ಜಗತ್ತಿನ ಮೇರು ತಾಯಿ

Date: 07-04-2022

Location: ಬೆಂಗಳೂರು


'ತಿಂಡಿ ತಿನ್ನುತ್ತಾ ಇದ್ದ ನನಗೆ ಮುತ್ಯಾ ಮತ್ತು ತಾತನ ನಡುವೆ ನಡೆಯುತ್ತಿದ್ದ ಸಂಭಾಷಣೆಯಿಂದ ಈ ಮನೆಯಲ್ಲಿ ಏನೋ ಎಡವಟ್ಟಾಗಿದೆ ಎನ್ನುವುದು ಗೊತ್ತಾಗಿತ್ತು. ಏನಾಗಿದೆ ಎಂದು ಕೇಳುವುದು ಯಾರನ್ನು? ಅಮ್ಮಮ್ಮನಂತೂ ಅಳುತ್ತಾ ದೇವರ ಮನೆ ಸೇರಿದವಳು ಹೊರಗೇ ಬಂದಿರಲಿಲ್ಲ' ಹೀಗೆ ಬಾಲ್ಯದ ನೆನಪುಗಳನ್ನು ಪೋಣಿಸುತ್ತಾ ತನ್ನ ಮುತ್ಯಾನ ಕತೆ ಹೆಣೆದಿದ್ದಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ಬಾಲ್ಯದಲ್ಲಿ ಕಂಡ ವಿಶಿಷ್ಠ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ತಾತನ ಆಸೆಗಳೆ ಹಾಗಿದ್ದವು. ಮನೆಯಲ್ಲಿ ಮದುವೆ ಮಾಡಬೇಕಿರುವ ಮೂವರು ಹೆಣ್ಣುಮಕ್ಕಳು, ಮದುವೆಯಾದ ಇಬ್ಬರು ಮಕ್ಕಳ ಬಸುರಿ ಬಾಣಂತನ, ಅಳಿಯಂದಿರಿಗೆ ಉಪಚಾರ ಹೀಗೆ ಬೆಟ್ಟದಷ್ಟು ಜವಾಬ್ದಾರಿ. ಅಮ್ಮ ಮೊದಲನೆಯವಳು ಎರಡನೆಯವಳು ಗೀತಾ ಚಿಕ್ಕು. ಆಗಲೇ ಚಿಕ್ಕಪ್ಪನ ಹತ್ತಿರ ಪ್ರೀಮಿಯರ್ ಪದ್ಮಿನಿ ಕಾರಿತ್ತು. (ನನಗೆ ಈಗಲೂ ಆ ಕಾರಿನ ಮೇಲೆ ಮೋಹ. ಕಾರುಗಳ ಬಗ್ಗೆ ದೊಡ್ಡದಾಗಿ ಏನೂ ಗೊತ್ತಿಲ್ಲದೆ ಹೋದರೂ, ಪ್ರೀಮಿಯರ್ ಪದ್ಮಿನಿ ಎಲ್ಲಾದರೂ ಕಂಡರೆ ತಕ್ಷಣ ಗುರುತಿಸುತ್ತೇನೆ. ಅಂಥಾ ಕಾರನ್ನು ಆಂಟಿಕ್ ಪೀಸ್ ಆಗಿಯಾದರೂ ಇಟ್ಟುಕೊಳ್ಳಬೇಕು ಎನ್ನುವ ಆಸೆ ಇದೆ) ಅಂಥಾ ಕಾರಿತ್ತು ಅವರು ಸಿಕ್ಕಾಪಟ್ಟೆ ಸಾಹುಕಾರರು. ನ್ಯಾಮದ್ದಲ ಎನ್ನುವ ಊರು ಯಾರೋ ರಾಜಕಾರಣ ಅಥವಾ ಸರ್ಕಾರಿ ಅಧಿಕಾರಿಗಳ ಕಾರನ್ನು ಬಿಟ್ಟರೆ, ಸ್ವಂತಕ್ಕೆ ಕಾರಿಟ್ಟಿವರನ್ನು ನೋಡಿದ್ದರೆ ಅದು ಚಿಕ್ಕಪ್ಪನನ್ನೇ. ಹೀಗಾಗಿ ಚಿಕ್ಕಪ್ಪನ ಎದುರು ಮಾತಾಡುವಾಗ ಜನರಲ್ಲಿ ಭಯ ಗೌರವ ಎಲ್ಲಾ ಕಾಣುತ್ತಿತ್ತು. ತಾತನಿಗೂ ಒಂದಲ್ಲಾ ಒಂದು ದಿನ ತಾನೂ ಕಾರಲ್ಲಿ ಓಡಾಡುವ ಹುಚ್ಚಿತ್ತು. ಪುರಾಸೆಯ ದುಗ್ಗಪ್ಪನಾಗಿದ್ದ ಅವನು ಅದನ್ನು ಮುಂದೆ ಹೇಗೆ ಹೇಗೋ ತೀರಿಸಿಕೊಂಡ.

ಮುತ್ಯಾ ಅದೊಂದು ದಿನ ಹೊರ ಹೊರಟಿದ್ದ ತಾತನನ್ನು ನಿಲ್ಲಿಸಿಕೊಂಡು, ಇಂಥಾ ಕೆಲಸ ಎಲ್ಲಾ ಯಾಕೆ ನಿಂಗೆ? ನಮ್ಮ ಮನೆಯಲ್ಲಿ ನಿಮ್ಮ ತಂದೆಗೆ, ನಿಮ್ಮ ತಾತನಿಗೆ ಯಾರಿಗೂ ಇಂಥಾ ಗೀಳು ಇರಲಿಲ್ಲ. ವಂಶಕ್ಕೊಬ್ಬ ಹುಟ್ಟುತ್ತಾನೆ ಅಂತಾರೆ- ಅದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ. ನೀನು ಮಾತ್ರ ಹೀಗೆ ತಯಾರಾಗಿಬಿಟ್ಟೆ ಎಂದು. ತಾತಾನೂ ನಮ್ಮಪ್ಪ ಮಾಡಿಟ್ಟಿದ್ದಾನೆ ನೋಡಿ ಲಕ್ಷಗಟ್ಟಲೆ ಹಣ ಆಸ್ತಿ ಎಲ್ಲಾ ಅದಕ್ಕೆ ನಾನು ಹೀಗಿದ್ದೀನಿ. ಮಕ್ಕಳು ಜವಾಬ್ದಾರಿ ಅಂತ ಹೇಗೆ ನಿಭಾಯಿಸುವುದು ಎಂದು ರೇಗಿದ್ದ. ಅದಕ್ಕೆ ಮೇರುವನ್ನು ಮಾರಾಟ ಮಾಡ್ತಾರೇನೋ ಕೊಡೋ ಇಲ್ಲಿ, ಅದರ ಕೋನಕೋನಗಳಲ್ಲಿ ಶಕ್ತಿಯ ಸಂಚಾರವಿದೆ ಎನ್ನುತ್ತಾ ಕೈಚಾಚಿದಳು. ಈಗ ನನ್ನ ಹತ್ತಿರ ಅದಿಲ್ಲ. ಕೃಷ್ಣಾಚಾರಿ ತಗೊಳ್ಳಲಿಲ್ಲ ಅಂದ್ರೆ ಇನ್ಯಾರೂ ಈ ಊರಲ್ಲಿ ತೆಗೆದುಕೊಳ್ಳುವುದಿಲ್ಲವಾ? ಎಂದು ಹಂಗಿಸಿದ ತಾತ, ಒಂದು ಗುಟ್ಟನ್ನು ಬಿಟ್ಟುಕೊಟ್ಟಿದ್ದ. ಆ ಊರಲ್ಲಿ ಇನ್ಯಾರು ಅದನ್ನು ತೆಗೆದುಕೊಳ್ಳಲು ಶಕ್ತರಿದ್ದರು ಎಂದು ಮುತ್ಯಾ ಯೋಚಿಸತೊಡಗಿದ್ದಳು.

