ಚಂದವಿರುವುದಷ್ಟೇ ಕಲೆಯಲ್ಲ

Date: 25-02-2022

Location: ಬೆಂಗಳೂರು


‘ಹಿಂದಿನ ರೂಢಿಗತ ಸಿದ್ಧಾಂತಗಳನ್ನು ಅಣಕಿಸುವ ಒಂದು ರೀತಿಯ ಅಸಂಬದ್ಧತೆ ಮತ್ತು ವಿಕ್ಷಿಪ್ತತೆಯನ್ನು ದಾದಾಯಿಸಂನ ಕಲಾವಿದರು ತೋರಿದರು. ಇವರು “ಯುದ್ಧದ ನಂತರದ ಜಗತ್ತಿಗೆ ‘ವಿವೇಚನರಹಿತ ಜಗತ್ತು’ ಎಂದು ಸಾರಿ ಕಲಾ ವಿರೋಧಿಗಳಾದರು’ ಎನ್ನುತ್ತಾರೆ ಲೇಖಕ ಲಕ್ಷ್ಮಣ ಬಾದಾಮಿ. ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ಮಾರ್ಸೆಲ್ ಡುಚಾಂಪ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾಕೃತಿ: ‘L. H. O. O. Q.’
ಕಲಾವಿದ: ಮಾರ್ಸೆಲ್ ಡುಚಾಂಪ್
ದೇಶ: ಫ್ರಾನ್ಸ್
ಕಾಲ: 1887-1968
ಕಲಾ ಪಂಥ: ದಾದಾಯಿಸಂ

ಈ ಚಿತ್ರವನ್ನು ನೋಡಿದ ತಕ್ಷಣ ಸಾಮಾನ್ಯರು, ಇದೇನಿದು ವಿಕೃತಿ ಎಂಥ ಕೃತ್ಯ ಮಾಡಿದ್ದಾರಲ್ಲ..!!? ಅಂಥ ಪೇಚಾಡಬಹುದು. ಸೌಂದರ್ಯವೆಂದರೆ ಮೊನಾಲಿಸಾ, ಮೊನಾಲಿಸಾಳೆಂದರೆ ಸೌಂದರ್ಯ ಅನ್ನುವಷ್ಟರ ಮಟ್ಟಿಗೆ ಸೌಂದರ್ಯಕ್ಕೆ ಆದಿ ಮಾದರಿಯಾಗಿರುವ ಕಲಾಕೃತಿಗೆ ಗಡ್ಡ, ಮೀಸೆ ಬರೆದು ವಿಕಾರಗೊಳಿಸುವ ಮನಸ್ಸಾದರೂ ಹೇಗೆ ಬಂತು..!!? ಎಂದು ತಲ್ಲಣಗೊಳ್ಳಬಹುದು. ಈ ರೀತಿ ಮಾಡಿದ್ದು ಯಾರೋ ಅಪಾಪೋಲಿಗಳಲ್ಲ; ಒಬ್ಬ ಪ್ರಬುದ್ಧ, ಪ್ರಸಿದ್ಧ ಕಲಾವಿದ ಎಂದರೆ ದಿಗ್ಭ್ರಮೆಯಾಗಬಹುದು!! ಕಲಾವಿದ ಮಾರ್ಸೆಲ್ ಡುಚಾಂಪ್ ಹೀಗೆ ಮಾಡಲು ಕಾರಣವೆಂದರೆ- ಸೌಂದರ್ಯವೆಂದರೆ, ಕಲೆಯೆಂದರೆ ಇದು ಮಾತ್ರ, ಕಲೆಯೆಂದರೆ ಹೀಗೆಯೇ ಇರಬೇಕು ಎಂಬ ಸಿದ್ಧ ಮಾದರಿಗಳನ್ನು ಒಡೆಯುವುದಾಗಿತ್ತು. ಇದನ್ನು ಸರಿಯಾದ ಅರ್ಥದಲ್ಲಿ ಹೇಳಬೇಕೆಂದರೆ ನಮ್ಮ ಗ್ರಾಮೀಣರು ‘ಕುಲಗೆಡಿಸುವುದು’ ಅನ್ನುತ್ತಾರಲ್ಲ.. ಅದು. ಅಕ್ಷರಶಃ ಮಾರ್ಸೆಲ್ ಡುಚಾಂಪ (Marcel Duchamp) ಮಾಡಿದ್ದು ಅದನ್ನೇ. ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದ ಕ್ರಮವನ್ನು ಇನ್ನಿಲ್ಲದಂತೆ ಉಡಾಯಿಸುವುದು ಅವನ ಉದ್ಧೇಶವಾಗಿತ್ತು. ಅದನ್ನಿಲ್ಲಿ ಡುಚಾಂಪ ಸರಿಯಾಗಿಯೇ ಮಾಡಿದ್ದಾನೆ ಎನಿಸುತ್ತದೆ. ಇನ್ನೂ ವಿಚಿತ್ರವೆಂದರೆ ಅವನು ಈ ಕೃತಿಗೆ ಕೊಟ್ಟಿರುವ ಹೆಸರು- ‘L. H. O. O. Q.’ ಎಂಬುದು. ಇದು ಕೂಡಾ ಚೋದ್ಯವನ್ನೆಬ್ಬಿಸಲಿಕ್ಕಾಗಿಯೇ ಮಾಡಿದ್ದು. ಇದು ಫ್ರೆಂಚ್‍ನಲ್ಲಿ ‘Elle a chaud au cul’ ಎಂಬುದಾಗಿದೆ. ಅಂದರೆ ‘She has a hot ass’ (ಅವಳೊಂದು ಬಿಸಿ ಕತ್ತೆ) ಎಂಬ ಆಘಾತಕಾರಿ ಶೀರ್ಷಿಕೆಯನ್ನು ನೀಡಿದ್ದಾನೆ!!

