ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ

Date: 20-08-2022

Location: ಬೆಂಗಳೂರು


“ಸ್ವರಗಳ ಉಚ್ಚರಣೆಯಲ್ಲಿನ ಈ ಕಾಲ ವ್ಯತ್ಯಾಸವು ಎಲ್ಲಿ ಎಶ್ಟುಮಟ್ಟಿಗೆ ಹರಡಿಕೊಂಡಿದೆ ಎಂಬುದನ್ನು ವ್ಯಾಪಕವಾಗಿ ಅದ್ಯಯನ ಮಾಡಬೇಕಿದೆ. ಕನ್ನಡ ನಿಗಂಟನ್ನು ಅವಲೋಕಿಸಿದಾಗ ಸಹಜವಾಗಿ ಈ ಅಯ್ದೂ ಜೋಡಿಗಳಿಗೆ ಪದಗಳು ಸಿಗುತ್ತವೆ. ಆದರೆ, ಯಾವ ಯಾವ ಸ್ವರ ದ್ವನಿಗಳಿಗೆ ಎಶ್ಟು ಪ್ರಮಾಣದಲ್ಲಿ ಪದಜೋಡಿಗಳು ಸಿಗುತ್ತವೆ ಎಂಬುದಕ್ಕೆ ಒಂದು ಸಾಂಕಿಕ ಅದ್ಯಯನ ಇಲ್ಲ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಹೃಸ್ವ-ದೀರ್ಘ ಅಕ್ಷರಗಳ ಗೊಂದಲಗಳ ಬಗ್ಗೆ ಬರೆದಿದ್ದಾರೆ.

ಉಸಿರಾಟದಲ್ಲಿ ಒಳತೆಗೆದುಕೊಳ್ಳುವ ಗಾಳಿಯನ್ನು ಹೊರಬಿಡುವಾಗ ಹೊರಬರುವ ಗಾಳಿಗೆ ಯಾವುದೆ ಅಡೆತಡೆ ಇಲ್ಲದೆ ಉಚ್ಚಾರವಾಗುವ ದ್ವನಿಯನ್ನು ಸ್ವರ ಎಂದು ಕರೆಯುತ್ತೇವೆ. ಸ್ವರದ ಉಚ್ಚರಣೆಯಲ್ಲಿ ಬಾಯೊಳಗಿನ ವಿವಿದ ಅಂಗಗಳು ತಮ್ಮದೆ ಬಗೆಯ ಚಟುವಟಿಕೆಯಿಂದ, ವಿಬಿನ್ನ ಸ್ತಾನ, ರೀತಿಗಳಿಂದ ವಿಬಿನ್ನ ಸ್ವರಗಳು ಹುಟ್ಟುವುದಕ್ಕೆ ಕಾರಣವಾಗುತ್ತವೆ. ಇದರೊಟ್ಟಿಗೆ ಸ್ವರದ್ವನಿಯನ್ನು ಉಚ್ಚರಿಸುವುದಕ್ಕೆ ತೆಗೆದುಕೊಳ್ಳುವ ಕಾಲವೂ ಕೂಡ ಬಿನ್ನ ದ್ವನಿಗಳ

ಉಚ್ಚರಣೆಯಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಅಂದರೆ ಸ್ವರ ದ್ವನಿಯೊಂದರ ಉಚ್ಚರಣೆಗೆ ಎಶ್ಟು ಕಾಲವನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದು ಆ ದ್ವನಿಯ ದ್ವನಿಮಾತ್ಮಕ ಮವುಲ್ಯವನ್ನು ನಿರ‍್ದರಿಸುತ್ತಿರುತ್ತದೆ. ಸ್ವರ ದ್ವನಿಗಳಲ್ಲಿ ಕಡಿಮೆ ಸಮಯವನ್ನು ತೆಗೆದುಕೊಂಡು ಉಚ್ಚಾರವಾಗುವ ದ್ವನಿಗಳಿಗೆ ಹ್ರಸ್ವ ಸ್ವರ ಇಲ್ಲವೆ ಗಿಡ್ಡ ಸ್ವರ ಎಂದು ಕರೆಯಲಾಗುವುದು. ಅಂತೆಯೆ ಹೆಚ್ಚು ಸಮಯವನ್ನು ತೆಗೆದುಕೊಂಡು ಉಚ್ಚಾರವಾಗುವ ದ್ವನಿಗಳಿಗೆ ದೀರ‍್ಗ ಸ್ವರ ಇಲ್ಲವೆ

