ಪ್ರಿಯೇ ಚಾರುಶೀಲೆ

Author : ನಾಗರಾಜ ವಸ್ತಾರೆ

Pages 316

₹ 295.00
Year of Publication: 2019
Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೈಸ್‌ ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076
Phone: 9844422782

Synopsys

ಪ್ರಿಯೇ ಚಾರುಶೀಲೆ ನಾಗರಾಜ ವಸ್ತಾರೆ ಅವರ ಕಾದಂಬರಿ. ಪ್ರೇಮಕತೆ ಆಧಾರಿತ ಕಾದಂಬರಿಗಳು ಹಲವಾರಿವೆ. ವಸ್ತಾರೆ ಅವರ ಈ ಕಾದಂಬರಿ ಅವರು ಬಳಸಿರುವ ಭಾಷೆ ಹಾಗೂ ಶೈಲಿ ಓದುಗನ ಮನ ಮುಟ್ಟುವಂತಿದೆ. ಕರಾವಳಿಯ ಸೊಬಗನ್ನು  ಕಾದಂಬರಿ ಉದ್ದಕ್ಕೂ ಕಟ್ಟಿಕೊಟ್ಟಿರುವ ಪರಿ ವಿಭಿನ್ನವಾಗಿದೆ.

About the Author

ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್‌, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ...

