Article

ಕೆನ್ನಾಯಿಯ ಜಾಡಿನಲ್ಲಿ

ಕೆಲವೊಮ್ಮೆ ಚಹಾ ಅಥವಾ ಟೀ ಕುಡಿಯುವುದು ಅಭ್ಯಾಸ ಮಾಡಿಕೊಂಡವರು ಗುಟುಕ್ಕರಿಸಿತ್ತಾ‌ ಆನಂದಿಸುವುದಿದೆ. ಬೀಡಿ, ಸಿಗರೇಟು ಸೇದುವವರಲ್ಲೂ ಒಂದೊಂದು ಹೊಗೆಗೂ " ಸೀ" ಎಂದು ಒಳಗೆಳೆದುಕೊಳ್ಳುತ್ತಾ ಕಣ್ಣುಗಳು ತೆರೆದಿಟ್ಟು ನಗುತ್ತಾ ಗಾಳಿಯಲ್ಲಿ ತಲೆಯಲ್ಲಾಡಿಸುತ್ತಾ‌ ಆನಂದಿಸುವುದನ್ನು ಕಂಡಿದ್ದೇವೆ. ಇಲ್ಲೂ ಹಾಗೇ ಒಂದು ಪುಸ್ತಕ ಪೂರ್ವಾಪರಗಳಿಲ್ಲದೆ ನನ್ನ ಬಗಳಿಗೆ ಸೇರಿಕೊಂಡಿತ್ತು. ಒಂದೊಂದು ಕಥೆಯನ್ನೂ, ಹೀರಿ, ಹೀರಿ ಆಸ್ವಾದಿಸುತ್ತಿದ್ದೆ. ಸಾಮಾನ್ಯವಾಗಿ ವೀಕೆಂಡ್ ದಿನಗಳಲ್ಲಿ ಓದಿ ಮುಗಿಸುತ್ತಿದ್ದ ಪುಸ್ತಕಗಳು ವೀಕ್ ದಿನದಲ್ಲೇ ಸ್ವಲ್ಪ ಸ್ವಲ್ಪ ಎನ್ನುವಂತೆ ಓದಿ‌ ಓದಿ ಆನಂದಿಸುತ್ತಾ ಮುಗಿಸಿಬಿಟ್ಟೆ. ಕೃಪಾಕರ ಮತ್ತು‌ ಸೇನಾನಿ ಎಂಬೆರಡು ಜೀವ ವಿಜ್ಞಾನಿಗಳು ಬರೆದ 'ಕೆನ್ನಾಯಿಯ ಜಾಡಿನಲಿ' ಎಂಬ ಈ ಪುಸ್ತಕ ನನ್ನ ಇಷ್ಟದ ಪುಸ್ತಕಗಳ ಪಟ್ಟಿ ಸೇರಿತು.

ಇದೊಂದು ಅನುಭವ ಕಥಾನಕ. ಯುರೋಪಿಯನ್ನರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ,ಸಂಶೋಧನಾತ್ಮಕ ಪುಸ್ತಕಗಳು‌ ನಮ್ಮ ಭಾರತೀಯರೂ ಬರೆಯಲಾರಂಭಿಸುವುದು ಸಾಹಿತ್ಯ ಕ್ಷೇತ್ರದ ಕ್ಷಿಪ್ರ ಪ್ರಗತಿಯ ಅನನ್ಯತೆ. ಅಭ್ಯಸಿಸಿಕೊಂಡು, ವಿಜ್ಞಾನದ ಮಾಹಿತಿಗಳನ್ನು ರಾಶಿ ಹಾಕಿ ಓದುಗರ ಮೇಲೆ‌ ಹೇರದೆ ಬರೆಯುವ ಕೌಶಲ್ಯ‌ ಸಿದ್ಧಿಸುವುದು ಸುಲಭವಲ್ಲ. ಹಾಗೊಮ್ಮೆ ಬರೆಯಲು ಹೊರಟರೆ ಓತಪ್ರೋತ ಅನುಭವಗಳಿಂದ ಕಿರಿಕಿರಿಯಾಗಿ ಓದುಗರ ರಸಭಂಗವಾಗುವ ಸಾಧ್ಯತೆ ಇರುತ್ತದೆ. ಅಥವಾ  ಮಾಹಿತಿಗಳೇ ತುಂಬಿ ನೀರಸ ಕೃತಿಯಾಗಿ ಬಿಡುವ ಅಪಾಯವೂ ಇದೆ. ಈ ಎರಡೂ ಬಗೆಯ ಅಪಾಯಗಳಿಂದ ಪಾರಾಗಿರುವ ಕೃಪಾಕರ ಸೇನಾನಿಯವರ ಕೆನ್ನಾಯಿಯ ಜಾಡಿನಲ್ಲಿ ಕೃತಿಯು ಓದಗರಿಗೆ ಕಾಡಿನ ವಿಶಿಷ್ಟ ಅನುಭಗಳ ರಸಪಾಕವನ್ನು‌ ಧಾರೆಯೆರೆಯುತ್ತವೆ.