ಉದ್ದ ಸ್ವರ ಎಂದು ಕರೆಯಲಾಗುವುದು. ಸಾಮಾನ್ಯವಾಗಿ ಗಿಡ್ಡ ಸ್ವರದ ಉಚ್ಚರಣೆಗೆ ತೆಗೆದುಕೊಳ್ಳುವ ಕಾಲದ ಎರಡುಪಟ್ಟು ಕಾಲವನ್ನು ಉದ್ದ ಸ್ವರ ಉಚ್ಚರಣೆಗೆ ತೆಗೆದುಕೊಳ್ಳಲಾಗುತ್ತದೆ. ಜಗತ್ತಿನ ಯಾವುದೆ ಬಾಶೆಯಲ್ಲಿ ಹೀಗೆ ಸ್ವರದ ಉಚ್ಚರಣೆಯಲ್ಲಿ ಹೆಚ್ಚುಕಡಿಮೆ ಕಾಲ ಬಳಕೆಯಾಗುತ್ತದೆ. ಆದರೆ, ಈ ಸ್ವರದ ಕಾಲವು ದ್ವನಿಮಾ ಮವುಲ್ಯವನ್ನು ಪಡೆದಿದೆಯೆ ಎಂಬುದರ ಮೇಲೆ ಅವು ಬಿನ್ನ ಅಕ್ಶರಗಳು ಆಗಿವೆಯೆ ಇಲ್ಲವೆ ಎಂಬುದು ನಿರ‍್ದಾರವಾಗುತ್ತದೆ. ಇಂಗ್ಲೀಶಿನಲ್ಲಿ

ಸ್ವರಗಳ ಕಾಲಕ್ಕೆ ಬೆಲೆ ಇಲ್ಲ. ವಿವಿದ ಪದಗಳ ಉಚ್ಚರಣೆಯ ಸಂದರ‍್ಬದಲ್ಲಿ ಸ್ವರದ್ವನಿಯ ಉಚ್ಚರಣೆಯ ಕಾಲ ಹೆಚ್ಚೂಕಡಿಮೆ ಆಗುವುದು ನಿಜ. ಆದರೆ, ಅದಕ್ಕೆ ಪದರಚನೆಯಲ್ಲಿ ಬಳಕೆಯಾಗಿ ಅರ‍್ತವ್ಯತ್ಯಾಸ ಮಾಡುವ ಕಸುವು ಇಲ್ಲ. ಹಾಗಾಗಿ ಇಂಗ್ಲೀಶಿನಲ್ಲಿ ಈ ಕಾಲವ್ಯತ್ಯಯಕ್ಕೆ ಬೆಲೆ ಇಲ್ಲ. ಕೆಲವು ನಿರ್‍ದಿಶ್ಟ ಸಂದರ‍್ಬದಲ್ಲಿ ಈ ಕಾಲವ್ಯತ್ಯಯವನ್ನು ಉಪದ್ವನಿ ಎಂದು ಗುರುತಿಸಬಹುದು. ಆದರೆ ದ್ವನಿಮಾ ಎಂದು ಗುರುತಿಸಲು ಸಾದ್ಯವಿಲ್ಲ.