ಅವತ್ತು ನಾನು ಕಣ್ಣು ಬಿಡುವುದಕ್ಕೆ ಮುಂಚೆಯೇ ಅಕ್ಕಸಾಲಿಗರ ಕೃಷ್ಣಾಚಾರಿ ಮುತ್ಯಾಗೆ ಏನೋ ವಿಷಯ ಹೇಳಿಹೋಗಿದ್ದ. ಆಗಿನಿಂದ ಮುತ್ಯಾ ಉರಿಯುತ್ತಲೇ ಇದ್ದಳು. ಹಾಸಿಗೆಯಿಂದ ಎದ್ದ ನನ್ನನ್ನು ಮಾತಾಡಿಸದೆ ತನ್ನ ಪಾಡಿಗೆ ತಾನು ಪರಧ್ಯಾನದಲ್ಲಿದ್ದಳು. ಮುತ್ಯಾ ಯಾಕೆ ನನ್ನ ಮಾತಾಡಿಸುತ್ತಿಲ್ಲ ಎಂದು ಕೇಳಲು ಹೋದಾಗ ಪದ್ದಿ ಚಿಕ್ಕಮ್ಮ ನನ್ನ ಬಾಯನ್ನು ಮುಚ್ಚಿ ಬಾ ಎಂದು ಕರೆದೊಯ್ದಿದ್ದಳು.

ತಿಂಡಿ ತಿನ್ನುತ್ತಾ ಇದ್ದ ನನಗೆ ಮುತ್ಯಾ ಮತ್ತು ತಾತನ ನಡುವೆ ನಡೆಯುತ್ತಿದ್ದ ಸಂಭಾಷಣೆಯಿಂದ ಈ ಮನೆಯಲ್ಲಿ ಏನೋ ಎಡವಟ್ಟಾಗಿದೆ ಎನ್ನುವುದು ಗೊತ್ತಾಗಿತ್ತು. ಏನಾಗಿದೆ ಎಂದು ಕೇಳುವುದು ಯಾರನ್ನು? ಅಮ್ಮಮ್ಮನಂತೂ ಅಳುತ್ತಾ ದೇವರ ಮನೆ ಸೇರಿದವಳು ಹೊರಗೇ ಬಂದಿರಲಿಲ್ಲ. ಮುತ್ಯಾ ಕಡೆಗೆ ತಾತನಿಗೆ ಅಡ್ಡ ನಿಂತು, 'ಯಾರ ಕೈಲಿ ಕೊಟ್ಟೀದ್ದೀಯ ಹೇಳು’ ಎಂದು ಹಟ ಹಿಡಿದು ಬಿಟ್ಟಿದ್ದಳು. ತಾತ ಬಿಲ್ ಕುಲ್ ಬಗ್ಗದೆ ತನ್ನ ಪಾಡಿಗೆ ತಾನು ಹೊರಡುವ ಪ್ರಯತ್ನದಲ್ಲಿದ್ದ. ರೋಸತ್ತ ಮುತ್ಯಾ ನಿನಗೆ ನನ್ನ ಮೇಲೂ ಪ್ರೀತಿಯಿಲ್ಲ ನೀನು ನಿತ್ಯ ಪೂಜಿಸುತ್ತಿದ್ದ ಆ ತಾಯ ಬಗ್ಗೆಯೂ ನಂಬಿಕೆಯಿಲ್ಲ ಎಂದಿದ್ದಳು.

ಮುತ್ಯಾ ಮತ್ತು ಅಮ್ಮಮ್ಮ ಅವತ್ತು ತುಂಬಾ ಅನ್ಯೋನ್ಯವಾಗಿ ಕಂಡಿದ್ದರು. ಅರ್ಧ ರೇಗುತ್ತಾ ಅರ್ಧ ಅಸಹಾಯಕತೆಯಲ್ಲಿ ಮುತ್ಯಾ ಮಾತಾಡುತ್ತಲೇ ಇದ್ದಳು. ತಾತ ಮೇಲೆ ಅಷ್ಟೆಲ್ಲಾ ರೇಗಿದ್ದ ಮುತ್ಯಾ ಅಮ್ಮನಿಗೆ ನೀನು ಹಸಿದಿದ್ದರೆ ಎಲ್ಲಾ ಸರಿಯಾಗುತ್ತೆ ಅಂದರೆ ಹಸಿದುಕೊಂಡಿರು. ಮನುಷ್ಯ ಒಳಗಿನಿಂದ ಬದಲಾಗದೆ ಏನನ್ನೂ ಮಾಡಲಿಕ್ಕಾಗಲ್ಲ. ನಾರಾಯಣ ನನ್ನ ಮಾತನ್ನು ಕೇಳ್ತಾನೆ ಅಂದಿದ್ರೆ ಏನಾದರೂ ಮಾಡಬಹುದಿತ್ತು ಅಲ್ಲಾ ಇಷ್ಟು ವರ್ಷಗಳ ಕಾಲ ಪೂಜಿಸುತ್ತಿದ್ದ ಮೇರು ಇವನಿಗೆ ಬಂಗಾರವಾಗಿ ಕಂಡಿದ್ದಾದರೂ ಹೇಗೆ? ಅದನ್ನು ಮನೆಯಿಂದ ಹೊರಗೆ ಕೊಂಡೊಯ್ಯುವಾಗ ಕಡೆ ಪಕ್ಷ ನನಗಾದರೂ ಹೇಳಬೇಡವೇ? ಇಂಥಾ ದುರ್ಬುದ್ಧಿಗೆ ಏನೆನ್ನಬೇಕು? ನಾನು ಹೋಗಿ ಕೃಷ್ಣಾಚಾರಿಯ ಹತ್ತಿರ ಮಾತಾಡಿ ಬರುತ್ತೇನೆ. ಅದು ಬೆಂಕಿ ಅನ್ನೋದು ಇವನಿಗೆ ಗೊತ್ತಾಗಲಿಲ್ಲ ಅವನಿಗಾದರೂ ಗೊತ್ತಾಗಬಾರದೆ? ಎನ್ನುತ್ತಾ ಬತ್ತಿದ ದೇಹಕ್ಕೆ ಸುತ್ತಿದ್ದ ಕೆಂಪು ಮಡಿ ಸೀರೆಯನ್ನು ತೆಲೆಯ ಮೇಲೆ ಎಳೆದುಕೊಳ್ಳುತ್ತಾ ಹೊರಟಳು.