ಲೇಖಕರಿಗೆ ಕಾಡಿಲ್ಲದ ಕಡೆ ಸಹಜ ಕಾಡನ್ನು ನಿರ್ಮಿಸುವ ಹಪಾಹಪಿ. ಕಾಡು ಕುರುಬರ ಜೀವನ ಸಂಗ್ರಾಮ, ಅವರೊಂದಿಗೆ ಕಾಡು ಸುತ್ತುವ ಅನುಭವಗಳು ಚಾರಣ ಪ್ರಿಯರಿಗೆ ಬಹಳವೇ ಖುಷಿಕೊಟ್ಟೀತು. ಬೊಮ್ಮ, ಮಾರ, ಕ್ಯಾತ, ಮಾದ ಮುಂತಾದ ಕಾಡು ಕುರುಬರ ಜೊತೆ ಅಳಿವಿನಂಚಿನಲ್ಲಿರುವ ಕಾಡು ನಾಯಿಗಳ ಜಾಡು ಹಿಡಿಯುತ್ತಾ ಸಾಗುವುದು ಪುಸ್ತಕದ ವಿಶೇಷ. ಕೇವಲ ಕಾಡು ನಾಯಿಗಳ ಬಗ್ಗೆ ಮಾತ್ರ ಕೇಂದ್ರೀಕರಿಸದೆ ಕಥೆಯ ಮಗ್ಗಲು ಕಾಡಿನ ಎಲ್ಲೆಂದರಲ್ಲಿ ತಿರುಗುತ್ತದೆ. ಹುಲಿ, ಚಿರತೆ, ಆನೆಗಳ ಬಗ್ಗೆಯೂ ಮಾತುಕತೆಯಾಗುತ್ತದೆ. ಕಾಡಿನ ಮನೆಯೊಂದು ನಿಜಕ್ಕೂ ಆಕರ್ಷಿಸುತ್ತದೆ. ನಮಗೂ ಹಾಗೊಂದು ಮನೆಯಿದ್ದು, ಮನೆಯ ಹಿತ್ತಲಿಗೆ ಆನೆ ಬರುವಂತಿದ್ದರೆ, ಹುಲಿ ಅಡ್ಡಾಡುತ್ತಿದ್ದರೆ... ಹೀಗನಿಸುವುದುಂಟು. ' ಸೋಲೋ' ಎಂದು ಲೇಖಕರೇ ಹೆಸರಿಟ್ಟ ಏಕಾಂಗಿ ಕಾಡು ನಾಯಿಯ ಹೋರಾಟ, ಜೀವನ ಸಂಗ್ರಾಮ ಖುದ್ದು ಪರಿಶೀಲಿಸಿ ದಾಖಲು ಮಾಡಿದ ಬರಹಗಾರರ ಆಸ್ಥೆಗೆ ಶಿರಬಾಗಬೇಕು.  ನಮ್ಮ ಮನೆಯ ಕೊಟ್ಟಿಗೆಯಲ್ಲಿ ಅಬ್ಬೇ ಪಾರಿ ನಾಯಿಯೊಂದು ಮರಿ ಮಾಡಿದೆ. ಆಗೀಗ ನಮ್ಮೊಳಗೂ ಮರಿಗಳ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಬಹುಶಃ ನನ್ನೊಳಗೂ ಕಾಡು ನಾಯಿಯ ಜೀವನ ಶೈಲಿ ಆವಾಹಿಸಿ ಅವುಗಳನ್ನೂ ಅದೇ ರೀತಿ ನೋಡುವ ಗುಣ ಬೆಳೆದು ಬಿಟ್ಟಿದೆ.