READ MORE

Excerpt / E-Books

‘ಪ್ರಿಯೇ ಚಾರುಶೀಲೆ’ ಕಾದಂಬರಿಯ ಪುಟ್ಟ ಅಧ್ಯಾಯ
 

ಇಬ್ಬರೂ, ಬಲು ಉದಾಸದಿಂದಲೇ ಎದ್ದು ಮೈ ಮುರಿದೆವು. 
ಕಡಲಿಗೆ ಎದುರಾಗಿ ನಿಂತು- ಎಡಕ್ಕೂ ಬಲಕ್ಕೂ, ಎಡದಿಂದ ಬಲಕ್ಕೂ, ಬಲದಿಂದ ಎಡಕ್ಕೂ... ಒಂದೆರಡು ಸಲ ಗೋಣು  ಹಚ್ಚಿ, ಮುಂಬೆಳಗಿನ ಮಬ್ಬಿನಲ್ಲಿ ಹೂತುಹೋದ ಕಿನಾರೆಯ ಅಗಾಧತೆಯನ್ನು ಅಳೆದುಕೊಂಡೆವು. ಹಾಗೇ ಒಮ್ಮೆ, ನಿಂತಿದ್ದಲ್ಲೇ ಒಂದು ಸುತ್ತು ಮೈತಿರುವಿ- ಕಡಲಿನ ಪಶ್ಚಿಮಕ್ಕೆ ಮೈದೆರೆದಿದ್ದ ಪುರೀಶಹರವನ್ನೂ, ಮುಂದಿನ ಹಗಲಿನಲ್ಲಿ ತೆರೆಯಲಿಕ್ಕಿರುವ ಜಗನ್ನಾಥಕೃಷ್ಣನ ವರ್ಷದ ಮಹಾ‘ಲೀಲೆ’ಗೆಂದೇ ಸಜ್ಜಾದ ಇಡೀ ಶಹರದ ಅಲಂಕಾರವನ್ನೂ... ಹಿಂಬದಿಯಲ್ಲಿ, ಇನ್ನೂ ಕತ್ತಲುಟ್ಟು ಹಬ್ಬಿರುವ ಆಕಾಶವನ್ನೂ... ಅದರೊಳಗಿನ ಕೋಟ್ಯಂತರ ನಕ್ಷತ್ರಗಳನ್ನೂ... ಒಂದೆರಡು ಕೋರೈಸುವ ಬೆಳ್ಳಂಬೆಳ್ಳಿಯ ಚಿಕ್ಕೆಗಳನ್ನೂ... ಕಡೆಗೆ, ಆಷಾಢದ ಶುಕ್ಲಪಕ್ಷವನ್ನು ತೆಳುವಾಗಿ ಸೂಚಿಸುತ್ತಿರುವ ಬಿದಿಗೆಯ ಮುನ್ನಿನ ಚಂದ್ರವನ್ನೂ... ಒಂದು ನಿಸ್ಸೀಮ ‘ಪೆನಾರೊಮಾ’ದಲ್ಲಿ ಕಣ್ತುಂಬಿಕೊಂಡೆವು. 
‘ಹೊರಡೋಣವಾ?’ ಎಂದು, ಕೊಂಚ ಲಗುಬಗೆಯಿಂದ ನಾನು ಕೇಳುವಾಗ,  ‘ಒಂದೇ ಒಂದು ನಿಮಿಷ. ಲೆಟ್ಸ್ ಡು ಎ ಸೆಲ್ಫೀ...’ ಎಂದು ಹೇಳಿದ ಮಾತಂಗಿ, ಕಿಸೆಯಿಂದ ಫೋನು ಹೆಕ್ಕಿಕೊಂಡಳು. ‘ನಿನ್ನೊಡನೆ ಕಳೆದ ಈ ಮಹಾರಾತ್ರಿಯ ನೆನಪು ನನಗೆ ಬೇಕು...’ ಅನ್ನುತ್ತ, ಫೋನಿನಲ್ಲಿ ಸೆಲ್ಫೀಮೋಡ್ ಆವಾಹಿಸಿ, ಇಬ್ಬರನ್ನೂ, ಏಕತ್ರ ಒಂದೇ ಚೌಕದಲ್ಲಿಟ್ಟು ಅಳೆಯಹೊಂಚಿದಳು. ಬೆಳಕು ಕಡಿಮೆಯಿತ್ತಾದ್ದರಿಂದ ತುಸು ಸರ್ಕಸ್ಸೇ ಆಯಿತು! 
‘ಬೆಳಕೇ ಇಲ್ಲವಲ್ಲ...’ ಚಡಪಡಿಸಿದಳು. 
ಕಡಲಿಗೆ ಬೆನ್ನು ಮಾಡಿ ನಿಂತರೆ, ಹಿಂಬದಿಯ ಕತ್ತಲು- ಇಬ್ಬರ ಆ ಕ್ಷಣದ ಒಂದು ‘ಮಹಾ’ಸಂದರ್ಭವನ್ನೇ ಹೊರತಾಗಿಸಿ ತೋರುವುದು. ಬಂಗಾಳಕೊಲ್ಲಿಯೆಂಬ ದೊಡ್ಡ ಸಮುದ್ರವಿರುವ ಪೂರ್ವದಿಶೆ ನಮ್ಮ ಹಿಂದಿದೆಯೆಂಬುದನ್ನೇ ಮರೆಮಾಚುವುದು! ಅಂದರೆ ಈ ಜಗತ್ತಿನಲ್ಲಿನ ಯಾವುದೇ ಕತ್ತಲನ್ನು ಗ್ರಹಿಸಿದಂತೆ ಅನ್ನಿಸುವುದು! ಇನ್ನು, ಪುರೀಶಹರದೆಡೆಗೆ ಬೆನ್ನಿಕ್ಕಿ ನಿಂತೆವೆಂದರೆ- ಶಹರವೇನೋ ಕಂಡುಬರುವುದು... ಆದರೆ ಬೆಳಕೊಂದಿಷ್ಟೂ ಸಾಲದೆನ್ನಿಸುವುದು! ಅಕಸ್ಮಾತ್, ಕಂಡುಬಂದರೂ- ಅದು ಜಗನ್ನಾಥ ಪುರಿಯೇ ಎಂಬ ಮೊಹರು ದಕ್ಕೀತೇನು? ಈ ಬೃಹದ್ಭಾರತದ ಯಾವುದೇ ನಗರವೂ ಹೀಗೇ ತಾನೇ ಇದ್ದೀತು?! 
ಏನು ಮಾಡುವುದು?
‘ಲೋ ಏನಾದರೂ ಮಾಡೋ...’ ಫೋನನ್ನು ನನ್ನ ಕೈಗಿತ್ತಳು. 
ಸರಿ... ಫೋನಿಸಕೊಂಡು ಸಜ್ಜಾದೆ. ‘ಇಲ್ಲಿ ಬಾ...’ ಅಂತಂದು, ಮಾತಂಗಿಯನ್ನು ನನ್ನ ಎದುರಿಗೆ ನಿಲ್ಲಿಸಿಕೊಂಡು, ಅವಳನ್ನು ಹಿಂದಿನಿಂದ ಬಳಸಿ, ಫೋನನ್ನು ಇಬ್ಬರಿಗೂ ಮುಂದೆ ತಂದುಕೊಂಡು- ನಿಧಾನವಾಗಿ ಶಹರದ ಹಿನ್ನೆಲೆಯೊಡನೆ ದೂರದ ಜಗನ್ನಾಥ ಶಿಖರವನ್ನೂ ಹುಡುಕಿ-ಹೆಕ್ಕಿ ಒಳತಂದುಕೊಂಡು, ಅಷ್ಟೇ ಜತನವಾಗಿ- ಮೇಲೆ ತೂಗುವ ಬಿದಿಗೆಯ ಮುನ್ನಾ ರಾತ್ರಿಯ ಚಂದ್ರವನ್ನೂ ಫ್ರೇಮೊಳಕ್ಕೆ ತಂದು... ನಮ್ಮಿಬ್ಬರ ಮೋರೆಗಳ ಫೋಕಸನ್ನೂ ಹೆಚ್ಚಿಸಿ... ಇನ್ನೇನು ಕ್ಲಿಕ್ಕೊತ್ತಬೇಕು  ಎಂಬಷ್ಟರಲ್ಲಿ, ಮೊಬೈಲು, ಇದ್ದಕ್ಕಿದ್ದಂತೆ ತನ್ನ ಕೆಮೆರಾಮೋಡ್ ಮೀರಿ ಇನ್ನೊಂದಾಗಿಬಿಟ್ಟಿತು! ಬಹುಶಃ ತನ್ನೊಳಗಿನ ಫೋಟೋ ಗ್ಯಾಲರಿಯನ್ನು ತೆರೆಯಿತೇನೋ! 
