ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ

Date: 27-10-2022

Location: ಬೆಂಗಳೂರು


ಇಡೀ ಸಂಕಲನದಲ್ಲಿ ಹೆಚ್ಚಿನ ಲೇಖನಗಳಲ್ಲಿ ಕಾಣಸಿಗುವುದು ಮತ್ತು ಆಸಕ್ತಿದಾಯಕ ಎನ್ನಿಸುವುದು ಶ್ರೀ ಹರ್ಷರವರ ನಿರ್ಲಿಪ್ತತೆ ಹಾಗೂ ಕೆಲವೊಂದು ಪ್ರಸಂಗಗಳಲ್ಲಿ ತಾವೇ ಟಾರ್ಗೆಟ್ ಆಗುತ್ತಿದ್ದರೂ ದೇಹ ಮನಸ್ಸು ತಮ್ಮದಲ್ಲ ಎಂದುಕೊಂಡು ಸುಮ್ಮನೆ ಉಳಿದುಬಿಡುವುದು ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಶ್ರೀಹರ್ಷ ಅವರ ’ಡಾರ್ಕ್‌ ಹ್ಯೂಮರ್’ ಪುಸ್ತಕದ ಬಗ್ಗೆ ಬರೆದಿದ್ದಾರೆ.

ಪು-ಡಾರ್ಕ್ ಹ್ಯೂಮರ್
ಲೇ- ಶ್ರೀಹರ್ಷ
ಪ್ರ- ಗೋಮಿನಿ ಪ್ರಕಾಶನ ತುಮಕೂರು
ವ-2022
ಬೆಲೆ- 130/-

ನಾನು ಒಂಬತ್ತನೆ ತರಗತಿಯಲ್ಲಿದ್ದಾಗ ನಮಗೆ ಗಣಿತಕ್ಕೆ ಇದ್ದ ಸರ್ ಸ್ವಲ್ಪ ಕೋಪಿಷ್ಟರು. ಮನೆಗೆಲಸ ಕೊಟ್ಟರೆ ಅದನ್ನು ಮಾಡದಿದ್ದಾಗ ಕ್ಲಾಸ್‌ನಿಂದ ಹೊರಗೆ ಹಾಕುತ್ತಿದ್ದರು. ಅದೇ ಸಮಯಕ್ಕೆ ಎಂಟನೆ ತರಗತಿಗೆ ಗೇಮ್ಸ್ ಪಿರಿಯಡ್ ಇರುತ್ತಿತ್ತು. ಹೀಗಾಗಿ ಹೋಂವರ್ಕ್ ಮಾಡಲಿಲ್ಲ ಎಂದು ಕ್ಲಾಸ್‌ನಿಂದ ಹೊರಗೆ ಹೋಗುತ್ತಿದ್ದೆ. ನಂತರ ಕಳ್ಳ ಹೆಜ್ಜೆಯಿಟ್ಟು ಆಟದ ಮೈದಾನಕ್ಕೆ ಸೇರಿಕೊಳ್ಳುತ್ತಿದ್ದೆ. ಅಲ್ಲಿ ಎಂಟನೆ ತರಗತಿಯ ಹುಡುಗಿಯರು ವಾಲಿಬಾಲ್ ಆಡುತ್ತಿರುತ್ತಿದ್ದರು. ಸೀನಿಯರ್ ಆದ ಕಾರಣಕ್ಕೆ ನಾನು ಆಡಲು ಬಂದರೆ ಮರುಮಾತನಾಡದೆ ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿದ್ದರು.