ಬಾರತೀಯ ಸಂದರ‍್ಬಕ್ಕೆ ಬಂದಾಗ ಸಂಸ್ಕ್ರುತದಲ್ಲಿ ‘ಅ’, ‘ಇ’ ಮತ್ತು ‘ಉ’ ದ್ವನಿಗಳಿಗೆ ಗಿಡ್ಡ ಮತ್ತು ಉದ್ದ ಎಂಬ ಜೋಡಿಗಳನ್ನು ನೋಡಬಹುದು. ಅವು ಪದರಚನೆಯಲ್ಲಿ ಸಮಸ್ತಾನದಲ್ಲಿ ಬಂದು ಆ ಪದಗಳ ಅರ‍್ತವ್ಯತ್ಯಾಸಕ್ಕೆ ಕಾರಣವಾಗುತ್ತವೆ. ಆದರೆ, ‘ಎ’ ಮತ್ತು ‘ಒ’ ದ್ವನಿಗಳಿಗೆ ಹೀಗೆ ಗಿಡ್ಡ-ಉದ್ದ ವ್ಯತ್ಯಾಸ ಇಲ್ಲ. ಇಂದಿಗೂ ಬೆಂಗಾಲಿಯಂತ ಹಲವು ಬಾರತೀಯ ಬಾಶೆಗಳಲ್ಲಿ ಇದನ್ನು ಕಾಣಬಹುದು.

ಕನ್ನಡಕ್ಕೆ ಬಂದಾಗ ವರ‍್ಣಮಾಲೆಯಲ್ಲಿ ಇರುವ ‘ಅ’, ‘ಇ’, ‘ಉ’, ‘ಎ’; ಮತ್ತು ‘ಒ’ ಈ ಅಯ್ದೂ ಸ್ವರಗಳಿಗೆ ಗಿಡ್ಡ ಸ್ವರ-ಉದ್ದ ಸ್ವರ ವ್ಯತ್ಯಾಸ ಇದೆ. ‘ಅ-ಆ, ಇ-ಈ, ಉ-ಊ, ಎ-ಏ ಮತ್ತು ಒ-ಓ ದ್ವನಿಗಳಿಗೆ ಬಿನ್ನ ಲಿಪಿಗಳಿವೆ. ಕನ್ನಡಕ್ಕೆ ಲಿಪಿ ಸಂಯೋಜನೆ ಆದ ಕಾಲಕ್ಕೆ ಅ-ಆ, ಇ-ಈ ಮತ್ತು ಉ-ಊ ಇವುಗಳಿಗೆ ಬಿನ್ನ ಲಿಪಿಗಳು ಇದ್ದವು. ಆದರೆ, ಉಳಿದ ‘ಎ’-‘ಏ’ ಮತ್ತು ‘ಒ’-’ಓ’ ಇವುಗಳಿಗೆ ಬಿನ್ನ ಲಿಪಿಗಳು ಇರಲಿಲ್ಲ. ಪಾಲಿ ಬಾಶೆಗೆ ಬೆಳೆಸಿದ ಇಂದು ಬ್ರಾಹ್ಮಿ ಲಿಪಿ ಎಂದು ಕರೆಯುವ ಅಸೋಕನ ಕಲ್ಬರಹಗಳ ಲಿಪಿಯಲ್ಲಿ ಹೀಗೆ ಎರಡು ಬಿನ್ನ ಲಿಪಿಗಳು ಇರಲಿಲ್ಲ. ಸಂಸ್ಕ್ರುತದಲ್ಲಿ ಇಲ್ಲದ ಆದರೆ ಕನ್ನಡದಲ್ಲಿ ಉಚ್ಚಾರವಾಗುವ ಇನ್ನು ಕೆಲವು ದ್ವನಿಗಳಿಗೆ ಲಿಪಿಯನ್ನು ಆರಂಬದ ದಿನಗಳಲ್ಲಿಯೆ ಮಾಡಿಕೊಂಡ

ಕನ್ನಡ ವಿದ್ವತ್ತು ಈ ‘ಎ’-’ಏ’ ಮತ್ತು ‘ಒ’-’ಓ’ ದ್ವನಿಗಳಿಗೆ ಬಿನ್ನ ಲಿಪಿಗಳನ್ನು ತುಸು ತಡವಾಗಿ ಬೆಳೆಸಿಕೊಂಡಿದೆ. ಹೆಚ್ಚೂಕಡಿಮೆ ಎಂಟೊಂಬತ್ತನೆ ಶತಮಾನದವರೆಗೆ ಬಿನ್ನ ಲಿಪಿಗಳ ಬಳಕೆ ಸಹಜವಾಗಿ ಇರಲಿಲ್ಲ ಎಂಬುದು ವಿಚಾರ. ಆನಂತರ ಲಿಪಿಗಳ ಬಳಕೆ ಬಿನ್ನವಾಗಿ ಬೆಳೆದಿದೆ.

