Article

ಜಯಂತ್ ಕಾಯ್ಕಿಣಿ ಕಣ್ಣಲ್ಲಿ 'ಚಾರ್ ಮೀನಾರ್'

ಎಷ್ಟೋ ದಿನಗಳಿಂದೀಚೆಗೆ " ನೀರು" ಎಂಬ ಕಥೆ ಬರೆಯಬೇಕೆಂಬ ಇರಾದೆ ಇತ್ತು. ಮಂಗಳೂರಿಗೆ ಬಂದ ನಂತರ ನೀರಿಗುಂಟಾದ ಅಭಾವವನ್ನು ಅನುಭವಿಸುವಾಗಲೆಲ್ಲಾ  ನಾನೊಂದು ಚಂದದ ಕಥಾ ಹಂದರದ ತಲಾಶೆಯಲ್ಲಿದ್ದೆ. ಕ್ವಚಿತ್ತಾಗಿ ಕೈಗೆ ಬಂದ ಜಯಂತ್ ಕಾಯ್ಕಿಣಿಯವರ "ಚಾರ್ ಮಿನಾರ್" ಕಥಾ ಸಂಕಲನ ಕುತೂಹಲಕ್ಕೆ ತಳ್ಳಿ ಬಿಟ್ಟಿತು. ಕೋಮಲ ಮತ್ತು ಗಾಂಧಾರ ಎಂಬ ಕಥೆಯ ಎರಡು ಪಾತ್ರಗಳು ಸ್ಕ್ರೀನಿನಿಂದ ನಿಜ ಬದುಕಿಗೆ ಆವಾಹಿಸಿ ಮುಂಬೈ ಎಂಬ ಮಹಾನಗರ ಕುತೂಹಲದ ಕಣ್ಣುಗಳಿಂದ ನೋಡಿದವರು ಅದೆಷ್ಟು ಚಂದ ಅಕ್ಷರಕ್ಕೆ ದುಡಿಸಿಕೊಂಡರೋ? ನಾವೂ ಮಹಾ ನಗರಗಳಿಗೆ ಹೊಟ್ಟೆಪಾಡಿಗಾಗಿ ಹೊರಟು ನಿಂತಾಗ ಅಲ್ಲಿ ಕಾಣುವುದೆಲ್ಲವೂ ಬದುಕಿನ ನಾಟಕಗಳೆಂದು ಮರೆತು ಬಿಡುತ್ತೇವೆ. ಕಥೆಗಾರ ಹಾಗಲ್ಲ, ಟ್ರಾಫಿಕ್ ಜಾಂ ನ್ನು ಎಂಜಾಯ್ ಮಾಡುತ್ತಾರೆ. ಕಹಿ- ಸಿಹಿ ಘಟನೆಗಳನ್ನು ಕಥೆಯಾಗಿಸುತ್ತಾರೆ. ಬಹುಶಃ ಕಾಯ್ಕಿಣಿಯವರಿಗೆ ಮಾತ್ರ ಒಲಿದಂಥದ್ದು, ಆ ಮಹಾ ನಗರವನ್ನೇ ಫ್ಲೈಯಿಂಗ್ ಕ್ಯಾಮರಾದಂತೆ ದಶ ದಿಕ್ಕುಗಳನ್ನೂ ನೋಡುವ ಅವರ ಗ್ರಹಿಕೆ ಅತಿ ಸೂಕ್ಷ್ಮ. ನನಗಂತೂ " ನೀರು" ಎಂಬ ಆ ಕಥೆ ಇಡೀ ಬದುಕನ್ನೇ ಕಟ್ಟಿಕೊಟ್ಟಂತಿತ್ತು. ಒಬ್ಬ ಮಿಡಲ್ ಕ್ಲಾಸ್, ಇನ್ನೊಬ್ಬ ತಳ ವರ್ಗದ ಟಾಕ್ಸಿ ಡ್ರೈವರ್ ಇನ್ನೊಬ್ಬ ಶ್ರೀಮಂತ ಆ ಮಹಾ ಮಳೆಯಲ್ಲಿ ಟ್ರಾಫಿಕ್ ನ ಸಿಕ್ಕಿನಲ್ಲಿ ಬದುಕು ಅರ್ಥೈಸಿಕೊಳ್ಳುವುದೆಷ್ಟು ಚಂದ. ಒಂದು ಮಹಾ ಮಳಡ ಅರ್ಥಾತ್ ನೀರು ಅಷ್ಟು ಸಾಮಾಜಿಕ ಬದಲಾವಣೆ ತರುವ ಆಧುನಿಕ ಶೈಲಿ ಇದು. ಇದು ಬಿಟ್ಟರೆ ನಾನು ತೇಜಸ್ವಿಯವರ ಹಲವು ಕಥೆಗಳಲ್ಲೂ ಮೊದಲ ಮಳೆಯಿಂದಾಗಿ ಹಳ್ಳಿಯಲ್ಲುಂಟಾಗುವ ಕ್ಷಿಪ್ರ  ಬದಲಾವಣೆಯನ್ನು ಕಂಡಿದ್ದೇನೆ. ನಗರದ ದುಮುದುಮಿಸುವ ಜಂಜಡಗಳನ್ನೂ ಕಥೆ ಯಾಗಿಸಬಹುದೆಂಬುವುದು ಕಾಯ್ಕಿಣಿಯವರಿಂದ ಕಲಿತೆ.