ಬಹಳಷ್ಟು ಸಲ ಇದೇ ಟ್ರಿಕ್ ಬಳಸಿದ್ದೆ. ಆದರೆ ಕಳ್ಳತನ ಒಮ್ಮೆಯಾದರೂ ಸಿಕ್ಕಿಬೀಳಲೇ ಬೇಕಲ್ಲ? ಒಂದು ದಿನ ನಮ್ಮ ಮುಖ್ಯೋಪಾಧ್ಯಾಯರು ನಾನು ಆಟ ಆಡುತ್ತಿರುವುದನ್ನು ನೋಡಿಬಿಟ್ಟರು. ಒಂಬತ್ತನೆ ತರಗತಿಗೆ ಗಣಿತ ಇದೆಯಲ್ಲ ಈಗ.. ಇವಳ್ಯಾಕೆ ಆಡುತ್ತಿದ್ದಾಳೆ ಎಂದು ಯೋಚಿಸಿ ಶಾಲೆಯ ಜವಾನನ್ನು ತರಗತಿ ತೆಗೆದುಕೊಂಡಿಲ್ಲವೇನೋ ಎಂದು ಕ್ಲಾಸ್ ಬಳಿ ಕಳಿಸಿದರು. ಒಳಗೆ ಗಣಿತ ಪಾಠ ನಡೆಯುತ್ತಿದೆ. ವಿಷಯ ತಿಳಿದ ಮುಖ್ಯೋಪಾಧ್ಯಾಯರು ಸೀದಾ ತರಗತಿಯ ಬಳಿ ಬಂದವರೇ ಭಟ್ರೆ, ನೀವಿಲ್ಲಿ ಕ್ಲಾಸ್ ತಗೊಂಡಿದ್ದೀರಿ. ಕೆರೆಮನೆ ಮಾಸ್ತರ್ ಮಗಳು ಅಲ್ಲಿ ವಾಲಿಬಾಲ್ ಆಡ್ತಿದ್ದಾಳೆ. ಏನ್ರಿ ಇದು? ಎಂದು ಗಟ್ಟಿಸಿ ಕೇಳಿದ್ದಾರೆ. ಅವಳು ಹೋಂವರ್ಕ್ ಮಾಡಿರಲಿಲ್ಲ ಸರ್. ಹೀಗಾಗಿ ಕ್ಲಾಸ್‌ನಿಂದ ಹೊರಗೆ ಹಾಕಿರುವೆ ಎಂದರು ಸಣ್ಣ ದನಿಯಲ್ಲಿ. ಅಂತೂ ನನ್ನನ್ನು ಕರೆಸಿ ತರಗತಿಯ ಒಳಗೆ ಕರೆದುಕೊಂಡು ಬೆಂಚ್ ಮೇಲೆ ಹತ್ತಿನಿಲ್ಲಲು ಹೇಳಿದರು ಗಣಿತದ ಸರ್. ನಾನು 'ಸರ್ ನಾನು ಹೋಂ ವರ್ಕ್ ಮಾಡಿದ್ದೆ ಮರೆತು ಹೋಗಿತ್ತು ಎನ್ನುತ್ತ ನನ್ನ ನೋಟ್‌ಬುಕ್ ತೋರಿಸಿದೆ. ಉದ್ದೇಶಪೂರ್ವಕವಾಗಿ ನಾನು ಹೊರಗೆ ಹೋಗಿ ಆಟ ಆಡುವುದು ತಿಳಿದ ನಂತರ ಹೋಂ ವರ್ಕ್ ಮಾಡದವರು ಬೇಂಚ್ ಹತ್ತಿ ನಿಲ್ಲಿ ಎಂದು ನಂತರದ ತರಗತಿಗಳಲ್ಲಿ ಹೇಳತೊಡಗಿದರು. ಹೀಗಾಗಿ ನನಗೆ ಗಣಿತದ ಕ್ಲಾಸ್ ಆಟದ ಪಿರಿಯಡ್ ಆಗುವುದು ತಪ್ಪಿ ಹೋಯಿತು.