ಮಾತಂಗಿ ತಕ್ಷಣ ಫೋನು ಕಿತ್ತುಕೊಂಡಳು. ನಾನು ಫೋಟೋಗ್ಯಾಲೆರಿಯೊಳಗೆ ಇಣಿಕಿಯೇನೆಂಬ ದಿಗಿಲು ಹೆಣ್ಣಿಗೆ! 
‘ಹೇ... ಬೇರೆಯವರ ಫೋನೊಳಗಿಣಿಕೋದು ವಯೊಲೇಷನ್ ಅಂತ ನನಗೆ ಚೆನ್ನಾಗಿ ಗೊತ್ತು!’ ಎಂದು ಒಮ್ಮೆಗೇ ಹೇಳಿ ಮೆಲ್ಲಗೆ ನಕ್ಕೆ. 
‘ಲೋ ಐಳ... ಅದು ಹಾಗಲ್ಲವೋ...’ ನನ್ನ ತೋಳುಗಳೊಳಗಿದ್ದೇ ಸಮಜಾಯಿಷಿಗೆ ತೊಡಗಿದಳು. 
ಇಷ್ಟಿದ್ದೂ, ಹೆಣ್ಣು ಬಲು ಕಡಿದಾಗಿ ಉಡುಪು ತೊಟ್ಟಿದ್ದ ಚಿತ್ರವೊಂದು ನನ್ನ ಕಣ್ಣಿಗೆ ಬಿತ್ತು. ಒಲ್ಲೆಂದರೂ ತೋರಿ ಕಂಡಿತು! 
ಹೌದೋ ಅಲ್ಲವೋ, ಬಹುಶಃ ಸ್ವಿಟ್ಸರ್ಲೆಂಡ್ ಅನ್ನಬಹುದಾದ ಒಂದು ಸನ್ನಿವೇಶ. ಎಲ್ಲೆಲ್ಲೂ ಮಂಜುಕವಿದ ಬೆಟ್ಟಗಳ ಶುಭ್ರ ಶುಚಿ ಶ್ವೇತ ಸಂದರ್ಭ! ಎಲ್ಲವೂ ಬಿಳಿ. ಮರಗಿಡ, ಬೆಟ್ಟಗುಡ್ಡ, ತಗ್ಗುತಿಟ್ಟು, ಕಣಿವೆ... ಎತ್ತರ.... ಹೀಗೆ ಒಂದೊಂದೂ ಬಿಳಿ. ನಡುವೆ ಒಂದೆರಡು ಕಟ್ಟಡಗಳಿದ್ದು, ಅವುಗಳ ಮೈಯಲ್ಲೂ ಹಿಮವೇ ಹಿಮವಾದ ಬಿಳಿ. ಅಲ್ಲಿಲ್ಲಿ ಎದ್ದುಕೊಂಡಿದ್ದ ಒಂದಷ್ಟು ಪೈನ್-ವೃಕ್ಷಗಳ ಸರಕೂ ಚೂಪುಚೂಪಾಗಿ ನಿಂತ ಬೆಳ್ಳಿ ಗೋಪುರಗಳೆಂಬಂತೆ ಬೆಳ್ಳಂಬಿಳಿ. ನಡುನಡುವೆ ಅಂಕುಡೊಂಕಾಗಿ ಬಳುಕುವ ದಾರಿಗಳೂ ಬಿಳಿಯನ್ನೇ ಉಟ್ಟುಹೊದ್ದಷ್ಟು ಬಿಳಿ... ಹೋಗಲಿ, ಆಕಾಶವಾದರೂ ನೀಲಿಯಿರಬೇಕಷ್ಟೆ? ಅದರಲ್ಲೂ ನೀಲಿ ತಗ್ಗಿಸಿ, ಸೊಕ್ಕಿದ ಬಿಳಿ ಹಚ್ಚಿದ ಹಾಗೆ ಬಿಳಿ. ಹೀಗೆ ಬಗೆಬಗೆಯ ಬಿಳಿಶೇಡುಗಳ ಬಿಳಿ ಬಳಿದ ಬಿಳಿ!
ಇಂಥದೊಂದು ಹಿನ್ನೆಲೆಯ ಎದುರುನಿಂತು, ಕೆಂಪೇ ಕೆಂಪಗಿನ ತೆಳ್ಳನೆ ಸೀರೆಯುಟ್ಟು- ಮೈದೋರಿಕೊಂಡಿರುವ ಹೆಣ್ಣು, ನನಗೆ, ಇವಳೇನಾ ಅಂತನಿಸಿದ್ದು ಹೌದು! ಸಾಲದುದಕ್ಕೆ ‘ಆಕೆ’ ರವಿಕೆಯನ್ನೂ ತೊಟ್ಟಿರಲಿಲ್ಲ! ಹಾಗಂತ ಏನೂ ತೊಡದೆಯೂ ಇರಲಿಲ್ಲ! ಹಾಗಾದರೆ ಅದೇನು? ಹಾಗೆ ತೊಟ್ಟಿದ್ದುದಾದರೂ ಏನು?!
ಎದೆಯಲ್ಲಿನ ಸ್ತನ‘ಮಾನ’ವನ್ನಷ್ಟೇ ಕವಿಯುತ್ತ, ಸೀರೆಯಷ್ಟೇ ಕೆಂಗೆಂಪಗಿದ್ದು, ಇತ್ತ ರವಿಕೆಯೂ ಅಲ್ಲದ ಹತ್ತಾ ಬ್ರಾ ಅಂತಲೂ ಅನ್ನಿಸದ- ಎರಡರ ನಡುವಿನ ಬಲು ಮಹತ್ತನೆ ಕೆಂಪುಸಂಗತಿ ಅದು!
ಇವಿಷ್ಟನ್ನೂ, ನಾನು ನೋಡಿದೆನೋ ಇಲ್ಲವೋ- ಎಂದನಿಸುವ ಗಡುವಿನಲ್ಲಿ ನೋಡಿದೆ. ನೋಡಿದೆನೆಂಬುದೂ ಸುಳ್ಳೇ. ಹಾಗೇ, ನೋಡಲಿಲ್ಲವೆಂಬುದೂ ಸುಳ್ಳೇ! 
ಯಾಕೆಂದರೆ- ಮಾತಂಗಿ, ಫೋಟೋದಲ್ಲಿರುವುದು ತಾನನಿಸಗೊಡದಷ್ಟು ಫಕ್ಕನೆ- ಫೋನಿನ ಗ್ಯಾಲರಿಯನ್ನು ಮುಚ್ಚಿಬಿಟ್ಟಳು! 
‘ಬೇಜಾರು ಮಾಡಿಕೋಬೇಡ...’ ಎಂದು, ನನ್ನ ಎದೆಗೊರಗಿಕೊಂಡೇ ಆಕಾಶಕ್ಕೆ ಗೋಣಿಕ್ಕಿ, ನನ್ನ ಕೆಳಗಲ್ಲದ ಗಡ್ಡದೊಳಗೆ, ಗದ್ದವನ್ನೇ ಕಡಿದೇನೆಂಬಂತೆ- ಅಲ್ಲಿಯವರೆಗೆ ತುಟಿ ಹಚ್ಚಿ ಹೇಳಿದಳು.
ನಿಜಕ್ಕೂ ಅಜೀಬನ್ನಿಸಿತು. 
‘ಈಗ ತೆಕ್ಕೊಡೋ…’ ಅನ್ನುತ್ತ, ಮತ್ತೊಮ್ಮೆ ಫೋನಿಗೆ ಸೆಲ್ಫೀಮೋಡ್ ಹಚ್ಚಿ ಕೈಗಿತ್ತಳು. 
ಮತ್ತೊಮ್ಮೆ ಹಿಂದೆ ಮಾಡಿದ್ದನ್ನೇ ಮಾಡುವುದಾಯಿತು!
ಮೊದಲಿಗೂ ಹೆಚ್ಚು ಜತನವಾಗಿ, ಫೋನಿನ ತೆರೆಯೊಳಕ್ಕೆ- ಹಿನ್ನೆಲೆಯಲ್ಲಿನ ಶಹರದ್ರವ್ಯದಿಂದ ಜಗನ್ನಾಥ ಶಿಖರವನ್ನು ಹುಡುಕಿ-ಹೆಕ್ಕಿ ತಂದುಕೊಂಡು, ಅದರ ಶಿಖರಾದಿ ಪತಾಕೆಗಳ ಸಹಿತ, ಮೇಲೆ ತೂಗುವ ರೇಖಾಚಂದ್ರವನ್ನೂ ಫ್ರೇಮೊಳಕ್ಕೆ ತಂದು... ಫೋನೊಳಗಿನ ‘ಡುಎಲ್’ ಕೆಮೆರಾವನ್ನು ಉದ್ದೀಪಿಸಿ- ಹಿನ್ನೆಲೆಗೆ ಹಿನ್ನೆಲೆಯನ್ನೂ, ನಮ್ಮಿಬ್ಬರ ಮುನ್ನೆಲೆಯನ್ನೂ... ಒಟ್ಟಾರೆ ಸೋಸಿ ಸೋಸಿ… ಸೊಂಪಾಗಿ ಕಂಪೋಸಿಸಿ, ಬಾಯರಳಿಸಿ ನಕ್ಕ ಮಾತಂಗಿಯ ಎರಡೂ ದಂತಪಂಕ್ತಿಯೊಡನೆ ನನ್ನ ಹಲ್ಸಾಲುಗಳನ್ನೂ ಬೆರೆಸಿ… ಒಂದು ಪರಮಾತಿಶಯದ ನಗೆಹಾಸವನ್ನು ಕ್ಲಿಕ್ಕಿಸಿದ್ದಾಯಿತು. 
