Article

‘ಕಾಫಿ’ ಕನ್ನಡದ ಹೊಸ ಕಾವ್ಯರುಚಿ- ಕೋಶಿ’ಸ್

ತಲೆಕೆಳಗೆ ಮಾಡಿ ಕಾಲು ಮೇಲೆ ಮಾಡಿ ಎಷ್ಟೇ ಕೋಶಿಶ್ ಮಾಡಿದರೂ ಇಂಥ ಕವಿತೆಗಳನ್ನು ಕೆಲವೊಮ್ಮೆ ಬರೆಯಲು ಸಾಧ್ಯವಾಗುವುದೇ   ಇಲ್ಲ. ಅಂಥಲ್ಲಿ ಕೆ.ನಲ್ಲತಂಬಿ ಕಾಫಿ ಟೇಬಲ್‍ನಲ್ಲಿ ದಕ್ಕಿದ ಸತ್ಯಗಳನ್ನು ವಿನ್ಸೆಂಟ್ ಮೂಲಕ ಕವಿತೆಗಳನ್ನಾಗಿ ರೂಪಿಸಿ ನಮ್ಮ   ಮುಂದಿಟ್ಟಿದ್ದಾರೆ; ಅದುವೇ `ಕೋಶಿ’ಸ್ ಕವಿತೆಗಳು. ಉದ್ದನೇ ದೇಹದ ತೆಳು ಮೈ-ಕೈ ಹೊತ್ತಿರುವ ಈ ಸಂಕಲನ ಹೊಸದೇ ರೀತಿಯಲ್ಲಿ   ಸದ್ದುಮಾಡುತ್ತಿದೆ. ಹಾಗೆಯೇ, ಕಾವ್ಯಪ್ರಿಯರ ಗಮನವನ್ನು ಸೆಳೆಯುತ್ತಿದೆ. 

ಕಾವ್ಯದ ಸಿದ್ಧ ಮಾದರಿಗಳನ್ನೆಲ್ಲ ಆಚೆಗೆ ತೂರಿ, ಸಾಂಪ್ರದಾಯಿಕ ಭಾವನೆಗಳನ್ನೆಲ್ಲ ಮೂಸೂ ನೋಡದೇ ಹೊಸದೇ ಆದ ಹಾದಿ   ಸೃಷ್ಟಿಸಿಕೊಂಡು ಕೆ.ನಲ್ಲತಂಬಿ ಇಲ್ಲಿ ಹೊರಟು ಬಿಟ್ಟಿದ್ದಾರೆ. ಕಾಫಿ ಕಪ್ಪಿನೊಳಗೆ ಈಗ ಜಗತ್ತೇ ಇದೆ. ಬೇರೆ ಬೇರೆ ಜಗತ್ತುಗಳನ್ನು ಈ ಕಾಫಿ   ಕಪ್ಪಿನಲ್ಲಿ ಕಂಡಿದ್ದ ನಮಗೆ, ಅದೇ ಕಪ್ಪಿನಲ್ಲಿ ಕಾವ್ಯ ಜಗತ್ತು ಕೂಡ ಇದೆ ಎಂಬುದನ್ನು ನಲ್ಲತಂಬಿ ಈ ಮೂಲಕ ತೋರಿಸಿಕೊಟ್ಟಿದ್ದಾರೆ.   ಇಡೀ ಸಂಕಲನದಲ್ಲಿ ಎರಡು ಹೆಸರುಗಳು ಬರುತ್ತಲೇ ಇರುತ್ತವೆ. ಒಂದು ಹೋಟೆಲ್‍ನದು- ಆ ಹೋಟೆಲ್‍ನ ಹೆಸರು ಕೋಶಿ’ಸ್.   ಮತ್ತೊಂದು ಅಲ್ಲಿ ವೈಟರ್ ಆಗಿರುವ ವಿನ್ಸೆಂಟ್‍ನದು. ಕವಿ ಇಲ್ಲಿ ಕಾಫಿ ಹೀರುವ ಗ್ರಾಹಕ. 