ಕ್ರಿ.ಶ. 1503-1506 ನಡುವೆ ರಚನೆಯಾಗಿದ್ದ ಡ ವಿಂಚಿಯ ‘ಮೊನಾಲಿಸಾ’ ಕೃತಿ ಜಗತ್ಪ್ರಸಿದ್ಧವಾಗಿದ್ದು ಯಾರು ಅರಿಯದ ಮಾತೇನಲ್ಲ. ಈ ಕೃತಿಯು ಪೋಸ್ಟ್ ಕಾರ್ಡಿನಲ್ಲಿ ಮುದ್ರಣವಾಗಿ ಸುಲಭವಾಗಿ ದೊರೆಯುತ್ತಿತ್ತು. ಅಂತದೊಂದು ಕಾರ್ಡ್‍ನ್ನೆ ಡುಚಾಂಪ 1919ರಲ್ಲಿ ಈ ರೀತಿ ಮಾಡಿ ಹುಯಿಲೆಬ್ಬಿಸಿದ್ದನು. ಇದಕ್ಕೂ ಮೊದಲು ಕಲಾವಿದ ಯುಜೀನ್ ಬ್ಯಾಟೈಲ್‍ನು ಸಹ ಮೊನಾಲಿಸಾ ಪೈಪ್‍ನಲ್ಲಿ ಧೂಮಪಾನ ಮಾಡುತ್ತಿರುವಂತೆ ರಚಿಸಿದ್ದನು. ಆ ನಂತರ 1973ರಲ್ಲಿ ಸಾಲ್ವಡಾರ ಡಾಲಿ ಮೊನಾಲಿಸಾಳ ರೂಪದಲ್ಲಿ ತನ್ನ ಸ್ವ-ಭಾವಚಿತ್ರವನ್ನು ರಚಿಸಿದ್ದನು. ಇದು ಮೇರು ಕೃತಿಗಳ ವಿಡಂಬನೆ ಅಥವಾ ಅಪಚಾರದ ರೀತಿ ಅನ್ನಿಸಬಹುದು; ಆದರೆ ಇದು ಆಳದಲ್ಲಿ ಕೃತಿಗೆ ಕೊಂಚ ಚ್ಯುತಿ ತಂದು ಪರ್ಯಾಯ ವಿರೋಧಾಭಾಸವನ್ನು ಸೃಷ್ಟಿಸಿ ಅಗಾಧ ಪರಿಣಾಮವನ್ನುಂಟು ಮಾಡುವ ಧೋರಣೆಯಾಗಿದೆ.