ಶ್ರೀ ಹರ್ಷರವರ ಡಾರ್ಕ್ ಹ್ಯೂಮರ್ ಓದುವಾಗ ಇಂತಹ ಹತ್ತಾರು ಬಾಲ್ಯದ ನೆನಪುಗಳು ನಿಮ್ಮನ್ನು ಕಾಡದಿದ್ದರೆ ಹೇಳಿ, ದೇವರಾಣೆ ನಾನು ಮುಂದೆ ಓದುವುದನ್ನೇ ಬಿಟ್ಟುಬಿಡುವೆ. ದೇವರಾಣೆ ಎಂದಾಗ ನೆನಪಾಯಿತು. ಇಲ್ಲಿ ಶ್ರೀ ಹರ್ಷ ತಾನು ನಾಸ್ತಿಕನಾಗಲು ಮುಖ್ಯ ಕಾರಣ ಯಾವುದೆಂಬುದನ್ನು ಹೇಳುತ್ತಾರೆ. ಚಿಕ್ಕವರಿರುವಾಗ ಜ್ವರ ಬಂತೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಇಂಜೆಕ್ಷನ್ ಕೊಡಿಸುವುದಿಲ್ಲವೆಂದು ಅವರ ಅಮ್ಮ ದೇವರ ಮೇಲೆ ಹಾಗೂ ಇವರ ಮೇಲೆ ಆಣೆಯಿಟ್ಟು ಹೇಳಿದ್ದಾಗಿಯೂ ವೈದ್ಯರ ಬಳಿ ತಾವೇ ಮುಂದಾಗಿ ಇಂಜೆಕ್ಷನ್ ಕೊಡಲು ಹೇಳಿದ್ದು, ಅಪ್ಪ ಅಮ್ಮ ಜಗಳವಾಡುವಾಗ ಇಬ್ಬರೂ ಇವರ ತಲೆಯ ಮೇಲೆ ಕೈಯಿಟ್ಟು ಆಣೆ ಮಾಡಿ ತಮ್ಮನ್ನು ಸಮರ್ಥಿಸಿಕೊಂಡಿದ್ದು, ಆಣೆ ತಪ್ಪಿದರೆ ಸಾಯುತ್ತೇವೆ ಎಂಬ ಹೆದರಿಕೆಯಲ್ಲಿ ಇವರು ಹಲವಾರು ದಿನಗಳನ್ನು ಕಳೆದದ್ದು ಎಷ್ಟು ತಮಾಷೆಯಾಗಿ ಆಳದಲ್ಲಿ ಅಷ್ಟೇ ವಿಷಾದ ತುಂಬಿರುವಂತೆ ಹೇಳಲಾಗಿದೆಯೆಂದರೆ ಇದನ್ನು ಶ್ರೀ ಹರ್ಷ ಮಾತ್ರ ಬರೆಯಬಲ್ಲರು ಎಂಬಂತೆ.

ಡಾರ್ಕ್ ಹ್ಯೂಮರ್ ಎಂದರೆ ಹಾಗೆ. ಯಾವುದನ್ನು ಹೇಳಲಾಗುವುದಿಲ್ಲವೋ ಅದನ್ನು ತಮಾಷೆ ಬೆರೆಸಿ ಹೇಳುವುದು. ತಮಾಷೆ ಮಾಡಲಾಗದ, ಮಾಡಬಾರದ ವಿಷಯವನ್ನೂ ತಮಾಷೆಯಾಗಿ ಹೇಳುವುದು. ಶ್ರೀ ಹರ್ಷ ಅವರು ತಮ್ಮ ಲೇಖನದಲ್ಲಿ ಹೇಳಿರುವಂತೆ ಭಾರತದ ಸಾಹಿತ್ಯದಲ್ಲಿ ಡಾರ್ಕ್ ಹ್ಯೂಮರ್ ಎನ್ನುವ ಕವಲು ಮುಂದುವರೆಯದೆ ತಟಸ್ಥವಾಗಿರುವುದಕ್ಕೆ ಕಾರಣ ಭಾರತೀಯರ ಅತಿಯಾದ ಸೂಕ್ಷ್ಮ ಸಂವೇದನೆ ಕಾರಣವೆ

