ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ

Date: 07-06-2023

Location: ಬೆಂಗಳೂರು


''ಕೇತಲದೇವಿಯ ಎರಡು ವಚನಗಳು ಪ್ರಕಟವಾಗಿವೆ. ಕುಂಭೇಶ್ವರಾ, ಕುಂಭೇಶ್ವರಲಿಂಗ ಎಂಬ ಅಂಕಿತಗಳಲ್ಲಿ ಈ ವಚನಗಳಿವೆ. "ಲಿಂಗವಂತ" ಎಂಬ ಪದ ಈಕೆಯ ವಚನದಲ್ಲಿ ಬಳಕೆಯಾಗಿದೆ. ಲಿಂಗವಂತರ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಾಗ ಸಂದೇಹವಿಲ್ಲದಂತಿರಬೇಕೆಂದು ಕೇತಲದೇವಿ ತನ್ನ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ,'' ಎನ್ನುತ್ತಾರೆ ಅಂಕಣಕಾರ್ತಿ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ಕೇತಲದೇವಿ’ ಕುರಿತು ಬರೆದಿದ್ದಾರೆ.

ಕುಂಬಾರ ಗುಂಡಯ್ಯ ಮಹಾಶಿವಭಕ್ತ, ಆತನ ಪತ್ನಿಯೇ ಕೇತಲದೇವಿ. ಇವರ ಕಾಲ ಕ್ರಿ.ಶ.1160. ಈ ದಂಪತಿಗಳ ಊರು, ಬೀದರ ಜಿಲ್ಲೆಯ ಭಾಲ್ಕಿಯಾಗಿತ್ತು. ಭಾಲ್ಕಿಯಲ್ಲಿ ಕುಂಭೇಶ್ವರ ದೇವಾಲಯವಿದೆ. ಈ ದೇವಾಲಯವು ಕುಂಬಾರ ಓಣಿಯಲ್ಲಿದೆ. "ಕುಂಬೇಶ್ವರಾ" ಎಂಬುದೇ ಕೇತಲದೇವಿಯ ವಚನಾಂಕಿತವಾಗಿರುವುದರಿಂದ, ಭಾಲ್ಕಿಯ ಕುಂಭೇಶ್ವರ ದೇವಾಲಯದ ಮಹತ್ವ ಗೊತ್ತಾಗುತ್ತದೆ.

"ಭುವನಕೋಶ"ದಲ್ಲಿ ಕೇತಲದೇವಿಯ ವಿವರಗಳು ದೊರೆಯುತ್ತವೆ. ಈಕೆಗೆ ಸಂಬಂಧಿಸಿದ ಪವಡಕತೆಯೊಂದು ಅಲ್ಲಿ ವಿವರಿಸಲ್ಪಟ್ಟಿದೆ. ಕೇತಲದೇವಿ ನಿತ್ಯವೂ ಲಿಂಗಕ್ಕೆ ಪಾವಾಡವನ್ನು ಹಾಕುವ ನಿಯಮ ಹೊಂದಿದ್ದಳೆಂದೂ, ಒಂದುದಿನ ಅದು ಸಿಗದೇ ಹೋದಾಗ, ತನ್ನ ಎದೆಯ ಚರ್ಮವನ್ನೇ ತೆಗೆದು ಪಾವುಡ ಮಾಡಿ ಶಿವಲಿಂಗಕ್ಕೆ ಧರಿಸಲು, ಶಿವನು ಇವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನೆಂಬ ಕತೆಯಿದೆ. ಈ ಪವಾಡಕತೆಯ ಸತ್ಯಾಸತ್ಯತೆ ಏನೇ ಇರಲಿ, ಕೇತಲದೇವಿ ಮಾತ್ರ ಮಹತ್ವದ ಶರಣೆಯಾಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಜನಪದ ಕಾವ್ಯದಲ್ಲಿ ಈ ದಂಪತಿಗಳನ್ನು ಕುರಿತಂತೆ ಅನೇಕ ತ್ರಿಪದಿಗಳು ಪ್ರಕಟವಾಗಿವೆ. ಡಾ.ಬಿ.ಎಸ್.ಗದ್ದಗಿಮಠ ಅವರ "ಕನ್ನಡ ಜಾನಪದ ಗೀತೆಗಳು" ಕೃತಿಯಲ್ಲಿ ಈ ತ್ರಿಪದಿಗಳನ್ನು ನೋಡಬಹುದಾಗಿದೆ.