ಇಂಥ ಪರಿಣಾಮಕಾರಿ ಸೃಷ್ಟಿಗಳನ್ನು ಮಾಡಿ ಡುಚಾಂಪ್ ದೃಶ್ಯಭಾಷೆಯಲ್ಲಿ ಕ್ರಾಂತಿಯನ್ನುಂಟು ಮಾಡಿದನು. ಮೂತ್ರ ಮಾಡುವ ಪಿಂಗಾಣಿ ಪಾತ್ರೆಯನ್ನು ‘ಕಾರಂಜಿ’(Fountain) ಎಂದು ಹೆಸರಿಸಿ ಪ್ರದರ್ಶನಕ್ಕೆ ಕಳುಹಿಸಿ ಕೊಟ್ಟನು! ಅದನ್ನೇ ಪ್ರದರ್ಶನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಅದು Installation ಕಲೆಗೆ ನಾಂದಿಯಾಯಿತು. ಯುದ್ಧದ ಉನ್ಮಾದಲ್ಲಿದ್ದವರಿಗೆ ರೆಡಿಮೇಡ್ ‘ಬಾಗಿಲು’ ಒಂದನ್ನು ನಿಲ್ಲಿಸಿ ಅದಕ್ಕೆ ‘ತಾಜಾ ವಿಧವೆ’(Fresh Widow) ಎಂದು ಕರೆದ! ಉದ್ದ ಕೈಕೋಲಿನ ಸಲಿಕೆಯನ್ನು ‘In advance of the Broken arm ಎಂದು ಕರೆದ. Bicycle Wheel, Bottel rack, Hat rack ಇವೆಲ್ಲವು ಇನ್ಸ್ಟಲೇಶನ್‍ಗಳಾಗಿವೆ. ಕಲಾಕೃತಿಗಳನ್ನು ಕೈಯಿಂದ ರಚಿಸದೆಯೇ ಸಿದ್ಧ ವಸ್ತುಗಳಿಗೆ ವಿಭಿನ್ನ ಶೀರ್ಷಿಕೆ ನೀಡಿ ಸಾಮಾನ್ಯ ವಸ್ತುಗಳನ್ನು ಕಲಾಕೃತಿಯ ದರ್ಜೆಗೇರಿಸುವುದು ಡುಚಾಂಪ್‍ನ ಉದ್ಧೇಶವಾಗಿತ್ತು. ಈ ಮೂಲಕ ಅವನು ‘ಪ್ರತಿಯೊಂದು ವಸ್ತುವಿಗೂ ಕಲಾಕೃತಿಯಾಗಲು ಸ್ವಯಂಶಕ್ತಿ ಇರುತ್ತದೆ ಎಂದು ಪ್ರತಿಪಾದಿಸಿ, ಅಂತಹವುಗಳಿಗೆ ‘ರೆಡಿಮೇಡ್’ ಎಂದು ಕರೆದು, ದಾದಾಇಸಂನ ಕಲಾವಿರೋಧಿ, ವಿವೇಚನ-ವಿರೋಧಿ ಸಮಾಜ-ವಿರೋಧಿ ನಿಲುವನ್ನು ಪ್ರಕಟಿಸಿದ. ಅದರಿಂದ ಪ್ರತಿಯೊಬ್ಬನಿಗೂ ಕಲಾವಿದನಾಗಲು ಪ್ರತಿಭೆ ಇರುತ್ತದೆ ಎಂದು ತೋರಲು ಪ್ರಯತ್ನಿಸಿದನು.’ (ಸಮಾಹಿತ, ಸಂ 13) ಡುಚಾಂಪ್‍ನ ಇನ್ನೊಂದು ಗಮನಾರ್ಹ ಕೃತಿ ‘‘Please touch’’ ಆಗಿದೆ. 1947ರಲ್ಲಿ ನಡೆದ ಅಂತರರಾಷ್ಟ್ರೀಯ ಸರ್ರಿಯಲಿಸ್ಟ್ ಕಲಾವಿದರ ಪ್ರದರ್ಶನದ ಕ್ಯಾಟ್‍ಲಾಗ್‍ಗೆ ಮಾಡಿದ ಮುಖಪುಟ ಇದು. ಇದರ ವಿಶೇಷತೆ ಎಂದರೆ ಪುಸ್ತಕದ ರಟ್ಟಿನ ಹೊದಿಕೆಗೆ ವೆಲ್ವೆಟ್‍ನ್ನು ಅಂಟಿಸಿ ಅದರ ಮೇಲೆ ಫೋಮ್ ರಬ್ಬರ್‍ನಿಂದ ಮಹಿಳೆಯ ಸ್ತನವನ್ನು ರಚಿಸಲಾಗದೆ. ಇದಕ್ಕೆ ‘ದಯವಿಟ್ಟು ಸ್ಪರ್ಶಿಸಿ’ ಎಂದು ಹಿಂಬದಿಯ ಕವರ್ ಮೇಲೆ ಬರೆಯಲಾಗಿದೆ. ಇದು ಕಾಮ ಪ್ರಚೋದನೆಯಂತೆ ಕಂಡರೂ ಇಲ್ಲಿ ಸ್ಪರ್ಶಿಸಬೇಕಾದದ್ದು ಸ್ತನವನ್ನಲ್ಲ, ಬದಲಿಗೆ ಕಲಾಕೃತಿಯನ್ನು. ನೋಡುಗನು ತನ್ನ ಅಂತರಾಳಕ್ಕೆ ಸ್ಪರ್ಶಿಸಿಕೊಳ್ಳಲಿ ಎಂಬುದು ಇಲ್ಲಿಯ ಉದ್ದೇಶ.