ಇಲ್ಲಿನ ಹೆಚ್ಚಿನ ಲೇಖನಗಳನ್ನು ಅಂಕಣವಾಗಿ ಪ್ರಕಟವಾಗಿದ್ದಾಗ ಓದಿದ ಲೇಖನಗಳೇ ಆಗಿದ್ದರೂ ಪುಸ್ತಕವಾಗಿ ಓದುವಾಗ ಅದರ ಅನುಭವ ಬೇರೆಯದ್ದೇ ತೆರನಾದುದು. ಬಿಡಿ ಲೇಖನಗಳನ್ನು ಓದುವಾಗ ಇಲ್ಲಿನ ಭಾಷೆ ಸಂಭಾಷಣೆಗಳು ಹಾಗೂ ವಿವರಣೆಗಳು ತುಸು ಅಯೋಮಯ ಎನಿಸುತ್ತಿದ್ದುದು ಪುಸ್ತಕವಾಗಿ ಓದಿದಾಗ ಹೊಸದೇ ಆದ ಭಾವ ಹುಟ್ಟಿಸುವುದನ್ನು ಗಮನಿಸಬೇಕು. ಉದಾಹರಣೆಗೆ ಸಂಬಂಜಾ ಅನ್ನೋದು...' ಎನ್ನುವ ಲೇಖನ. ಇದೇನಪ್ಪ ಇವರು ಹೀಗೆಲ್ಲ ಬರಿತಾರೆ ಎಂದುಕೊಂಡಿದ್ದು ಈ ಪುಸ್ತಕದಲ್ಲಿನ ಒಂದು ಲೇಖನವಾಗಿ ಓದುವಾಗ ಒಂದಿಷ್ಟು ಹುಸಿ ನಗು, ಮತ್ತೊಂದಿಷ್ಟು ಆತಂಕ ಜೊತೆಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಹುಡುಗಿ ಬಾಗಿಲು ಹಾಕಿಕೊಂಡು ಕುಡಿತಾಳೆ ಬುದ್ಧಿ ಹೇಳು ಎಂದರೆ ಯಾವುದನ್ನು ಹೇಗೆ ಕುಡಿಬೇಕು ಮತ್ತು ಅದರ ಜೊತೆ ಯಾವುದನ್ನು ಮಿಕ್ಸ್ ಮಾಡಿಕೊಳ್ಳಬೇಕು ಎಂದು ಹೇಳಿಕೊಡುವುದಿದೆಯಲ್ಲ ಅದು ಒಂಥರಾ ಕಿಕ್ ಹುಟ್ಟಿಸುವಂತಹುದ್ದು. ಅದಕ್ಕಿಂತ ಹೆಚ್ಚಾಗಿ ' ನಮ್ಮ ಸಂಸ್ಕೃತಿ ಕದ್ದು ಮುಚ್ಚಿ ತಿನ್ನುವ ಕುಡಿಯುವ ಸಂಸ್ಕೃತಿಯಲ್ಲ. ನಮ್ಮ ಹೆಣ್ಣು ಮಕ್ಕಳು ಯಾವತ್ತೂ ಹಂಚಿಕೊಂಡು ಬಾಳಿದವರು' ಎಂದು ಹೇಳಿಕೊಡುವ ಪರಿ ಇದೆಯಲ್ಲ ಅದು ನಿಜಕ್ಕೂ ನಗು ಉಕ್ಕಿಸುತ್ತದೆಯಾದರೂ ಒಂದಿಷ್ಟು ವಿಷಾದವನ್ನೂ ಹುಟ್ಟಿಸುತ್ತದೆ.

ಈ ಸಂಕಲನದ ಮೊದಲ ಲೇಖನ ಇಂಗ್ಲೀಷ್ ಕುರಿತೋದದೆಯಂ ಕೂಡ ಅಂಕಣದಲ್ಲಿ ಓದಿದಾಗ ಒಂದುರೀತಿಯ ಅಹಂ ಎನ್ನಿಸಿಬಿಡುವಂತಹ ಲೇಖನ ಇದನ್ನು ಪುಸ್ತಕದ ಕೊನೆಯ ಲೇಖನವನ್ನಾಗಿ ಓದಿಕೊಂಡರೆ ಅದೆಷ್ಟೊಂದು ಹೊಸ ಹೊಳಹುಗಳು ದೊರೆಯುತ್ತವೆಯೆಂದರೆ ಒಂದಿಡೀ ಸಮಾಜದ, ಮಧ್ಯಮ ವರ್ಗದ, ಹದಿಹರೆಯದ ಹುಡುಗರ, ಭಾಷಾಗೊಂದಲದ ತೊಳಲಾಟಗಳು ಕಣ್ಣಿಗೆ ಕಟ್ಟುತ್ತವೆ.

ಇಲ್ಲಿ ಶಿಕ್ಷಕರು ಮಾಡುವ ತಪ್ಪುಗಳು ಹಾಗೂ ಶಿಕ್ಷಕರಾಗಿ ಮಕ್ಕಳ ಜೊತೆ ಹೇಗಿರಬೇಕು ಎಂಬುದನ್ನೂ ವಿವರಿಸುತ್ತ ಒಂದು ಘಟನೆಗೆ ಮತ್ತೊಬ್ಬರು, ಅದು ಶಿಕ್ಷಕರಾದರೂ ಆಗಿರಬಹುದು ಅಥವಾ ಸನಿಹದ ಯಾರಾದರೂ ಆಗಬಹುದು ನೀಡುವ ಪ್ರತಿಕ್ರಿಯೆ ಎಂತಹ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದನ್ನು ನಮ್ಮಲ್ಲಿ ನಿಧಾನವಾಗಿ ಬೇರಿಳಿಸುವಂತೆ ಬರೆದಿದ್ದಾರೆ.