ಎಂಥಾ ಅನಾಹುತ ಆಗಿತ್ತು ಎಂದರೆ, ತಾತ ತಂದ ಆ ಶ್ರೀಚಕ್ರದ ಮೇರುವನ್ನು ಕೊಳ್ಳಲಾರೆ ಎಂದು ಭಯಗ್ರಸ್ತನಾದ ಕೃಷ್ಣಾಚಾರಿ ನಡುಗಿ ಹೋಗಿದ್ದ. ನಾನು ಇದನ್ನು ಕೊಳ್ಳಲಾರೆ. ನಿಮ್ಮ ಮನೆಯಲ್ಲಿ ಪೂಜೆಮಾಡುತ್ತಿದ್ದುದನ್ನು ನಾನು ತೆಗೆದುಕೊಂಡು ಸರ್ವನಾಶ ಆಗಲೇ? ಎಂದು ಕೇಳಿದ್ದರಿಂದ ತಾತನಿಗೆ ರೇಗಿ ಹೋಗಿತ್ತು. ಕಷ್ಟಕ್ಕಾಗದ ಚಿನ್ನವನ್ನು ಮನೆಯಲ್ಲಿಟ್ಟುಕೊಂಡು ಮಾಡುವುದೇನು? ತಾಮ್ರದ ಮೇರು ಸಿಗಲ್ಲವಾ? ತಂದರಾಯಿತು. ಪೂಜೆಗೆ ಅದೇ ಶ್ರೇಷ್ಠ ಎಂದು ವಾದ ಮಾಡಿದ್ದನಂತೆ. ಕೃಷ್ಣಾಚಾರಿ ಆಗಲ್ಲ ಎಂದು ಹೇಳಿದ್ದರಿಂದ ರಾತ್ರೋ ರಾತ್ರಿ ಇನ್ಯಾರಿಗೋ ಕೊಟ್ಟುಬಿಟ್ಟಿದ್ದ. ಅದನ್ನು ಕಂಡು ಹಿಡಿಯಲಿಕ್ಕೇ ಮುತ್ಯಾ ಹೊರಟುನಿಂತಿದ್ದಳು. ಅಮ್ಮಮ್ಮನಿಗೆ ಈಗೇನು ನಡಿತಾ ಇದೆ ಅದೆಲ್ಲಾ ವಿನಾಶಕಾರಿ ಬೆಳವಣಿಗೆ ಎಂದು ಅನ್ನಿಸಿತ್ತು. ಅತ್ತೆ, ಇಷ್ಟು ವರ್ಷಗಳ ಕಾಲ ಪೂಜಿಸಿದ್ದು ಈಗ ಏಕ್ ದಂ ಮನೆಯಲ್ಲಿ ಇರಲ್ಲ ಅಂದ್ರೆ ಈ ಮನೆಯ ಗತಿ ಏನು ಎಂದು ಅಲವತ್ತುಕೊಂಡಿದ್ದಳು. 'ಏನೂ ಆಗಲ್ಲ, ಯಾವುದು ಎಷ್ಟು ದಿನ ಎಲ್ಲಿರಬೇಕು ಅಂತ ಬರೆದಿರುತ್ತೋ ಅದೆಲ್ಲಾ ಯೋಗಗಳು ಅಷ್ಟೆ. ನಮಗೆ ಅದರ ಯೋಗ ಮುಗಿದ ಮೇಲೆಯೋ ಅಥವಾ ಅದಕ್ಕೆ ನಮ್ಮಲ್ಲಿರುವ ಯೋಗ ತೀರಿದ ಮೇಲೆಯೋ ಒಂದು ಕ್ಷಣವೂ ಅವು ನಮ್ಮ ಬಳಿ ಉಳಿಯಲ್ಲ ಎಂದಿದ್ದಳು.

ನನಗೆ ಮೇರು ಅಂದರೆ ಏನೆಂದು ಮೊದಲು ತಿಳಿಯಲಿಲ್ಲ. ಯಾಕೆಂದರೆ ಅದನ್ನು ಸಂಪುಟದಲ್ಲಿಟ್ಟು ಪೂಜೆಮಾಡುವಾಗ ಮಾತ್ರ ತೆಗೆಯುತ್ತಿದ್ದರಿಂದ ಅದನ್ನು ನೋಡುವ ಅವಕಾಶ ತುಂಬಾ ಕಡಿಮೆ. ಒಂದೆರಡು ಬಾರಿ ಮಾತ್ರ ನೋಡಿದ್ದೆ ಟ್ರಯಾಂಗಲ್‍ನ ಶೇಪ್‍ನಲ್ಲಿದ್ದ ಅದಕ್ಕೆ ಮೆಟ್ಟಿಲುಗಳಿದ್ದವು. ತಾತ ಅಂಗೈಲಿ ಹಿಡಿದರೆ ಅಂಗೈ ತುಂಬಾ ಕೂರುತ್ತಿತ್ತು. ಮುತ್ಯಾ ಮಡೀಲಿ ಮೊದಲಿಗೆ ನೈವೇದ್ಯಕ್ಕೆ ಅನ್ನ ಮಾಡುತ್ತಿದ್ದಳು. ನಂತರ ತಿಂಡಿ ಮಾಡುತ್ತಿದ್ದುದು. ನನಗೆ ಅಚ್ಚರಿಯಾಗುತ್ತಿತ್ತು ನನಗೆ ದೇವರೆಂದರೆ ಕಣ್ಣು ಮೂಗುಗಳಿರುವ ಸ್ಪಷ್ಟವಾದ ಮತ್ತು ದಿವ್ಯವಾದ ಆಕಾರದ ನಮ್ಮ ಹಾಗಿರುವ ವಿಗ್ರಹಗಳು. ಆದರೆ ಇದನ್ನು ದೇವರು ಎಂದು ಕರೆಯುವುದು ಹೇಗೆ ಅನ್ನಿಸಿತ್ತು. ಆದರೆ ಅದರ ಹೊಳಪು ಆಕಾರ ತಾತನ ಪೂಜಾ ವಿಧಾನ ಎಲ್ಲವೂ ಆಕರ್ಷಣೀಯವಾದ ಭಾವವೊಂದು ಮೂಡಿತ್ತು.

