Article

ಕಾಡುವ ಮಾತಂಗಿ ’ಪ್ರಿಯೇ ಚಾರುಶಿಲೆ’

ಪ್ರಿಯೇ ಚಾರುಶೀಲೆ ಹೆಸರು ಕೇಳಿದೊಡನೆ ಮನಸ್ಸು ಈ ಹಿಂದೆ ಸಾಹಿತ್ಯದಲ್ಲಿ ಮಿಂಚಿದ ಹೆಸರಂತೆ ಕಂಡಿತು. ನಾನಂತೂ ಮೂಲ ಚಾರುಶೀಲೆಯನ್ನು ಕುರಿತಾಗಿ ಓದಿಲ್ಲ ಆದರೂ ಓದಲು ಕೃತಿ ಕೈಗೆತ್ತಿಕೊಂಡಾಗ ಇದೊಂದು ಸುಂದರ ಪ್ರೇಮ ಕಾದಂಬರಿ ಇರಬಹುದು ಎಂದು ಊಹಿಸಿಕೊಂಡು ಓದಲಾರಂಭಿಸಿದೆ. ಓದು ಮುಗಿದಾಗ ಐಳನಿಗೆ ಮಾತಂಗಿ ಎಷ್ಟು ಕಾಡಿದಳೋ ಅಷ್ಟೇ ನನಗೂ ಕಾಡಿದಳು. ಕಾದಂಬರಿ ಮುಗಿದಾಗ ಐಳ, ಮಾತಂಗಿಯ ಚಮತ್ಕಾರದ, ಮೋಡಿಯ, ಮಾಯೆಯ ಪ್ರೀತಿಗೆ ನಾನೂ ಮರುಳಾದೆ. 

ಜಗನ್ನಾಥ ದೇವರ ಸನ್ನಿಧಿಯಲ್ಲಿ ಆರಂಭವಾಗುವ ಕಾದಂಬರಿ ಅಪರಿಚಿತ ಐಳ ಹಾಗೂ ಮಾತಂಗಿಯರ ನಡುವೆ ಪರಿಚಯದ ಪೊರೆಯನ್ನು ಹೊತ್ತು ಅಪರಿಚಿತರೆಂಬ ಪೊರೆಯನ್ನು ಕಳಚಿ ಇಬ್ಬರೂ ಅಪರಿಚಿತರು ಅಲ್ಲವೇ ಅಲ್ಲ ಎಂಬಂತೆ ಬೆಸೆದುಕೊಂಡ ಬಾಂಧವ್ಯದ ಪ್ರತೀಕದಂತೆ ಕಾಣುತ್ತದೆ. ಐಳ ಮಾತಂಗಿಯ ಪ್ರೇಮಕತನ ಕಾದಂಬರಿಯ ಮೂಲ ವಿಷಯವಸ್ತು. ಅಪರಿಚಿತೆ ಎನ್ನುವುದನ್ನೂ ಮರೆತ ಐಳ ಮಾತಂಗಿಯೊಡನೆ ಗೆಳೆತನ ಬೆರೆಸುವುದು ಹಾಗೂ ಐಳನೆಂಬ ಅಪರಿಚಿತ ಗಂಡಿನೊಡನೆ ಮಾತಂಗಿ ಅಷ್ಟು ಸಲಿಗೆಯಿಂದ ಬೆರೆಯುವುದು ಒಂದು ರೀತಿಯ ಚಮತ್ಕಾರದಂತೆ ಗೋಚರಿಸಿದರೂ ಅವರಿಬ್ಬರ ಒಂದು ರಾತ್ರಿಯ ಕಾದಂಬರಿಯದಲ್ಲೆಲ್ಲೂ ಆ ಭಾವ ಕಾಣುವುದಿಲ್ಲ, ಜಾತ್ರೆಯಲ್ಲೆಲ್ಲ ಗಂಡಹೆಂಡಿರೆಂದು ಎಲ್ಲರೂ ಕರೆಯುತ್ತಿದ್ದರು. ಅಂತೆಯೇ ಇಬ್ಬರೂ ನಟಿಸುತ್ತಾರೆ, ನಡೆಯುತ್ತಾರೆ.