ಈ ಲೇಖನದ ಮುಂದುವರಿದ ಭಾಗವಾಗಿ 'ಮೊಂಡುತನ ಬಂದದ್ದೆಲ್ಲಿಗೆ?' ಲೇಖನ ಇರುವಂತೆ ನನಗೆ ಭಾಸವಾಗುವುದು ಕೇವಲ ನಾನು ಒಬ್ಬಳು ಶಿಕ್ಷಕಿ ಎಂಬ ಕಾರಣಕ್ಕೆ ಮಾತ್ರವಲ್ಲ ಅದು ವಿವರಿಸುವ ಮಕ್ಕಳ ಮನೋಧರ್ಮಕ್ಕೂ ಹೌದು. ಶೈಕ್ಷಣಿಕ ಮನೋವಿಜ್ಞಾನ ನನ್ನ ಮೆಚ್ಚಿನ ವಿಷಯ. ಅದನ್ನು ಓದುವಾಗಲೆಲ್ಲ ಶಿಕ್ಷೆ ಹಾಗೂ ಹೀಯಾಳಿಕೆ ಕಲಿಸುವಿಕೆಯ ಒಂದು ಭಾಗವಾಗಿಯೇ ಅದೆಷ್ಟೋ ವರ್ಷಗಳಿಂದ ರೂಢಿಸಿಕೊಂಡು ಬಂದ ನಮ್ಮ ಸಮಾಜದ ನಿಯಮಗಳ ಕುರಿತು ಅಚ್ಚರಿಯೆನಿಸುತ್ತದೆ.

ಚೆನ್ನಾಗಿ ಓದುತ್ತಿರುವ ಹುಡುಗ ಅಥವಾ ಹುಡುಗಿ ಏಕಾಏಕಿ ಓದುವುದನ್ನು ನಿಲ್ಲಿಸಿ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆಯಲಾರಂಭಿಸಿದರೆ ಶಿಕ್ಷಕರಿಗೆ ಆಗುವ ಆಘಾತದ ಅರಿವು ನನಗಿದೆ. ಒಬ್ಬ ಶಿಕ್ಷಕರ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅಳೆಯುವ ಪರಿಪಾಠವಿರುವುದರಿಂದ ಮಗು ಅಂಕ ಕಡಿಮೆ ಗಳಿಸಿದಾಗಲೆಲ್ಲ ಶಿಕ್ಷಕರು ಕಂಗಾಲಾಗತೊಡಗುತ್ತಾರೆ. ಮಕ್ಕಳಿಗೆ ಓದಲು ಹೇರುವ ಒತ್ತಡ ಹೆಚ್ಚಾಗುತ್ತದೆ. ಅದೂ ಹದಿಹರೆಯಕ್ಕೆ ಆಗತಾನೆ ಕಾಲಿಡುತ್ತಿರುವ ಈ ವಿದ್ಯಾರ್ಥಿಗಳ ಚಲನವಲನದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ಮಕ್ಕಳ ಒಟ್ಟೂ ಅಂಕದ ಶೇಕಡಾವಾರು ಕಡಿಮೆ ಬಂದರೆ ಮುಂದಿನ ಇಡೀ ಶೈಕ್ಷಣಿಕ ವರ್ಷ ಮೇಲಾಧಿಕಾರಿಗಳ ನಿಂದನೆಗೆ ಗುರಿಯಾಗಬೇಕಾದ ಒತ್ತಡವಿರುತ್ತದೆ. ಆದರೆ ಈ ಲೇಖನ ಮಕ್ಕಳ ಮನಸ್ಥಿತಿಯನ್ನು ಈರುಳ್ಳಿ ಪದರಗಳನ್ನು ಒಂದೊಂದಾಗಿ ಬಿಡಿಸಿಡುವಂತೆ ನಿಧಾನವಾಗಿ ಅನಾವರಣಗೊಳಿಸುತ್ತದೆ.

