Article

ಶಿವರಾಮ ಕಾರಂತರ ’ಮರಳಿ ಮಣ್ಣಿಗೆ’ ಕಾದಂಬರಿಯ ಓದು

ಇದನ್ನು ಕಾಕತಾಳೀಯವೆಂದರೆ ನೀವು ನಂಬಲೇ ಬೇಕು. ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ಕೊನೆಯ ಅಧ್ಯಾಯ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಮುಕ್ತಾಯಗೊಳ್ಳುತ್ತದೆ! ನಾನು ಅದನ್ನು ಓದಿ ಮುಗಿಸಿದ ದಿನವೂ ಮಕರ ಸಂಕ್ರಾಂತಿ! ಇದೆಲ್ಲದರ ಹೊರತಾಗಿಯೂ ನನ್ನ ಪ್ರಕಾರ ಇದೊಂದು ಕನ್ನಡ ಸಾಹಿತ್ಯದಲ್ಲೇ ಅತ್ಯಂತ ವಿಶಿಷ್ಟವಾದ ಕಾದಂಬರಿ.

ಹೇಳಿದರೆ ಸಪ್ಪೆಯಾಗಿ ಬಿಡುವ ಸಾಧಾರಣ ಕಥಾ ಪರಿಸರವೇನೋ ನಿಜ. ಆದರೆ, ಕಾರಂತರೆಂಬ ಬೆರಗು ಹುಟ್ಟಿಸುವ ಪ್ರತಿಭೆಯ ಕೈಯಲ್ಲಿ ಈ ಕೃತಿ ಅದ್ಭುತ ಕಲಾ ಕೃತಿಯಾಗಿ ಅರಳಿದೆ. ಓದುತ್ತಾ ಒಮ್ಮೆ ನನಗೆ ಹೀಗೊಂದು ಸಂಶಯ ಬಂತು. ಈ‌ ಲಚ್ಚನ ಮಗ ರಾಮ ಇದ್ದಾರಲ್ಲ, ಅವರೇ ಯಾಕೆ ಶಿವ " ರಾಮ" ಆಗಿರಬಾರದು. 'ಆಗಲಾರ' ಎಂಬ ಯಾವುದೇ ನಿರ್ಭಂಧಗಳಿಲ್ಲ. ತಮ್ಮ ಬದುಕಿನ ಅನುಭವಗಳನ್ನು ಕಾದಂಬರಿಕಾರರು ಕಥೆಗಳಲ್ಲಿ ಹೊಸ ಪಾತ್ರಗಳನ್ನಾಗಿ ಆವಾಹಿಸಿದ್ದಿದೆ. ಕಾನೂರಿನ ಹೆಗ್ಗಡತಿ ಪುಸ್ತಕದಲ್ಲಿ ಕುವೆಂಪು ಅವರೇ ಹೂವಯ್ಯನಾಗಿ ಅವತಾರ ವೆತ್ತಿದಂತೆ ಇಲ್ಲೂ ಕಾರಂತರು ರಾಮನಾಗಿ ಬಂದು ಹೋಗಿರಬಹುದು.

ಇವೆಲ್ಲಕ್ಕೂ ಹೊರತಾಗಿ ಕಾದಂಬರಿಯ ಅಂತರಾಳದಲ್ಲಿ ಸ್ತ್ರೀ ಸಂವೇದನೆಯ ಧ್ವನಿಯೊಂದು ಮೊಳಗುವುದು ಕೇಳಿಸುತ್ತದೆ. ಯಾವ ಮಹಿಳಾ ಸಂಘಟನೆಯ ಹೋರಾಟಗಾರ್ತಿಗೂ ಒಲಿಯದ ಛಾತಿ, ಕಾರಂತರ ಪಾತ್ರಗಳಲ್ಲಿ ಜೀವಂತವಾಗುತ್ತದೆ. ಸರಸೋತಿ,ಪಾರೋತಿ , ಸತ್ಯ ಭಾಮೆ‌ ಮತ್ತು‌‌ ನಾಗವೇಣಿ ಒಬ್ಬರಿಗೊಬ್ಬರು ಸರಿದೂಗುವುದುಂಟೇ. ಬದುಕಿನ ಅಲೆಗಳ ಮಥನಕ್ಕೆ ಎದೆಗೊಟ್ಟು ಸ್ಪರ್ಧಿಸುವ ಮಹಾ ಶಕ್ತಿ, ಅದಕ್ಕೆ ಆ ತಲೆಮಾರಿನ  ಹೆಂಗಸರೇ ಸೈ‌. ಹೆಣ್ಣೆಂದರೆ ದುಡಿಸಿಕೊಳ್ಳಲಿರುವವಳೆಂಬ ಕೀಳು ಮನಸ್ಥಿತಿಯನ್ನೇ ಕಥೆಯ ಮೂಲಕ ಅಣಕದಂತೆ ಚೊಕ್ಕಟವಾಗಿ ಹೇಳಿ ಕಾರಂತಜ್ಜ ಸಮಾಜವನ್ನು ಹಂಗಿಸಿ ಬಿಡುತ್ತಾರೆ. ಕಡಲ ಅಲೆಗಳನ್ನೇ ಅಸ್ವಾದಿಸುವ ನನ್ನಂತಹ ಹಲವರಲ್ಲಿ ಕಥೆಯು ಜೀವ ಕಳೆಯನ್ನೂ ತುಂಬುತ್ತದೆ.ದಶಕಗಳ ಹಿಂದಿನ ಕಾದಂಬರಿ ತನ್ನ ಪ್ರಸಕ್ತತೆಗೆ ಕಿಂಚಿತ್ತೂ ಲೋಪ ತರುವುದಿಲ್ಲ. ಐಗಳ ಶಾಲೆ ಸರಕಾರಿ ಶಾಲೆಗಳ ಹವಾಕ್ಕೆ ಕೃಶವಾಗುವ ಸನ್ನಿವೇಶ ಪ್ರಸಕ್ತ ವಿದ್ಯಮಾನಕ್ಕೆ ಸುಂದರವಾದ ರೂಪಕ .ಇಂಗ್ಲೀಷ್ ಶಾಲೆಗಳು, ಕನ್ನಡ ಮಾಧ್ಯಮಗಳ ಕತ್ತು ಹಿಸುಕುವುದನ್ನೊಮ್ಮೆ ನೆನಪಿಸಿ ಭವಿಷ್ಯದ ಭಯದ ಕಾರ್ಮೋಡವೊಂದು ಕವಿಯುವಂತೆ ಮಾಡುತ್ತದೆ. 

