Article

ನಾನು ಕಂಡಂತೆ ’ಹಾಣಾದಿ’

ಬರಹಗಾರನಿಗೆ ಸೂಕ್ಷ್ಮ ಗ್ರಹಿಕಾ ಶಕ್ತಿ ಇರಬೇಕು. ಗ್ರಹಿಸುವ ವಿಶೇಷ ವ್ಯವಧಾನವನ್ನು ಹೊಂದಿದ್ದರೆ ತನ್ನ ಬರವಣಿಗೆಯಲ್ಲಿ ಗ್ರಹಿಕೆಯ ಎಲ್ಲ ಅಂಶಗಳನ್ನು ಒಂದು ಕ್ಯಾನ್ವಾಸಿನಲ್ಲಿ ವಿಶಿಷ್ಟ ರೀತಿಯಲ್ಲಿ ಚಿತ್ರಿಸಬಹುದು. ಪ್ರತಿಯೊಂದು ಅಂಶವನ್ನೂ ಅಚ್ಚುಕಟ್ಟಾಗಿ ಅಕ್ಷರ ರೂಪಕ್ಕಿಳಿಸಬಹುದು, ರಸವತ್ತಾಗಿ ಭಾಷೆಯನ್ನು ಬಳಸಿ ಓದುಗನಿಗೆ ಉಣಬಡಿಸಬಹುದು. ಹಾಣಾದಿ ಕಾದಂಬರಿ ಓದಲಾರಂಭಿಸಿದಂತೆ ನಿಜಕ್ಕೂ ಕಪಿಲ ಅವರ ಸೂಕ್ಷ್ಮಗ್ರಹಣ ಶಕ್ತಿ ತುಂಬಾ ಚೆನ್ನಾಗಿ ಕಾದಂಬರಿಯುದ್ದಕ್ಕೂ ಕೆಲಸ ನಿರ್ವಹಿಸಿದೆ ಎಂದೆನಿಸಿತು. ಆಪ್ತವೆನಿಸುವ ಬರಹ ಇಷ್ಟವಾಯ್ತು. ಉಪಮೇಯಗಳು ಸಂದರ್ಭೋಜಿತವಾಗಿ ಬರಹಕ್ಕೆ ಮೆರುಗು ತಂದಿವೆ.

ಮಾಂತ್ರಿಕ ಲೋಕದ ಕಥಾ ಹಂದರದಂತೆ ಗೋಚರಿಸಿದರೂ ಮಾಂತ್ರಿಕತೆಯಿಂದ ದೂರವಿರುವ ಕಥೆಯಾಗಿದೆ. ಅಪ್ಪ, ಗುಬ್ಬಿ ಆಯಿ, ಬಾದಾಮಿ ಮರ, ಕಂಟಿ, ತೊತ್ಯಾ,  ಈ ಪ್ರಮುಖ   ಪಾತ್ರಗಳೊಂದಿಗೆ ಮಾತಿಗಿಳಿಯುವ ಸಿಟಿಯಿಂದ ಬಂದ ಪಾತ್ರಧಾರಿ ಅದೇ ಊರಿನ ಮಗನಾಗಿರುತ್ತಾನೆ. ಬಹುದಿನಗಳ ನಂತರ ಊರಿನ ಬಂದವನು ಬದಲಾದ ಊರಿನ ಚಿತ್ರಣವನ್ನು, ತನ್ನ   ಬಾಲ್ಯದ ನೆನಪುಗಳೊಂದಿಗೆ ಸಮೀಕರಿಸುತ್ತಾ ನಡೆಯುತ್ತಾನೆ. ಅಲ್ಲಿ  ಬಾಲ್ಯದ ನೆನಪುಗಳ ಚಿತ್ರಣ, ಕಲಿತ ಶಾಲೆಯ ಚಿತ್ರಣ, ಶಾಲೆಯ ಆವರಣ, ಮನೆಯ ಚಿತ್ರಣ, ಬಾಲ್ಯದ ಆಟಗಳ   ಕುರಿತು, ಹೀಗೆ ಬಾಲ್ಯವನ್ನೇ ಮರುಕಟ್ಟಿಕೊಡುತ್ತಾನೆ. ತನ್ನ ಬಾಲ್ಯದ ಆಟಗಳು, ಗೆಳೆಯರೊಡನಾಟದ ಸುಮಧುರ ಬಾಲ್ಯದ ದಿನಗಳನ್ನು ನೆನೆಯುತ್ತಲೇ ಹಾಳುಬಿದ್ದ ಊರೊಳಗೆ ಕಾಲಿರಿಸುತ್ತಾನೆ.

