ಆಂಗ್ಲ ಕಾದಂಬರಿಕಾರ್ತಿ ಪರ್ಲ್ ಬಕ್ ಎಂಬಾಕೆಯ ’ಗುಡ್ ಅರ್ಥ” ಕಾದಂಬರಿಯನ್ನೋದಿ, ಸ್ಫೂರ್ತಿಗೊಂಡು ರಚಿಸಿದ ’ಮರಳಿ ಮಣ್ಣಿಗೆ’ ಮೂರು ತಲೆಮಾರುಗಳ ಕಥಾನಕವನ್ನು ಹೆಣೆದಿದ್ದರೂ, ಕತೆ ಸಂಪೂರ್ಣವಾಗಿ ಕಾರಂತರು ಹುಟ್ಟಿದ್ದ ಕೋಟದ ಮಣ್ಣಿನ ವಾಸನೆಯಿಂದ ಕೂಡಿದೆ. ಕಾದಂಬರಿ ಕ್ಷೇತ್ರದಲ್ಲಿ ಕಾರಂತರ ಹೆಸರನ್ನು ಚಿರಸ್ಥಾಯಿಗೊಳಿಸಿದ್ದ ಕೀರ್ತಿ”ಮರಳಿಮಣ್ಣಿಗೆ’ಯದು, ದಕ್ಷಿಣ ಕನ್ನಡ ಜಿಲ್ಲೆಯ ಪಡುಗಡಲ ತೀರದ ಕೋಡಿ ಎಂಬ ಹಳ್ಳಿಯ ಬಡ ಬ್ರಾಹ್ಮಣ ಮನೆತನ ಮೂರು ತಲೆಮಾರುಗಳಲ್ಲಿ ಕಂಡ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳೇ ಕತೆಯ ಮುಖ್ಯವಸ್ತು, ರಾಷ್ಟ್ರೀಯ ಚಳವಳಿಯ ಕಾವು ಕತೆಯ ಮೂರನೇ ತಲೆಮಾರಿನ ಚಿತ್ರಣದಲ್ಲಿ ಕಾಣಿಸಿಕೊಂಡಿದೆಯಲ್ಲದೆ, ಈ ಚಳವಳದಲ್ಲಿ ಪಾಲುಗೊಂಡಿದ್ದ ಕಾರಂತರು ತಾವೇ ಒಂದು ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಬಡತನ, ಕೌಟುಂಬಿಕ ಸಂಕಟಗಳ ನಡುವೆಯೂ ಜೀವನದ ಇತ್ಯಾತ್ಮಕ ಮೌಲ್ಯಗಳನ್ನೇ ಬಾಳಿನ ಸಾರ್ಥಕತೆಯ ಸಾರಸರ್ವಸ್ವವೆಂದು ನಂಬಿ ಬಾಳಿದ ಮನುಷ್ಯ ಜೀವಿಗಳ ಹೋರಾಟ, ಆಧುನಿಕ ಜೀವನದ ಶೋಕಿಗೆ ಮರುಳಾಗಿ ಅನೈತಿಕ ನಡತೆಗಳಿಂದ ಬದುಕನ್ನು ಸಾಗಿಸಿ, ಬಿರುಗಾಳಿಗೆ ಸಿಲುಕಿದ ಹಡಗಿನಂತೆ - ಹೊಯ್ದಾಟದ ದುರಂತ ಜೀವನಕ್ಕೆ ತುತ್ತಾದ ವ್ಯಕ್ತಿಗಳ ಕತೆ, ರಾಷ್ಟ್ರೀಯ ಚಳವಳಿಯ ಅಲೆಯಲ್ಲಿ ಎಲ್ಲೆಲ್ಲೋ ಕೊಚ್ಚಿಕೊಂಡು ಹೋಗಿ, ಗುರಿಸಾಧಿಸಲು ವಿಫಲನಾಗಿ, ಕೊನೆಗೂ ಹುಟ್ಟಿದ ನೆಲಕ್ಕೆ ಮರಳಿಬಂದು, ದುಡಿದು ಜೀವಿಸಲು ನಿರ್ಧರಿಸಿದ ಕಥಾನಾಯಕ ರಾಮನ ಕಥೆಯೆ ಈ ಕಾದಂಬರಿ.
“Marali Mannige” (ಮರಳಿ ಮಣ್ಣಿಗೆ) Novel of Dr Kota Shivarama Karanth- ಕುಂದಗನ್ನಡ ಶಬ್ದಗಳು
©2021 Bookbrahma.com, All Rights Reserved