ತಾತ ಮತ್ತೆ ತಾನು ಈ ಮೇರುವನ್ನು ತೆಗೆದುಕೊಂಡು ಹೋದರೆ ಅದನ್ನು ಮೇರು ಅಂತ ನೋಡುತ್ತಾರೆ ಹೊರತು ಅದನ್ನು ಚಿನ್ನ ಎಂದು ನೋಡಲ್ಲ ಎಂದು ಕೃಷ್ಣಾಚಾರಿಯ ಅಂಗಡಿಯಲ್ಲಿ ಮೂಸೆಯ ಕೆಲಸ ಮಾಡುತ್ತಿದ್ದ ಹುಡುಗನಿಗೆ ಹೇಳಿ ಶ್ರೀಚಕ್ರದ ಮೇರುವನ್ನು ಕರಗಿಸಿಬಿಟ್ಟಿದ್ದ. ಆ ಹುಡುಗ ಚಿಕ್ಕವನಾದ್ದರಿಂದ ಆಸೆಗೆ ಬಿದ್ದು ಆ ಮೇರುವನ್ನು ಕರಗಿಸಿ ಬಿಟ್ಟಿದ್ದ. ಅದನ್ನು ತೆಗೆದುಕೊಂಡು ಮಾರಲಿಕ್ಕೆ ತಾತ ಹೊರಟಿದ್ದು ಎಂದು ಮುತ್ಯಾಳಿಗೆ ಗೊತ್ತಾಗಿದ್ದೆ ತಾತ ಊರನ್ನು ಬಿಟ್ಟ ಮೇಲೆ.

ಅವತ್ತು ಮನೆಯಲ್ಲಿ ತೀರದ ಮೌನ. ಯಾರಿಗೂ ಮಾತಾಡುವ ಉತ್ಸಾಹ ಇರಲಿಲ್ಲ. ನನಗೂ ಬೇಸರ ಅನ್ನಿಸಿ ಶ್ಯಾನುಭೋಗರ ಮನೆಯ ಗಿರೀಶ ಮತ್ತು ಶ್ಯಾಮಲಾರ ಜೊತೆ ಆಡಲಿಕ್ಕೆ ಹೋಗಿಬಿಟ್ಟಿದ್ದೆ. ಅವರ ಮನೆಯನ್ನು ಕರ್ಣೋಳ್ಲ ಮನೆ ಎನ್ನುತ್ತಿದ್ದರು. ಒಂದು ಕಾಲಕ್ಕೆ ಮಕ್ಕಳು ಮರಿಗಳಿಂದ ತುಂಬಿ ತುಳುಕುತ್ತಿದ್ದ ಮನೆ. ಈಗ ಎಲ್ಲಾ ಖಾಲಿ ಖಾಲಿ. ರಜಾ ದಿನಗಳಲ್ಲಿ ನಮ್ಮ ಹಾಗೆ ಆ ಮನೆಗೂ ಮೊಮ್ಮಕ್ಕಳು ಬರುತ್ತಿದ್ದರು. ಅಂಥಾಮೊಮ್ಮಕ್ಕಳಲ್ಲಿ ಗಿರೀಶನೂ ಅವನ ತಂಗಿ ಶ್ಯಾಮಲಾಳೂ ಸೇರಿದ್ದರು. ವಯಸ್ಸಾದ ಹಿರಿಯ ಜೀವ ರತ್ನಮ್ಮ ಗಂಡ ಸತ್ತ ಮೇಲೆ ತನ್ನ ಪಾಡಿಗೆ ತಾನಿದ್ದಿಬಿಟ್ಟಿದ್ದರು. ಅವರ ಅನ್ನೆರಡು ಮಕ್ಕಳಲ್ಲಿ ಇಬ್ಬರನ್ನು ಬಿಟ್ಟರೆ ಉಳಿದೆಲ್ಲರಿಗೂ ಮದುವೆಯಾಗಿತ್ತು. ಸುಬ್ಬಣ್ಣ ಯಾಕೆಮದುವೆ ಆಗಲಿಲ್ಲ ಅನ್ನುವುದು ನನಗೆ ಗೊತ್ತಿಲ್ಲ ಆದರೆ ಆ ಮನೆಯ ಕೊನೆಯ ಮಗಳು ದೇವಿ ಮಾತ್ರ ಸಿನಿಮಾಗಳಲ್ಲಿ ಕಾಣಿಸಿದ ಹಾಗೆ ತನ್ನನ್ನು ಸ್ಕೂಟರಿನಲ್ಲಿ ಕರೆದೊಯ್ಯುವ ಗಂಡನೇ ಬೇಕು ಎಂದು ಹಟ ಹಿಡಿದುಬಿಟ್ಟಿದ್ದಳು. ಅವಳಿಗೆ ಸ್ಕೂಟರ್ ಓಡುತ್ತಿದ್ದರೆ ಕಟ್ಟಿಕೊಳ್ಳದ ತನ್ನ ಕೂದಲು ಗಾಳಿಗೆ ಹಾರಾಡುವುದರ ಬಗ್ಗೆ ರೊಮ್ಯಾಂಟಿಕ್ ಆದ ಕಲ್ಪನೆ ಇತ್ತು. ಅದನ್ನು ನಮ್ಮ ಬಳಿ ಹೇಳುತ್ತಿದ್ದಳು ಕೂಡಾ. ಮದುವೆಯ ವಯಸ್ಸು ದಾಟಿದರೂ ಇನ್ನೂ ಇದೇ ಕನಸು ಕಾಣುತ್ತಿರು ಅಂತ ಹೇಳು. ಮುದುಕಿಯಾದ ಮೇಲೆ ಕೋಲು ಎತ್ತಿಕೊಡಲಿಕ್ಕೂ ಜನ ಇರೊಲ್ಲ ಎಂದು ಚಿಕ್ಕಮ್ಮ ವ್ಯಂಗ್ಯವಾಗಿ ಹೇಳುತ್ತಿದ್ದಳು.

