು, ಉಪಕಥೆಗಳು ಭ್ರಮ-ವಿಭ್ರಮ ಲೋಕವನ್ನು ಸೃಷ್ಟಿಸುತ್ತವೆ. ಒಂದು ಗ್ರಾಮದ ಅವನತಿ, ಸಾವು-ನೋವು, ವಿಷಮ ಸಂಸಾರ, ಸಂಬಂಧಗಳು, ಮಾನವ ಸಹಜ ದ್ವೇಷಾಸೂಯೆ ಬದುಕು ಬಲಿ ಕೊಡುವ ನಂಬಿಕೆ ಇತ್ಯಾದಿಗಳು ಈ ಗಾರುಡಿ ಲೋಕದಲ್ಲಿ ಬಿಚ್ಚಿಕೊಳ್ಳುತ್ತವೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. 

About the Author

ಕಪಿಲ ಪಿ ಹುಮನಾಬಾದೆ
(25 January 1996)

ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್ ನವರು. ಬೀದರನಿಂದ ನೌಬಾದ ಹಾದಿ ಹಿಡಿದು, ಎರಡು ಬೋಳು ಗುಡ್ಡವಿಳಿದು ಹೋದರೆ ಅಲ್ಲಿ ಕಾಣುವ ಅಲಿಯಾಬಾದ್ ಎಂಬ ಪುಟ್ಟ ಗ್ರಾಮದಲ್ಲಿ 1996 ಜನವರಿ 25ರಂದು ಜನಿಸಿದರು. ಪ್ರಭು ವೀರಶೆಟ್ಟಿಯವರ ಮೊದಲ ಮಗ ಕಪಿಲ ಪಿ ಹುಮನಾಬಾದೆ. 2019 ನೇ ಸಾಲಿನ ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆಯ ಟಾಪ್ 25 ಕಥೆಗಳಲ್ಲಿ ಇವರ ಬಾಗಿಲು ಎಂಬ ಸಣ್ಣಕಥೆ ಆಯ್ಕೆಯಾಗಿದೆ. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯ ನಿರ್ವೈಸುತ್ತಿದ್ದಾರೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಎಂ.ಎ ಎರಡನೇ ...

READ MORE

Conversation

Awards & Recognitions

Reviews

ಹಳ್ಳಿಯ ಸೊಗಡಿನ ಹಾಣಾದಿ-ಅವಧಿ-ಮೌನೇಶ್ ಕನಸುಗಾರ

ಹಾಣಾದಿ-ಕೆಂಡ ಸಂಪಿಗೆ-ಬಾಳಾಸಾಹೇಬ-ಕೇಶವ ಮಳಗಿ

ಕಳೆದುಹೋದ ಹಾದಿ ಹಾಡು-ಹಾಣಾದಿ-ಪ್ರಜಾವಾಣಿ-ರಘುನಾಥ ಚ. ಹ.

ಕಾಡುವ ಓದು-ಹಾಣಾದಿ-ಉದಯವಾಣಿ

ದೀಪಾಜಿ ಅವರ ವಿಮರ್ಶೆ (ಸಂಗಾತಿ)

ಕಾಲುದಾರಿಯ ಕಥಾನಕ 'ಹಾಣಾದಿ': ಎಚ್.ಎಸ್. ಸತ್ಯನಾರಾಯಣ - ಬುಕ್ ಬ್ರಹ್ಮ

.......................................................................................................................................................

ವಿದ್ಯಾರ್ಥಿಯಾಗಿರುವ ಇಪ್ಪತ್ತರ ಆಸುಪಾಸಿನ ಕಪಿಲ ಹುಮನಾಬಾದ ಅವರ ಚೊಚ್ಚಲ ಕಾದಂಬರಿ ’ಹಾಣಾದಿ’ ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ವರ್ತಮಾನ ಮತ್ತು ಭೂತಕಾಲದ ಜತೆಜತೆಗೆ ಸಾಗುವ ಕಾದಂಬರಿಯ ನಿರೂಪಣೆ ವಿಭಿನ್ನವಾಗಿದೆ. ಕತೆಯೊಳಗೊಂದು ಕತೆ, ನೆನಪುಗಳೊಳಗೊಂದಷ್ಟು ನೆನಪುಗಳು. ಹಾಣಾದಿಯಲ್ಲಿ ಬರುವ ಹಳ್ಳಿ, ನೆನಪುಗಳ ಹೊತ್ತ ಕಥಾನಾಯಕ ಬಹಳ ಕಾಲ ಕಾಡುತ್ತಾನೆ.

15 ಡಿಸೆಂಬರ್‌ 2019 

ಕೃಪೆ : ವಿಜಯ ಕರ್ನಾಟಕ

.......................................................................................................................................................

