About the Author

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ.

'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ಪ್ರೇರಣೆಯಾಗಿದೆ. ಬೇಂದ್ರೆ ಅಭಿಮಾನಿ-ಧ್ಯಾನಿ, ಸತತ ಮೂರು ದಶಕಗಳಿಂದ ಶಾಲಾ-ಕಾಲೇಜುಗಳಲ್ಲಿ 600ಕ್ಕೂ ಅಧಿಕ ಬೇಂದ್ರೆ ಕಾವ್ಯಗಾಯನ ಸ್ಪರ್ಧೆ ಆಯೋಜನೆಯನ್ನು ಮಾಡಿದ್ದಾರೆ.ಬಹುಮಾನವಾಗಿ ಬೇಂದ್ರೆ ಕೃತಿಗಳನ್ನು ನೀಡಲಾಗಿದೆ. ನಾಡಿನಾದ್ಯಂತ ಸಂಚಾರ ಮಾಡಿ, ಬೇಂದ್ರೆ ಕಾವ್ಯಾನುಭವವನ್ನು ಅಕ್ಷರಕ್ಕೆ ಅಕ್ಷರಶಃ ಇಳಿಸಿದ ಭಗೀರಥರು. ಬೇಂದ್ರೆ ಕಾವ್ಯ ಕೂಟ ಸ್ಥಾಪಿಸಿದ ಇವರು , ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ವಿಮರ್ಶೆ ಆಯೋಜಿಸಿ ಬಹುಮಾನ ವಿತರಣೆ  ಮಾಡಿದ್ದಾರೆ.

ಹಾಡುಹಕ್ಕಿ ಅಂಬಿಕಾತನಯದತ್ತ, ನಾಕುತಂತಿ-ಒಂದು ಟಿಪ್ಪಣಿ, ಬೇಂದ್ರೆ ಕಾವ್ಯ: ಪದನಿರುಕ್ತ, ಸರಳ ಕನ್ನಡದಲ್ಲಿ ಲಕ್ಷ್ಮೀಶನ ವಚನ ಜೈಮಿನಿ ಭಾರತ, ರಾಘವಾಂಕನ ವಚನ ಹರಿಶ್ಚಂದ್ರ ಚಾರಿತ್ರ ಹಾಗೂ ಕನಕದಾಸರ ನಳದಮಯಂತಿ ಪ್ರೇಮಕಥೆ ಕೃತಿಗಳನ್ನು ರಚಿಸಿದ್ದಾರೆ.

ಬೇಂದ್ರೆಯವರ 'ಜಾತ್ರೆ' ನಾಟಕದ ನಿರ್ದೇಶನ, 'ಕುಣಿಯೋಣು ಬಾರಾ ಬೇಂದ್ರೆಯೊಡನೆ' ರೂಪಕ, ಕಂಸಾಳೆಯಲ್ಲಿ ಬೇಂದ್ರೆ ಕಾವ್ಯಪ್ರಯೋಗ ಕೃಷ್ಣಪ್ಪ ಅವರ ಮಹತ್ವದ ಕಾರ್ಯ. ಸಾಹಿತ್ಯ ಸೇವೆಗೆ ಡಾ.ಜಿ.ಪಿ.ರಾಜರತ್ನಂ ಕನ್ನಡ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಗೆ ಇವರು  ಪಾತ್ರರಾಗಿದ್ದಾರೆ.

ಬೇಂದ್ರೆ ಸಾಹಿತ್ಯದ ತಲಸ್ಪರ್ಶಿ ಅಧ್ಯಯನಕಾರರಾದ ಡಾ. ಜಿ. ಕೃಷ್ಣಪ್ಪ ಅವರ ಸಾಹಿತ್ಯ ಪರಿಚಾರಿಕೆ-ಸಾಧನೆಗೆ ಮನ್ನಣೆ ನೀಡಿ 2018 ನೇ ಸಾಲಿನ ಸಾಹಿತ್ಯ ಪ್ರಶಸ್ತಿ ಕೂಡ ಇವರಿಗೆ ಸಿಕ್ಕಿವೆ.

ಜಿ. ಕೃಷ್ಣಪ್ಪ

BY THE AUTHOR