ದೇವಿಯ ಮನೆಯಲ್ಲಿ ಅವತ್ತು ಊಟ ಮಾಡಿದೆ. ಖಾರ ಅಂದರೆ ಖಾರ. ಕಡ್ಲೆಪಪ್ಪಿನ ಪುಡಿ, ತೊವ್ವೆ, ಸಾರು-ಅನ್ನ, ಸಣ್ಣ ಗಾತ್ರದ ಮುದ್ದೆ, ನಂಚಿಕೊಳ್ಳಲಿಕ್ಕೆ ಒಂದು ಮೆಣಸಿನ ಕಾಯಿ ಇವೆಲ್ಲಾ ಆ ದಿನಗಳಲ್ಲಿ ಎಲ್ಲರ ಮನೆಗಳಲ್ಲಿ ಸಾಮಾನ್ಯವಾಗಿತ್ತು. ಕಣ್ಣು ಮೂಗಲ್ಲಿ ಖಾರಕ್ಕೆ ನೀರು ಬಂದು ಒದ್ದಾಡಿಬಿಟ್ಟಿದ್ದೆ. ಅಷ್ಟರಲ್ಲಿ ಒಳಗೆ ಬಂದ ಸುಬ್ಬಣ್ಣ ನನ್ನನ್ನು ನೋಡಿ ಯಾಕೆ ತುಂಬಾ ಖಾರ ಆಯ್ತಾ ಎಂದು ಕೇಳಿದ. ಹೌದೆಂಬಂತೆ ತಲೆ ಆಡಿಸಿದೆ. ತಕ್ಷಣ ಡಬ್ಬಿಯಿಂದ ಬೆಲ್ಲದ ಉಂಡೆ ತೆಗೆದುಕೊಟ್ಟಿದ್ದ. ಅದನ್ನ ನೋಡಿದಶ್ಯಾಮಲಾ ನಮ್ಮ ಮಾವ ನನಗೆ ಮಾತ್ರ ಕೊಡಬೇಕು ನಿನಗೆ ಕೊಟ್ಟ ಎಂದು ನನ್ನ ಮೇಲೆ ದೂರಿ ಜಗಳ ಮಾಡಿದ್ದಳು. ದೊಡ್ಡವರು ಜಗಳ ಬಿಡಿಸಿದ್ದರು. ನನ್ನ ಪಕ್ಕದಲ್ಲಿ ಕೂರಿಸಿಕೊಂಡ ಸುಬ್ಬಣ್ಣ ನಿಮ್ಮನೇಲಿ ಒಂದೇ ಸಮನೆ ಜಗಳ ಅಂತೆ ಎಂದಿದ್ದ. ಇನ್ನೊಬ್ಬರ ವಿಷಯ ಇವರಿಗ್ಯಾಕೆ ಅನ್ನಿಸಿದರೂ ನಾನು ಉತ್ತರಿಸದೆ ಕೂತೆ. ನನ್ನ ಮೌನಕ್ಕೆ ಶ್ಯಾಮಲಾ ಮಾಡಿದ ಜಗಳ ಕಾರಣ ಅಂತ ಭಾವಿಸಿದ ದೇವಿ. ಹೋಗ್ಲಿ ಬಿಡು ಅವಳಿಗೆ ನಾನು ಬುದ್ಧಿ ಹೇಳ್ತೀನಿ, ಮತ್ತೆ ಹೀಗೆಲ್ಲ ಜಗಳ ಆಡಲ್ಲ ಅಂತ ಅಂದಿದ್ದಳು. ಅವಳ ಕಣ್ಣುಗಳನ್ನು ದಿಟ್ಟಿಸಿದೆ- ಅಲ್ಲಿ ನನ್ನ ಬಗ್ಗೆ ಅನುಕಂಪಕ್ಕಿಂತ ಅವಳಿಗೆ ಕುತೂಹಲವೇ ತುಂಬಿತ್ತು. ಇವತ್ಯಾಕೋ ಎದ್ದಗಳಿಗೆಯೇ ಸರಿಯಿಲ್ಲ ಎಂದು, 'ನಾನು ಮನೆಗೆ ಹೋಗ್ತೇನೆ’ ಎಂದು ಹೊರಟಾಗ ಗಿರೀಶ ಮನೆಯ ತನಕ ಬಿಟ್ಟಿದ್ದ.

ಮನೆಗೆ ಬಂದರೆ ಮತ್ತೆ ಅದೇ ವಾತಾವರಣ. ಮುತ್ಯಾ ಊಟ ಮಾಡಿ ಹಗ್ಗದ ಮಂಚದ ಮೇಲೆ ಕೂತಿದ್ದಳು. ಹತ್ತಿರದಲ್ಲೇ ಕೂತಿದ್ದ ಅಮ್ಮಮ್ಮನ ಕಣ್ಣುಗಳು ಊದಿ, ಕೆಂಪಗಾಗಿ ಇನ್ನು ಕಣ್ಣೀರು ಬರಲಿಕ್ಕೆ ಸಾಧ್ಯವಿಲ್ಲ ಎನ್ನುವಂತಿತ್ತು. ಶ್ಯಾಮಲಾ ಜಗಳ ಮಾಡಿದ್ದರಿಂದ ನಾನೂ ಬೇಸರದಲ್ಲಿದ್ದೆ. ಮುತ್ಯಾಗೆ ನನ್ನನ್ನು ಹಾಗೆ ನೋಡಿ ಬೇಸರ ಅನ್ನಿಸಿತ್ತು ಅಂದುಕೊಳ್ಳುತ್ತೇನೆ. ಹತ್ತಿರ ಬಾ ಎಂದು ಸನ್ನೆ ಮಾಡಿದಳು. ನಾನು ಹತ್ತಿರಕ್ಕೆ ಹೋದೆ. `ಮುತ್ಯಾ ಹೊರಗೆ ಸುಬ್ಬಣ್ಣ ಕೇಳಿದ್ರು ನಿಮ್ಮನೇಲಿ ಜಗಳ ಆಗ್ತಾ ಇದ್ಯಂತೆ ಅಂತ’. ಅವಳು ನನ್ನನ್ನು ತಬ್ಬಿಕೊಂಡು ಹಣೆಗೆ ಮುತ್ತನ್ನು ಕೊಟ್ಟಳು. ಮೈಯೆಲ್ಲಾ ಸುಖವಾದ ಬಿಸುಪಿಂದ ಅರಳಿದಂತಾಯಿತು. ಆ ಸೌಖ್ಯವನ್ನು ನಾನು ಮತ್ತೆಲ್ಲೂ ಅನುಭವಿಸಲಿಲ್ಲ. ನಾನು ಅವಳನ್ನು ನೋಡಿ ನಕ್ಕೆ. ನನಗನ್ನಿಸಿತು ಬೆಳಗಿನ ಮುತ್ಯಾನೇ ಬೇರೆ ಈಗಿನ ಮುತ್ಯಾನೇ ಬೇರೆ. ತಾತನ ಹತ್ತಿರ ಜಗಳ ಆಡುವಾಗ ಅವಳ ಮುಖ ಕೋಪದಲ್ಲಿ ಕೆಂಪಾಗಿ ಮಿಂಚುತ್ತಿತ್ತು. ಈಗ ಪ್ರಸನ್ನವಾಗಿತ್ತು. 'ಜನಕ್ಕೆ ಜಗಳ ಅಂದ್ರೆ ಇಷ್ಟ ಅಲ್ವಾ ಅದಕ್ಕೆ ಕೇಳ್ತಾರೆ, ಪಾಪ ನಿನ್ನ ಕೇಳಿದ್ರೆ ನೀನೇನು ಹೇಳೊಕೆ ಸಾಧ್ಯ?’ ಎಂದಳು. 'ನಮ್ಮ ಮನೆಯಕಥೆ ಹೀಗೆ ಬೀದಿಗೆ ಬಿತ್ತಲ್ಲವಾ, ಶಿವಾ ಏನಪ್ಪಾ ನಿನ್ನ ಆಟ ಎಂದು ಗೋಳು ಕರೆದಳು. ನಾಗೂ ನೀನೂ ಸಣ್ಣ ಮಕ್ಕಳ ಹಾಗೆ ಆಡಿದ್ರೆ ಹೇಗೆ? ನಮ್ಮ ಹುಚ್ಚಾಟಗಳಿಗೆ ಅವನಾದ್ರೂ ಏನು ಮಾಡ್ತಾನೆ. ಅವನೇ ಆದಿಭಿಕ್ಷು ಅವನನ್ನೇನು ಕೇಳೋದು? ಕೇಳಿದರೆ ಸಿಗುತ್ತೆ ಅನ್ನುವುದೆ ತಪ್ಪು. ಅವನಿಚ್ಚೆ ಇದ್ರೆ ಅವನೇ ಕೊಡ್ತಾನೆ. ಇದು ನನಗೆ ತೀರದ ಕುತೂಹಲ. ಅವಳಿಗೆ ಇನ್ನಷ್ಟು ಒತ್ತಿ ಕುಳಿತುಕೊಳ್ಳುತ್ತಾ 'ಮುತ್ಯಾ ಮೇರು ಅಂದ್ರೆ ಏನು? ಅದಕ್ಕೋಸ್ಕರ ಯಾಕೆ ಜಗಳ ಆಡ್ತಾ ಇದೀರ? ಅದನ್ನ ನಾನು ದೇವರ ಮನೆಯಲ್ಲಿ ನೋಡಿದ್ದೇನೆ. ಅದನ್ನ ಯಾಕೆ ದೇವ್ರು ಅಂತಾ ಇದೀರಾ?’ ಎಂದೆ. ನನಗೆ ತಿಳಿಯುವ ಹಾಗೆ ಹೇಳುವುದು ಹೇಗೆ ಎಂದು ಅವಳಿಗೆ ಸಮಸ್ಯೆ ಆಗಿರಬೇಕು ನನ್ನ ಪಕ್ಕದಲ್ಲಿ ಕೂರಿಸಿಕೊಂಡು, 'ಪಾಪಾ, ಅದು ಶಕ್ತಿಯ ಕೇಂದ್ರ ಮತ್ತು ಅದೇ ಶಕ್ತಿ’ ಎಂದಳು. ಅರ್ಥವಾಗದೆ ಅವಳ ಕಡೆಗೆ ನೋಡಿದೆ, ಅವಳು ನನ್ನ ಪಕ್ಕಕ್ಕೆ ಜರುಗಿದಳು. ಇಬ್ಬರೂ ಒಬ್ಬರಿಗೊಬ್ಬರು ಹತ್ತಿಕೊಂಡು ಕುಳಿತಿದ್ದೆವು. ನಾನು ಅವಳನ್ನೇ ನೋಡುತ್ತಿದ್ದೆ. ನನ್ನ ನೋಟಕ್ಕೆ ನಿನ್ನ ಮಾತು ಅರ್ಥ ಆಗಲಿಲ್ಲ ಎನ್ನುವುದನ್ನು ದಾಟಿಸುವುದು ಸಾಧ್ಯವಿತ್ತು. 'ಪಾಪಾ, ನೀನು ಸೂರ್ಯನ್ನ ನೋಡಿದ್ದೀಯಲ್ಲಾ? ಸೂರ್ಯ ಅಷ್ಟೇ ಇದ್ದರೂ ಜಗತ್ತಿಗೆಲ್ಲಾ ಬೆಳಕನ್ನು ಕೊಡ್ತಾನಲ್ವಾ ಅದು ನಿನಗೆ ಆಶ್ಚರ್ಯ ಅನ್ನಿಸಿಲ್ವಾ?’ಎಂದಳು. ನಾನು ಹೌದೆನ್ನುವಂತೆ ತಲೆ ಆಡಿಸಿ, 'ಅವನಿಗೆ ಜಾಸ್ತಿ ಶಕ್ತಿಯಲ್ವಾ, ಅದಕ್ಕೆ’ ಎಂದೆ. 'ಮೇರುವಿನ ತಲೆ ಸೂರ್ಯ, ಅದು ಜಗತ್ತಿಗೆಲ್ಲಾ ಬೆಳಕನ್ನು ಕೊಡುತ್ತಲ್ಲಾ ಹಾಗೆ ಮೇರು ಶಕ್ತಿ ಅದೇ ನಮಗೆಲ್ಲಾ ಶಕ್ತಿ ಕೊಡುವುದು’ ಎಂದಳು.