ಒಟ್ಟಾರೆ ಕಾದಂಬರಿ ಒಂದು ರಾತ್ರಿಯಲ್ಲಿ ಐಳ ಹಾಗೂ ಮಾತಂಗಿಯರಿಬ್ಬರ ನಡುವೆ ನಡೆಯುವ ಹಲವಾರು ಸಂಭಾಷಣೆಗಳ ಪ್ರೇಮದ ಗುಚ್ಚವಾಗಿದೆ. ಯಾರೂ ಮಾಡದ್ದನ್ನು ನಾನು ಮಾಡುವೆ ಎಂಬ ಹುಂಬು ಹಂಬಲ ಮಾತಂಗಿಗೆ. ಅದು ಐಳನೆದುರು ಒಂದೆರಡು ಬಾರಿ ನಡೆದು ಹೋಗುತ್ತದೆ. ಐಳನೂ ಆ ಕಾರ್ಯದಲ್ಲಿ ಭಾಗಿದಾರನೂ ಆಗುತ್ತಾನೆ.  ಐಳನಿಗೆ ಮಾತಂಗಿ ಮಾಯೆಯಂತೆ ಕಾದಂಬರಿಯಲ್ಲಿ ಒಮ್ಮಿಂದೊಮ್ಮೆಲೆ ಕಾಣೆಯಾಗುತ್ತಾಳೆ. ಆದರೂ ಅವಳು ಪರಿಚಯದ ಮೊದಲೇ ಹೇಳಿಯೂ ಇರುತ್ತಾಳೆ. ನಮ್ಮಿಬ್ಬರ ಸ್ನೇಹ, ಈ ಬಂಧ ಕೇವಲ ಒಂದು ರಾತ್ರಿಯದು ಮಾತ್ರ. ನನ್ನನ್ನು ಜಾಸ್ತಿ ಹಚ್ಚಿಕೋಬೇಡ ಎಂದು. ಆದರೂ ಐಳ ಮಾತಂಗಿಯ ಅಗಲಿಕೆಯನ್ನು ಸಹಿಸದೇ ರೋಧಿಸುತ್ತಾನೆ ಅವಳು ಮರೆಯಾದ ಕ್ಷಣ. ಮಾತಂಗಿ ಐಳನಿಗಷ್ಟೇ ಅಲ್ಲ ಓದುಗರ‌್ನೂ ಹುಚ್ಚರನ್ನಾಗಿಸುತ್ತಾಳೆ. ಐಳನ ಹೆಗಲಿಗೆ ಹೆಗಲಾನಿಸಿ ಕಾದಂಬರಿಯುದ್ದಕ್ಕೂ ನಡೆಯುತ್ತಾಳೆ. ಒಂದೊಮ್ಮೆ ಅವನ ಅಪ್ಪುಗೆಯಲ್ಲಿ, ಬಿಸಿಯುಸಿರಲ್ಲಿ ಮೈಮರೆತವಳು ಐಳ ಏಳುವುದರೊಳಗೆ ಮಾಯವಾಗಿರುತ್ತಾಳೆ. ಐಳನಿಗೆ ಇದು ಕನಸೋ ಭ್ರಮೆಯೋ ಒಂದು ತಿಳಿಯದಂತಾಗುತ್ತದೆ. ಆದರೂ ಅವಳು ಬಿಟ್ಟು ಹೋದ ಉಂಗುರ ಅವಳ ನೆನಪಿಗೆ ಉಳಿದ ಏಕೈಕ ವಸ್ತುವಾಗಿರುತ್ತದೆ.