ಕತಾನಾಯಕ ಗತಕಾಲದ ನೆನಪುಗಳನ್ನು ಸ್ವಗತ ರೂಪದಲ್ಲಿ ಹೇಳುತ್ತ, ತಾನು ಸಿಟಿಹಾದಿ ಹಿಡಿದ ನಂತರ ಊರಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಗುಬ್ಬಿಆಯಿಯ ಮೂಲಕ ಕೇಳುತ್ತಾನೆ. ಗತಕಾಲದಲ್ಲಿ ಊರಲ್ಲಿ ನಡೆದ ಇಡೀ ಘಟನೆಯನ್ನು ಗುಬ್ಬಿಆಯಿಯ ಮೂಲಕ ಲೇಖಕರು ತುಂಬಾ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದ್ದಾರೆ. ಅಜ್ಜಿಯು ಹೇಳಿದ ಘಟನೆಗಳು ಕತೆಯಂತೆ ಕುತೂಹಲ ಹಾಗೂ ರೋಚಕತೆಯೆನಿಸಿದರೂ, ಅವುಗಳು ತನ್ನ ತಂದೆಯ ಬದುಕಿನೊಡನೆ ಬೆರೆತಿರುವುದರಿಂದ ಸಾಮ್ಯತೆ ಇರುವುದನ್ನು ಕಂಡು ಅಚ್ಚರಿಗೊಳಪಡುತ್ತಲೇ ಹುಡುಗ ಗುಬ್ಬಿ ಆಯಿಯ ಜೊತೆ ಹಾಣಾದಿಯುದ್ದಕ್ಕೂ ಹುಂಗುಡುತ್ತಲೇ ಸಾಗಿದನು.

ಕಾದಂಬರಿಯಲ್ಲಿ ಬಾದಾಮಿ ಮರ ಕೇವಲ ನಿರ್ಜೀವ ಮರದಂತೆ ಕಾಣುವುದೇ ಇಲ್ಲ. ಕತಾನಾಯಕನ ತಂದೆಗೆ ಅದು ಪ್ರಾಣ, ಉಸಿರು. ಬಾದಾಮಿ ಮರದ ನೆರಳಲ್ಲೇ ತನ್ನ ಬದುಕನ್ನು ಕಳೆದ ತಂದೆ. ತಂದೆಗೆ ಉಸಿರಂತಿದ್ದ ಬಾದಾಮಿ ಮರ ಊರವರಿಗೆ ಭೂತದಂತೆ ಕಾಣಲಾರಂಭಿಸಿತು, ಇಲ್ಲದ ಕತೆಗಳನ್ನು ಕಟ್ಟಿದರು, ಮರವನ್ನು ಕಡೆಯುವಂತೆ ಒತ್ತಾಯಿಸಿದರು. ತಂದೆ ಇದಾವುದನ್ನು ಕೇಳಿದರೂ ಕೇಳದಂತೆ ಇದ್ದುಬಿಡುತ್ತಿದ್ದ. ಹಾಣಾದಿ ಕಾದಂಬರಿಯ ಪ್ರಮುಖ ಪಾತ್ರವೇ ಬಾದಾಮಿ ಗಿಡ. ಆ ಗಿಡದ ಸುತ್ತಲೂ ನಡೆಯುವ ಕುತೂಹಲಕಾರಿ ಘಟನೆಗಳನ್ನು ಗುಬ್ಬಿಆಯಿಯ ಮುಖಾಂತರ ಕೇಳುತ್ತ ಅಂತ್ಯಗೊಳ್ಳುವ ಪರಿ ವಿಭಿನ್ನವಾಗಿದೆ.

ಗುಬ್ಬಿಆಯಿಯ ಬಾಯಿಂದ ತಂದೆ ಏನಾದ ಎಂದು ಕೇಳುತ್ತಲೇ ಸಾಗುವ ಮಗ ಕೊನೆಗೆ ಅಪ್ಪನ ಸಾವಿಗೆ ಕಣ್ಣೀರಾಕಿದ, ಅಪ್ಪನಿಗೆ ಬಾದಾಮಿ ಮರದ ಮೇಲಿರುವ ಪ್ರೀತಿಕಂಡು ಮರುಗಿದ, ಊರವರು ನೀಡಿದ ಹಿಂಸೆಗೆ ಆಕ್ರೋಶಗೊಂಡ. ಹೀಗೆ ನಾನು ತಂದೆಗೆ ತಕ್ಕ ಮಗನಾಗಲೇ ಇಲ್ಲವೆಂದೂ ಬೇಸರಗೊಂಡ. ಕೊನೆಗೆ ಕತೆ ಹೇಳಿದ ಗುಬ್ಬಿಆಯಿ ಮೂರ್ತ ರೂಪದಲ್ಲಿ ತನ್ನೊಡನೆ ಇಲ್ಲದಿರುವುದನ್ನು ಕಂಡು ಹುಡುಕಾಡಿ ತಬ್ಬಿಬ್ಬಾದ! 

ಬಾಲ್ಯದ ನೆನಪುಗಳನ್ನು ಸೊಗಸಾಗಿ ತುಂಬಾ ಆಪ್ತವಾಗಿ ವಿವರಿಸುತ್ತ ಒಂದು ಗತಕಾಲದ ನೆನಪುಗಳನ್ನು ವಾಸ್ತವದ ಭಾವದೊಂದಿಗೆ ಬೆರೆಸುತ್ತ ಹೆಣೆದ "ಹಾಣಾದಿ" ಕಾದಂಬರಿ ವಿಭಿನ್ನ ಪ್ರಯತ್ನವೆಂದು ಗೋಚರಿಸುತ್ತದೆ.