'ಎಲ್ಲರಿಗೂ ಅಂದ್ರೆ ನನಗೂನಾ?’ ಎಂದೆ. ಎಲ್ಲರಲ್ಲಿ ನಾನು ನೀನು, ನಿನ್ನ ತಾತ ಅಮ್ಮಮ್ಮ, ಅಮ್ಮ... ಎಲ್ಲರೂ ಇದ್ದೀವಿ. ಎಲ್ಲರನ್ನೂ ನಡೆಸುವವಳೂ ಪೊರೆಯುವವಳು ಎಲ್ಲಕ್ಕೂ ಅವಳೇ ಮೂಲ’ ಎಂದಳು. 'ಅಷ್ಟು ಶಕ್ತಿ ಇದೆ ಅಂದರೆ ಮತ್ತೆ ಮೇರುವನ್ನು ಕರಗಿಸದೇ ಇರುವ ಹಾಗೆ ತಾತನಿಗೆ ಬುದ್ದಿಯನ್ನು ಯಾಕೆ ಕೊಡಲಿಲ್ಲ. ಅದನ್ನ ಪೂಜೆ ಮಾಡಬೇಕು ಅನ್ನೋದನ್ನ ಅದು ಯಾಕೆ ಹೇಳಲಿಲ್ಲ’ ಎಂದೆ ಮುಗ್ಧವಾಗಿ. 'ಪೂಜೆ ಮಾಡುವುದು ನಮ್ಮ ಮನಸ್ಸಿನ ತೃಪ್ತಿಗೋಸ್ಕರ ಮಾತ್ರ. ಪೂಜೆಮಾಡದಿದ್ದರೆ ಯಾಕೆ ಅಂತ ಅದೇನೂ ಕೇಳಲ್ಲ. ಅದು ಕರಗಲ್ಲ, ಮುರಿಯಲ್ಲ. ಯಾವಾಗಲೂ ಇದ್ದೇ ಇರುತ್ತದೆ. ಆದರೆ ಮನುಷ್ಯನ ಸಂಕಲ್ಪ, ಆಶಯ ಅದನ್ನು ಇನ್ನಷ್ಟು ಶಕ್ತಿಯುತವಾಗಿಸುತ್ತೆ. ಕರಗಿದ್ದು ನಾನು ಅದೆಂದು ಭಾವಿಸಿದ ರೂಪ ಮಾತ್ರ. ಅದು ಕರಗಿ ಹೋಯಿತು ಅಂದಾಗ ನನಗೆ ನೋವಾಯಿತು. ಕಣ್ಣೆದುರಿಗೆ ಇಲ್ಲದಾದಾಗ ಶೂನ್ಯ ಉಂಟಾಗುತ್ತಲ್ಲಾ ಹಾಗೆ. ಅದು ನಮಗೆ ಮಾತ್ರ ಅದಕ್ಕಲ್ಲ. ಎಲ್ಲಕ್ಕೂ ನಾವು ಬರಿಯ ಸಾಕ್ಷಿಗಳು ಅಷ್ಟೇ. ಅದು ಯಾವಾಗಲೂ ಇದ್ದೇ ಇರುತ್ತದೆ. ಅದು ಬರಿಯ ಕುರುಹು. ಅದರಿಂದ ಎಷ್ಟು ಪ್ರಭಾವಿತವಾಗಿರುತ್ತೇವೋ ಅಷ್ಟೇ ಅಪ್ರಾಭಾವಿತವೂ ಆಗಬೇಕಾಗುತ್ತದೆ’ ಎಂದಳು. ಅವಳ ಮಾತು ನನಗೆ ಅಚ್ಚರಿಯನ್ನು ತಂದಿತು. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಅವಳನ್ನೇ ನೋಡುತ್ತಿದ್ದೆ ಅವಳು ನನ್ನ ಕೆನ್ನೆಯನ್ನು ತಟ್ಟಿ ಪ್ರೀತಿಯಿಂದ 'ನಿನ್ನ ಮುತ್ಯಾಗೆ ವಯಸ್ಸಾಯಿತು. ನಾಳೆ ನಾನು ಸತ್ತು ಹೋದರೆ ಹೀಗೆ ನಿನ್ನ ಜೊತೆ ಕೂತು ಮಾತಾಡಕ್ಕೆ ಆಗೋದೇ ಇಲ್ಲ. ಹಾಗಂತ ನಾನು ಇದ್ದಿದ್ದೇ ಸುಳ್ಳೋ?’ ಎಂದಳು. ನನಗೆ ಅವಳು ಸತ್ತು ಹೋಗುತ್ತಾಳೆ ಅನ್ನುವುದನ್ನು ನಂಬಲಿಕ್ಕಾಗಲಿಲ್ಲ. 'ನೀನು ಸಾಯಬಾರದು, ನಾನು ದೊಡ್ಡವಳಾಗ್ತೀನಲ್ಲಾ ಅಲ್ಲೀವರೆಗೂ ನೀನು ಇರು’ ಎಂದೆ. 'ಇರ್ತೀನಿ ಪಾಪ, ಇರಬೇಕು. ನೀನು ಬೆಳೆಯುವುದನ್ನು ನೋಡಬೇಕು ಅನ್ನುವ ಆಸೆ ನನಗೂ ಇದೆ. ಆದರೆ ಕಾಲ ಹೇಳಿದ ಹಾಗೆ ಕೇಳಲೇ ಬೇಕಲ್ಲಾ’ ಎಂದಳು.