ಸ್ವರಗಳ ಉಚ್ಚರಣೆಯಲ್ಲಿನ ಈ ಕಾಲ ವ್ಯತ್ಯಾಸವು ಎಲ್ಲಿ ಎಶ್ಟುಮಟ್ಟಿಗೆ ಹರಡಿಕೊಂಡಿದೆ ಎಂಬುದನ್ನು ವ್ಯಾಪಕವಾಗಿ ಅದ್ಯಯನ ಮಾಡಬೇಕಿದೆ. ಕನ್ನಡ ನಿಗಂಟನ್ನು ಅವಲೋಕಿಸಿದಾಗ ಸಹಜವಾಗಿ ಈ ಅಯ್ದೂ ಜೋಡಿಗಳಿಗೆ ಪದಗಳು ಸಿಗುತ್ತವೆ. ಅಂದರೆ ಬಾಶಾವಿಗ್ನಾನದಲ್ಲಿ ನೋಡುವ ಕನಿಶ್ಟಯುಗ್ಮಗಳಿಗೆ ಈ ಜೋಡಿಗಳು ಸಿಗುತ್ತವೆ. ಆದರೆ, ಯಾವ ಯಾವ ಸ್ವರ ದ್ವನಿಗಳಿಗೆ ಎಶ್ಟು ಪ್ರಮಾಣದಲ್ಲಿ ಪದಜೋಡಿಗಳು ಸಿಗುತ್ತವೆ ಎಂಬುದಕ್ಕೆ ಒಂದು ಸಾಂಕಿಕ ಅದ್ಯಯನ ಇಲ್ಲ. ಅಂದಾಜು ಅವಲೋಕನೆಗೆ ದಕ್ಕುವಂತೆ ಬಹುಶಾ ‘’ಎ’-’ಏ’ ಮತ್ತು ‘ಒ’-’ಓ’ ಜೊಡಿಗಳಿಗೆ ಪದಗಳ ಸಂಕೆ ಕಡಿಮೆ ಸಿಗುತ್ತವೆ ಎಂದೆನಿಸುತ್ತದೆ. ಉಳಿದವುಗಳಲ್ಲಿ ‘ಅ’-’ಆ’ ಜೋಡಿಗಳಿಗೆ ದೊಡ್ಡ ಸಂಕೆಯ ಪದಜೋಡಿಗಳು ಸಿಗುತ್ತವೆ. ಇಂತಾ ಅದ್ಯಯನಗಳು ಕನ್ನಡ ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದಕ್ಕೆ ಹೆಚ್ಚು ಸಹಾಯ ಮಾಡುತ್ತವೆ.