"ಕುಂಬಾರ ಗುಂಡಯ್ಯನ ಮಡದಿ ಕಡಗದ ಕೈಯಾಕಿ
ಕೊಡದ ಮ್ಯಾಲೇನು ಬರದಾಳ| ಕಲಬುರಗಿ
ಶರಣಬಸವನ ಚಿತ್ರ ಬರದಾಳ||"
"ಮಡದಿ ಕೇತಲದೇವಿ ಒಡನಾಡಿ ಗಂಡನಿಗೆ ಎಡೆಬಿಡದೆ ಸೇವೆ ಮಾಡುತಲಿ| ಬತ್ತಿಯೊಳು
ಬಿಡದೇರಿ ಎಣ್ಣೆಯುರಿದಂತೆ||"
- ಕನ್ನಡ ಜಾನಪದ ಗೀತೆಗಳು, ಪು-305, ಕ.ವಿ.ವ, ಧಾರವಾಡ, 1963

ಈ ಎರಡು ತ್ರಿಪದಿಗಳನ್ನು ಗಮನಿಸಿದಾಗ ಕೇತಲದೇವಿಯ ವ್ಯಕ್ತಿತ್ವವನ್ನು ಜನಪದರು ಕಂಡ ರೀತಿ ಸ್ಪಷ್ಟವಾಗುತ್ತದೆ. ಕೈಯಲ್ಲಿ ಕಡಗ ಹಾಕಿಕೊಂಡು, ಟೊಂಕದ ಮೇಲೆ ಕೊಡ ಹೊತ್ತುಕೊಂಡು ಪತಿ ಗುಂಡಯ್ಯ ತುಳಿಯುವ ಮಣ್ಣಿಗೆ ನೀರನ್ನು ತಂದು ಹಾಕುತ್ತಿದ್ದಳು. ಗುಂಡಯ್ಯ ಮಣ್ಣನ್ನು ತುಳಿದು ಹದಮಾಡಿ ಮಡಕೆಗಳನ್ನು ಮಾಡುತ್ತಿದ್ದ. ಈ ಮಡಕೆ ಕಾಯಕ ಮಾಡುತ್ತಿದ್ದ ಈ ದಂಪತಿಗಳು ಪವಾಡಕತೆಯ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಗಂಡನ ನೆರಳಾಗಿದ್ದ ಕೇತಲದೇವಿಯನ್ನು ಜನಪದರು ಒಡನಾಡಿಯೆಂದು ಕರೆದಿದ್ದಾರೆ. ಎಡೆಬಿಡದೆ ಕಾಯಕದಲ್ಲಿ ನಿರತಳಾಗಿದ್ದ ಕೇತಲೆ ಎಣ್ಣೆಯಲ್ಲಿ ಉರಿಯುತ್ತಿದ್ದ ಬತ್ತಿಯಂತಿದ್ದಳೆಂದು ಜನಪದರು ಈಕೆಯ ಮಹಾವ್ಯಕ್ತಿತ್ವವನ್ನು ಮೂರು ಸಾಲುಗಳ ತ್ರಿಪದಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈಕೆಯ ಕುಂಭದ ಗತಿಗೆ ಶಿವನೇ ಕೈಲಾಸದಿಂದಿಳಿದು ಓಡೋಡಿ ಬಂದು ಕುಣಿಯುತ್ತಿದ್ದನೆಂದು ಪವಾಡಕತೆಗಳು ಹೇಳುತ್ತವೆ.

ಕೇತಲದೇವಿಯ ಎರಡು ವಚನಗಳು ಪ್ರಕಟವಾಗಿವೆ. ಕುಂಭೇಶ್ವರಾ, ಕುಂಭೇಶ್ವರಲಿಂಗ ಎಂಬ ಅಂಕಿತಗಳಲ್ಲಿ ಈ ವಚನಗಳಿವೆ. "ಲಿಂಗವಂತ" ಎಂಬ ಪದ ಈಕೆಯ ವಚನದಲ್ಲಿ ಬಳಕೆಯಾಗಿದೆ. ಲಿಂಗವಂತರ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಾಗ ಸಂದೇಹವಿಲ್ಲದಂತಿರಬೇಕೆಂದು ಕೇತಲದೇವಿ ತನ್ನ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

"ಭಿಕ್ಷಲಿಂಗಾರ್ಪಿತಂ ಗತ್ವಾ| ಭಕ್ತಸ್ಯ ಮಂದಿರಂ ತಥಾ|
ಜಾತಿ ಜನ್ಮರಜೋಚ್ಛಿಷ್ಯಂ| ಪ್ರೇತಸ್ಯ ವಿವರ್ಜಿತ:||" (ವ-773)
ಎಂಬಂತಹ ಸಂಸ್ಕøತ ಶ್ಲೋಕವೊಂದು ಈಕೆಯ ವಚನದಲ್ಲಿ ಉಲ್ಲೇಖವಾಗಿದೆ. ಕೇತಲದೇವಿ ಕಾಯಕನಿಷ್ಠೆ ಉಳ್ಳವಳಾಗಿರುವುದರ ಜತೆಗೆ ಪಂಡಿತಳೂ ಆಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕಾಣದೇ ಇರುವುದನ್ನು ಕಂಡದ್ದನ್ನು ಒಂದೇ ಸಮವೆಂದು ಅರಿಯಬೇಕೆಂದು ಈಕೆ ತನ್ನ ವಚನದಲ್ಲಿ ಹೇಳಿದ್ದಾಳೆ.

"ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ"
- ಸ.ವ.ಸಂ.5, ವ-772, 1993

ಈ ವಚನದಲ್ಲಿ ತನ್ನ ವೃತ್ತಿಪ್ರತಿಮೆಯ ಮೂಲಕ ಕೇತಲದೇವಿ ಮಾತನಾಡಿದ್ದಾಳೆ. ಮಣ್ಣನ್ನು ಸರಿಯಾಗಿ ತುಳಿದು ಹದ ಮಾಡದೆ, ಅದು ಮಡಕೆಯಾಗದು ಎಂಬ ಮಾತನ್ನು ತನ್ನ ವೃತ್ತಿ ಅನುಭವದ ಹಿನ್ನಲೆಯಲ್ಲಿ ಹೇಳುತ್ತ, ವ್ರತಹೀನನನ್ನು ಬೆರೆಯಬಾರದೆಂದು, ಬೆರೆತಡೆ ನರಕತಪ್ಪದೆಂದು ಸ್ಪಷ್ಟಪಡಿಸಿದ್ದಾಳೆ. ಕುಂಬಾರ ಗುಂಡಯ್ಯನದ್ದೆಂದು ಹೇಳುವ ಉಬ್ಬು ಶಿಲ್ಪವೊಂದು ಭಾಲ್ಕಿಯಲ್ಲಿ ದೊರೆತಿದ್ದು ಈ ದಂಪತಿಗಳು ಭಾಲ್ಕಿಯಲ್ಲಿಯೇ ಲಿಂಗೈಕ್ಯರಾಗಿರಬಹುದಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ದಿಟ್ಟ ನಿಲುವಿನ ಶರಣೆ ನೀಲಾಂಬಿಕೆ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಸತ್ಯಕ್ಕ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಅಕ್ಕನಾಗಮ್ಮ
ಅಮುಗೆ ರಾಯಮ್ಮ
ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ
ಶಾಂಭವಿದೇವಿ

ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...