ತಾತ ರಾತ್ರಿಯಾದರೂ ಬರಲಿಲ್ಲ. ಅಮ್ಮಮ್ಮ ಮುತ್ಯಾನ ಜೊತೆ ಏನು ಮಾಡಲಿ ಎಂದು ಅಳುತ್ತಿದ್ದಳು. ಮುತ್ಯಾ ಅಮ್ಮನ ತಲೆ ನೇವರಿಸಿದಳು. ಅವಳಿಗೆ ಇದ್ದ ಸಂಕಟ ಅವಳಿಗೆ, ಅಮ್ಮಮ್ಮನಿಗೆ ಇದ್ದ ಸಂಕಟ ಅಮ್ಮಮ್ಮನಿಗೆ. ಇಂದು ರಾತ್ರಿ ನಡೆಯಲಿರುವ ಯುದ್ಧಕ್ಕೆ ಮುನ್ನ ನೆಲೆಯಾಗುವ ಶಾಂತಿಯ ಭ್ರಾಂತಿಯಂತೆ. ರಾತ್ರಿ ಮುತ್ಯಾ ನಿದ್ದೆಯೂ ಮಾಡದೆ ಬಡಬಡಿಸುತ್ತಿದ್ದಳು. 'ನಾರಾಯಣಾ ಬೇಡವೋ ನನ್ನ ಮಾತನ್ನ ಕೇಳು, ಹುರಿದ ಕಾಳು ಮೊಳಕೆ ಒಡೆಯುವುದಿಲ್ಲ. ನಿನ್ನ ದಾರಿಯಲ್ಲಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ, ನನ್ನ ಮಾತನ್ನ ಕೇಳು ನಾರಾಯಣಾ ...’ ಹೀಗೆ ಇತ್ಯಾದಿ. ನನಗೂ ನಿದ್ದೆ ಬರಲಿಲ್ಲ. ಯಾಕೋ ಇಲ್ಲಿಂದ ಓಡಿ ಅಮ್ಮ ಅಪ್ಪನ ಹತ್ತಿರ ಹೋಗೋಣ ಅಂತ ಅನ್ನಿಸಿಬಿಟ್ಟಿತ್ತು. ಅಮ್ಮಮ್ಮನಿಗೆ ಯೋಚನೆಯಿಂದ ಊಟ ಮಾಡಲಾಗದೆ ಪಿತ್ತ ಆಗಿತ್ತು. ನೀರು ನೀರು ವಾಂತಿಯಾಗಿತ್ತು. ಮುತ್ಯಾ ಅದನ್ನೆಲ್ಲಾ ಬಳಿದಿದ್ದಳು. ಅಮ್ಮಮ್ಮನಿಗೆ ಮುತ್ಯಾ ಇದನ್ನೆಲ್ಲಾ ಮಾಡಿದ್ದು ಸಂಕಟ ತಂದಿತ್ತು. ತನ್ನ ಗಂಡ ಸರಿಯಿದ್ದಿದ್ದರೆ... ಹುಚ್ಚಾಟಗಳನ್ನು ಬದಿಗಿಟ್ಟು ಅತ್ತೆ ಹೇಳಿದ ಹಾಗೆ ಕೇಳಿದ್ದರೆ ಯಾವ ಸಂಕಟವೂ ಇರುತ್ತಿರಲಿಲ್ಲ ಅನ್ನಿಸಿರಬೇಕು.