ಒಂದು ಕ್ಲಿಕ್ಕಿನ ಹಿಂದೆಯೇ ಇನ್ನೊಂದು ಕ್ಲಿಕ್ಕಾಯಿತು. ಆ ಇನ್ನೊಂದು ಕ್ಲಿಕ್ಕಿನ ಮುಂದೆ ಇನ್ನೂ ಒಂದಾಯಿತು. ಇನ್ನೊಂದರ ಬಳಿಕ ಮತ್ತೊಂದು… 
ಹೀಗೆ ಕ್ಲಿಕ್ಕೇ ಕ್ಲಿಕ್ಕಿನ ಸರವುಂಟಾಗುವ ನಡುವೆ, ನನ್ನೊಳಗೇನು ಉಮೇದು ಹುಟ್ಟಿತೋ ಕಾಣೆ- ಒಮ್ಮೆಗೇ ಅವಳ ಬಲಗೆನ್ನೆಯೆದುರು ನನ್ನ ತುಟಿಗಳನ್ನು ತಂದು, ಇಡೀ ಜಗತ್ತನ್ನೇ ಊದಿ ಉದ್ದೀಪಿಸುವಂತಹ- ‘ಉ’ಕಾರವನ್ನು ತಾಳಿ, ‘ಉ…ಮ್… ಮ್ಮ್… ಮ್ಮ್… ಮ್… ಮ್…’ -ಅನ್ನುತ್ತಲೊಂದು ಕೊನೆಯೇ ಇಲ್ಲದ ಮುತ್ತನ್ನು ಒತ್ತಿಬಿಟ್ಟಿದ್ದೂ ಸಹ, ನನಗೇ ಗೊತ್ತಿರದೆ ಫೋನಿನಲ್ಲಿ ಸೆರೆಗೊಂಡಿತು! 
ಭಾರೀ ಭಾರೀ ಉಮೇದು ಹಚ್ಚಿದ ಮುದ್ದು ಅದು! ಎಷ್ಟೇ ದೀರ್ಘಯಿಸಿ ಕೊಟ್ಟರೂ ಸಾಲದೆನ್ನುವಂತಿತ್ತು! 
ಕಡೆಗೆ, ಮಾತಂಗಿಯೇ ಕೊಸರಿಕೊಂಡು ನನ್ನ ತೋಳುಗಳನ್ನು ದಾಟಿದಳು. 
‘ಥ್ಯಾಂಕ್ಸ್, ಐಳ…’ ಅಂತನ್ನುತ್ತ, ಹತ್ತೆಂಟು ಚಿತ್ರಗಳ ಸರಣಿಯನ್ನೊಮ್ಮೆ- ಮೀಂಟುತ್ತ ತೀಡುತ್ತ, ಕೆಲವು ಚಿತ್ರಗಳನ್ನು ಹಿಗ್ಗಿಸಿ ಕುಗ್ಗಿಸಿ ಪರೀಕ್ಷಿಸುತ್ತ, ‘ಐ ತಿಂಕ್, ದಿಸ್ ಈಸ್ ದಿ ಬೆಸ್ಟ್ ಮೊಮೆಂಟ್…’ ಅಂತಂದು, ಕಟ್ಟಕಡೆಯಲ್ಲಿ ನಾನು ಕೆನ್ನೆಗೆ ಮುತ್ತಿಕ್ಕುತ್ತಿರುವುದನ್ನು ತೆರೆದು ತೋರಿದಳು! ಆ ಚಿತ್ರವಾದರೂ, ಫೋನೊಳಗಿನ ಎರಡೂ ಕೆಮೆರಾಗಳ ಫೋಕಸು ತಪ್ಪಿ ಮಸುಕಿಕೊಂಡಿತ್ತು. ಅಥವಾ, ‘ಡುಎಲ್’ ಅನ್ನಲಾಗುವ ಫೋನೊಳಗಿನ ಜಂಟಿಕೆಮೆರಾದ ಒಳಪರಿಸ್ಥಿತಿಯೇ- ನಮ್ಮಿಬ್ಬರ ಆ ಮುಹೂರ್ತದೆದುರು ಸೋತು ಮಸುಕಿತ್ತೋ ಹೇಗೆ?! 
‘ಫೋಕಸ್ಸೇ ಇಲ್ಲವಲ್ಲ?’ ಕೇಳಿದೆ.
‘ಕೆಲವು ಸಂಗತಿಗಳು ಹೀಗೇ ಇರಬೇಕು… ಫೋಕಸೇ ಇಲ್ಲದೆ! ತಾನೇನಂತ ತನಗೇ ನಿಖರವಾಗಿ ಗೊತ್ತಿಲ್ಲದೇ! ಆಗಲೇ ಬದುಕು ಸುಂದರವೆನಿಸೋದು!!’
ದೊಡ್ಡ ಸಿದ್ಧಾಂತದ ಹಾಗಿದ್ದ ಮಾತಂಗಿಯ ಈ ಮಾತುಗಳಿಗೆ ಮನಸೋತುಹೋದೆ!
ಕೆಲವು ಕ್ಷಣಗಳ ಬಳಿಕ, ಮಾತಂಗಿ, ಹತ್ತನೇ ತಲೆಮಾರಿನ ಆ ಐಫೋನನ್ನು ಮತ್ತೆ ಕಿಸೆಗಿಳಿಸಿಕೊಂಡು- ‘ಈಗೇನು ಮಾಡೋದು?’ ಎಂದು ಕೇಳಿದಳು. ನಾನು ಶಹರದ ಸ್ಕೈಲೈನ್-ನಲ್ಲಿನ ಒಂದು ಕಟ್ಟಡವನ್ನು ಹೆಕ್ಕಿ, ಅದರತ್ತ ಬೊಟ್ಟುಗೈದು ತೋರಿದೆ. ಕಣ್ಣರಳಿಸಿಕೊಂಡು ನೋಡಿದಳು. ನಗರದೃಶ್ಯದ ಹತ್ತೂ ಸಮಸ್ತ ಮಿಣಿಕಲಂಕಾರದ ನಡುವೆ- ಬಲು ಸಣ್ಣಗೆ, ಆದರೆ ಕೋರೈಸಿ ಕಾಣುತ್ತಿದ್ದ ‘ಹೆರಿಟೇಜ್ ಹೊಟೆಲ್’ ಎಂಬ ಮಿರುಗುನೀಲಿಯ ಅಕ್ಷರಗಳನ್ನು ಓದಿ, ‘ವ್ವಾಟ್ಟ್… ಇಷ್ಟು ಹತ್ತಿರ ಇದ್ದೀವಾ?’ ಎಂದು ಕೇಳಿ ಒಂದೇ ಸಮ ನಲಿದುಬಿಟ್ಟಳು! 
ಬಳಿಕ, ಇಬ್ಬರೂ ತಿಂದುಂಡು ಮಿಗಿಸಿದ ರ‍್ಯಾಪರು-ಕವರಿತ್ಯಾದಿ ಕಸವನ್ನೆಲ್ಲ ಜತನವಾಗಿ ಕಲೆಹಾಕಿ, ಎಲ್ಲವನ್ನೂ ಒಂದು ಪಾಲಿಥೀನಿನಲ್ಲಿಟ್ಟು ಕಿಸೆಗಿಳಿಸಿಕೊಂಡಳು. ಧೋತರದ ಮೂರು ಭಾಗಗಳಿದ್ದ ಇನ್ನೊಂದು ಪಾಲೀಥೀನನ್ನು, ನಾನು ಥೈಲಿಯ ಹಾಗೆ ಹಿಡಿದು ಎತ್ತಿಕೊಂಡೆ. 
ಮರುಕ್ಷಣಕ್ಕೆಲ್ಲ ನಾವು ತಂಗಲಿಕ್ಕಿರುವ ಹೊಟೆಲಿನೆಡೆ ಸಾಗುವ ಐದು ಮಿನಿಟುಗಳ ದಾರಿಯನ್ನು ಹಿಡಿದೆವು. 