ಈ ನೆಲಮೂಲದ ಅನುಭವ ಮತ್ತು ಅಧ್ಯಯನದ ಘಮಲು ’ಹಾಣಾದಿ’

“ಈ ಬಿಸಿಲಂದ್ರೆ ಅಪ್ಪ ಇದ್ದಂಗೆ, ಮುಂಜಾನೆ ಎಳೆ ಮಗುವಿನಂತೆ, ಮಧ್ಯಾನ ಉರಿ ಬಿಸಿಲಿನಂತೆ ಸಿಡುಕಿನ ಮನುಷ್ಯ, ರಾತ್ರಿ ಬಿಸಿಲು ಬಿಟ್ಟು ಹೋದ ಅವಶೇಷದಂತಿರುತ್ತಿದ್ದ. ಬಿಸಿಲಿನಷ್ಟೆ ಸದ್ದಿಲ್ಲದೆ ಕುದಿಯುತ್ತಿರುವ ಮನುಷ್ಯ” “ನೀರು ಹರಿದು ನುಣುಪಾದ ಜಾರು ಕಲ್ಲುಗಳು. ಉಸುಕು ಮಣ್ಣು ಬೆರೆತು ನೆಲದಲ್ಲಿ ನೀರು  ನಿಂತ ಅಗಲವಾದ ಜಾಗ. ಮಧ್ಯೆ  ಮಧ್ಯೆ  ವಿಚಿತ್ರ ಕೀಟಗಳ ಹಾರಾಟ”
ಈ ಮೇಲಿನ ಸಾಲುಗಳು ನಾನು ಇತ್ತೀಚಗೆ ಓದಿರುವ ಕಪಿಲ ಪಿ. ಹುಮನಾಬಾದೆ ಎನ್ನುವ ಪ್ರೀತಿಯ ಹರೆಯದ ಹುಡುಗನ ’ಹಾಣಾದಿ’ ಕಾದಂಬರಿಯ ಸಾಲುಗಳು. ಕನ್ನಡ ಸಾಹಿತ್ಯದ ಲೋಕದ ನಂಟು ಈ ಕಾದಂಬರಿಯ ಜೀವಾಳ. ಬೀದರಿನಿಂದ ಕಲಬುರ್ಗಿಯ ನೆಲದ ವಾಸನೆಯು ಈ ಕಾದಂಬರಿವಿಷಯ ವಸ್ತು. ಈ ನೆಲದ ಭಾಷೆ, ಆಸ್ವಾದ ಮೇಲ್ನೋಟಕ್ಕೆ ಕಂಡುಬರುತ್ತದೆ. ಇಲ್ಲಿ ಬಳಸಿರುವ ಪದಗಳು ಆತನ  ಕನ್ನಡ ಸಾಹಿತ್ಯದ ಮೇರುಕೃತಿಗಳ ಅಧ್ಯಯನದ ಫಲವಾಗಿ  ಮೂಡಿಬಂದಿವೆ. ಕಥಾ ಹಂದರವನ್ನು ಅತ್ಯಂತ  ಸೂಕ್ತ ರೀತಿಯಲ್ಲಿ ಕಟ್ಟುವ ಕಲೆ ಹಿರಿಯರ ಸಾಹಿತ್ಯದ ಓದಿನಿಂದ ಮಾತ್ರ ಸಾಧ್ಯವೆನ್ನುವುದನ್ನು ಈ ಕಾದಂಬರಿ  ಸಾಬೀತುಪಡಿಸುತ್ತದೆ. 
ಕಾದಂಬರಿ ಹಳ್ಳಿ ಸೊಗಡಿನ ಭಾಷೆಯಲ್ಲಿದ್ದು ಓದಿಗರಿಗೆ ಹತ್ತಿರವಾಗುತ್ತದೆ. ಕಥಾನಾಯಕ ಎಲ್ಲಿಯೂ ತನ್ನ ಹೆಸರು ನೇರವಾಗಿ ಪ್ರಸ್ತಾಪಿಸದಿದ್ದರು. ಸಾಹಿತ್ಯ ಓದಿಗರಿಗೆ ಕಥಾನಾಯಕ ಯಾರು ಯಾಕೆ ನಮಗೆ ತನ್ನ ಕಥೆ ಹೇಳುತ್ತಿದ್ದಾನೆ ಎನ್ನುವ ಸಣ್ಣ ಸುಳಿವು ಕಾದಂಬರಿ ಬಿಟ್ಟುಕೊಡುತ್ತದೆ. ಕಾದಂಬರಿಯ ಸೂಕ್ಷ್ಮತೆ ತಕ್ಷಣಕ್ಕೆ ಅರ್ಥವಾಗದೇ ಸಂಪೂರ್ಣ ಗೃಹಿಕೆಗೆ ಸಿಗುವುದು ಸ್ವಲ್ಪ ಕಷ್ಟವೆ ಎನಿಸುತ್ತದೆ. ಕನ್ನಡ ಕಾದಂಬರಿ ಲೋಕದಲ್ಲಿ ಈಗಾಗಲೇ  ಅನೇಕ ಹಿರಿಯರು