ಶಾಲೆಯಲ್ಲಿ ವಿದ್ಯಾರ್ಥಿಗಳು ತಮಗೆ ಗೌರವ ನೀಡಬೇಕೆಂಬುದನ್ನು ಬಲವಂತವಾಗಿ ಹೇರುವುದನ್ನು ಕಣ್ಣಾರೆ ಕಂಡಿರುವ ನನಗೆ ಈ ಲೇಖನವನ್ನು ಶಿಕ್ಷಕರೆಲ್ಲರೂ ಓದಲೇಬೇಕು ಎನಿಸಿದ್ದು ತಪ್ಪೇನೂ ಅಲ್ಲ. ದಿನದ ಪ್ರಾರಂಭದಲ್ಲಿ ತರಗತಿ ಪ್ರವೇಶಿಸಿದಾಗ ಮಕ್ಕಳೆಲ್ಲ ಎದ್ದು ನಿಂತು ಗುರು ಬ್ರಹ್ಮ, ಗುರು ವಿಷ್ಣು ಎಂದು ಪ್ರಾರ್ಥಿಸುವಂತೆ ಹಾಡುವುದು ಸದಾ ನನಗೆ ಇರುಸುಮುರುಸು. ಹೀಗಾಗಿ ನಾನು ವರ್ಗ ಶಿಕ್ಷಕಿಯಾದಾಗಲೆಲ್ಲ ವಿದ್ಯಾರ್ಥಿಗಳಿಗೆ ಹಾಗೆ ಹೇಳುವ ಬದಲು ಗುಡ್‌ಮಾರ್ನಿಂಗ್ ಎಂದರೆ ಸಾಕು ಎಂದುಬಿಡುತ್ತೇನೆ. ಅವರು ಹೇಳಲಿಲ್ಲ ಎಂದರೆ ನಾನಾಗಿಯೇ ಗುಡ್‌ಮಾರ್ನಿಂಗ್ ಚಿಲ್ಡ್ರನ್ ಎಂದುಬಿಡುತ್ತೇನೆ. ಹೀಗಾಗಿ ಇಂಗ್ಲೀಷ್ ಟೀಚರ್ ಕ್ಲಾಸ್ ಟೀಚರ್ ಆದರೆ ಮಕ್ಕಳು ಸಂಸ್ಕೃತಿ ಕಲಿಯೋದಿಲ್ಲ ಎಂಬ ಆರೋಪ ಸದಾ ನನ್ನ ಬೆನ್ನ ಹಿಂದಿರುತ್ತದೆ. ಹಾಗಂತ ಮಕ್ಕಳು ಓದುವುದಿಲ್ಲ ಎಂದರೆ ಶ್ರೀ ಹರ್ಷರವರು ಹೇಳುವಂತೆ ಖಂಡಿತಾ ಮೃದುವಾಗಿಯೇನೂ ಇರೋದಿಲ್ಲ ಎಂಬುದಂತೂ ಸತ್ಯ. ಆದರೆ ಈ ಲೇಖನ ಓದಿದ ನಂತರ ಮಕ್ಕಳು ಓದುವಂತೆ ಮಾಡಲು ನಾನು ನನ್ನ ವರಸೆ ಬದಲಿಸಕೊಳ್ಳಬೇಕೇನೋ ಎಂದು ಯೋಚಿಸುತ್ತಿದ್ದೇನಾದರೂ ಶ್ರೀಹರ್ಷರಂತೆ ಓದುವುದೇ ಇಲ್ಲ ಎಂದು ಮೊಂಡುಹಠ ಹಿಡಿಯುವವರಿಗಾಗಿ ಏನು ಮಾಡಬೇಕೆಂಬುದನ್ನು ಅವರೇ ಹೇಳಿಕೊಡಬೇಕು.

ನೆಟ್ ತುಂಬಾ ಗದ್ದಲ ಎನ್ನುವ ಲೇಖನವನ್ನು ಖಂಡಿತಾ ನಮ್ಮ ನೆಟ್ಟಿಗರು ಓದಲೇ ಬೇಕು. ಎಂತೆಂತಹ ವಿಷಯಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಳ್ಳುತ್ತೇವೆ ಎಂಬುದನ್ನು ಅವಲೋಕಿಸಿಕೊಳ್ಳಲಾದರೂ ಇದು ಅತ್ಯಚಷ್ಯ. ನಾವು ಎಂತೆಂತಹ ಮೂರ್ಖತನದ ಫೋಸ್ಟ್ ಹಾಕುತ್ತೇವೆ ಎಂಬುದು ನಿಚ್ಛಳವಾಗುತ್ತದೆ. ಲೇಖಕರು ಇಲ್ಲೊಂದು ಪ್ರಸಂಗ ಉಲ್ಲೇಖಿಸುತ್ತಾರೆ. ನಮ್ಮ ಮುಕ್ಕೋಟಿ ದೇವರ ಹೆಸರನ್ನು ಹಾಕಿ ಇವರೆಲ್ಲರ ಕೃಪಾಶೀರ್ವಾದದಿಂದ ಗಂಡು ಮಗು ಹುಟ್ಟಿತು ಎಂದು ಸ್ನೇಹಿತನೊಬ್ಬ ಹಾಕಿಕೊಂಡಾಗ ಇವರು ಹಾಗೂ ಇವರ ಸ್ನೇಹಿತರು ಮಾಡಿದ ಕಮೆಂಟ್ ನಿಜಕ್ಕೂ ನಗುಹುಟ್ಟಿಸುವಂತಹುದ್ದು. ಅಷ್ಟೇ ಅಲ್ಲ ನಮ್ಮ ಮೂರ್ಖತನವನ್ನು ಬೆರಳುಮಾಡಿ ತೋರಿಸುವಂತಹುದ್ದು.