===

`ಹ್ಞಾಂ... ಈಗ ನೆನಪಾಯಿತು. ಅದೇನೋ- ಇಡೀ ಒಂದು ನದಿಯನ್ನು ಕುಡಿದ ಹಾಗೆ ನೀರು ಕುಡಿದೆ ಅಂದೆಯಲ್ಲ, ನನಗೆ ಇಷ್ಟ ಆಯಿತು...’ ಮಾತಂಗಿ ಮಾತಿಗಿಳಿದಳು.
ಆಶ್ಚರ್ಯವಾಯಿತು! 
ಈ ಒಂದು ರಾತ್ರಿಯ ಪುರಾಣದಲ್ಲಿ, ಎಷ್ಟೋ ಅಧ್ಯಾಯಗಳ ಮೊದಲು ನಾನು ಹೇಳಿದ ಮಾತು ಇದು! ಕೆಲವು ಹೆಜ್ಜೆ ಒಡನಡೆಯುವಾಗ, ಒಂದಲ್ಲೊಂದು ಮಾತು ಹುಟ್ಟಿಸಬೇಕಾದ ಜರೂರಿಯಿರುವುದಲ್ಲ, ಆ ಮೇರೆಗೆ ಹೇಳಿದ ಮಾತು. ಅಥವಾ ರೇಲಿನಲ್ಲಿ, ಅಪರಿಚಿತ ಪ್ರಯಾಣಿಕನೊಡನೆ, ಎದುರಿಗಿದ್ದಾನೆಂಬ ಮರ್ಜಿಗೆ  ಹರಟುವೆವಲ್ಲ- ಬಹುಶಃ ಹಾಗೇ. 
ನಾನೇನೂ ಉತ್ತರಿಸದೆ ಸುಮ್ಮಗೊಮ್ಮೆ ನಕ್ಕೆನಷ್ಟೆ... ಮಾತಂಗಿ, ‘ಹೇಳೋ...’ ಎಂದು ಬದಿತಿವಿದು ಹೇಳಿದಳು.
‘ಅರ್ರೇ...’ ಅಂದುಕೊಂಡೆ. ‘ಹೆಣ್ಣೇ... ನನ್ನೊಳಗೂ ನಿನ್ನ ಕುರಿತಾಗಿ ಕೆಲವು ಕೇಳಿಕೆಗಳಿವೆ. ನಿನ್ನಲ್ಲಿ ಉತ್ತರವುಂಟೇ? ಹೇಳು… ಉಂಟೆ? ಇರಬಹುದಾದರೂ ಸಮರ್ಪಕವುಂಟೇ? ನೀನಾದರೂ ನಾನು ಕೇಳಿದ್ದೊಂದು ಬಿಟ್ಟು ಉಳಿದಿದ್ದು ಆಡುತ್ತೀಯೆ. ಪಟ್ಟುಹಿಡಿಯುವಾಗ, ಒತ್ತಾಯಿಸಬೇಡ… ಅನ್ನುತ್ತೀಯೆ!  ನಿನ್ನೊಳಗೊಂದು ಅರುಹಲಾಗದ ಮಜಬೂರಿ ಉಂಟೆನ್ನುತ್ತೀಯೆ,,. ಕುತೂಹಲ ಮಿಗಿಸುತ್ತೀಯೆ... ಹೇಳು ಆ ಮಜಬೂರಿಯಾದರೂ ಏನು?!’ 
ಈ ಮಾತುಗಳನ್ನು, ಮನಸೊಳಗೇ ಮಾತಂಗಿಯನ್ನು ಉದ್ದೇಶಿಸಿ ಆಡಿಕೊಂಡೆ. ಯಾಕೋ ಕಾಣೆ, ಬಾಯಿಬಿಟ್ಟು ಕೇಳುವ ಉಮೇದುಂಟಾಗಲೇ ಇಲ್ಲ!   
ಇನ್ನು, ನಾನೆಂಬ ನಾನಾದರೂ- ಮಾತಿಗೆಂತಲೇ ಉಂಟಾದವನು. ಮಾತಿಗೆಂದೇ ಹುಟ್ಟು ಕಂಡವನು. ಮಾತಿನಲ್ಲಿಯೇ ನಡೆಯುವವನು! ಅಥವಾ, ಮಾತಿಲ್ಲದ ನನ್ನನ್ನು ನಾನೆಲ್ಲಿ ತಾನೇ ಊಹಿಸಿಕೊಳ್ಳಬಲ್ಲೆ? ಅವಾಕ್ಕು ತಾಳಿದ ಐಳನ ಅಸ್ತಿತ್ವವಾದರೂ ಏನು?! ಹೀಗಾಗಿಯೇ, ಈ ಹೆಣ್ಣು ಕೇಳಿದ್ದೇ ತಡ, ನಾನು ಯಾರು ಏನು ಎತ್ತವೆಂತೆಲ್ಲ ಪ್ರವರವೊಪ್ಪಿಸಿಬಿಟ್ಟೆ! ಇಷ್ಟು ಕೇಳಿದರೆ ‘ಅಷ್ಟು’ ಹೇಳಿದೆ... ಆದರೂ, ಇವಳು ಮಾತು ತಡೆಯುವ ರೀತಿಯನ್ನು ಮೆಚ್ಚಲೇಬೇಕು. ಮಾತಿರಲಿ ಮೌನಕ್ಕೂ ಕಡಿವಾಣವಿಕ್ಕುವಳೋ ಏನೋ! 
ನಿದ್ದೆಗಣ್ಣಿನ ನಡುವೆಯೂ, ನನ್ನ ಮನಸ್ಸು, ಹೀಗೆಲ್ಲ ಯೋಚಿಸತೊಡಗಿತು. ಹೆಜ್ಜೆಗಳು ಭಾರಗೊಂಡವು. ತೊಡರಿ ತಡವರಿಸಿದವು.  ಮಾತನಾಡಿದರೆ ತೂಕಡಿಕೆಯಾದರೂ ನಿಂತೀತೇನೋ... ಅಂದುಕೊಂಡೆ. ಅಲ್ಲದೆ- ಜನರಿಲ್ಲದ, ಅದಿಬದಿಯ ನೋಟವೂ ಇಲ್ಲದ ಕತ್ತಲಿನಲ್ಲಿ ಎಚ್ಚೆತ್ತು ಸಾಗುವುದಾದರೂ ಹೇಗೆ? ಎಂತಲೇ ಮಾತಿಗಿಳಿದೆ. 
‘ಹೌದು... ನಾನು ಒಂದು ಕಡಲಿನಷ್ಟು ನೀರು ಕುಡಿದೆ!’ ಎಂದು ಹೇಳಿದೆನಷ್ಟೆ, ಇಬ್ಬರ ನಡುವೆ, ಮತ್ತೊಮ್ಮೆ ಮಾತುಕತೆಯ ನಾನಾ ಪರಿಯೇ ಉಂಟಾಗಿಬಿಟ್ಟಿತು!
‘ನಿನಗೆ ಗಂಗಾವತರಣದಲ್ಲೊಂದು ಕತೆ ಬರುತ್ತೆ, ಗೊತ್ತಾ?’ ಮಾತಂಗಿ ಕೇಳಿದಳು. ‘ಜುಹ್ನು ಮಹರ್ಷಿ ಇಡೀ ಗಂಗೆಯನ್ನು ಕುಡಿದು ಸುಮ್ಮನಾಗುತ್ತಾನೆ... ಆಗ ಭಗೀರಥ ಬೇಡಿಕೋತಾನೆ. ಗಂಗೆ ಜಾಹ್ನವಿ ಅನ್ನೋ ಹೆಸರು ತಾಳಿಕೊಂಡು ಹೊರಬರುತಾಳೆ...’
‘ಹ್ಞೂಂ... ಈಗ ಇದ್ದಕ್ಕಿದ್ದ ಹಾಗೆ ಈ ಪುರಾಣದ ಕತೆ ಯಾಕೆ ನೆನಪಿಗೆ ಬಂತು?’
‘ಸುಮ್ಮನೆ...’ ಸಣ್ಣಗೆ ನಕ್ಕಳು. ‘ಇಡೀ ರಾತ್ರಿ ನೀನು ಏನೇನೆಲ್ಲ ತಿಳಿಹೇಳಿದೆಯಲ್ಲ- ಅದಕ್ಕೇ! ನನಗೂ ಅಷ್ಟಿಷ್ಟು ಪುರಾಣ ಗೊತ್ತು ಅಂತ ನಿನಗೆ ತಿಳಿಸೋಕೆ!’ ಎಂದು ಛೇಡಿಸಿದಳು. 
‘ನದಿಯನ್ನೇನು, ಇಡೀ ಕಡಲನ್ನೇ ಕುಡಿಯುವ ಕಲ್ಪನೆ ಇದೆ... ನಿನಗೆ ಅಗಸ್ತ್ಯ ಮಹರ್ಷಿ ಗೊತ್ತಲ್ಲವಾ? ನಾವು ತಮಿಳರು ಅಗಸ್ತ್ಯರ್ ಎಂದು ಅವರನ್ನ ಮನ್ನಿಸುತೀವಿ... ತಮಿಳು ಸಂಸ್ಕೃತಿಯಲ್ಲಿ ಅವರದ್ದು ಒಂದು ದೊಡ್ಡ ಹೆಸರು. ಹಾಗೇ ಅವರನ್ನು ಮದುವೆಯಾದಳು ಅನ್ನಲಾಗುವ ಲೋಪಾಮುದ್ರೆಯದ್ದು... ಐ ಮೀನ್ ಕಾವೇರಿಯದ್ದು...’
‘ಹ್ಞೂಂ...’
‘ಒಮ್ಮೆ ಈ ಅಗಸ್ತ್ಯರೆದುರು ಒಂದು ಸಮುದ್ರ ಸೊಕ್ಕಿ ಮೊರೆಯಿತಂತೆ... ಆಗ ಅವರು ಇಡೀ ಕಡಲನ್ನೇ ಆಪೋಶನ ತಕ್ಕೊಂಡರಂತೆ! ಕೆನ್ ಯು ಬಿಲೀವ್ ಇಟ್ಟ್?!’
‘ಯೆಸ್ಸ್ ಐ ಕೆನ್... ಗಂಗೆಯಂತಹ ಒಂದು ದೊಡ್ಡ ನದಿಯನ್ನೇ ಒಬ್ಬ ಮನುಷ್ಯ ಕುಡಿಯಬಹುದು ಅಂತಂದರೆ, ಹತ್ತಾರು ಗಂಗೆಗಳು ಸೇರಿ ಉಂಟಾದ ಕಡಲನ್ನೂ ಕುಡಿಯಬಹುದಲ್ಲವಾ?’
‘ಹೌದು… ಈ ಬಗೆಯ ಕಲ್ಪನೆಗಳೇ ಈ ದೇಶವನ್ನು ಕಟ್ಟಿರೋದು... ಇಲ್ಲಿನ ಪುರಾಣಗಳನ್ನು ಹುಟ್ಟಿಸಿರೋದು. ಕತೆಗಳಿಲ್ಲದ ನಮಗೆ ಅಸ್ತಿತ್ವವೇ ಇಲ್ಲ. ಹಾಗೇ, ಭಾರತ ಅಂತನ್ನುವ ಪರಿಕಲ್ಪನೆಯೂ ಇರಲ್ಲ...’
‘ಹ್ಞೂಂ...’
‘ಇನ್ನೂ ಒಂದು ವಿಷಯ... ಇದೇ ಒಡಿಸ್ಸಾದಲ್ಲಿ ರಥಯಾತ್ರೆಯಷ್ಟೇ ಜೋರಾಗಿ ಮಾಡುವ ಇನ್ನೊಂದು ಹಬ್ಬ ಇದೆ. ಅದನ್ನ ಬಾಲೀಯಾತ್ರೆ ಅಂತ ಕರೀತಾರೆ...’
‘ಐ ಸೀ...’
‘ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಈ ಹಬ್ಬ ಬರುತ್ತೆ... ಅವೊತ್ತು ಇಡೀ ಒಡಿಸ್ಸಾ ರಾಜ್ಯವೇ ಇಡಿಯಾಗಿ, ಕಾಗದದ ದೋಣಿಗಳನ್ನು ಮಾಡುತ್ತೆ. ಅಂದರೆ, ಮನೆಮನೆಯವರೆಲ್ಲ ಒಂದೊಂದು ದೋಣಿ... ಬಣ್ಣ ಬಣ್ಣದ ದೋಣಿ... ಯಾವಯಾವುದರಿಂದ ಮಾಡಬಹುದೋ ಅವೆಲ್ಲದರಿಂದ ದೋಣಿ ಮಾಡುತಾರೆ. ವೀಳ್ಯದೆಲೆಯಿಂದಲೂ ದೋಣಿ ಮಾಡುತ್ತಾರೆ...’
‘ಅಮೇಜಿಂಗ್...’
‘ಹ್ಞೂಂ... ಆಮೇಲೆ ಮುಸ್ಸಂಜೆಯಲ್ಲಿ ಎಲ್ಲರೂ ಸೇರಿಕೊಂಡು, ಒಂದು ಹರಿವಾಣದೊಳಕ್ಕೆ ನೀರು ತುಂಬಿ ದೋಣಿಗಳನ್ನು ತೇಲಿಬಿಡುತ್ತಾರೆ... ಒಳಗೆ ದೀಪ ಹಚ್ಚಿಟ್ಟು ತೇಲಿಬಿಡುತ್ತಾರೆ...’
‘ವ್ವಾಹ್ಹ್...’
‘ಏನು ಗೊತ್ತಾ? ನಿನಗೆ ಗೊತ್ತೋ ಇಲ್ಲವೋ, ಈ ಭೂಪ್ರದೇಶದಲ್ಲಿ ಮಹಾನದಿ ಅಂತ ಒಂದಿದೆ... ಬಹು ಮುಖ್ಯವಾದ ನದಿ. ಇಲ್ಲೇ ಭುವನೇಶ್ವರಕ್ಕೆ ಉತ್ತರಕ್ಕಿರೋ ಕಟಕ್ ನಗರದಲ್ಲಿ ಬಂಗಾಳಕೊಲ್ಲಿಗೆ ಬಂದು ಸೇರುತ್ತೆ. ಕಡಲು ಸೇರುತ್ತಿರುವ ಯಾವುದೇ ನದಿಗೆ ಓಡುವ ಭರ ಇರೋದಿಲ್ಲ... ಐ ಮೀನ್, ಹರಿದು ಹೋಗುವ ಅವಸರ ಇರಲ್ಲ... ಮೆಲ್ಲಗೆ ಹರಿಯುವ ನೀರು ಕಲೆ ಹಾಕಿಕೊಂಡಿರುತ್ತೆ... ಈ ಪ್ರದೇಶವನ್ನ ಇಂಗ್ಲಿಷಿನಲ್ಲಿ ಡೆಲ್ಟಾ ಅಂತನ್ನುತಾರೆ. ಕನ್ನಡದಲ್ಲಿ ಮುಖಜಭೂಮಿ ಅನ್ನುತ್ತಾರೆ... ಬಾಲೀಯಾತ್ರೆಯ ದಿವಸ, ಮಹಾನದಿಯ ಮುಖಜ-ಪ್ರದೇಶದಲ್ಲಿ- ಲಕ್ಷಾಂತರ ಮಂದಿ ಈ ದೋಣಿಗಳನ್ನು ಮಾಡಿ, ದೀಪ ಹಚ್ಚಿ ನದಿಯೊಳಕ್ಕೆ ತೇಲಿಬಿಡುತಾರೆ... ಮಹಾನದಿ ಬೆಳಕೇ ಬೆಳಕಿನ ನದಿಯಾಗಿಬಿಡುತ್ತೆ! ಆ ಬೆಳಕಿಗೂ ಒಂದೇ ಬಣ್ಣ ಅಲ್ಲ... ಬಣ್ಣ ಬಣ್ಣದ ಬೆಳಕು ಅಂದರೆ- ಜಸ್ಟ್ ಇಮ್ಯಾಜಿನ್...’
‘ಲೋ ಐಳ... ಒಂದು ಸಲ ಅಲ್ಲಿಗೆ ಬರೋಣವೋ...’
‘ಹುಹ್ಹ್…’
‘ಯಾಕೋ?!’
‘ನಾನು ಬರೇ ಒಂದು ರಾತ್ರಿಯ ಜೊತೆಗಾರ ಅಂದೆಯಲ್ಲೇ, ಹುಡುಗಿ!’
‘ಹೌದಲ್ಲ... ಹೋಗಲಿ ಬಿಡು. ಈ ಬಾಲೀಯಾತ್ರೆ ತೋರಿಸುತೀನಿ ಅಂತಂದರೆ ನಿನ್ನೊಡನೆ ಇನ್ನೂ ಒಂದು ರಾತ್ರಿ ಕಳೀತೀನಿ...’
‘ನಿಜವಾಗಲೂ?!’
‘ಯೆಸ್ಸ್...’
‘ಆದರೆ ಆ ಸರ್ತಿ ದರೋಡೆ ಗಿರೋಡೆ ಅಂತೆಲ್ಲ ಪ್ರೋಗ್ರಾಮ್ ಇಟ್ಟುಕೋಬೇಡ, ಅಷ್ಟೆ!’
ಮಾತಂಗಿ, ಸುಮ್ಮಗೊಮ್ಮೆ ನಾಚಿಕೊಂಡು, ‘ಸರಿ... ಮುಂದಕ್ಕೆ ಹೇಳು...’ ಎಂದು ನಸುನಕ್ಕು ಕೋರಿದಳು. 