ತಮ್ಮ ಬದುಕನ್ನು ಬಾಲ್ಯವನ್ನು ಹಲವು  ಬಗೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ’ಹಾಣಾದಿ’ಯು ಕೂಡಾ ಅದೇ ಹಾದಿಯಲ್ಲಿದೆ ಎನಿಸುತ್ತದೆ. ಕಥೆ  ನಮಗೆ ಹಲವು ವಿಚಾರಗಳನ್ನು ಬಿಚ್ಚಿಡುತ್ತಾ ಎಳೆದುಕೊಳ್ಳುತ್ತಾ ಬಾಲ್ಯದ ನೆನಪುಗಳತ್ತ ಕರೆದುಕೊಂಡು ಹೋಗುತ್ತದೆ. ನಾವ್ಯಾರು ನೆನಪಿಡದೇ ಅನೇಕ ಸಂಗತಿಗಳನ್ನು ಕಾದಂಬರಿ ಅತ್ಯಂತ ಉಚ್ರಾಯ ಸ್ಥಿತಿಯಲ್ಲಿ  ತಿಳಿಸುತ್ತಾ ಹೋಗುತ್ತದೆ. ಆಯಿ, ಬಾದಾಮಿ ಗಿಡಿ ಇವುಗಳ ಉಲ್ಲೇಖ ಕೃತಕವೆನಿಸಿದರು ಅವು ಕಥೆಗಾರನೊಂದಿಗೆ ಸಂದಿಸುವ ಬಗೆ ಅತ್ಯಂತ ಸೂಕ್ತವಾದದ್ದು.  ಕಾದಂಬರಿಯ ಒಳ ಹರೆವು, ಮನಸ್ಸುಗಳನ್ನು ಬೀಳಿಸುತ್ತಾ ಏಳಿಸುತ್ತಾ, ಸತ್ಯ ಹೇಳುವುದಕ್ಕೆ ತುಕಡಿಸುತ್ತಲೇ ಎಲ್ಲವೂ ಹೇಳುತ್ತದೆ. 
ಜನಮಾನಸದಲ್ಲಿ  ಹಾಸುಹೊಕ್ಕಾಗಿರುವ ಸಾಮಾನ್ಯ ಬದುಕನ್ನು ತಿಳಿಸುತ್ತ ಅಪ್ಪ, ಅಜ್ಜಿ, ಇರುವೆ ಸಾಲು, ಕೆಂಪು ಮತ್ತು  ಕಪ್ಪು ಮಣ್ಣಿನ ಹುತ್ತ, ಸಾವು, ನಿಘೂಡತೆ, ಭಯ, ಹಾಣಾದಿ, ಬಂಡಿ, ಹೊಲ, ಸೂರ್ಯ ಹೀಗೆ ಮನುಷ್ಯ ಪ್ರೀತಿಗೆ ಬೇಕಾಗಿರುವ ಎಲ್ಲವನ್ನು ಕಥಾ ಹಂದರಕ್ಕೆ ಜೋಡಿಸಿ  ಅದರೊಳಗೊಂದಿಷ್ಟು ಅಲಂಕಾರಗಳ  ಜೊತೆಗೆ ಒಗ್ಗರಣೆ  ಬೆರೆಸಿ ಕೊಡುವ  ಒಟ್ಟು ಮೊತ್ತವೇ ಹಾಣಾದಿ. 
ಹಾಣಾದಿ ಆತನ ಮೊದಲ ಕಾದಂಬರಿ ಎಂದು  ನನಗೆ ಅನಿಸಲಿಲ್ಲ ಬದಲಿಗೆ ಮಾಗಿದ ಓದಿನ ಫಲವೆನಿಸಿತು. ಅದಕ್ಕಿಂತ ಹೆಚ್ಚಾಗಿ ಕೊಡ ಬಾಗಿದ ಹುಡುಗನ  ಪ್ರೀತಿಯ ಫಲವೆನಿಸಿತು. ಕಾದಂಬರಿಯು ಪ್ರತಿ ಪ್ರಾರಂಭಕ್ಕೂ ಅತೀಹೆಚ್ಚು ಅಲಂಕಾರಗಳು, ಹೋಲಿಕೆಗಳು, ಉಪಮೇಯ, ಉಪಮಾನಗಳು ಬಳಕೆಯಾಗಿರುವುದರಿಂದ ಕೆಲವೊಮ್ಮೆ ಅಭಾಸವೆನಿಸುತ್ತದೆ. ಕಾದಂಬರಿಯುದ್ದಕ್ಕೂ ಕಥೆಗಾರನನ್ನು ನೇರವಾಗಿ ಕಾಣದಿದ್ದಾಗ ಇವನ್ಯಾರು ಎನ್ನುವ ಪ್ರಶ್ನೆ ಹೊಳೆದಾಗ ಕೋಪ ಬರುತ್ತದೆ. ಹೇಳುವ ಸಣ್ಣ ವಿಷಯವನ್ನು ಇಷ್ಟೆಲ್ಲ ಸುತ್ತಾಡಬೇಕ ಎನಿಸತ್ತದೆ. ಕಾದಂಬರಿ ಓದು ಮುಗಿದ ಬಳಿಕ ಹೌದು ಇದೆಲ್ಲವೂ ಬೇಕಿತ್ತು ಎಂದು ನಿರ್ಧಾರಕ್ಕೆ ಬರುತ್ತೇವೆ. ಕಥೆಗಾರ ಪ್ರತಿ ಪುಟದಲ್ಲಿಯೂ ಮಲಗಿ, ಎದ್ದು, ಓಡಿ, ಬಿದ್ದು, ಒದ್ದಾಡಿದ್ದು ನಿಶ್ಛಳವಾಗಿ ಕಾಣುತ್ತದೆ. 
ಹಾಣಾದಿ ಒಂದು ಕಾಲಘಟ್ಟದಲ್ಲಿ ನಡೆದ ಘಟನೆಯಾಗಿದ್ದು ಅದನ್ನು ಕಾದಂಬರಿ ರೂಪಕ್ಕೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕೆಲವೊಮ್ಮೆ ನಾನೇ ಕಾದಂಬರಿಕಾರ ಎನ್ನುವ ಸುಳಿವು ಬಿಟ್ಟುಕೊಡಲು ಹೆದರುತ್ತದೆ. ಕಾಲಮಾನಗಳನ್ನು ಕಾದಂಬರಿಯಲ್ಲಿ ಹಿಡಿದಿಡಲು ಸಾಧ್ಯವಾಗಿದೆ. ಕಥೆ, ಉಪಕಥೆ, ಕನಸಿನೊಳಗೊಂದು ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಒಂದು ಗ್ರಾಮದಲ್ಲಿ ನಡೆಯುವ ಈ ಕಥೆ ಅನೇಕಬಾರಿ ಬೆರೆಲ್ಲೆಡೆ ನಡೆದಿದೆಯೊ ಅಥವಾ ನಮ್ಮದೇ ಊರಿನ  ಕಥೆಯೋ ಎನ್ನುವಷ್ಟು ಹತ್ತಿರವಾಗುತ್ತದೆ. ಕಥೆಯನ್ನು ಹಣೆಯುವ ಪ್ರಯತ್ನ ಉತ್ತಮವಾಗಿ ಮಾಡಲಾಗಿದೆ. ಪಠ್ಯವನ್ನು ಅರಗಿಸಿಕೊಳ್ಳದ ಈ ತಾಂತ್ರಿಕ ಯುಗದಲ್ಲಿ ಹಿರಿಯರ  ಸಾಹಿತ್ಯವನ್ನು ಪ್ರೀತಿಯಿಂದ ಓದುತ್ತಾ, ಅದರಂತೆ ಬರೆಯುವಲ್ಲಿ ತೊಡಗಿಸಿಕೊಂಡಿರುವ ಈ ಹುಡುಗ ಮೆಚ್ಚುಗೆಗೆ ಪಾತ್ರವಾಗುತ್ತಾನೆ. ಕಾದಂಬರಿ ಮೊದಲಾದರು, ತೋರಿರುವ  ಬರವಣಿಗೆಯ ಗಟ್ಟಿತನ, ಕಥಾವಸ್ತು, ಜೀವಪರತೆ ಎಲ್ಲವೂ ಅಭಿನಂದನಾರ್ಹವಾಗಿದೆ. ಇನ್ನು ಹೆಚ್ಚು ಅಧ್ಯಯನಶೀಲನಾಗುವ ಅಗತ್ಯವಂತು ಇದ್ದೆ ಇದೆ. ಸಮಕಾಲಿನ ಕಾದಂಬರಿ ಪ್ರಪಂಚಕ್ಕೆ ಸೆಡ್ಡು ಹೊಡೆದು ನಿಲ್ಲಬಲ್ಲ, ಕನ್ನಡ ಸಾಹಿತ್ಯದ ಕಾದಂಬರಿ ಲೋಕಕ್ಕೆ ಪಾದಾರ್ಪಣೆ ಮಾಡಬಲ್ಲ ಶಕ್ತಿ ಹಾಣಾದಿ. 

ಕೆ. ಎಂ. ವಿಶ್ವನಾಥ ಮರತೊರ

2019 ಸೆಪ್ಟಂಬರ್‌ 29 ಕೃಪೆ: ಉದಯವಾಣಿ

 


 

Related Books