ಬೆಳಗ್ಗೆ ಮನೆಯ ಹಿತ್ತಲಿನ ತಾನು ಮಕ್ಕಳೆಂದು ಭಾವಿಸುವ ನಾಲ್ಕು ಮರಗಳ ಹತ್ತಿರ ನಿಂತು ಮುತ್ಯಾ ಏನನ್ನೋ ಮಾತಾಡುತ್ತಿದ್ದಳು. ನಾನು ಹಿಂದಿನಿಂದ ಹೋಗಿ ಮುತ್ಯಾ ಎಂದೆ. ನನ್ನ ಕಡೆಗೆ ತಿರುಗಿದ ಅವಳ ನೀಲಿ ಕಣ್ಣುಗಳಲ್ಲಿ ಜಗತ್ತನ್ನೆ ಆಳುವ ಕರುಣೆ ಇತ್ತು. ತಾತ ಬಂದ್ರಾ ಎಂದೆ. ಬರುತ್ತಾನೆ ಅಂತ ಅನ್ನಿಸ್ತಾ ಇದೆ ಎಂದಳು. ರಾಮುಡು 'ಅವ್ವಾ’ ಎನ್ನುತ್ತಾ ಬಂದ. ಅವನ ಕಾಲುಗಳೆರಡೂ ಸೊಟ್ಟನೆ ಚಂದ್ರಾಕಾರವಾಗಿ ಕಾಣುತ್ತಿತ್ತು. ಅಡರುಗಾಲನ್ನು ಹಾಕುತ್ತಾ ಬಂದ ಅವನನ್ನು ನೋಡಿ ನಕ್ಕೆ. ಪಾಪ ನೀನು ನಿಧಿಯನ್ನು ಕಂಡು ಹಿಡಿಯ ಬೇಕಿತ್ತು. ನಿನ್ನ ತಾತನಿಗೆ ಉಪಯೋಗ ಆಗುತ್ತಿತ್ತು’ ಎಂದ. ನೀನವತ್ತು ಬರದೇ ಇದ್ದಿದ್ದರೆ ಇವಳು ತೋಡಿದ ಕಡೆಗೆ ನಿಧಿ ಸಿಗುತ್ತಿತ್ತು ನಿನ್ನ ಕಾಲ ಸಪ್ಪಳಕ್ಕೆ ಭೂಮಿಯ ಒಳಗೆ ಅದು ಸರಿದು ಹೋಯಿತು ಎಂದಳು ಮುತ್ಯಾ. ನಾನೂ ಹೋ ಎಂದು ರಾಮುಡೂವನ್ನು ಅಣಕಿಸುತ್ತಾ ನಕ್ಕೆ. ಅಮ್ಮಮ್ಮ ನಾವು ನಗುವುದನ್ನು ಇಣುಕಿ ನೋಡಿದಳು. ಅವಳ ಕಣ್ಣುಗಳು ಕೆಂಪಗಾಗಿತ್ತು. ನನಗೆ ನಿಧಿ ಎನ್ನುವ ಶಬ್ದ ಕೇಳಿದ ತಕ್ಷಣ ಮುತ್ಯಾ ಹೇಳಿದ್ದು ನೆನಪಾಯಿತು. ಮುತ್ಯಾ ನನ್ನ ಗುರು ಯಾವಾಗ ಬರ್ತಾರೆ ಎಂದೆ. ಅವಳಿಗೂ ಗೊತ್ತಿರಲಿಲ್ಲ ಅನ್ನಿಸುತ್ತೆ ಆಕಾಶ ನೋಡಿದಳು. ರಾಮುಡೂ 'ಅಯ್ಯ ಇವತ್ತು ಬರ್ತಾರಾ?’ ಎಂದ. ಮುತ್ಯಾ ಗೊಂದಲಿಸಿದ್ದು ಅವಳ ಕಣ್ಣುಗಳಲ್ಲೇ ಕಾಣುತ್ತಿತ್ತು. ರಾಮುಡೂ ಮತ್ತೆ 'ಅವರು ದೇವ್ರನ್ನ ಹಾಗೆ ಮಾಡಬಾರದಿತ್ತು. ನಿಮ್ಮ ಮನಸ್ಸಿಗೂ ನೋವಾಗಿರಬೇಕಲ್ಲಾ?’ ಎಂದ. ಮುತ್ಯಾ ವಿಷಾದದಿಂದ, 'ನನ್ನ ಮನಸ್ಸಿಗೆ ನೋವಾಗಿದ್ದು ಮೇರುವನ್ನು ಕರಗಿಸಿದ್ದರಿಂದ ಅಲ್ಲ. ಸ್ವಸಹಾಯನಲ್ಲದಿದ್ದರೆ ಕೈಹಿಡಿಯಲು ಆಸರೆ ಬೇಕಲ್ಲಾ? ಅದನ್ನು ಅವನೇ ಕಳಕೊಂಡ. ಯಾಕೆಂದರೆ ಅದಿಲ್ಲದೆ ತನಗೆ ಏನೂ ಆಗಲ್ಲ ಅಂದುಕೊಂಡವ ಅವನೇ ಆಗಿದ್ದ. ತಾಯಿ ಅಂತ ಪೂಜಿಸಿದವ ಅವನೇ. ಕೈಹಿಡಿದು ನಡೆಸಿದೆ ಎಂದು ಹೇಳಿದವನೂ ಅವನೇ. ಈಗ ಕಳಕೊಂಡವನೂ ಅವನೇ. ಇದು ಅವನನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತೋ ಗೊತ್ತಾಗುತ್ತಿಲ್ಲ’ ಎಂದು ನಿಟ್ಟುಸಿರಿಟ್ಟಳು. 'ನೀವಿದ್ದೀರಲ್ಲ ಬಿಡೀಮ್ಮ’ ಎಂದ ರಾಮುಡೂಗೆ, 'ನಾನು ಇದ್ದೀನಿ ರಾಮುಡೂ, ಆ ನಂಬಿಕೆ ಅವನಿಗೆ ಬೇಕಲ್ಲಾ? ನಂಬಿದರೆ ನೀನೂ ದೇವರೇ. ನಂಬದಿದ್ದರೆ ಬರಿಯ ರಾಮುಡೂ’ ಎಂದ ಮುತ್ಯಾನನ್ನು ನೋಡಿದೆ. ಅವಳಿಗೆ ತನ್ನ ಮಗನ ಭವಿಷ್ಯದ ಬಗ್ಗೆ ನೋವಿತ್ತು. ಅರವತ್ತರ ತಾತನನ್ನು ಮುತ್ಯಾ ಕಾಪಾಡಬೇಕಾ? ನನಗೆ ಬುದ್ದಿ ಬಂದಾಗಲಿಂದ ತಾತನಿಗೆ ಶಕ್ತಿ ಇದೆ ಎಂದೆ ಅನ್ನಿಸಿರಲಿಲ್ಲ. ವಯಸ್ಸಿನ ಕಾರಣಕ್ಕೆ ಬಗ್ಗಿ ಹೋದ ಮುತ್ಯಾಗೆ ಈಗಲೂ ಇಷ್ಟು ಶಕ್ತಿ ಇದೆಯೆಂದರೆ ಇನ್ನು ನನ್ನಷ್ಟಿದ್ದಾಗ ಎಷ್ಟು ಶಕ್ತಿ ಇತ್ತೋ ಎನ್ನಿಸಿತು. ಹಾಗೆಂದುಕೊಂಡ ಮರುಕ್ಷಣ ನನ್ನ ಕಣ್ಣುಗಳನ್ನು ನನಗೇ ನಂಬಲಿಕ್ಕಾಗಲಿಲ್ಲ ನಾನು ನೋಡಿದ್ದೆಲ್ಲವೂ ಬೆಳಕಿನ ಬುಗ್ಗೆಗಳನ್ನು ಚಿಮ್ಮಿಸುತ್ತಿರುವ ಮೇರುಗಳೇ! ಕಡೆಗೆ ಮುತ್ಯಾ, ರಾಮುಡೂ ಕೂಡಾ. ನನ್ನ ಅವಸ್ಥೆಯನ್ನು ಗಮನಿಸಿದ ಮುತ್ಯಾ ಕೂಗಿದಳು 'ನೀನು ಅದೃಷ್ಟಶಾಲಿ’ ಎಂದು. ನನ್ನೊಳಗೇ ಏನೇನೋ ಆದಂತನ್ನಿಸತೊಡಗಿ ಅಮ್ಮಾ ಎಂದು ಕೂಗಿ ಕುಸಿದುಬಿದ್ದೆ.

ಈ ಅಂಕಣದ ಹಿಂದಿನ ಬರೆಹಗಳು:
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ

ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

 

 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...