Reviews

ಭಾಷೆ ಹೆಗಲ ಮೇಲೆ ಭಾವ ಕಥನ-ಪದ್ಮನಾಭ ಭಟ್‌-ಪ್ರಿಯೆ ಚಾರುಶೀಲೆ

ಸರಸದ ಭಾಷೆಯಲ್ಲಿ ಅವಳ ಚರಿತೆ 

ಭಾಷೆಯನ್ನು ವಿಶಿಷ್ಟ ದಾಟಿಯಲ್ಲಿ ಬಳಸುವುದೂ ಒಂದು ಕಲೆ. ಇರುವ 52 ಅಕ್ಷರಗಳನ್ನೇ ಬಳಸಿಕೊಂಡು ಮೋಡಿ ಮಾಡುವ ಧಾಟಿಯಲ್ಲಿ ಬರಹದ ಕೃಷಿ ಮಾಡುವವರನ್ನು- 'ಆತ ಪದಗಳೊಂದಿಗೆ ಆಟ ಆಡುತ್ತಾನೆ' ಎಂದು ಕರೆಯುವುದುಂಟು. ಅಂಥ ಲೇಖಕರ ಪೈಕಿ, ನಾಗರಾಜ ವಸ್ತಾರೆ ಕೂಡ ಒಬ್ಬರು. ಹಕೂನ ಮಟಾಟ, 90 ಡಿಗ್ರಿ, 180 ಡಿಗ್ರಿ, ಅರ್ಬನ್ ಪ್ಯಾಂಥರ್, ಸಾಂಚಿ ಮುದ್ರೆ, ವಸ್ತಾರೆ ಪದ್ಯಗಳು- ಇವೆಲ್ಲ ವಸ್ತಾರೆಯವರ ವಿಶಿಷ್ಟ (ಕೆಲವು ಓದುಗರ ಪ್ರಕಾರ ವಿಚಿತ್ರ) ಹೆಸರಿನ ಪುಸ್ತಕಗಳು. ವಸ್ತಾರೆ ಭಾಷೆಯನ್ನು ಬಳಸುವ ರೀತಿಯೇ ವಿಶಿಷ್ಟ. ಎಷ್ಟೋ ಸಂದರ್ಭಗಳಲ್ಲಿ ಅವರು 'ಸುಮಧುರ' ಅನ್ನುವಂಥ ಪದಗಳಿಂದಲೇ ವಾಕ್ಯ ಆರಂಭಿಸುತ್ತಾರೆ. ವಾಹ್ ವಾಹ್, ಎಷ್ಟು ಸುಕೋಮಲ ಪದಗಳ ಗುಚ್ಚವಿದು ಅಂದುಕೊಳ್ಳುವಾಗಲೇ, ಆ ಪ್ಯಾರಾ ಮುಗಿಯುವಾಗ ದಿಢೀರನೆ ಒಂದು ಇಂಗ್ಲಿಷ್- ಡೈಲಾಗ್ ಬಂದು ಓದುಗನಿಗೆ ಶಾಕ್ ಕೊಡುತ್ತದೆ. ಅದಕ್ಕೆ ಒಂದು ಉದಾಹರಣೆ ನೋಡಿ: ಯಾರೆಂದು ನೋಡಿದರೆ ಆಕೆ ನಿಂತಿದಳು. ಚೆಲುವಾಂತ ಚೆಲುವೆ. ಸುಂದರಿ. ಎದುರಿಗಿರುವ ಕಡಲೂ, ಮೇಲಿರುವ ಬಾನೂ- ಅಕೋ, ಅಲ್ಲಿರುವ ಕ್ಷಿತಿಜವೇ ಮಿದ್ದಿದ್ದ ಸಂಜೆಯಲ್ಲಿ ಒಳಗಿದ್ದು ಎದ್ದಂಥ ಹುಡುಗಿ. ಸಪೂರದ ಬಳ್ಳಿಯ ತಳಿರಂಥ ಮೈಯಿ, ಕಡಲಿನ ಮೈಮೀಟಿ ಬರುವ ಗಾಳಿಗೆ ಅಲುಗಿಯೂ ಅಲುಗದ ಹೂವಿನ ಜೊಂಪೆಯಂತಿದ್ದಳು! ಐ ಮೀನ್, ಆ ರೀತಿ ಇದ್ದಳು! ’ಪ್ರಿಯೇ ಚಾರುಶೀಲೆ…’ ಒಂದು ಸರಸಮಯ, ಸ್ನೇಹಮಯ ಭಾಷೆಯ ಕಾದಂಬರಿ. ಚೆಲುವಾಂತ ಚೆಲುವೆಯನ್ನು ಹುಡುಕಿಕೊಂಡು ಹೊರಟವನ ಕಥೆಯಿದು.