Nude Descending a Staircase, Portrait of chess players, Bride, Chess Game, Sad young man in train ಇವು ಅವನ ವರ್ಣಚಿತ್ರಗಳಾಗಿವೆ. ಪ್ರಾಯಶಃ ಅತಿ ಹೆಚ್ಚು ಕಲಾಪಂಥಗಳಲ್ಲಿ ಕೆಲಸ ಮಾಡಿದ ಕಲಾವಿದನೆಂದರೆ ಡುಚಾಂಪ್‍ನೇ ಅನಿಸುತ್ತದೆ. Expressionism, Post-Impressionism, Fauvism, Surrealism, Cubism, Futurism, Kinetic Art, Conceptual Art ಈ ಎಲ್ಲ ಶೈಲಿಗಳಲ್ಲಿಯೂ ಅವನ ಕೃತಿಗಳನ್ನು ರಚಿಸಿದ್ದಾನಾದರೂ ಅವನನ್ನು ಮುಖ್ಯವಾಗಿ ಗುರುತಿಸುವುದು Dadaism ಕಲಾವಿದನೆಂದು.

Dadaism : ಈ ಕಲಾಪಂಥವು ಯುದ್ಧವಿರೋಧಿ, ರಾಷ್ಟ್ರಿಯವಾದದ ವಿರೋಧಿ, ಬಂಡವಾಳಶಾಹಿಯ ವಿರೋಧಿ ಮತ್ತು ಬಹಳ ಮುಖ್ಯವಾಗಿ ‘ಕಲಾವಿರೋಧಿ’ಯೂ ಆಗಿತ್ತು ಎಂಬುದು ಗಮನಾರ್ಹವಾಗಿದೆ. ಸ್ವಿಟ್ಜಲ್ರ್ಯಾಂಡಿನ ಜೂರಿಚ್‍ನಲ್ಲಿ ಕವಿ, ಕಲಾವಿದ ಹ್ಯೂಗೋ ಬಾಲ್ ಮತ್ತು ಅವನ ಪತ್ನಿ, ಕವಿ ನೃತ್ಯಗಾರ್ತಿಯೂ ಆಗಿದ್ದ ಎಮ್ಮಿ ಹೆನ್ನಿಂಗ್ಸ್ ಸೇರಿ ‘ಕ್ಯಾಬರೆ ವೋಲ್ಟೇರ್’ನ್ನು 1916ರಲ್ಲಿ ಸ್ಥಾಪಿಸಿದರು. ಅದಾಗಲೇ ಮೊದಲನೇ ಜಾಗತಿಕ ಯುದ್ಧ ನಡೆದಿತ್ತು. ಯುದ್ಧ ವಿರೋಧಿ ಮನಸ್ಥಿತಿಯ ಕಲಾವಿದರು, ಲೇಖಕರು ಇಲ್ಲಿ ಸೇರಿ ಮನರಂಜನೆ ಪಡೆಯುವ ಉದ್ಧೇಶ ಹೊಂದಿತ್ತು. ಇದು ನೃತ್ಯದ ಕ್ಲಬ್ ಆಗಿದ್ದರೂ ಇಲ್ಲಿ ಕಾವ್ಯ ವಾಚನ, ಸಂಗೀತ ಮೇಳ, ಚಿತ್ರ ಪ್ರದರ್ಶನಗಳು ನಡೆಯುತ್ತಿದ್ದವು. ಕ್ರಮೇಣ ಕ್ಯಾಬರೆ ವೋಲ್ಟೇರ್ ಕ್ಲಬ್ ದಾದಾಇಸಂನ ಕೇಂದ್ರವಾಗಿ ರೂಪುಗೊಂಡಿತು. ‘ದಾದಾ’ ಅಂದರೆ ಫ್ರೆಂಚ್ ಭಾಷೆಯಲ್ಲಿ ಕುದರೆ ಮುಖವುಳ್ಳ ಕೋಲು ಎಂದಿದೆ.