 ಕಾಫಿ ಕಪ್ ಕೈಯಲ್ಲಿ ಹಿಡಿದು ಕವಯತ್ರಿ ಸಂಧ್ಯಾರಾಣಿ ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಫಿಯ ಜಗತ್ತನ್ನು ಮತ್ತದರ   ಒಳಮರ್ಮವನ್ನು ಹೇಳುತ್ತ ಹೇಳುತ್ತಲೇ, ಕಾಫಿ ಮಾಡುವ ವಿಧಾನದಿಂದ ಅದನ್ನು ಸೇವಿಸುವ ಕಲೆಯವರೆಗೆ ವಿವರಿಸುತ್ತಲೇ, ಅದರ   ನಿರಂತರತೆಯ ಗುಣವನ್ನು ಅರಹುತ್ತಲೇ ಕೋಶಿ’ಸ್ ಕವಿತೆಗಳಿಗೆ ಎಡತಾಕುವ ಸಂಧ್ಯಾರಾಣಿ ಯವರು ಅತ್ಯುತ್ತಮವಾದ ಕಾಫಿಯನ್ನು   ಹೀರುವಂತೆಯೇ ಇಲ್ಲಿನ ಪದ್ಯಗಳನ್ನು ಹೀರಿಬಿಟ್ಟಿದ್ದಾರೆ. ಹಾಗಿದೆ ಅವರ ಮುನ್ನುಡಿ. ಇಡೀ ಸಂಕಲನವನ್ನು ಮೂರು ನೆಲೆಗಳಲ್ಲಿ ಅವರು   ಕಂಡಿದ್ದಾರೆ. ಒಂದು ಕವಿ ಅಥವಾ ಕಾಫಿಗಾಗಿ ಕಾದು ಕುಳಿತವನ ನೆಲೆ, ಇನ್ನೊಂದು ಕಾಫಿಯೊಡನೆ ತನ್ನ ಕಾಣ್ಕೆಯನ್ನು ತಂದುಕೊಡುವ ವಿನ್ಸೆಂಟ್ ನೆಲೆ ಮತ್ತು ಮೂರನೇಯದು ಕಾಫಿ ಒಂದು ಉತ್ತರವಾಗಿ, ಪರಿಹಾರವಾಗಿ, ಕನ್ನಡಿಯಾಗಿ  ಮೊದಲ ಎರಡು ನೆಲೆಗಳನ್ನೂ ಬೆಸೆಯುವ ಮೂರನೇಯ ಓದುಗರ ನೆಲೆ ಎಂದು ಬಣ್ಣಿಸುತ್ತಾರೆ. ಗುಲ್ಝಾರ್‍ರವರ ತ್ರಿವೇಣ ಎನ್ನುವ ಒಂದು ಪ್ರಯೋಗದ ಬಗ್ಗೆಯೂ ಇಲ್ಲಿ ಅವರು ಉದಾಹರಿಸುತ್ತಾರೆ. ನಲ್ಲತಂಬಿಯವರ ಈ ಕವಿತೆಗಳನ್ನು ಗುಲ್ಝಾರ್‍ರವರ ತ್ರಿವೇಣ  ಪದ್ಯಗಳೊಂದಿಗೆ ಅಲ್ಲಲ್ಲಿ ಹೋಲಿಸಿ ಸಂಧ್ಯಾರಾಣಿ ಯವರು ಇಲ್ಲಿನ ಕವಿತೆಗಳ ಮಹತ್ವ ಎಷ್ಟು ಎಂಬುದನ್ನು ತೂಗುತ್ತಾರೆ. 

ವಿನ್ಸೆಂಟ್ ಇಲ್ಲಿ ಕವಿಗಿಂತ ಕಿಲಾಡಿ. ಕವಿ ಸಮಸ್ಯೆಗೆ ಇಲ್ಲಿ ವಿನ್ಸೆಂಟೇ ಪರಿಹಾರ. 

 `ಗಾಯಗೊಳಿಸಿದವರೇ 
    ಮುಲಾಮು ಹಚ್ಚಬೇಕಾಗಿರುವುದು 
    ಸಂಬಂಧದ ಸೊಬಗು
    ಅಲ್ಲವೇ ಸಾರ್’ ಎಂದ 
    ವಿನ್ಸೆಂಟ್ ತಂದಿಟ್ಟ 
    ಕಾಫಿಯಲ್ಲಿ ಸಕ್ಕರೆ ತುಸು 
    ಹೆಚ್ಚು

-ಹೀಗೆ, ಕವಿ ಯಾವುದೋ ಮಾನಸಿಕ ಗಾಯಕ್ಕೆ ಒಳಗಾಗಿಯೋ ಅಥವಾ ಕವಿಯೇ ಗಾಯಗೊಳಿಸಿ ಬಂದು ಕುಳಿತೋ ಇದ್ದಾಗ ಕಾಫಿ ತಂದು ಕೊಡುವ ವಿನ್ಸೆಂಟ್ ಈ ಮಾತು ಹೇಳಿಬಿಡುತ್ತಾನೆ. ಇದು ಕವಿಯ ಪರಿಹಾರವೂ ಆಗಿ, ಆ ಪರಿಹಾರ ಇಲ್ಲಿ ಕವಿತೆಯೂ ಆಗಿ ಸಫಲಗೊಳ್ಳುತ್ತದೆ. 