ಕೃಪೆ: ಬಹುಮುಖಿ, ಉದಯವಾಣಿ, 30 ನವೆಂಬರ್‌ 2019

...............................................................................................................................................................

ಗದ್ಯ ತರುವ ಸುಖಕ್ಕಾದರೂ ಓದಬೇಕು

ಕಾದಂಬರಿಯ ಹೆಸರಿನ ಹಿಂದೆ, ಇನ್ನೊಂದು ಪ್ರಣಯ ಕಾವ್ಯವಿದೆ. ಮತ್ತೊಂದು ಕಥೆಯಿದೆ. ಇದು ಪುರಿಯ ಕಡಲಂಚಿನಲ್ಲಿ ಭೇಟಿಯಾಗುವ ಐರನ್ ಮತ್ತು ಮಾತಂಗಿಯರ ಶೃಂಗಾರ ವಿಲಾಸ ಭೋಗ ಭಾಗದ ಅಪರೂಪದ ಅಪೂರ್ವ ಗದ್ಯಕಾವ್ಯ, ಒಂದು ವೈವಾಹಿಕ ಬದುಕಿನ ಹೊರಗಿನ ಪ್ರಣಯ ಕಥೆ. ಹಾದೊಡನೆ ಥಟ್ಟನೆ ನೆನಪಾಗುವುದು ಇದೇ ನೆಲದ ಕವಿ ಜಂಗುದವನ ಗೀತಗೊವಿಂದ, ರಾಧಾ ಮಾಧವರ ಶುದ್ಧಶೃಂಗಾರ ಪ್ರಸಾಯನ ವಸ್ತುವಾದ ಕಾವ್ಯ, ಹನ್ನೆರಡು ಸರ್ಗಗಳಲ್ಲಿ ಇಪ್ಪತ್ತನಾಲ್ಕು ಅಷ್ಟಪದಿಗಳಲ್ಲಿ ಜೈಮವೇ ಜೀವಧಾತುವಾದ ಕಾವ್ಯ, ಅಲ್ಲಿರುವುದು ವೈದಿಕರಿಗೆ ಭಕ್ತಿಯ ಪರಾಕಾಷ್ಠೆಯಾದ ವ್ಯಾಮೋಹಿಗಳಿಗೆ ಶೃಂಗಾರ ಪರಾಮರ್ಶೆ ವಿರಹೊತ್ಕಂಡರಾದ ರಾಧಾ ಕೃಷ್ಣರ ಸಮಾಗಮವೇ ಅಲ್ಲಿನ ಕಾವ್ಯದ ವಸ್ತು, ಕವಿ ಜಯದೇವ ತನ್ನ ಪತ್ನಿ ಪಾವತಿಯನ್ನು ಇಷ್ಟೇ ಉದ್ಧಟವಾಗಿ ಪ್ರೀತಿಸುತ್ತಿದ್ದು, ತಾನು ಪದ್ಮಾವತಿ ಚರಣ ಚಾರಣ ಚಕ್ರವರ್ತಿ ಎಂದುಕೊಳ್ಳುವುದರ ಮೂಲಕ ತಮ್ಮ ಕಾವ್ಯದಲ್ಲಿ ದಾಖಲಿಸಿದ್ಧಾನೆ. ಇವರ ಪ್ರೀತಿಯ ಕುರಿತೂ ಒಂದು ದಂತಕಥೆಯಿದೆ. ಒಮ್ಮೆ ರಾಜನೊಂದಿಗೆ ಭೇಟಿ ಹೋದ ಜಯದೇವ ಕ್ರೂರಮೃಗಗಳಿಗೆ ಬಲಿಯಾದನೆಂಬ ಸುಳ್ಳು ವಾರ್ತೆಯನ್ನು ಕೇಳಿ, ಪದ್ಮಾವತಿ ನಿಂತನಿಟ್ಟಿನಲ್ಲಿ ಪ್ರಾಣಬಿಟ್ಟಳಂತೆ. ತಪ್ತನಾದ ಜಯರ್ದವ ಕ್ರಿಯೆ ಜಾರುಕಳ ಮುಂಚ ಮಟ ಮಾನಮನಿದಾನಂ/ ಸಪದಿ ಮದನಾನಲೋ ದಹತಿ ಮಮ ಮಾನಸಂ/ ದೇಹಿ ಸುಖಕಮಲಮಧುಣಾನಂ" (ಪ್ರಿಯ ಚಾರುಶಿಲೆ, ಕೋಪವನ್ನು ಬಿಡು. ನಿನ್ನ ಪ್ರೇಮದ ಬೆಂಕಿ ನನ್ನನ್ನು ಸುಡುತ್ತಿದೆ. ನಿನ್ನ ಮುಖಕಮಲದ ಮಧುಪಾನವನ್ನು ನೀಡು.) ಎಂದು ಹಾಡಲು ಆಕೆ ಎಚ್ಚೆತ್ತಳಂತೆ, ಗೀತ ಗೋವಿಂದದಲ್ಲಿ ಕೃಷ್ಣನು ರಾಧೆಯ ಮುನಿಸು ತಣಿಸಲು ಇದೇ ಕಾವ್ಯಭಾಗವನ್ನು ಬಳಸಿಕೊಂಡಂತೆ ಜಯದೇವ ಚಿತ್ರಿಸಿದ್ದಾನೆ. 