ಈ ಬಗೆಯ ಗಿಡ್ಡ-ಉದ್ದ ಸ್ವರಗಳ ಹಂಚಿಕೆ ಇಂದಿನ ವಿವಿದ ಕನ್ನಡಗಳಲ್ಲಿ ಹೇಗೆ ಹಂಚಿಕೊಂಡಿದೆ ಎಂಬುದೂ ಅತ್ಯಂತ ಮುಕ್ಯವಾದ ಕುತೂಹಲಕರವಾದ ವಿಚಾರ. ಕುತೂಹಲವೆಂದರೆ ಕೆಲವು ಕನ್ನಡಗಳಲ್ಲಿ ಈ ವ್ಯತ್ಯಾಸ ಹೆಚ್ಚು ಸ್ಪಶ್ಟವಾಗಿ ಕಾಣಿಸುವುದಿಲ್ಲ. ಕಲಬುರಗಿ, ವಿಜಾಪುರ, ಬಾಗಲಕೋಟೆ, ಬೀದರ ಮೊದಲಾದ ನಗರಗಳಲ್ಲಿ ಸುಮ್ಮನೆ ಅಲೆದಾಡಿದಾಗ ಅಂಗಡಿ ಮೇಲಿನ ಬರಹಗಳಲ್ಲಿ ಗಿಡ್ಡ ಸ್ವರ - ಉದ್ದ ಸ್ವರ ವ್ಯತ್ಯಯ ಕಾಣಿಸುತ್ತದೆ. ಕೊಡು-ಕೋಡು, ನಿಡು- ನೀಡು, ನೊಡು-ನೋಡು ಇಂತಾ ಬಳಕೆಗಳು ಅತ್ಯಂತ ಸಹಜವಾಗಿ ಬರವಣಿಗೆಯಲ್ಲಿ ಕಾಣಿಸುತ್ತವೆ. ಇದು ಶಾಲಾಮಕ್ಕಳ ಮಾತ್ರವಲ್ಲದೆ ವಿಶ್ವದ್ಯಾಲಯಗಳ ಮಟ್ಟದಲ್ಲಿಯೂ ತುಂಬಾ ಡಾಳಾಗಿ ಕಾಣಿಸುತ್ತದೆ. ಈ ವ್ಯತ್ಯಯ ಕನ್ನಡ ಬಳಕೆಯಲ್ಲಿರುವ ಇನ್ನಿತರ ಪ್ರದೇಶಗಳಲ್ಲಿಯೂ ಕಂಡುಬರುತ್ತದೆಯಾದರೂ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಕಂಡುಬರುತ್ತದೆ. ಈ ವ್ಯತ್ಯಯ ಸಹಜ ಅವಲೋಕನೆಯಲ್ಲಿ ಎಲ್ಲ ಅಯ್ದೂ ಸ್ವರಗಳ ಸಂದರ‍್ಬದಲ್ಲಿ ಆಗುತ್ತಿರುವಂತೆ ಕಾಣಿಸುತ್ತದೆ. ಆದರೆ, ಯಾವ ಸ್ವರದ ಸಂದರ‍್ಬದಲ್ಲಿ ಎಶ್ಟು ಪ್ರಮಾಣದಲ್ಲಿ ಆಗುತ್ತದೆ ಎಂಬುದನ್ನು ಅವಲೋಕಿಸಬೇಕು.

ಅಲ್ಲದೆ, ಕನ್ನಡದ ಇನ್ನಾವಾವ ಒಳನುಡಿಗಳಲ್ಲಿ ಹೀಗೆ ವ್ಯತ್ಯಯವನ್ನು ಕಾಣಬಹುದು ಎಂಬುದನ್ನೂ ಅವಲೋಕಿಸಬೇಕು. ಮುಕ್ಯವಾದ ವಿಚಾರವೆಂದರೆ ಈ ವ್ಯತ್ಯಯ ಆಗಲು ಕಾರಣವೇನಿರಬೇಕು ಎಂದು ತಿಳಿದುಕೊಳ್ಳಬೇಕು. ಒಂದು ಅತ್ಯಂತ ಸಹಜವಾದ ಕಾರಣವೆಂದರೆ ಸ್ವರದ ಉಚ್ಚರಣೆಗೆ ತೆಗೆದುಕೊಳ್ಳುವ ಕಾಲಾವದಿಯಲ್ಲಿ ಈ ಗಿಡ್ಡ ಸ್ವರ ಮತ್ತು ಉದ್ದ ಸ್ವರಗಳ ನಡುವೆ ನಿಕರವಾದ ಕಾಲವ್ಯತ್ಯಾಸ ಇಲ್ಲದಿರುವುದು. ಉಚ್ಚರಣೆಯಲ್ಲಿ ಸಹಜವಾಗಿ ನಿಕರ ಕಾಲವ್ಯತ್ಯಾಸ ಇದ್ದರೆ ಇಶ್ಟು ಪ್ರಮಾಣದಲ್ಲಿ ಬರವಣಿಗೆಯಲ್ಲಿ ವ್ಯತ್ಯಯಗಳು ಕಂಡುಬರುವುದಕ್ಕೆ ಸಾದ್ಯವಾಗಲಿಕ್ಕಿಲ್ಲ. ದೊಡ್ಡ ಪ್ರಮಾಣದ ಬಳಕೆಯಲ್ಲಿನ ವ್ಯತ್ಯಯಗಳು ಕಂಡಿತವಾಗಿಯೂ ಉಚ್ಚರಣೆಯಲ್ಲಿನ ಕಾರಣವನ್ನು ಹೊಂದಿರಲೇಬೇಕು.