`ಮೌನಕ್ಕೂ ಒಮ್ಮೊಮ್ಮೆ 
ಕಿವುಡಾಗಬೇಕು ಸಾರ್’
ಅರ್ಥವಾಗದೆ ಕಣ್ಣು
ಬಿಡುತ್ತಾ ಕಾಫಿ ಹೀರುತ್ತಿದ್ದ
ನನ್ನ ನೋಡಿ ನಗುತ್ತಾ ಹೋದ
ವಿನ್ಸೆಂಟ್

-ವಿನ್ಸೆಂಟ್‍ನ ಮಾತುಗಳು ಇಲ್ಲಿ ಯಾವುದೋ ಕಾಲದಲ್ಲಿ ಜನಪದರು ಹೇಳಿಹೋದ ಗಾದೆಗಳಂತೆಯೂ ನಿಮಗೆ ಕಿವಿಗೆ ಬೀಳಬಹುದು. ವಿನ್ಸೆಂಟನ ಈ ಚುಟುಕು ಕಾರ್ಯಾಚರಣೆ ಇಡೀ ಕೋಶಿ’ಸ್ ಸಂಕಲನದ ಜೀವಾಳ. ಸ್ವತಃ ಕೆ.ನಲ್ಲತಂಬಿಯವರು ತಮ್ಮ `ಕಾಫಿ ವಿನ್ಸೆಂಟ್ ನಾನು’ ಎಂದು ಬರೆದುಕೊಂಡು ಕೋಶಿ’ಸ್ ಹಿಂದಿರುವ ಜೀವಜಲದ ವಿವರಣೆ ನೀಡಿದ್ದಾರೆ. ಪ್ರಾಣ ಗಳು ತಮ್ಮ ಭಾವನೆಗಳನ್ನೂ ತಮ್ಮ ವರ್ತನೆಯಿಂದ, ಕ್ರಿಯೆಯಿಂದ, ಧ್ವನಿಯಿಂದ ವ್ಯಕ್ತಗೊಳಿಸುತ್ತವೆ. ಮನುಷ್ಯನೋ ಭಾಷೆಯಿಂದ ಅವನ ನಲಿವು-ನೋವು, ಸಂತಸ, ದುಃಖ, ಕೋಪ-ತಾಪ, ಪ್ರೀತಿ-ಪ್ರೇಮ ಎಲ್ಲವನ್ನೂ ಪ್ರಕಟಗೊಳಿಸುತ್ತಾನೆ. ಆಗ ಮಾತುಗಳು ಕೆಲವೊಮ್ಮೆ ಕಥೆಯಾಗಿ, ಕವಿತೆಯಾಗಿ ರೂಪುಗೊಳ್ಳುತ್ತವೆ. ಹಾಗೆ, ಹುಟ್ಟಿಕೊಂಡ ನೋವನ್ನು ನೇರವಾಗಿ ತಿಳಿಸಲಾಗದೆ ಮೊರೆ ಹೋದದ್ದೇ ಕೋಶಿ’ಸ್. 

ಕೋಶಿ’ಸ್ ಒಳಗಿರುವ ವಿನ್ಸೆಂಟ್ ಯಾರು? ಅವನು ಎಲ್ಲಿಂದ ಬಂದ? ಕೆ.ನಲ್ಲತಂಬಿ ಎಂಬ ಕವಿಗೆ ಈ ವಿನ್ಸೆಂಟ್ ಸಿಕ್ಕಿದ್ದು ಎಲ್ಲಿ? ಎಂಬುದನ್ನು ಚುಟುಕಾಗಿ ನಲ್ಲತಂಬಿ ಹೇಳಿಕೊಂಡಿದ್ದಾರೆ. ವಿವೇಕ ಶಾನಭಾಗ್‍ರವರ `ಘಾಚರ್ ಘೋಚರ್’ ಅನ್ನು ತಮಿಳಿಗೆ ಅನುವಾದಿಸುತ್ತಿರಬೇಕಾದರೆ ಅದರಲ್ಲಿ ಬರುವ ವಿನ್ಸೆಂಟ್ ಇವರಿಗೆ ಗೆಳೆಯನಾದನಂತೆ. ಅವನೇ ತೋರಿದ ದಾರಿ ಕೋಶಿ’ಸ್. ಆತನ ಮೂಲಕ ಒಂದೆರಡು ಕವಿತೆ ಬರೆದು ತಮ್ಮ ನೋವನ್ನು ಹೊರಹಾಕಿ ಸುಮ್ಮನಾಗಲು ಹೊರಟ ಕವಿ ಅಲ್ಲಿಗೆ ನಿಲ್ಲುವುದಿಲ್ಲ. ಫೇಸ್‍ಬುಕ್ ಗೆಳೆಯ-ಗೆಳತಿಯರ ಪ್ರೀತಿಯ ಒತ್ತಾಯಕ್ಕೆ ಮಣ ದು ನಿರಂತರವಾಗಿ ಬರೆಯತೊಡಗುತ್ತಾರೆ. ಇಲ್ಲಿನ ವಿನ್ಸೆಂಟ್ ಬಹಳಷ್ಟು ಜನರಿಗೆ ಕಾಡಿದ್ದಾನೆ. ಹೋದಲ್ಲಿ ಬಂದಲ್ಲಿ `ವಿನ್ಸೆಂಟ್ ಹೇಗಿದ್ದಾನೆ ಸಾರ್?’ ಎಂದು ಕೇಳುವ ಅಭಿಮಾನಿಗಳಿಗೆ ಕೊರತೆಯೇನಿರಲಿಲ್ಲ. ಸತೀಶ್ ಆಚಾರ್ಯರವರ ಚಿತ್ರಗಳೊಂದಿಗೆ ಕೋಶಿ’ಸ್ ಕವಿತೆಗಳು ಕೇವಲ ಗಮನ ಸೆಳೆಯುವುದಲ್ಲ; ಕಾಫಿ ಹೀರಿದಂತೆಯೇ ಮೈ ಮನಸ್ಸಿನ ಆಳಕ್ಕೆ ಇಳಿದುಬಿಡುತ್ತವೆ. ಒಮ್ಮೆ ಕಾಫಿ ಕುಡಿದು ಕೆಳಗಿಟ್ಟರೆ ಮತ್ತೆ ಕುಡಿಯಲೆಂದೇ ಮನಸ್ಸು ಬೇಡಿಕೆ ಇಡುವಂತೆ ಕೋಶಿ’ಸ್ ಕವಿತೆಗಳು ಕೂಡ ಪದೇ ಪದೇ ತಮ್ಮನ್ನು ಹೀರಲು ಬರಲೇ ಬೇಕೆಂದು ಚಟ ಹತ್ತಿಸುತ್ತವೆ. 