ಹೀಗೆ ಕವಿಯ ಪತ್ನಿಗೆ ಮರುಹುಟ್ಟು ಕೊಡುವ ಮತ್ತು ಕಥಾನಾಯಕಿಯ ಮುನಿಸು ತಣಿಸುವ ಗಡು ಕಥೆಗಳೆ ಹಿಮ್ಮೇಳವನ್ನು ಕೊಂಡಿರುವ 'ಪ್ರಿಯ ಚಾರುಶಿಲೆ' ನಾಗರಾಜ ವಸ್ತಾರೆಯವರ ಕಾದಂಬರಿಯ ಹೆಸರೂ ಆಗಿದೆ. ಪ್ರಿಯೆ ಚಾರುಶೀಲೆ ಓದುತ್ತಿರುವಾಗ ಜಯದೇವನ ನೆನಪಾಗಲು ಇನ್ನೊಂದು ಕರಣವಿದೆ. ಅದೂ ಒಂದು ದಂತಕಥೆ, ಜಯದೇವ ಬಂಗಾಲದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವನು. ಈ ಕಾದಂಬರಿಯ ನಾಯಕ ಐಳನ ಹಾಗೆ ಅವನೂ ತಿರುಗಾಡುತ್ತಾ ಜಗನ್ನಾಥನ ಪುರಿಗೆ ಬಂದಿದ್ದ. ಇಲ್ಲಿ ಮಾತಂಗಿ ಐಳನಿಗೆ ಎದುರಾದ ಹಾಗೆ ಅಲ್ಲಿ ಜಯದೇವನಿಗೆ ಪದ್ಮಾವತಿ ಎದುರಾಗುತ್ತಾಳೆ. ಉತ್ಕಟ ಪ್ರೀತಿ ಇವರನ್ನು ಸೇರಿಸುತ್ತದೆ. ಅದನ್ನು ಹೇಳಕೊಳ್ಳಲಿಕ್ಕಾಗಿಯೇ ಆತ ಗೀತಗೋವಿಂದ ಬರೆಯುತ್ತಾನೆ. ಗೀತಗೋವಿಂದದ ರಾಧೆಯು ನಡೆನುಡಿಗಳನ್ನು ಮಾತಂಗಿ ಅನುಕರಿಸುತ್ತಿದ್ದಾಳೆ ಎಂಬ ಭ್ರಮೆ ಹುಟ್ಟಿಸುವ ಹಾಗಿದೆ ವಸ್ತಾರೆಯವರ ಕಥನ. ಒಮ್ಮೆ ವಿರಹಿಣಿ, ಮತ್ತೊಮ್ಮೆ ಅಭಿಸಾರಿಕೆ; ಮತ್ತೆ ಕೃಷ್ಣನನ್ನು ಖಂಡಿಸುವ ನಲ್ಲೆ. ಮರುಕ್ಷಣ ಉತ್ಕಟ ಬಯಕೆಯು ಕಾಮಿನಿ. ಇದು ಎರಡೇ ದಿನಗಳಲ್ಲಿ ಮುಗಿದು ಹೋಗುವ ಕಥೆ. ಜಗನ್ನಾಥಪುರಂದು, ಸಮುದ್ರ ದಂಡೆಯಲ್ಲಿ ತನ್ನಷ್ಟಕ್ಕೆ ತಾನು ಬರೆದುಕೊಂಡು ಗಟ್ಟಿಯಾಗಿ ಹಾಡಿಕೊಂಡು ಎಂಜಯ್ ಮಾಡಿಕೊಂಡಿದ್ದ ಐರಳನ್ -ಐಳ ಎಂದರೆ ಇಳೆಯಿಂದ ಹುಟ್ಟಿದ್ದು ಎಂದರ್ಥವಂತೆ. ಆತನ ಬಳಿ ಸಾರುವ ಚೆಲುವಾಂತ ಚಲುವೆ ಮಾತಂಗಿ ಅರೆಗನ್ನಡದ ಹುಡುಗ, ಬರಿಗನ್ನಡದ ಹುಡುಗಿ. ಆಕೆ ಪ್ರಶಂಸೆಯಿಂದ ಆತನನ್ನು ಆಕರ್ಷಿಸುತ್ತಾಳೆ. ತಾನೆ ಈ ಸುಡುಗಾಡು ಹೆಣ್ಣಿನ ಹಿಂದೆ ಬಿದ್ದೆ? ಇದನು ಮಾಯೆಯೆ? ಅಥವಾ ಇವಳೇನು ಮಾಯಾಂಗನೆಯೆ? ಆತನಲ್ಲಿ ತಳಮಳ, ಬಯಕೆತೋಟದ ಬೇಲಿಯೊಳಗೆ ಕರಣಗಣದ ರಿಂಗಣ. ಹೆಣ್ಣು ಕಾಣೆಯಾದಾಗ, ಕೊನೆಗೆ ರಮ್ಯವಾದ ಕನಸೊಂದು ಹರಿದು ವಾಸ್ತವವೇ ಸುಳ್ಳೆಂದೆನಿಸುವ ಸಂದಿಗ್ಗ, ತಮ್ಮಿಬ್ಬರ ವಿದಾಯವೂ ಭೇಟಿಯಷ್ಟೇ ಮಧುರವಾಗಿರಬೇಕು ಎಂದಿದ್ದಳಲ್ಲವೆ. ಆಕೆ ಬಿಟ್ಟುಹೋಗಿರುವುದು ಮೂರುಸುತ್ತಿನ ಉಂಗುರ. ಎಲ್ಲೋ ಒಂದು ಪುಟ್ಟ ಸುಳಿವು. ಆತ ತಮಿಳುನಾಡು ಐಜಿಪಿಯ ಮಗ, ಮಾತಂಗಿಯೆಂದರೆ ಖ್ಯಾತ ನಟಿ ಇಂದೀವರೆ? ಗೀತಗೋವಿಂದದಲ್ಲಿರುವುದು ವಾಸ್ತವವಾಗಿ ಎರಡೇ ಪಾತ್ರಗಳು. ರಾಧೆ ಮತ್ತು ಮಾಧವ. ಇಲ್ಲೂ ಅಷ್ಟೇ. ಐಳನ್ ಮತ್ತು ಮಾತಂಗಿ, ಉಳಿದವರೆಲ್ಲ ನಿಮಿತ್ತಮಾತ್ರರು.

ಕಥೆಗಾರ ವಸ್ತಾರೆಯವರು ಆರ್ಕಿಟೆಕ್ಟ್ ಆಗಿರುವುದ ರಿಂದ, ಅವರ ಪ್ರತಿ ಕಟ್ಟೋಣದಲ್ಲೂ ಹೊಸತನ್ನು ಹುಡುಕುವ ಓದುಗರನ್ನು ನಿರಾಸೆಗೊಳಿಸದ ಕಥೆಯಿದು. ಒಂದಿಷ್ಟು ಸಸ್ಪೆನ್ಸ್, ಒಂದಿಷ್ಟು ಕೆಮ್, ಸ್ವಲ್ಪವೇ ಸೆಕ್ಸ್, ಧಾರಾಕಾರ ಪ್ರೀತಿ. ಅಚಾನಕ ಅಂತ್ಯ. ಇಷ್ಟೇ ಇದ್ದರೂ ಈ ಕಾದಂಬರಿಯು ಇಷ್ಟು ಮಾತ್ರವೇ ಅಲ್ಲ, ಗಂಡು ಹೆಣ್ಣಿನ ಸಂಬಂಧದ ಹೊಸ ಆಯಾಮಗಳನ್ನು ತಡವುವ ಇಲ್ಲಿನ ಕಥೆ, ಕಥೆ ಹೇಳುವ ಕ್ರಮ ಮತ್ತು ಹಾಗೆ ಹೇಳುವಾಗ ಬಳಸುವ ingredients, ಎಲ್ಲವೂ ಒಂದಿಷ್ಟು ಹೊಸದೇ, ಕಥೆಯ ಮೂರನೆಯ ಎರಡಂಶವು ಪರಸ್ಪರ ಹುಡುಕಿಕೊಳ್ಳುವ ಪ್ರೀತಿಯ ಕುರಿತಾಗಿದ್ದರೆ, ಆ ಪ್ರೀತಿಯನ್ನು ಚಿತ್ರಿಸುವಾಗಿನ ಲವಲವಿಕೆಯು ಜಯದೇವನನ್ನು ಓದಿ ಅರ್ಥಮಾಡಿಕೊಳ್ಳುವಾಗ ದಕ್ಕುವ ಸುಖದ ಹಾಗೆ. ಎಲ್ಲವೂ ಅರ್ಥವಾದ ನಂತರವೂ ಏನೋ ಅರ್ಥವಾಗದೇ ಉಳಿದುಬಿಟ್ಟಿದೆ ಎಂಬ ಸ್ಥಿತಿಯಲ್ಲಿ ಕಥೆಯ ಕೊನೆಯಾಗುವುದೂ ಸೊಗಸೇ.

ಹಾಗೆ ನೋಡಿದರೆ, ಇಡೀ ಕಾದಂಬರಿಯೇ ಠುಮ್ಮಿ ಗಾಯನದ ಭಾವೋತ್ಕರ್ಷದ ಬರಹರೂಪದ ಹಾಗೆ ಕಾಣಿಸುತ್ತದೆ. ಮೂರು ಸಪ್ತಕಗಳಲ್ಲಿಯೂ ಚಲಿಸುವ ಪದ್ಯಗಂಧೀ ಗದ್ಯದ ಸೊಗಸು. ಹಲವು ಅರ್ಥಗಳಲ್ಲಿ ಭ್ರಮಾಲೋಕದ ಬಾಗಿಲು ತೆರೆದ ಹಾಗೆ. ತರಾಸು ನಂತರದ ಕನ್ನಡದಲ್ಲಿ ಇಂತಹ ಕೆಲಸ ನಡೆದೇ ಇಲ್ಲ ಎಂಬಷ್ಟು ಆಹ್ಲಾದಕರ ನಿರೂಪಣೆ. ಅಷ್ಟೇ ಅಪರೂಪದ ಸೊಗಸು. ಗದ್ಯ ತರುವ ಸುಖದ ಅನುಭವಕ್ಕಾದರೂ ಓದಬೇಕಾದ ಕಾದಂಬರಿಯಿದು.

-ಬೆಳಗೋಡು ರಮೇಶ ಭಟ್

ಕೃಪೆ: ಪುಸ್ತಕ ವಿಮರ್ಶೆ ಹೊಸದಿಂಗತ (2020 ಜನವರಿ 19)

Related Books