ಇನ್ನೊಂದು ಕುತೂಹಲಕರ ವಿಚಾರವೆಂದರೆ ಸಹಜವಾಗಿ ಬಡಗನ್ನಡಗಳ (ಉತ್ತರ ಕರ‍್ನಾಟಕದ ಕನ್ನಡಗಳು) ಮತ್ತು ತೆಂಗನ್ನಡಗಳ (ದಕ್ಶಿಣ ಕರ‍್ನಾಟಕದ ಕನ್ನಡಗಳು) ನಡುವೆ ‘ಅ’ ಉಚ್ಚರಣೆಯಲ್ಲಿ ಕಂಡುಬರುವ ಕಾಲಾವದಿ ಒಂದೆ ಸಮನಾಗಿಲ್ಲದಿರುವುದು. ಬಡಗನ್ನಡಗಳಲ್ಲಿ ‘ಅ’ ಉಚ್ಚರಣೆಗೆ ತೆಗೆದುಕೊಳ್ಳುವ ಕಾಲಕ್ಕಿಂತ ತುಸು ಹೆಚ್ಚಿನ ಕಾಲವನ್ನು ತೆಂಗನ್ನಡಗಳಲ್ಲಿ ತೆಗೆದುಕೊಳ್ಳುತ್ತಿರುವಂತಿದೆ. ಇದನ್ನು ದಿನದಿನದ ಸಹಜ ಉಚ್ಚರಣೆಯಲ್ಲಿ ಅವಲೋಕಿಸಬಹುದು. ತೆಂಗನ್ನಡಗಳಲ್ಲಿ ‘ಅ’ ಎಂದು ಉಚ್ಚರಿಸುವುದು ಬಡಗನ್ನಡಗಳಲ್ಲಿ ‘ಆ’ ಎಂದು ಉಚ್ಚರಿಸುವಂತೆ ಇರುತ್ತದೆ. ಅಂದರೆ ಎರಡೂ ಬಾಗಗಳಲ್ಲಿ ಕನ್ನಡದಲ್ಲಿ ‘ಅ’ ಉಚ್ಚರಣೆಗೆ ತೆಗೆದುಕೊಳ್ಳುವ ಕಾಲಾವದಿ ಸಮನಾಗಿಲ್ಲ ಎಂಬುದು ಇದರಿಂದ ಸ್ಪಶ್ಟವಾಗುತ್ತದೆ.

ಇದರೊಟ್ಟಿಗೆ ಇನ್ನೊಂದು ಕುತೂಹಲದ ವಿಚಾರವೆಂದರೆ ‘ಅ’ ದ್ವನಿಯ ಜೊತೆಗೆ ಅದರ ಉಚ್ಚರಣೆಯ
ಕಾಲಾವದಿಗಿಂತ ಕಡಿಮೆ ಕಾಲದಲ್ಲಿ ಉಚ್ಚಾರವಾಗುವ ಇನ್ನೊಂದು ‘ಅ’ ದ್ವನಿಯೂ ಬಳಕೆಯಲ್ಲಿದೆ.

ಸ್ವರದ ಉಚ್ಚರಣೆಯಲ್ಲಿ ಕಾಲ ತುಂಬಾ ಮಹತ್ವದ್ದು ಮತ್ತು ತುಂಬಾ ಕುತೂಹಲಕರವಾದುದು. ಇದು ಕನ್ನಡದ ಬಾಶೆಯ ರಚನೆಯನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಇದಕ್ಕಿಂತಲೂ ಮುಕ್ಯವಾಗಿ ಕನ್ನಡ ಬಾಶೆಯ ಬದಲಾವಣೆಯನ್ನು ಅರಿತುಕೊಳ್ಳುವುದಕ್ಕೂ ಹೆಚ್ಚು ಸಹಾಯಕ ಆಗಬಹುದು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...