ಕಾದಂಬರಿ ಕೌಟುಂಬಿಕವಾಗಿ ಸಾಗುತ್ತಾ ರಾಜಕೀಯಕ್ಕೆ ಮಗ್ಗುಲು ಬದಲಾಯಿಸುತ್ತದೆ. ಹಳ್ಳಿಯ ಸೊಗಡನ್ನು ತೆರಿದಿಡುತ್ತಾ ಪಟ್ಟಣದ ಗದ್ದಲಕ್ಕೆ ತಿರುಗುತ್ತದೆ. ಓದುಗರಂತೂ ಕಥೆಯಲ್ಲೇ ತೇಲಿಕೊಂಡು ತನ್ಮಯರಾಗುವುದು ಖರೆ. ಬದುಕಿನ- ಏಳು ಬೀಳುಗಳ ಬಗ್ಗೆ ಅರಿವು ಕೊಡುತ್ತಾ ನೈತಿಕ ವಿದ್ಯಾಭ್ಯಾಸದ ಪ್ರಾಮುಖ್ಯತೆಯ ಸಂದೇಶ ನೀಡುತ್ತದೆ. ಒಂದಿಷ್ಟು ಸರಸ ವಿರಸ, ನೋವು ನಲಿವುಗಳೊಂದಿಗೆ‌ ಜೀವನೋತ್ಸಾಹ ಕಟ್ಟಿ ಕೊಡುವುದೇ ಕಾದಂಬರಿಯ ಮೇಲ್ಮೆ. ಕಡಲು - ನದಿಗಳೊಂದಾಗುವ ಆ ಸುಂದರ ಸೊಬಗಿನಲ್ಲೇ ನಾವು ಕಥೆಯಲ್ಲಿ ಕಳೆದು ಹೋಗುತ್ತೇವೆ. ಸಾಲದ್ದಕ್ಕೆ ಉಳ್ಳಾಲದ ಕೋಟೆಪುರ ನದಿಯ ತೀರದ ಗೆಳೆಯನ ಮನೆಯಲ್ಲಿನ ನನ್ನ ಆ ದಿನಗಳ ಬೆಚ್ಚಗಿನ ನೆನಪುಗಳ ಗರಿ ಬಿಚ್ಚುತ್ತದೆ. ಅತಿ ಸುಂದರವಾದ ಕಾಲೇಜು ದಿನಗಳನ್ನೆಲ್ಲಾ ನೆನಪಿಸುತ್ತದೆ. 

ತಲೆಮಾರುಗಳ ಕಥೆಯನ್ನು ನೀರಸವಾಗದೆ ಕಟ್ಟಿಕೊಡುವ ಕಾರಂತರ ಕ್ಲಾಸಿಕಲ್ ಶೈಲಿಗೆ ಎಂಥವರೂ ತಲೆ ಬಾಗಲೇ ಬೇಕು. ರೈತನೆಂಬ ಶ್ರಮ ಜೀವಿಯ ಬದುಕಿನ ಪಡಿ ಪಾಟಲುಗಳು, ಜೀವಪರವಾದ ಪಾತ್ರಗಳು ಮನಸ್ಸಿನಲ್ಲೇ ಅಚ್ಚಾಗುತ್ತದೆ.  ಕಾದಂಬರಿ ಓದಿ ಮುಗಿಸಿದರೂ ಅದರ ಹ್ಯಾಂಗೋವರ್ ಹಾಗೆಯೇ ಉಳಿದು ಬಿಡುತ್ತದೆ. ಅಷ್ಟಕ್ಕೂ ನನ್ನ ಪಾಲಿಗಿದು ಅಲ್ಟಿಮೇಟ್!

ಈ ಕಾದಂಬರಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿಕೊಡಿ

https://www.bookbrahma.com/book/marali-mannige

ಮುನವ್ವರ್ ಜೋಗಿಬೆಟ್ಟು