ಹಿಂದಿನ ರೂಢಿಗತ ಸಿದ್ಧಾಂತಗಳನ್ನು ಅಣಕಿಸುವ ಒಂದು ರೀತಿಯ ಅಸಂಬದ್ಧತೆ ಮತ್ತು ವಿಕ್ಷಿಪ್ತತೆಯನ್ನು ದಾದಾಯಿಸಂನ ಕಲಾವಿದರು ತೋರಿದರು. ಇವರು “ಯುದ್ಧದ ನಂತರದ ಜಗತ್ತಿಗೆ ‘ವಿವೇಚನರಹಿತ ಜಗತ್ತು’ ಎಂದು ಸಾರಿ ಕಲಾ ವಿರೋಧಿಗಳಾದರು. ಕಲೆಗೆ ಕಲೆಯೇ ವಿರೋಧಿ ಎಂದು ಸಾರಿ ಕಲಾ ವಿರೋಧಿಗಳಾದರು. ಕಲೆಗೆ ಯಾವ ಅರ್ಥವೂ ಇರಬಾರದೆಂದು ನಂಬಿ ಕೃತಿಗಳನ್ನು ರಚಿಸಿದರು. ಕೃತಿಗಳು ವಿಚಿತ್ರ, ವಿಲಕ್ಷಣ, ವಿಕಲ್ಪ, ವಿಕಾರಗೊಂಡವು.”(ಸಮಾಹಿತ) ಹಿಂದಿನ ತರ್ಕಗಳನ್ನು ಧಿಕ್ಕರಿಸುವುದರ ಜೊತೆಗೆಯೇ ಬಣ್ಣ, ಕುಂಚಗಳನ್ನು ಸಹ ಬದಿಗಿರಿಸಿ ಕೊಲಾಜ್, ರೆಡಿಮೇಡ್, ಫೋಟೊಮಾಂಟೇಜ್ ಮತ್ತು ಇನ್‍ಸ್ಟಲೇಶನ್‍ಗಳನ್ನು ತಮ್ಮ ಪರ್ಯಾಯ ಮಾಧ್ಯಮಗಳನ್ನು ಮಾಡಿಕೊಂಡು ದೃಶ್ಯಕಲೆಯ ಪರಿಭಾಷೆಯನ್ನೇ ಬದಲಿಸಿದರು. ನ್ಯೂಯಾರ್ಕಿನ ಮಾನ್ ರೇ, ಫ್ರಾನ್ಸಿಸ್ ಪಿಕಾಬಿಯ; ಜರ್ಮನಿಯ ಮ್ಯಾಕ್ಸ್ ಅರ್ನೆಸ್ಟ್, ಜಾರ್ಜ್ ಗ್ರಾಸ್, ಹನ್ನಾ ಹಾಚ್, ರೌಲ್ ಹೌಸ್‍ಮನ್ ಈ ಪಂಥದ ಕಲಾವಿದರಾಗಿದ್ದಾರೆ.

ಮಾರ್ಸೆಲ್ ಡುಚಾಂಪ್ ಅವರ ಕೆಲವು ಕಲಾಕೃತಿಗಳು:

ಈ ಅಂಕಣದ ಹಿಂದಿನ ಬರೆಹಗಳು:
ಕನಸುಗಳು ಮೈದೋರಿದಾಗ
ಕತ್ತಲೆಯ ಅಳತೆಗಾರ
ದುಃಖದ ಉತ್ಪಾತ - ದಿ ಸ್ಕ್ರೀಮ್
ಹಸಿವು ತಣಿಸುವ ತಾಯಿ
ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು
ಗೌಳಿಗಿತ್ತಿಯ ಮೌನ ಜಾಗರಣೆ!
ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ


MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...