ಮೂವತ್ತರ ಮಗ್ಗಿ ಲೇಖನವು ನಮ್ಮ ಸಮಾಜ ಹೇಗೆ ಮಹಿಳೆಯರನ್ನು ಹಾಗೂ ಅವರ ಪ್ರತಿಭೆಗಳನ್ನು ಕಾಲಡಿ ತುಳಿದು ಹೊಸಕಿ ಹಾಕುತ್ತಿದೆ ಎಂಬುದನ್ನು ಉದಾಹರಣೆಗಳ ಸಮೇತ ಹೇಳುತ್ತದ. ಮೂವತ್ತರ ಮಗ್ಗಿಯ ತನಕ ಕಂಠಪಾಠ ಮಾಡಿದ್ದ ಹುಡುಗಿಯೊಬ್ಬಳು ನಂತರ ತನ್ನ ಸಂಸಾರದ ಕೆಲಸಕ್ಕಾಗಿ, ಬಟ್ಟೆ ತೊಳೆಯುವ, ಪಾತ್ರೆ ತಿಕ್ಕುವ, ತಮ್ಮಂದಿರಿಗೆ ಊಟ ಮಾಡಿಸುವ ಕೆಲಸದಲ್ಲಿ ಸಿಲುಕಿ ಅಜ್ಞಾತವಾಗಿ ಹೋದದ್ದನ್ನು ವಿಷಾದದಿಂದ ಹೇಳುತ್ತದೆ. ಅದೇ ರೀತಿ ಓದಿ ಒಳ್ಳೆಯ ನೌಕರಿಯಲ್ಲಿದ್ದವರೂ ಮಗು, ಬಾಣಂತನ, ಮಕ್ಕಳನ್ನು ಪಾಲಿಸುವುದು ಹೀಗೆ ನಾನಾ ಕಾರಣಕ್ಕಾಗಿ ಹಿಂದೆಬೀಳುವುದನ್ನು ಬೇಸರದಿಂದ ಹೇಳುತ್ತಾರೆ.

ಜಾತಿಪ್ರಜ್ಞೆಯ ತಿರುಪೆ ಶೋಕಿ ಹಾಗೂ ಮಸೀದಿ ಗುಡಿ ಮತ್ತು ಕಸ ಇವೆರಡೂ ನಮ್ಮ ಸಮಾಜದೊಳಗೆ ಹಾಸುಹೊಕ್ಕಾದ ಜಾತಿವ್ಯವಸ್ಥೆಯನ್ನು ಸಾಕಷ್ಟು ತೀವ್ರವಾಗಿಯೇ ತಿವಿಯುತ್ತದೆ. ಸೊಕ್ಕಿನವಳ ಸಮಾಜವಾದ ನಮ್ಮೊಳಗೆ ಹಾಸುಹೊಕ್ಕಾಗಿರುವ ಕೆಲಸದವರ ಬಗೆಗಿನ ಕೀಳರಿಮೆಯನ್ನು ಎತ್ತಿತೋರಿಸುತ್ತಲೇ ನಾವು ಹೇಗಿರಬೇಕು ಎಂಬುದನ್ನು ಹೇಳುತ್ತದೆ. ದೇಶಭಕ್ತಿ ಎಂದರೆ ಇಷ್ಟೇ ಎಂಬ ಲೇಖನವು ನಮ್ಮೊಳಗೆ ನಿಜವಾಗಿಯೂ ಅಳವಡಿಸಿಕೊಳ್ಳಬೇಕಾದ ಪ್ರಾಮಾಣಿಕತೆ ದೂರವಾಗಿದ್ದಕ್ಕೆ ಕಾರಣ ಸಮಾಜದ ನಡವಳಿಕೆ ಎಂಬುದನ್ನು ಅರ್ಥಮಾಡಿಸುತ್ತದೆ. ನಿದಿರಾದೇವಿ ನೀ ಎಲ್ಲಿರುವಿ ಲೇಖನವಂತೂ ನನ್ನಂತಹ ನಿದ್ರಾಪ್ರಿಯರಿಗೆ ಈ ಸಮಸ್ಯೆ ನಮ್ಮದೂ ಇರಬಹುದೇ ಎನ್ನಿಸುವಷ್ಟು ಸಹಜವಾಗಿದೆ. ನಾನಂತೂ ನನಗೂ ನಿಮ್ಮ ನಿದ್ದೆಯ ಯಂತ್ರ ತಂದುಕೊಡಿ ಎಂದು ಬೇಡಿಕೆ ಇಟ್ಟುಬಿಟ್ಟಿದ್ದೇನೆ.