ಮಾಯವಾದ ಮಾತಂಗಿಯು ಇಂದಿರೆಯೂ..ಆಗಿದ್ದು ಚಲನಚಿತ್ರದ ಶ್ರೇಷ್ಠ ನಟಿಮಣಿಯೂ ಆಗಿರುತ್ತಾಳೆ. ಅಪಾರ ಅಭಿಮಾನಿಗಳನ್ನು ಹೊಂದಿದವಳಾಗಿರುತ್ತಾಳೆ. ವಾಸ್ತವವೇ ಬೇರೆ. ಐಳನ ಸುತ್ತಲೂ ತೆರದುಕೊಂಡ ಜಗತ್ತೇ ಬೇರೆಯೆಂಬಂತೆ ಐಳ ಗೊಂದಲಕ್ಕೊಳಗಾಗುತ್ತಾನೆ. ಎರಡು ದಿನಗಳ ಹಿಂದೆ ಒಮ್ಮಿಂದೊಮ್ಮೆಲೇ ಮಾತಂಗಿ ಮರೆಯಾದಳು ಎಂಬ ಸುದ್ದಿ ಟೀವಿಯಲ್ಲಿ ಬಿತ್ತರಗೊಂಡಿರುವುದನ್ನು ನೋಡಿ ಐಳ ಆಶ್ಚರ್ಯಕ್ಕೆ ಒಳಗಾಗುತ್ತಾನೆ. ನಾನು ನಂಬಿದ ಹೆಣ್ಣು ಇಂದಿರೆಯೋ! ಎಂದು ಗೊಂದಲಕ್ಕೆ ಬೀಳುತ್ತಾನೆ. ಆದರೆ ಟೀವಿ ಪರದೆಯಲ್ಲಿ ಮೂಡಿಬರುವ ಅವಳ ಚಿತ್ರಪಟಗಳು ಮಾತಂಗಿ ಹಾಗೂ ಇಂದಿರೇ ಇಬ್ಬರೂ ಒಬ್ಬರೇ ಎಂದು ದೃಢಪಡಿಸಿಕೊಳ್ಳುತ್ತಾನೆ.  ಮಾಯಾವಾದ ಇಂದಿರೆಯೊಂದಿಗೆ ಕಾದಂಬರಿ ಮತ್ತೊಂದು ಮಗ್ಗುಲನ್ನು ತೆರೆದುಕೊಳ್ಳುತ್ತದೆ. ಅವಳನ್ನು ಅಗಲಿರದ ಐಳ ಅವಳ ನೆನಪನ್ನು ಹೊತ್ತು ಬೆಳಿಗ್ಗೆ ಮತ್ತೆ ದೇವರ ಆವರಣಕ್ಕೆ ಬರುತ್ತಾನೆ. ಅಲ್ಲಿ ಮಾತಂಗಿಯನ್ನು ಕಾಣುತ್ತಾನೆ. ಪೋಲಿಸರ ಕೈಗೆ ಸಿಕ್ಕಿಕೊಳ್ಳುತ್ತಾನೆ. ಕಾದಂಬರಿಯ ಕೊನೆಯ ನೂರು ಪುಟಗಳು ತುಂಬಾ ಕೌತುಕತೆಯಿಂದ ಕೂಡಿದ್ದು ಓದಿಯೇ ಖುಷಿಪಡಬೇಕು.

ಕೊನೆಗೂ ಮಾತಂಗಿ ಐಳನಿಗೆ ಸಿಕ್ಕಳೇ! ಅವಳನ್ನು ಕೊನೆಯ ಬಾರಿ ನೋಡಬೇಕೆಂದು ಹಂಬಲಿಸುವ ಐಳನಿಗೆ ಮಾತಂಗಿ ಸಿಗುವಳೇ! ಮಾತಂಗಿ ಎನ್ನುವುದು ಭ್ರಮೆಯೇ! ಹೆಣ್ಣು ಮಾಯೆಯೇ.! ಐಳ ಕಂಡದ್ದು ಕನಸೇ? ಮಾಯೆಯ ಲೋಕದಲ್ಲಿ ಒಂದು ಸುತ್ತು ವಿಹರಿಸಿ ಬನ್ನಿ. ಪ್ರಿಯೇ ಚಾರುಶೀಲೆ ಒಂದು ಸುಂದರ ಪ್ರೇಮ ಕಾದಂಬರಿ. ಲೇಖಕರು ಕಾದಂಬರಿ ಉದ್ದಕ್ಕೂ ಐಳನ ಮೂಲಕ ಮಾತಂಗಿಗೆ ಹಲವಾರು ಹೊಸ  ಕನ್ನಡ ಪದಗಳನ್ನು, ಇಂಗ್ಲೀಷ ಪದಗಳನ್ನು ಪರಿಚಯಿಸುತ್ತಲೇ ಹೋಗುತ್ತಾರೆ. ಲೇಖಕರ ಬರಹದ ಶೈಲಿಯೇ ವಿಭಿನ್ನ. ಹೊಸತನ ಅವರ ಬರಹದಲ್ಲಿ ಸದಾ ಇರುತ್ತದೆ. ಅವರು ಭಾಷೆಯ‌ನ್ನು ಬಳಸುವ ಬಗೆಯೇ ಬೇರೆ. ಲೇಖಕರ "ಸಂಸ್ಕಾರ್ ರೈಟ್ಸ್"  ಇತ್ತೀಚಿನ ಕತೆ ಓದಿದ ನಂತರ ಬೆರಗಾಗಿದ್ದೆ. ಪ್ರಿಯೇ ಚಾರುಶೀಲೆ ಈಗಲೂ ಬೆಂಬಿಡದೆ ಕಾಡುತ್ತಿರುವಳು.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