ಕೊಳ್ಳುವಂತದ್ದು ಮನೋಜ್ಞವಾಗಿದೆ. ಅಭಂಗ ಅಭಿಸಾರ ರೆಂಬ ಎರಡು ಹುಡುಗರ ಬಿಟ್ಟಿರಲಾರದ ಸ್ನೇಹದ ಕಥೆಯೇ ಒಂದು ಹೊಸ ಆಯಾಮ. ಕಳೆದು ಬಿಡುತ್ತೇವೆಯೇ ಎಂದು ಪರಿತಪಿಸುವ ಅತಿ ಭಾವುಕ ಮನಸ್ಸುಗಳೆರಡರ ಸ್ನೇಹವದು. ಅದೊಂದು ರೋಗವಾಗಿಯೋ, ವಿಕೃತಿಯಾಗಿಯೋ ಕಾಣುವ ನಮ್ಮ ಕಣ್ಣುಗಳು ತೆರೆಸಬಲ್ಲದು.ಚಾರ್ ಮೀನಾರ್ ಕಥೆ ಇಡೀ ಪುಸ್ತಕಕ್ಕೇ  ನವೀನ ಮೆರುಗು. ಮರೆಯಲಾಗದ ಸ್ಥಳವನ್ನು ಹಿಡಿದಿಡಲು ಕಥೆಗಾರ ಪಾತ್ರಗಳನ್ನು ಎಳೆದು ತರುವುದು ಬಣ್ಣಿಸಲಸದಳ. ಮತ್ತೆ ಮತ್ತೆ ಪಾತ್ರಗಳು ಕಾಡುತ್ತಾ ಕಥೆಯೊಳಗೆ ಹುದುಗಿಸಿಬಿಡುತ್ತವೆ. ಮುಂಬೈ- ಗೋವಾ ಸ್ಥಳದ ಪರಿಚಯವಿದ್ದವಿರಿಗೆ ಈ ಕಥೆಗಳು ಬಹುವಾಗಿ ಕಾಡುವುದರಲ್ಲಿ ಸಂಶಯವೇ ಇಲ್ಲ." ಮಧು ಬಾಲ" ಕಥೆ ಹೆಣ್ಣು ಮತ್ತು ಗಂಡು ಮನಸ್ಸಿನ ಪ್ರೇಮ ಹೊಯ್ದಾಟ. ಸಮಾಜದ ಕೆಟ್ಟ ಹುಡುಗಿಯೆಂಬ ಉತ್ತಮ ಮನಸ್ಸಿನ ಒಡತಿಯೊಬ್ಬಳ ಹುಡುಕಿ ಅರಸುವ ಹುಡುಗನ ಪಯಣವೊಂದು ವಿಚಿತ್ರವಾಗಿ ತೆರೆದುಕೊಳ್ಳುವ ಕಥೆಗಾರನ ಕಲಾತ್ಮತೆಗಿಟ್ಟ ಗರಿ‌‌.

ಒಳಾಂಗಣ ವೆಂಬ ಕಥೆ ಒಂದು ಅದ್ಭುತ ಕಥನ ಕುತೂಹಲ. ಬಿಟ್ಟು ಹೋದ ಮಗನಿಗಾಗಿ ಪರಿತಪಿಸುವ ಅಪ್ಪ- ಅಮ್ಮಂದಿರ ಅಳಲು, ಖಾಲಿತನದ ಅನಾವರಣ. ಕಳೆದೇ ಹೋಗಿರುವ ಮಗನನ್ನು ನೆನೆದು ಮರುಕ ಪಡುತ್ತಿರುವಂತೆ ಮನೆಗೆ ಶೂಟಿಂಗಿಗಾಗಿ ಮುಖ ಬಣ್ಣ ಬಳಿದು ಬರುವ ಹುಡುಗನನ್ನು ಕಥೆಗಾರ ಉದ್ದೇಶ ಪೂರ್ವಕವಾಗಿ ಹೊರಟು ಬಿಟ್ಟ ಮಗನಾಗಿಯೋ, ಇನ್ನೊಬ್ಬ ತಂದೆ- ತಾಯಿಯನ್ನು ಬಿಟ್ಟು ಬಂದ ಮಗನಾಗಿಯೋ ಚಿತ್ರಿಸುವಲ್ಲಿ ಯಶಸ್ವಿಯಾಗುತ್ತಾರೆ. ಒಂದು ವಿಶೇಷ ಅನುಭೂತಿ ಕೊಟ್ಟು ಕಥೆಗಾರ ಹೊರಟು ಬಿಡುತ್ತಾರೆ. ನಾವು ಅದೇ ಗುಂಗಿನಲ್ಲಿ ಪಾತ್ರಗಳನ್ನು ಹುಡುಕುತ್ತಾ ಕಥೆಯಾಗುತ್ತೇವೆಯೋ, ಕಥೆ ಸೃಷ್ಟಿಸುತ್ತೇವೆಯೋ? ಎಂಬುವುದರಲ್ಲೇ ಉಳಿದು ಬಿಡುತ್ತೇವೆ. ಮೊದಲ ಮಳೆಗೆ ಮ್ಲೇಚಗಳೆಲ್ಲಾ ಹರಿದು ಹದಗೊಂಡ ಭೂಮಿಯಂತೆ ಮನಸ್ಸು ಹಗುರವಾಗುತ್ತಾ  ಮತ್ತೊಂದಿಷ್ಟು ಪಾತ್ರದಾರಿಗಳ ಮೋಡ ಕಟ್ಟಿಕೊಳ್ಳುತ್ತದೆ.

https://www.bookbrahma.com/book/char-minar

ಮುನವ್ವರ್ ಜೋಗಿಬೆಟ್ಟು