ಇಡೀ ಸಂಕಲನದಲ್ಲಿ ಹೆಚ್ಚಿನ ಲೇಖನಗಳಲ್ಲಿ ಕಾಣಸಿಗುವುದು ಮತ್ತು ಆಸಕ್ತಿದಾಯಕ ಎನ್ನಿಸುವುದು ಶ್ರೀ ಹರ್ಷರವರ ನಿರ್ಲಿಪ್ತತೆ ಹಾಗೂ ಕೆಲವೊಂದು ಪ್ರಸಂಗಗಳಲ್ಲಿ ತಾವೇ ಟಾರ್ಗೆಟ್ ಆಗುತ್ತಿದ್ದರೂ ದೇಹ ಮನಸ್ಸು ತಮ್ಮದಲ್ಲ ಎಂದುಕೊಂಡು ಸುಮ್ಮನೆ ಉಳಿದುಬಿಡುವುದು, ಉದಾಹರಣೆಗೆ ಶಿಕ್ಷಕರ ಬೈಗುಳಕ್ಕೆ ತಟಸ್ಥವಾಗಿ ನಿಲ್ಲುವ ಪರಿ. ಮತ್ತೆ ಕೆಲವು ಪ್ರಸಂಗಗಳಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ ಅನ್ನಿಸಿದಾಗ ಅದನ್ನು ಅದರ ಪಾಡಿಗೆ ಬಿಟ್ಟು ಎಂಜಾಯ್ ಮಾಡುವುದು. ಉದಾಹರಣೆಗೆ ಹೆಂಡತಿ ಹಾಗೂ ಅಮ್ಮನ ನಡುವೆ ಮಾತಿಗೆ ಮಾತು ಬೆಳೆದು ತಮ್ಮಿಂದ ಅದರ ನಿಯಂತ್ರಣ ಸಾಧ್ಯವಿಲ್ಲ ಅನ್ನಿಸಿದಾಗ ಅತ್ತೆ ಸೊಸೆಯರ ಜಗಳ ಕೇಳಿದ್ದೆ ಓದಿದ್ದೆ. ಎದುರಾ ಎದುರು ನೋಡಲಿಲ್ಲ ಎಂದು ಮನಸ್ಸನ್ನು ಅದರ ರಸಸ್ವಾದನೆಗೆ ಸಿದ್ಧಪಡಿಸಿಕೊಳ್ಳುವುದು, ಹಾಗೂ ಇನ್ನೂ ಕೆಲವು ಪ್ರಸಂಗಗಳಲ್ಲಿ ನೇರಾನೇರವಾಗಿ ಘಟನೆಗಳನ್ನು ಎದುರಿಸಿ ನಿಲ್ಲುವುದು. ಹೀಗೆ ಹತ್ತಾರು ಭಾವಗಳನ್ನು ಒಂದೆಡೆ ಕಟ್ಟಿಕೊಡುವ ಡಾರ್ಕ್ ಹ್ಯೂಮರ್ ನಿಜಕ್ಕೂ ಪ್ರತಿಯೊಬ್ಬರೂ ಓದಲೇಬೇಕಾದ, ಓದಿ ಆತ್ಮಾವಲೋಕನಕ್ಕೆ ಒಂದಿಷ್ಟು ಸಮಯ ತೆಗೆದಿಡಬೇಕಾದ ಪುಸ್ತಕ.

ಈ ಅಂಕಣದ ಹಿಂದಿನ ಬರಹಗಳು:
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

 

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...