ಸಾಧು ಸಾಕು ಪ್ರಾಣಿಯಂತೆ ಮಾವುತನ ಎಲ್ಲಾ ಆಜ್ಞೆಗಳನ್ನು ಚಾಚು ತಪ್ಪದೆ ಪಾಲಿಸುವ ಮಾರನ ಮದುಮಲೈ, ಸ್ವಾಮಿ‌ನಿಷ್ಠೆಗೆ ಹಿಡಿ ಕೈಗನ್ನಡಿ. ಯಾರೊಬ್ಬರೂ ಸಮಸ್ಯೆಗಳಲ್ಲಿ ಸಿಲುಕಿದರೂ, ಆಪತ್ಬಾಂಧ ತನ್ನದೇ ಪ್ರಭೇಧ ಆನೆಗಳಿಂದಾಗುವ ಅಪಾಯದಿಂದ ತನ್ನನ್ನು ದಾಸ್ಯದೆಡೆದೆ ತಳ್ಳಿದ ಮನುಷ್ಯರನ್ನು ರಕ್ಷಿಸುವ ಮುಗ್ಧತೆ ಯೋಚನೆಗೆ ಹಚ್ಚುವಂತದ್ದು. ಹುಲಿಯ ಆಗು ಹೋಗುಗಳು, ಚಿರತೆಯ ಹೆಜ್ಜೆಗುರುತು ಅವುಗಳ ಜಾಡು ಹಿಡಿದು‌ ನಡೆಯುವ ಕುತೂಹಲವೇ ಈ ಪುಸ್ತಕದ ಉಮೇದು. ಒಂದೊಂದು ಸಂದರ್ಭದಲ್ಲಿ ಮೈ ಮರೆಯುವಂತೆ ಮಾಡಿ ಬಿಡುವ ಕಾಡಿನ ರೋಚಕತೆ ಸೆಳೆಯುತ್ತದೆ. ಕೊನೆಯ ವಿದಾಯವೆಂಬ ಭಾಗವಂತೂ ಮನುಷ್ಯ ಪ್ರಾಣಿಗಳ ನಡುವಿನ ಅವಿನಾಭಾವ ನಂಟನ್ನು ಹೇಳಿಕೊಳ್ಳುವಂತದ್ದು. ಅವುಗಳ ಹಿಂದೆ ಸುಮಾರು ವರ್ಷಗಳ ಕಾಲ ಅಳೆದು ಅವುಗಳ ಮನಸ್ಸನ್ನು ತಾವು ಅಪಾಯಕಾರಿಗಳಲ್ಲವೆಂಬ ಧೈರ್ಯ ಹುಟ್ಟಿಸಿ ಬಿಡುವಲ್ಲಿ ಲೇಖಕರ ಸಂಶೋಧನೆ ಯಶಸ್ಸಿನ ಭಾಗ. ಕೊನೆಗೆ ಅವುಗಳೊಂದಿಗೆ ಮೂಖವಾಗಿ ಸಂಭಾಷಿಸುವುದರೊಂದಿಗೆ ಅವುಗಳು ಕಣ್ಣಿಗೆ ಕಾಣುವಂತೆ ನಿರ್ಲಿಪ್ತವಾಗಿ, ನಿಷ್ಕಪಟವಾಗಿ ಮಂಡಿಯೂರಿ ಕುಳಿತುಕೊಂಡು ಮೌನವಾಗಿ ಸಂಭಾಷಿಸುವ ವಿದಾಯ ಭಾವುಕತೆಗೆ ತಳ್ಳುತ್ತದೆ. ಪರಿಸರವನ್ನು ತುಂಬಾ ಪ್ರೀತಿಸುವ ಮನಸ್ಸುಗಳನ್ನು ತಣಿಸಬಲ್ಲ ಈ ಹೊತ್ತಗೆ ಕನ್ನಡಿಗರ ಪಾಲಿಗೆ ಅಪೂರ್ವ ಕೊಡುಗೆ. ಪುಸ್ತಕವನ್ನು ಓದುತ್ತಾ, ಕಾಡನ್ನು ಕಲ್ಪಿಸಿಕೊಂಡು ಧೇನಿಸುತ್ತಿದ್ದರೆ ಈ ಪುಸ್ತಕವೂ ಮುಗಿಯುವುದು ಗೊತ್ತಾಗದು. ಎಲ್ಲವೂ ಮುಗಿದಾಗ ಕೊನೆಗೊಮ್ಮೆ  ಹುಲಿಯ ಫರ್ಜನೆಯೋ, ಆನೆಯ ಘೀಳೋ ಕೇಳಿದಂತಾಗುತ್ತದೆ. ನಡುಗಾಡಿನಲ್ಲಿ ಕಳೆದು ಬಿಡಬೇಕೆಂಬ ಅಭೀಪ್ಸೆಯೊಂದು ಜೀವ ತಳೆಯುತ್ತದೆ.

ಪುಸ್ತಕದ ಮಾಹಿತಿಗಾಗಿ ಈ ಲಿಂಕನ್ನು ಬಳಸಿ- https://www.bookbrahma.com/book/kennayiya-jadinalli

ಮುನವ್ವರ್ ಜೋಗಿಬೆಟ್ಟು