ಇಡೀ ಸಂಕಲನಕ್ಕೆ ಒಂದು ಚೌಕಟ್ಟಿದೆ. ಆ ಚೌಕಟ್ಟನ್ನು ದಾಟುವುದೇ ಇಲ್ಲಿನ ಕವಿತೆಗಳ ಮುಖ್ಯ ಉದ್ದೇಶ. ಇಲ್ಲಿ ವಿನ್ಸೆಂಟ್ ಒಮ್ಮೊಮ್ಮೆ ಪ್ರವಾದಿಯಂತೆ ಮಾತನಾಡುತ್ತಾನೆ. ಸಂತನಂತೆ ಪರಿಹಾರ ಹೇಳುತ್ತಾನೆ. ಸ್ನೇಹಿತನಂತೆ ಜೊತೆಗೆ ಹೆಜ್ಜೆ ಹಾಕುತ್ತಾನೆ. ಪ್ರೇಯಸಿಯಂತೆ ಹೃದಯ ಹೊಕ್ಕುತ್ತಾನೆ. ಪ್ರತಿಯೊಂದಕ್ಕೂ ಕಾಫಿಯ ಹಬೆಯಾಗುತ್ತಾನೆ. 

`ಕಾಫಿ ಇಡುತ್ತಾ
ವಿನ್ಸೆಂಟ್ ಹೇಳಿದ;
ಪ್ರಮಾಣ, ಭರವಸೆ, ನಿರೀಕ್ಷೆ
ಇಲ್ಲದಿದ್ದರೂ ಕಾಯಬೇಕು ಸಾರ್...’

ವಿನ್ಸೆಂಟ್ ಕೊಡುವ ಕಾಫಿಯಲ್ಲಿ ಕನ್ನಡದ ಹೊಸ ಕಾವ್ಯರುಚಿಯಿದೆ. ಅದನ್ನು ತಾಳ್ಮೆಯಿಂದ ಕುಳಿತು ಕಾಫಿ ಕುಡಿಯುವಂತೆಯೇ ಇಲ್ಲಿನ ಕಾವ್ಯವನ್ನು ಹೀರಿದರೆ ಆ ಸುಖವೇ ಬೇರೆ. ಇಲ್ಲಿ ವಿನ್ಸೆಂಟ್ ಒಂದು ಪದ್ಯದಲ್ಲಿ ಹೀಗೆ ಹೇಳುತ್ತಾನೆ; ಅದು ಇಡೀ ಸಂಕಲನಕ್ಕೆ ಕನ್ನಡಿ ಹಿಡಿದಂತಿದೆ – 

`ಕವಿತೆಯನ್ನು ಮುಗಿಸುವುದು
ಪ್ರೇಮವನ್ನು ಪ್ರಾರಂಭಿಸುವುದು
ಬಲು ಕಷ್ಟ ಸಾರ್’
ವಿನ್ಸೆಂಟ್ ತಂದಿಟ್ಟ ಕಾಫಿಯಲ್ಲಿ ಹೊಸ ರುಚಿ.    

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಶಿ.ಜು ಪಾಶ