ಏನನ್ನು ಹೇಳಬೇಕು ಅದನ್ನು ನೇರವಾಗಿಯೇ ಹೇಳಿ, ಎಲ್ಲೂ ಓದುಗರಿಗೆ ಬೇಸರವನ್ನುಂಟು ಮಾಡದೇ ಓದುತ್ತಾ ಹೋದಂತೆ ನಾವೂ ನಮ್ಮ ಬಾಲ್ಯದ ನೆನಪುಗಳೊಡನೆ ಸುತ್ತಾಡಿ, ಆಟವಾಡಿ, ನಮ್ಮೂರ ಶಾಲೆ, ಮನೆ, ಹೊಲಗಳನ್ನು ಸ್ಮೃತಿಪಟಲದಲ್ಲಿ ತಂದುಕೊಂಡು ಖುಷಿಪಟ್ಟು, ಗುಬ್ಬಿಆಯಿಯಂತೆ ನಮಗೂ ಇದ್ದ ನಮ್ಮ ಅಜ್ಜಿಯರೊಡನಾಟದ ಮಧುರ ಭಾವನಾತ್ಮಕ ಕ್ಷಣಗಳನ್ನು ನೆನೆದು, ಒಂದು ಸುತ್ತು ಬಾಲ್ಯದ ಸುಂದರ ಪ್ರಪಂಚಕ್ಕೆ ಹೋಗಿಬಂದಂತಾಯ್ತು. ಹಾಗೆಯೇ ಕುತೂಹಲದ ಬೇತಾಳದ ಕತೆಯಂತೆ ಓದಿಸಿಕೊಂಡು ಹೋಗುವ ’ಹಾಣಾದಿ’ ಕಾದಂಬರಿ ಓದಿ ಆನಂದಿಸುವುದೇ ಸಂತಸ.

ಕಾದಂಬರಿ ಓದು ಮುಗಿದಾಗಲೂ ಅನೇಕ ವಿಷಯಗಳು ಓದುಗರನ್ನು ತಡವುತ್ತವೆ. ಉತ್ತರಿಸು ಎಂದು ಹಠಮಾಡುತ್ತವೆ. ಬಾದಾಮಿ ಮರ, ಗುಬ್ಬಿಆಯಿ ಪಾತ್ರಗಳ ಸುತ್ತಲೂ ಹೆಣೆದ ಎಲ್ಲ ಘಟನೆಗಳು ಸದಾ ನೆನಪಿನಲ್ಲಿ ಉಳಿಯುತ್ತವೆ‌.

ಬರಹದ ಶೈಲಿ ತುಂಬಾ ಹಿಡಿಸಿತು. ಲೇಖಕರದು ಇದು ಮೊದಲ‌ ಕಾದಂಬರಿ ಎನಿಸುವುದೇ ಇಲ್ಲ. ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಧನಸಹಾಯ ಪಡೆದ ಕೃತಿಯೂ ಇದಾಗಿದ್ದು ಖುಷಿಯ ವಿಚಾರ. ಬಹಳಷ್ಟು ಯುವಬರಹಗಾರರು ಕತೆ, ಕವಿತೆಗಳು, ಹನಿಗವಿತೆ, ಹೈಕು, ಸಣ್ಣಕತೆಗಳು, ನ್ಯಾನೋ ಕತೆಗಳಿಗಷ್ಟೇ ತಮ್ಮ ಸೀಮಿತ ವಿಚಾರಧಾರೆಗಳನ್ನು ಹರಿಬಿಡುತ್ತಿದ್ದು ಕಾದಂಬರಿ ವಿಷಯಕ್ಕೆ ಬಂದಾಗ ಸ್ವಲ್ಪ ದೂರವೇ ಸರಿಯುವರು. ಆ ದುಗುಡನ್ನು ಕೊಡವಿ ತಮ್ಮದೇ ವಿಶಿಷ್ಟ ವಿಚಾರಧಾರೆಗಳ ಮೂಲಕ ಮೊದಲಿಗೆ ಕಾದಂಬರಿ ಬರೆದ ಲೇಖಕರು ಯುವಬರಹಗಾರರಿಗೆ ಸ್ಪೂರ್ತಿ. ಇದೇ ಬರಹದ ಧಾಟಿಯಲ್ಲಿ ಇನ್ನಷ್ಟು ವಿಭಿನ್ನ ವಿಚಾರಧಾರೆಗಳ ಕಾದಂಬರಿಗಳು ಕಪಿಲ್ ಅವರಿಂದ ಮೂಡಿಬರಲಿ ಎಂದು ಶುಭಹಾರೈಸುತ್ತ ಹಾಣಾದಿಯಲ್ಲಿ ನೀವು ಒಂದು ಬಾರಿ ವಿಹರಿಸಿಬನ್ನಿ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